ಅಡಿಕೆ ಆಮದು ಅಂಕುಶ ಸಡಿಲಿಕೆ- ಮಿಜೋರಾಂ ಸರಕಾರದ ಕ್ರಮ.

ಅಡಿಕೆ ಚೀಲ

ಅಡಿಕೆಯ ಬೆಲೆ ಗಗನಕೇರುವಾಗ ಯಾರಾದರೂ ಅದಕ್ಕೊಂದು ತಡೆ ಹಾಕಲು  ಕಲ್ಲು ಎಸೆಯಲು ಸಿದ್ದತೆ ನಡೆಸುತ್ತಾರೆ.ಇಂದು ಅಡಿಕೆಯ ಬೆಲೆ ಗಗನಕ್ಕೆ ಏರಲು ಬಲವಾದ ಕಾರಣ ಅಡಿಕೆ ಆಮದು ತಡೆ. ಈಗ ಈ ತಡೆಯ ಮೇಲೆ ಅಂಕುಶ ಸಡಿಲವಾದಂತೆ ಕಾಣಿಸುತ್ತಿದೆ. ಮಿಜೋರಾಂ ಸರಕಾರ ಈ ತನಕ ಅಡಿಕೆಯನ್ನು ತನ್ನೊಳಗೆ ಬಾರದಂತೆ ತಡೆದಿದ್ದ ಅಧಿಕಾರಿಗಳನ್ನು ಸರಕು ಸಾಗಾಣಿಕೆ ಸಂಘದ ಒತ್ತಾಯದ ಮೇರೆಗೆ ವರ್ಗಾವಣೆ ಮಾಡಿದೆ. ಈ ಕಾರಣದಿಂದ ಮುಂದೆ ಅಡಿಕೆ ಆಮದಿನ ಮೇಲೆ ಅಂಕುಶ ಸಡಿಲವಾದರೂ ಅಚ್ಚರಿ ಇಲ್ಲ.

ಮಿಜೋರಾಂ ಮೂಲಕ ಮಯನ್ಮಾರ್ ಅಡಿಕೆ ಭಾರತದ ಗಡಿ ಪ್ರವೇಶವಾಗುತ್ತಿರುವುದು ಹಿಂದಿನಿಂದಲೂ  ನಡೆದು ಬಂದಂತಹ ವಿದ್ಯಮಾನ. ಮಯನ್ಮಾರ್ ವಿದೇಶದ ಅಡಿಕೆ ಭಾರತದ ಗಡಿ ರಾಜ್ಯಗಳಿಗೆ ಅಹಾರ ವಸ್ತುಗಳ ಜೊತೆಗೆ ಸರಬರಾಜು ಆಗುತ್ತದೆ. ಗಡಿಯಲ್ಲಿ ದಕ್ಷ ಅಧಿಕಾರಿಗಳು ಇದ್ದರೆ ಅದಕ್ಕೆ ಅವಕಾಶ ಸಿಗುವುದಿಲ್ಲ. ಮಿಜೋರಾಂ ಸರಕಾರದ ನಾಗರೀಕ ಸೇವಾ ಅಧಿಕಾರಿಗಳಾಗಿದ್ದ Maria CT Zuali ಹಾಗೂ ಇನ್ನಿತರ 11 ಮಂದಿಯನ್ನು ಇಲ್ಲಿನ ಸರಕಾರ ವರ್ಗಾವಣೆಗೆ ನೀಡಿ ಸ್ಥಾನ ಪಲ್ಲಟ ಮಾಡಿದೆ. ಈ ವರ್ಗಾವಣೆಗೆ ಹಿಂದೆ ಹಲವಾರೂ ಸರಕು ಸಾಗಾಣಿಕಾ ಸಂಘಗಳು (Transport Organisations) ಮಿಜೋರಾಂ ಸರಕರದ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದವು ಎನ್ನಲಾಗಿದೆ. ಮುಖ್ಯ ಮಂತ್ರಿಗಳಾದ Zoramthanga ಅವರು ಗಡಿ ಜಿಲ್ಲೆಗಳಿಂದ ಈ ತನಕ ಆಮದು ಮಾಡಲು ಅಡ್ಡಿಯಾಗಿದ್ದ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಇದರಿಂದಾಗಿ ಸರಕು ಸಾಗಾಣಿಕೆದಾರರಿಗೆ ಇದ್ದ ಅಡ್ದಿ ದೂರವಾಗಿದೆ.

  • ಮಿಜೋರಾಂ ನ ಗಡಿ ಜಿಲ್ಲೆಯಾದ Champhai ನ ಜಿಲ್ಲಾ ಮ್ಯಾಜಿಸ್ಟೆಟ್ ಆಗಿದ್ದ Maria CT Zuali  ಅವರು ಈ ಹಿಂದೆ ಕಾನೂನು ಬಾಹಿರವಾಗಿ ಸಾಗಾಣಿಕೆಯಾಗುತ್ತಿದ್ದ  ನಾಲ್ಕು ಟ್ರಕ್ ಲೊಡ್  ಅಡಿಕೆಯನ್ನು  ರಾತೋರಾತ್ರೆ ಸೀಸ್ ಮಾಡಿದ್ದರು.
  • 150 ಚೀಲ ಅಡಿಕೆಯನ್ನು ಸ್ಥಳದಲ್ಲೇ ಹೊತ್ತಿಸಲಾಗಿತ್ತು.
  • ಡ್ರೈವರ್ ಗಳ ಫೋನ್ ಸೀಸ್ ಮಾಡಿ ಲಾರಿ ಕೀ ಯನ್ನು ಸಹ ವಶಪಡಿಸಿಕೊಂಡಿದ್ದರು.
  • ಒಟ್ಟಾರೆಯಾಗಿ ಕಳೆದ ನವೆಂಬರ್ ವರೆಗೆ ಮಯನ್ಮಾರ್ ನಿಂದ ಕಳ್ಳಸಾಗಾಣಿಕೆಯಾಗುತ್ತಿದ್ದ ಸುಮಾರು 1108.97 ಟನ್ ಅಡಿಕೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.
  • ಒಟ್ಟು 79 ಅಡಿಕೆ ಕಳ್ಳ ಸಾಗಾಣಿಕೆಯ ಕೇಸ್ ಗಳೂ  ಸಹ  ದಾಖಲಾಗಿದ್ದವು.
  • ಹಾಗೆಯೇ 2020 ರಲ್ಲಿ 1080 ಟನ್ ಅಡಿಕೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.
  • ಇದು ಬಹುತೇಕ ಎಲ್ಲಾ ವರ್ತಕರ, ಸಾಗಾಣಿಕೆದಾರರ ಕೋಪಕ್ಕೆ ಕಾರಣವಾಗಿತ್ತು. 
  • ಸರಕು ಸಾಗಾಣಿಕಾ ಏಜೆನ್ಸಿಯವರು ರಾಜಕೀಯವಾಗಿ ಪ್ರಭಾವಿಗಳಾಗಿದ್ದು, ಈ ಕ್ರಮದ ವಿರುದ್ಧ ದೂರನ್ನೂ ದಾಖಲಿಸಿದ್ದರು.
  • ಅವರ ಒಳಗೆ ಈ ಕುರಿತಂತೆ ಗುದ್ದಾಟಗಳು ನಡೆಯುತ್ತಿತ್ತು.
  • ಯಾವುದೇ ಕಳ್ಳ ಸಾಗಾಣಿಕೆಗ ಅವಕಾಶ ಕೊಡದೆ ಗಡಿ ಜಿಲ್ಲೆಯನ್ನು ಬ್ಲಾಕ್ ಮಾಡಲಾಗಿತ್ತು.
  • ಈ ಎಲ್ಲಾ ಅಡಿಕೆಗಳೂ ಕಳ್ಳ ಸಾಗಾಣಿಕೆ ಮೂಲಕ  ಭಾರತಕ್ಕೆ ರವಾನೆಯಾಗುವಂತದ್ದು.
  • Champhai ಮತ್ತು Lawngtlai  ಗಡಿ ಜಿಲ್ಲೆಗಳ ಮೂಲಕ ನಮ್ಮ ದೇಶಕ್ಕೆ ಮಯನ್ಮಾರ್ ನಿಂದ ಅಡಿಕೆ ಬರುತ್ತಿತ್ತು.

ಅಡಿಕೆ ಆಮದು ಮತ್ತು ಮಾರುಕಟ್ಟೆ:

  • ಈ ಆಧಿಕಾರಿಗಳು ಮುಖ್ಯವಾಗಿ ಮಯನ್ಮಾರ್ ಮೂಲಕ ಆಮದು ಆಗುತ್ತಿದ್ದ ಅಡಿಕೆಯನ್ನು ಒಳ ಪ್ರವೇಶಿಸಲು ಬಿಡುತ್ತಿರಲಿಲ್ಲ.
  • ಇವರನ್ನು ಈಗ ಸಂಬಂಧ ಪಡದ ಇಲಾಖೆಗಳಿಗೆ ವರ್ಗಾವಣೆ ಮಾಡಲಾಗಿದೆ.
  • ಈ ಆದೇಶ ಬುಧವಾರ ಹೊರಬಿದ್ದಿದ್ದು, ಸುದ್ದಿ ಹಬ್ಬುತ್ತಿದ್ದಂತೆ ನಮ್ಮಲ್ಲಿ ಅಡಿಕೆ ವ್ಯವಹಾರದವರಿಗೆ ನಡುಕ ಉಂಟಾಗಿದೆ.
  • ಆಮದು ಪ್ರಾರಂಭವಾದರೆ ಇಲ್ಲಿ ದರ ಇಳಿಕೆಯಾಗುತ್ತದೆ. ಸ್ಟಾಕುಗಳನ್ನು ಕ್ಲೀಯರ್ ಮಾಡುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ದರ ಇಳಿಕೆಗೆ ಮುಂದಾಗಿದ್ದಾರೆ. 
  • ಶನಿವಾರ ಮಕರ ಸಂಕ್ರಮನದ ಕಾರಣ ಮಾರುಕಟ್ಟೆ ಇರಲಿಲ್ಲ.
  • ಭಾನುವಾರ ಮಾರುಕಟ್ಟೆ ರಜೆ.
  • ಇದರ ನಿಜವಾದ ಪರಿಣಾಮ ಸೋಮವಾರದ ಮಾರುಕಟ್ಟೆಯ ದರ ನಿಗದಿ ಟೆಂಡರ್ ಪ್ರಕ್ರಿಯೆಯಲ್ಲಿ ಗೊತ್ತಾಗಬೇಕು.
  • ಆದರೆ ಅಂದು ದರ ಸ್ಥಿರವಾಗಿ ಮುಂದುವರಿದಿದೆ.
  • ಈಗಾಗಲೇ 46,000-47,000 ದಲ್ಲಿ ಖರೀದಿ ಮಾಡುತ್ತಿದ್ದ ರಾಶಿ ಅಡಿಕೆಯನ್ನು ಖಾಸಗಿಯವರು 44,000-45,000 ಕ್ಕೆ ದರ ಇಳಿಕೆ ಮಾಡಿದ್ದಾರೆ ಎಂಬ ಸುದ್ದಿಗಳು ಕೇಳಿ  ಬರುತ್ತಿವೆ.
  • ಹಾಗೆಂದು ಶನಿವಾರ ಕೆಲವು ಕಡೆ ಕ್ಯಾಂಪ್ಕೋ ಖರೀದಿ ಕೇಂದ್ರಗಳು ತೆರೆದಿತ್ತು.ಸೋಮವಾರವೂ ಕ್ಯಾಂಪ್ಕೋ ತನ್ನ ದರವನ್ನು ವ್ಯತ್ಯಾಸ ಮಾಡಿಲ್ಲ.
ಅಡಿಕೆ ತುಂಬಿದ ಚೀಲ

ಅಂತಹ ತೊಂದರೆ ಆಗಲಾರದು:

  • ಇಂತಹ ಸಂಧರ್ಭಗಳಲ್ಲಿ ವ್ಯಾಪಾರಿಗಳು ಅವಕಾಶವನ್ನು ನಗದೀಕರಣ ಮಾಡಿಕೊಳ್ಳುತ್ತಾರೆ.
  • ಬೆಲೆ ಇಳಿಕೆ ಮಾಡಿ ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವೂ ಇರುತ್ತದೆ.
  • ಅಧಿಕಾರಿಗಳ ವರ್ಗಾವಣೆ ಆಗಿದೆ ಮಾತ್ರ. ಹಾಗೆಂದು ಗಡಿಯಲ್ಲಿ ಅಡಿಕೆ ಪ್ರವೇಶವಾದ ಸೂಚನೆ ಇಲ್ಲ.
  • ಹಾಗೆಯೇ ಸೀಸ್ ಆದ ಅಡಿಕೆಯನ್ನು  ಮುಕ್ತ ಮಾಡುದ ಸುದ್ದಿಯೂ ಇಲ್ಲ.
  • ಕೆಲವೊಮ್ಮೆ ಇದೆಲ್ಲಾ ಸುದ್ದಿಗಳನ್ನು ಕೇವಲ ಮಾರುಕಟ್ಟೆ ಅಸ್ಥಿರತೆ ಉಂಟು ಮಾಡುವುದಕ್ಕಾಗಿಯೇ ಹಬ್ಬಿಸುವುದೂ ಇದೆ.
  • ಸುದ್ದಿ ನಿಜವೇ ಆಗಿದ್ದರೆ ಕೆಲವು ಸಮಯದ ತನಕ ಸ್ವಲ್ಪ ದರ ಇಳಿಕೆ ಆಗಲೂ ಬಹುದು. ಅಥವಾ ಏರಿಕೆಯಾಗದೆ ಹಾಗೆಯೇ ಮುಂದುವರಿಯಬಹುದು.
  • ಅಡಿಕೆಗೆ ಭಾರೀ ಬೆಲೆ ಕುಸಿತ ಉಂಟಾಗಲಾರದು ಎಂಬುದಾಗಿ ಕೆಲವು ಅನುಭವಿಗಳು ಹೇಳುತ್ತಾರೆ.

ನಮ್ಮ ದೇಶ ಇಡೀ ಪ್ರಪಂಚದಲ್ಲಿ 80% ಅಡಿಕೆ ಉತ್ಪಾದನೆ ಮಾಡುವ ದೇಶವಾಗಿದ್ದು, ಆಮದು ಅಡಿಕೆ ಮಾರುಕಟ್ಟೆಯಲ್ಲಿ  ತಾತ್ಕಾಲಿಕ  ಸಂಚಲನವನ್ನು ಉಂಟು ಮಾಡಬಹುದೇ ಹೊರತು  ಅಲ್ಲೋಲಕಲ್ಲೋಲ ಮಾಡಲಾರದು. ಚೀನಾ ದೇಶದಲ್ಲಿ ಅಡಿಕೆ ಬೆಳೆ ಪ್ರದೇಶ ವ್ಯಾಪಕವಾಗಿ ಹೆಚ್ಚಳವಾಗುತ್ತಿದ್ದು. ನಮ್ಮ ದೇಶಕ್ಕೆ ಇದರ ಲಗ್ಗೆ ಪ್ರಾರಂಭವಾದರೆ ಮಾತ್ರ ದೇಶದ ಅಡಿಕೆ ಬೆಳೆಗಾರರಿಗೆ ತೊಂದರೆ ಉಂಟಾಗಲೂಬಹುದು ಎಂಬುದಾಗಿ ಹೇಳುತ್ತಾರೆ.

Leave a Reply

Your email address will not be published. Required fields are marked *

error: Content is protected !!