ಕರಿಮೆಣಸು –ಧೀರ್ಘ ಕಾಲ ದಾಸ್ತಾನು ಇಡಲು ಹೇಗೆ ಸಂಸ್ಕರಿಸಬೇಕು?

ಅತ್ಯುತ್ತಮ ಕರಿಮೆಣಸು

ಕರಿಮೆಣಸು ಎಂಬ ಸಾಂಬಾರ ಬೆಳೆ ವರ್ಷವೂ ಒಂದೇ ರೀತಿ ಇಳುವರಿ ಕೊಡುವುದಿಲ್ಲ. ಬೆಲೆಯೂ  ಆಗಾಗ ಭಾರೀ ಏರಿಕೆ – ಇಳಿಕೆ ಆಗುತ್ತಾ ಇರುತ್ತದೆ. ರೋಗಗಳೂ ಹೆಚ್ಚು. ಈ ಬೆಳೆಯನ್ನು  ಎಲ್ಲಾ ಬೆಳೆಗಾರರೂ ಆಪತ್ಕಾಲದ ನಿಧಿಯಾಗಿ ಉಳಿಸಿಕೊಂಡು ಉತ್ತಮ ಬೆಲೆ ಬಂದಾಗ ಮಾರಾಟ ಮಾಡಬೇಕು. ಧೀರ್ಘ ಕಾಲ ದಾಸ್ತಾನು ಇಟ್ಟರೂ ಹಾಳಾಗಲಾರದ ಏಕೈಕ ಕೃಷಿ ಉತ್ಪನ್ನ ಇದು. ಧೀರ್ಘ ಕಾಲ ದಾಸ್ತಾನು ಇಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಹೀಗೆ ಸಂಸ್ಕರಿಸಬೇಕು.

ಕರಿಮೆಣಸು ಕೊಯಿಲು ಪ್ರಾರಂಭವಾಗಿದೆ. ದಾಸ್ತಾನು ಇಡುವವರು ಗುಣಮಟ್ಟದ ಕಡೆಗೆ ಗಮನ ಕೊಡಲೇ ಬೇಕು. ಸರಿಯಾಗಿ ಬಲಿತ ಕಾಳುಗಳನ್ನು ಆರಿಸಿ ಕೊಯಿಲು ಮಾಡಿ ಸರಿಯಾಗಿ ಕಿಲ್ಲಿಂಗ್ ಮಾಡಿ ಒಣಗಿಸಿದರೆ  ಅಂತಹ ಮೆಣಸನ್ನು  ಸುಮಾರು 10 ವರ್ಷ ತನಕ ದಾಸ್ತಾನು ಇಡಬಹುದು. ಎಳೆಯದ್ದು, ಕಿಲ್ಲಿಂಗ್ ಮಾಡದೆ ಇರುವಂತದ್ದು, 2 ವರ್ಷಕ್ಕೆ ಹಾಳಾಗುತ್ತದೆ. ಕಿಲ್ಲಿಂಗ್ ಮತ್ತು ವರ್ಗೀಕರಣ ಬಗ್ಗೆ  ಇಲ್ಲಿದೆ ಅಗತ್ಯ ಮಾಹಿತಿ.

ದೀರ್ಘ ಕಾಲ ದಾಸ್ತಾನು ಇಡುವ ಮೆಣಸು ಕೊಯಿಲು ಮಾಡಲು ಇಷ್ಟು ಬೆಳೆದಿರಬೇಕು.
ದೀರ್ಘ ಕಾಲ ದಾಸ್ತಾನು ಇಡುವ ಮೆಣಸು ಕೊಯಿಲು ಮಾಡಲು ಇಷ್ಟು ಬೆಳೆದಿರಬೇಕು.
  • ನಮ್ಮ ರೈತರಿಗೆ ಕಿಲ್ಲಿಂಗ್ ಎಂದರೆ ಏನು ಎಂಬುದು ಗೊತ್ತು.
  • ಹಿಂದೆ ಬಹಳಷ್ಟು ರೈತರು ವನಿಲ್ಲಾ ಬೆಳೆದವರು.
  • ವನಿಲ್ಲಾ ಸಂಸ್ಕರಣೆಯಲ್ಲಿ  ಕಿಲ್ಲಿಂಗ್ ಎನ್ನುವಂತದ್ದು  ಪ್ರಾಮುಖ್ಯ ಅಂಶವಾಗಿತ್ತು.
  • ಕಿಲ್ಲಿಂಗ್ ಮಾಡಿದಾದ ವನ್ನಿಲ್ಲಾ ಕ್ಕೆ ಹೆಚ್ಚಿನ ಸುವಾಸನೆ ಬರುತ್ತದೆ.
  • ಹಾಗೆಯೇ ಯಾವುದೇ ಶಿಲೀಂದ್ರ, ರಾಸಾಯನಿಕ ಉಳಿಕೆ ಯಾವ ಶೇಷವೂ ಉಳಿಯುವುದಿಲ್ಲ.
  • ಅದೇ  ಸಿದ್ದಾಂತದಲ್ಲಿ ಸ್ವಲ್ಪ ಮಾರ್ಪಾಡುಗಳೊಂದಿಗೆ  ಸಾಂಬಾರ ಬೆಳೆಯಾದ ಕರಿಮೆಣಸನ್ನೂ ಸಂಸ್ಕರಣೆ ಮಾಡಬೇಕು.
ಒಣಗಿದಾಗ ಕಾಳಿನ ಸಿಪ್ಪೆ ಈ ರೀತಿ ಅಂಟಿಕೊಂಡಿದ್ದರೆ ಅದನ್ನು 10 ವರ್ಷಕ್ಕೂ ಹೆಚ್ಚು ಕಾಲ ದಾಸ್ತಾನು ಇಡಬಹುದು.
ಒಣಗಿದಾಗ ಕಾಳಿನ ಸಿಪ್ಪೆ ಈ ರೀತಿ ಅಂಟಿಕೊಂಡಿದ್ದರೆ ಅದನ್ನು 10 ವರ್ಷಕ್ಕೂ ಹೆಚ್ಚು ಕಾಲ ದಾಸ್ತಾನು ಇಡಬಹುದು.

ಕಿಲ್ಲಿಂಗ್ ಹೇಗೆ:

  • ಕೊಯಿಲು ಮಾಡಿದ ಮೆಣಸನ್ನು ಕರೆಯಿಂದ ಕಾಳು ಬಿಡಿಸಿ ಮಾಡಬೇಕಾದ ತಕ್ಷಣದ ಕೆಲಸವೇ ಕಿಲ್ಲಿಂಗ್.
  • ಕಿಲ್ಲಿಂಗ್ ಮಾಡುವುದಕ್ಕೆ ಎರಡು ವಿಧಾನಗಳಿವೆ.
  • ಒಂದು ಕುದಿಯುವ  ಬಿಸಿ ನೀರಿನಲ್ಲಿ ಮೆಣಸನ್ನು ಚೀಲಕ್ಕೆ ತುಂಬಿ  5 ನಿಮಿಷಗಳ ಕಾಲ ಇಟ್ಟು ಅದನ್ನು ಒಣಗಿಸಲಿಕ್ಕೆ ಹಾಕುವುದು.
  • ಎರಡನೆಯದ್ದು, ಬಿಡಿಸಿದ ಮೆಣಸನ್ನು ಸಿಮೆಂಟ್ ನೆಲದಲ್ಲಿ ತೆಳುವಾಗಿ  ಮೇಲೆ ಮೇಲೆ ಬೀಳದಂತೆ  (ಇಂಟರ್ ಲಾಕ್ ಆಗಿದ್ದರೆ ಶೇಡ್ ನೆಟ್ ಹಾಕಿ) ಹರಡಿ ಅದರ ಮೇಲೆ ಪಾರದರ್ಷಕ ಪಾಲಿಥೀನ್ ಶೀಟನ್ನು ಮುಚ್ಚುವುದು.
  • ನೀರು ಕುದಿಸಿ ಅದರಲ್ಲಿ ಅದ್ದಿ ಸಂಸ್ಕರಿಸುವುದು ಸ್ವಲ್ಪ ಕಷ್ಟ. ಉರುವಲು ಬೇಕು. ಜಾಗರೂಕತೆಯೂ ಬೇಕು.
  • ನೆಲದಲ್ಲಿ ಸಿಮೆಂಟ್ ನೆಲ ಅದರೆ ನೇರವಾಗಿ ಹಾಕಬಹುದು. ಇಲ್ಲವಾದರೆ ನೆಲಕ್ಕೆ ಶೇಡ್ ನೆಟ್  ಹಾಕಿ ಅದರ ಮೇಲೆ ಹರಡಿ ಪ್ಲಾಸ್ಟಿಕ್ ಮುಚ್ಚಬಹುದು.
ಕರೆಯಿಂದ ಬಿಡಿಸಿದ ಮೆಣಸು ಕಾಳುಗಳನ್ನು ಒಂದು ದಿನ ಪ್ರಖರ ಬಿಸಿಲಿಗೆ ಹಾಕಿ  ಹೀಗೆ ಪ್ಲಾಸ್ಟಿಕ್ ಮುಚ್ಚಿಟ್ಟರೆ ಅದು ವೈಜ್ಞಾನಿಕ ಕಿಲ್ಲಿಂಗ್. ಇಂತಹ ಮೆಣಸು ಸುರಿ ಬೀಳದು. ಹಾಳಾಗದು.
ಕರೆಯಿಂದ ಬಿಡಿಸಿದ ಮೆಣಸು ಕಾಳುಗಳನ್ನು ಒಂದು ದಿನ ಪ್ರಖರ ಬಿಸಿಲಿಗೆ ಹಾಕಿ ಹೀಗೆ ಪ್ಲಾಸ್ಟಿಕ್ ಮುಚ್ಚಿಟ್ಟರೆ ಅದು ವೈಜ್ಞಾನಿಕ ಕಿಲ್ಲಿಂಗ್. ಇಂತಹ ಮೆಣಸು ಸುರಿ ಬೀಳದು. ಹಾಳಾಗದು.
  • ಪ್ಲಾಸ್ಟಿಕ್ ಮುಚ್ಚಿ ಒಳಗೆ ಬಿಸಿ ಆಗಲು ಗಾಳಿ ಒಳಸೇರದ ರೀತಿ  ಅಡಿಕೆ ಮರದ  ಸಲಾಖೆಯನ್ನು ಇಡುವುದು.
  •  ಪೂರ್ತಿ ಬಿಸಿಲು ಬೀಳುವ ಸ್ಥಳ ಆಗಿರಬೇಕು.
  • ಬಿಸಿಲು ಬಿದ್ದಂತೆ ಒಳಗೆ  ಹರಡಲಾದ ಮೆಣಸು ಬೆವರಿಕೊಳ್ಳುತ್ತದೆ.
  • ಅದರ  ಗರಿಷ್ಠ ನೀರಿನ ಅಂಶ ಹೊರ ಬಿಡುತ್ತದೆ.
  • ಇದನ್ನು ಒಂದು ದಿನ ಹಾಗೆಯೇ ಉಳಿಸಿ ಮರುದಿನ ಅಲ್ಲೇ ಒಣಗಲು ಬಿಡುವುದು.
  • ಈ ವಿಧಾನದಲ್ಲಿ ಕಾಳುಗಳು ಕಪ್ಪಗಾಗಿ ಉತ್ತಮ ಹೊಳಪನ್ನು ಹೊಂದಿರುತ್ತವೆ.
  • ಎರಡೂ ವಿಧಾನದಲ್ಲೂ ಮೆಣಸು ದಟ್ಟ ಕಪ್ಪು ಬಣ್ಣವನ್ನು ಹೊಂದುತ್ತದೆ.
ಚೆನ್ನಾಗಿ ಬೆಳೆದ ಉತ್ತಮ ಗುಣಮಟ್ಟದ ಕರಿಮೆಣಸಿನ ಕಾಳುಗಳು ಹೀಗೆ ಇರುತ್ತವೆ.
ಚೆನ್ನಾಗಿ ಬೆಳೆದ ಉತ್ತಮ ಗುಣಮಟ್ಟದ ಕರಿಮೆಣಸಿನ ಕಾಳುಗಳು ಹೀಗೆ ಇರುತ್ತವೆ.

ಕಿಲ್ಲಿಂಗ್ ಮಾಡುವುದರ ಅನುಕೂಲಗಳು:

ಮೊದಲ ವರ್ಗದ ಕಾಳು ಮೆಣಸಿನ ಕಾಳುಗಳು
ಮೊದಲ ವರ್ಗದ ಕಾಳು ಮೆಣಸಿನ ಕಾಳುಗಳು
  • ಮರವನ್ನು ಕುದಿಯುವ ಬಾಯ್ಲರ್ ನಲ್ಲಿ ಹಾಕಿ( ಅದಕ್ಕೆಂದೇ ವಿಶೇಷ ವ್ಯವಸ್ಥೆ ಇರುತ್ತದೆ) ನಂತರ ಅದನ್ನು ಸಿಗಿದು ನಾಟಾ ಮಾಡಿದರೆ  ಅದಕ್ಕೆ ಜೀವಮಾನದಲ್ಲಿ ಸುರಿ  ಬರುವುದಿಲ್ಲ ಎಂಬುದು ನಮಗೆಲ್ಲಾ ಗೊತ್ತಿದೆ.
  • ಇದಕ್ಕೆ ಕಾರಣ ಮರದಲ್ಲಿ ಸೇರಲ್ಪಟ್ಟಿರುವ ರಸ ಹೋಗಿ ನಂತರ ಕೀಟಗಳು ಬರುವುದಿಲ್ಲ.
  • ಇದೇ ತತ್ವ  ಇಲ್ಲಿಯೂ ಅನ್ವಯ.
ಎರಡನೇ ವರ್ಗದ ಕಾಳು ಮೆಣಸಿನ ಕಾಳುಗಳು
ಎರಡನೇ ವರ್ಗದ ಕಾಳು ಮೆಣಸಿನ ಕಾಳುಗಳು
  • ಮೆಣಸು ಎಷ್ಟೇ ಒಣಗಿದರೂ ಅದರಲ್ಲಿ ಉಳಿದಿರುವ ತೇವಾಂಶದಿಂದ ಅದರಲಿ ಬೂಸ್ಟ್ ಬೆಳೆಯಬಹುದು.
  • ಹಾಗೆಯೇ ಉಗ್ರಾಣ ಕೀಟ (ಡೆಂಕಿ) ಬರಬಹುದು. ಸುರಿಯೂ ಬೀಳಬಹುದು.
  • ಆದರೆ ಕಿಲ್ಲೀಂಗ್ ಮಾಡಿದ ಮೆಣಸಿಗೆ ಅದು ಪಕ್ಕನೆ ಬರುವುದಿಲ್ಲ.
  • ಸಾಮಾನ್ಯ ಒಣಗಿದ ಮೆಣಸಿಗಿಂತ ದುಪ್ಪಟ್ಟು ಕಾಲ ಇದನ್ನು ಶೇಖರಿಸಿ ಇಡಬಹುದು.
ಮೂರನೇ ವರ್ಗದ ಕಾಳು ಮೆಣಸಿನ ಕಾಳುಗಳು
ಮೂರನೇ ವರ್ಗದ ಕಾಳು ಮೆಣಸಿನ ಕಾಳುಗಳು
  • ಯಾವುದೇ ರಾಸಾಯನಿಕ ಉಳಿಕೆಗಳು ಇದ್ದರೂ ಸಹ ಅದು ಕಿಲ್ಲಿಂಗ್ ಸಮಯದಲ್ಲಿ  ನಾಶವಾಗುವುದು.
  • ಈ ವಿಧಾನದಲ್ಲಿ ಅಗತ್ಯಕ್ಕಿಂತ ಹೆಚ್ಚು ತೇವಾಂಶ ಆರುವುದಿಲ್ಲ.
  • ಹಸಿ ಮೆಣಸಿನಲ್ಲಿ ಶೇ.60-70 % ತೇವಾಂಶ ಇರುತ್ತದೆ.
  • ಇದನ್ನು ಒಣಗಿಸಿ 10 %ಕ್ಕೆ ಇಳಿಸಬೇಕು.
  • ಅದಕ್ಕಿಂತ ಹೆಚ್ಚು ತೇವಾಂಶ ಆರಬೇಕಾಗಿಲ್ಲ.
  • ಹಾಗಾಗಿ ಈ ರೀತಿ ಕಿಲ್ಲಿಂಗ್ ಮಾಡಿ ಒಣಗಿಸಿದರೆ ತೂಕ ನಷ್ಟ ಸಹ ಕಡಿಮೆಯಾಗುತ್ತದೆ.
  • ಸಾಮಾನ್ಯ ಒಣಗಿಸಿದ ಮೆಣಸಿಗಿಂತ ಉತ್ತಮ ಸುವಾಸನೆ ಇರುತ್ತದೆ.
  • ಮನೆಯೊಳಗೆ  ದಾಸ್ತಾನು ಇಟ್ಟಿದ್ದರೆ ಪರಿಮಳವೇ ಒಳಗೆ ಮೆಣಸು ಇದೆ ಎಂಬುದನ್ನು ತಿಳಿಸುತ್ತದೆ.

ವರ್ಗೀಕರಣ:

  • ಮೆಣಸು ಕೊಯಿಲು ಮಾಡುವಾಗ ಕೆಲಸದವರನ್ನು ಅವಲಂಭಿಸಲೇ ಬೇಕು.
  • ಆಗ ಎಲ್ಲವನ್ನೂ ಆರಿಸಿ ಕೊಯಿಲು ಮಾಡಲು ಆಗುವುದಿಲ್ಲ. ಕೊಯಿಲು ಮಾಡಿ, ಒಣಗಿಸಿ  ಗೇರುವಾಗ ( Sorting or Garbling) ಅದರಲ್ಲಿ ಉತ್ತಮ, ಮಧ್ಯಮ, ಮತ್ತು ಕೆಳಮಟ್ಟದ್ದನ್ನು ಪ್ರತ್ಯೇಕಿಸಿ ಕೆಳಮಟ್ಟದ ಮೆಣಸನ್ನು ಹಾಗೂ ಮಧ್ಯಮ ಗುಣಮಟ್ಟದ್ದನ್ನು ಪ್ರತ್ಯೇಕವಾಗಿ ಇಟ್ಟು ಎರಡು ಮೂರನೇ ವರ್ಗವನ್ನು ಬೇಗ ಮಾರಾಟ ಮಾಡಬೇಕು.
  • ಮೊದಲ ವರ್ಗ ಆಯ್ದ ಮೆಣಸು ಆಗಿದ್ದು, ಅದಕ್ಕೆ ಮಾರುಕಟ್ಟೆಯಲ್ಲಿ 25-50 ರೂ ಹೆಚ್ಚು ಬೆಲೆ ಇರುತ್ತದೆ.
  • ಮೆಣಸಿನಲ್ಲಿ ಸರಿಯಾಗಿ ಮೂರು ವರ್ಗೀಕರಣ ಮಾಡಬಹುದು (ಚಿತ್ರದಲ್ಲಿ ತೋರಿಸಲಾಗಿದೆ) ಮೊದಲ ವರ್ಗಕ್ಕೆ ಅತ್ಯಧಿಕ ಬಾಳ್ವಿಕೆ.
  • ಎರಡನೆಯದ್ದಕ್ಕೆ ಎರಡು ವರ್ಷ ಮಾತ್ರ ಬಾಳ್ವಿಕೆ. ಮೂರನೆಯದ್ದು, ತಕ್ಷಣ ವಿಲೇವಾರಿ ಮಾಡಬೇಕಾದ  ಉತ್ಪನ್ನ.
  • ಇದರ ಮೇಲ್ಮೈಯಲ್ಲಿ ಸಿಪ್ಪೆ ಅಂಟಿಕೊಂಡ  ಕ್ರಮದಲ್ಲೇ ಇದು ಗೊತ್ತಾಗುತ್ತದೆ.
  • ಮೆಣಸನ್ನು ಗೇರುವಾಗ ಇದನ್ನು ಪ್ರತ್ಯೇಕಿಸಿ ದಾಸ್ತಾನು ಇಡಬಹುದಾದುದನ್ನು ಮಾತ್ರ ಇಡಬೇಕು.

ಈ ವರ್ಗೀಕರಣಕ್ಕೆ ಬೆಳೆಗಾರರು ಆಸ್ಪದ ಕೊಡಬಾರದು:

ಇಂತಹ ಮೆಣಸು ಎಳೆಯದಾಗಿದ್ದು, ಇದನ್ನು ಕೊಯಿಲು ಮಾಡಿದರೆ ಅದು ಹಗುರ ಮತ್ತು ಹೆಚ್ಚು ಸಮಯ ಬಾಳ್ವಿಕೆ ಬಾರದು.
ಇಂತಹ ಮೆಣಸು ಎಳೆಯದಾಗಿದ್ದು, ಇದನ್ನು ಕೊಯಿಲು ಮಾಡಿದರೆ ಅದು ಹಗುರ ಮತ್ತು ಹೆಚ್ಚು ಸಮಯ ಬಾಳ್ವಿಕೆ ಬಾರದು.
  • ಕರಿಮೆಣಸಿನ ಹುಡಿ. ಕರೆ ಬಿಡಿಸುವಾ ಕರೆಯಲ್ಲಿ ಉಳಿದ ಪೊಳ್ಳು ಮತ್ತು ಅತೀ ಸಣ್ಣ ಹುಡಿಯನ್ನು  ಮಾರುಕಟ್ಟೆಯಲ್ಲಿ ಕೊಳ್ಳುವವರು ಇದ್ದಾರೆ.
  • ಇದಕ್ಕೆ ಇರುವ ದರ ಸುಮಾರು 10-15 ರೂ. ಮಾತ್ರ.ಇದನ್ನು ಬೆಳೆಗಾರರು  ಮಾರುಕಟ್ಟೆಗೆ ಕೊಡದೆ ಇರುವುದೇ ಉತ್ತಮ.
  • ಅದನ್ನು ಯಾವುದಾದರೂ ಬೆಳೆಯ ಬುಡಕ್ಕೆ ಹಾಕಿದರೆ ಅದರ ಮೌಲ್ಯದಷ್ಟು ಸಾವಯವ ಗೊಬ್ಬರ ಆಗುತ್ತದೆ.
  • ಈ ಚೂರು ಕರಿಮೆಣಸಿನ ಹುಡಿ ತಯಾರಿಕೆಗೆ  ಬಳಕೆಯಾಗುತ್ತದೆ.
  • ಈ ಉತ್ಪನ್ನ ಮಾರುಕಟ್ಟೆಯಲ್ಲಿ ಇರುವಷ್ಟು ಉತ್ತಮ ಮೆಣಸಿನ ಬೇಡಿಕೆ ಕಡಿಮೆಯಾಗುತ್ತದೆ.
  • ಇದರ ಕೊರತೆ ಆದಾಗ ಇದಕ್ಕಿಂತ ಮೇಲ್ಮಟ್ಟದ ಉತ್ಪನ್ನಕ್ಕೆ ಬೇಡಿಕೆ ಬರುತ್ತದೆ.
  • ಇದು ಬೆಳೆಗಾರರ ಐಚ್ಚಿಕ ವಿಷಯವಾಗಿದ್ದರೂ ಒಟ್ಟಾರೆ ಮೆಣಸಿನ  ಮಾರುಕಟ್ಟೆ, ಗ್ರಾಹಕರ ನಂಬಿಕೆ, ಮತ್ತು ಗುಣಮಟ್ಟ ಮುಂತಾದವುಗಳ ದೃಷ್ಟಿಕೋನದಲ್ಲಿ ಕಳಪೆ ವಸ್ತುಗಳು ಗ್ರಾಹಕರಿಗೆ ತಲುಪದಿರುವುದೇ ವಾಸಿ.

ಕರಿಮೆಣಸು ಬೆಳೆಗಾರರು ಈಗ ಬೆಲೆ ಇಲ್ಲ ಎಂದು ಅದರ ಬಗ್ಗೆ ತಾತ್ಸಾರ ಮಾಡಬೇಡಿ. ಇದು ಕೆಲವು ಸಮಯದಲ್ಲಿ ನಮಗೆ ಕೈ ಹಿಡಿಯುತ್ತದೆ. ಅತೀ ಧೀರ್ಘ ಕಾಲ ದಾಸ್ತಾನು ಇಡಬಹುದಾದ ಈ ಕೃಷಿ ಉತ್ಪನ್ನವನ್ನು  ಜಾಗರೂಕತೆ ಮತ್ತು ವ್ಯವಸ್ಥಿತವಾಗಿ ಸಂಸ್ಕ್ರರಣೆ, ದಾಸ್ತಾನು ಮಾಡುವುದು ಉತ್ತಮ.
.

Leave a Reply

Your email address will not be published. Required fields are marked *

error: Content is protected !!