ತಿನ್ನುವ ಅಣಬೆಗೆ ಉತ್ತಮ ಬೇಡಿಕೆ. ಪಟ್ಟಣಗಳಲ್ಲದೆ, ಹಳ್ಳಿಗಳಲ್ಲೂ ಸಹ ಅಣಬೆಯ ಉಪಯೋಗ ಪ್ರಾರಂಭವಾಗಿದೆ. ಕಡಿಮೆ ಬಂಡವಾಳದಲ್ಲಿ ಕಡಿಮೆ ಸ್ಥಳಾವಕಾಶದಲ್ಲಿ ಮಾಡಬಹುದಾದ ಕೃಷಿ ಪೂರಕ ವೃತ್ತಿ.
- ಬೆಂಗಳೂರಿನ ಗ್ರಾಮಾಂತರ ಭಾಗಗಳಲ್ಲಿ ಹಲವರು ಜನ ಅಣಬೆ ಬೇಸಾಯ ಮಾಡುತ್ತಾರೆ. ಇದೇ ವೃತ್ತಿಯಲ್ಲಿ ಮೇಲೆ ಬಂದವರಿದ್ದಾರೆ.
- ಗೋವಾದಲ್ಲಿ ಇದು ಅತೀ ಹೆಚ್ಚಿನ ಪ್ರಮಾಣದಲ್ಲಿ ಇದೆ. ಹೆಚ್ಚಿನ ಕಡೆಗೆ ಗೋವಾದಿಂದ ಅಣಬೆ ಸರಬರಾಜು ಆಗುತ್ತದೆ.
- ಇತರ ಕಡೆಗಳಲ್ಲಿ ಬೆಳೆಸುವವರ ಸಂಖ್ಯೆ ತುಂಬಾ ಕಡಿಮೆ.
ಹೇಗೆ ಪ್ರಾರಂಭಿಸಬೇಕು:
- ಅಣಬೆ ಬೇಸಾಯ ಮಾಡುವ ಮುನ್ನ ತರಬೇತಿಯನ್ನು ಪಡೆಯಬೇಕು.
- ಅನಂತರ ಮೊದಲು ಸ್ವಲ್ಪ ಪ್ರಮಾಣದಲ್ಲಿ ಮಾಡುತ್ತಾ ತೊಂದರೆಗಳನ್ನು ಗಮನಿಸಿ ಅದನ್ನು ಹೇಗೆ ನಿವಾರಿಸಬೇಕೆಂದೆ ತಜ್ಞರ ಸಲಹೆಯ ಪಡೆಯುತ್ತಾ ಬೆಳೆಸುತ್ತಾ ಬರಬೇಕು.
- ಹೀಗೆ ಮಾಡಿದರೆ ಮಾತ್ರ ಇದರಲ್ಲಿ ಯಶಸ್ವಿಯಾಗಬಹುದು.
ಹಾಲಣಬೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ. ಇದನ್ನು ಬೆಳೆಸುವುದು ಸುಲಭ ಸಹ. ಸ್ಥಳೀಯವಾಗಿ ಲಭ್ಯವಾಗುವ ಸಾಮಾಗ್ರಿಗಳಿಂದ ಹಾಲಣಬೆ ಉತ್ಪಾದಿಸಬಹುದು.
ಹಾಲಣಬೆ ಏನು:
- ಇದು ಪಶ್ಚಿಮ ಬಂಗಾಲದ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ.
- ಇದಕ್ಕೆ ಕ್ಯಾಲೋಸೈಬ್ ಇಂಡಿಕಾ ಎಂಬುದು ಹೆಸರು.
- ಇದನ್ನು ಅರಣ್ಯಗಳಿಂದ ಸಂಗ್ರಹಿಸಿ ಬಳಸಲಾಗುತ್ತಿತ್ತು.
- ಈಗ ಅದರ ವಾಣಿಜ್ಯಿಕ ಬೇಸಾಯವನ್ನು ನಾವೇ ಮಾಡುವ ವಿಧಾನವು ಪ್ರಚಲಿತದಲ್ಲಿದೆ.
ಇದಕ್ಕೆ ಸಮಶೀತೋಷ್ಣ ವಲಯದ ವಾತಾವರಣ ಹೊಂದಿಕೆಯಾಗುವ ಕಾರಣ ನಮ್ಮಲ್ಲಿ ಎಲ್ಲಾ ಭಾಗಗಳಲ್ಲೂ ಬೆಳೆಯಬಹುದು. ಇದಕ್ಕೆ ಭತ್ತದ ಹೊಟ್ಟಿನ, ಹಾಗೂ ಬಟನ್ ಮಶ್ರೂಮ್ ಗಿಂತ ಹೆಚ್ಚಿನ ಬಾಳ್ವಿಕೆ ಇರುತ್ತದೆ.
- ಹಾಲಣಬೆಯನ್ನು ಹಲವಾರು ರೀತಿಯ ರೀತಿಯ ಸಾವಯವ ಮತ್ತು ತ್ಯಾಜ್ಯ ವಸ್ತುಗಳನ್ನು ಉಪಯೋಗಿಸಿ ಬೆಳೆಯಬಹುದು.
- ಉದಾಹರಣೆಗೆ ಭತ್ತ, ರಾಗಿ, ಗೋಧಿ ಹುಲ್ಲು, ಹತ್ತಿ ಸಜ್ಜೆ ಮತ್ತು ಮೆಕೇ ಜೋಳದ ಎಲೆಯುಳ್ಳ ಕಡ್ಡಿಗಳ ಮೂಲಕ ಬೆಳೆಯಬಹುದು.
- ಗಡ್ಡೆ ತೆಗೆದು ಉಪಯೋಗವಿಲ್ಲದೆ ಬಿಸಾಡುವ ಮೂಲಂಗಿ ಸಸ್ಯದಲ್ಲೂ ಇದನ್ನು ಬೆಳೆಯಬಹುದು.
- ಇವುಗಳೆಲ್ಲದರ ಲಭ್ಯತೆಯು ತುಂಬಾ ಕಡಿಮೆಯಾದ ಕಾರಣ ಭತ್ತದ ಹೊಟ್ಟಿನಲ್ಲೇ ಬೆಳೆಯಬಹುದು.
ವಿಧಾನ:
- ಹುಲ್ಲನ್ನು 2-3 ಇಂಚು ಉದ್ದಕ್ಕೆ ಕತ್ತರಿಸಬೇಕು.
- ಅದನ್ನು ಗೋಣಿ ಚೀಲದಲ್ಲಿ ತುಂಬಿ ಶುದ್ಧ ನೀರಿನಲ್ಲಿ 6-8 ಗಂಟೆಗಳ ಕಾಲ ನೆನೆಸುವುದರಿಂದ ಹುಲ್ಲು ಮೃದುವಾಗುತ್ತದೆ.
- ಇದನ್ನು ನಂತರ ಕ್ರಿಮಿ ಕೀಟಗಳಿಲ್ಲದಂತೆ ಪ್ಯಾಶ್ಚರೀಕರಿಸಬೇಕು.
- ಪ್ಯಾಶ್ಚರೀಕರಿಸಲು ಒಂದು ಕುದಿ ಬಿಸಿ ನೀರಿನಲ್ಲಿ 40-60 ನಿಮಿಷಗಳ ತನಕ ಅದ್ದುವುದು, ಮತ್ತೊಂದು ಹಬೆಯ ಮೂಲಕ 5-6 ಗಂಟೆಗಳ ತನಕ ಉಪಚರಿಸುವುದು.
- ಪ್ಯಾಶ್ಚರೀಕರಿಸಿದ ಹುಲ್ಲನ್ನು ಶುದ್ಧ ಜಾಲರಿಯಲ್ಲಿ ತೆಳುವಾಗಿ ಹರಡಿ 1 ರಾತ್ರೆ ಇಟ್ಟರೆ ಅದರ ಆರ್ಧ್ರತೆ ಕಡಿಮೆಯಾಗುತ್ತದೆ.
- ಆರ್ಧ್ರತೆಯನ್ನು ತಿಳಿಯಲು ಒಂದು ಹಿಡಿ ಹುಲ್ಲನ್ನು ಹಿಡಿದು ಹಿಂದಿದರೆ ನೀರು ತೊಟ್ಟೂ ಬೀಳಬಾರದು.ಅದರಲ್ಲಿ 60-65 % ನೀರಿನ ಅಂಶ ಇದೆ ಎಂದರ್ಥ.
- ನಂತರ 35X45 ಸೆಂ ಮೀ. ಅಳತೆಯ ಪಾಲಿಥೀನ್ ಚೀಲದಕ್ಕೆ ಮೃದುವಾಗಿ ಹಂತ ಹಂತವಾಗಿ ತುಂಬಬೇಕು.
- ಪ್ರತೀ ಹಂತದಲ್ಲೂ ಹುಲ್ಲಿನ ಮಧ್ಯಭಾಗಕ್ಕೆ ಸಮನಾಗಿ ಹಾಲಣಬೆ ಬೀಜಗಳನ್ನು ಹರಡಿ ಒಂದು ಚೀಲಕ್ಕೆ ಸುಮಾರು 2.5 ರಿಂದ 3 ಕೆ ಜಿ ಹುಲ್ಲು ಮತ್ತು 125 -150 ಗ್ರಾಂ ಬೀಜವನ್ನು ತುಂಬಬಹುದು.
- ಚೀಲದ ತುದಿಗೆ 5 ಮತ್ತು 1.5 ಸೆಂ ಮೀ ಎತ್ತರದ ಪಿ ವಿ ಸಿ ಪೈಪುಗಳನ್ನು ಇಟ್ಟು ನೀರನ್ನು ಹೀರಿಕೊಳ್ಳದ ಹತ್ತಿಯಿಂದ ಮುಚ್ಚಿ ಚೀಲದ ಬಾಯಿಯನ್ನು ಕಟ್ಟಬೇಕು.
- ನಂತರ ಅದನ್ನು ತಂಪಿನ ಕೊಠಡಿಗೆ ವರ್ಗಾಯಿಸಬೇಕು.
- ಚೀಲಕ್ಕೆ ತೂತು ಮಾಡಬಾರದು, ಮಾಡಿದರೆ ಅಣಬೆ ಹಾಳಾಗುತ್ತದೆ.
- ಸಂಗ್ರಹಣಾ ಮನೆಯಲ್ಲಿ ಯಾವಾಗಲೂ 28-35 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಕಾಪಾಡಿಕೊಳ್ಳಬೇಕು.
- ಕೋಣೆಯಲ್ಲಿ ಇದನ್ನು ನಿರಂತರ ಪರಿವೀಕ್ಷಿಸುತ್ತಿರಬೇಕು.
- 20-25 ದಿನದಲ್ಲಿ ಅಣಬೆ ತಂತುಗಳು ಹುಟ್ಟಿಕೊಳ್ಳುತ್ತದೆ . ಚೀಲ ಬಿಳಿಯಾಗಿ ಕಾಣುತ್ತದೆ.
- ಅದನ್ನು ನಂತರ ಬೆಳೆ ತೆಗೆಯುವ ಕೊಠಡಿಯಲ್ಲಿ ಹರಡಿ ಸಮ ಮಾಡಬೇಕು.
- ಅದರ ಮೇಲೆ 2-3 ಸೆಂ ಮೀ ದಪ್ಪಕ್ಕೆ ಭಾಗದಲ್ಲಿ ಕೇಸಿಂಗ್ ಮಣ್ಣನ್ನು ಹರಡ ಬೇಕು.
- ಕೇಸಿಂಗ್ ಮಣ್ಣು ಪ್ಯಾಶ್ಚರೀಕರಿಸಿದ ತಟಸ್ಥ ಮಣ್ಣಾಗಿರಬೇಕು.
- ತಕ್ಷಣವೇ ಪ್ಲಾಸ್ಟಿಕ್ ತೊಟ್ಟೆಯನ್ನು ಶಿಲೀಂದ್ರ ನಾಶಕದಲ್ಲಿ ಅದ್ದಿ ಸ್ವಚ್ಚ ಮಾಡಬೇಕು.
- ಮೂರನೇ ದಿನದಿಂದ ನೀರು ಹಾಕಲು ಆರಂಭಿಸಬೇಕು.
- 15-20 ದಿನಗಳ ನಂತರ ಮೊಳಕೆ ಕಾಣಿಸುತ್ತದೆ.
- 1 ಕಿಲೋ ಹುಲ್ಲಿಗೆ 1 ಕಿಲೋ ಅಣಬೆ ಉತ್ಪಾದನೆಯಾಗುತ್ತದೆ.
- ಬೆಳೆದ ಅಣಬೆಯನ್ನು ಶೈತ್ಯಾಗಾರದಲ್ಲಿ 20-25 ದಿನ ಸಂಗ್ರಹಿಸಿಡಬಹುದು.
ಸರಿಯಾಗಿ ಶುದ್ಧ ಗಾಳಿ ಬೆಳಕು ಕೋಣೆಯೊಳಗೆ ಸಂಚಾರವಾದರೆ, ನಂತರದ 8-10 ದಿನದಲ್ಲಿ ಅಣಬೆ ಪೂರ್ತಿ ಬೆಳೆಯುತ್ತದೆ.
ತರಬೇತಿ:
- ಅಣಬೆಬೆಳೆಯುವ ಆಸಕ್ತರಿಗೆ ಬೆಂಗಳೂರಿನ ಹೇಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ತರಬೇತಿ ನೀಡುತ್ತದೆ.
- ಇಲ್ಲಿನ ಸೂಕ್ಷ್ಮಾಣು ಜೀವಿ ವಿಭಾಗವನ್ನು ಇದಕ್ಕೆ ಸಂಪರ್ಕಿಸಬೇಕು.
- ಆಗಾಗ ತರಬೇತಿ ಕಾರ್ಯಕ್ರಮಗಳು ಇರುತ್ತದೆ. ಆ ಸಮಯದಲ್ಲಿ ನೊಂದಣೆ ಮಾಡಿಕೊಳ್ಳಬೇಕು.
ಅತೀ ಕಡಿಮೆ ಸ್ಥಳಾವಕಾಶದಲ್ಲಿ ಶ್ರದ್ಧೆ ಇಟ್ಟು ಮಾಡಬಹುದಾದ ವೃತ್ತಿ ಇದು. ಇದರಲ್ಲಿ ಸಂಪಾದನೆಗೆ ಹೇರಳ ಅವಕಾಅಶ ಇದೆ. ಆದರೆ ಯಾವುದೇ ರೀತಿಯಲ್ಲಿ ಮಲಿನವಾಗದಂತೆ ಜಾಗರೂಕತೆ ವಹಿಸಬೇಕು.