ಕರಿಮೆಣಸಿಗೆ ರೋಗ ಯಾವಾಗ ಬರುತ್ತದೆ, ಬೆಳೆ ಕೈಕೊಡುತ್ತದೆ ಎಂಬುದಕ್ಕೆ ಯಾರಲ್ಲಿಯೂ ಉತ್ತರ ಇಲ್ಲ. ರೋಗ ಬಾರದೆ ಇರುವ ತಳಿ ಬಹುಶಃ ತನಕ ಇರಲಿಲ್ಲ. ಆದರೆ ಇತ್ತೀಚೆಗೆ ಒಬ್ಬರು ರೈತರು ತಮ್ಮ ಹೊಲದಲ್ಲಿ ಎಲ್ಲಾ ಬಳ್ಳಿಗಳೂ ರೋಗ ಬಂದಾಗಲೂ ನಾನು ಗಟ್ಟಿ ಎಂದು ಉಳಿದುಕೊಂಡ ಬಳ್ಳಿಯಲ್ಲಿ ರೋಗ ನಿರೋಧಕ ಶಕ್ತಿ ಇದೆ ಎಂದು ಕಂಡುಕೊಂಡಿದ್ದಾರೆ. ಅದನ್ನು ತಜ್ಞರ ಜೊತೆ ಚರ್ಚಿಸಿ, ಅಧ್ಯಯನ ನಡೆಸಿ ಖಾತ್ರಿ ಮಾಡಿಕೊಂಡಿದ್ದಾರೆ. ಅದಕ್ಕೆ ರೈತರು ಪೇಟೆಂಟ್ ಸಹ ಪಡೆದಿದ್ದಾರೆ. ರೈತರ ಹೊಲದಲ್ಲಿ ಅಭಿವೃದ್ದಿಯಾದ ಕರ್ನಾಟಕದ ಏಕಮಾತ್ರ ರೋಗ ನಿರೋಧಕ ಶಕ್ತಿಯುಳ್ಳ ತಳಿ ಇದು.
ಕರಿಮೆಣಸಿಗೆ ಅತಿಯಾಗಿ ಕಾಡುವ ರೋಗ ಎಂದರೆ ಶೀಘ್ರ ಸೊರಗು (Quick wilt) ರೋಗ ಮತ್ತು ನಿಧಾನ ಸೊರಗು (Slow wilt) ರೋಗಗಳು. ಈ ಎರಡು ರೋಗಗಳು ಇಲ್ಲದೆ ಇರುತ್ತಿದ್ದರೆ ಇಂದು ಕರಿಮೆಣಸು ಉತ್ಪಾದನೆ ಅಡಿಕೆಗಿಂತ ಹೆಚ್ಚಾಗುತ್ತಿತ್ತು. ಆದರೆ ಈ ರೋಗ ಅತ್ತ ಏರಲೂ ಬಿಡಲಿಲ್ಲ. ಇತ್ತ ಇಳಿಯಲೂ ಬಿಡಲಿಲ್ಲ. ರೋಗ ಬರುತ್ತದೆ, ಮತ್ತೆ ನೆಟ್ಟು ಬೆಳೆಸಿ ಬೆಳೆಯಲಾಗುತ್ತದೆ. ಆದರೂ ಪ್ರತೀಯೊಬ್ಬ ಬೆಳೆಗಾರನಿಗೂ ರೋಗದ ಅಂಜಿಕೆ ಇದ್ದೇ ಇದೆ. ರೋಗ ಮುನ್ನೆಚ್ಚರಿಕೆಗಾಗಿ ಬೇರೆ ಬೇರೆ ಕ್ರಮಗಳನ್ನು ಅನುಸರಿಸಲಾಗುತ್ತದೆ.ಇದೆಲ್ಲಾ ಅದೃಷ್ಟ ಪರೀಕ್ಷೆಯಂತೆ. ರೋಗ ನಿರೋಧಕ ಶಕ್ತಿ ಇರುವ ತಳಿ ಇದ್ದರೆ ಈ ಪರಿಯ ರೋಗ ಮುನ್ನೆಚ್ಚರಿಕೆಯ ಅವಶ್ಯಕತೆಯೇ ಇರುವುದಿಲ್ಲ. ಬಹುಶಃಮುಂದಿನ ದಿನಗಳಲ್ಲಿ ಸಿಗಂಧಿನಿ ಎಂಬ ಹೆಸರಿನ ಈ ತಳಿ ಕರಿಮೆಣಸು ಬೆಳೆಗಾರರಿಗೆ ರೋಗದ ಭಯವನ್ನು ದೂರಮಾಡಬಹುದೇನೋ? ಇಂತಹ ಒಮ್ದು ತಳಿ ಸಿದ್ದಾಪುರ ತಾಲೂಕು, ಹುಣಸೇಕೊಪ್ಪ ಎಂಬಲ್ಲಿ ಒಬ್ಬ ಅಡಿಕೆ ಬೆಳೆಗಾರ ಶ್ರೀ ರಮಾಕಾಂತ ಹೆಗಡೆಯವರ ತೋಟದಲ್ಲಿ ನೈಸರ್ಗಿಕವಾಗಿ ಅಭಿವೃದ್ದಿಯಾಗಿದೆ.
ನೈಸರ್ಗಿಕವಾಗಿ ತಳಿ ಅಭಿವೃದ್ದಿ:
- ನೈಸರ್ಗಿಕ ಅಥವಾ ಪ್ರಾಕೃತಿಕ ತಳಿ ಅಭಿವೃದ್ದಿ ಎಂದರೆ ತನ್ನಷ್ಟಕ್ಕೆ ಆಗುವಂತದ್ದು.
- ಸಸ್ಯ ಸಂಕುಲಗಳು ಭೂಮಿಯ ಮೇಲೆ ಹುಟ್ಟಿದಾಗಿನಿಂದ ಇಂದಿನ ತನಕವೂ ಈ ಕ್ರಿಯೆ ನಡೆಯುತ್ತಾ ಬಂದಿದೆ.
- ನಮ್ಮ ಸುತ್ತಮುತ್ತ ಇರುವ ಬೇರೆ ಬೇರೆ ಸಸ್ಯವರ್ಗಗಳ ಹುಟ್ಟಿನ ಹಿಂದೆ ಈ ಕ್ರಿಯೆ ಅಡಗಿದೆ.
- ಬಹುತೇಕ ಎಲ್ಲಾ ಸಸ್ಯವರ್ಗಗಳೂ ತಮ್ಮ ತಳಿ ಅಭಿವೃದ್ದಿಗಾಗಿ ಹೂ ಬಿಟ್ಟು ಬೀಜಗಳನ್ನು ಸೃಷ್ಟಿಸುತ್ತವೆ.
- ಬಹುತೇಕ ಹೂವುಗಳು ಕಾಯಿ ಕಚ್ಚುವುದು ಪರಾಗಸ್ಪರ್ಷದ ಮೂಲಕ.
- ಪರಾಗ ಸ್ಪರ್ಶಕ್ಕೆ ನೆರವಾಗುವ ಪರಾಗದಾನಿಗಳು ತಳಿ ಸಂಕರಣವನ್ನು ಮಾಡುತ್ತವೆ, ಜೊತೆಗೆ ಬೇರೆ ಬೇರೆ ಗುಣಗಳನ್ನು ಸಹ ವರ್ಗಾಯಿಸುತ್ತವೆ.
- ಹಾಗಾಗಿ ಬೀಜದಿಂದ ಹುಟ್ಟಿದ ಪ್ರತೀಯಿಂದು ಸಸಿಯೂ ಅದರ ಮೂಲಗುನವನ್ನು ಯಥಾವತ್ ಪಡೆದಿರುವುದಿಲ್ಲ.
- ಕೆಲವು ಉನ್ನತ ಶ್ರೇಣಿಗೂ ಕೆಲವು ಮೂಲ ತಳಿಯಂತೆಯೂ ಇನ್ನು ಕೆಲವು ಕೆಳ ಗುಣಮಟ್ಟದವುಗಳೂ ಆಗಿ ಹುಟ್ಟಬಹುದು.
- ಇಂದು ಒಂದಕ್ಕೊಂದು ಗುಣದಲ್ಲಿ ಸಾಮ್ಯತೆ ಇಲ್ಲದ ಒಂದೇ ತಾಯಿ ಸಸ್ಯದ ಸಸಿಗಳ ಹಿಂದಿನ ರಹಸ್ಯ ಇದು.
- ನೈಸರ್ಗಿಕ ತಳಿ ಸಂಕರಣ ಎಂಬುದು ನಮ್ಮ ಸಸ್ಯ ವೈವಿಧ್ಯಗಳ ಅಭಿವೃದ್ದಿಗೆ ಹಾಗೆಯೇ ಆಧುನಿಕ ತಳಿ ವಿಜ್ಞಾನದ ಅಧ್ಯನಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ ಎನ್ನಬಹುದು.
- ಉದಾಹರಣೆಗಾಗಿ ಹೇಳುತ್ತೇವೆ. ನಮ್ಮ ತೋಟದಲ್ಲಿರುವ ತೆಂಗಿನ ಮರಗಳಲ್ಲಿ ಒಂದೂ ಪರಸ್ಪರ ಹೋಲಿಕೆಯ ಗುಣ ಇಲ್ಲದಿರುವುದು ನೈಸರ್ಗಿಕ ತಳಿ ಸಂಕರಣದಿಂದ.
- ಹಲಸಿನಲ್ಲಿ ಕೆಂಪು, ಹಳದಿ, ಕೇಸರಿ, ಬಿಳಿ ದೊಡ್ದದು ಸಣ್ಣದು, ದುಂಡಗೆ, ಉದ್ದ, ಅಂಬಲಿ, ಬೆಳುವೆ ಇವೆಲ್ಲಾ ಸೃಷ್ಟಿಯಾದುದೇ ನೈಸರ್ಗಿಕ ಸಂಕರಣದಿಂದ.
- ಒಂದೆಡೆ ತಳಿವಿಜ್ಞಾನಿಗಳ ಪ್ರಯತ್ನದ ತಳಿ ಸಂಕರಣ ಇರಬೇಕು.
- ಜೊತೆಗೆ ನೈಸರ್ಗಿಕ ತಳಿ ಸಂಕರಣಕ್ಕೂ ಅವಕಾಶ ಕೊಡಬೇಕು ಎನ್ನುತ್ತಾರೆ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ಧೇಶಕರಾದ ಡಾ. ಶ್ರೀನಿವಾಸ ಮೂರ್ತಿಯವರು.
ಸಿಗಂಧಿನಿ ರೋಗ ನಿರೋಧಕ ತಳಿ ಹೇಗೆ ಉಂಟಾಯಿತು:
- ರಮಾಕಾಂತ ಹೆಗಡೆಯವರು ನಮ್ಮೆಲ್ಲರಂತೆ ಓರ್ವ ಅಡಿಕೆ ಜೊತೆಗೆ ಮಿಶ್ರ ಬೆಳೆಯಾಗಿ ಕರಿಮೆಣಸು ಬೆಳೆಯುವ ರೈತ.
- ಕರಿಮೆಣಸಿನಲ್ಲಿ ಸ್ಥಳೀಯ ತಳಿಗಳ ತವರೂರು ಮಲೆನಾಡಿನ ಈ ಭಾಗ ಎಂದರೆ ತಪ್ಪಿಲ್ಲ.
- ಸಾಕಷ್ಟು ಸ್ಥಳೀಯ ತಳಿಗಳು ಇಲ್ಲಿ ಬೇರೆ ಬೇರೆ ರೈತರ ಹೊಲದಲ್ಲಿ ಇವೆ.
- ಹೆಗಡೆಯವರಲ್ಲೂ ನಾಲ್ಕಾರು ಸ್ಥಳೀಯ ತಳಿ ಹಾಗೂ ಪನಿಯೂರ್ ತಳಿಯೂ ಇದೆ.
- ಹಿಂದೆ ಈಗಿನಂತೆ ಬಳ್ಲಿಗೆ ರೋಗ ಬಾರದಂತೆ ಮುನ್ನೆಚ್ಚರಿಕೆ ಕ್ರಮ ಅನುಸರಿಸುವ ವಿಧಾನವೇ ರೈತರಿಗೆ ಗೊತ್ತಿರಲಿಲ್ಲ.
- ಬದುಕಿದರೆ ನಮ್ಮ ಪುಣ್ಯ, ಸತ್ತರೆ ದುರದೃಷ್ಟ ಎಂದು ಮೆಣಸು ಬೆಳೆಸುತ್ತಿದ್ದರು.
- ಕೆಲವರು ಮೆಣಸಿನ ಸಹವಾಸವೇ ಬೇಡ ಎಂದು ಬಿಟ್ಟಿದ್ದವರೂ ಇದ್ದರು.
- ಆ ಸಮಯದಲ್ಲಿ ವನಿಲ್ಲಾ ಎಂಬ ಬೆಳೆ ಎಲ್ಲಾ ಕಡೆಯಲ್ಲೂ ವ್ಯಾಪಿಸಿತ್ತು.
- ವನಿಲ್ಲಾ ದಲ್ಲಿ ಲಕ್ಷ ಲಕ್ಷ ದುದಿಯಬಹುದು ಎಂದು ಮೆಣಸಿನ ಗೋಜಿಗೇ ಹೋಗದೆ ಪಾಳು ಬಿಟ್ಟವರು ಹಲವರು.
- ಅಂತವರಲ್ಲಿ ರಮಾಕಾಂತ ಹೆಗಡೆಯವರೂ ಒಬ್ಬರು. ವನಿಲ್ಲಾ ಬಂತು ಹಾಗೆಯೇ ಹೇಳ ಹೆಸರಿಲ್ಲದಂತೆ ಆಯಿತು.
- ಮತ್ತೆ ಕರಿಮೆಣಸೇ ಆಸರೆ ಎಂಬ ಪರಿಸ್ಥಿತಿ ಉಂಟಾಯಿತು.
- ಆ ಸಮಯದಲ್ಲಿ ಉಳಿದೆಲ್ಲಾ ಬಳ್ಳಿಗಳೂ ನಾಶವಾಗಿದ್ದರೆ ಎರಡು ಬಳ್ಳಿ ಮಾತ್ರ ನಾನು ಉಳಿದುಕೊಂಡಿದ್ದೇನೆ.
- ನನ್ನನ್ನು ಸಾಕು ಎನ್ನುತ್ತಿದ್ದವಂತೆ. ಅದನ್ನೇ ಮತ್ತೆ ಅಭಿವೃದ್ಧಿಪಡಿಸಿ ನೆಟ್ಟದ್ದೂ ಆಯಿತು.ಅದು ಬೆಳೆದು ಫಲ ಕೊಡಲೂ ಪ್ರಾರಂಭವಾಯಿತು.
- ಯಾಕೋ ಈ ಬಳ್ಳಿ ರೋಗಕ್ಕೆ ನಿರೋಧಕ ಶಕ್ತಿ ಹೊಂದಿದೆ ಎಂಬ ಸಂಶಯ ಬಂತು.
- ತಜ್ಞರಾದ ಡಾ. ವೇಣುಗೋಪಾಲ್ ಜೊತೆ ಚರ್ಚಿಸಿ ಅವರನ್ನು ತೋಟಕ್ಕೆ ಭೇಟಿ ಕೊಡಿಸಿ, ಅವರ ಮೂಲಕ ಅದರ ಅಧ್ಯಯನಕ್ಕೆ ಪ್ರಾರಂಭಿಸಿದರು.
- ಎಲ್ಲಾ ಅಧ್ಯನಗಳಲ್ಲಿ ಪಾಸ್ ಆಗಿ ದೊರೆತ ರೋಗ ನಿರೋಧಕ ಶಕ್ತಿಯ ತಳಿಯೇ ಸಿಗಂಧಿನಿ.
ರೋಗ ಇಲ್ಲ ಏನು ಖಾತ್ರಿ:
- ರೋಗ ಬರುವುದಿಲ್ಲ. ರೋಗ ನಿರೋಧಕ ಶಕ್ತಿ ಇದೆ ಎಂದು ನಾವು ಹೇಳಬಹುದು, ಆದರೆ ಅದು ಎಲ್ಲರೂ ಒಪ್ಪುವ ಸತ್ಯವಾಗಬೇಕಲ್ಲ.
- ಅದನ್ನೂ ಶ್ರೀ ರಮಾಕಾಂತ ಹೆಗಡೆಯವರು ಸಾಬೀತುಪಡಿಸಿದ್ದಾರೆ.
- ಮೊದಲು ತಾನು ಕಂಡ ಧನತ್ಮಕ ಗುಣಗಳನ್ನು ಸಾಂಬಾರ ಬೆಳೆಗಳ ವಿಜ್ಞಾನಿ ಎಂದೇ ಖ್ಯಾತರಾದ ಶ್ರೀ ವೇಣುಗೋಪಾಲ್ ಇವರ ಗಮನಕ್ಕೆ ತಂದರು.
- ಅವರು ಅದರ ಎಲ್ಲಾ ಮಜಲುಗಳನ್ನು ಪರಿವೀಕ್ಷಿಸಿ, ಅದನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದರು.
- ಅಲ್ಲಿ ಅದು ಎಲ್ಲಾ ರೀತಿಯಲ್ಲೂ ರೋಗ ನಿರೋಧಕ ಶಕ್ತಿ ಪಡೆದಿರುವುದು ಸಾಬೀತಾಯಿತು.
- ಹಾಗೆಯೇ ಈ ವಿಚಾರವನ್ನು ಭಾರತೀಯ ಸಾಂಬಾರು ಬೆಳೆಗಳ ಸಂಶೊಧನಾ ಸಂಸ್ಥೆ ಕಲ್ಲಿಕೊಟೆ,ಕೇರಳ ಇಲ್ಲಿಗೆ ತಿಳಿಸಿ
- ಅಲ್ಲಿಂದ ತಜ್ಞರ ತಂಡ ಬಂದು ಇದರ ಎಲ್ಲಾ ಭಾಗ (ಎಲೆ, ಕರೆ, ಕಾಂಡ , ಬೇರು ಇತ್ಯಾದಿಗಳ ಮಾದರಿಯನ್ನು ಒಯ್ದರು.
- ಜೊತೆಗೆ 25 ಬೇರು ಬರಿಸಿದ ಸಸ್ಯವನ್ನೂ ಒಯ್ದು ಅವರ ಸಂಶೋಧನಾ ತಾಕುಗಳಲ್ಲಿ ಬೆಳೆಸಿ ಅದರ ಕ್ಷಮತೆಯನ್ನು ಅಧ್ಯಯನ ಮಾಡಿದರು.
- ಅಲ್ಲೆಲ್ಲಾ ಈ ತಳಿಗೆ ರೋಗ ಬರಲಿಲ್ಲ ಎಂಬುದು ತಿಳಿದ ನಂತರ ಸಿಗಂಧಿನಿಯನ್ನು ಒಂದು ರೋಗ ನಿರೋಧಕ ತಳಿ ಎಂದು ಪ್ರಮಾಣೀಕರಣ ಮಾಡಿದರು.
ಪೇಟೆಂಟ್ ಸಹ ಪಡೆದರು:
- ಭಾರತ ಸರಕಾರ TRIPS agreement on Trade related aspects of intalectual property rights ಒಪ್ಪಿಗೆ ಕೊಟ್ಟ ನಂತರ ಬೌದ್ಧಿಕ ಆಸ್ತಿಗಳಿಗೆ ಹಕ್ಕು ಸ್ವಾಮಯವನ್ನು ಹೊಂದುವುದು ಸುಲಭವಾಯಿತು.
- 2001 ರಲ್ಲಿ ಭಾರತ ಸರಕಾರ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆಯನ್ನು (The Protection of Plant Varieties and Farmers Rights Act 2001)ಜ್ಯಾರಿಗೆ ತಂದ ತರುವಾಯ
- ರೈತರ ಹೊಲದಲ್ಲಿ ವಿಶಿಷ್ಟ ಗುಣದ ತಳಿಗಳೇನಾದರೂ ಇದ್ದರೆ ಅದರ ಹಕ್ಕು ಸ್ವಾಮ್ಯವನ್ನು ಆ ಹೊಲದ ಮಾಲಿಕ ಪಡೆಯುವುದಕ್ಕೆ ಸಾಧ್ಯವಾಯಿತು.
- ಇದರಂತೆ ದೇಶದಾಧ್ಯಂತ ಹಲವಾರು ತಳಿಗಳು ಹಕ್ಕು ಸ್ವಾಮ್ಯಕ್ಕೆ ಒಳಪಟ್ಟಿವೆ.
- ಹಕ್ಕು ಸ್ವಾಮ್ಯ ಎಂದರೆ ಅದು ಪೇಟೆಂಟ್. ಅದಕ್ಕೆ ಕೆಲವು ನೀತಿ ನಿಯಮಾವಳಿಗಳು ಇವೆ.
- ಅವೆಲ್ಲಾ ಪಾಸ್ ಆದ ಮೇಲೆ ಹಕ್ಕು ಸ್ವಾಮ್ಯ ದೊರೆಯುತ್ತದೆ.
- ರಮಾಕಾಂತ ಹೆಗಡೆಯವರು ತಮ್ಮ ತೋಟದಲ್ಲಿರುವ ಕರಿಮೆಣಸು ತಳಿಯ ಬಗ್ಗೆ ತಾನು ಅಧ್ಯಯನ ನಡೆಸಿದ ಮಾಹಿತಿ,
- ಹಾಗೆಯೇ ಭಾರತೀಯ ಸಾಂಬಾರ ಬೆಳೆಗಳ ಸಂಶೊಧನಾ ಸಂಸ್ಥೆ ಇಲ್ಲೆಲ್ಲಾ ನಡೆಸಿದ ಅಧ್ಯಯನಗಳನ್ನು ಒಳಗೊಂಡ ವರದಿಯೊಂದಿಗೆ
- ತನಗೆ ಹಕ್ಕು ಸ್ವಾಮ್ಯ ಬೇಕು ಎಂದು ದೆಹಲಿಯಲ್ಲಿರುವ PPV&FRA ಕಚೇರಿಗೆ ಸ್ಥಳೀಯ ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಸಹಾಯದಿಂದ ಅರ್ಜಿಯನ್ನು ಸಲ್ಲಿಸುತ್ತಾರೆ.
- ಅಲ್ಲಿಂದ ಸಮೀಪದ ತೋಟಗಾರಿಕಾ ವಿಶ್ವವಿಧ್ಯಾನಿಲಯಕ್ಕೆ ಅದರ ಸಸ್ಯಾಸತ್ಯತೆಯನ್ನು ಪರಿಶೀಲಿಸಲು ಹಿಂಬರಹ ಬರುತ್ತದೆ.
- ಅವರ ಶಿಫಾರಿಸಿನ ಮೇರೆಗೆ ಪೇಟೆಂಟ್ ಮಂಜೂರಾತಿ ಕಚೇರಿಯವರು ನಿಯುಕ್ತಿಗೊಳಿಸುವ ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡ ಅಧ್ಯಯನ ಕೈಗೊಳ್ಳುತ್ತದೆ.
- ತಮ್ಮ ತಳಿ ಸಂರಕ್ಷಣಾ ತಾಕಿನಲ್ಲಿ ಬೆಳೆಸಿ ಅದರ ಕ್ಷಮತೆಯನ್ನು ಪರಿಶೀಲಿಸುತ್ತದೆ.
- ಜೊತೆಗೆ ಅಧ್ಯಯನ ಮುಗಿಯುವ ತನಕವೂ ರೈತರ ಹೊಲದಲ್ಲಿ ಯಾವ ಬದಲಾವಣೆ ಅಗುತ್ತದೆ ಎಂಬುದನ್ನು ಪರಿಶೀಲಿಸುತ್ತಾ
- ತೃಪಿಕರವಾಗಿ ಕಂಡು ಬಂದ ತರುವಾಯ ಅದರ ಹಕ್ಕು ಸ್ವಾಮ್ಯವನ್ನು ರೈತರಿಗೆ ನಿಡುತ್ತದೆ.
- ಹೆಗಡೆಯವರಿಗೆ ಇದರ ಹಕ್ಕು ಸ್ವಾಮ್ಯ ದೊರೆತಿದ್ದು, ಇದನ್ನು ಅವರ ಹೊರತಾಗಿ ಯಾರೂ ತನ್ನದೆಂದು ಹೇಳುವಂತಿಲ್ಲ.
- ಇದರ ಸಸ್ಯಾಭಿವೃದ್ದಿ ಮಾಡುವಂತಿಲ್ಲ.
- ಇಂದು ಸಿಗಂಧಿನಿ ತಳಿಯ ಮೆಣಸಿನ ಸಸಿ ಬೇಕಾದರೆ ಅದನ್ನು ರಮಾಕಾಂತ ಹೆಗಡೆಯವರೇ ಕೊಡಬೇಕು ಇಲ್ಲವೇ ಅವರ ಅನುಮತಿ ಪಡೆದವರು ಮಾತ್ರ ಕೊಡಬೇಕು.
- ಈ ಒಪ್ಪಂದ 8 ವರ್ಷ ಕಾಲ ಇರುತ್ತದೆ. ಅದನ್ನು ಮತ್ತೂ 8 ವರ್ಷ ಕಾಲ ಮುಂದುವರಿಸಬಹುದು.
ಸಿಗಂಧಿನಿಯ ವಿಶೇಷತೆ:
- ಈ ತಳಿಯ ಎಲೆಗಳು ಪನಿಯೂರ್ 1 ತಳಿಯ ಎಲೆಯನ್ನೇ ಹೋಲುತ್ತದೆ.
- ಆದರೆ ಎಲೆ ತುದಿ ಮಾತ್ರ ಸ್ವಲ್ಪ ಚೂಪಾಗಿರುತ್ತದೆ.
- ಪನಿಯೂರ್ 1 ತಳಿಯ ಕರೆಯಷ್ಟೇ ಉದ್ದದ ಕರೆಯನ್ನು ಬಿಡುತ್ತದೆ.
- ಎಲೆಯ ಚಿಗುರು ತಿಳಿ ನೇರಳೆ ಬಣ್ಣದಲ್ಲಿರುತ್ತದೆ. ಕಾಳುಗಳು ಒತ್ತೊತ್ತಾಗಿ ಬಿಡುತ್ತದೆ.
- ಪನಿಯೂರ್ 1 ತಳಿ ಸಾಮಾನ್ಯವಾಗಿ ಮಾರ್ಚ್ – ಎಪ್ರೀಲ್ ತಿಂಗಳಿಗೆ ಕೊಯಿಲಿಗೆ ಬರುತ್ತದೆ.
- ಇದು ಒಂದು ತಿಂಗಳು ಮುಂಚಿತವಾಗಿ ಕೊಯಿಲಿಗೆ ಸಿಗುತ್ತದೆ.
- ಹಾಗಾಗಿ ಮುಂದಿನ ಫಸಲಿಗೆ ಅನುಕೂಲವಾಗುತ್ತದೆ.
- ಯಾವಾಗಲೂ ಬಳ್ಳಿಗೆ ಫಸಲು ಕೊಯಿಲು ಆದ ತರುವಾಯ ಸ್ವಲ್ಪ ವಿರಾಮ ಬೇಕು.
- ಇದರಿಂದ ಮುಂದಿನ ಫಸಲಿಗೆ ಅನುಕೂಲವಾಗುತ್ತದೆ. ಬಳ್ಳಿ ಸೊರಗುವುದಿಲ್ಲ.
- ಏಕಪ್ರಕಾರ ಇಳುವರಿ ಕೊಡುತ್ತದೆ.
- ಬಳ್ಳಿಯ ಎಲೆಗಳು ವರ್ಷದುದ್ದಕ್ಕೂ ಹಚ್ಚ ಹಸುರಾಗಿರುತ್ತದೆ. ಬರ ನಿರೋಧಕ ಶಕ್ತಿಯೂ ಇರುತ್ತದೆ.
ಸಿಗಂಧಿನಿ ತಳಿ, ಅದೇ ರೀತಿಯಲ್ಲಿ ಸಿದ್ದು ಹಲಸು ಇವೆಲ್ಲಾ ನಮ್ಮ ರಾಜ್ಯದಲ್ಲಿ ಪೇಟೆಂಟ್ ಪಡೆದ ತಳಿಗಳು. ಇದರಂತೆ ಕೆಲವು ಗುರುತಿಸದೇ ಇರುವ ತಳಿಗಳು ಇರಬಹುದು. ಬೀಜದ ಮೂಲಕ ಸಸ್ಯಾಭಿವೃದ್ದಿಯಾಗುವಾಗ ಇದು ನೈಸರ್ಗಿಕವಾಗಿ ಆಗುವ ಸಾಧ್ಯತೆ ಇರುತ್ತದೆ, ಹಾಗಾಗಿ ಯಾವುದೇ ಸಸಿ ನೆಡುವಾಗ 10 ಕಸಿ ಮಾಡಿದ ಗಿಡ ನೆಡುವಾಗ 2-3 ಆದರೂ ಬೀಜದಿಂದ ಮಾಡಿದ ಸಸಿ ನೆಡಿ. ಅಚಾನಕ್ ನಿಮ್ಮಲ್ಲೂ ಹೊಸ ತಳಿ ಸಿಗಲೂ ಬಹುದು.