ಸಿಂಗಾರಕ್ಕೆ ಸಿಂಪರಣೆ ಅಗತ್ಯ ಇದೆಯೇ?. ಮರಕ್ಕೆ ಶಕ್ತಿ ಕೊಟ್ಟರೆ ಸಾಲದೆ?.

ಒಣ ನೆಲದಲ್ಲಿ ಕಾಯಿ ಕಚ್ಚುವಿಕೆ ಹೆಚ್ಚು

ಅಡಿಕೆ ಬೆಳೆಗಾರರ ಕೊಯಿಲಿನ ತಲೆಬಿಸಿ ಕಡಿಮೆಯಾಗಿದೆ. ಈಗ ಮುಂದಿನ ಬೆಳೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಸಿಂಪರಣೆ. ಹೇಗಾದರೂ ಮಾಡಿ ಬಿಡುವ ಹೂ ಗೊಂಚಲಿನ ಕಾಯಿಗಳನ್ನು ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಸಿಂಗಾರಕ್ಕೆ ಸಿಂಪರಣೆ ಪ್ರಾರಂಭಿಸಿದ್ದಾರೆ. ಕೆಲವರು 2 ಸಿಂಪರಣೆ ಮುಗಿಸಿದ್ದೂ ಆಗಿದೆ. ನಿಜವಾಗಿ ಹೇಳಬೇಕೆಂದರೆ ನಾವು ಮಾಡುವಷ್ಟು ಸಿಂಪರಣೆಯ ಅಗತ್ಯ ಅಡಿಕೆಗೆ ಇಲ್ಲ. ಮರಕ್ಕೆ ಶಕ್ತಿ ಕೊಟ್ಟರೆ ಸಾಕಾಗುತ್ತದೆ.

ಫಸಲು ಹೆಚ್ಚಾಗಬೇಕು ಎಂದು ತರಹೇವಾರು  ಕೀಟ,ರೋಗನಾಶಕಗಳನ್ನು ಪ್ರತೀ ಹೂ ಗೊಂಚಲಿಗೆ ಸಿಂಪಡಿಸುವುದು, ಸಿಕ್ಕ ಸಿಕ್ಕವರೊಂದಿಗೆ  ಈ ಬಗ್ಗೆ  ಸಲಹೆ ಕೇಳಿ ಅದರಂತೆ    ಏನೇನೊ ಮಾಡುವುದು, ಇದೆಲ್ಲಾ  ನಿಜವಾಗಿ ಅಗತ್ಯ ಇಲ್ಲ. ಅಡಿಕೆ ಮರ ಏನು, ಅದರ ಶಾರೀರಿಕತೆ ಏನು ಎಂದು ತಿಳಿದು ಅದಕ್ಕನುಗುಣವಾಗಿ ನಿರ್ವಹಣೆ ಮಾಡಿದರ ಸಿಂಪರಣೆ ಇಲ್ಲದೆ  ಫಸಲನ್ನು ಉಳಿಸಿಕೊಳ್ಳಬಹುದು.

ಅಡಿಕೆ ಸಿಂಗಾರ
ನಾವು ತಮ್ಮ ವೃತ್ತಿಯಲ್ಲಿ ಹೆಡ್ಡರಾದಷ್ಟು ಬೆಳೆ ಪೋಷಕ ಮಾರಾಟಗಾರರು  ಸದಾ ನಿಮ್ಮ ಬೆಂಬತ್ತುಲೇ ಇರುತ್ತಾರೆ.ಈಗ ಆಗಿರುವುದು ಅದೇ.ಅಡಿಕೆ ಬೆಳೆಗಾರರಿಗೆ ಹೂ ಗೊಂಚಲಿನಲ್ಲಿ  ಇರುವ ಎಲ್ಲಾ ಕಾಯಿಗಳೂ ಉಳಿಯಬೇಕೆಂದು ಆಸೆ.  ರೈತರು ಆಸೆ ಪಡುವುದರಲ್ಲಿ ತಪ್ಪಿಲ್ಲ. ಆದರೆ ನಮ್ಮ ಮಣ್ಣು,  ವಾತಾವರಣ  ಮತ್ತು ನಾವು ಕೊಡುವ ಪೋಷಕಗಳು ಬೆಳೆಯಿಂದ ಗರಿಷ್ಟ ಇಳುವರಿ ಕೊಡಲು ಎಷ್ಟು ಸಮರ್ಥವಾಗಿದೆ ಎಂಬುದನ್ನು ಮೊದಲಾಗಿ  ಗಮನಿಸಬೇಕು.

ಯಾವ ವರ್ಷ ಮಳೆ ಕಡಿಮೆ ಅಥವಾ ನಾರ್ಮಲ್ ಇರುತ್ತದೆಯೋ ಆ ವರ್ಷ ಅಡಿಕೆ, ತೆಂಗು ಎಲ್ಲದರಲ್ಲೂ ಉತ್ತಮ ಫಸಲು ಇರುತ್ತದೆ. ಯಾವ ವರ್ಷ ಮಳೆ ಹೆಚ್ಚು, ಅಕಾಲಿಕ ಮಳೆಯೋ ಆ ವರ್ಷ ಇಳುವರಿ ಕಡಿಮೆ ಇರುತ್ತದೆ. ಕೆಲವು ರೈತರು ಯಾವುದೇ ಸಿಂಪರಣೆ ಮಾಡೆದೆಯೂ ಉತ್ತಮ ಇಳುವರಿ ಪಡೆಯುತ್ತಾರೆ. ಅವರ ತೋಟದಲ್ಲಿ ಸಿಂಗಾರ ಒಣಗುವುದಾಗಲೀ, ಮಿಡಿ ಉದುರುವುದಾಗಲೀ ವಿಪರೀತ ಇರುವುದಿಲ್ಲ. ಇದನ್ನು ನಾವು ಗಮನಿಸಬೇಕು. 2016 ನಮ್ಮಲ್ಲಿ ಮಳೆ ಹಿತಮಿತವಾಗಿತ್ತು.ಅ ವರ್ಷದಷ್ಟು ಇಳುವರಿ ಆ ನಂತರ ಬರಲಿಲ್ಲ. ಇದಕ್ಕೆ ಕಾರಣ ಮಳೆಯೇ. ಮಳೆ ಬಂದಾಗ ಮಣ್ಣಿನ ಸತ್ವ ಕಡಿಮೆಯಾಗುತ್ತದೆ. ಸಹಜವಾಗಿ ಪೋಷಕಗಳ ಕೊರತೆ ಉಂಟಾಗುತ್ತದೆ.

 • ಆರೋಗ್ಯ ಸರಿ ಇರುವ ಸಸ್ಯ ಉತ್ತಮ ಫಸಲನ್ನು ನೀಡುತ್ತದೆ.
 • ಅದಕ್ಕೆ ತರಹೇವಾರು ಗೊಬ್ಬರ, ಕೀಟನಾಶಕ, ಪ್ರಚೋದಕ ಯಾವುದೂ ಬೇಕಾಗಿಲ್ಲ.
 • ಸಾಮಾನ್ಯ ಸಮತೋಲನ ಬೆಳೆ ಆರೈಕೆಯಲ್ಲಿ ಗರಿಷ್ಟ ಇಳುವರಿ ಪಡೆಯಬಹುದು.
ಹೂಗೊಂಚಲು ಒಂದರ ನಂತರ ಒಂದರಂತೆ ಇದ್ದರೆ ಕಾಯಿ ಕಚ್ಚುವಿಕೆ ಹೆಚ್ಚು
ಹೂಗೊಂಚಲು ಒಂದರ ನಂತರ ಒಂದರಂತೆ ಇದ್ದರೆ ಕಾಯಿ ಕಚ್ಚುವಿಕೆ ಹೆಚ್ಚು

ಚಮತ್ಕಾರ ಕೀಟ -ರೋಗ ನಾಶಕದಿಂದ ನಡೆಯುವುದಿಲ್ಲ:

 • ಸಸ್ಯಕ್ಕೆ ಫಲವನ್ನು ಹಿಡಿದುಕೊಳ್ಳುವ ಶಕ್ತಿ ಇದ್ದರೆ ಅದು ಫಲವನ್ನು ಉಳಿಸಿಕೊಳ್ಳುತ್ತದೆ.
 • ಇದನ್ನು ಸಸ್ಯದ ಫಲ ಧಾರಣಾ ಶಕ್ತಿ ಎಂದು ಕರೆಯಲಾಗುತ್ತದೆ.
 • ಸಸ್ಯದ ಫಲ ಧಾರಣಾ ಶಕ್ತಿ ಅದರ ಆರೋಗ್ಯದ ಮೇಲೆ ನಿಂತಿರುತ್ತದೆ.
 • ಇಲ್ಲಿ ಪ್ರಮುಖವಾಗಿ ನಾವು ಅಡಿಕೆ ಸಸ್ಯವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವ.
 • ಈಗ ತರಹೇವಾರು ಗೊಬ್ಬರ, ಕೀಟನಾಶಕ, ರೋಗನಾಶಕ, ಹಾರ್ಮೋನು, ಮುಂತಾದವುಗಳ ಹಿಂದೆ ಹೋಗುತ್ತಿರುವವರು ಅಡಿಕೆ ಬೆಳೆಗಾರರು ಮಾತ್ರ.
 • ಇವರಲ್ಲೇ ಈಗ ಸ್ವಲ್ಪ ದುಡ್ಡು ಇರುವುದು.
 • ಹೊಸ ಹೊಸ ಗೊಬ್ಬರವನ್ನು ಕೊಡುವುದರಿಂದ ಫಲ ಎಲ್ಲಾ ಉಳಿಯುತ್ತದೆ ಎಂಬುದು ಒಂದು ಭ್ರಾಂತಿ.
 • ಈ ಬಳಸಿದ ಗೊಬ್ಬರದಿಂದ ಫಲ ಚೆನ್ನಾಗಿ ಬಾರದಿದ್ದರೆ, ಮುಂದಿನ ವರ್ಷ ಅದನ್ನು ಬದಲಾಯಿಸಿ, ಹೊಸತು.
 • ಹಿಂದಿನ ವರ್ಷ ಹಾಕಿದ್ದು, ಮುಂದಿನ ವರ್ಷದಲ್ಲಿ ಫಲಕೊಟ್ಟರೆ ಹೊಸಬನಿಗೆ ಅದರ ಕೀರ್ತಿ ಸಂದಾಯವಾಗುತ್ತದೆ.
 • ಇದು ನಡೆಯುತ್ತಿರುವ ವಿದ್ಯಮಾನ.
ಇಂತಹ ಸಿಂಗಾರ ಒಣಗುವಿಕೆ ಇದ್ದಾದ ಅದನ್ನು ತೆಗೆದು ಸ್ವಚ್ಚ ಮಾಡಬೇಕು
ಇಂತಹ ಸಿಂಗಾರ ಒಣಗುವಿಕೆ ಇದ್ದಾದ ಅದನ್ನು ತೆಗೆದು ಸ್ವಚ್ಚ ಮಾಡಬೇಕು

ಸಸ್ಯ ಆರೋಗ್ಯ ಹೀಗಿರಬೇಕು:

 • ಒಂದು ಆರೋಗ್ಯವಂತ ಅಡಿಕೆ ಸಸಿ ಹೇಗಿರಬೇಕು ಎಂಬುದನ್ನು ಮೊದಲಾಗಿ ಅಡಿಕೆ ಬೆಳೆಯುವವರು ತಿಳಿದಿರಬೇಕು.
 • ಆರೋಗ್ಯವಂತ ಅಡಿಕೆ ಸಸಿ ಸುಮಾರು 10-12 ಆರೋಗ್ಯವಂತ ಎಲೆಗಳನ್ನು ಹೊಂದಿರುತ್ತದೆ.
 • ಮರದ ಗರಿಗಳು ಹಚ್ಚ ಹಸುರಾಗಿ  ಇರಬೇಕು.
 • ಕಾಂಡ ವಿಪರೀತ ದಪ್ಪ  ಇದ್ದರೆ ಅಲ್ಲಿ ಪೋಷಕಾಂಶದ ಅಸಮತೋಲನ ಇರಬಹುದು.
 • ಅಡಿಕೆ ಸಸ್ಯದ ಗರಿಗಳ ರಚನೆಯೂ ಸಹ ಅದರ ಉತ್ಪಾದಕತೆಯ ಕನ್ನಡಿ.
 • ಅಡಿಕೆ ಮರದ ಹಾಳೆ, ಹಾಳೆಯ ರಕ್ಷಾ ಕವಚ ಇದನ್ನು ಗಮನಿಸಿ ಮರದ ಆರೋಗ್ಯ ತಿಳಿಯಬಹುದು.
 • ಉದ್ದದ ದಪ್ಪ ಹಾಳೆ, ದೊಡ್ದ ಹೂ ಗೊಂಚಲು, ದಪ್ಪದ ರಕ್ಷಾ ಕವಚ  ಇದ್ದರೆ   ಪೊಟ್ಯಾಶ್  ಪೋಷಕದ ಕೊರತೆ ಇದೆ ಎಂದು ತಿಳಿಯಬಹುದು.
 • ಕಳೆದ ವರ್ಷ ಚೆನ್ನಾಗಿ ಇಳುವರಿ ಕೊಟ್ಟ ಮರಕ್ಕೆ ಈ ವರ್ಷ ಫಲಧಾರಣಾ ಶಕ್ತಿ ಪೂರ್ಣವಾಗಿ ಇರುವುದಿಲ್ಲ.
 • ಅದರಲ್ಲಿ ಹೂ ಗೊಂಚಲು ಇರಬಹುದು.
ಮರ ಎತ್ತರ ಆದಷ್ಟು ಇಳುವರಿ ಹೆಚ್ಚು
ಮರ ಎತ್ತರ ಆದಷ್ಟು ಇಳುವರಿ ಹೆಚ್ಚು
 • ಆದರೆ ಅದಕ್ಕೆ ಬೇಕಾದ ಅಂತಃ ಶಕ್ತಿ ಮರದಲ್ಲಿ ಇಲ್ಲದೆ ಇರುವ ಸಾಧ್ಯತೆ ಹೆಚ್ಚು.
 • ಕೆಲವು ಬೀಜ ದೋಷದಿಂದಲೂ ಇಳುವರಿ ಕೊಡುವುದಿಲ್ಲ.
 • ಈಗಿನ ಹೊಸ ತೋಟಗಳಲ್ಲಿ ಇಂತಹ ಮರಗಳ ಪ್ರಮಾಣ 10-15% ದಷ್ಟು ಇರುತ್ತದೆ.
 • ಆರೋಗ್ಯವಂತ ಮರದಲ್ಲಿ ಒಂದು ಹೂ ಗೊಂಚಲು ಅರಳಿ ಅದರ ಹೆಣ್ಣು ಹೂವುಗಳು ಪರಾಗ ಸೀಕರಿಸಲು ಸಜ್ಜಾಗುವಾಗ ಮತ್ತೊಂದು ಹೂ ಗೊಂಚಲು ಒಡೆದು ಗಂಡು ಹೂವುಗಳು ಪರಾಗ ಹೊರ ಚೆಲ್ಲುವ ಸ್ಥಿತಿಯಲ್ಲಿರುತ್ತದೆ.
 • ಅಂತಹ ಮರಗಳಲ್ಲಿ ಕಾಯಿ ಹೆಚ್ಚು ಹಿಡಿಯುತ್ತದೆ.
 • ಅಡಿಕೆ ಮರ ತೀರಾ ಸಪುರವಾಗಿದ್ದು, 8 ಅಥವಾ ಅದಕ್ಕಿಂತ ಕಡಿಮೆ ಎಲೆಗಳಿರುವ ಮರದಲ್ಲಿ  ಕಾಯಿ ಹಿಡಿಯುವ ಸಾಮರ್ಥ್ಯ ಕಡಿಮೆ ಇರುತ್ತದೆ.
 • ಒಂದು ಹೂ ಗೊಂಚಲಿನಲ್ಲಿ ಕೆಲವೇ ಕೆಲವು ಕಾಯಿಗಳೂ ಉಳಿಯಬಹುದು.
 • ಇತ್ತೀಚೆಗೆ ಅಡಿಕೆ ಕೊಯಿಲು ಮಾಡುವವರು ಕತ್ತಿಯಲ್ಲಿ ಗೊನೆ ಕೊಯ್ಯುತ್ತಾರೆ.
 • ಆಗ ಅದರಲ್ಲಿ ಸ್ವಲ್ಪ ಉಳಿಕೆ ಇರುತ್ತದೆ.
 • ಹಾಗೆಯೇ ಒಣಗಲ್ಪಟ್ಟ ಹೂ ಗೊಂಚಲು ಅಲ್ಲೇ ಜೋತಾಡುತ್ತಿರುತ್ತದೆ.
 • ಇದರ ಕಾರಣದಿಂದ ಸ್ವಲ್ಪ ಮಟ್ಟಿಗೆ ಶಿಲೀಂದ್ರ ಬಾಧೆಯಿಂದ ಹೂ ಗೊಂಚಲು ಒಣಗಬಹುದು.
 • ಇದನ್ನೆಲ್ಲಾ ಸ್ವಚ್ಚ ಮಾಡಿದರೆ ಒಣಗುವಿಕೆ  ಕಡಿಮೆಯಾಗುತ್ತದೆ.
 • ಕೀಟ ಇಲ್ಲವೆಂದಲ್ಲ. ಇದನ್ನು ಗಮನಿಸಿ ಒಮ್ಮೆ ಸೂಕ್ತ ಕೀಟನಾಶಕ ಸಿಂಪಡಿಸಿದರೆ ಸಾಕಾಗುತ್ತದೆ. (ಚಿತ್ರದಲ್ಲಿ ಕಾಣಿಸಿದ ರೀತಿ ಸಿಂಗಾರ ಇದ್ದರೆ ಮಾತ್ರ ಕೀಟ ಇದೆ)

ಹೂ ಗೊಂಚಲು ಹೀಗೆ ಇದ್ದರೆ ಒಮ್ಮೆ ಕೀಟನಾಶಕ ಸಿಂಪರಣೆ ಬೇಕಾಗಬಹುದು

ಈಗ ಕೊಟ್ಟ ಗೊಬ್ಬರ ಮುಂದಿನ ಫಸಲಿಗೆ:

ಒಂದು ಅಡಿಕೆ ಮರದಲ್ಲಿ ಸಿಂಗಾರ ಹುಟ್ಟುವುದು ಆ ಸೀಸನ್ ನಲ್ಲಿ ಅಲ್ಲ.  ಅದು ಕಳೆದ ವರ್ಷ ಮಳೆಗಾಲ ಸಮಯದಲ್ಲೇ ಗರಿ ಕಂಕುಳಲ್ಲಿ  ಮೂಡಿರುತ್ತದೆ. ಅದು ನಿಧಾನವಾಗಿ ಬೆಳವಣಿಗೆ ಹೊಂದುತ್ತಾ ಈ ಸಮಯದಲ್ಲಿ ಒಂದೊಂದೇ ಗರಿ ಕಳಚಿ ಬಿದ್ದು ಅರಳುತ್ತದೆ. ಈಗ ಕೊಡುವ ಗೊಬ್ಬರಗಳಿಂದ ಅದರ ಕೆಲವೇ ಕೆಲವು ಗುಣಗಳನ್ನು ಬದಲಿಸಬಹುದು. ಹೆಣ್ಣು ಹೂವುಗಳು, ಗಂಡು ಹೂವುಗಳು, ಅದು ಮೂಡುವಾಗ ಮರಕ್ಕೆ ಇದ್ದ ಅಂಥಃಶಕ್ತಿ  ಅದರ ಮೇಲೆ ಫಲಧಾರಣಾ ಶಕ್ತಿ ನಿಂತಿರುತ್ತದೆ.

 • ಈಗ ಗೊಬ್ಬರ ಕೊಟ್ಟರೆ ಅದು ಸ್ವಲ್ಪ ಮಟ್ಟಿಗೆ ಮಾತ್ರ ಕಾಯಿ ಉಳಿಸಲು ನೆರವಾಗಬಹುದು.
 • ಅದರ ಫಲಿತಾಂಶ ಮುಂದಿನ ಬೆಳೆಗೆ ಹೆಚ್ಚು ಇರುತ್ತದೆ.

ಇದು ನಿಮಗೆ ಅಗತ್ಯವಾಗಿ ತಿಳಿದಿರಲಿ:

ಇಂತಹ ಹೊಂಬಾಳೆ ಇದ್ದರೆ ಕಾಯಿ ಚೆನ್ನಾಗಿ ಹಿಡಿಯುತ್ತದೆ
ಇಂತಹ ಹೊಂಬಾಳೆ ಇದ್ದರೆ ಕಾಯಿ ಚೆನ್ನಾಗಿ ಹಿಡಿಯುತ್ತದೆ
 • ಒಂದು ಹೂ ಗೊಂಚಲಿನಲ್ಲಿ ಹೆಚ್ಚು ಕಾಯಿ ಕಚ್ಚಿದ್ದರೆ ಮುಂದಿನ ಹೂ ಗೊಂಚಲಿಗೆ ಪೋಷಕಾಂಶಗಳ ಕೊರತೆಯಾಗಿ ಅದರಲ್ಲಿ ಕಾಯಿ ಕಚ್ಚುವುದು ಕಡಿಮೆಯಾಗಬಹುದು.
 • ಬೇಸಿಗೆಯಲ್ಲಿ ಅಡಿಕೆ ಸಿಂಗಾರಕ್ಕೆ ಬರುವ ಶಿಲೀಂದ್ರ ಕೊಲೆಟ್ರೋಟ್ರಿಕಂ ( Colletotrichum )ಜಾತಿಯ ಶಿಲೀಂದ್ರ.
 • ಇದು ಅತಿಯಾದ  ಮತ್ತು ಕ್ರಮಬದ್ಧವಲ್ಲದ ನೀರಾವರಿ ವಿಧಾನದಲ್ಲಿ ಹೆಚ್ಚಾಗುತ್ತದೆ.
 • ರಾತ್ರೆ ಹೊತ್ತು ಸ್ಪ್ರಿಂಕ್ಲರ್ ನೀರಾವರಿ ಮಾಡುವಲ್ಲಿ ಹೆಚ್ಚು.
 • ಸಮತೋಲನ ಪ್ರಮಾಣದ ಪೋಷಕಗಳನ್ನು ಕೊಡುವುದರಿಂದ ಇದನ್ನು ಕಡಿಮೆ ಮಾಡಬಹುದು.
 • ಕೀಟಗಳು ಮೊದಲ ಸಿಂಗಾರಕ್ಕೆ ಮಾತ್ರ ಹೆಚ್ಚು ತೊಂದರೆ ಮಾಡುತ್ತದೆ.
 • ಆಗ ಅದನ್ನು ದೂರ ಮಾಡಿದರೆ ನಂತರ ಕಡಿಮೆಯಾಗುತ್ತದೆ.
 • ಕೀಟನಾಶಕ – ರೋಗ ನಾಶಕದ  ಅಗತ್ಯ ಇದೆಯೇ ಇಲ್ಲವೇ ಎಂಬುದನ್ನು ರೈತರು ಮರದಲ್ಲಿ ಬೀಳುವ ಮಿಡಿಗಳು, ದರ  ತೊಟ್ಟಿನ ಭಾಗ, ಉದುರಿದ ತಾಜಾ ಮಿಳ್ಳೆಗಳಲ್ಲಿ ಕಪ್ಪು ಕಲೆಗಳ ಮೂಲಕ ತಿಳಿಯಬಹುದು.
 • ಬಹಳಷ್ಟು ಜನ ರೈತರು 10:26:26  ಪೋಷಕವನ್ನು ಕೊಡುತ್ತಾರೆ.
 • ಈ  ಪೋಷಕ ಮಾತ್ರ  ಕೊಡುತ್ತಿರುವವರಲ್ಲಿ  ಮಿಡಿ ಉದುರುವಿಕೆ ಹೆಚ್ಚು.
 • ಕಾರಣ ಇದರಲ್ಲಿ ಸಾರಜನಕದ ಕೊರತೆ ಇದೆ.

ಜನವರಿಯಿಂದ ಮೊದಲ್ಗೊಂಡು ಪ್ರತೀ 15 ದಿನಕ್ಕೊಮ್ಮೆ ಪ್ರತೀ ಮರಕ್ಕೆ 10 ಗ್ರಾಂ ಸಾರಜನಕ, 10 ಗ್ರಾಂ ಪೊಟ್ಯಾಶ್ ( 200 ಲೀ. ನೀರಿಗೆ 4+4 ಕಿಲೊ ಯೂರಿಯಾ ಮತ್ತು ಪೊಟ್ಯಾಶ್ ಹಾಗೂ ಸೂಕ್ಷ್ಮ ಪೋಷಕಾಂಶ ಮಿಶ್ರಣ 200 ಗ್ರಾಂ  ಮತ್ತು 200 ಗ್ರಾಂ ಹ್ಯೂಮಿಕ್ ಆಮ್ಲ + ಸಮುದ್ರ ಪಾಚಿ ಮಿಶ್ರಣ,ವನ್ನು ಪ್ರತೀ ಮರಕ್ಕೆ 1 ಲೀ. ನಂತೆ)  ಹನಿ ನೀರಾವರಿ ಅಥವಾ ಬುಡಕ್ಕೆ ಎರೆಯುವ ಮೂಲಕ ಕೊಡುವುದರಿಂದ ಗರಿಷ್ಟ ಪ್ರಮಾಣದಲ್ಲಿ ಮಿಳ್ಳೆ ಉಳಿಸಬಹುದು.

 • ಜೈವಿಕ ಅಥವಾ ಸಾವಯವ ಉತ್ಪನ್ನಗಳು ಕಡಿಮೆ ಬೆಲೆಗೆ ಲಭ್ಯವಿದ್ದರೆ ಬಳಕೆ ಮಾಡಿ.
 • ಇದು ಮಣ್ಣಿನಲ್ಲಿ ಅಲಭ್ಯ ಸ್ಥಿತಿಯಲ್ಲಿ ಇರುವ ಪೋಷಕಗಳನ್ನು ಲಭ್ಯ ಸ್ಥಿತಿಗೆ ತಂದು ಕೊಡಬಲ್ಲವು.
 • ಒಂದು ಹೂ ಗೊಂಚಲಿನಲ್ಲಿ 500 ಕ್ಕೂ ಮಿಕ್ಕಿ ಕಾಯಿಯಾಗುವ ಮಿಡಿಗಳು ಇರುತ್ತವೆ.
 • ಅವೆಲ್ಲಾ ಉಳಿಯುವುದಿಲ್ಲ. ಒಂದು ವೇಳೆ ಉಳಿದರೆ ಮುಂದಿನ ಹೂ ಗೊಂಚಲಿನಲ್ಲಿ ಉದುರುವಿಕೆ ಹೆಚ್ಚಾಗುತ್ತದೆ.
 • ಪ್ರಭಲ ಕೀಟನಾಶಕಗಳನ್ನು ಬಳಸುವುದನ್ನು ಕಡಿಮೆ ಮಾಡಿದಷ್ಟೂ ಕೀಟಗಳು ಸಹಜವಾಗಿ ಕಡಿಮೆಯಾಗುತ್ತವೆ.
 • ಅದರ ಪರಭಕ್ಷಕಗಳು ಹೆಚ್ಚಾಗಿ ನಿಯಂತ್ರಣದಲ್ಲಿರುತ್ತದೆ.
 • ಮಳೆಗಾಲ ಮುಗಿಯುವಾಗ ಒಮ್ಮೆ ಹೂ ಗೊಂಚಲಿಗೆ ನೀರಿನಲ್ಲಿ ಕರಗುವ ಗಂಧಕ ಸಿಂಪರಣೆ ಮಾಡಿದರೂ ಸಾಕಾಗುತ್ತದೆ.
 • ಸಾಧ್ಯವಾದಷ್ಟು ಅಡಿಕೆಗೆ ಬೇಕಾದಷ್ಟೇ ನೀರು ಕೊಡಿ.
 • ಆಗ ನಾವು ಕೊಡುವ ಪೋಷಕಗಳ ಸಮರ್ಪಕ ಬಳಕೆ ಆಗುತ್ತದೆ.
 • ರೋಗ ಕೀಟ ಬಾಧೆ ಕಡಿಮೆಯಾಗುತ್ತದೆ. ಗಮನಿಸಿ, ಎತ್ತರದ ಮರಗಳಲ್ಲಿ ಸಿಂಪರಣೆ ಮಾಡದಿದ್ದರೂ ಇಳುವರಿ ಹೆಚ್ಚು ಇರುತ್ತದೆ.
 • ತಗ್ಗಿನ ಮರಗಳಲ್ಲಿ ಸಿಂಪರಣೆ ಎಷ್ಟು ಮಾಡಿದರೂ ಮಿಡಿ ಉದುರುವಿಕೆ ಇದ್ದೇ ಇರುತ್ತದೆ.

ಮನಬಂದಂತೆ ಪ್ರತೀ ತಿಂಗಳೂ ಕೀಟನಾಶಕ, ರೋಗ ನಾಶಕ ಸಿಂಪರಣೆ ಮಾಡಿ ಇರುವ ಪರಭಕ್ಷಕಗಳ ಸಂತತಿಯನ್ನೇ ನಾಶ ಮಾಡಬೇಡಿ. ಒಮ್ಮೆ ಈ ರಾಸಾಯನಿಕ ಬೆಳೆ ರಕ್ಷಕಗಳನ್ನು ಬಳಕೆ ಮಾಡಲು ಪ್ರಾರಂಭಿಸಿದರೆ ಅದನ್ನು ನಿಲ್ಲಿಸಲಿಕ್ಕೆ ಅಘುವುದಿಲ್ಲ. ಇದರಿಂದ ಬೆಳೆಗಾರರಿಗೆ ಒಂದೆಡೆ ಆರ್ಥಿಕ  ನಷ್ಟ ಮತ್ತೊಂದೆಡೆ ಆರೋಗ್ಯ ಸಮಸ್ಯೆ ಸಹ.          ;

2 thoughts on “ಸಿಂಗಾರಕ್ಕೆ ಸಿಂಪರಣೆ ಅಗತ್ಯ ಇದೆಯೇ?. ಮರಕ್ಕೆ ಶಕ್ತಿ ಕೊಟ್ಟರೆ ಸಾಲದೆ?.

  1. If you like some costly fertilizers, Yara Mila is good. It is balanced to arecanut fertiliser recomandations. 15:9:20 along with Sulphur and Magnesium also added. use 1/2 kg per plant in 3 split dose. If you use subsidised manures 10:26:26 (300 gram) + 200 gram urea +100 gram potash. total 600 gram per plant in 3 spilt dose.

Leave a Reply

Your email address will not be published. Required fields are marked *

error: Content is protected !!