ಜೀವಾಮೃತ, ಅಮೃತ ಪಾನಿ, ಅಲ್ಲದೆ ಯಾವುದೇ ಸೂಕ್ಷ್ಮಾಣು ಜೀವಿ ಮಿಶ್ರಣಗಳನ್ನು ತಯಾರಿಸುವ ಸಮಯದಲ್ಲಿ ಬ್ಯಾರಲ್ ಗೆ ಹಾಕಿ ಕಲಕಬೇಕು ಎನ್ನುತ್ತಾರೆ. ಕಲಕುವುದರಿಂದ ಅದರಲ್ಲಿ ಜೀವಾಣುಗಳು ಹೆಚ್ಚಾಗುತ್ತದೆ. ಅವುಗಳಿಗೆ ಜೀವ ಬರುತ್ತದೆ. ಸೂಕ್ಷ್ಮಾಣು ಜೀವಿಗಳು ಈ ಕ್ರಿಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳವಣಿಗೆಯಾಗಿ ಸಂಖ್ಯಾಭಿವೃದ್ದಿಯಾಗುತ್ತವೆ.
ಇದು ಮತ್ತೆ ಯಾಕೂ ಆಲ್ಲ. ನಾವು ಬಳಕೆ ಮಾಡುವ ಕಚ್ಚಾ ವಸ್ತುಗಳಲ್ಲಿ ಸೂಕ್ಷ್ಮಾಣು ಜೀವಿಗಳು ಇರುತ್ತವೆ. ಈ ಸೂಕ್ಷ್ಮಾಣು ಜೀವಿಗಳು ಕನಿಷ್ಟ ಪ್ರಮಾಣದಲ್ಲಿದ್ದರೆ ಅದಕ್ಕೆ ಆಹಾರ ಕೊಟ್ಟು ಅದನ್ನು ಕೆವು ದಿನಗಳ ತನಕ ಪೋಷಣೆ ಮಾಡಿ ಸಂಖ್ಯಾಭಿವೃದ್ದಿ ಮಾಡುವುದು.
ಮಣ್ಣು- ಹಿಟ್ಟು- ಬೆಲ್ಲ ಯಾಕೆ:
- ಸೂಕ್ಷ್ಮಾಣು ಜೀವಿ ಸಂಮ್ಮಿಶ್ರಣವನ್ನು ಹೊಲಕ್ಕೆ ಬಳಸುವ ಮುಂಚೆ ಅದನ್ನು ಪ್ರಮಾಣ ಹೆಚ್ಚಿಸಿಕೊಳ್ಳಬೇಕು.
- ಆ ಸಮಯದಲ್ಲಿ ಅದಕ್ಕೆ ಬೆಲ್ಲ – ದ್ವಿದಳ ಧಾನ್ಯದ ಹಿಟ್ಟು ಸೇರಿಸಬೇಕು ಎನ್ನುತ್ತಾರೆ.
- ಕಾರಣ ಅದಕ್ಕೆ ಹಾಕುವ ಸೂಕ್ಷ್ಮಾಣು ಜೀವಿಗಳಿಗೆ ಅದು ಆಹಾರವಾಗಿರುತ್ತದೆ.
- ಬೆಲ್ಲ ಹೆಚ್ಚು ಹಾಕಿದರೆ ಯಾವುದೇ ತೊಂದರೆ ಇಲ್ಲ. ಅದೇ ರೀತಿಯಲ್ಲಿ ಕೆಲವು ತಯಾರಿಕೆಗಳಿಗೆ ಉತ್ತಮ ಕಾಡು ಮಣ್ಣನ್ನು ಹಾಕಬೇಕು ಎನ್ನುತ್ತಾರೆ. ಅದಕ್ಕೂ ಕಾರಣ ಇದೆ.
- ನಮ್ಮದು ಉಷ್ಣವಲಯದ ಪ್ರದೇಶ. ಇಲ್ಲಿನ ಮರಮಟ್ಟುಗಳು ಹಾಗೂ ಹವಾಮಾನ ಸ್ವಲ್ಪ ಭಿನ್ನ. ಮಳೆ ಹೆಚ್ಚು ಇರುತ್ತದೆ.
- ಇಲ್ಲಿನ ಕಾಡುಗಳಿಗೆ ಮಳೆ ಕಾಡುಗಳು ಎಂದು ಕರೆಯುತ್ತಾರೆ. ಇಲ್ಲಿನ ಮರಮಟ್ಟುಗಳು ವರ್ಷದಲ್ಲೊಮ್ಮೆ ಪೂರ್ತಿ ಎಲೆ ಉದುರಿಸುವಂತವುಗಳು.
- ಇದು ಸಮಶೀತೋಷ್ಣ ವಲಯದಲ್ಲೂ ಒಂದೇ ರೀತಿ. ಇಲ್ಲಿನ ಕಾಡುಗಳಲ್ಲಿ ದೈತ್ಯ ಮರಗಳನ್ನು ಕಾಣಬಹುದು.
- ಇದರ ಎಲೆ ಬಿದ್ದ ಜಾಗದಲ್ಲಿ ಅಪರಿಮಿತ ಸಂಖ್ಯೆಯಲ್ಲಿ ಜೀವ ವೈವಿಧ್ಯಗಳು ಇರುತ್ತವೆ.
- ಅವುಗಳಲ್ಲಿ ಶಿಲೀಂದ್ರಗಳು ಮತ್ತು ಬ್ಯಾಕ್ಟೀರಿಯಾಗಳು ಕೂಡ. ಆ ಕಾರಣಕ್ಕೆ ಕಾಡಿನ ಫಲವತ್ತಾದ ಮಣ್ಣನ್ನು ಜೀವಾಣು ಮಿಶ್ರಣ ತಯಾರಿಸುವಾಗ ಸೇರಿಸಬೇಕು ಎಂದಿರುವುದು.
ಸಗಣಿ ಮತ್ತು ಗಂಜಳ:
- ಹಸುವಿನ ಸಗಣಿ ಮತ್ತು ಗಂಜಲದ ಬಗ್ಗೆ ಹೇಳುವಷ್ಟು ಮಹತ್ವ ಕಂಡು ಬರುವುದಿಲ್ಲ.
- ಹಸುಗಳಿಗೆ ಕೊಡುವ ಆಹಾರ, ಸೂಕ್ಷ್ಮಾಣು ಜೀವಿಗಳಿಗೆ ಬದುಕಲು ಬೇಕಾಗುವ ಸಾರಜನಕ ಮೂಲ, ಮೂತ್ರ ಮತ್ತು ಸಗಣಿಯ ಮೂಲಕ ದೊರೆಯುತ್ತದೆ
- ದೇಸೀ ಹಸು ಮತ್ತು ಇತರ ಹಸು ಎಂಬ ಭೇದದಲ್ಲಿ ಯಾವುದೇ ಅರ್ಥ ಇರುವುದಿಲ್ಲ.
- ದೇಸೀ ಹಸುಗಳದ್ದು ಶ್ರೇಷ್ಟವಾಗಿರಬೇಕಾದರೆ ಅದನ್ನು ಹೊಲದಲ್ಲಿ ಮೇಯಲು ಬಿಟ್ಟು ಅದರ ಮೈಮೇಲೆ ಸೂರ್ಯನ ಬಿಸಿಲು ಬೀಳಬೇಕು
- ಅದು ಹೊಲದಲ್ಲಿ ವೈವಿಧ್ಯಮಯ ಅಹಾರಗಳನ್ನು ಮೇಯಬೇಕು.
- ಕಟ್ಟಿ ಸಾಕುವ ದೇಸೀ ಹಸುಗಳಿಗೂ – ಮಿಶ್ರ ತಳಿಯ ಹಸುಗಳಿಗೂ ಅಂತಹ ವ್ಯತ್ಯಾಸ ವೈಜ್ಞಾನಿಕವಾಗಿ ಇಲ್ಲ.
- ಸಗಣಿ- ಗಂಜಳ ಇಲ್ಲದವರು ಹೆಚ್ಚುವರಿಯಾಗಿ ದ್ವಿದಳ ಧಾನ್ಯದ ಹಿಟ್ಟು ಬಳಸಬಹುದು.
ಕಲಕುವುದು ಯಾಕೆ?
- ದಿನಕ್ಕೆ ಎರಡು ಬಾರಿ ಅದನ್ನು ಕಲಕುತ್ತಿರುವುದರಲ್ಲಿ ತುಂಬಾ ಅರ್ಥ ಇದೆ.
- ಸೂಕ್ಷ್ಮಾಣು ಜೀವಿಗಳಲ್ಲಿ ಕೆಲವು ತಳ ಭಾಗದಲ್ಲಿ ತಂಗುವವುಗಳು ಮತ್ತೆ ಕೆಲವು ಮೇಲ್ಭಾಗದಲ್ಲಿ ತಂಗುವವುಗಳು ಇರುತ್ತವೆ.
- ಇವುಗಳಿಗೆ ಆಮ್ಲಜನಕದ ಅವಶ್ಯಕತೆಯೂ ಇರುತ್ತದೆ.
- ದಿನಕ್ಕೆ 2-3 ಬಾರಿ ಕಲಕುವ ಉದ್ದೇಶ ಇದೇ ಆಗಿದ್ದು, ಈ ಕ್ರಿಯೆಯಲ್ಲಿ ಸೂಕ್ಷ್ಮಾಣು ಜೀವಿಗಳನ್ನು ಒಮ್ಮೆ ಮಗುಚಿ ಹಾಕಿದಂತಾಗುತ್ತದೆ.
- ಅವುಗಳಿಗೆ ಆಮ್ಲಜನಕವನ್ನೂ ದೊರಕಿಸಿಕೊಟ್ಟಂತಾಗುತ್ತದೆ.
- ಸೂಕ್ಷ್ಮಾಣು ಜೀವಿಗಳು ಅಲ್ಪಾವಧಿಯಲ್ಲಿ ದ್ವಿಗುಣಗೊಳ್ಳುವವು.
- ಹೀಗೆ ದ್ವಿಗುಣಗೊಳ್ಳುವಾಗ ಎಲ್ಲಾ ದ್ರಾವಣದಲ್ಲೂ ಇದು ಸಮವಾಗಿ ಹಂಚಿಕೆಯಾಗಿರಲು ಕಲಕುವಿಕೆ ಅಗತ್ಯ.
ಸೂಕ್ಷ್ಮಾಣು ಜೀವಿಗಳನ್ನು ಬ್ಯಾರಲ್ ನಲ್ಲಿ ಕೆಲವು ದಿನ ಇಟ್ಟಾಗ ಅದು ಅಧಿಕ ಪ್ರಮಾಣದಲ್ಲಿ ಸಂಖ್ಯಾಭಿವೃದ್ದಿಯಾಗುತ್ತದೆ. ಅದನ್ನು ನಂತರ ಹೊಲಕ್ಕೆ ಬಳಕೆ ಮಾಡಿದಾಗ ಅಲ್ಲಿ ಕೆಲವು ಸತ್ತು ಹೋದರೂ ಕೆಲವು ಉಳಿಯುತ್ತದೆ. ಹೊಲಕ್ಕೆ ಬಳಕೆ ಮಾಡುವಾಗ ತಕ್ಷಣದ ಆಹಾರವಾಗಿ ಇವು ದೊರೆತು ಬದುಕಲು ಅನುಕೂಲವಾಗುತ್ತದೆ.