ಭಾರತದಲ್ಲಿ 2 ನೇ ಹಸುರು ಕ್ರಾಂತಿ ನೈಸರ್ಗಿಕ ಕೃಷಿಗೆ ಒತ್ತು.

2 ನೇ ಹಸುರು ಕ್ರಾಂತಿಯ ಅಶಯ

ನಮ್ಮ ದೇಶಕ್ಕೆ 2 ನೇ ಹಸುರು ಕ್ರಾಂತಿಯ ಅವಶ್ಯಕತೆ ಇದೆ. ಈ ಕ್ರಾಂತಿ ಮುಂದಿನ ತಲೆಮಾರಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು next-generation reform ಸುಸ್ಥಿರ ಮತ್ತು ಪರಿಸರ ಸ್ನೇಹಿಯಾಗಿ  ಹವಾಮಾನ ವೈಪರೀತ್ಯಗಳಿಗೆ ಹೊಂದಾಣಿಕೆಯಾಗುವಂತಿರಬೇಕು ಎಂಬ ಧ್ಯೇಯೋದ್ದೇಶಗಳಿವೆ. ನಮ್ಮ ದೇಶದ ಪ್ರಧಾನಿಗಳು, ರಕ್ಷಣಾ ಮಂತ್ರಿಗಳು ಹಾಗೂ ಕೃಷಿ ಮಂತ್ರಿಗಳ ಹಲವು ಹೇಳಿಕೆಗಳ ಪ್ರಕಾರ ಈ 2 ನೇ ಹಸಿರು ಕ್ರಾಂತಿಯಲ್ಲಿ ನೈಸರ್ಗಿಕ ಕೃಷಿಗೆ ಮಹತ್ವ ಬರಲಿದೆ ಎಂದು ಕಾಣಿಸುತ್ತದೆ.

ನೈಸರ್ಗಿಕ ಕೃಷಿ ವಿಧಾನವನ್ನು ಅನುಸರಿಸುವ ಮೂಲಕ ನಮ್ಮ ದೇಶದ ರೈತರು ಹೊಸ ಹಸುರು ಕ್ರಾಂತಿಯನ್ನು ಹುಟ್ಟು ಹಾಕಬೇಕಾಗಿದೆ ಎಂಬುದು ಕೇಂದ್ರ ರಕ್ಷಣಾ ಸಚಿವರಾದ ಶ್ರೀ  ಅಮಿತ್ ಶಾ ಇವರ ಇಂಗಿತ. ಭಾರತ ದೇಶದಲ್ಲಿ ರಸಗೊಬ್ಬರಗಳ ವಿಪರೀತ ಬಳಕೆಯಿಂದಾಗಿ ಮಣ್ಣು ಹಾಳಾಗಿದೆ. ನೀರು ಹಾಳಾಗುತ್ತಿದೆ. ಹಾಗೆಯೇ ಮಾನವ ಆರೋಗ್ಯವೂ ಹಾಳಾಗುತ್ತಿದೆ. ಹಾಗಾಗಿ ರಾಸಾಯನಿಕ ಕೃಷಿ ಕಡಿಮೆ ಮಾಡಿ ನೈಸರ್ಗಿಕ ಕೃಷಿಗೆ ಪರಿವರ್ತನೆಯಾಗಬೇಕು ಎಂಬುದು ಅವರ ಇಂಗಿತ.

ಗುಜರಾತ್ ಸರಕಾರ ನೈಸ್ಸರ್ಗಿಕ ಕೃಷಿಯತ್ತ ಬದಲಾವಣೆ ಹೊಂದುತ್ತಿದ್ದು, ಸರಕಾರದ ಪೂರ್ಣ ಬೆಂಬಲದಲ್ಲಿ ಈ ಕೃಷಿ ವಿಧಾನವನ್ನು ಪ್ರಚಾರ ಮಾಡುತ್ತಿದೆ. ಈ ಕೃಷಿಯ ಬಗ್ಗೆ ಮಾಹಿತಿಗಾಗಿ ಮೊಬೈಲ್ ಆಪ್ ಹಾಗೂ  ಈ ವಿಧಾನದಲ್ಲಿ ಬೆಳೆದ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗುವಂತೆ ಮೊಬೈಲ್ ವ್ಯಾನ್ ಮುಂತಾದ ವ್ಯವಸ್ಥೆಗಳನ್ನು ಮಾಡಿದೆ. ರೈತರು ರೈತ ಉತ್ಪಾದಕ ಸಂಘಗಳನ್ನು ಹುಟ್ಟು ಹಾಕುವ ಮೂಲಕ ನೈಸರ್ಗಿಕ ಕೃಷಿ ಮಾಡುತ್ತಾ ತಮ್ಮ ಉತ್ಪನ್ನವನ್ನು ಮಾರುಕಟ್ಟೆ ಮಾಡಬೇಕು ಎಂಬುದು ಸರಕಾರದ ಇಂಗಿತ.

  • ಹಲವಾರು ವರ್ಷಗಳಿಂದ ರೈತರು ನೈಸರ್ಗಿಕ ವಿಧಾನದಲ್ಲಿ ಕೃಷಿ ಮಾಡುತ್ತಾ  ಮಣ್ಣಿನ ಜೀವಂತಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ.
  • ಇತ್ತೀಚಿನ ವರ್ಷಗಳಲ್ಲಿ ರಸಗೊಬ್ಬರಗಳು ಬಂದು ಅದನ್ನು ಅಸಮರ್ಪಕವಾಗಿ ಬಳಕೆ ಮಾಡಿ ಮಣ್ಣು, ನೀರು ಹಾಳಾಗುವಂತಾಗಿದೆ.
  • ಮತ್ತೆ ಮಣ್ಣಿಗೆ ಜೀವಂತಿಕೆ ಬರಬೇಕಿದ್ದರೆ ಜನ ನೈಸರ್ಗಿಕ ಕೃಷಿಯತ್ತ ಪರಿವರ್ತನೆ ಆಗಲೇ ಬೇಕು ಎಂಬುದು ನಮ್ಮ ಪ್ರಧಾನಮಂತ್ರಿಗಳ ಆಶಯವೂ ಆಗಿರುತ್ತದೆ.

ಮುಂದಿನ ದಿನಗಳಲ್ಲಿ ರಸಗೊಬ್ಬರಗಳು ನಮ್ಮ ಕೈಗೆಟಕದಷ್ಟು ದುಬಾರಿಯಾಗುವುದಂತೂ ನಿಜ. ಎಲ್ಲಾ ರಸಗೊಬ್ಬರಗಳಿಗೂ ನಾವು ಬೇರೆ ದೇಶಗಳನ್ನು ಅವಲಂಬಿಸಿದ್ದೇವೆ. ನಮ್ಮ ಜುಟ್ಟು ಅವರಲ್ಲಿ ಕೊಟ್ಟು ಕೃಷಿ ಮಾಡುವುದಕ್ಕಿಂತ ಇದು ದೇಶೀಯವಾಗಿ ಇರುವ ಮೂಲವಸ್ತುಗಳ ಸಹಾಯದಿಂದ ಕೃಷಿ ಮಾಡುವುದು ಉತ್ತಮ.

ಪುರಾತನ ಕಾಲದ ನೈಸರ್ಗಿಕ ಕೃಷಿ

ನೈಸರ್ಗಿಕ ಕೃಷಿ ಎಂದರೆ ಏನು?

  • ಸರಕಾರ ಹೇಳುವಂತೆ ಶೂನ್ಯ ಬಂಡವಾಳದ ಕೃಷಿ ವಿಧಾನ ಏನಿದೆಯೋ ಅದು ಉತ್ತಮ ಎಂಬ ಅಭಿಪ್ರಾಯ ಇದೆ.
  • ಒಂದು ಹಸುವಿನ ಸಗಣಿ, ಗಂಜಳ, ದ್ವಿದಳ ಧಾನ್ಯದ ಹಿಟ್ಟು ಇತ್ಯಾದಿ ಗಳನ್ನು ಬಳಸಿ ಗೊಬ್ಬರ.
  • ಬೆಳ್ಳುಳ್ಳಿ, ಸಾಸುವೆ, ಮಜ್ಜಿಗೆ, ಅರಶಿನ, ಶುಂಠಿ ಇತ್ಯಾದಿಗಳನ್ನು ಬಳಸಿ  ಸಸ್ಯ ಸಂರಕ್ಷಣೆ ಇತ್ಯಾದಿಗಳು ನಮಗೆಲ್ಲಾ ಗೊತ್ತಿರುವ ನೈಸರ್ಗಿಕ ಕೃಷಿ ವಿಧಾನದ ಪರಿಕರಗಳು. 
  • ಇವುಗಳಿಂದ ಕೃಷಿ ಆಗದೆಂದಲ್ಲ. ಆದರೆ ಅಧಿಕ ಉತ್ಪಾದನೆಗೆ ಇವು ಎಷ್ಟು ಸಹಾಯಕ ಎಂಬುದು ಧೀರ್ಘಾವದಿಯಲ್ಲಿ ಹಾಗೂ ಸಾರ್ವತ್ರಿಕ ಬಳಕೆಯಲ್ಲಿ ತಿಳಿಯಬೇಕಷ್ಟೇ.
  • ನಮ್ಮ ಹಿರಿಯರು ಅನುಸರಿಸಿಕೊಂಡು ಬಂದ ನೈಸರ್ಗಿಕ ಕೃಷಿ ವಿಧಾನ ಎಂದರೆ ಅದಲ್ಲ. 
  • ನಿಸರ್ಗದಲ್ಲಿ ಲಭ್ಯವಾಗುವ ವಸ್ತುಗಳನ್ನು ಮಣ್ಣಿಗೆ ಸೇರಿಸಿ ಅವುಗಳಿಂದ ಗೊಬ್ಬರದ ತೃಷೆಯನ್ನು ತೀರಿಸಿಕೊಳ್ಳುತ್ತಿದ್ದರು.
  • ಬಳಕೆ ಮಾಡುವ ಮೂಲವಸ್ತುಗಳು ನೈಸರ್ಗಿಕ ಮೂಲದವುಗಳಾಗಿದ್ದರಿಂದ ರೋಗ, ರುಜಿನಗಳು ಕಡಿಮೆ ಇದ್ದವು.
  • ಆ ವಿಧಾನದಲ್ಲಿ ನಿಯಮಿತ ಇಳುವರಿಯಲ್ಲಿ ರೈತರು ತೃಪ್ತರಾಗಿದ್ದರು.ಆ ಸಮಯದಲ್ಲಿ ಸಾಕಷ್ಟು ಮೂಲವಸ್ತುಗಳ ಲಭ್ಯತೆ ಇತ್ತು.
  • ವೈವಿಧ್ಯಮಯ ಮರಮಟ್ಟುಗಳು ಸೊಪ್ಪು ಸದೆಗಳು ಇದ್ದವು. ಅವುಗಳ ಸೊಪ್ಪು ತರಗೆಲೆಗಳನ್ನು ಬಳಸಿ ಬೆಳೆ  ಪೋಷಣೆ ಮಾಡಲಾಗುತ್ತಿತ್ತು.
  • ಈಗಲೂ ಅದೇ ಪ್ರಮಾಣದಲ್ಲಿ ತರಗೆಲೆ, ಸೊಪ್ಪು ಸದೆ, ಹಿಂದೆ ಹಾಕುತ್ತಿದ್ದ ಪ್ರಮಾಣದಲ್ಲಿ ಹಸುವಿನ ತ್ಯಾಜ್ಯದಿಂದೊಡಗೂಡಿದ ಕೊಟ್ಟಿಗೆ ಗೊಬ್ಬರ ಇತ್ಯಾದಿ ನೈಸರ್ಗಿಕ ಮೂಲವಸ್ತುಗಳನ್ನು ಮಣ್ಣಿಗೆ ಸೇರಿಸಿ ಕೃಷಿ ಮಾಡುವುದಾದರೆ ಅಂದು ಅವರು ಪಡೆಯುತ್ತಿದ್ದ ಇಳುವರಿಯಷ್ಟೇ ಇಳುವರಿಯನ್ನು  ಪಡೆಯಲು ಸಾಧ್ಯ.

ಯಾಕೆ ನೈಸರ್ಗಿಕ ಕೃಷಿ ಬಿಡಬೇಕಾಗಿ ಬಂತು?

  • ನಾನು ಒಬ್ಬ ಕೃಷಿಕ, ನಮ್ಮ ಸುತ್ತಮುತ್ತ ರಸ್ತೆ ಬದಿಗಳಲ್ಲಿ ಒಂದಷ್ಟು ಸೊಪ್ಪಿನ ಸಸ್ಯಗಳು, ಹುಲ್ಲು ತರಗೆಲೆ ಇತ್ಯಾದಿಗಳು ಇವೆ.
  • ಅವನ್ನು ಕಂಡಾಗೆಲ್ಲಾ ನನಗೆ ಅದನ್ನು ತಂದು ಹೊಲಕ್ಕೆ ಹಾಕಬೇಕೆನ್ನಿಸುತ್ತದೆ.
  • ಆದರೆ ತಂದು ಹಾಕಿಸಲು ಜನವೇ ಇಲ್ಲ. ಇದ್ದರೂ ಅವರ ಮಜೂರಿಯಲ್ಲಿ ಅದನ್ನು ತಂದು ಹಾಕಿಸಿದರೆ ಅವರ  ಸಂಬಳ ಕೊಡಲು ದುಡ್ಡೆಷ್ಟು ಬೇಕಾದೀತು?
  • ಹಾಗಾಗಿ ಅವೆಲ್ಲಾ ಮಳೆಗಾಲ ಬಂದಾಕ್ಷಣ ಮಳೆ ನೀರಿನ ಜೊತೆಗೆ ಕೊಚ್ಚಿ ಹಳ್ಳ ಹೊಳೆ ಸೇರಿ ಸಮುದ್ರ ಪಾಲಾಗುತ್ತದೆ.
  • ಬೇಸರವಾಗುತ್ತದೆ. ಆದರೆ ನಿರ್ವಾಹವೇ ಇಲ್ಲದ ಸ್ಥಿತಿ. ಇದು ಬಹುಷ ಎಲ್ಲರ ಸ್ಥಿತಿಯೂ.ಕೃಷಿ ಮಾಡುವ ಎಲ್ಲರಿಗೂ ಗೊತ್ತಿದೆ ನೈಸರ್ಗಿಕ ಕೃಷಿಯ ಅನುಕೂಲಗಳು ಎಷ್ಟು ಎಂದು.
  • ಆದರೆ ಯಾರಿಗೂ  ಅದು ಕೈಗೆಟುಕದ ಸ್ಥಿತಿ ಈಗ ಉಂಟಾಗಿದೆ.

ಹಿಂದೆ ಹಸು ಸಾಕುತ್ತಿದ್ದವರೆಲ್ಲಾ ಹಸುಗಳ ಕಾಲಿನ ಬುಡಕ್ಕೆ ಸೊಪ್ಪು ತರೆಗೆಲೆ ಹಾಕುತ್ತಿದ್ದರು. ಈಗ ಅದನ್ನು ಎಲ್ಲರೂ ಬಿಟ್ಟಿದ್ದಾರೆ. ಯಾಕೆಂದರೆ ಸೊಪ್ಪು ತರುವ ಖರ್ಚು ನೋಡಿದರೆ ಇದು ಯಾರಿಗೂ ಬೇಡ. ಸೊಪ್ಪು ಸಹ ಇಲ್ಲದ ಸ್ಥಿತಿ. ಕೊಟ್ಟಿಗೆಯಲ್ಲಿ ಹಸುಗಳ ಕಾಲಬುಡಕ್ಕೆ ಹಾಕಿ  ತಯಾರಾಗುವ ಗೊಬ್ಬರಕ್ಕೆ ಸರಿಸಾಟಿಯಾದ ಗೊಬ್ಬರ ಬೇರೊಂದಿಲ್ಲ.

  • ನೈಸರ್ಗಿಕ ಕೃಷಿ ಪರಿಕರಗಳೆಲ್ಲಾ ಕೈಗೆಟಕದಷ್ಟು ದುಬಾರಿಯಾಗುತ್ತಿವೆ. ನೈಸರ್ಗಿಕ ಮೂಲವಸ್ತುಗಳ ಲಭ್ಯತೆ ಕಡಿಮೆಯಾಗುತ್ತಿದೆ.
  • ಉದಾಹರಣೆಗೆ ಹಿಂದೆ ನಮ್ಮ ಕರಾವಳಿ  ಮಲೆನಾಡಿನಲ್ಲಿ ಕಾಸರಕ ಸ್ಟ್ರಿಕ್ನೋಸ್ ನಕ್ಸ್-ವೊಮಿಕ Strychnos nux –vomica ಎಂಬ ಸಸ್ಯ ಹಾಗೆಯೇ ನೆಕ್ಕಿ, ಎಕ್ಕ, ಮುಂತಾದ ಹಲವಾರು ಬಗೆಯ ಕೀಟ ನಿಯಂತ್ರಕ ಸಸ್ಯಗಳು ನಮ ದಕ್ಷಿಣ ಭಾರತದ ಕಾಡುಗಳಲ್ಲಿ ಇದ್ದವು.
  • ಈಗ ಅವುಗಳು ಹುಡುಕಿದರೂ ಸಿಗದ ಸ್ಥಿತಿ ಬಂದಿದೆ. ಈಗ ನಮ್ಮ ಸುತ್ತಮುತ್ತ ಮಣ್ಣಿಗೆ ಸೇರಿ ಕರಗಿದರೂ ಸತ್ವಗಳೇ  ಇಲ್ಲದ ಸೊಪ್ಪು ಸದೆಗಳೇ ಹೆಚ್ಚು.
  • ಇನ್ನು ಕಾಡುಗಳಲ್ಲಿ ಇರುವ ಸೊಪ್ಪು ಸದೆ, ತರಗೆಲೆಗಳನ್ನು ಕೃಷಿಕ ಕಾನೂನು ರೀತ್ಯಾ ತಂದು ಬಳಸುವಂತಿಲ್ಲ. ಹೀಗಿರುವಾಗ  ನೈಸರ್ಗಿಕ ಕೃಷಿಗೆ ಅವಕಾಶ ಕಡಿಮೆಯಾಗಿದೆ.

ಇಂದು ಒಂದು ಬುಟ್ಟಿ ಕೊಟ್ಟಿಗೆ ಗೊಬ್ಬರಕ್ಕೆ 50-60 ರೂ. ಈಗ ಬೆಲೆ ಇದೆ. ಅದರ ತೂಕ ಹೆಚ್ಚೆಂದರೆ 15-25 ಕಿಲೋ( ಹಸಿ ತೂಕ) ಹಾಗೆಯೇ ಒಂದು ಹೆಡಿಗೆ ತರಗೆಲೆ ತರಬೇಕಾದರೆ ಕನಿಷ್ಟ 25 ರೂ. ಮಜೂರಿ ಆಗುತ್ತದೆ. ಸೊಪ್ಪು ಒಂದು ಹೊರೆ ತರಲು  ಸಹ  ರೂ.25  ಖರ್ಚು ಬೀಳುತ್ತದೆ.ಅಂದರೆ ಒಂದು ಅಡಿಕೆ ಮರ ಸಾಕಲು ಬೇಕಾಗುವ ಗೊಬ್ಬರ ಒಟ್ಟುಗೂಡಿಸಲು ಕನಿಷ್ಟ 100 ರೂ. ಖರ್ಚು ಇದೆ. ಅದರ ಸಾಗಾಣಿಕೆ ಮತ್ತು ಬಳಕೆಗೆ ಮತ್ತೆ ಖರ್ಚು ಇದೆ. ಇಷ್ಟು ದುಬಾರಿಯಾದ ಸಾವಯವ ಮೂಲವಸ್ತುಗಳನ್ನು ಬಳಕೆ ಮಾಡಿ ಕೃಷಿ ಮಾಡಿದರೆ ಅಡಿಕೆಯಂತಹ ಬೆಳೆಗೆ ಈಗಿನ ದರವೂ ಸಾಲದಾಗುತ್ತದೆ. ಇನ್ನು ಭತ್ತ, ರಾಗಿ, ಜೋಳ ಮುಂತಾದ ಧವಸ ಧಾನ್ಯಗಳ ಬೆಳೆಗೆ  ಈ ದುಬಾರಿ ಬೆಲೆಯ ಮೂಲವಸ್ತುಗಳನ್ನು ತಂದು ಹಾಕಿ ಬೆಳೆ ಬೆಳೆದರಂತೂ ರೈತನಿಗೆ ಕೃಷಿ ಬೇಡ ಎನ್ನಿಸುವಷ್ಟು ನಷ್ಟವಾಗುತ್ತದೆ.

ಹೇಳುವುದು ಸುಲಭ ಮಾಡುವುದು ಕಷ್ಟ:

  • ಸರಕಾರ ತಮ್ಮ ಕೃಪಾಪೋಶಿತ ಕೃಷಿ ವಿಶ್ವ ವಿಧ್ಯಾನಿಲಯ, ಕೃಷಿ ಸಂಶೋಧನಾ ಕೇಂದ್ರ, ಅಭಿವೃದ್ದಿ ಇಲಾಖೆಗಳ ಮೂಲಕ ಕೃಷಿ ಮಾಡುವ ರೈತರಿಗೆ ಎಷ್ಟೂ ಉಪದೇಶ ಮಾಡಿಸಬಹುದು.
  • ತಾವು ವಹಿಸಿಕೊಟ್ಟ ಕೆಲಸವನ್ನು ಮುಗಿಸಲು ತಂತ್ರಜ್ಞಾನವನ್ನು ಸೃಷ್ಟಿ ಮಾಡಬಹುದು.
  • ಆದರೆ ಅದು ಕೃಷಿ ಹೊಲದಲ್ಲಿ ಫಲ ಕೊಡಬೇಕು. ಫಲ ಕೊಡದೆ ಇದ್ದಲ್ಲಿ ಅದಕ್ಕೆ ಜವಾಬ್ದಾರಿಯನ್ನೂ ಅವರು ಹೊರುವಂತಿರಬೇಕು. 
  • ರೈತರಿಗೆ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಕೊಡಬಲ್ಲ ತಂತ್ರಜ್ಞಾನ  ಬೇಕು.
  • ಅದನ್ನು ಎಲ್ಲಿದ್ದರೂ ಹುಡುಕಿ ಅಳವಡಿಸಿಕೊಳ್ಳುವಷ್ಟು ರೈತರೆಲ್ಲರೂ ಮುಂದುವರಿದಿದ್ದಾರೆ.
  • ಆದರೆ ಇಲ್ಲಿ ಹೇಳುವವರು ಮಾಡಿ ತೋರಿಸುವುದಿಲ್ಲ. ಇದೇ ಆಗಿರುವ ಸಮಸ್ಯೆ.
  • ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಸಂಶೊಧನಾ ಸಂಸ್ಥೆಗಳು, ಅಥವಾ ಕೃಷಿ ವಿಶ್ವ ವಿಧ್ಯಾನಿಲಯಗಳು ರಸ ಗೊಬ್ಬರದ ಬಳಕೆಯಲ್ಲಿ ಹೇಗೆ ಇಳುವರಿ ಕ್ಷಮತೆಯನ್ನು ಪ್ರಾತ್ಯಕ್ಷಿಕೆ ಮಾಡಿ ತೋರಿಸುತ್ತವೆಯೋ ಅದೇ ರೀತಿಯಲ್ಲಿ
  • ತಮ್ಮ ಪ್ರಾತ್ಯಕ್ಷಿಕಾ ತಾಕುಗಳಲ್ಲಿ ಇದನ್ನು ಪ್ರಯೋಗ ಮಾಡಿ 4-5 ವರ್ಷ ಅಧ್ಯಯನ ನಡೆಸಿ, ಖರ್ಚು ವೆಚ್ಚಗಳು ಮತ್ತು ಯಶಸ್ಸನ್ನು ತುಲನೆ ಮಾಡಿ ರೈತರಿಗೆ ವರ್ಗಾವಣೆ ಮಾಡಬೇಕು.
  • ಆಗ ಎಲ್ಲರೂ ಅದನ್ನು ಖಂಡಿತವಾಗಿಯೂ ಸ್ವೀಕರಿಸುತ್ತಾರೆ.

ಸರಕಾರ  ನಿಯೋಜಿತ ವ್ಯವಸ್ಥೆಗಳಿಗೆ ಸರಕಾರ ಇದನ್ನು ರೈತನ ಮೇಲೆ ಹೇರಲು ಸಂಬಳ ಕೊಡುತ್ತದೆ. ಆದರೆ ಅಳವಡಿಸಿಕೊಳ್ಳುವ  ರೈತರಿಗೆ ನಷ್ಟವಾದರೆ ಯಾರೂ ನಷ್ಟ ಭರ್ತಿ ಮಾಡಿಕೊಡುವ ವ್ಯವಸ್ಥೆ ಇಲ್ಲ. ಹಾಗಾಗಿ ಜನ ಇವರನ್ನು ನಂಬದ ಸ್ಥಿತಿ ಇದೆ.

ನೈಸರ್ಗಿಕ ಕೃಷಿ ಉತ್ತಮ:

  • ನಿಸರ್ಗದಲ್ಲಿ ಲಭ್ಯವಾಗುವ ಪರಿಕರಗಳನ್ನು ಬಳಸದೆ ಕೃಷಿ ಮಾಡಹೊರಟರೆ ಅದು ಶಾಶ್ವತ ಕೃಷಿ ಖಂಡಿತವಾಗಿಯೂ ಆಗದು. ತತ್ಕಾ
  • ಲಕ್ಕೆ ಇದು ಇಳುವರಿ ಕೊಡಬಹುದು. ಆದರೆ ಕ್ರಮೇಣ ಇದು  ಫಲಕೊಡಲಾರದು.ಎಲ್ಲಾ ರಾಸಾಯನಿಕ ಗೊಬ್ಬರಗಳೂ ಸಸ್ಯಗಳಿಗೆ ಲಭ್ಯವಾಗುವುದು ಅವುಗಳನ್ನು ಸೂಕ್ಷ್ಮಾಣು ಜೀವಿಗಳು ಅರಗಿಸಿಕೊಂಡು, ಸಸ್ಯಗಳು ಬಳಸುವ ಸ್ಥಿತಿಗೆ ಪರಿವರ್ತನೆ ಆದ ನಂತರವೇ.
  • ಎಲ್ಲಾ ಸೂಕ್ಷ್ಮಾಣು ಜೀವಿಗಳೂ ಬದುಕುವುದು ಕಾರ್ಬನ್ ಅಥವಾ ಸಾವಯವ ಇಂಗಾಲ ಅಂಶ ಇರುವ ಮಣ್ಣಿನಲ್ಲಿ ಮಾತ್ರ.
  • ಕೆಲವು ಸಮಯದ ತನಕ ರಸ ಗೊಬ್ಬರ ಇಳುವರಿ ಕೊಟ್ಟರೆ ಅದು ಮಣ್ಣಿನಲ್ಲಿ ಸಂಗ್ರಹಿತ ಪೋಷಕಾಂಶಗಳ ಸಹಕಾರದಿಂದ.
  • ಅದು ಮುಗಿದಾಗ ಮತ್ತೆ ರಸಗೊಬ್ಬರ ಕೆಲಸ ಮಾಡದು. ಹಾಗಾಗಿ ಕೃಷಿಗೆ ನೈಸರ್ಗಿಕ ಮೂಲವಸ್ತುಗಳಾದ ಹುಲ್ಲು, ಸೊಪ್ಪು, ತಗಗೆಲೆ, ಕೃಷಿ ತ್ಯಾಜ್ಯಗಳು ಹಸುವಿನ ಸಗಣಿ ಮೂತ್ರ ಎಲ್ಲವೂ ಬೇಕು.
  • ಅವೆಲ್ಲಾ ದಿನದಿಂದ ದಿನಕ್ಕೆ ದುಬಾರಿಯಾಗಬಾರದು.
  • ಅದನ್ನು ಅಗ್ಗದಲ್ಲಿ ಲಭ್ಯವಾಗುವಂತೆ ಮಾಡುವ ಕೆಲಸವನ್ನು ಸರಕಾರ ಮಾಡಿದರೆ ನೈಸರ್ಗಿಕ ಕೃಷಿ ಮಾಡಿ ಎಂದು ಶಂಖ ಊದಬೇಕಾಗಿಲ್ಲ.
  • ಜನ ತನ್ನಿಂದ ತಾನೇ ಮುಗಿ ಬಿದ್ದು ಅಳವಡಿಸಿಕೊಳ್ಳುತ್ತಾರೆ.

ನೈಸರ್ಗಿಕ ಕೃಷಿ ಪ್ರಚಾರಕ್ಕಾಗಿ  ಸರಕಾರ ಜನರ ಮನ ಒಲಿಸಲು ಕೋಟಿ ಕೋಟಿ ಖರ್ಚು ಮಾಡುತ್ತಿದೆ. ಇದು ಜನರ ಹಣ. ಈ ತಂತ್ರಜ್ಞಾನ ನಮ್ಮ ರೈತರಿಗೆ ಹೊಸತಲ್ಲ. ಅನವಶ್ಯಕ ಖರ್ಚು ಮಾಡದೆ ನೈಸರ್ಗಿಕ ಕೃಷಿಗೆ ಅಗತ್ಯವಾದ ಮೂಲವಸ್ತುಗಳ ಲಭ್ಯತೆ ಹೆಚ್ಚಳದ ಕಡೆಗೆ ಗಮನಹರಿಸಿ. 2 ನೇ ಹಸುರು ಕ್ರಾಂತಿ ಮಾಡೋಣ. ಆದರೆ ಅದು ಮತ್ತೆ ಯಾವುದೋ ಕಂಪೆನಿಯನ್ನು  ಪೋಷಿಸುವ ವ್ಯವಸ್ಥೆ ಆಗದಂತೆ ಅದರ ಅನುಷ್ಟಾನ ಅಗಬೇಕು.

Leave a Reply

Your email address will not be published. Required fields are marked *

error: Content is protected !!