ಮೆಣಸು ಬೆಳೆಯಲ್ಲಿ ಎಲೆ ಮುರುಟುವಿಕೆ ಒಂದು ಸಮಸ್ಯೆಯಾದರೆ ಇನ್ನೊಂದು ಸಮಸ್ಯೆ ಕಾಯಿ ಈ ರೀತಿ ಆಗಿ ಕೊಳೆತು ಹೋಗುವುದು. ಕೆಲವು ಪ್ರದೇಶಗಳಲ್ಲಿ ಈ ಸಮಸ್ಯೆ ಬಹಳಶ್ಟು ಹೆಚಾಗುತ್ತಿದ್ದು, ಮೆಣಸು ಬೆಳೆಯನ್ನೇ ಬಿಡುವ ವರೆಗೆ ಪರಿಸ್ಥಿತಿ ಬಿಗಡಾಯಿಸಿದೆ. ಇದು ಯಾವ ಕಾರಣಕ್ಕೆ ಹೀಗೆ ಆಗುತ್ತದೆ, ಕೀಟ ಸಮಸ್ಯೆಯೇ ಅಥವಾ ರೋಗವೇ ಎಂಬುದನ್ನು ಇಲ್ಲಿ ನೋಡೋಣ.
ನಮ್ಮ ದೇಶದಲ್ಲಿ ಮೆಣಸು ಒಂದು ಪ್ರಾಮುಖ್ಯ ಸಾಂಬಾರ ಬೆಳೆ. ಇಲ್ಲಿನ ಮೆಣಸಿಗೆ ಜಾಗತಿಕ ಮನ್ನಣೆ ಇದೆ. ರಪ್ತು ಸಹ ಆಗುತ್ತದೆ. ಕೆಲವೊಮ್ಮೆ ಇಲ್ಲಿಂದ ರಪ್ತು ಆದ ಮೆಣಸು ತಿರಸ್ಕರಿಸಲ್ಪಡುವುದೂ ಇದೆ. ರಪ್ತು ಗಣನೀಯವಾಗಿ ಇಳಿಕೆಯಾಗುವುದೂ ಇದೆ. ಇದಕ್ಕೆ ಕಾರಣ ಹಲವು ಇದ್ದು, ಕೆಲವು ರೋಗಗಳ ಕಾರಣದಿಂದ ಮೆಣಸಿನ ಗುಣಮಟ್ಟ ಕ್ಷೀಣವಾಗಿ ಸ್ಥಳೀಯವಾಗಿಯೂ ಮಾರುಕಟ್ಟೆ ಹಾಳಾಗುತ್ತದೆ. ವಿದೇಶೀ ಮಾರುಕಟ್ಟೆಯೂ ಹಾಳಾಗುತ್ತದೆ. ಮೆಣಸಿನ ಕಾಯಿಗೆ ಬರುವ ಕೆಲವು ಶಿಲೀಂದ್ರ ರೋಗ ಮತ್ತು ಬ್ಯಾಕ್ಟೀರಿಯಾ ರೋಗಗಳು ಅದರ ಗುಣಮಟ್ತವನ್ನು ಗಣನೀಯವಾಗಿ ತಗ್ಗಿಸುತ್ತದೆ.
ಮೆಣಸಿನ ರೋಗಕ್ಕೆ ಕಾರಣವಾದ ಅಂಶಗಳು ಯಾವುವು?
- ಮೆಣಸಿನ ಕಾಯಿ ಇರಲಿ ಅಥವಾ ಇನ್ಯಾವುದೇ ಬೀಜದಿಂದ ಉತ್ಪಾದಿಸುವ ಬೆಳೆಗಳಿರಲಿ, ರೋಗಗಳು ಬರಲು ಒಂದೇ ಕಾರಣ ಎಂದಿಲ್ಲ.
- ಬೇರೆ ಬೇರೆ ಕಾರಣಗಳಿಂದ ರೋಗ ಬರುತ್ತದೆ.
- ಬೀಜದಿಂದ ಬರುವ ರೋಗ ಒಂದಾದರೆ, ಇನ್ನು ಕೆಲವು ಮಣ್ಣು ಜನ್ಯ, ಪ್ರಸರಕ ಕೀಟಗಳ ಮೂಲಕ ವರ್ಗಾವಣೆಯಾಗುವ ರೋಗಗಳು, ಮತ್ತೆ ಕೆಲವು ವಾತಾವರಣ ಸಂಬಂಧಿತವೂ ಇರುತ್ತದೆ.
- ಕೊಳೆಯುವಿಕೆ, ಸುಟ್ಟಂತಾಗುವುದು, ಎಲೆ ಬಣ್ಣ ಕಳೆದುಕೊಂಡು ಮುರುಟಿಕೊಳ್ಳುವುದು, ಬಿಳಿ ಬಿಳಿಯಾಗುವುದು, ಎಲೆ ಹಳದಿಯಾಗುವುದು ಇವೆಲ್ಲಾ ಸಾಮಾನ್ಯವಾಗಿ ರೋಗ ಲಕ್ಷಣಗಳು.
- ಗಾಯಗಳಾಗುವುದು, ಎಲೆಹಿಂದಕ್ಕೆ ಒಳಭಾಗಕ್ಕೆ ಮಡಚಿಕೊಳ್ಳುವುದು ಇವು ಕೀಟದಿಂದ ಆಗುವ ಸಮಸ್ಯೆ.
- ಕೀಟದ ತೊಂದರೆಯೇ ಅಥವಾ ರೋಗದ ಸಮಸ್ಯೆಯೇ ಎಂಬುದನ್ನು ರೈತರು ಅರಿತುಕೊಂಡೂ ಅದಕ್ಕೆ ಅನುಗುಣವಾಗಿ ಔಷದೋಪಚಾರ ಮಾಡಬೇಕು.
- ಔಷಧಿ ಖರೀದಿಸುವಾಗ ಅಥವಾ ತಜ್ಞರಲ್ಲಿ ವಿಚಾರಿಸುವಾಗ ಸಮಸ್ಯೆಯನ್ನು ಸರಿಯಾಗಿ ಅರ್ಥವಿಸಿಕೊಂಡು ಹೇಳಬೇಕು.
- ಹೆಚ್ಚಾಗಿ ಕಾಯಿ ಕೊಳೆಯುವ ರೋಗಕ್ಕೆ ಬೀಜಗಳ ದೋಷವೇ ಪ್ರಮುಖ ಕಾರಣವಾಗಿರುತ್ತದೆ.
- ಬೀಜಕ್ಕಾಗಿ ಆಯ್ಕೆ ಮಾಡಿದ ಹಣ್ಣುಗಳಲ್ಲಿ ಯಾವುದಾದರೂ ರೋಗ ತಗಲಿದ ಹಣ್ಣು ಮೆಣಸು ಇದ್ದಲ್ಲಿ ಆ ಬೀಜದ ಮೂಲಕ ಅದು ಪ್ರಸಾರವಾಗುತ್ತದೆ.
- ಇದನ್ನು ತಡೇಯಲಿಕ್ಕಾಗಿಯೇ ಬೀಜೋಪಚಾರವನ್ನು ಮಾಡಲಾಗುತ್ತದೆಯಾದರೂ ಅಪ್ಪಿತಪ್ಪಿ ಕೆಲವೊಮ್ಮೆ ಇದು ಉಪಚಾರದಿಂದ ತಪ್ಪಿದರೂ ಹೀಗಾಗುತ್ತದೆ.
- ಇದೇ ಕಾರಣಕ್ಕೆ ಎಲ್ಲಾ ಬೀಜ ತಯಾರಕರು, ಪೂರೈಕೆದಾರರೂ ಬೀಜೋಪಚಾರವನ್ನು ತಪ್ಪದೆ ಮಾಡುತ್ತಾರೆ.
- ರೈತರೂ ಸಹ ಬೀಜೋಪಚಾರ ಮಾಡುವುದು ಉತ್ತಮ. ಥೈರಮ್ ಶಿಲೀಂದ್ರ ನಾಶಕದಿಂದ ಬೀಜೋಪಾಚಾರ ಮಾಡುವುದರಿಂದ ಕಾಯಿ ಕೊಳೆಯುವಿಕೆ ದೂರವಾಗುತ್ತದೆ.
- ಸಸಿ ಕೊಳೆಯುವ ರೋಗಕ್ಕೆ ಮಣ್ಣು ಕಾರಣ. ಮಣ್ಣಿನಲ್ಲಿ ತೇವಾಂಶ ಹೆಚ್ಚಾದಾಗ, ಯಾವುದಾದರೂ ಬೇರೆ ಬೆಳೆಗಳ ಮೂಲಕ ಈ ಸಮಸ್ಯೆ ಬರುತ್ತದೆ.
ಇದು ಯಾವ ರೋಗ?
- ಕೆಲವು ಪ್ರದೇಶಗಳಲ್ಲಿ ಮೆಣಸಿನ ಕಾಯಿಗೆ ಈ ರೋಗ ಹೆಚ್ಚಾಗಿ ಕಾಣಿಸುತ್ತದೆ. ಕರಾವಳಿಯ ಉಪ್ಪೂರು ಸುತ್ತಮುತ್ತ ಮೆಣಸಿನ ಬೆಳೆಗೆ ಈ ರೋಗ ಹೆಚ್ಚಾಗಿತ್ತು.
- ಇದನ್ನು ಚಿಬ್ಬು ರೋಗ ಎಂದು ಕರೆಯುತ್ತಾರೆ.ಆಂತ್ರಾಕ್ನೋಸ್ ಕಾಯಿಲೆ Anthracnose disease ಎಂಬುದಾಗಿಯೂ ಕರೆಯುತ್ತಾರೆ.
- ಇದು ಎಲೆಗಳಿಗೂ ಕಾಯಿಗಳಿಗೂ ಬಾಧಿಸುತ್ತದೆ.
- ಹಣ್ಣಾಗುವ ಸಮಯಕ್ಕೆ ಈ ರೋಗ ಬರುವುದು ಹೆಚ್ಚು. ಎಲೆಯಲ್ಲಿ ಸುಟ್ಟಂತಾಗುವುದು, ಕಾಯಿಗಳು ಸುಟ್ಟಂತಾಗುವುದು ಇದರ ಲಕ್ಷಣ.
- ಇದಕ್ಕೆ ಕಾರಣ ಕೊಲೆಟ್ರೋಟ್ರಿಕಮ್ ಪ್ರಭೇಧದ ಶಿಲೀಂದ್ರ.
- ಕೊಲೆಟ್ರೋಟ್ರಿಕಂ ಕೋವಿಲೆ Colletotrichum scovillei ಎಂಬುದು ಹೆಚ್ಚಿನೆಲ್ಲಾ ಕಡೆ ಕಂಡುಬರುವ ರೋಗಾಣು.
- ಜಗತ್ತಿನಲ್ಲೇ ಈ ಶಿಲೀಂದ್ರ 10 ನೇ ಪ್ರಾಮುಖ್ಯ ರೋಗಕಾರಕ ಎಂಬ ಖ್ಯಾತಿ ಪಡೆದಿದೆ. ಸೋಲನೇಶಿಯಾ ಕುಟುಂಬಸ Solanaceous species , ಸಸ್ಯಗಳಾದ ಮೆಣಸು, ಟೊಮಾಟೋ, ಆಲೂಗಡ್ಡೆ ಇವುಗಳಿಗೆ ಈ ರೋಗ ಹೆಚ್ಚಾಗಿ ಬಾಧಿಸುತ್ತದೆ.
- ನಾವು ಖರೀದಿಸುವ ಟೋಮಾಟೋ, ಕಾಪ್ಸಿಕಂ ಎಲ್ಲದರಲ್ಲೂ ಈ ರೀತಿಯ ಚಿನ್ಹೆ ಇದ್ದರೆ ಅದು ಆಂತ್ರೋಕ್ನೋಸ್ ಬಾಧಿತವಾದದ್ದು.
ರೋಗ ಲಕ್ಷಣಗಳು:
- ಈ ರೋಗದ ಲಕ್ಷಣಗಳು ಎರಡು ವಿಧಗಳಲ್ಲಿ ಕಂಡುಬರುತ್ತದೆ.
- ಒಂದು ಟೊಂಗೆ ತುದಿಯಿಂದ ಹಿಂದಕ್ಕೆ ಸಾಯುತ್ತಾ ಒಣಗುವುದು.
- ಎರಡು ಹಣ್ಣು ಬೆಳೆಯುತ್ತಿರುವಾಗ ಭಾಗಶಃ ಒಣಗುವುದು ಅಥವಾ ಕೊಳೆಯುವುದು.
- ತೀವ್ರವಾದಂತೆ ಇಡೀ ಕಾಯಿ ಕೊಳೆಯುತ್ತದೆ.
- ಎಳೆಯ ಟೊಂಗೆಯ ಮೇಲೆ ಕಪ್ಪನೆಯ ಶಿಲೀಂದ್ರದ ಚುಕ್ಕೆಗಳು ಕಾಣಿಸಿಕೊಂಡು ಟೊಂಗೆಗಳ ತುದಿಗಳು ಹಾಗೂ ಗಿಡದ ಕವಲುಗಳು ತುದಿಯಿಂದ ಒಣಗಿ ಸಾಯುತ್ತವೆ.
- ಮಾಗುತ್ತಿರುವ ಕಾಯಿಯ ಮೇಲೆ ದುಂಡನೆಯ ನೀರಿನಿಂದ ಆವೃತವಾದ ಕಪ್ಪು ಚುಕ್ಕೆಗಳು ಕಾಣಿಸಿಕೊಂಡು ನಂತರ ಹಣ್ಣಿನ ಪೂರ್ತಿ ಭಾಗವನ್ನು ಆವರಿಸಿ ಉದ್ದನೆಯಾಕಾರದ ದೊಡ್ಡ ಮಚ್ಚೆಯಾಗಿ ಹರಡುತ್ತದೆ.
- ಇಂತಹ ಮಚ್ಚೆಗಳ ಮಧ್ಯಭಾಗದಲ್ಲಿ ಕಪ್ಪು ಬಣ್ಣದಿಂದ ಕೂಡಿದ ಶಿಲೀಂದ್ರ ಕೋಶಗಳ ಸೋಂಕು ಇರುತ್ತದೆ.
- ನಂತರ ಕ್ರಮೇಣವಾಗಿ ರೋಗಗ್ರಸ್ಥ ಹಣ್ಣುಗಳು ಬಿಳಿ ಬಣ್ಣಕ್ಕೆ ತಿರುಗಿ ಕೊಳೆಯುತ್ತದೆ.
- ಎಲೆಗಳ ಮೇಲೆಯೂ ಸಹ ಉರುಟಾದ ನೀರಿನಿಂದ ಆವೃತವಾದ ಕಪ್ಪು ಚುಕ್ಕೆಗಳು ಕಾಣಿಸಿಕೊಂಡು ನಂತರ ಎಲೆಯ ಮೇಲೆ ದೊಡ್ಡ ಮಚ್ಚೆಯಾಗಿ ಹರಡುತ್ತದೆ.
ಹತೋಟಿ ವಿಧಾನ:
- ಬೀಜೋಪಾಚಾರ ರೋಗಾಣುಗಳ ಸೋಂಕು ಉಂಟಾಗದಂತೆ ತಡೆಯುವ ಪ್ರಾಮುಖ್ಯ ಹತೋಟಿ ವಿಧಾನವಾದರೆ ರೋಗ ಕಂಡುಬಂದ ತಕ್ಷಣ ಪ್ರತೀ ಒಂದು ಲೀಟರ್ ನೀರಿಗೆ 1 ಮಿಲಿ. ಲೀ.ನಂತೆ ಪ್ರೊಪಿಕೊನೆಜ಼ಾಲ್ propiconazole ಶಿಲೀಂದ್ರ ನಾಶಕವನ್ನು ಬೆರೆಸಿ ಸಿಂಪರಣೆ ಮಾಡಬೇಕು.
- ಒಮ್ಮೆ ಇದನ್ನು ಸಿಂಪರಣೆ ಮಾಡಿ ಎರಡನೇ ಬಾರಿ ತಾಮ್ರದ ಆಕ್ಸೀ ಕ್ಲೋರೈಡ್ (COC) ಸಿಂಪಡಿಸಬೇಕು.
- ರೋಗ ಬಾಧೆ ಇದ್ದಲ್ಲಿ ಮೊದಲು ಅಂತರ್ವ್ಯಾಪೀ ಶಿಲೀಂದ್ರ ನಾಶಕ ನಂತರ COC ನಂತರ ಮ್ಯಾಂಕೋಜೆಬ್ ಶಿಲೀಂದ್ರ ನಾಶಕವನ್ನು ಪ್ರತೀ 15 ದಿನಕ್ಕೊಮ್ಮೆ ಸಿಂಪಡಿಸಬೇಕು.
- ಆದಾಗ್ಯೂ ಈ ತನಕ ಕೊಲೆಟ್ರೋಟ್ರಿಕಮ್ ಶಿಲೀಂದ್ರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಔಷದೋಪಚಾರ ಇಲ್ಲ.
- ಒಂದೇ ಒಂದು ವಿಧಾನದಿಂದ ಇದನ್ನು ನಿಯಂತ್ರಿಸುವುದು ಅಸಾಧ್ಯ. ರಾಸಾಯನಿಕ, Chemical ಜೈವಿಕ Biological control ಮತ್ತು ಬೌತಿಕ Physical ನಿಯಂತ್ರಣ ಎಂಬ ಮೂರು ಬಗೆಯ ಕ್ರಮಗಳಿಂದ ಇದರ ಹಾನಿಯನ್ನು ಸ್ವಲ್ಪ ತಗ್ಗಿಸಬಹುದು.
- ಇದನ್ನು ಮನಗಂಡು ಚಿಬ್ಬು ರೋಗ ನಿರೋಧಕ ತಳಿಯನ್ನು ಅಭಿವೃದ್ದಿಪಡಿಸಲಾಗಿದೆ.
- ಆಂತ್ರಾಕ್ನೋಸ್ ರೋಗ ಒಂದು ವೇಳೆ ಬಂದಿದ್ದರೆ ಅಂತಹ ಕಡೆ ಮತ್ತೆ ಬೆಳೆ ಬೆಳೆಯುವಾಗ ಜಾಗರೂಕತೆ ವಹಿಸಬೇಕು.
- ಈ ರೋಗಕ್ಕೆ ತುತ್ತಾದ ಗಿಡವನ್ನು ಆಲ್ಲೇ ಮಣ್ಣಿಗೆ ಸೇರಿಸಿದಾಗ ರೋಗಾಣುಗಳು ಮಣ್ಣಿನಲ್ಲಿ ಉಳಿದುಕೊಂಡು ಮುಂದಿನ ಬೆಳೆಗೆ ವರ್ಗಾವಣೆಯಾಗುತ್ತದೆ.
- ರೋಗ ಬಂದ ಹೊಲದಲ್ಲಿ ಉಳಿದ ಸಸ್ಯಗಳನ್ನು ಕಿತ್ತು ಸುಡಬೇಕು.
- ಹಾಗೆಯೇ ಅಲ್ಲಿ ರೋಗಗ್ರಸ್ತ ಮೆಣಸನ್ನು ಬಿಡಬಾರದು.
- ಮುಂದೆ ಬೆಳೆಸುವಾಗ ಮಣ್ಣಿಗೆ ಟ್ರೈಕೋಡರ್ಮಾ ಜೈವಿಕ ಶಿಲೀಂದ್ರ ನಾಶಕವನ್ನು ಸೇರಿಸಿ ಬೆಳೆಸುವುದರಿಂದ ರೋಗ ಕಡಿಮೆಯಾಗುತ್ತದೆ.
ಮೆಣಸಿನ ಈ ರೋಗ ಪ್ರಪಂಚದಾದ್ಯಂತ ಇದೆ. ಇದರಿಂದ ಒಟ್ಟಾರೆಯಾಗಿ 29-30 % ಬೆಳೆ ನಷ್ಟವಾಗುತ್ತದೆ. ಭಾರತ 2010-11 ಸುಮಾರಿಗೆ ಜಗತ್ತಿನಲ್ಲಿ ಮೆಣಸು ರಪ್ತುಮಾಡುವ ಮುಂಚೂಣಿ ದೇಶವಾಗಿತ್ತು. ಈ ರೋಗಗಳ ಕಾರಣದಿಂದಾಗಿ ನಮ್ಮ ಸ್ಥಾನ ಕೆಳಗೆ ಬಂದಿದೆ. ರೈತರು ಸಾಧ್ಯವಾದಷ್ಟು ಹೊಲದ ಸ್ವಚ್ಚತೆ ಮತ್ತು ನಿರೋಧಕ ಶಕ್ತಿ ಪಡೆದ ತಳಿಗಳನ್ನು ಆಯ್ಕೆ ಮಾಡಿ ಬೆಳೆಸುವುದು ಒಂದೇ ಪರಿಹಾರ.