ಅಡಿಕೆ ದಾಸ್ತಾನು ಇಡುವವರು ಉಗ್ರಾಣ ಕೀಟದ ತೊಂದರೆ ಉಂಟಾಗದಂತೆ ತಡೆಯಲು ಅಲ್ಯೂಮೀನಿಯಂ ಫೋಸ್ಫೇಡ್ ಮಾತ್ರೆಗಳನ್ನು ಬಳಸುತ್ತಿದ್ದು, ಅದು ದಾಸ್ತಾನು ಇಟ್ಟ ಅಡಿಕೆಯನ್ನು ನಿಜವಾಗಿಯೂ ರಕ್ಷಿಸುತ್ತದೆಯೇ ಅಥವಾ ಅದು ಒಂದು ಭ್ರಮೆಯೇ? ಮಾತ್ರೆಗಳನ್ನು ಬಳಸದೆ ದಾಸ್ತಾನು ಇಟ್ಟುರೆ ಅಡಿಕೆ ಹಾಳಾಗದಂತೆ ತಡೆಯುವ ವಿಧಾನ ಯಾವುದು?
ಅಡಿಕೆಯನ್ನು ಸುಲಿದು ಇಟ್ಟರೆ ಯಾವಾಗ ಬೆಲೆ ಬರುತ್ತದೆಯೋ ಆಗ ಮಾರಾಟ ಮಾಡಲು ಅನುಕೂಲವಾಗುತ್ತದೆ. ಅದಕ್ಕಾಗಿ ಹೆಚ್ಚಿನ ಬೆಳೆಗಾರರು ಸುಲಿಯುವವರು ಸಿಕ್ಕಾಗ ಪೂರ್ತಿ ಅಡಿಕೆಯನ್ನು ಸುಲಿದು ಗಾಳಿಯಾಡದಂತೆ ಗೋಣಿ ಚೀಲಕ್ಕೆ ಪ್ಲಾಸ್ಟಿಕ್ ಹಾಕಿ ದಾಸ್ತಾನು ಇಡುತ್ತಾರೆ. ಬೆಲೆ ಅನುಕೂಲಕರವಾಗಿ ಇದ್ದಾಗ ಅಥವಾ ಹಣದ ತುರ್ತು ಅಗತ್ಯ ಇದ್ದಾಗ ಗೋಣಿ ಚೀಲವನ್ನು ತೆಗೆದು ಮಾರುವುದಷ್ಟೇ ಕೆಲಸ. ದಾಸ್ತಾನು ಇಟ್ಟ ಅಡಿಕೆ ಸುಲಿದಾಗ ಹೇಗಿತ್ತೋ ಹಾಗೆಯೇ ಇರಬೇಕು ಎಂಬ ಕಾರಣಕ್ಕಾಗಿ ಬೆಳೆಗಾರರು ಪ್ಲಾಸ್ಟಿಕ್ ನೊಳಗೆ ತುಂಬಿದ ಅಡಿಕೆಯ ಜೊತೆಗೆ ಒಂದೆರಡು ಅತಿ ವಿಷದ ಅಲ್ಯೂಮೀನಿಯಂ ಫೋಸ್ಫೇಡ್ ಮಾತ್ರೆಗಳನ್ನು ಹಾಕಿ ಕಟ್ಟಿ ಇಡುತ್ತಾರೆ. ಅಡಿಕೆಗೆ ಅದರಲ್ಲೂ ಬಿಸಿಲಿನಲ್ಲಿ ಒಣಗಿಸಿದ ಚಾಲಿ ಅಡಿಕೆಗೆ ಡಂಕಿ ಎಂಬ ಉಗ್ರಾಣ ಕೀಟದ ಹಾವಳಿ ಹೆಚ್ಚು. ಇದು ಬರೇ ಅಡಿಕೆಗೆ ಮಾತ್ರವಲ್ಲ ಧವಸ ಧಾನ್ಯಗಳಿಗೂ ಇದೆ. ಹೆಚ್ಚೇಕೆ ಕರಿಮೆಣಸು ದಾಸ್ತಾನು ಇಟ್ಟರೂ ಅದಕ್ಕೂ ತೊಂದರೆ ಮಾಡುತ್ತದೆ. ಈ ಕೀಟ ಅಡಿಕೆಯ ಒಳಗೆ ತೂತು ಕೊರೆದು ಸೇರಿಕೊಂಡು ಒಳಭಾಗದ ತಿರುಳನ್ನು ಹಾನಿ ಮಾಡುತ್ತದೆ.ಇಂತಹ ಅಡಿಕೆಯ ಗುಣಮಟ್ಟ ಏನೂ ಇಲ್ಲದಾಗಿ ಬೆಲೆ ತುಂಬಾ ಕಡಿಮೆ ಸಿಗುತ್ತದೆ. ಗೋಣಿ ಚೀಲದ ಒಳಗೆ ಅಡಿಕೆಯನ್ನು ತಿಂದು ಅದರ ಹುಡಿಯನ್ನು ಹೊರಹಾಕಿರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಡಂಕಿ ಕೀಟ ಬಾದಿಸಿದಲ್ಲಿ ಇಂತಹ ಹುಡಿ ಸಿಗುತ್ತದೆ.
ಡೆಂಕಿ ಕೀಟ ಎಲ್ಲಿಂದ ಬರುತ್ತದೆ?
- ಡಂಕಿ ಕೀಟ ಸುಮಾರಾಗಿ ಸಾಸಿವೆಗಿಂತ ಸಣ್ಣದಿರುತ್ತದೆ.
- ಇದು ಒಂದು ದುಂಬಿ. ಅತ್ಯಧಿಕ ಪ್ರಮಾಣದಲ್ಲಿ 58% ಕ್ಕೂ ಹೆಚ್ಚು ಬಾಧಿಸುವ ಉಗ್ರಾಣ ದುಂಬಿ, ಅಥವಾ grain beetle Cryptolestes pusillus (Schönherr.
- ಇವಲ್ಲದೆ ಸುಮಾರು 18 ವಿಧದ ಉಗ್ರಾಣ ಕೀಟಗಳು ಅಡಿಕೆಗೆ ಬಾಧಿಸುತ್ತವೆ.
- ಕೆಲವು ಸಿಂಗಲ್ ಚೋಳ್, ಕೆಲವು ಡಬ್ಬಲ್ ಚೋಳ್, ಹೊಸ ಅಡಿಕೆ, ಉಳ್ಳಿ, ಪಟೋರಾ, ಕರಿ ಕೋಕಾ ಇವೆಲ್ಲಾ ತರಾವಳಿಯ ಅಡಿಕೆಗೆ ಬಾದಿಸುವಂತದ್ದು.
- ಇದು ಹಾಳಾದ ಅಡಿಕೆಯಲ್ಲಿ ಮೊದಲು ಪ್ರವೇಶ ಮಾಡುತ್ತದೆ. ಇವು ಹೊರ ವಾತಾವರಣದಲ್ಲೂ ಬದುಕಿಕೊಂಡು ಇರುತ್ತದೆ.
- ಆಶ್ರಯ ಸಿಕ್ಕಾಗ ಅದಕ್ಕೆ ಪ್ರವೇಶ ಮಾಡುತ್ತದೆ.ಕೊಕ್ಕೋ, ಹಾಗೂ ಇನ್ನಿತರ ಧಾನ್ಯಗಳಿಗೆ ಬಾಧಿಸಿ ಅವಕಾಶ ಸಿಕ್ಕಾಗ ಅಡಿಕೆಗೆ ಬಾಧಿಸುತ್ತದೆ.
- ಒಮ್ಮೆ ಈ ಕೀಟ ಪ್ರವೇಶವಾದರೆ ನಿರ್ಮೂಲನೆ ಮಾಡದೆ ಇದ್ದರೆ ಎಲ್ಲಾದರೂ ಸಂದಿಗಳಲ್ಲಿ ಬದುಕಿಕೊಂಡು ಉಳಿಯುತ್ತದೆ.
- ಇದರ ಸಂತಾನಾಭಿವೃದ್ದಿ ಅಡಿಕೆಯ ಒಳಗೆ ನಡೆಯುತ್ತದೆ. ಇದರ ಚಟುವಟಿಕೆ ಸಾಧಾರಣವಾಗಿ ತೇವಾಂಶ ಹೆಚ್ಚು ಇರುವ ಧಾನ್ಯ – ಕಾಳುಗಳಲ್ಲಿ ಕಂಡುಬರುತ್ತದೆ.
ಅಲ್ಯೂಮೀನಿಯಂ ಫೋಸ್ಪೇಡ್ ಮತ್ತು ಡಂಕಿ ನಿಯಂತ್ರಣ:
![ಅಲ್ಯೂಮೀನಿಯಂ ಫೋಸ್ಫೇಡ್ ಗುಳಿಗೆ](https://kannada.krushiabhivruddi.com/wp-content/uploads/2023/03/IMG_20190502_172321-FILEminimizer.jpg)
- ಅಡಿಕೆ ಬೆಳೆಗಾರರು ಡಂಕಿ ಬಾರದಂತೆ ರಕ್ಷಿಸಲು ದೊಡ್ಡ ದೊಡ್ದ ಬೆಳೆಗಾರರು ಸುಲಿದ ಅಡಿಕೆಯನ್ನು ಗಂಧಕದ ಹೊಗೆ ಹಾಕಿ ಮುಚ್ಚಿಟ್ಟು ನಿಯಂತ್ರಿಸುತ್ತಾರೆ.
- ಸಣ್ಣ ಬೆಳೆಗಾರರು ಗೋಣಿ ಚೀಲದ ಒಳಗೆ ಅಲ್ಯೂಮೀನಿಯಂ ಫೋಸ್ಫೇಡ್ ಗುಳಿಗೆಗಳನ್ನು ಹಾಕುತ್ತಾರೆ.
- ಅಲ್ಯೂಮೀನಿಯಂ ಫೋಸ್ಪೇಡ್ ಗುಳಿಗೆಗಳು ಹೊರ ವಾತಾವರಣದ ತೇವಾಂಶದೊಂದಿಗೆ ತೆರೆದುಕೊಡಾಗ ತನ್ನ ಕೀಟನಿಯಂತ್ರಕ ಗುಣವನ್ನು (ವೀಷಕಾರಿತ್ವವನ್ನು) ಬಿಡುಗಡೆ ಮಾಡುತ್ತದೆ.
- ಗೋಣಿ ಚೀಲದ ಒಳಗೆ ಗುಳಿಗೆ ಹಾಕಿ ತಕ್ಷಣ ಗಾಳಿಯಾಡದಂತೆ ಕಟ್ಟಿದಾಗ ಆದರ ಒಳಗೆ ವಾಸನೆ ತುಂಬಿಕೊಂಡು ಕೀಟಗಳು ಇದ್ದರೆ ಅದು ವಾಸನೆಗೆ ಸತ್ತು ಹೋಗುತ್ತದೆ.
- ವರ್ಷಗಟ್ಟಲೆ ಈ ಮಾತ್ರೆಯ ಪ್ರಭಾವ ಇರುವುದಿಲ್ಲ. ಇದರ ಕೀಟ ನಿಯಂತ್ರಕ ಗುಣ ಕೇವಲ 40 ದಿನ ಮಾತ್ರ.
- ಅದಕ್ಕಿಂತ ಹೆಚ್ಚು ಸಮಯ ಮಾತ್ರೆ ಹಾಕಿ ದಾಸ್ತಾನು ಇಟ್ಟ ಅಡಿಕೆ ಯಾವುದೇ ಡೆಂಕಿ ಹೊಡೆದಿಲ್ಲ ಎಂದಾದರೆ ಆ ಅಡಿಕೆಗೆ ಮಾತ್ರೆ ಹಾಕದಿದ್ದರೂ ನಡೆಯುತ್ತದೆ ಎಂದರ್ಥ.
ಮಾತ್ರೆ ರಹಿತವಾಗಿ ದಾಸ್ತಾನು ಇಡುವ ಕ್ರಮ:
- ಅಡಿಕೆಯನ್ನು ಸುಲಿದ ತರುವಾಯ ಅದರಲ್ಲಿ ಬೇರೆ ಬೇರೆ ತರಾವಳಿಯ ಅಡಿಕೆಯನ್ನು ಪ್ರತ್ಯೇಕಿಸಬೇಕು.
- ಸ್ವಲ್ಪ ಉದಾಸೀನ ಅಥವಾ ಆಸೆ ಮಾಡಿ ಒಡೆದ ಪಟೋರಾ, ಸಿಪ್ಪೆ ಗೋಟು, ಕರಿಗೋಟು, ಕಣ್ಣು ತೂತು ಆದ ಅಡಿಕೆಯನ್ನು ಉಳಿಸಿದರೆ ಆ ಅಡಿಕೆಗೆ ಡಂಕಿ ಬರುವ ಸಾಧ್ಯತೆ ಹೆಚ್ಚು.
- ವಿಂಗಡನೆ ಮಾಡುವಾಗ ಇವುಗಳನ್ನೆಲ್ಲಾ ಪ್ರತ್ಯೇಕಿಸಬೇಕು.
- ಕೆಲವು ಅಡಿಕೆ ಅದರ ಕಣ್ಣು (ಭ್ರೂಣ ) ಭಾಗದಲ್ಲಿ ಕಪ್ಪಗೆ ಆಗಿರುತ್ತದೆ. ಅದನ್ನು ಒಂದು ವರ್ಗವಾಗಿ ವಿಂಗಡಿಸಿದರೆ ಅದಕ್ಕೆ ಉತ್ತಮ ಅಡಿಕೆಗಿಂತ 10-15 ರೂ. ಕಡಿಮೆ ಬೆಲೆ ಇರುತ್ತದೆ.
- ಈ ತರಾವಳಿಯ ಅಡಿಕೆಗೆ ಡಂಕಿ ಮೊದಲು ಬಾಧಿಸುತ್ತದೆ.
- ಆದ ಕಾರಣ ದಾಸ್ತಾನು ಇಡುವ ಅಡಿಕೆಯ ಜೊತೆಗೆ ಈ ಅಡಿಕೆ ಮಿಶ್ರಣ ಆಗಲೇಬಾರದು.
![ಡಂಕಿ ಬಾಧಿತ ಅಡಿಕೆ](https://kannada.krushiabhivruddi.com/wp-content/uploads/2023/03/IMG_20200428_224804-FILEminimizer.jpg)
ಸುಲಿದ ತರುವಾಯ ಬಿಸಿಲಿಗೆ ಹಾಕಿ:
ಅಡಿಕೆ ಸುಲಿದು ವಿಂಗಡಿಸಿದ ತರುವಾಯ ಉತ್ತಮ ಅಡಿಕೆಯನ್ನು ಪ್ರಖರ ಬಿಸಿಗೆ ಒಂದು ದಿನ ಒಣಗಲು ಹಾಕಿ. ನಂತರ ಅದನ್ನು ಪ್ಲಾಸ್ಟಿಕ್ ಹಾಕಿ ಗೋಣಿ ಚೀಲದಲ್ಲಿ ತುಂಬಿಸಿಡಿ. ಬಿಸಿಲಿನಿಂದ ತೆಗೆದ ಮೇಲೆ ಗೋಣಿ ಚೀಲಕ್ಕೆ ತುಂಬಿ ಇಡೀ ರಾತ್ರೆ ಬಿಸಿ ಆರುವಂತೆ ಗೋಣಿ ಚೀಲವನ್ನು ಬಾಯಿ ಕಟ್ಟದೆ ತೆರೆದು ಇಡಿ.ಮರುದಿನ ಚೀಲ ಮುಚ್ಚಬೇಕು. ಆಗ ತೇವಾಂಶ ಆರುತ್ತದೆ.
ಉತ್ತಮ ಅಡಿಕೆ ಮಾತ್ರ ದಾಸ್ತಾನು ಇಡಬೇಕು:
- ಬೆಳೆಗಾರರು ಯಾವಾಗಲೂ ವಿಂಗಡನೆ ಮಾಡಿ ಉತ್ತಮ ಇರುವ ಅಡಿಕೆಯನ್ನು ಮಾತ್ರ ದಾಸ್ತಾನು ಇಡಬೇಕು.
- ಉಳಿದ ಅಡಿಕೆಯನ್ನು ಸಾಧ್ಯವಾದಷ್ಟು ಬೇಗ ಮಾರಾಟ ಮಾಡಬೇಕು.
- ಅಂತಹ ಅಡಿಕೆಯ ಚೀಲವನ್ನು ಉತ್ತಮ ಅಡಿಕೆ ದಾಸ್ತಾನು ಇಟ್ಟ ಸ್ಥಳದಲ್ಲಿ ಇಡಬಾರದು.
- ಅಡಿಕೆ ದಾಸ್ತಾನು ಇಡುವಲ್ಲಿ ಹಲಸಿನ ಬೀಜ, ಸರಿಯಾಗಿ ಒಣಗದ ಜಾಯೀಕಾಯಿ, ಇವುಗಳನ್ನೂ ಇಡಬಾರದು.
- ದಾಸ್ತಾನು ಕೊಣೆಯೊಳಗೆ ಸ್ವಚ್ಚತೆ ಇರಬೇಕು. ಅಪ್ಪಿ ತಪ್ಪಿ ಸುಲಿದ , ಸುಲಿಯದ ಅಡಿಕೆ ನೆಲದಲ್ಲಿ ಬಿದ್ದಿರಬಾರದು.
- ಅಂತಹ ಅಡಿಕೆಗೆ ವಾತಾವರಣದ ತೇವಾಂಶ ಸೇರಿ ಅದು ಡಂಕಿ ಕೀಟಕ್ಕೆ ಬಲಿಯಾಗುತ್ತದೆ.
- ಅದು ಮುಗಿದ ನಂತರ ಕೀಟವು ಬೇರೆ ಅಡಿಕೆಯನ್ನು ಹುಡುಕುತ್ತದೆ.
- ಡಂಕಿ ಕೀಟಕ್ಕೆ ಗಟ್ಟಿಯಾದ ಅಡಿಕೆಯನ್ನು ತೂತು ಕೊರೆಯಲು ಕಷ್ಟವಾಗುವುದಿಲ್ಲ.
- ಹಾಗಾಗಿ ಪ್ಲಾಸ್ಟಿಕ್ ಚೀಲವನ್ನೂ ಆರಾಮವಾಗಿ ತೂತು ಕೊರೆದು ಒಳಗೆ ಹೋಗುತ್ತದೆ.
![ಇಂತಹ ಅಡಿಕೆ ಒಳ್ಳೆಯ ಅಡಿಕೆ ಜೊತೆ ಸೇರದಿರಲಿ](https://kannada.krushiabhivruddi.com/wp-content/uploads/2023/03/IMG_20200428_185057-FILEminimizer-FILEminimizer.jpg)
ಅಲ್ಯೂಮೀನಿಯಂ ಫೋಸ್ಫೇಡ್ ಇದರ ಕೆಲಸ ಏನು?
- ಇದು ಕೀಟ ನಿಯಂತ್ರಕ ಅಷ್ಟೇ .ಅಡಿಕೆ ಹಾಳಾಗುವುದು ಬರೇ ಕೀಟದಿಂದ ಮಾತ್ರವಲ್ಲ. ಸಮರ್ಪಕವಾಗಿ ಒಣಗದೇ ಇದ್ದರೆ ಒಳ ತಿರುಳು ಶಿಲೀಂದ್ರ ಸೋಂಕಿಗೆ ತುತ್ತಾಗುತ್ತದೆ.
- ಕೆಲವು ಒಣಗುವ ಸಮಯದಲ್ಲಿ ಶಿಲೀಂದ್ರ ಸೋಂಕಿಗೆ ತುತ್ತಾಗಿದ್ದರೆ ಅದು ಗಮನಕ್ಕೆ ಬಾರದೆ ಚೀಲದಲ್ಲಿ ಸೇರಿಕೊಂಡಿದ್ದರೆ ಉಳಿದ ಅಡಿಕೆಗೆ ಅದು ಪ್ರಸಾರವಾಗುತ್ತದೆ.
- ಇದನ್ನು ನಿಯಂತ್ರಿಸಲು ಅಲ್ಯೂಮೀನಿಯಂ ಫೋಸ್ಫೇಡ್ ಸಹಾಯಕವಲ್ಲ.
![ಇಂತಹ ಬೂಸ್ಟ್ ಬಂದ ಅಡಿಕೆ ರಾಶಿಯಲ್ಲಿ ಒಂದೆರಡು ಇದ್ದರೂ ಸಹ ಅಡಿಕೆ ಒಳ್ಳೆಯದೂ ಸೋಂಕು ತಗಲಿ ಹಾಳಾಗುತ್ತದೆ.](https://kannada.krushiabhivruddi.com/wp-content/uploads/2023/03/IMG_20180724_163742_HDR-FILEminimizer-FILEminimizer.jpg)
- ಅಡಿಕೆಯನ್ನು ಕನಿಶ್ಟ ಎಂದರೂ ಸುಮಾರು 50 ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಬೇಕು.
- ಕಡಿಮೆ ಒಣಗಿದರೆ ಶಿಲೀಂದ್ರ ಸೋಂಕು ಉಂಟಾಗುತ್ತದೆ ಹಾಗೆಯೇ ಡಂಕಿಯೂ ಬರುತ್ತದೆ.
- ಒಣಗಿಸಲು ಹಾಕುವಾಗ ಬಿದ್ದ ಅಡಿಕೆ ಅಂದರೆ 4-5 ದಿನ ನೆಲದಲ್ಲಿ ಬಿದ್ದ, ಸ್ಪ್ರಿಂಕ್ಲರ್ ನೀರಾವರಿ ಉಳ್ಳ ತೋಟದ ಅಡಿಕೆಯನ್ನು ಪ್ರತ್ಯೇಕವಾಗಿ ಒಣಗಿಸಬೇಕು.
- ಪ್ರತ್ಯೇಕವಾಗಿ ಸುಲಿಯಬೇಕು. ಇಂತಹ ಅಡಿಕೆಯ ಭ್ರೂಣ ಭಾಗ ನೆನೆದು ಉಬ್ಬಿರುತ್ತದೆ.
- ಅದು ಒಣಗುವಾಗ ಚುರುಟಿಕೊಂಡು ಕಣ್ಣು ತೂತು ಆಗುತ್ತದೆ.
- ಆ ಭಾಗದ ಮೂಲಕ ಡಂಕಿ ಒಳಸೇರಿ ಹಾನಿ ಮಾಡುತ್ತದೆ ಹಾಗೆಯೇ ಶಿಲೀಂದ್ರ ಸೋಂಕು ಸಹ ಇಲ್ಲಿಂದಲೇ ಪ್ರಾರಂಭವಾಗುತ್ತದೆ.
- ಹಾಗಾಗಿ ಒಣಗಿಸುವಾಗ ಜಾಗರೂಕತೆ ವಹಿಸಬೇಕು.
ಅಲ್ಯೂಮೀನಿಯಂ ಫೋಸ್ಫೇಡ್ ಗುಳಿಗೆ ಪರಮ ವಿಷಕಾರಿಯಾಗಿದ್ದು, ಅದನ್ನು ಬಳಸುವಾಗ ಅದರ ವಾಸನೆ ಮಾನವನ ದೇಹದ ಒಳಗೆ ಸೇರುವ ಸಾಧ್ಯತೆ ಹೆಚ್ಚು. ಹಾಗಾಗಿ ಅದನ್ನು ಬಳಕೆ ಮಾಡುವಾಗ ಜಾಗರೂಕರಾರಿರಬೇಕು. ಗ್ರಾಹಕನಿಗಿಂತ ಬಳಸುವವನಿಗೇ ಹೆಚ್ಚು ಅಪಾಯ ಆದ ಕಾರಣ ನಮ್ಮ ಸುರಕ್ಷತೆಗಾಗಿ ಇದನ್ನು ಬಳಸದೆ ಇರುವುದು ಸೂಕ್ತ. ಬಳಸುವ ಅನಿವಾರ್ಯತೆ ಇದ್ದರೆ ಬಟ್ಟೆಯಲ್ಲಿ ಕಟ್ಟಿ ಅಥವಾ ಪ್ಲಾಸ್ಟಿಕ್ ಪೌಚ್ ಒಳಗೆ ಇಟ್ಟು ಹಾಕಬೇಕು. ಮಾತ್ರೆ ಹುಡಿ ಆದ ನಂತರ ಅದರ ಪ್ರಭಾವ ಕಡಿಮೆಯಾಗುತ್ತದೆ.
ಭವಿಷ್ಯದಲ್ಲಿ ಅಡಿಕೆ ಬೆಳೆ ವಿಸ್ತರಣೆ ಆಗುವುದನ್ನು ಗಮನಿಸಿದರೆ ಮುಂದೆ ಗುಣಮಟ್ಟದ ಅಡಿಕೆಗೆ ಮಾತ್ರ ಉತ್ತಮ ಬೆಲೆ ಸಿಗುವ ಸಾಧ್ಯತೆ ಕಾಣಿಸುತ್ತಿದೆ.ಆಯ್ಕೆಗಳು ಹೆಚ್ಚು ಇದ್ದಾಗ ಇದು ಸಹಜವಾಗಿ ಆಗುತ್ತದೆ. ಹಾಗಾಗಿ ಬೆಳೆಗಾರರು ಗುಣಮಟ್ಟದ ಕಡೆಗೆ ಹೆಚ್ಚಿನ ಗಮನಹರಿಸಬೇಕಾದ ಅಗತ್ಯ ಇದೆ.