ಸಹಜ ಸ್ಥಿತಿಯಲ್ಲಿ ಅಡಿಕೆ ಮರದ ಗಂಟುಗಳು ಒಂದೇ ನೇರಕ್ಕೆ ಸುತ್ತು ಬಂದಿರಬೇಕು.ಆದರೆ ಕೆಲವು ತೊಟಗಳಲ್ಲಿ ಕೆಲವು ಮರಗಳಲ್ಲಿ ಅದರ ಗಂಟು ವಿಚಿತ್ರವಾಗಿ ಗರಗಸದ ತರಹ ಬೆಳೆಯುತ್ತವೆ. ಇದ್ದು ರೋಗವೋ ಎಂಬ ಸಂದೇಹ ರೈತರಲ್ಲಿದೆ. ಇದು ರೋಗವಲ್ಲ. ಪೊಷಕಾಂಶದ ಅಸಮತೋಲನ.
ಗರಗಸ ಗಂಟು ಹೇಗೆ ಆಗುತ್ತದೆ?
- ಅದು 2005 ನೇ ಇಸವಿ. ಬಂಟ್ವಾಳ ತಾಲೂಕು, ಕಾಅವಳ ಮುಡೂರು ಗ್ರಾಮದ ಕೆದ್ದಳಿಕೆ ಗಣೇಶ್ ಭಟ್ ಇವರ ತೋಟಕ್ಕೆ ಹೋಗಿದ್ದೆ.
- ಆಗ ಅವರು ತಮ್ಮ ಅಡಿಕೆ ಮರಗಳಿಗೆ ಕೊಡುತ್ತಿದ್ದ ಗೊಬ್ಬರ ಹರಳಿನ ಹಿಂಡಿ. ಹನಿ ನೀರಾವರು ವ್ಯವಸ್ಥೆ.
- ನೀರು ಬೀಳುವ ಡ್ರಿಪ್ಪರಿನ ಕೆಳಗೆ ಒಂದು ರಬ್ಬರ್ ಹಾಲು ಸಂಗ್ರಹಿಸುವ ತಟ್ಟೆಯನ್ನು ಇಟ್ಟು ಅದಕ್ಕೆ ಹರಳು ಹಿಂಡಿಯನ್ನು ಮುಗಿದಂತೆ ಹಾಕಿಸುತ್ತಿದ್ದರು.
- ಆಗ ಅವರ ತೋಟದಲ್ಲಿ ನೋಡುವಾಗ ತುಂಬಾ ಅಡಿಕೆ ಮರಗಳಲ್ಲಿ ಗರಗಸ ಗಂಟು ತರಹದ ಬೆಳೆವಣಿಗೆ ಇತ್ತು.
ಅದೇ ತೋಟವನ್ನು 2012- 13 ರಲ್ಲಿ ನೋಡಿದಾಗ ಯಾವುದೇ ಮರದ ಗಂಟು ಈ ತರಹ ಇರಲಿಲ್ಲ. ಹಾಗೆ ಆದದ್ದೂ ಸರಿಯಾಗಿದೆ. ಕಾರಣ ಇಷ್ಟೇ ಇವರು ಸಾವಯವ ಕೃಷಿ ಬಿಟ್ಟು ರಾಸಾಯನಿಕ ಗೊಬ್ಬರಕ್ಕೆ ಪರಿವರ್ತನೆ ಆಗಿದ್ದರು.
- ಅದು ಸಮತೋಲಿತ ಪ್ರಮಾಣದಲ್ಲಿ ಅಡಿಕೆ ಮರಗಳಿಗೆ ಯಾವ ಸಮಯದಲ್ಲಿ ಯಾವ ಗೊಬ್ಬರ ಬೇಕು ಎಂಬುದನ್ನು ಸ್ವಲ್ಪ ಸ್ವಲ್ಪವೇ ಅಭ್ಯಸಿಸಿ ಆ ಪ್ರಕಾರ ಗೊಬ್ಬರ ಕೊಡಲು ಪ್ರಾರಂಭಿಸಿದ್ದರು.
- ಅವರದ್ದು ಖುಷ್ಕಿ ಭೂಮಿ. ಮಣ್ಣಿನಲ್ಲಿ ಫಲವತ್ತತೆ ಹೊರ ಮೂಲದಿಂದ ದೊರೆತೇ ಆಗಬೇಕು.
- ಹಾಗಿರುವಾಗ NPK ಪೋಷಕಗಳ ಜೊತೆಗೆ ಕ್ಯಾಲ್ಸಿಯಂ, ಮೆಗ್ನೀಶಿಯಂ, ಲಘು ಪೊಷಕಾಂಶಗಳು ಅಮೈನೋ ಆಮ್ಲ, ಹ್ಯೂಮಿಕ್ ಆಮ್ಲ ಹೀಗೆಲ್ಲಾ ಯಾವುದು ಎಷ್ಟು ಬೇಕೋ ಅಷ್ಟನ್ನೇ ಕೊಡಲು ಪ್ರಾರಂಭಿಸಿದ ನಂತರ ಗರಗಸ ಗಂಟು ಬೆಳವಣಿಗೆ ಮಾಯವಾಯಿತು.
ಯಾಕೆ ಆಗುತ್ತದೆ?
- ಸಸ್ಯಗಳ ಅಸಹಜ ಬೆಳೆವಣಿಗೆಗೆ ಪೋಷಕಾಂಶದ ಅಸಮತೋಲನವೇ ಕಾರಣ. ಸಾಮಾನ್ಯವಾಗಿ ಸಾರಜನಕ ಗೊಬ್ಬರ ಹೆಚ್ಚಿನ ಪ್ರಮಾಣದಲ್ಲಿ ಒದಗಿಸಿದಾಗ ರೋಗ- ಕೀಟ- ಅಸಹಜ ಬೆಳೆವಣಿಗೆ ಜಾಸ್ತಿ.
- ಬಹಳಷ್ಟು ರೈತರು ಎಲ್ಲಾ ಪೋಷಕಗಳನ್ನು ಕೊಡುತ್ತಾರೆ.
- ಆದರೆ ಅದರಲ್ಲಿ ರಂಜಕ ಲಭ್ಯವಾಗದ ಸ್ಥಿತಿಗೆ ತಲುಪುತ್ತದೆ. ಅಂದರೆ ಅದು ಮಣ್ಣಿನ ಕೆಲವು ಗುಣಗಳಿಂದ ಮಣ್ಣಿನಲ್ಲಿ ಇದ್ದರೂ ಸಸ್ಯಗಳಿಗೆ ಲಭ್ಯವಾಗುವುದಿಲ್ಲ.
- ಹಾಗೆಯೇ ಪೊಟ್ಯಾಶ್ ಗೊಬ್ಬರ ಹೆಚ್ಚು ನೀರು ಕೊಟ್ಟರೆ ಬೇರು ವಲಯಕ್ಕಿಂತ ಕೆಳಗೆ ಇಳಿದು ಹೋಗುತ್ತದೆ.
ಕೆಲವು ಪೋಷಕಗಳು ಚಲಿಸುತ್ತವೆ. ಅಂದರೆ ಹಾಕಿದಲ್ಲಿಂದ ಬೇರೆ ಕಡೆಗೆ ಪಸರಿಸುತ್ತದೆ. ಕೆಲವು ಪಸರಿಸದೆ ಹಾಕಿದಲ್ಲೇ ಇರುತ್ತವೆ. ಉದಾಹರಣೆ ರಂಜಕ. ಕೆಲವು ಆವೀಕರಣ ಆಗಿ ಹೋಗುತ್ತದೆ. ಉದಾಹರಣೆ ಯೂರಿಯಾ ಅಥವಾ ಸಾರಜನಕ ಗೊಬ್ಬರ. ಕೆಲವು ಇಳಿದು ಹೋಗುವುದು ಅಂದರೆ ಬೇರಿಗೆ ಲಭ್ಯವಾಗದೆ ಬೇರು ವಲಯಕ್ಕಿಂತ ಆಳಕ್ಕೆ ಅಥವಾ ದೂರಕ್ಕೆ ತಲುಪುವುದು.
- ಇದರಿಂದಾಗಿ ಪೋಷಕಾಂಶದ ಅಸಮತೋಲನ ಉಂಟಾಗುತ್ತದೆ.
ಪರಿಹಾರ:
- ಸಸ್ಯಗಳಿಗೆ ಬರೇ NPK ಗೊಬ್ಬರ ಮಾತ್ರ ಸಾಕಾಗುವುದಿಲ್ಲ ದ್ವಿತೀಯ ಪೋಷಕಗಳಾದ ಕ್ಯಾಲ್ಸಿಯಂ, ಮೆಗ್ನೀಶಿಯಂ , ಮತ್ತು ಗಂಧಕ ಅಗತ್ಯವಾಗಿ ಬೇಕು. ಇದು ಲಭ್ಯವಿಲ್ಲದಾಗ ಮರದ ಆರೋಗ್ಯ ಕೆಡುತ್ತದೆ.
- ಉಳಿದ ಪೋಷಕಗಳು ಬಾಂಡಿಂಗ್ ಆಗುತ್ತವೆ. ಬರೇ ಇಷ್ಟೇ ಅಲ್ಲ. ಮಣ್ಣಿನ ಗುಣ ಹೊಂದಿ ಅದರಲ್ಲಿ ಲಘು ಪೋಷಕಗಳ ಕೊರತೆಯೂ ಉಂಟಾಗಬಹುದು.
- ಸಾಮಾನ್ಯವಾಗಿ ಕಾಡು ಮಣ್ಣು, ಹಲವಾರು ವರ್ಷಗಳಿಂದ ಸಾಗುವಳಿಯಾಗುತ್ತಿದ್ದ ಹೊಲ ಆದರೆ ಕೆಲವು ವರ್ಷಗಳ ಕಾಲ ಲಘು ಪೋಷಕಗಳ ಕೊರತೆ ಉಂಟಾಗದು.
- ಆದರೆ ನಿರಂತರ ಅಧಿಕ ಇಳುವರಿ ಮತ್ತು ನೆಲಕ್ಕೆ ಸೂರ್ಯನ ಬೆಳೆಕಿನ ಕೊರತೆ ಪರಿಣಾಮದಿಂದ ಮಣ್ಣಿನಲ್ಲಿ ಲಘು ಪೊಷಕಾಂಶದ ಕೊರತೆ ಉಂಟಾಗುತ್ತದೆ. ಅದನ್ನು ಕೊಡಬೇಕಾಗುತ್ತದೆ.
- ಹರಳು ಹಿಂಡಿ ಬಳಸಿದರೆ ಅದರಲ್ಲಿ ರಂಜಕ ಮತ್ತು ಪೊಟ್ಯಾಶಿಯಂ ತುಂಬಾ ಕಡಿಮೆ ಇರುವ ಕಾರಣ ಅದನ್ನು ಪೂರೈಕೆ ಮಾಡಲೇ ಬೇಕು.
- ಕೊಟ್ಟಿಗೆ ಗೊಬ್ಬರವನ್ನೇ ನೀಡುವುದಾದರೆ , ಅದರಲ್ಲಿ ಸಾರಜನಕ ಹೊರತಾಗಿ ಬೇರೆ ಪೋಷಕ ಕಡಿಮೆ ಇದೆ. ಅದಕ್ಕೆ ಬೂದಿ ಮತ್ತು ರಂಜಾಕಾಂಶ ಉಳ್ಳ ಶಿಲಾ ರಂಜಕ ಬಳಸಿ.
- ಕೋಳಿ ಗೊಬ್ಬರ ಹಾಕಿದರೆ ರಂಜಕ ಮತ್ತು ಪೊಟ್ಯಾಶಿಯಂ ಅಗತ್ಯವಾಗಿ ಕೊಡಬೇಕು. ಕುರಿ ಗೊಬ್ಬರಕ್ಕೂ ಸಹ ರಂಜಕ ಮತ್ತು ಪೊಟ್ಯಾಶಿಯಂ ಸೇರಿಸಬೇಕು.
ಬರೇ ಸಾವಯವ ಎಂಬ ಕಟ್ಟುಪಾಡಿಗೆ ಅಂಟಿಕೊಂಡಿರುವ ಬೆಳೆಗಾರರಿಗೆ ಇದರ ಸಮಸ್ಯೆ ಹೆಚ್ಚು. ಬರೇ ಸಾರಜನಕ ಕೊಟ್ಟಾಗ ಮಣ್ಣಿನಲ್ಲಿ ಜಂತು ಹುಳಗಳೂ ಹೆಚ್ಚಳವಾಗಿ ತೊಂದರೆ ಉಂಟಾಗುತ್ತದೆ. ರಂಜಕ ಮತ್ತು ಪೋಟ್ಯಾಶಿಯಂ ಕೊರತೆ ಆದಾಗ ಅಂಗಾಂಶಗಳ ಬೆಳೆವಣಿಗೆ ವ್ಯತ್ಯಯವಾಗುತ್ತದೆ.
ಹೀಗೆ ಸಸ್ಯಗಳಿಗೆ ಬೇಕಾಗುವ ಅಗತ್ಯ ಪೋಷಕಗಳನ್ನು ಹಿತ ಮಿತವಾಗಿ ಒದಗಿಸುತ್ತಾ ಇದ್ದರೆ ಸಸ್ಯದ ಆರೋಗ್ಯ ವೆತ್ಯಾಸ ಆಗುವುದಿಲ್ಲ. ಅಸಹಜ ಬೆಳೆವಣಿಗೆಯೂ ಆಗುವುದಿಲ್ಲ. ಗರಗಸ ಗಂಟು ಎಂಬ ಅಸಹಜ ಬೆಳೆವಣಿಗೆ ಕಡಿಮೆಯಾಗುತ್ತದೆ.