ಕಳೆಯಲ್ಲ ಇದು ಪ್ರಕೃತಿ ಕೊಟ್ಟ ವರ

ಕಳೆಯಲ್ಲ ಇದು ಪ್ರಕೃತಿ ಕೊಟ್ಟ ವರ

ಹೆಚ್ಚಿನವರು ಇದನ್ನು ಕಳೆ  ಎಂದು ದೂಷಿಸುತ್ತಾರೆ. ಪ್ರಕೃತಿ ತನ್ನ ಉಳಿವಿಗಾಗಿ ಕೆಲವು ಜೀವ ಸಂಕುಲಗಳನ್ನು ಸೃಷ್ಟಿಸುತ್ತಲೇ ಇರುತ್ತದೆ. ಅಂಥಹ ಒಂದು ಕೊಡುಗೆಯೇ ಈ ಸಸ್ಯ. ಒಂದು ವೇಳೆ ಈ ಬಳ್ಳಿ ಅಥವಾ ಗಿಡ ಬಾರದೆ  ಇರುತ್ತಿದ್ದರೆ ಇಂದು ಏನಾಗುತ್ತಿತ್ತು? ಇದರಿಂದ ಪ್ರಯೋಜನ ಪಡೆದುಕೊಳ್ಳುವುದಾದರೆ ಎಷ್ಟೆಲ್ಲಾ ಇದೆ ಎಂಬುದರ ಕುರಿತಾಗಿ ಸ್ವಲ್ಪ ವಿವರಗಳು ಇಲ್ಲಿದೆ.

ಹಳದಿ ಸೇವಂತಿಗೆ ಬಳ್ಳಿ ಇದು ಇಲ್ಲದ ಜಾಗವೇ ಇಲ್ಲ. ಹೇಗೆ  ಬಂತು ಎಲ್ಲಿಂದ ಬಂತು ಎಂಬುದರ ಹುಡುಕಾಟ ಇನ್ನು ಆಗಬೇಕು. ಆದರೆ  ಇದು ಹಾಳು ಮಾಡಲು ಬಂದದ್ದಂತೂ ಅಲ್ಲ. ಇದು ಮನುಕುಲಕ್ಕೆ, ಹಾಗೆಯೇ ಜಾನುವಾರುಗಳಿಗೆ, ಮಣ್ಣಿನ ರಕ್ಷಣೆಗೆ ಪ್ರಕೃತಿ ತಂದು ಹಾಕಿದ ಸಸ್ಯ ಎಂದು ಸದ್ಯಕ್ಕೆ ಹೇಳೋಣ. ಇದರ ವೈಜ್ಞಾನಿಕ ಹೆಸರು Sphagneticota trilobite ಇದನ್ನು  Singapore daisy ಎಂದು ಕರೆಯುತ್ತಾರೆ. ಕರ್ನಾಟಕದ ನಮ್ಮ ಭಾಷೆಯಲ್ಲಿ ಸೇವಂತಿಗೆ ಕಳೆ ಎನ್ನುತ್ತೇವೆ.  ಇದು ಬಳ್ಳಿಯಂತೆ ಹಬ್ಬುತ್ತಾ ಬೆಳೆಯುವ ಸಸ್ಯ. ಗಂಟು ಗಂಟುಗಳಲ್ಲಿ ಬೇರು ಬರುತ್ತದೆ.ಚೆನ್ನಾಗಿ ಬೇರು ಬಿಡುವ ಗುಣ ಇರುವುದರಿಂದ  ಸಣ್ಣ ತುಂಡು ನೆಲದಲ್ಲಿ ಉಳಿದರೂ ಅದು ಬದುಕುತ್ತದೆ. ಇದನ್ನು ಕೆಲವರು ರಕ್ತಬೀಜಾಸುರ ಕಳೆ ಎಂಬುದಾಗಿ ಕರೆಯುತ್ತಾರೆ. ಕೆಲವರು ವಿಷ ಬಳ್ಳಿ ಎಂದೆಲ್ಲಾ ಕರೆಯುತ್ತಾರೆ. ಸಸ್ಯಗಳಲ್ಲಿ ಇದರಷ್ಟು ವೇಗವಾಗಿ ಬೆಳೆಯುವ ಹುಲುಸಾಗಿ ಬೆಳೆಯುವಂತದ್ದು ಇನ್ನೊಂದಿಲ್ಲ ಎಂದರೂ ತಪ್ಪಾಗಲಾರದು.  ಒಂದು ತುಂಡು ಬಳ್ಳಿಯಿದ್ದರೆ ಅದು ಒಂದೇ ವರ್ಷದಲ್ಲಿ ಇಡೀ ಹೊಲಕ್ಕೆ ವ್ಯಾಪಿಸಬಹುದು. ಫಲವತ್ತಾದ ಮಣ್ಣು ಇರುವಲ್ಲಿ ಹುಲುಸಾಗಿ ಬೆಳೆಯುತ್ತದೆ.

ಮಣ್ಣಿನ ಸವಕಳಿ ತಡೆಯುವ ಸಸ್ಯ:

ಮಣ್ಣಿನ ಸವಕಳಿ ತಡೆಯುವ ಸಸ್ಯ:

ಪ್ರಕೃತಿಯಲ್ಲಿ ಮಣ್ಣಿನ ಸವಕಳಿ ತಡೆಯಲು ಹಲವಾರು ಗಿಡಗಳು, ಹುಲ್ಲುಗಳಿವೆ. ಅವುಗಳಲ್ಲಿ ಬಹಳಷ್ಟು ಈಗ ನಾಶವಾಗಿವೆ.  ಅದರ ಸ್ಥಾನ ತುಂಬಲು ಬಂದಿದೆ ಈ ಸಸ್ಯ. ಮಣ್ಣು ಸವಕಳಿ ಇತ್ತೀಚಿನ ದಿನಗಳಲ್ಲಿ ಭಾರೀ ಹೆಚ್ಚಾಗುತ್ತಿದೆ. ಮಣ್ಣು ಬರಿ ಮೈಯಲ್ಲಿದೆ. ಇದರ ಅಂಗಿಯನ್ನು ನಾವೇ ತೆಗೆದು ಬರಿ ಮೈ ಮಾಡಿದ್ದೇವೆ.ಮಣ್ಣು – ಭೂಮಿ ಇದು ಪ್ರಕೃತಿಯ ಸೃಷ್ಟಿ. ಇದರ ರಕ್ಷಣೆಗೆ ಅದರಲ್ಲೇ ಬೇಕಾದ ವ್ಯವಸ್ಥೆಗಳು ಇವೆ. ಮರ  ಕಡಿದರೆ ಅದರ ಬುಡದಲ್ಲಿದ್ದ ಮೆಕ್ಕಲು ಮಣ್ಣು ಮಳೆ ಹನಿ ರಭಸಕ್ಕೆ ಕೊಚ್ಚಿ ಹೋಗುತ್ತದೆ. ಮರ ಇದ್ದರೆ ಅದರ ಬುಡದಲ್ಲಿ  ಇರುವ ತರಗೆಲೆಗಳ ಮೇಲೆ ಮರದ ಎಲೆಗಳ ಮೇಲೆ ಬಿದ್ದ ಮಳೆ ಹನಿ  ಒಮ್ಮೆ ತಡೆಯಲ್ಪಟ್ಟು ಕೆಳಗೆ ಸ್ವಲ್ಪ ನಿಧಾನವಾಗಿ ಬೀಳುತ್ತದೆ. ಆಗ ಮಣ್ಣು ಕೊಚ್ಚಣೆ ತಡೆಯಲ್ಪಡುತ್ತದೆ. ಎಣ್ಣೆ ಹೊಳೆ,ಯೆನ್ನೆ ಹೊಳೆ ಎಂಬ ನದಿ ಹೆಸರನ್ನು ಕೇಳಿರಬಹುದು. ಇದು  ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹುಟ್ಟಿ, ಕಬ್ಬಿನಾಲೆ ಮೂಲಕ  ಹರಿದು ಹೋಗುತ್ತದೆ. ಈ ನದಿಯ  ಬಗ್ಗೆ ಹೇಳುವುದಾದರೆ ಇದರಲ್ಲಿ ಮಳೆಗಾಲದಲ್ಲಿ ಹರಿಯುವ ನೀರೂ ಸಹ ತಿಳಿಯಾಗಿರುತ್ತದೆ. ಕಾರಣ ಇದು ಕಾಡುಗಳ ನಡುವೆ ಹರಿದು ಬರುತ್ತದೆ. ಕಾಡಿನ ಮರಮಟ್ಟುಗಳ ಮೇಲ್ಚಾವಣಿಗೆ ಮಳೆ ನೀರು ಬಿದ್ದುದು ಮೃದುವಾಗಿ ನೆಲಕ್ಕೆ ಬಿದ್ದು, ಏನನ್ನೂ ಕರಗಿಸದೆ ನೀರಿನ ಸಹಜ ಬಣ್ಣದಲ್ಲೇ ಹೊಳೆಗೆ ಸೇರುತ್ತದೆ. ಹಾಗಾಗಿ ಯೆನ್ನೇ ಹೊಳೆಯ ನೀರು ಎಣ್ಣೆಯಂತೆ ತಿಳಿ. ಅಂತಹ ಇನ್ನೂ ಕೆಲವು ಸಣ್ಣ ಸಣ್ಣ ಹಳ್ಳಗಳು, ತೋಡುಗಳು ನಮ್ಮಲ್ಲಿವೆ. ಹಿಂದೆ ನಮ್ಮಲ್ಲಿ ತುಂಬಾ ಹೊಳೆಗಳಲ್ಲಿ ಇದೇ ರೀತಿಯ ನೀರು ಹರಿದು ಹೋಗುತ್ತಿತ್ತು. ಈಗ ಎಲ್ಲಾ ನದಿಗಳೂ  ನಿರಂತರವಾಗಿ  ಕೆಂಪು ನೀರನ್ನೇ ಸಾಗಿಸುತ್ತಿವೆ.ಇದು ಮಣ್ಣಿನ ಸವಕಳಿಯ ತೀವ್ರತೆಯನ್ನು ಸೂಚಿಸುತ್ತದೆ. ನೆಲದ ಮೇಲಿನ ಮೇಲ್ಮಣ್ಣು ಕೊಚ್ಚಣೆಯಾಗಿ, ಅದರ ಕೆಳಗಿನ ಮಣ್ಣು ಸಹ ಕರಗುತ್ತಿದೆ. ಇದರಿಂದಾಗಿ ಭೂಮಿಯ ಫಲವತ್ತತೆ ಕ್ಷೀಣಿಸುತ್ತಿದೆ. ಸೇವಂತಿಗೆ ಕಳೆ ನೆಲಕ್ಕೆ ಪೂರ್ತಿ ಹೊದಿಕೆ ಕೊಟ್ಟು ಪರಿಣಾಮಕಾರಿಯಾಗಿ  ಮಣ್ಣು ಸವಕಳಿಯನ್ನು ತಡೆಯುತ್ತದೆ. ಯಾವುದೇ ಕಾರಣಕ್ಕೆ ಮೇಲ್ಮಣ್ಣನ್ನು ಕರಗಿ ಹೋಗಲು ಬಿಡುವುದಿಲ್ಲ.ರಸ್ತೆ ಬದಿ, ಕರಗುವ ಸ್ಥಳಗಳಲ್ಲಿ ಈ ಬಳ್ಳಿಯನ್ನು ಬೆಳೆಸಿದರೆ ಅಲ್ಲಿ ಮಣ್ಣು ಕರಗುವುದಿಲ್ಲ. ಕುಸಿತ ಉಂಟಾಗುವ ಸಾಧ್ಯತೆಯೂ ಕಡಿಮೆ.

ಅತ್ಯುತ್ತಮ ಮೇವು:

ಜಾನುವಾರುಗಳ ಮೇವಿಗೆ ಇದು ಉತ್ತಮ. ಬಹುಶಃ ಈ ಬಳ್ಳಿ ಪ್ರತ್ಯಕ್ಷವಾಗದೆ ಇರುತ್ತಿದ್ದರೆ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುತ್ತಿತ್ತೇನೋ. ಕರಾವಳಿಯ  ಹಲವಾರು ಜನ ಹೈನುಗಾರರು ಇದನ್ನು ಎಲ್ಲಿದ್ದರೂ  ಮೇವಿಗಾಗಿ ಒಯ್ಯುತ್ತಾರೆ.  ಇದನ್ನು ಕೀಳುವುದು ಸುಲಭ. ಇದನ್ನು ತಿಂದ ಹಸು, ಎಮ್ಮೆಗಳು ಹೆಚ್ಚು ಹಾಲನ್ನು ಕೊಡುತ್ತವೆ. ಬೆಳೆದ ಬಳ್ಳಿಯಲ್ಲಿ ಹೆಚ್ಚಿನ ನಾರಿನ ಅಂಶ (Fiber)  ಇರುತ್ತದೆ. ಹಾಗಾಗಿ ಜಾನುವಾರುಗಳು ಹೆಚ್ಚು ಸಮಯದ ತನಕ ಪಚನ ಕ್ರಿಯೆ ಮಾಡುತ್ತವೆ. ಹೊಟ್ಟೆ ತುಂಬಲು ಇದು  ಬಹಳ ಉತ್ತಮ. ಕೆಲವರು ಇದರಲ್ಲಿ ಒಂದು ವಾಸನೆ  ಇದೆ. ಇದನ್ನು ತಿಂದರೆ ಜಾನುವಾರುಗಳು ತೆಳ್ಳಗೆ ಮಲವಿಸರ್ಜನೆ ಮಾಡುತ್ತವೆ. ಆರೋಗ್ಯ ಹಾಳಾಗುತ್ತದೆ ಎನ್ನುತ್ತಾರೆ. ಹೀಗೆ ಹೇಳುವವರೆಲ್ಲಾ  ಹಸು ಸಾಕುವವರಲ್ಲ. ಮುಖ್ಯವಾಗಿ ಇದನ್ನು  ತಿನ್ನಲು ಮೊದಲು ಅಭ್ಯಾಸ ಮಾಡಬೇಕು. ಇತರ ಹುಲ್ಲಿನ ಜೊತೆಗೆ ಇದನ್ನು ಸ್ವಲ್ಪ ಸ್ವಲ್ಪವೇ ಕೊಟ್ಟು ಒಂದೆರಡು ವಾರದಲ್ಲಿ ಇದನ್ನು ಬಹಳ ಇಚ್ಚೆ ಪಟ್ಟು ತಿನ್ನುತ್ತವೆ.  ಇತರ ಮೇವಿನ ಹುಲ್ಲಿಗಿಂತ ಇದರ ಬೆಳವಣಿಗೆ ಶೀಘ್ರ. ಹಾಗಾಗಿ ಹೈನುಗಾರಿಕೆ ಮಾಡುವವರಿಗೆ ಇದು ವರ ಎಂದೇ ಹೇಳಬಹುದು. ಇದರ ವಿಶೇಷತೆ ಏನೆಂದರೆ ಕಡಿಮೆ ಫಲವತ್ತಾದ ಮಣ್ಣಿನಲ್ಲೂ ಇದು ಬೆಳೆಯುತ್ತದೆ. ಮೊದ ಮೊದಲು ಹುಲುಸಾಗಿ ಬೆಳೆಯದೆ ಇದ್ದರೂ ನೆಲಕ್ಕೆ ಹೊದಿಕೆ ಆದ ನಂತರ ಅದರ ತ್ಯಾಜ್ಯಗಳ ಸಾರದಿಂದಲೇ ಇದು  ಬೆಳೆಯುತ್ತಿರುತ್ತದೆ. ಕಟಾವು ಮಾಡಿ ಒಂದು ತಿಂಗಳ ಒಳಗೆ ಮತ್ತೆ ಅದೇ ಪ್ರಮಾಣದಲ್ಲಿ ಬೆಳೆಯುತ್ತದೆ. ಇತ್ತೀಚೆಗೆ ಬಹುತೇಕ ಎಲ್ಲಾ ಕಡೆಯೂ ಹಸು, ಎಮ್ಮೆಗಳು ಇದನ್ನು ತಿನ್ನುತ್ತಿವೆ.

ಪರಾಗದಾನಿಗಳಿಗೆ ಆಹಾರ:

ಪರಾಗದಾನಿಗಳಿಗೆ ಆಹಾರ:

ಇದು ಮಳೆಗಾಲ ಮುಗಿಯುವ ಸಮಯಕ್ಕೆ ಹೂ ಬಿಡಲಾರಂಭಿಸುತ್ತದೆ.ಆ ಸಮಯದಲ್ಲಿ ಪರಾಗ ವರ್ಗಾವಣೆ ಮಾಡುವ ದುಂಬಿಗಳಿಗೆ ಇದು ಆಹಾರವನ್ನು ಒದಗಿಸುತ್ತದೆ. ಉಳಿದ ಯಾವುದೇ ಹೂವು ಇಲ್ಲದ ಸಮಯದಲ್ಲಿ ಹೂ ಬಿಡುವ ಕಾರಣ  ಇದು ಜೀವವೈವಿದ್ಯಕ್ಕೆ ಆಸರೆಯಾಗುತ್ತದೆ.

ಕೈಯಿಂದ ಕೀಳುವುದು ಬಹಳ ಸುಲಭ:

ಹೆಚ್ಚಿನ ಮೇವಿನ ಹುಲ್ಲನ್ನು ಕೈಯಿಂದ ಕೀಳುವುದು ಕಷ್ಟ. ಆದರೆ ಇದನ್ನು ಕತ್ತಿಯ ಸಹಾಯ ಇಲ್ಲದೆ ಕೀಳಬಹುದು. ಬಳ್ಳಿ ತರಹ ಇರುವುದರಿಂದ ಒಂದು ಕಡೆ ಕೀಳುತ್ತಾ ಹೋದರೆ ಹಾಸಿಗೆ ತರಹ ಮಡಚುತ್ತಾ ಕೀಳಲು ಬರುತ್ತದೆ. ಹೀಗೆ ಕಿತ್ತಾಗಲೂ ಅದರ ಬೇರಿನ ತುಂಡುಗಳು ನೆಲದಲ್ಲಿ ಉಳಿಯುತ್ತದೆ. ಅದು ಮತ್ತೆ ಚಿಗುರುತ್ತದೆ. ಕತ್ತಿಯ ಸಹಾಯದಿಂದ ಇದನ್ನು ಕೊಚ್ಚುವುದಕ್ಕೂ ಕಷ್ಟ ಇಲ್ಲ.  ಇದು ದಪ್ಪಕ್ಕೆ ಬೆಳೆಯುತ್ತದೆಯಾದರೂ ಇದರ ಎಡೆಯಲ್ಲಿ ಹಾವು ಇತ್ಯಾದಿ ವಾಸವಾಗಿರುವುದು ತುಂಬಾ ಕಡಿಮೆ.

ಕೈಯಿಂದ ಕೀಳುವುದು ಬಹಳ ಸುಲಭ:

ನಾಶ ಮಾಡುವುದು ಹೇಗೆ?

ಇದನ್ನು ಅನಿವಾರ್ಯ ಪ್ರಸಂಗಗಳಿದ್ದಾಗ ಮಾತ್ರ ನಾಶ ಮಾಡಬೇಕು. ಉಪಯೋಗಕ್ಕೆ ಇಲ್ಲದ ಸ್ಥಳದಲ್ಲಿ ಇದ್ದರೆ ಅದನ್ನು ಹಾಗೆ ಬೆಳೆಯಲು ಬಿಡಿ. ಬೇಸಿಗೆಯಲ್ಲಿ ಬೆಳವಣಿಗೆ ಕುಂಟಿತವಾದರೂ, ಒಣಗಿದಂತೆ ಕಂಡರೂ ಒಂದು ಮಳೆಗೆ ಮತ್ತೆ ಚಿಗುರಿಕೊಂಡು ಮಣ್ಣಿಗೆ ರಕ್ಷಣೆಯನ್ನು ಕೊಡುತ್ತದೆ. ಇದರ ಒಣ ಎಲೆಗಳು ಕೊಳೆತದ್ದು ಹಾಗೂ ಅದರ ಹಂದರದಂತಹ ಹಬ್ಬುವಿಕೆಯಿಂದ ತಡೆಯಪಟ್ಟ  ಮೆಕ್ಕಲು ಮಣ್ಣಿನ ಸಹಾಯದಿಂದ ಹುಲುಸಾಗಿ ಬೆಳೆಯುತ್ತದೆ. ಹಸು, ಎಮ್ಮೆ ಇತ್ಯಾದಿ ಇದ್ದವರು ಇದನ್ನು ಮೇವಾಗಿ ಬಳಸಿಕೊಂಡರೆ ಅದರಿಂದ ಉಪಟಳ ಇಲ್ಲ. ಇಲ್ಲದವರು ನೆರೆಹೊರೆಯವರು  ಒಯ್ಯುವುದಾದರೆ ಕೊಡಬಹುದು. ವೀಡ್ ಮಾಟ್ ಹಾಕಿ  ಎಲ್ಲಿ ತೊಂದರೆ ಆಗುತ್ತದೆಯೋ ಅಲ್ಲಿ ಬೆಳವಣಿಗೆ ಆಗದಂತೆ ನೋಡಿಕೊಳ್ಳಬಹುದು. ಕಳೆ ನಾಶಕಗಳಲ್ಲಿ ಪರಾಕೋಟ್ ಕಳೆನಾಶಕದಲ್ಲಿ ಸಾಯುತ್ತದೆ. ಅದಕ್ಕೆ ಯೂರಿಯಾ ಬೆರೆಸಿದರೆ ಬೇರು ಸಮೇತ ಸತ್ತು ಹೋಗುತ್ತದೆ. ಜಾಗರೂಕತೆಯಲ್ಲಿ ಸಿಂಪರಣೆ ಮಾಡಬೇಕು.  

ಸೇವಂತಿಗೆ ಕಳೆ ಮಹಾ ಮಾರಿ ಎಂದು ಹೇಳುವವರು ಮುಖ್ಯವಾಗಿ ಗಮನಿಸಬೇಕಾದದ್ದು ಇದಕ್ಕಿಂತ ಹೆಚ್ಚಿನ ಹಾನಿ ಮಾಡುವ ಕಳೆ ರಬ್ಬರ್ ತೋಟದಲ್ಲಿ ಬೆಳೆಸಲ್ಪಡುವ ಮುಚ್ಚಲು ಬಳ್ಳಿ. ಇದು ಸಸ್ಯ ಜೀವ ವೈವಿಧ್ಯವನ್ನು  ಹಾಳು ಮಾಡುತ್ತಿದೆ. ಹಲವಾರು ಮೂಲಿಕಾ ಸಸ್ಯಗಳ ಅವನತಿಗೆ ಕಾರಣವಾಗಿದೆ. ಮರಮಟ್ಟುಗಳನ್ನೂ ಇದು  ಸಾಯಿಸುತ್ತಿದೆ. ಇದರ ನಿರ್ವಹಣೆ ಬಗ್ಗೆ ಮೊದಲು ಎಚ್ಚೆತ್ತುಕೊಳ್ಳೋಣ. ನಂತರ ಈ ಗಿಡದ ಬಗ್ಗೆ ಯೋಚಿಸೋಣ. ಪ್ರಕೃತಿ ಇದರ ಪ್ರಾಬಲ್ಯತೆ ಹೆಚ್ಚಾದಾಗ ಅದನ್ನು ಹದ್ದುಬಸ್ತಿಗೆ ತರಬಹುದು.

Leave a Reply

Your email address will not be published. Required fields are marked *

error: Content is protected !!