ದಾಸ್ತಾನು ಇಟ್ಟ ಧವಸ ಧಾನ್ಯ ಏನೇ ಇದ್ದರೂ ಸಮರ್ಪಕವಾಗಿ ಇಲ್ಲದಿದರೆ ಅದಕ್ಕೆ ದಾಸ್ತಾನು ಕೀಟ (Storage pest) ಬಂದು ಸುರಿ ಬೀಳುವುದು ಸಾಮಾನ್ಯ. ಈ ಕೀಟಗಳಲ್ಲಿ ಹಲವು ವಿಧಗಳು ಇದ್ದು, ಅಕ್ಕಿಗೆ ಬರುವ ಗುಗ್ಗುರು,ಅಡಿಕೆಗೆ ಬರುವ ಡಂಕಿ ಬೇರೆ ಹೀಗೆ ಬೇರೆ ಬೇರೆ ಇದೆ.
- ಸಾಮಾನ್ಯವಾಗಿ ಸುಲಿದು ದಾಸ್ತಾನು ಇಡುವ ಅಡಿಕೆಗೆ ಈ ಸಮಸ್ಯೆ ಹೆಚ್ಚು.
- ಹಾಗೆಂದು ಸುಲಿಯದೇ ಇಡುವಲ್ಲಿಯೂ ಇಲ್ಲದಿಲ್ಲ.
- ಇದು ಮಹಾ ಮಾರಿ ಶತೃ ಎಂತಲೇ ಹೇಳಬಹುದು.
- ಒಮ್ಮೆ ಈ ಕೀಟ ಬಂದರೆ ಅದನ್ನು ಓಡಿಸುವುದೂ ಕಷ್ಟವಾಗುತ್ತದೆ.
- ಅದು ದಾಸ್ತಾನು ಕೋಣೆಯಲ್ಲಿ ಎಲ್ಲಾದರೂ ಸಂದು ಗೊಂದಿಗಳಲ್ಲಿ ಅಡಗಿರುತ್ತದೆ.
- ಇದು ಹಾರುವ ದುಂಬಿ. ಬಿಸಿಲಿಗೆ ಸಿಕ್ಕರೆ ಸಾಯುತ್ತದೆ.
ಏನು ತೊಂದರೆ:
- ಅಡಿಕೆಗೆ ಡಂಕಿ ಬಂದರೆ ಅದು ತೀರಾ ಕೆಳದರ್ಜೆಯ ಅಡಿಕೆಯಾಗಿ ಪರಿಗಣಿಸಲ್ಪಡುತ್ತದೆ.
- ಇದಕ್ಕೆ ಒಳ್ಳೆಯ ಅಡಿಕೆಗಿಂತ ಕನಿಷ್ಟ 100 ರೂ. ಕಡಿಮೆ ಬೆಲೆ.
- ಈ ಆಡಿಕೆಯ ಒಳಗೆ ಒಂದು ದುಂಬಿ ಸೇರಿಕೊಂಡು ಅದನ್ನು ಕೊರೆದು ಹುಡಿ ಮಾಡುತ್ತದೆ.
- ಒಳಗೆ ಅಡಿಕೆ ಟೊಳ್ಳಾಗುತ್ತದೆ. ಅಡಿಕೆಯ ಮೇಲ್ಮೈಯಲ್ಲಿ ತೂತುಗಳೂ ಕಾಣಿಸುತ್ತದೆ.
- ಅಡಿಕೆಯ ಕಣ್ಣಿನ ಭಾಗವನ್ನು ಕುಕ್ಕಿದರೆ ಹುಡಿ ಉದುರುತ್ತದೆ.
- ದಾಸ್ತಾನು ಇಟ್ಟ ಅಡಿಕೆಯ ಚೀಲದ ಬಾಯಿ ತೆರೆದಾಗಲೇ ಈ ದುಂಬಿಗಳು ಹೊರ ಹಾರುತ್ತವೆ.
- ಗೋಣೆ ಯ ಅಡಿಕೆಯನ್ನು ನೆಲಕ್ಕೆ ಹಾಕಿದಾಗ ಅದರಲ್ಲಿ ಅಡಿಕೆಯ ಹುಡಿ ಬೀಳುತ್ತದೆ.
- ಅಡಿಕೆಯ ತೂಕ ಕಡಿಮೆಯಾಗುತ್ತದೆ.
ಯಾಕೆ ಬರುತ್ತದೆ:
- ಅಡಿಕೆಗೆ ಡಂಕಿ ಬರುವುದು ಅದು ಸ್ವಲ್ಪ ಒಣಗಿದ್ದು ಕಡಿಮೆಯಾದ ಕಾರಣದಿಂದ ಎನ್ನುತ್ತಾರೆ.
- ಅಡಿಕೆಯನ್ನು ಸುಲಿದು ವರ್ಗೀಕರಣ ಮಾಡುವುದಕ್ಕಾಗಿ ಹೆಕ್ಕುವಾಗ ಅದರಲ್ಲಿ ಕೆಲವು ಒಡೆದ ಅಡಿಕೆ ಇದ್ದರೆ, ಅಥವಾ ಕಣ್ಣು ತೂತಾದ ಅಡಿಕೆ ಇದ್ದರೆ ಅದಕ್ಕೆ ಮೊದಲಾಗಿ ಇದು ಬರುತ್ತದೆ.
- ಅಲ್ಲಿಂದ ಅದು ಬೇರೆ ಅಡಿಕೆಗೆ ಪ್ರಸಾರವಾಗುತ್ತದೆ.
- ಅಡಿಕೆಯ ದಾಸ್ತಾನು ಕೊಣೆಯಲ್ಲಿ ತೇವಾಂಶ ಇದ್ದರೂ ಬರಬಹುದು.
- ಅಡಿಕೆ ದಾಸ್ತಾನು ಇಡುವಲ್ಲಿ ಕರಿಮೆಣಸು ದಾಸ್ತಾನು ಇಟ್ಟರೆ , ಕಾಫೀ ದಾಸ್ತಾನು ಇಟ್ಟರೆ ಅಥವಾ ಹಳೆಯ ಅಡಿಕೆ ಎಲ್ಲಿಯಾದರೂ ಬೆರೆತಿದ್ದರೆ ಬರುವ ಸಾಧ್ಯತೆ ಇದೆ.
ಅಡಿಕೆಯನ್ನು ಸುಲಿದು ವರ್ಗೀಕರಣ ಮಾಡುವಾಗ ಬಳಕೆ ಮಾಡುವ ಚೀಲ ಅಥವಾ ಪ್ಲಾಸ್ಟಿಕ್ ಹಿಂದಿನ ವರ್ಷದ್ದಾಗಿದ್ದರೆ ಅದನ್ನುಸರಿಯಾಗಿ ಒಣಗಿಸದೇ ಅಥವಾ ಉಪಚಾರ ಮಾಡದೆ ಬಳಸಿದ್ದರೆ ಅದರ ಮೂಲಕವೂ ಬರುವ ಸಾಧ್ಯತೆ ಇದೆ.
- ಹೆಚ್ಚಾಗಿ ಇಂಥಹ ಚೀಲಗಳಲ್ಲಿ ಒಂದು ಎರಡು ಅಡಿಕೆ ಉಳಿದಿರುವ ಸಾಧ್ಯತೆ ಇರುತ್ತದೆ.
- ಅದು ನಮ್ಮ ಗಮನಕ್ಕೆ ಬಾರದೆ ಅದರಲ್ಲಿ ಈ ಕೀಟ ಅಭಿವೃದ್ದಿಯಾಗಿರುವ ಸಾಧ್ಯತೆ ಇದೆ.’
ಹೇಗೆ ನಿಯಂತ್ರಣ:
- ಅಡಿಕೆಯನ್ನು ವರ್ಗೀಕರಣ ಮಾಡುವಾಗ ಯಾವುದೇ ಕಾರಣಕ್ಕೂ ಒಡೆದ ಅಡಿಕೆ, ಕಣ್ಣು ತೂತಾದ ಅಡಿಕೆಯನ್ನು ಸೇರಿಸದಿರಿ.
- ಮೊದಲ ಸಲದ ಬಿದ್ದ ಅಡಿಕೆಯನ್ನು ಪ್ರತ್ಯೇಕವಾಗಿ ಒಣಗಿಸಿ ಅದನ್ನು ಕೊಯಿಲು ಮಾಡಿದ ಅಡಿಕೆಯ ಜೊತೆಗೆ ಒಂದೂ ಮಿಶ್ರಣ ಆಗದಂತೆ ನೊಡಿಕೊಂಡು ಅದನ್ನು ದಾಸ್ತಾನು ಇಡದೆ ಮಾರಾಟ ಮಾಡಿ.
- ಕೊಯಿಲಿನ ಅಡಿಕೆಯ ಜೊತೆಗೆ ಬಿದ್ದು ಹೆಚ್ಚು ದಿನವಾದ ಅಡಿಕೆಯನ್ನು ಮಿಶ್ರಣ ಮಾಡಬೇಡಿ.
- ಅದರ ಕಣ್ಣು ಉಬ್ಬಿಕೊಂಡಿರುತ್ತದೆ. ಅದು ಒಣಗುವಾಗ ಸಂಕುಚಿತ ಗೊಂಡು ತೂತಿಗೆ ಕಾರಣವಾಗುತ್ತದೆ.
ಅಡಿಕೆ ದಾಸ್ತಾನು ಇಡುವ ಕೋಣೆಗೆ ಒಮ್ಮೆ ಗಂಧಕದ ಧೂಪೀಕರಣ ಮಾಡಿದರೆ ಒಳ್ಳೆಯದು ಅಥವಾ ಒಮ್ಮೆ ಡೆಲ್ಟ್ರಾಮೆಥ್ರಿನ್(K- Obil)ಕೀಟನಾಶಕವನ್ನು ನೆಲ ಗೋಡೆ ಸಂದುಗಳಿಗೆ ಸಿಂಪಡಿಸಿ ಏನಾದರೂ ಕೀಟ ಇದ್ದರೆ ಅದನ್ನು ನಾಶ ಮಾಡಿ.
- ಅಡಿಕೆಯನ್ನು ಉತ್ತಮ ಬಿಸಿಲಿನಲ್ಲಿ 50 ದಿನ ಬಿಸಿಲಿನಷ್ಟಾದರೂ ಒಣಗಿಸಬೇಕು.
- ಸುಲಿದ ಒಳ್ಳೆಯ ಅಡಿಕೆಯ ಜೊತೆಗೆ ಸಿಪ್ಪೆ ಗೊಟು, ಕರಿ ಕೋಕಾ, ಒಡೆದ ಫಟೋರ್ ಅಡಿಕೆಯನ್ನು ಒ ಳ್ಳೆ ಅಡಿಕೆ ಜೊತೆ ಇಡಬೇಡಿ.
- ಅದನ್ನು ತಕ್ಷಣ ಮಾರಾಟ ಮಾಡಿ.
- ಅಡಿಕೆಯನ್ನು ದಾಸ್ತಾನು ಇಡುವಾಗ ಪ್ಲಾಸ್ಟಿಕ್ ಹಾಕಿ ದಾಸ್ತಾನು ಇಡಬೇಕು.
- ವರ್ಗೀಕರಣ ಮಾಡಿ , ಒಳ್ಳೆಯ ಅಡಿಕೆಯನ್ನು ಅರ್ಧ ದಿನವಾದರೂ ಉತ್ತಮ ಬಿಸಿಲಿಗೆ ಹಾಕಿ ಒಣಗಿಸಿ ಚೀಲಕ್ಕೆ ತುಂಬಿ.
- ಚೀಲಕ್ಕೆ ತುಂಬಿದ ದಿನ ಅದರ ಗೋಣಿ ಚೀಲದ ಬಾಯಿಯನ್ನು ಕಟ್ಟದೆ ಒಂದು ರಾತ್ರೆಯಾದರೂ ತಣ್ಣಗಾದ ನಂತರ ಬಾಯಿ ಕಟ್ಟಿ.
ದಾಸ್ತಾನು ಇಡುವ ಅಡಿಕೆಯಲ್ಲಿ ಏನಾದರೂ ಕೀಟ ಇದ್ದರೆ ಅದು ಸಾಯಲು ಚೀಲ ತುಂಬಿ ಬಾಯಿ ಕಟ್ಟುವ ಸಮಯದಲ್ಲಿ ಒಂದು ಪ್ಲಾಸ್ಟಿಕ್ ಪೌಚ್ ನಲ್ಲಿ ಒಂದು ಅಲ್ಯೂಮೀನಿಯಂ ಫೋಸ್ಫೇಡ್ ಗುಳಿಗೆಯನ್ನು ಇಟ್ಟು ಪಿನ್ ಹಾಕಿ ಒಳಗೆ ಹಾಕಿ.
- ಯಾವುದೇ ಕಾರಣ ಕ್ಕೆ ನೇರವಾಗಿ ಹಾಕಬೇಡಿ. ಇದು ವಾಸನೆಯ ಗಾಳಿಯ ಮೂಲಕ ಕೀಟ ಇದ್ದರೆ ಸಾಯಿಸುತ್ತದೆ.
- ಗುಳಿಗೆ ಹಾಕಿದ ಚೀಲವನ್ನು 6 ತಿಂಗಳ ನಂತರ ತೆರೆದು ಒಮ್ಮೆ ಪರಿಶೀಲಿಸಿ ಮತ್ತೊಂದು ಗುಳಿಗೆ ಹಾಕಿ ಬಾಯಿ ಕಟ್ಟಿ ಇಡಿ.
- ದಾಸ್ತಾನು ಇಟ್ಟ ಅಡಿಕೆಯನ್ನು ಒಂದು ವರ್ಷದ ಒಳಗೆ ಮಾರಾಟ ಮಾಡಬೇಕು. ತುಂಬಾ ಹಳತಾಗಲು ಬಿಡಬೇಡಿ.
- ಸಾಧ್ಯವಾದಷ್ಟು ಹೊಸ ಪ್ಲಾಸ್ಟಿಕ್ ಹಾಕಿ. ಹಳೆಯ ತೂತಾದ ಪ್ಲಾಸ್ಟಿಕ್ ಬಳಸಬೇಡಿ.
ಡಂಕಿ ಬಂದ ಅಡಿಕೆಯ ವಿಲೇವಾರಿ:
- ಡಂಕಿ ಬಂದುದನ್ನು ಪ್ರಾರಂಭದಲ್ಲೇ ಗುರುತಿಸಿದರೆ ಅದನ್ನು ತಕ್ಷಣ ಹೊರ ಸುರುವಿ ಸ್ವಲ್ಪ ವರ್ಗೀಕರಿಸಿ ಮಾರಾಟ ಮಾಡಬಹುದು.
- ತಡವಾದರೆ ಪ್ರಯೋಜನ ಇಲ್ಲ. ಕಡಿಮೆ ಬೆಲೆ.
- ಬಿಸಿಲಿನ ನೆಲಕ್ಕೆ ಹಾಕಿ ಚೆನ್ನಾಗಿ ಮೆಟ್ಟಿ.
- ಕೀಟ ಬಂದ ಅಡಿಕೆಯಲ್ಲಿ ತೂತುಗಳಿದ್ದರೆ ಅದು ತೆರೆದು ಕೊಳ್ಳುತ್ತದೆ.
- ಪುಡಿಗಳು ಉದುರುತ್ತದೆ. ಆ ನಂತರ ಅದರಲ್ಲಿ ಕಣ್ಣು ತೂತಾದ ಮತ್ತು ಮೇಲ್ಮೈಯಲ್ಲಿ ತೂತಾದ ಹಾಗೂ ಒಡೆದ ಅಡಿಕೆ ಇದ್ದುದನ್ನು ಹೆಕ್ಕಿ ಪ್ರತ್ಯೇಕಿಸಿರಿ.
- ಪ್ರತೀ ಅಡಿಕೆಯ ಕಣ್ಣಿನ ಭಾಗ ತೂತಾಗಿಲ್ಲ ಎಂಬುದು ಖಾತ್ರಿಯಾದರೆ ಅದು ಉತ್ತಮ ಅಡಿಕೆಯಾಗಿ ಮಾರಾಟಕ್ಕೆ ಹೊಂದಿಕೊಳ್ಳುತ್ತದೆ.
- ಅದನ್ನು ಮತ್ತೆ ದಾಸ್ತಾನು ಇಡದೆ ಮರಾಟ ಮಾಡಲೇ ಬೇಕು.
- ಸುರಿ ಬಿದ್ದ ಹಾಳಾದ ಅಡಿಕೆಯನ್ನು ಒಳ್ಳೆಯದರ ಜೊತೆಗೆ ಮಾರಾಟಕ್ಕೆ ಒಯ್ಯಬೇಡಿ, ಅಥವಾ ಬೇರೆಯವರಿಗೆ ಮಾರಾಟ ಮಾಡಿ.
ಅಡಿಕೆಯ ದಾಸ್ತಾನು ಒಂದು ಕಲೆ. ಒಮ್ಮೆ ಡಂಕಿ ಬಂದರೆ ತುಂಬಾ ಜಾಗರೂಕತೆ ವಹಿಸಲೇ ಬೇಕಾಗುತ್ತದೆ. ಅದು ಎಲ್ಲಾದರೂ ಮೂಲೆಯಲ್ಲಿ ಅಡಗಿದ್ದು ಮತ್ತೆ ಬರುವ ಸಾಧ್ಯತೆ ಇದೆ.