ಅಡಿಕೆ ಬೆಳೆಗಾರರು ಕೆಂಪಡಿಕೆ ಮಾಡುವವರು ಆಗಲಿ, ಚಾಲಿ ಮಾಡುವವರೇ ಆಗಲಿ, ಗುಣಮಟ್ಟದ ಅಡಿಕೆ ಉತ್ಪಾದನೆ ಕಡೆಗೆ ಅದ್ಯ ಗಮನಹರಿಸಲೇ ಬೇಕು. ಇದು ನಮ ಸುರಕ್ಷತೆಗಾಗಿ ನಾವು ಮಾಡಬೇಕಾದ ಅಗತ್ಯ ಕೆಲಸ. ಗುಣಮಟ್ಟ ಉಳ್ಳ ಅಡಿಕೆಗೆ ಗರಿಷ್ಟ ಬೆಲೆ. ಅಡಿಕೆಯ ಮಾನ ಉಳಿಯುವುದೂ ಗುಣಮಟ್ಟ ಪಾಲನೆಯಲ್ಲಿ. ಹೀಗಿರುವಾಗ ಅಡಿಕೆ ಬೆಳೆಗಾರರು ತಮ್ಮ ಭವಿಷ್ಯದ ಹಿತ ದೃಷ್ಟಿಯಿಂದ ಗುಣಮಟ್ಟಕ್ಕೆ ಆದ್ಯ ಗಮನ ಕೊಡಲೇ ಬೇಕು.
ಅಡಿಕೆಯ ಕುರಿತಾಗಿ ಯಾವಾಗಲೂ ನ್ಯಾಯಾಲಯ ಬೆಳೆಗಾರರ ಮೇಲೆ ತಿರುಗಿ ಬೀಳಬಹುದು. ಯಾರಾದರೂ ಅಡಿಕೆಯಲ್ಲಿ ಆರೋಗ್ಯಕ್ಕೆ ಹಾನಿಕಾರಕ ಅಂಶಗಳು ಇವೆ ಎಂದು ಕೋರ್ಟು ಮೆಟ್ಟಲು ಹತ್ತಬಹುದು. ಸರಕಾರ ನಿರ್ವಾಹವಿಲ್ಲದೆ ಅನಿವಾರ್ಯವಾಗಿ ಅಡಿಕೆಯ ಬಳಕೆ ಮೇಲೆ ನಿರ್ಭಂಧ ಹೇರಬಹುದು. ಹೀಗಾದರೆ ಅದೇ ಬೆಳೆಯನ್ನು ನಂಬಿ ನಮ್ಮ ಜೀವನದ ಸೌಧಕಟ್ಟಿಕೊಂಡ ನಮ್ಮ ಬದುಕು ಏನಾಗಬಹುದು? ಖಂಡಿತವಾಗಿಯೂ ಇದು ಕರಾಳ. ಯಾಕೆಂದರೆ ಕಳಪೆ ಗುಣಮಟ್ಟದ ಅಡಿಕೆಯಲ್ಲಿ ಆರೋಗ್ಯಕ್ಕೆ ಹಾನಿಕಾರಕ ಅಂಶ ಇದ್ದೇ ಇದೆ. ಇದು ನಮಗೆ ಯಾವಾಗಲೂ ಆತಂಕಕಾರಿಯೇ ಆಗಿರುತ್ತದೆ. ನಾವು ಬೆಳೆಯುವ ಅಡಿಕೆ ಆರೋಗ್ಯಕ್ಕೆ ಉತ್ತಮವೇ ಇರಬಹುದು. ಆದರೆ ಅದಕ್ಕೆ ಕಲಬೆರಕೆ ಆದರೆ, ಸಸಿಯಾದ ಸಂಸ್ಕರಣೆ ಆಗದಿದ್ದರೆ, ಅದರಲ್ಲಿ ಬಾಹ್ಯ ವಸ್ತುಗಳ ಪ್ರವೇಶ ಆಗಿ ಅದು ಆರೋಗ್ಯಕ್ಕೆ ಹಾನಿಕರವಾಗುತ್ತದೆ. ಬೆಳೆಗಾರರಾದ ನಾವು ಸಾದ್ಯವಾದಷ್ಟು ಗುಣಮಟ್ಟದ ಅಡಿಕೆ ಉತ್ಪಾದನೆಗೆ ಆದ್ಯತೆ ನೀಡಿದಲ್ಲಿ ನಮ್ಮನ್ನು ನಾವು ಸಮರ್ಥಿಸಿಕೊಳ್ಳುವುದರಲ್ಲಿ ಅರ್ಥವಿದೆ.
ಅಡಿಕೆಯ ಮೇಲೆ ಸರಕಾರ, ನ್ಯಾಯಾಲಯ ಏನಾದರೂ ಸುದ್ದಿ ಮಾಡಿದರೆ ಬೆಳೆಗಾರರ ಪರವಾಗಿ ಮಾತಾಡುವವರು ಅಡಿಕೆ ವ್ಯವಹಾರ ಮಾಡುವವರು. ಅವರು ಈ ತನಕ ಬೆಳೆಗಾರರ ಹಿತ ಕಾಪಾಡಲು ಶ್ರಮಿಸಿರಬಹುದು. ಆದರೆ ಗುಣಮಟ್ಟ ಇಲ್ಲದಿದ್ದಲ್ಲಿ ಅವರ ಪ್ರಯತ್ನ ಸಹ ಫಲ ಕೊಡಲಾರದು. ಗುಣಮಟ್ಟವನ್ನು ಬೆಳೆಗಾರರೇ ಕಾಯ್ದುಕೊಳ್ಳಬೇಕಾದದ್ದು ಅನಿವಾರ್ಯ.
ಕಳಪೆ ಅಡಿಕೆ ಎಂದರೆ ಯಾವುದು?
- ಬೇಯಿಸಿ ಸಂಸ್ಕರಿಸುವ ಅಡಿಕೆಯಲ್ಲಿ ಸಾಧಾರಣವಾಗಿ ಯಾವುದೇ ಹಾನಿಕಾರಕ ಅಂಶಗಳು ಕಡಿಮೆ.
- ಅಡಿಕೆಯನ್ನು ಬೇಯಿಸುವ ಉದ್ದೇಶವೇ ಇದು. ಬೇಯಿಸಿದಾಗ ಅದರ ಚೊಗರು ಹೋಗುತ್ತದೆ.
- ಹಾಗೆಯೇ ಒಮ್ಮೆ ಅದು ಕಿಲ್ಲಿಂಗ್ ಗೆ ಒಳಪಡುತ್ತದೆ. ಹಾಗಾಗಿ ಬೇಯಿಸಿದ ಅಡಿಕೆಯಲ್ಲಿ ಶಿಲೀಂದ್ರ ಬೆಳೆಯುವ ಸಾಧ್ಯತೆ ಕಡಿಮೆ.
- ಹಾಗೆಂದು ಅರ್ಧಂಬರ್ಧ ಒಣಗಿಸಿದರೆ ಶಿಲೀಂದ್ರ ಸೋಂಕು ಆಗಬಹುದು.
- ಸರಿಯಾದ ವಿಧಾನದಲ್ಲಿ ದಾಸ್ತಾನು ಇಡದೇ ಇದ್ದರೆ ಸಹ ಶಿಲೀಂದ್ರ, ಉಗ್ರಾಣ ಕೀಟ ಬರಬಹುದು.
- ಅಡಿಕೆಗೆ ಬಣ್ಣ ಬರಿಸಲು ಯಾವುದಾದರೂ ಬಣ್ಣದ ಲೇಪನ ಮಾಡಿದರೆ ಅದು ಸಹ ಕಳಪೆ ಎನ್ನಿಸಬಹುದು.
- ಇದನ್ನು ಯಾವ ಬೆಳೆಗಾರರೂ ಮಾಡಬಾರದು. ಮಾಡಲು ಆಸ್ಪದವನ್ನೂ ಕೊಡಬಾರದು.
- ಚಾಲಿ ಅಡಿಕೆಯಲ್ಲಿ ಸಂಸ್ಕರಣೆ ಎಂಬುದು ಬಹಳ ಪ್ರಾಮುಖ್ಯವಾದ ಸಂಗತಿ.
- ಹಣ್ಣಾದ ಅಡಿಕೆಯನ್ನು ಕಠಾವು ಮಾಡಿ ನೇರವಾಗಿ ಬಿಸಿಲಿಗೆ ಹಾಕಿ ಒಣಗಿಸುವುದೇ ಇಲ್ಲಿ ಸಂಸ್ಕರಣೆ.
- ಇದು ಹೇಳಲಿಕ್ಕೆ ಸುಲಭ. ಆದರೆ ಇದು ತುಂಬಾ ನಾಜೂಕಿನ ಕೆಲಸ.
- ಹಣ್ಣಾದ ಅಡಿಕೆ ಸಮರ್ಪಕವಾಗಿ ಒಣಗಲು ಕನಿಷ್ಟ 40-45 ದಿನಗಳ ಪೂರ್ತಿ ಬಿಸಿಲಿನ ಅವಧಿ ಬೇಕು.
- ಈ ಮಧ್ಯೆ ಮಳೆ ಬಂದರೆ ಅಡಿಕೆ ಸಿಪ್ಪೆ ಒದ್ದೆಯಾದರೆ ಆ ತೇವಾಂಶವನ್ನು ಒಳಗೆ ಒಣಗಿದ ಗೋಟು ಹೀರಿಕೊಳ್ಳುತ್ತದೆ.
- ಮಳೆ ಬರುವ ಮುನ್ಸೂಚನೆ ಇದೆ ಎಂದು ರಾಶಿ ಮಾಡಿ ಮುಚ್ಚಿಟ್ಟ ಅಡಿಕೆ ಅರೆ ಬರೆ ಒಣಗಿದ್ದರೆ ಅಲ್ಲಿ ತೇವಾಂಶ ಮತ್ತು ಬಿಸಿ ವಾತಾವರಣದಲ್ಲಿ ಶಿಲೀಂದ್ರ ಸೋಂಕಿಗೆ ಒಳಪಡುತ್ತದೆ.
- ಒಣಗಲು ಹಾಕಿದ ಅಡಿಕೆ ಮೇಲಿಂದ ಮೇಲೆ ಇದ್ದರೆ ಕೆಲವು ಒಣಗುತ್ತದೆ ಮತ್ತೆ ಕೆಲವು ಒಣಗಿರುವುದಿಲ್ಲ.
- ಒಣಗದೆ ಇದ್ದದ್ದು, ಒಣಗಿದ ಅಡಿಕೆಗೆ ಶಿಲೀಂದ್ರ ಸೋಂಕನ್ನು ವರ್ಗಾಯಿಸುತ್ತದೆ.
- ಹೀಗಾದಾಗ ಲಾಟ್ ನಲ್ಲಿ ಅಡಿಕೆ ಹಾಳಾಗುತ್ತದೆ. ಅಡಿಕೆ ಸಂಸ್ಕರಣೆಯಲ್ಲಿ ಯಾವುದೇ ಉದಾಸೀನ ಮಾಡಿದರೂ ಗುಣಮಟ್ಟ ಹಾಳಾಗುತ್ತದೆ.
ಅಡಿಕೆ ಫಲ ಗುತ್ತಿಗೆ ಕೊಡುವುದು ಕೆಲವೊಮ್ಮೆ ಗುಣಮಟ್ಟ ಹಾಳಾಗಲು ಕಾರಣವಾಗುತ್ತದೆ. ಇಲ್ಲಿ ಬೆಳೆಗಾರರಷ್ಟು ಚೇಣಿಗೆ ವಹಿಸಿಕೊಂಡವರಿಗೆ ಉತ್ಪನ್ನದ ಗುಣಮಟ್ಟದ ಕಡೆಗೆ ಗಮನಹರಿಸದೆ ಇರುವುದು ಮಾರುಕಟ್ಟೆಯಲ್ಲಿ ಕಾಣುವಾಗ ತಿಳಿಯುತ್ತದೆ. ಸಾಧ್ಯವಾದಷ್ಟು ಫಲಗುತ್ತಿಗೆ ಕೊಡುವುದನ್ನು ಕಡಿಮೆ ಮಾಡಿ ಬೆಳೆಗಾರರೇ ಸಂಸ್ಕರಣೆ ಮಾಡಿದರೆ ಒಳ್ಳೆಯದು.
ಕೊಯಿಲು ಹೇಗೆ ಮಾಡಬೇಕು?
- ಅಡಿಕೆ ಕೊಯಿಲು ಮಾಡುವಾಗ ಹಣ್ಣಾದ ಅಡಿಕೆ ಗೊನೆಯನ್ನು ಮಾತ್ರ ಕೊಯಿಲು ಮಾಡಬೇಕು.
- ಅರೆ ಬರೆ ಹಣ್ಣಾದ ಅಡಿಕೆ ಆದರೆ ಅದು ಒಡೆದ ಅಡಿಕೆ ಆಗುತ್ತದೆ.
- ಕಾಯಿ ಅಡಿಕೆ ಕೊಯಿಲು ಮಾಡಿದರೆ ಅದು ಕರಿ ಗೋಟು ಆಗುತ್ತದೆ.
- ಉತ್ತಮ ಗುಣಮಟ್ಟದ ಅಡಿಕೆ ಎಂದರೆ ಒಣಗಿದಾಗ ತಿರುಳು ಒಡೆದಿರಬಾರದು.
- ಸಿಪ್ಪೆ ಅಂಟಿಕೊಂಡಿರಬಾರದು. ಸಿಪ್ಪೆಯ ಸಂಪರ್ಕ ಬಿಟ್ಟು ಆಡುವಂತಿರಬೇಕು.
- ಅಂತಹ ಅಡಿಕೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡಿದರೆ ಅದು ಯಾವ ಪರೀಕ್ಷೆಯಲ್ಲೂ ಕಳಪೆ ಎನಿಸಿಕೊಳ್ಳದು.
- ಹೆಚ್ಚಿನ ಪ್ರಮಾಣದಲ್ಲಿ ಒಡೆದ ಅಡಿಕೆ, ಕರಿ ಕೋಕ, ಉಳ್ಳಿ ಬಾರದಂತೆ ಅಡಿಕೆಯನ್ನು ಕೊಯಿಲು ಮತ್ತು ಸಂಸ್ಕರಣೆ ಮಾಡಬೇಕು.
- ಈ ಮೂರೂ ಬಗೆಯ ಅಡಿಕೆಯೂ ಕಲಬೆರಕೆಗೆ ಒಳಪಟ್ಟು ಬಣ್ಣ ಹಾಕಲ್ಪಟ್ಟು ಗ್ರಾಹಕರಿಗೆ ತಲುಪುತ್ತದೆ.
- ಹಣ್ಣಾಗದೆ ಇರುವ ಅಡಿಕೆ ಕೊಯಿಲು ಮಾಡಿದರೆ ಅದು ಉತ್ತಮ ಗುಣಮಟ್ಟದ ಚಾಲಿ ಆಗುದಿಲ್ಲ.
- ಸಮರ್ಪಕವಾಗಿ ಒಣಗಿದ ಅಡಿಕೆಯಲ್ಲಿ ಆರೋಗ್ಯಕ್ಕೆ ಹಾನಿಕಾರಕ ಅಂಶಗಳು ಇರುವುದಿಲ್ಲ.
ಸಂಸ್ಕರಣೆ ಅಥವಾ ಒಣಗಿಸುವಿಕೆ:
- ಹಣ್ಣಾದ ಅಡಿಕೆಯನ್ನು ಸಾಧ್ಯವಾದಷ್ಟು ಬೇಗ ಸಿಪ್ಪೆ ಒಣಗುವ ವರೆಗೆ ಒಣಗಿಸಬೇಕು.
- ಸಿಪ್ಪೆಯಲ್ಲಿ ತೇವಾಂಶ ಆರದೆ ಇದ್ದರೆ ಅಡಿಕೆಯ ಭ್ರೂಣವು ಉಬ್ಬಿಕೊಂಡು ಮೊಳಕೆ ಒಡೆಯಲು ತಯಾರಾಗುತ್ತದೆ.
- ಇಂತಹ ಅಡಿಕೆಯಲ್ಲಿ ಬಿಸಿಲು ಮತ್ತು ತೇವಾಂಶದಿಂದಾಗಿ ಭೂಣದ ಭಾಗ ಕೊಳೆತು ತೂತಾಗುತ್ತದೆ. ಅಲ್ಲಿ ಶಿಲೀಂದ್ರ ಸೋಂಕು ಉಂಟಾಗುತ್ತದೆ.
- ಕೆಲವರು ಕೊಯಿಲು ಮಾಡಿ ಅಡಿಕೆ ಚೆನ್ನಾಗಿ ಹಣ್ಣಾಗಬೇಕು, ಗೊನೆಯಿಂದ ಉದುರಬೇಕು ಎಂದು ಮೂರು ನಾಲ್ಕು ದಿನ ರಾಶಿ ಹಾಕುತ್ತಾರೆ.
- ಇಂತಹ ಅಡಿಕೆ ಹಾಳಾಗುತ್ತದೆ. ಕೊಯಿಲು ಮಾಡಿ ಹೆಚ್ಚೆಂದರೆ ಎರಡು ದಿನಗಳ ಒಳಗೆ ಒಣಗಲು ಹಾಕಬೇಕು.
- ಹಣ್ಣು ಅಡಿಕೆಯನ್ನು ಒಣಗಿಸುವಾಗ ಮೊದಲ 15-20 ದಿನಗಳ ಕಾಲ ತೆಳುವಾಗಿ ಬಿಡಿಸಿ ಒಣಗಲು ಹಾಕಬೇಕು.
- ಒಂದರ ಮೇಲೆ ಒಂದು ಅಡಿಕೆ ಬೀಳಬಾರದು. ಮಧ್ಯಾನ್ಹದ ತನಕ ಮಾತ್ರ ಬಿಸಿಲು ಬೀಳುವ ಸ್ಥಳ ಇದ್ದರೆ ಅಲ್ಲಿ ತಾಜಾ ಹಣ್ಣು ಅಡಿಕೆಯನ್ನು ಒಣಗಲು ಹಾಕಬಾರದು.
- ಮುಕ್ಕಾಲಂಶ ಒಣಗಿದ ಅಡಿಕೆಯನ್ನು ಅಲ್ಲಿ ಹಾಕಬಹುದು.
- ತಾಜಾ ಅಡಿಕೆಯನ್ನು ದಿನಪೂರ್ತಿ ಬಿಸಿಲು ಇರುವ ಸ್ಥಳದಲ್ಲಿ ಸಿಪ್ಪೆ ಒಣಗುವ ತನಕ ಆದರೂ ಇರಿಸಬೇಕು.
- ತೇವಾಂಶ ಉಳ್ಳ ನೆಲದಲ್ಲಿ ಒಣಗಿಸಿದರೆ ಆ ಅಡಿಕೆಯ ಗುಣಮಟ್ಟ ಚೆನ್ನಾಗಿರುವುದಿಲ್ಲ.
- ಒಣಗಲು ಹಾಕಿದ ಚಾಲಿ ಅಡಿಕೆಯನ್ನು ವಾರಕ್ಕೊಮ್ಮೆ ತಿರುವಿ ಹಾಕಬೇಕು.
- ಕೆಂಪಡಿಕೆಯನ್ನು ದಿನಾ ಕೈಯಾಡಿಸುತ್ತಾ ಇರಬೇಕು.
- ಬೇಯಿಸಿದ ಕೆಂಪಡಿಕೆಯನ್ನೂ ಸಹ ಮೊದಲ ಮೂರು ನಾಲ್ಕು ದಿನ ದಿನ ಪೂರ್ತಿ ಬಿಸಿಲು ಬೀಳುವ ಜಾಗದಲ್ಲಿ ಒಣಗಿಸಬೇಕು.
- ಈ ಸಮಯದಲ್ಲಿ ಅದಕ್ಕೆ ಏನಾದರೂ ಬೂಸ್ಟ್ ಬಂದರೆ ಅದು ಮತ್ತೆ ಎಷ್ಟೇ ಒಣಗಿದರೂ ಹೋಗುವುದೇ ಇಲ್ಲ.
- ಸುಲಿದು ಬೇಯಿಸಿದ ಅಡಿಕೆ ಚಾಲಿ ಅಡಿಕೆಗಿಂತ ಬೇಗ ಒಣಗುತ್ತದೆ.
- ಯಾವುದೇ ಕಾರಣಕ್ಕೆ ಒಣಗಲು ಹಾಕುವಾಗ ಮೇಲಿಂದ ಮೇಲೆ ಬರುವಂತೆ ದಪ್ಪ ಹಾಕಬಾರದು.
- ಒಣಗುವ ಮುಂಚೆ ಚೀಲದಲ್ಲಿ ತುಂಬಿಡುವುದು, ಮುಚ್ಚಿ ಇಡುವುದು ಮಾಡಬಾರದು.
- ತುಂಬಾ ಹಿಮೆ ಬೀಳುವ ಸಮಯದಲ್ಲಿ ರಾತ್ರೆ ಹೊತ್ತು ಒಳಗೆ ಗಾಳಿಯಾಡುವ ಜಾಗದಲ್ಲಿ ಇಡುವುದು ಉತ್ತಮ.
- ಕೊಯಿಲು ಮಾಡಿದ ದಿನವೇ ಅಥವಾ ಮರುದಿನದ ಒಳಗೆ ಸಿಪ್ಪೆ ತೆಗೆಯಬೇಕು. ಹೆಚ್ಚು ದಿನ ಇಡಬಾರದು.
- ಹೆಕ್ಕಿ ತರುವ ಅಡಿಕೆಯಲ್ಲಿ ತಾಜಾ ಹಣ್ಣು ಅಡಿಕೆಯನ್ನು ಮಾತ್ರ ಒಂದು ಲಾಟ್ ಗೆ ಹಾಕಿ.
- ನಾಲ್ಕು ಐದು ದಿನ ಹಿಂದೆ ಬಿದ್ದ ಸಿಪ್ಪೆ ನೆನೆದಿರುವ ಅಡಿಕೆಯನ್ನು (ವಿಶೇಷವಾಗಿ ಸ್ಪ್ರೀಂಕ್ಲರ್ ನೀರಾವರಿಯ ತೋಟ) ಪ್ರತ್ಯೇಕವಾಗಿ ಒಣಗಲು ಹಾಕಿ.
- ಸಿಪ್ಪೆ ನೆನೆದ ಅಡಿಕೆಯ ಬ್ರೂಣ ಭಾಗ ಉಬ್ಬಿಕೊಂಡು ಅದು ಕಣ್ಣು ತೂತಾತ ಅಡಿಕೆ ಆಗುತ್ತದೆ.
- ಇದನ್ನು ಹೆಕ್ಕುವಾಗ ಪ್ರತ್ಯೇಕಿಸುವುದು ಕಷ್ಟದ ಕೆಲಸವಾಗುತ್ತದೆ.
- ಕಣ್ಣು ತಪ್ಪಿ ಎಡೆಯಲ್ಲಿ ಕೆಲವು ಸೇರಿಕೊಂಡು ಲಾಟ್ ಅಡಿಕೆ ಹಾಳಾಗುತ್ತದೆ.
- ಹನಿ ನೀರಾವರಿಯ ತೋಟದಲ್ಲಿ ಈ ರೀತಿ ನಷ್ಟವಾಗುವುದು ಕಡಿಮೆ.
- ಬೆಳೆಗಾರರಲ್ಲಿ ಕೆಲವರು ತೂಕ ಬರುತ್ತದೆ ಎಂದು ಹದವಾಗಿ ಒಣಗಿಸಿ ಮಾರಾಟ ಮಾಡುತ್ತಾರೆ.
- ದರ ಸ್ವಲ್ಪ ಕಡಿಮೆ ಸಿಕ್ಕರೂ ತೂಕದಲ್ಲಿ ಲಾಭವಾಗುತ್ತದೆ ಎಂಬುದು ಇವರ ವಾದ.
- ಇಂತಹ ಅಡಿಕೆಯನ್ನು ಯಾವುದೇ ವ್ಯಾಪಾರಿ ನಂತರ ಒಣಗಿಸಲಾರ. ಹೇಗಾದರೂ ಅದನ್ನು ಗಿರಾಕಿಗಳಿಗೆ ತಾಗಿಸುತ್ತಾನೆ.
- ಯಾವ ಬೆಳೆಗಾರನೂ ಸರಿಯಾಗಿ ಒಣಗದ ಅಡಿಕೆಯನ್ನು ಮಾರಾಟ ಮಾಡಬೇಡಿ.
- ಇದು ನಮ್ಮ ಕಾಲಿನ ಮೇಲೇ ನಾವೇ ಕಲ್ಲು ಹಾಕಿಕೊಂಡಂತೆ ಆಗುತ್ತದೆ.
- ಇಂತಹ ಅಡಿಕೆಗಳಿಂದಾಗಿಯೇ ಇಂದು ಅಡಿಕೆ ಆರೋಗ್ಯಕ್ಕೆ ಹಾನಿಕರ, ಕ್ಯಾನ್ಸರ್ ಕಾರಕ ಎಂಬ ಅಪವಾದ ಬಂದಿರುವುದು.
ಯಾವ ಅಡಿಕೆಯನ್ನು ದಾಸ್ತಾನು ಇಡಬಾರದು?
- ಸಾಮಾನ್ಯವಾಗಿ ಮಳೆಗಾಲ ಮತ್ತು ಕೊಯಿಲಿಗೆ ಮುಂಚೆ ಬಿದ್ದ ಅಡಿಕೆಯನ್ನು ದಾಸ್ತಾನು ಇಡಬಾರದು.
- ಒಂದು ವೇಳೆ ಬಿದ್ದ ಒಂದು ಎರಡು ದಿನದಲ್ಲೇ ಹೆಕ್ಕಿ ತಕ್ಷಣ ಡ್ರೈಯರ್ ನಲ್ಲಿ ಒಣಗಿಸಿದರೆ ತೊಂದರೆ ಅಗದು.
- ಕೊನೆಯ ಕೊಯಿಲಿನ ಅಡಿಕೆ ಅಥವಾ ಮಾರ್ಚ್ ತಿಂಗಳ ನಂತರ ಹಣ್ಣಾಗುವ ಅಡಿಕೆಯನ್ನು ದಾಸ್ತಾನು ಇಡಬಾರದು.
- ಈ ಅಡಿಕೆಯಲ್ಲಿ ಮೊಳಕೆ ಬರುವ ಬ್ರೂಣ ಭಾಗ ಕೊಯಿಲಿಗೆ ಮುಂಚೆಯೇ ಉಬ್ಬಿರುತ್ತದೆ.
- ಅದು ಮೊಳಕೆ ಒಡೆಯಲು ಸಿದ್ದವಾಗಿರುತ್ತದೆ.ಈ ಸಮಯದಲ್ಲಿ ಅಡಿಕೆ ಮೊಳಕೆ ಬರುವುದು ಸಹ ಬೇಗ.
- ಇಂತಹ ಅಡಿಕೆಯನ್ನು ದಾಸ್ತಾನು ಇಟ್ಟರೆ ಬ್ರೂಣದ ಭಾಗ ಹಾಳಾಗಿ ಅಲ್ಲಿ ಶಿಲೀಂದ್ರ ಸೋಂಕು ಅಥವಾ ಉಗ್ರಾಣ ಕೀಟ ಪ್ರವೇಶವಾಗುತ್ತದೆ.
ಒಣ ಗೋಟಿನ ದಾಸ್ತಾನು:
- ಒಣ ಗೋಟನ್ನು ದಾಸ್ತಾನು ಇಡುವಾಗ ಬಹಳ ಜಾಗರೂಕತೆ ವಹಿಸಬೇಕು.
- ಗೋಟಿನ ಸಿಪ್ಪೆ ಬೇಗ ತೇವಾಂಶವನ್ನು ಹೀರಿಕೊಳ್ಳುತ್ತದೆ.ಪೂರ್ತಿ ಒಣಗಿದ ಗೋಟನ್ನು ಅಂಗಳದಲ್ಲೇ ಗೋಣಿ ಚೀಲಕ್ಕೆ ತುಂಬಿಸಬೇಕು.
- ಗೋಣಿ ಚೀಲದ ಒಳಗೆ ಪ್ಲಾಸ್ಟಿಕ್ ಕೊಟ್ಟೆಯನ್ನು ಹಾಕಿ ಅ ದಿನ ಗೋಣಿಯ ಬಾಯಿ ಕಟ್ಟದೆ ಮರುದಿನ ಬೆಳೆಗ್ಗೆ ಕಟ್ಟಿ ಗಾಳಿಯಾಡದ ಇಲಿ ಹೆಗ್ಗಣಗಳು ಪ್ರವೇಶವಾಗದ ಕೋಣೆಯಲ್ಲಿ ನೆಲದಿಂದ 4 ಇಂಚು ಮೇಲೆ ಇರುವಂತೆ ಅಟ್ಟಿ ಹಾಕಿ ದಾಸ್ತಾನು ಇಡಬೇಕು.
- ಪ್ಲಾಸ್ಟಿಕ್ ಕೊಟ್ಟೆ ಒಡೆಯದಂತೆ ಜಾಗರೂಕತೆ ವಹಿಸಬೇಕು.
- ಹೊಸತಾಗಿ ಕಟ್ಟಿಸಿದ ಗೋಡೌನ್ ನಲ್ಲಿ ತೇವಾಂಶ ಬೆವರುವಿಕೆ ಹೆಚ್ಚಾಗಿರುತ್ತದೆ.
- ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕು.
- ಉಗ್ರಾಣದಲ್ಲಿ ಸಂಗ್ರಹಿಸುವಾಗ ಗಂಧಕದ ಹೊಗೆಯನ್ನು ಕೋಣೆಯ ಒಳಗೆ ತುಂಬುವುದರಿಂದ ಉಗ್ರಾಣ ಕೀಟಗಳು ದೂರವಾಗುತ್ತದೆ.
ಗುಣಮಟ್ಟದ ಅಡಿಕೆ ಒಂದೇ ಅಡಿಕೆ ಬೆಳೆಗಾರರ ಹಿತ ರಕ್ಷಣೆ ಮಾಡಬಲ್ಲುದು. ಉತ್ಪಾದಕರಿಂದ ಗ್ರಾಹಕರ ವರೆಗೆ ಉತ್ತಮ ಗುಣಮಟ್ಟದ ಅಡಿಕೆ ಸರಬರಾಜು ಆದರೆ ಅಡಿಕೆಯನ್ನು ಯಾರಿಂದಲೂ ಬ್ಯಾನ್ ಮಾಡಿಸಲು ಸಾಧ್ಯವಿಲ್ಲ. ಅಡಿಕೆಗೆ ಆತಂಕವೂ ಇಲ್ಲ.