ಬಟರ್ ಫ್ರೂಟ್ ಬೆಳೆ ಈಗ ಎಲ್ಲೆಂದರಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆಯುತ್ತಿರುವ ಬೆಳೆಯಾಗಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ಈ ಬೆಳೆಯ ಬಗ್ಗೆ ಜನ ಉತ್ಸುಕರಾಗಿದ್ದಾರೆ. ಬಹಳಷ್ಟು ಜನ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಆದರೆ ಬಹಳಷ್ಟು ಜನ ಬೆಳೆಸಿದ ಸಸಿ/ ಫಲ ಕೊಡುತ್ತಿರುವ ಮರ ಕಾಣು ಕಾಣುತ್ತಿದ್ದಂತೆ ಸಾಯುತ್ತಿವೆ. ಮರಗಳು ಸಾಯುವುದಕ್ಕೆ ಕಾರಣ ಕಾಂಡ ಕೊರಕ ಕೀಟ. ಇದನ್ನು ನಿಯಂತ್ರಿಸದೆ ಇದ್ದರೆ ಆಕಾಂಕ್ಷೆಯಲ್ಲಿ ಬೆಳೆದ ಬೆಳೆ ನಾಶವಾಗುತ್ತದೆ. ಇದರ ನಿಯಂತ್ರಣ ವಿಧಾನ ಹೀಗೆ.
ಬಟರ್ ಫ್ರೂಟ್ (Avocado) ಸಸ್ಯ ಸ್ವಲ್ಪ ಮೆದು ಸಸ್ಯ ಎಂದೇ ಹೇಳಬಹುದು. ಇದಕ್ಕೆ ಹೆಚ್ಚು ನೀರೂ ಕೊಡಬಾರದು. ನೀರು ಹೆಚ್ಚಾದರೆ ಗಿಡ ಸಾಯುತ್ತದೆ. ಹಾಗೆಯೇ ನಿರ್ಲಕ್ಷ್ಯ ಮಾಡಿದರೆ ಕಾಂಡ ಕೊರಕ (stem borer) ಬಾಧಿಸಿ ಮರವೇ ಸತ್ತು ಹೋಗುತ್ತದೆ. ಮರ ಯಾವುದೇ ಹಂತದಲ್ಲಿ ಅಂದರೆ ಗಿಡವಾಗಿದ್ದಾಗಲೂ, ಫಲ ಕೊಡುತ್ತಿರುವ ಹಂತದಲ್ಲೂ ಕಾಂಡ ಕೊರಕ ಧಾಳಿಗೆ ಸಿಕ್ಕಿ ಸಾಯಬಹುದು. ಮರ ಸತ್ತು ಹೋದರೆ ಮಾಡಿದ ಎಲ್ಲಾ ಶ್ರಮ ವ್ಯರ್ಥವಾಗಿ ಮತ್ತೆ ಬೇರೆ ಸಸಿ ನೆಟ್ಟು ಬೆಳೆಸಬೇಕಾಗುತ್ತದೆ. ಆದ ಕಾರಣ ಕಾಂಡ ಕೊರಕ ಬಾಧಿಸದಿರುವಂತೆ ಮುನ್ನೆಚ್ಚರಿಕೆ ವಹಿಸಬೇಕೇ ಹೊರತು ಬಂದ ಮೇಲೆ ಉಪಚಾರ ಮಾಡುವುದಲ್ಲ. ಕಾಂಡ ಕೊರಕ ಬಂದದ್ದೇ ಗೊತ್ತಾಗುವುದಿಲ್ಲ ಹಾಗಿರುವಾಗ ಉಪಚಾರ ಮಾಡುವುದು ಎಲ್ಲಿಂದ ಬಂತು?
ಏನಿದು ಕಾಂಡ ಕೊರಕ:
- ಕೆಲವು ದುಂಬಿ ಜಾತಿಯ ಕೀಟಗಳಿಗೆ ಮರದ ಕಾಂಡ ತನ್ನ ಸಂತಾನಾಭಿವೃದ್ದಿಗೆ ಆಸರೆ.
- ಅವು ಒಂದಿಲ್ಲೊಂದು ಮರವನ್ನು ಆಶ್ರಯಿಸುತ್ತಲೇ ಇರುತ್ತವೆ.
- ಕಾಂಡ ಕೊರಕಗಳಲ್ಲಿ ಹಲವಾರು ವಿಧಗಳಿದ್ದು, ಕೆಲವು ನಿರ್ದಿಷ್ಟ ಮರಗಳಿಗೆ ಮಾತ್ರ ಅವು ತೊಂದರೆಯನ್ನು ಉಂಟು ಮಾಡುತ್ತವೆ.
- ನಾವೆಲ್ಲಾ ಮರಮಟ್ಟು ಕಡಿಯುವಾಗ ಕೆಲವು ಸಮಯದಲ್ಲಿ (ಹುಣ್ಣಿಮೆ ಎದುರಿನ ಸಮಯ) ಕಡಿದಾಗ ಅದಕ್ಕೆ ಸುರಿ ಬೀಳುವುದನ್ನು ಗಮನಿಸಿರಬಹುದು.
- ಸುರು ಬೀಳುವುದು ಎಂದರೆ ಅದೂ ಒಂದು ಕಾಂಡ ಕೊರಕವೇ ಆಗಿದೆ.
- ಆ ಮರದ ಎಲ್ಲಾ ಭಾಗಗಳಿಗೂ ಕಾಂಡ ಕೊರಕ ಬಾಧಿಸಿ ಅದನ್ನು ಹಾಳು ಮಾಡುತ್ತದೆ.
- ಕಾಂಡ ಕೊರಕಕ್ಕೆ ಮರದ ರಸ ಪ್ರೀತಿಯ ವಸ್ತು. ಅಡ್ದ ಹಾಕಿದ ಮರದಲ್ಲಿ ಮೊದಲು ಕೆಳಭಾಗದಲ್ಲಿ ಕೊರಕವು ಪ್ರವೇಶವಾಗುತ್ತದೆ.
- ಕ್ರಮೇಣ ಎಲ್ಲಾ ಭಾಗಕ್ಕೂ ಪ್ರಸಾರವಾಗುತ್ತದೆ.
- ಬಹುಷಃ ನಾವು ನೆಟ್ಟು ಬೆಳೆಸುವ ಮರಮಟ್ಟುಗಳಿಗೂ ಹುಣ್ಣಿಮೆ ಸಮಯದಲ್ಲೇ ಈ ಕೀಟ ತೊಂದರೆ ಮಾಡುವುದು ಹೆಚ್ಚು ಇರಬಹುದು.
- ಇದನ್ನು ನಾವು ಅಧ್ಯಯನ ಮಾಡಿಲ್ಲ. ಕಾಂಡ ಕೊರಕ ಎಂಬುದು ಒಂದು ದುಂಬಿ.
- ಇದು ತೂತು ಕೊರೆದು ಕಾಂಡದ ಒಳಗೆ ಹೋಗುತ್ತದೆ.
- ಕಾಂಡದ ಮೂಲಕ ನೀರು ಆಹಾರ ಸರಬರಾಜು ಆಗುವ ಭಾಗವನ್ನು ಪ್ರತ್ಯೇಕಿಸಿ ಮೇಲೆ ಆಹಾರ ಹೋಗದಂತೆ ಮಾಡುತ್ತದೆ.
- ಆಗ ಗಿಡ/ ಮರ ಎಲೆ ಒಣಗುತ್ತದೆ. ಗಿಡದ ಗೆಲ್ಲುಗಳು ಒಣಗುತ್ತದೆ. ಕ್ರಮೇಣ ಮರ ಸತ್ತು ಹೋಗುತ್ತದೆ.
ಬೆಣ್ಣೆ ಹಣ್ಣಿನ ಮರದ ಕಾಂಡ ಕೊರಕ:
- ಇದು ಒಂದು ಉದ್ದನೆ ಆಕಾರದ ಸಣ್ಣ ದುಂಬಿ.
- ಸುಮಾರು ಮೆಂತೆಯಷ್ಟು ದಪ್ಪ ಮತ್ತು ಎರಡು ಮೆಂತೆಯಷ್ಟು ಉದ್ದ ಇರುತ್ತದೆ.
- ಆರು ಕಾಲುಗಳನ್ನು ಕಾಣಬಹುದು. ರೆಕ್ಕೆ ಇರುತ್ತದೆ. ಸುಮಾರು ಸಾಸುವೆಯ ಗಾತ್ರದಷ್ಟು ತೂತನ್ನು ಮಾಡಿ ಒಳ ಸೇರುತ್ತದೆ.
- ಕೀಟ ಒಳ ಸೇರಿದ ಭಾಗ ಸ್ಪಷ್ಟವಾಗಿ ಕಾಣಿಸುತ್ತದೆ. ಒಳ ಹೋಗುತ್ತಾ ರಂದ್ರ ಕೊರೆದು ಅದರ ಹುಡಿಯನ್ನು ಹೊರಹಾಕಿದ್ದೂ ಸಹ ಸ್ಪಷ್ಟವಾಗಿ ಕಾಣಿಸುತ್ತದೆ.
- ಸಾಮಾನ್ಯವಾಗಿ ಕಾಂಡದಲ್ಲಿ ಬೇರೆ ಬೇರೆ ಕಡೆ ತೂತು ಮಾಡಿ ಒಳ ಸೇರುತ್ತದೆ.
- ಒಳ ಸೇರಿ ಅಲ್ಲಿ ಹೊಟ್ಟೆ ಇಡುತ್ತದೆ ಎನ್ನಲಾಗುತ್ತದೆ.
- ಆದರೆ ಬಾಧಿತ ಮರದ ಕಾಂಡವನ್ನು ಸಿಗಿದು ನೋಡಿದಾಗ ಕೊರೆದ ಕುರುಹು ಕಾಣುತ್ತದೆಯೇ ಹೊರತು ಮೊಟ್ಟೆ ಇಟ್ಟ ಸ್ಥಳಾವಕಾಶ ಕಾಣುವುದಿಲ್ಲ.
- ಈ ಬಗ್ಗೆ ಹೆಚ್ಚಿನ ಅಧ್ಯಯನವನ್ನು ನಮ್ಮ ತಂಡ ನಡೆಸಿಲ್ಲ.
- ಕಾಂಡ ಕೊರಕ ಧಾಳಿ ಮಾಡಿದ ಮರ ಸತ್ತು ಹೋಗುತ್ತದೆ.
- ಬುಡದಿಂದ ಮೇಲ್ಭಾಗದಲ್ಲಿ ತೂತು ಕೊರೆದಿದ್ದರೆ ಅಲ್ಲಿಂದ ಗೆಲ್ಲನ್ನು ತುಂಡು ಮಾಡಿ ತೆಗೆದು ದುಂಬಿಗಳೆಲ್ಲಾ ನಾಶವಾಗುವಂತೆ ಮಾಡಿದರೆ ಕೆಳ ಭಾಗವನ್ನು ಮತ್ತೆ ಚಿಗುರುವಂತೆ ಮಾಡಬಹುದು.
- ಅದಕ್ಕೆಲ್ಲಾ ಧಾಳಿಯನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸಬೇಕು. ಸಾಮಾನ್ಯವಾಗಿ ಕಾಂಡ ಕೊರಕ ಶಿಲೀಂದ್ರವನ್ನು ಸಾಗಿಸುವ ವಾಹಕಗಳಾಗಿರುತ್ತವೆ.
- ಹಾಗಾಗಿ ಮರ ಬೇಗ ಸತ್ತು ಹೋಗುತ್ತದೆ.
ರಕ್ಷಣೆ ಹೇಗೆ?
- ಕಾಂಡ ಕೊರಕ ಯಾವಾಗ ಬರುತ್ತದೆ , ಯಾವಾಗ ಹೋಗುತ್ತದೆ ಎಂಬುದನ್ನು ನಿತ್ಯ ಪರಾಂಬರಿಸಿ ನೋಡಿಕೊಳ್ಳಲು ಕಷ್ಟ ಸಾಧ್ಯ.
- ಇದು ಬಾರದಂತೆ ತಡೆಯುವುದೇ ಸರಳವಾದ ವಿಧಾನ.
- ಮುಖ್ಯವಾಗಿ ಹಣ್ಣು ಹಂಪಲಿನ ಗಿಡಗಳಾದ ಮಾವು, ಹಲಸು, ಅವಕಾಡೋ, ಮ್ಯಾಂಗೋಸ್ಟಿನ್, ರಾಂಬುಟಾನ್ ಯಾವುದೇ ಇರಲಿ ಅದಕ್ಕೆ ಕಾಂಡ ಕೊರಕ ಅಥವಾ ಗೆಲ್ಲು ಕೊರಕದಿಂದ ಯಾವಾಗಲೂ ತೊಂದರೆ ಉಂಟಾಗಬಹುದು.
- ಅದಕ್ಕಾಗಿ ಸಸಿ ಹಂತದಿಂದ ಮರದ ಜೀವಮಾನ ಪೂರ್ತಿಯಾಗಿ ಕಾಂಡದ ಸುಮಾರು 6-7 ಅಡಿ ಎತ್ತರದ ವರೆಗೆ ರಾಸಾಯನಿಕ ಮಿಶ್ರಿತ ಲೇಪನ ಮಾಡುವುದು ಅತ್ಯಗತ್ಯ.
- ಸಾಮಾನ್ಯವಾಗಿ ಮರಮಟ್ಟುಗಳ ಕಾಂಡ ಕೊರಕದ ಹಾವಳಿಯನ್ನು ತಡೆಯುವಲ್ಲಿ ಮೈಲುತುತ್ತೆ ಪರಿಣಾಮಕಾರೀ ವಸ್ತುವಾಗಿರುತ್ತದೆ.
- ಮೈಲುತುತ್ತೆ ಮತ್ತು ಸುಣ್ಣವನ್ನು ನಿರ್ದಿಷ್ಟ ಪ್ರಮಾಣದಲ್ಲಿ 1kg+1kg =10 ಲೀ.ನೀರಿನಲ್ಲಿ ಮಿಶ್ರಣ ಮಾಡಿ ಪೈಂಟ್ ಮಾಡಿಕೊಂಡು ಅದಕ್ಕೆ 50-100 ಗ್ರಾಂ ತನಕ ಡೆಲ್ಟ್ರಾಮೆಥ್ರಿನ್ ಮಿಶ್ರಣ ಮಾಡಿ ಕಾಂಡಕ್ಕೆ ಲೇಪನ ಮಾಡಿದರೆ ಕಾಂಡ ಕೊರಕ ದುಂಬಿಯ ಪ್ರವೇಶವನ್ನು ತಡೆಯಬಹುದು.
- ಮೈಲುತುತ್ತೆ ಅಲ್ಲದಿದ್ದರೆ ವಾಟರ್ ಬೇಸ್ ಪೈಂಟ್ ಮತ್ತು ಡೆಲ್ಟ್ರಾಮೆಥ್ರಿನ್ ಸೇರಿಸಿ ಲೇಪನ ಮಾಡಬಹುದು.
- ಡೆಲ್ಟ್ರಾಮೆಥ್ರಿನ್ ಲಭ್ಯತೆ ಇಲ್ಲದಿದ್ದಲ್ಲಿ ಕೆಲವೇ ಮರಗಳು ಇರುವವರು ಗ್ರೋಸರಿ ಅಂಗಡಿಗಳಲ್ಲಿ ಸಿಗುವ ಲಕ್ಷ್ಮಣ ರೇಖೆ ( ಚ್ಚಾಕ್) 2-3 ಹುಡಿ ಮಾಡಿ ಮಿಶ್ರಣ ಮಾಡಬಹುದು.
ಒಂದು ವೇಳೆ ನಿಮ್ಮಲ್ಲಿ ಯಾವುದಾದರೂ ಮರಕ್ಕೆ ಕಾಂಡ ಕೊರಕ ಬಾಧಿತವಾದಲ್ಲಿ ಆ ಮರದ ಎಲ್ಲಾ ಭಾಗಗಳನ್ನೂ ಸುಟ್ಟು ಅದರ ಮೊಟ್ಟೆ ಮರಿಗಳನ್ನು ನಾಶ ಮಾಡಬೇಕು. ಇಲ್ಲವಾದರೆ ಅದು ಬೇರೆ ಮರಗಳಿಗೆ ಬಾಧಿಸುತ್ತದೆ. ಮರಮಟ್ಟುಗಳನ್ನು ಕಡಿದು ಹಾಕುವುದು ಅದು ಸುರಿ ಬೀಳುವುದು ಆಗುತ್ತಿರಬಾರದು. ಸಾಧ್ಯವಾದಷ್ಟು ಮರಮಟ್ಟುಗಳನ್ನು ಕಡಿದರೆ ಅದನ್ನು ಸುರಿ ಬೀಳದಂತೆ ನೋಡಿಕೊಳ್ಳಬೇಕು. ಮರವನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳಬೇಕು. ತೋಟದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಸಾಮಾನ್ಯವಾಗಿ ಮಳೆಗಾಲ ಪ್ರಾರಂಭವಾಗುವಾಗ ಮತ್ತು ಮುಕ್ತಾಯದ ಹಂತದಲ್ಲಿ ಈ ಕೀಟದ ಹಾವಳಿ ಜಾಸ್ತಿ. ಆಗ ಜಾಗರೂಕತೆ ವಹಿಸಬೇಕು.