ಸಂಪಧ್ಭರಿತ ಕಾಂಪೋಸ್ಟ್ ಗೊಬ್ಬರ ಹೇಗೆ ತಯಾರಿಸುವುದು?

ಸಂಪಧ್ಭರಿತ ಕಾಂಪೋಸ್ಟ್ ಗೊಬ್ಬರ ಹೇಗೆ ತಯಾರಿಸುವುದು

ಸಾವಯವ ಗೊಬ್ಬರದ ಪ್ರಮುಖ ಮೂಲ ಕಾಂಪೋಸ್ಟ್. ಬಹುತೇಕ ಎಲ್ಲಾ ಕೃಷಿಕರೂ ಸಾವಯವ ಗೊಬ್ಬರ ತಯಾರಿಸುತ್ತಾರೆ. ಆದರೆ ಹೆಚ್ಚಿನವರು ವೈಜ್ಞಾನಿಕವಾಗಿ ಹೇಗೆ ತಯಾರಿಸಬೇಕೋ ಹಾಗೆ ತಯಾರಿಸದ ಕಾರಣ ಅದರ ಬಳಕೆಯಿಂದ ಸರಿಯಾದ ಫಲವನ್ನು ಪಡೆಯುತ್ತಿಲ್ಲ.  ವೈಜ್ಞಾನಿಕವಾಗಿ  ತಯಾರಿಸಿದ ಕಾಂಪೋಸ್ಟ್ ಗೊಬ್ಬರ ಎರೆಹುಳು ಗೊಬ್ಬರದಷ್ಟೇ ಸತ್ವವನ್ನು ಒಳಗೊಂಡಿರುತ್ತದೆ ಹಾಗೆಯೇ  ಕೊಂಡು ತರುವ ಚೀಲದಲ್ಲಿ ತುಂಬಿದ ಸಾವಯವ ಗೊಬ್ಬರಕ್ಕಿಂತ  ಅದೆಷ್ಟೋ ಪಾಲು  ಫಲಿತಾಂಶವನ್ನು  ಕೊಡುತ್ತದೆ. ಇದನ್ನು ಮಾಡುವುದಕ್ಕೆ ಕಷ್ಟ ಏನೂ ಇಲ್ಲ. ಬರೇ ಸರಳ.ಆದರೆ ನಾವು ಅಜ್ಜ ನೆಟ್ಟ ಆಲದ ಮರಕ್ಕೆ ಅರ್ಥಾರ್ಥ  ಗೊತ್ತಿಲ್ಲದೆ ಸುತ್ತು ಬರುತ್ತೇವೆ.

ಸಾವಯವ ಗೊಬ್ಬರ ಕೃಷಿಗೆ ಅನಿವಾರ್ಯ. ಹಾಗೆಂದು ರಸ ಗೊಬ್ಬರಗಳಿಂದಲೇ  ಇಳುವರಿ ಪಡೆಯಲಿಕ್ಕೆ ಆಗುವುದಿಲ್ಲವೇ? ಆಗುತ್ತದೆ. ಸಾವಯವ ಗೊಬ್ಬರದ ಫಲಿತಾಂಶ ಧೀರ್ಘಾವಧಿ ತನಕ ಇರುತ್ತದೆ. ಸಸ್ಯದ ಹಸಿವಿಗೆ ತಕ್ಕುದಾಗಿ ಸ್ವಲ್ಪ ಸ್ವಲ್ಪವೇ  ಬಿಡುಗಡೆಯಾಗುತ್ತಾ  ಫಲಿತಾಂಶವನ್ನು ಕೊಡುತ್ತಿರುತ್ತದೆ. ರಸ ಗೊಬ್ಬರ ಹಾಗಲ್ಲ. ತ್ವರಿತವಾಗಿ ಪೊಷಕಾಂಶಗಳನ್ನು ಬಿಡುಗಡೆ ಮಾಡುತ್ತದೆ. ಸಸ್ಯವು ತನಗೆ ಬೇಕಾದಷ್ಟನ್ನು ಸ್ವೀಕರಿಸುತ್ತದೆ. ಉಳಿದುದು ಇಳಿದು ಹೋಗಿ ನಷ್ಟವಾಗುತ್ತದೆ. ರಸ ಗೊಬ್ಬರಗಳನ್ನು ಸ್ವಲ್ಪ ಸ್ವಲ್ಪವೇ ನಿರಂತರವಾಗಿ ಕೊಡುತ್ತಿದ್ದರೆ ಅದರಲ್ಲೂ ಫಲ ಉತ್ತಮವಾಗಿಯೇ ಇರುತ್ತದೆ. ಆದರೆ ಮಣ್ಣಿನ ಗುಣ ವ್ಯತ್ಯಾಸಗಳು ಆಗುತ್ತಿರುತ್ತದೆ. ಮಣ್ಣಿನಲ್ಲಿ  ಸಾವಯವ ಅಂಶ ಹೆಚ್ಚಳವಾದಂತೆ ಮಣ್ಣು ಮೆದುವಾಗುತ್ತದೆ. ಅಂದರೆ ಮೆಕ್ಕಲು ಮಣ್ಣು ಅಂಟು ಮಣ್ಣು  ಜಾಸ್ತಿಯಾಗುತ್ತದೆ. ಇದು ಜಾಸ್ತಿಯಾದಂತೆ ಮಣ್ಣಿಗೆ ನೀರು ಹಿಡಿದಿಟ್ಟುಕೊಳ್ಳುವ ಗುಣ ಬರುತ್ತದೆ. ಅಲ್ಲಿ  ಹುಲ್ಲು ಇತ್ಯಾದಿ ಹುಟ್ಟುತ್ತದೆ. ಸಾಯುತ್ತದೆ ಮತ್ತೆ ಮತ್ತೆ ಸಾವಯವ ಅಂಶ ಸೇರಿಕೊಳ್ಳುತ್ತಾ ಮಣ್ಣು  ನ್ಜೈವಿಕವಾಗಿ , ಬೌತಿಕವಾಗಿ ಶ್ರೀಮಂತವಾಗುತ್ತದೆ. ಇಂತಹ ಮಣ್ಣಿಗೆ ರಸ ಗೊಬ್ಬರ  ಕೊಟ್ಟರೂ ಅದರ ಫಲಿತಾಂಶ ಚೆನ್ನಾಗಿಯೇ ಇರುತ್ತದೆ, ಉದಾಹರಣೆಗೆ ಹೇಳುವುದಾದರೆ  ಗದ್ದೆ ಬೇಸಾಯ ಮಾಡುತ್ತಿದ್ದ ಹೊಲಕ್ಕೆ ರಸ ಗೊಬ್ಬರ ಪೂರೈಕೆ ಮಾಡಿದಾಗ ಅದರಲ್ಲಿ ಫಲ ಹೆಚ್ಚು. ಅದೇ ಫಲವತ್ತತೆ ಕಡಿಮೆ ಇರುವ  ನೊರಜು ಕಲ್ಲುಗಳಿರುವ ಮಣ್ಣಿನಲ್ಲಿ  ರಸ ಗೊಬ್ಬರಗಳು ಉತ್ತಮವಾಗಿ ಕೆಲಸ ಮಾಡುವುದಿಲ್ಲ  ಈ ಎಲ್ಲಾ ಕಾರಣಕ್ಕೆ ಸಾವಯವ ಅಂಶವನ್ನು ಮಣ್ಣಿಗೆ ಸೇರಿಸುತ್ತಾ ಬರಬೇಕು. ಆಗ ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚಾಗುತ್ತದೆ.  ಬೆಳೆ ಚೆನ್ನಾಗಿ ಬರುತ್ತದೆ.

ಸಾವಯವ ವಸ್ತುವು ಸಂಪೂರ್ಣವಾಗಿ ರೂಪಾಂತರ ಹೊಂದಿ ಮತ್ತೆ ಗುರುತಿಸಲಾದಷ್ಟು ಹುಡಿ

ಕಾಂಪೋಸ್ಟ್ ಗೊಬ್ಬರ ಎಂದರೇನು?

ಯಾವುದೇ ಸಾವಯವ ವಸ್ತುಗಳು (Mixture of organic matters which is used for plant nutrient) ಕಳಿತು ಹುಡಿಯಾದ ರೂಪಕ್ಕೆ ಪರಿವರ್ತನೆಯಾದದ್ದಕ್ಕೆ ಕಾಂಪೋಸ್ಟ್ ಎನ್ನುತ್ತಾರೆ. ಕಾಂಪೋಸ್ಟ್ ಆದ ಸಾವಯವ ವಸ್ತುವು ಸಂಪೂರ್ಣವಾಗಿ ರೂಪಾಂತರ ಹೊಂದಿ ಮತ್ತೆ ಗುರುತಿಸಲಾದಷ್ಟು ಹುಡಿ ಆಗಿರಬೇಕು. ಉದಾಹರಣೆಗೆ ಬಾಳೆಯ ಒಣ ಎಲೆ , ತೆಂಗಿನ ಕರಿ, ಅಡಿಕೆ ಗರಿ, ತರಗೆಲೆ ಹಾಗೆಯೇ ಹುಲ್ಲು ಎಲ್ಲವನ್ನೂ ರಾಶಿ ಹಾಕಿ ಅದು ಹುಡಿಯಾದಾಗ ಅದರಲ್ಲಿ ಯಾವ ಯಾವ ವಸ್ತು ಸೇರಿಸಲಾಗಿದೆಯೋ ಅದೆಲ್ಲಾ  ಮತ್ತೆ ಗುರುತಿಸಲಾಗದಷ್ಟು  ಹುಡಿರೂಪಕ್ಕೆ ಬಂದಿರಬೇಕು. ಯಾವುದೇ ವಾಸನೆ ಇರಬಾರದು. ಅದನ್ನು ತೆಗೆಯುವಾಗ ಅದರಲ್ಲಿ ಬಿಸಿ  ಗಾಳಿ ಬರಬಾರದು. ನಾವು ಮಾಡುವ ಕಂಪೋಷ್ಟು ಈ ರೀತಿಯಾಗಿ ಇರುತ್ತದೆಯೇ ಹಾಗಿದ್ದರೆ ಅದು ವೈಜ್ಞಾನಿಕವಾಗಿ ತಯಾರಿಸಲ್ಪಟ್ಟ ಕಾಂಪೋಸ್ಟು. ಒಂದು ವೇಳೆ  ನಮ್ಮ ಕಾಂಪೋಸ್ಟುಗೆ ಹಾಕಿದ ವಸ್ತುಗಳು ಅಲ್ಪ ಸ್ವಲ್ಪ ಕರಗಿದ್ದರೆ, ಎಲೆಗಳು  ಹಾಗು ಇನ್ನಿತರ ವಸ್ತುಗಳನ್ನು  ಗುರುತಿಸುವ ಹಾಗಿದ್ದರೆ ವಾಸನೆ  ಹಾಗೂ ಹೊಗೆ ತರಹ ಬಿಸಿ ಗಾಳಿ ಇದ್ದರೆ ಅದು ಸಮರ್ಪಕವಾದ ಕಾಂಪೋಸ್ಟು ಆಗಿರುವುದಿಲ್ಲ.  ಕಾಂಪೋಸ್ಟು ಗೊಬ್ಬರ  ಹುಡಿಯಾಗಿ ಕಪ್ಪಾಗಿರುತ್ತದೆ.  ಮಣ್ಣಿಗೆ ಹಾಕಿದ ತಕ್ಷಣ ಅದಕ್ಕೆ ಸೂಕ್ಷ್ಮಾಣು ಜೀವಿಗಳು ಪ್ರವೇಶವಾಗುತ್ತದೆ. ಸಸ್ಯದ ಬೇರುಗಳು ಅದರ ಮೇಲೆ ಬೆಳೆದು ಅದರ ಸಸ್ತ್ವವನ್ನು ಬಳಸಿಕೊಳ್ಳಲಾರಂಭಿಸುತ್ತದೆ. ಸಮರ್ಪಕವಾಗಿ ತಯಾರಿಸದ ಗೊಬ್ಬರವು ಮತ್ತೆ ಹುಡಿ ರೂಪಕ್ಕೆ ಬಂದ ನಂತರವೇ ಸಸ್ಯಗಳು ಬಳಸಿಕೊಳ್ಳುವುದು.

ಸರಿಯಾದ ಕಾಂಪೋಷ್ಟು  ತಯಾರಿಕೆ ಹೇಗೆ?

ಸಾವಯವ ತ್ಯಾಜ್ಯಗಳನ್ನು ಒಂದೆಡೆ ರಾಶಿ ಹಾಕಿ ಕಾಂಪೋಸ್ಟು

ಕಾಂಪೋಸ್ಟು ತಯಾರಿಕೆಯಲ್ಲಿ ಬಹಳ ಹಿಂದೆ ಸಾವಯವ ವಸ್ತುಗಳನ್ನು ಸಂಗ್ರಹಿಸಿದಂತೇ ಒಂದು ಹೊಂಡಕ್ಕೆ ಹಾಕುತ್ತಾ ತಯಾರಿಸುತ್ತಿದ್ದರು. ಅದಕ್ಕೆ ಹಟ್ಟಿ ಗೊಬ್ಬರವನ್ನೂ ಹಾಕಿತ್ತಿದ್ದರು. ಬೆಳೆ ಉಳಿಕೆ, ಸೊಪ್ಪು ಸದೆ, ಹುಲ್ಲು  ಎಲ್ಲವನ್ನೂ ಹಾಕುತ್ತಿದ್ದರು. ಅದಕ್ಕಾಗಿಯೇ ಒಂದು ಹೊಂಡ ಮಾಡಿ ಅದಕ್ಕೆ ಎಲ್ಲವನ್ನೂ ತುಂಬಿಸಿ ವರ್ಷಕ್ಕೊಮ್ಮೆ ತೆಗೆದು ಅದನ್ನು ಬೆಳೆಗಳಿಗೆ ಬಳಕೆ ಮಾಡುತ್ತಿದ್ದರು. ಇದರಲ್ಲಿ ಹಾಕಿದ ವಸ್ತುಗಳು  ಹಾಗೆಯೇ ಇರುತ್ತಿದ್ದವು. ಮಳೆಗಾಲದಲ್ಲಿ ನೀರು ತುಂಬಿ ರಸ ಎಲ್ಲಾ ತಳಕ್ಕೆ ಇಳಿದು ಹೋಗುತ್ತಿತ್ತು. ಹಾಕಿದ ವಸ್ತುಗಳ ಬಣ್ಣ ಮಾತ್ರ ಕಪ್ಪಗಾಗಿರುತ್ತಿತ್ತು. ಸ್ತೂಲ ಕೊಟ್ಟಿಗೆ ಗೊಬ್ಬರವನ್ನು ಬುಟ್ಟಿಯಲ್ಲಿ ಹಾಕಿ ಬೆಳೆಗಳಿಗೆ ಬಳಕೆ ಮಾಡಿದಂತೆ ಮಾಡಲಾಗುತ್ತಿತ್ತು. ಇದು  ನೈಜ ಕಾಂಪೋಸ್ಟು ಅಲ್ಲ.

ಕಾಂಪೋಸ್ಟ್ ತೊಟ್ಟಿ ಹೀಗೆ ಮಾಡಬಹುದು
ಕಾಂಪೋಸ್ಟ್ ತೊಟ್ಟಿ ಹೀಗೆ ಮಾಡಬಹುದು
ಕಾಂಪೋಸ್ಟ್ ತೊಟ್ಟಿ ಹೀಗೆ ಮಾಡಬಹುದು

ನೆಲದ ಕೆಳಭಾಗದಲ್ಲಿ (Anarobic method  ಗಾಳಿಯಾಡದ ರೀತಿ)ಹೊಂಡ ಮಾಡಿ ಕಾಂಪೋಸ್ಟು ಮಾಡಿದರೆ ಅದು ಹುಡಿ ರೂಪಕ್ಕೆ ಪರಿವರ್ತನೆ ಆಗುವುದಿಲ್ಲ.  ಅದು ಆಗಬೇಕಾದರೆ ನೆಲದ ಮೇಲ್ಭಾಗದಲ್ಲಿ (Arobic method) ಮಾಡಬೇಕು. ಕೆಲವರು ಸಾವಯವ ತ್ಯಾಜ್ಯಗಳನ್ನು ಒಂದೆಡೆ ರಾಶಿ ಹಾಕುತ್ತಾರೆ. ಅದು ಪೂರ್ತಿ ಸರಿಯಾದ ಕಾಂಪೋಸ್ಟು ಆಲ್ಲದಿದ್ದರೂ  ಇದರಲ್ಲಿ ಅರ್ಧಕ್ಕರ್ಧವಾದರೂ ಹುಡಿ ರೂಪಕ್ಕೆ ಪರಿವರ್ತನೆಯಾಗುತ್ತದೆ.  ನೆಲದ ಮೇಲೆ ಸಾಧ್ಯವಾದಷ್ಟು ಎತ್ತರಕ್ಕೆ  ಬೇರೆ ಬೇರೆ ಸಾವಯವ ತ್ಯಾಜ್ಯಗಳನ್ನು ಜೊತೆಗೆ ಸಗಣಿ ದ್ರಾವಣ ವನ್ನು ಮಿಶ್ರಣ ಮಾಡಿ  ಹಾಕುತ್ತಾ ಬಂದು ಅದಕ್ಕೆ ಏನಾದರೂ ಮುಚ್ಚಿಟ್ಟರೆ (ಮಾಡು ಮಾಡಬಹುದು ಅಥವಾ ತೆಂಗಿನ ಗರಿ, ಅಡಿಕೆ ಗರಿಗಳನ್ನು ದಪ್ಪಕ್ಕೆ ಮುಚ್ಚಬಹುದು) ಅದು ಸರಿಯಾದ ಕಾಂಪೋಸ್ಟು ಆಗುತ್ತದೆ. ಉತ್ತಮ ಮಣ್ಣು ಸಹ ಮುಚ್ಚಬಹುದು.  ಖರ್ಚು ಮಾಡುವುದಿದ್ದರೆ ಇಟ್ಟಿಗೆ ಇತ್ಯಾದಿಗಳಿಂದ ನೆಲಮಟ್ಟದಿಂದ ಮೇಲಕ್ಕೆ ಅಲ್ಲಲ್ಲಿ ತೂತು ಬಿಟ್ಟು ಪಾತ್ರೆ ತರಹ ಮಾಡಬಹುದು. ಹಿಂದೆ ಹೇಳಿದ ಆಮ್ಲಜನಕ ರಹಿತ  (anaerobic method)  ವಿಧಾನದಲ್ಲಿ ವರ್ಷ ಕಾದರೂ ಹುಡಿಯಾಗದ್ದು ಇದರಲ್ಲಿ ಅಧ ವರ್ಷಕ್ಕೇ ಹುಡಿಯಾಗುತ್ತದೆ. ಇದಕ್ಕೆ ಮಣ್ಣು ಜನ್ಯ ಎರೆಹುಳುಗಳೂ ಬರುತ್ತವೆ. ಆಗಾಗ ತುಸು ತೇವಾಂಶವನ್ನು ಚಿಮುಕಿಸುತ್ತಿದ್ದರೆ ಕಳಿಯುವ ಕ್ರಿಯೆ ಶೀಘ್ರವಾಗಿ ನಡೆಯುತ್ತದೆ. ಇದರಲ್ಲಿ ಪೋಷಕಾಂಶ ನಷ್ಟ ಉಂಟಾಗುವುದಿಲ್ಲ. ಇಂತಹ ಹುಡಿ ಗೊಬ್ಬರವನ್ನು  ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಹಾಕಿದರೂ ಸಾಕಾಗುತ್ತದೆ.

ಕಾಂಪೋಸ್ಟು ಗೊಬ್ಬರವನ್ನು ಶ್ರೀಮಂತಗೊಳಿಸುವುದು:

ಸಾವಯವ ಗೊಬ್ಬರ ಮೂಲವಾಗಿ ತಯಾರಿಸುವ ಇದನ್ನು  ಕೆಲವು ಜೀವಾಣು ಮತ್ತು ತೀಷ್ಣ ಸತ್ವಗಳನ್ನು ಸೇರಿಸಿ ಶ್ರೀಮಂತಗೊಳಿಸಬಹುದು. ಈಗಾಗಲೇ ನಮಗೆಲ್ಲಾ ಗೊತ್ತಿರುವಂತೆ waste decomposer  ಬಳಸಿ ಅದನ್ನು ಬೇಗ  ಕಳಿಯುವಂತೆ ಮಾಡಬಹುದು. ಗೊಬ್ಬರ ತಯಾರಾಗುವ ಸಮಯದಲ್ಲಿ ಅದಕ್ಕೆ ರೋಗ ನಿರೋಧಕ, ಕೀಟ ನೀರೋಧಕ, ಜಂತು ಹುಳ ನಿರೋಧಕ ಸೂಕ್ಷ್ಮಾಣು ಜೀವಿಗಳನ್ನು ಸೇರಿಸಿದರೆ ಅದು ಹೆಚ್ಚು ಶ್ರೀಮಂತವಾಗುತ್ತದೆ.ಶೀಲಾರಂಜಕ Rock Phosphate ಅನ್ನು ಸೇರಿಸಬಹುದು. ಲಭ್ಯವಿದ್ದರೆ  ಕಟ್ಟಿಗೆ ಸುಟ್ಟ ಬೂದಿಯನ್ನು ಸ್ವಲ್ಪ ಸ್ವಲ್ಪ ಸೇರಿಸಬಹುದು.  ಸಾರಜನಕ ಮೂಲವಾಗಿ ದ್ವಿದಳ ಕಳೆ ಸಸ್ಯಗಳಾದ ಕ್ರೊಟೆಲೇರಿಯಾ, ಡಯಂಚಾ, ಸೆಣಬಿನ ಸೊಪ್ಪು ಮತ್ತು ಕಡ್ಡಿಗಳನ್ನು ಸೇರಿಸಬಹುದು.  ಗ್ಲೆರಿಸೀಡಿಯಾ ಮರದ ಸೊಪ್ಪು ಮತ್ತು ಗೆಲ್ಲುಗಳನ್ನು ಕಾಂಪೋಸ್ಟು ಮಾಡುವಾಗ ಸೇರಿಸಿದರೆ ಅದು ಸಾರಜನಕ ಸಮೃದ್ಧವಾಗುತ್ತದೆ. ರಂಜಕಕ್ಕೆ ಶಿಲಾರಂಜಕವನ್ನು ಸೇರಿಸುವುದು ಒಳ್ಳೆಯದು.

ಕೃಷಿಕರಲ್ಲಿ ಹೇಗಿದ್ದರೂ ಸಾವಯವ ವಸ್ತುಗಳು ಹೇರಳವಾಗಿ ಸಿಗುತ್ತದೆ. ಅಲ್ಲಲ್ಲಿ ಮರಮಟ್ಟುಗಳು ಇದ್ದೇ ಇರುತ್ತದೆ. ಹೊಲದ ಬೆಳೆಗಳ ತ್ಯಾಜ್ಯಗಳಿರುತ್ತವೆ.  ಎಲ್ಲಾ ನಮೂನೆಯ ಒಣ ತ್ಯಾಜ್ಯ, ಹಸಿ ತ್ಯಾಜ್ಯಗಳನ್ನು  ಹಾಳು ಮಾಡದೆ ಕಾಂಪೋಸ್ಟು ಗೊಬ್ಬರವಾಗಿ ಬಳಕೆ ಮಾಡಿದರೆ ಸಾವಯವ ಗೊಬ್ಬರ ಹೇರಳವಾಗುತ್ತದೆ.  

Leave a Reply

Your email address will not be published. Required fields are marked *

error: Content is protected !!