ದರಗು ಹಾಸಿದರೆ ನೀರು ಕಡಿಮೆ ಸಾಕು. ಮಣ್ಣು ಫಲವತ್ತಾಗುತ್ತದೆ.

Dry leaf waste mulching

ಚಳಿಗಾಲ ಬಂದಿದೆ. ಎಲ್ಲಾ ಮರಮಟ್ಟುಗಳೂ ತಮ್ಮ ಎಲೆಗಳನ್ನು ಉದುರಿಸಿವೆ. ನೆಲದಲ್ಲಿ ಬಿದ್ದಿರುವ ಈ ದರಗನ್ನು ಯಾವುದೇ  ಕಾಣಕ್ಕೆ  ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ನಷ್ಟವಾಗಲು ಬಿಡಬೇಡಿ.ಹೊಲಕ್ಕೆ ಹಾಕಿ. ಮುಂದಿನ ವರ್ಷವೇ ಗಮನಾರ್ಹ ಬದಲಾವಣೆ ಗಮನಿಸಿ.

Oraganic waste mulched in areca and pepper plantation

ಫಲವತ್ತತೆ ನವೀಕರಣ:    

  • ಜಪಾನ್ ದೇಶದ ಸಹಜ ಕೃಷಿಯ ಜನಕ ಎಂದೇ ಹೆಸರುವಾಸಿಯಾದ, ಫುಕುಫೋಕಾರವರು ತಾವು ಬೆಳೆಸಿ ಅಲ್ಲಿಂದ ತನಗೆ ಬೇಕಾದ ಫಸಲನ್ನು ಮಾತ್ರ ತೆಗೆದುಕೊಂಡು ಉಳಿದುದನ್ನು  ಅಲ್ಲೇ ಬಿಡುತ್ತಿದ್ದರಂತೆ.
  • ಇದರಿಂದ ಕೃಷಿ ಮಾಡಿದ ಹೊಲದ ಫಲವತ್ತತೆ ವರ್ಷದಿಂದ ವರ್ಷ ಉತ್ತಮವಾಗುತ್ತಾ ಬಂತು ಎಂದು ಅವರು ಜಗತ್ತಿಗೇ ಸಾರಿದ್ದಾರೆ.
  • ನಿಜ. ಭೂಮಿಯಲ್ಲಿ ಕೃಷಿ ಮಾಡುವಾಗ ಬರೇ ಫಸಲನ್ನು ಮಾತ್ರ ತೆಗೆದುಕೊಂಡು ಉಳಿದ ಎಲ್ಲಾ ತ್ಯಾಜ್ಯಗಳನ್ನು  ಅಲ್ಲೇ ಬಿಟ್ಟರೆ ಮಣ್ಣಿನ ಫಲವತ್ತತೆ ನಿಜವಾಗಿಯೂ ಮೇಲ್ದರ್ಜೆಗೇರುತ್ತದೆ.
  • ಆದರೆ ಮಣ್ಣಿನಲ್ಲಿ ಉಳಿಸಿದ ತ್ಯಾಜ್ಯಗಳು ರಕ್ಷಿಸಲ್ಪಡಬೇಕು.

Dry leaf waste mulching

ಯಾಕೆ ಸಾವಯವ ವಸ್ತು ಸೇರಿಸಬೇಕು:

  • ಇಂದಿನ ದಿನಗಳಲ್ಲಿ ಭತ್ತ ಬೆಳೆದು ಅದರ ತೆನೆಯನ್ನು ಮಾತ್ರ ಕತ್ತರಿಸಿ ಉಳಿದ ಅದರ ಶೇಷಗಳನ್ನು ಅಲ್ಲೇ ಬಿಡಲು ಸಾಧ್ಯವಾಗುತ್ತಿಲ್ಲ.
  • ಪಶು ಮೇವಿಗಾಗಿ ಆ ಭತ್ತದ ಹುಲ್ಲಿನ ಅವಶ್ಯಕತೆಯೂ ನಮಗಿದೆ.
  • ಬತ್ತ ಬೆಳೆಯುತ್ತೇವೆ. ಪೈರು ಮಣ್ಣಿನಲ್ಲಿದ್ದ ಪೋಷಕಗಳನ್ನು ಬಳಸಿ ಬೆಳೆಯುತ್ತದೆ.
  • ಅಷ್ಟು ಪೋಷಕಗಳು ಮಣ್ಣಿನಲ್ಲಿ ಕೊರತೆ ಆಗಲೇ ಬೇಕು ತಾನೇ?
  • ಅದನ್ನು ಸರಿದೂಗಿಸಲು ಆ ಮಣ್ಣಿಗೆ ಸಾಕಷ್ಟು ಸಾವಯವ ವಸ್ತುಗಳನ್ನು ಸೇರಿಸಲೇ ಬೇಕು.
  • ಸುಲಭವಾಗಿ ಲಭ್ಯವಾಗುವ ಸಾವಯವ ವಸ್ತುಗಳೆಂದರೆ ದರಗು ಹಾಗೂ ಸೊಪ್ಪು ಸದೆಗಳು.
  • ಕರಡ ಹುಲ್ಲುಗಳು. ಸೊಪ್ಪು ಸದೆಗಳನ್ನು ಕಡಿಯುವುದರಿಂದ ಪರಿಸರದಲ್ಲಿ ಮರಮಟ್ಟುಗಳ ಬೆಳವಣಿಗೆಗೆ ತೊಂದರೆಯಾಗುತ್ತದೆ.
  • ಆದರೆ ಬಿದ್ದು ಉದುರಿ ನಂತರ ಮಳೆ ನೀರಿನಲ್ಲಿ ಕೊಚ್ಚಣೆಯಾಗಿ ಹೋಗಬಹುದಾದ ತರಗೆಲೆಗಳನ್ನು ಹೊಲಕ್ಕೆ ಸೇರಿಸಿದರೆ ಮಣ್ಣಿನ ಫಲವತ್ತತೆ ಹೆಚ್ಚಲು ಸಹಕಾರಿಯಾಗುತ್ತದೆ.

Dry leaves collected from forest

ನಷ್ಟ ಭರ್ತಿ ಮಾಡಲೇ ಬೇಕು:

  • ನಮ್ಮ ಕೃಷಿ ಭೂಮಿಯಲ್ಲಿ ಸಾರಾಂಶಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುತ್ತದೆ.
  • ಇದಕ್ಕೆ ಒಂದು ಕಾರಣ ಬೆಳೆಗಳು ಪೋಷಕಗಳನ್ನು ಬಳಕೆ ಮಾಡುವುದು, ಮತ್ತೊಂದು ಮಣ್ಣು ಬೋರಲಾಗಿ ತೆರೆದುಕೊಂಡು ಮಳೆ, ಬಿಸಿಲು ಮುಂತಾದ ಪ್ರಾಕೃತಿಕ ಸನ್ನಿವೇಶಗಳಿಗೆ ಒಳಪಟ್ಟು ಸವಕಳಿಯಾಗಿ ಪೋಷಕಾಂಶ ನಷ್ಟವಾಗುತ್ತದೆ.
  • ಇದನ್ನು ಸರಿ ಹೊಂದಿಸಲು ವರ್ಷ ವರ್ಷ ನಾವು ರಾಸಾಯನಿಕ, ಸಾವಯವ ಮೂಲದ ಪೋಷಕಗಳನ್ನು  ಕೊಡುತ್ತೇವೆ.
  • ಇದರಿಂದ ಮಣ್ಣು ತಕ್ಕಮಟ್ಟಿಗೆ  ಜೈವಿಕವಾಗಿ- ರಾಸಾಯನಿಕವಾಗಿ ಮತ್ತು ಭೌತಿಕವಾಗಿ ಸುಧಾರಿಸುತ್ತದೆ ಎಂದು ನಾವು ತಿಳಿಯುತ್ತೇವೆ.
  • ಆದರೆ ವಾಸ್ತವಿಕವಾಗಿ ಹೇಳಬೇಕೆಂದರೆ ಮಳೆ ಅಧಿಕ ಪ್ರಮಾಣದಲ್ಲಿ ಬರುವ ಕಡೆಗಳಲ್ಲೆಲ್ಲಾ ಬೆಳೆಗಳು ಬಳಕೆ ಮಾಡುವ ಪೋಷಕಗಳಿಗಿಂತ ಅಧಿಕ ಪ್ರಮಾಣದ ಪೋಷಕಗಳು ಮಳೆಗೆ ಕೊಚ್ಚಣೆಯಾಗಿ ನಷ್ಟವಾಗುತ್ತದೆ.
  • ಇದರಿಂದ ನಾವು ಎಷ್ಟು ಪೋಷಕಗಳನ್ನು ಕೊಟ್ಟರೂ ಸಾಕಾಗುವುದಿಲ್ಲ.

ಮಣ್ಣು ಯಾವಾಗಲೂ ಜೈವಿಕವಾಗಿ ಶ್ರೀಮಂತವಾದರೆ ಮಾತ್ರ ಅದು ಧೀರ್ಘಾವಧಿಯ ತನಕ ಕೃಷಿ ಮಾಡಲು ಸಹಕಾರವನ್ನು  ಕೊಡಬಲ್ಲುದು.

ಇದು ಎ ಲ್ಲರಿಗೂ ಗೊತ್ತಿರಬೇಕು:

  • ನಮ್ಮ ಹಿರಿಯರು ಕೃಷಿ ಹೊಲಕ್ಕೆ ಸೊಪ್ಪುಸದೆ, ದರಗು, ಕರಡ ಹುಲ್ಲು ಮುಂತಾದವುಗಳನ್ನು ಮೇಲು ಹಾಸಲು ಮಾಡುತ್ತಿದ್ದರು.
  • ದರಗು ಹಾಸುವುದರಿಂದ ಮಣ್ಣಿನ ಜೈವಿಕ ಗುಣಧರ್ಮ ಬಹಳಷ್ಟು ಸುಧಾರಿಸುತ್ತದೆ.
  • ಮಣ್ಣು ಸವಕಳಿ ಕಡಿಮೆಯಾಗುತ್ತದೆ. ಮಣ್ಣಿಗೆ  ನಾವು ಪೂರೈಕೆ ಮಾಡುವ ನೀರು, ಗೊಬ್ಬರಗಳಿಗೆ ಸ್ಪಂದಿಸಿ, ಉತ್ತಮ ಇಳುವರಿ ಕೊಡುತ್ತದೆ.
  • ಮಣ್ಣಿನ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಹೆಚ್ಚಲು ಹೊಲಕ್ಕೆ ಸಾವಯವ ತ್ಯಾಜ್ಯಗಳು ಅತೀ ಅಗತ್ಯ.
  • ಬೆಳೆಗಳ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
  • ಸಾವಯವ ಸಾರವಿಲ್ಲದ ಮಣ್ಣಿನಲ್ಲಿ ಹೆಚ್ಚು ಸಮಯ ಕೃಷಿ ಮಾಡುವುದಕ್ಕೆ ಕಷ್ಟವಾಗುತ್ತದೆ.
  • ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುವುದಿದ್ದರೂ ಸಹ ಮಣ್ಣಿನಲ್ಲಿ  ಜೈವಿಕತೆ ಇಲ್ಲದಿದ್ದರೆ ಅದು ಫಲಿತಾಂಶ ಕೊಡುವುದಿಲ್ಲ.
  • ನಮ್ಮ ಹಿರಿಯರು ಕೃಷಿ ಮಾಡುತ್ತಿದ್ದ ಭೂಮಿ ಫಲವತ್ತಾಗಿರಲು ಮುಖ್ಯ ಕಾರಣ ಅವರು ಮಣ್ಣಿಗೆ ಸಾಕಷ್ಟು ಸಾವಯವ ವಸ್ತುಗಳನ್ನು  ಒದಗಿಸಿ ಬೆಳೆಬೆಳೆದುದೇ ಆಗಿದೆ.
  • ಇದನ್ನು ಚಳಿಗಾಲ ಮುಗಿಯುವುದರ ಒಳಗೆ ಮಾಡಿದರೆ ಬೇಸಿಗೆಗೆ ತುಂಬಾ ಅನುಕೂಲ.

  ಉತ್ತರ ಕನ್ನಡದಲ್ಲಿ ಈಗಲೂ ಬಹಳಷ್ಟು ಕೃಷಿಕರು ಈ ದರಗು ಹಾಕುವ ಕೃಷಿ ಕ್ರಮವನ್ನು ಪಾಲಿಸುತ್ತಿದ್ದಾರೆ. ಇದರಿಂದಾಗಿ ಅಲ್ಲಿನ ಮಣ್ಣು ಫಲವತ್ತಾಗಿ ಇತರ ಮೂಲಗಳ ಪೋಷಕಗಳ ಬಳಕೆ  ಕಡಿಮೆ ಸಾಕಾಗುತ್ತದೆ.

Leave a Reply

Your email address will not be published. Required fields are marked *

error: Content is protected !!