ಜಾಯಿ ಸಾಂಬಾರದ (Nutmeg spice) ಬೆಳೆಗಾರರಿಗೆ ಬೀಜದ ಗಿಡ ಉತ್ತಮವೋ ಅಥವಾ ಕಸಿ ಗಿಡವೋ ಎಂಬ ಸಂದೇಹಕ್ಕೆ ಇಲ್ಲಿದೆ ನಿಖರ ಉತ್ತರ. ಈ ಸಾಂಬಾರ ಬೆಳೆಗೆ ಈಗ ಬ್ರಾರೀ ಟ್ರೇಂಡ್ ಉಂಟಾಗಿದೆ. ಇದರ ಅವಕಾಶವನ್ನು ಬಳಕೆ ಮಾಡಿಕೊಂಡು ಬೀಜದ ಗಿಡಕ್ಕಿಂತ ಕಸಿ ಗಿಡ ಸೂಕ್ತ ಉತ್ತಮ ಎಂಬ ಪ್ರಚಾರವೂ ಚಾಲ್ತಿಯಲ್ಲಿದೆ. ಇದೆಲ್ಲಾ ಕೈಯಿಂದ ಕೊಯ್ಯುಲಿಕ್ಕಾಗುವುದನ್ನು ದೋಟಿ ಬಳಸಿ ಕೊಯ್ದಂತೆ ಎಂದರೂ ತಪ್ಪಾಗಲಾರದು. ಬೀಜದ ಗಿಡಕ್ಕೆ ಜನ ಹೇಳುವಂತೆ ಅಂತಹ ವೀಕ್ ಪಾಯಿಂಟ್ ಗಳು ಇಲ್ಲ. ಕಸಿ ಗಿಡವೂ ಬೀಜದ ಗಿಡವೂ ಇಳುವರಿ ಕೊಡಲು ಪ್ರಾರಂಭವಾಗುವುದು ಏಕಪ್ರಕಾರ. ಹಾಗಿರುವಾಗ ಯಾಕೆ ಕಸಿ ಗಿಡ?
ಜಾಯಿ ಸಾಂಬಾರ ಇದರ ಪತ್ರೆಗೆ ಬೆಲೆ ಇದೆ. ಹಾಗೆಯೇ ಇದರ ಕಾಯಿಗೂ (Nutmeg seed) ಬೆಲೆ ಇದೆ. ಪತ್ರೆಗಿಂತ Mace) ಕಾಯಿಗೆ ಬೆಲೆ ಹೆಚ್ಚು!. ಯಾಕೆಂದರೆ 10 ಕಿಲೋ ಕಾಯಿಗೆ ಸುಮಾರು 2250 ರೂ. ತನಕ ಬೆಲೆ ಇದೆ. 10-12 ಕಿಲೋ ಕಾಯಿಯಲ್ಲಿ ಕಷ್ಟದಲ್ಲಿ ಸುಮಾರು 1 ಕಿಲೋ ಪತ್ರೆ ಸಿಗಬಹುದು. ಪತ್ರೆಗೆ ಕಿಲೋಗೆ 1000-1200 ರೂ. ತನಕ ಬೆಲೆ ಇದೆ. ಅಡಿಕೆ – ತೆಂಗಿನ ತೋಟದ ಒಳಗೆ, ಬದುಗಳಲ್ಲಿ ಬೆಳೆಸಲು ಇದು ಉತ್ತಮ ಸಾಂಬಾರ ಬೆಳೆ. ಧೀರ್ಘಾಯುಸ್ಸು ಉಳ್ಳ ಮರ. ರೋಗ ರುಜಿನಗಳು ಇಲ್ಲ. ಮರವೊಂದರಲ್ಲಿ ಸುಮಾರು 10 ವರ್ಷ ಕಳೆದರೆ 3000 ರೂ. ಆದಾಯಕ್ಕೆ ಕಡಿಮೆ ಆಗಲಾರದು. ಹಾಗಾಗಿ ಇದು ಲಾಭದಾಯಕ ಮಿಶ್ರ ಬೆಳೆ ಎಂದರೆ ತಪ್ಪಿಲ್ಲ. ಮರ ಬೆಳೆದಂತೆ ಇಳುವರಿ ಹೆಚ್ಚುತ್ತಾ ಹೋಗುತ್ತದೆ. ಮರ ಸುಮಾರು 50-60 ಅಡಿ ತನಕವೂ ಬೆಳೆಯುತ್ತದೆ. ಆಗ ಇಳುವರಿಯೂ ಅಷ್ಟೇ ಹೆಚ್ಚುತ್ತದೆ. ದೊಡ್ಡ ಮರ 25- 50 ಕಿಲೋ ತನಕ ಜಾಯಿ ಕಾಯಿ ಕೊಡಬಹುದು. ಔಷಧೀಯ ಬಳಕೆಗೆ, ಅಡುಗೆ ಮಸಾಲೆಗೆ ಬೇಕಾಗುವ ಸಾಂಬಾರವಾಗಿದ್ದು, ಉತ್ತಮ ಬೇಡಿಕೆ ಇದೆ ಎನ್ನುತ್ತಾರೆ. ಕಳೆದ ಹಲವಾರೂ ವರ್ಷಗಳಿಂದ ಈ ಸಾಂಬಾರ ಬೆಳೆಯ ಬೆಲೆ ಸ್ಥಿರವಾಗಿದೆ. ಹೊರ ದೇಶಗಳಿಂದಲೂ ಆಮದು ಆಗುತ್ತಿದೆ. ಹಾಗಾಗಿ ಬೇಡಿಕೆ ಚೆನ್ನಾಗಿಯೇ ಇದೆ ಎನ್ನಬಹುದು. ಅಡಿಕೆ, ತೆಂಗು ತೋಟದ ಮಧ್ಯಂತರದಲ್ಲಿ ನಿಯಮಿತ ಸಂಖ್ಯೆಯಲ್ಲಿ ಈ ಬೆಳೆಯನ್ನು ಬೆಳೆಯುವುದರಿಂದ ಹೆಚ್ಚುವರಿ ಲಾಭ ಪಡೆಯಬಹುದು.
ಜಾಯೀ ಸಾಂಬಾರ- ಸಸ್ಯಾಭಿವೃದ್ಧಿ:
- ಇದು ಬೀಜದ ಮೂಲಕ ಸಸ್ಯಾಭಿವೃದ್ದಿಯಾಗುತ್ತದೆ.
- ಗೆಲ್ಲುಗಳಿಗೆ ಸಾಮಿಪ್ಯ ಕಸಿ ಮಾಡಿಯೂ ತದ್ರೂಪೀ ಸಸಿ ಮಾಡಿಕೊಳ್ಳಬಹುದು.
- ಕಣ್ಣು ಕಸಿಯನ್ನೂ ಮಾಡಬಹುದು. ಹಿಂದಿನಿಂದಲೂ ಮರದ ಬೀಜವನ್ನು ಮೊಳಕೆ ಬರಿಸಿ ಸಸಿ ಮಾಡಲಾಗುತ್ತಿತ್ತು.
- ಕಳೆದ ಕೆಲವು ವರ್ಷಗಳಿಂದ ಕಸಿ ವಿಧಾನದಲ್ಲಿ ಸಸ್ಯಾಭಿವೃದ್ಧಿ ಪ್ರಾರಂಭಿಸಲಾಯಿತು.
- ಪ್ರಾರಂಭದಲ್ಲಿ ಸಾಮಿಪ್ಯ ಕಸಿ ಮೂಲಕ ಸಸಿ ಮಾಡುತ್ತಿದ್ದರು. ಅದರ ಕೆಲವು ಅವಗುಣಗಳಿಗಾಗಿ ಕಣ್ಣು ಕಸಿಯನ್ನು ಪ್ರಾರಂಭಿಸಲಾಯಿತು.
- ಅದರಲ್ಲೂ ಇತ್ತೀಚೆಗೆ ಮರದಲ್ಲಿ ನೇರ ಬೆಳೆಯುವ ಗೆಲ್ಲುಗಳನ್ನು ಆಯ್ಕೆ ಮಾಡಿ ಅದರ ಮೂಲಕ ಸಸಿ ಮಾಡುವುದು ಚಾಲನೆಗೆ ಬಂತು.
- ಇದೆಲ್ಲದರ ಉದ್ದೇಶ ಬೀಜದಿಂದ ಮಾಡಿದ ಸಸಿಯಲ್ಲಿ ಎಲ್ಲವೂ ಕಾಯಿ ಬಿಡುವ ದ್ವಿಲಿಂಗೀಯ ಸಸಿ ಆಗುವುದಿಲ್ಲ, ಕೆಲವು ಗಂಡು ಸಸಿ ಬರುತ್ತದೆ ಎಂಬ ಕಾರಣಕ್ಕೆ.
- ಬೀಜದಿಂದ ಮಾಡಿದ ಸಸಿ ತುಂಬಾ ಮಿತವ್ಯಯಿ.
- ಬೇರೆ ಗಿಡಗಳಲ್ಲಿ ಕಸಿವಿಧಾನದ ಸಸ್ಯೋತ್ಪಾದನೆಯಷ್ಟು ಜಾಯಿ ಸಾಂಬಾರದ ಕಸಿ ಸರಳ ಅಲ್ಲದ ಕಾರಣದಿಂದ ಇದು ಸ್ವಲ್ಪ ದುಬಾರಿಯೇ ಇರುತ್ತದೆ.
ಬೀಜದ ಗಿಡದ ಪ್ಲಸ್ ಮತ್ತು ಮೈನಸ್ ಪಾಯಿಂಟ್:
- ಬೀಜದ ಗಿಡ ನೆಟ್ಟರೆ ಅದು ನಾಟಿ ಮಾಡಿ 6-7 ವರ್ಷಕ್ಕೆ ಹೂ ಬಿಟ್ಟು ಕಾಯಿಯಾಗಲಾರಂಭಿಸುತ್ತದೆ.
- ಕಾಂಡದ ಸುತ್ತಲೂ 3-4 ಅಡಿ ಅಂತರಕ್ಕೆ ಅಡ್ಡಕ್ಕೆ ಮೂರು ನಾಲ್ಕು ಗೆಲ್ಲುಗಳನ್ನು (phyllotaxy)ಬಿಡುತ್ತಾ ನೇರವಾಗಿ ಬೆಳೆಯುವುದಾಗಿರುತ್ತದೆ.
- ಬೀಜದ ಗಿಡ 6-7 ವರ್ಷಕ್ಕೆ ಸುಮಾರು 10-15 ಅಡಿ ಎತ್ತರಕ್ಕೆ ಬೆಳೆಯುತ್ತದೆ.
- ಅಷ್ಟರಲ್ಲಿ 6-7 ಅಂತಸ್ತಿನಲ್ಲಿ ಗೆಲ್ಲುಗಳು ಬೆಳೆದಿರುತ್ತದೆ.
- ಮೊದಲ ವರ್ಷವೇ ಸುಮಾರು 100 ಕ್ಕೂ ಮಿಕ್ಕಿ ಕಾಯಿಗಳಾಗುತ್ತದೆ.
- ಬೀಜದ ಗಿಡದ ಕವಲು ಗೆಲ್ಲುಗಳು ಅಡ್ದಕ್ಕೆ ವಿಶಾಲವಾಗಿ (3-4 ಮೀ. ತನಕವೂ) ಬೆಳೆಯುತ್ತದೆ.
- ಅದರಲ್ಲಿ ಭಾರೀ ಪ್ರಮಾಣದಲ್ಲಿ ಕಾಯಿಗಳಾಗುತ್ತದೆ.
- ಕೆಳ ಭಾಗದ ಗೆಲ್ಲುಗಳು ಹೆಚ್ಚು ವಿಸ್ತಾರಕ್ಕೆ ಬೆಳೆಯುತ್ತಾ, ತುದಿಯದ್ದು ಗಿಡ್ದ ಇರುತ್ತದೆ.
- ಮರಕ್ಕೆ ಪ್ರಾಯ ಆದಂತೆ ಗೆಲ್ಲುಗಳು ವಿಶಾಲವಾಗಿ ಬೆಳೆಯುತ್ತಾ ಹೋಗುತ್ತದೆ.
- ಬೀಜದಿಂದ ಮಾಡಿದ ಸಸಿ 50-60 ಅಡಿ ಗೂ ಹೆಚ್ಚು ಎತ್ತರ ಬೆಳೆಯುತ್ತದೆ.
- ಅಷ್ಟು ಎತ್ತರಕ್ಕೂ ಗೆಲ್ಲುಗಳಿರುವ ಕಾರಣ ಇಳುವರಿ ಅಧಿಕ.
8 ವರ್ಷದ ಬೀಜದ ಸಸಿಯಲ್ಲಿ ಇಳುವರಿ.
- ಬೀಜದ ಸಸಿಯಲ್ಲಿ ಕೆಲವು ಗಂಡು ಸಸಿ ಆಗುದು ನಿಜ.
- ಆದರೆ ಅದರ ಪ್ರಮಾಣ ಗರಿಷ್ಟ 10:2 ರಷ್ಟು. ಮರ ದೊಡ್ದದಾದರೆ ಕೊಯಿಲು ಕಷ್ಟ ಎಂಬುದು ಒಂದು ವಾದ.
- ಆದರೆ ಜಾಯಿ ಫಲವನ್ನು ಕೊಯಿಲು ಮಾಡಬೇಕಾಗಿಲ್ಲ.
- ಎಟಕಿದಷ್ಟನ್ನು ಕೊಕ್ಕೆಯಲ್ಲಿ ಕೊಯಿದು ಉಳಿದುದನ್ನು ಬಿಟ್ಟರೆ ಅದರಷ್ಟಕ್ಕೆ ಉದುರುತ್ತದೆ. ಅದನ್ನು ಹೆಕ್ಕಿ ಸಂಗ್ರಹಿಸಬಹುದು.
- ಜಾಯೀ ಫಲದಲ್ಲಿ ಆ ದಿನ ಬಿದ್ದದ್ದನ್ನು ಹೆಕ್ಕಿದರೆ ಅದರ ಪತ್ರೆ ಹಾಳಾಗಲಾರದು.
- ಒಂದು ದಿನ ಬಿಟ್ಟರೆ ಪತ್ರೆಗೆ ಶಿಲೀಂದ್ರ ಸೋಂಕು ಉಂಟಾಗುತ್ತದೆ.
- ಆದರೆ ಕಾಯಿಗೆ ಆ ಸಮಸ್ಯೆ ಇಲ್ಲ. ಕಾಯಿ 2-3 ದಿನಗಳಿಗೊಮ್ಮೆ ಹೆಕ್ಕಿದರೂ ಹಾಳಾಗಲಾರದು.
- ಬೀಜದಿಂದ ಮಾಡಿದ ಸಸಿಯಲ್ಲಿ ಯಥಾವತ್ ಮಾತೃ ಗುಣ ಇರುವುದಿಲ್ಲ ಎನ್ನುತ್ತಾರೆ.
- ಆದರೆ ಅದು ಪೂರ್ತಿ ನಿಜವಲ್ಲ. ಕೆಲವು ವ್ಯತ್ಯಾಸಗಳಾಗಬಹುದುದಾದರೂ ಜಾಯಿ ಕಾಯಿಯ ಗುಣ ವ್ಯತ್ಯಾಸವಾಗದು.
- ಕೆಲವೊಮ್ಮೆ ತಳಿ ಉನ್ನತೀಕರಣಗೊಂಡು ದಪ್ಪದ ಪತ್ರೆ , ದೊಡ್ಡ ಕಾಯಿಗಳೂ ಆಗಬಹುದು.
ಯಾಕೆ ಬೀಜದ ಗಿಡ ಉತ್ತಮ:
- ಯಾವಾಗಲೂ ಕೃಷಿಯಲ್ಲಿ ಸಾಧ್ಯವಾದಷ್ಟು ಕಡಿಮೆ ಖರ್ಚು ಮಾಡಿ ಬೆಳೆ ತೆಗೆಯಬೇಕು.
- ಮೊದಲೇ ಹೇಳಿದಂತೆ ಈ ಬೆಳೆಯಲ್ಲಿ ಪತ್ರೆಗಿಂತ ಲಾಭದ್ದು ಕಾಯಿ.
- ಕಾಯಿ ಪಡೆಯಲು ತಳಿ ಆಯ್ಕೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿಲ್ಲ.
- ದ್ವಿಲಿಂಗೀಯ ಅಥವಾ ಹೆಣ್ಣು ಜಾಯಿಮರ ಕಾಯಿ ಬಿಟ್ಟೇ ಬಿಡುತ್ತದೆ. ಬೀಜದಿಂದ ಮಾಡಿದ್ದರಲ್ಲಿ ಕಾಯಿ ಬಿಡದೆ ಇದ್ದರೆ ಅದು ಗಂಡು.
- ಹತ್ತು ಗಿಡ ನೆಡುವ ಬದಲಿಗೆ 15 ಗಿಡ ನಾಟಿ ಮಾಡಿದರೆ ಗಂಡು ಆದದ್ದನ್ನು ಕಡಿದು ತೆಗೆಯಬಹುದು.
- ಬೀಜದ ಗಿಡಕ್ಕೆ ಹೆಚ್ಚೆಂದರೆ ರೂ. 50 ತನಕ ಬೆಲೆ ಇರುತ್ತದೆ.
- ಕಸಿ ಗಿಡಕ್ಕೆ ಗಾತ್ರ ಹೊಂದಿ ಕನಿಷ್ಟ 300 -500 ರೂ. ತನಕವೂ ಬೆಲೆ ಇರುತ್ತದೆ.
- ಕಸಿ ಒಂದು ಗಿಡದ ಬದಲಿಗೆ ಬೀಜದ 8-10 ಸಸಿ ನೆಡಬಹುದು.
- ಬೀಜದ ಗಿಡ ಯಾವಾಗಲೂ ಕಸಿ ಮಾಡಿದ ಗಿಡಕ್ಕಿಂತ ಅಧಿಕ ಇಳುವರಿ ಕೊಡಲು ಸಮರ್ಥವಿರುತ್ತದೆ.
- ಬೀಜದ ಗಿಡ ದೊಡ್ಡದಿದ್ದರೆ ಬೇಗ ಇಳುವರಿ ಕೊಡುತ್ತದೆ.
ಎಷ್ಟು ಗಿಡ ನೆಡಬಹುದು?
- ಜಾಯಿ ಮರ ಕರಾವಳಿಯ ಪ್ರದೇಶಗಳಲ್ಲಿ ಜೂನ್ ತಿಂಗಳಿಂದ ಪ್ರಾರಂಭವಾಗಿ ಸಪ್ಟೆಂಬರ್ ತನಕ ಕಾಯಿ ಬೆಳೆಯುತ್ತದೆ.
- ಮಲೆನಾಡಿನಲ್ಲಿ 1-2 ತಿಂಗಳು ತಡವಾಗುತ್ತದೆ.
- ಅರೆಮಲೆನಾಡಿನಲ್ಲಿ ಮತ್ತು ಬಯಲು ಸೀಮೆಯಲ್ಲಿ ಜೂನ್ ತಿಂಗಳಿಗೇ ಕಾಯಿ ಬೆಳೆಯುತ್ತದೆ.
- ಈ ಬೆಳೆ ಹಾಕಿದರೆ 2 ದಿನಕ್ಕೊಮ್ಮೆ ಕೊಯ್ಲು ಮಾಡುವ ಕೆಲಸ ಇರುತ್ತದೆ.
- ಬೆಳೆದು ತುದಿ ಒಡೆದುದನ್ನು ಮಾತ್ರ ಹುಡುಕಿ ಕೊಯಿಲು ಮಾಡಬೇಕು.
- ಇದಕ್ಕೆ ಮರವೊಂದಕ್ಕೆ ಒಬ್ಬನಿಗೆ ಕನಿಷ್ಟ 15 ನಿಮಿಷ ಸಮಯ ಬೇಕು.
- ಒಂದು ದಿನದಲ್ಲಿ ಒಬ್ಬ ಆಳು ಹೆಚ್ಚೆಂದರೆ 20 ಮರದಿಂದ ಕೊಯಿಲು ಮಾಡಬಹುದು.
- ಕೆಲಸದವರ ಲಭ್ಯತೆ ಅನುಗುಣವಾಗಿ ಲೆಕ್ಕಾಚಾರ ಹಾಕಿ ಗಿಡ ನೆಡುವುದು ಸೂಕ್ತ.
- ಹೆಚ್ಚು ಗಿಡ ಇದ್ದಷ್ಟೂ ಕೆಲಸದವರು ಹೆಚ್ಚು ಬೇಕು.
- ಒಬ್ಬ ಆಳಿಗೆ ಕೊಡುವ ಮಜೂರಿ ಮತ್ತು ಅವರಿಂದ ದಿನಕ್ಕೆ ಕೊಯ್ಯುವ ಪ್ರಮಾಣ ಎಷ್ಟು ಎಂದು ಲೆಕ್ಕಾಚಾರ ಹಾಕಿ ಸಸಿ ಬೆಳೆಸಬೇಕು.
- ಮರದ ಕಾಯಿಗಳನ್ನು ಒಮ್ಮೆಲೇ ಕೊಯ್ಯುವುದು ಅಲ್ಲ.
- ಹಾಗಾಗಿ ಕೊಯ್ಯುವವರ ಮಜೂರಿಗೆ ಹುಟ್ಟುವಳಿ ಸಾಕಾಗಬಹುದೇ ಎಂದು ನೋಡಿಕೊಂಡು ಗಿಡ ನಾಟಿ ಮಾಡಿ.
- ಮರವೊಂದರಲ್ಲಿ 5000 ಕಾಯಿ ಆದರೆ ಅದರ ಕೊಯಿಲು ನಿರಂತರ 2 ತಿಂಗಳ ತನಕ ಇರುತ್ತದೆ.
- ಇದನ್ನು ಸಹ ಗಮನಿಸಬೇಕು. ಬರೇ ಕೊಯಿಲು ಮಾತ್ರವಲ್ಲ ಪತ್ರೆ ಬೇರ್ಪಡಿಸಲೂ ಸಮಯ ಬೇಕಾಗುತ್ತದೆ.
ಜಾಯಿ ಕಾಯಿ ಸಾಂಬಾರ ವಸ್ತುವಿಗೆ ಯಾವತ್ತೂ ಇದೇ ಮಾರುಕಟ್ಟೆ ಬೆಲೆ ಇರುತ್ತದೆ ಎಂದು ಖಾತ್ರಿ ಇಲ್ಲ. ಉತ್ಪಾದನೆ ಹೆಚ್ಚಾದಾಗ ಬೇಡಿಕೆ ಕಡಿಮೆಯಾಗಲೂ ಬಹುದು ಹಿಂದೆ ಕರಾವಳಿ ಮಲೆನಾಡು, ಕೇರಳ ತಮಿಳುನಾಡಿನ ಕೆಲವು ಕಡೆ ಬೆಳೆ ಇತ್ತು, ಈಗ ಬಯಲು ಸೀಮೆ ತನಕ ವಿಸ್ತರಣೆ ಆಗಿದೆ. ಮಹಾರಾಷ್ಟ್ರ, ಗೋವಾ, ಗುಜರಾತ್ ನಲ್ಲೂ ಬೆಳೆ ಪ್ರಾರಂಭವಾಗಿದೆ. ವಿದೇಶಗಳಲ್ಲೂ ( ಶ್ರೀಲಂಕಾ, ಇಂಡೋನೇಶಿಯಾ, ವಿಯೆಟ್ನಾಂ) ಇದನ್ನು ಬೆಳೆಸುತ್ತಾರೆ. ಹಾಗಾಗಿ ನಿಯಮಿತ ಸಂಖ್ಯೆಯಲ್ಲಿ ಗಿಡ ನೆಟ್ಟು ನಂತರ ಅದರ ಬೀಜದಲ್ಲೇ ಹುಟ್ಟಿದ ಸಸಿಯಿಂದ ಬೆಳೆ ಹೆಚ್ಚು ಮಾಡಿಕೊಳ್ಳುವುದು ಉತ್ತಮ.