ಕೃಷಿ ಮಾಡುವಾಗ ರಾಸಾಯನಿಕ ಗೊಬ್ಬರ ಒಂದನ್ನೇ ಮಣ್ಣಿಗೆ ಕೊಡುತ್ತಾ ಇದ್ದರೆ, ನಿಧಾನವಾಗಿ ಮಣ್ಣಿನ ರಚನೆ ಕೆಳಮಟ್ಟಕ್ಕೆ ಇಳಿಯುತ್ತದೆ. ಮಣ್ಣಿನ ರಚನೆ ವ್ಯತ್ಯಾಸವಾದರೆ ರಸಗೊಬ್ಬರಗಳು ಕೆಲಸ ಮಾಡುವುದಿಲ್ಲ. ಯಾವುದೇ ರಸ ಗೊಬ್ಬರಗಳನ್ನು ನೇರವಾಗಿ ಸಸ್ಯಗಳು ಬಳಕೆ ಮಾಡಿಕೊಳ್ಳಲಾರವು. ಮಣ್ಣಿನ ಜೀವಾಣುಗಳ ಸಹಕಾರದಿಂದ ಅವು ಸಸ್ಯಗಳಿಗೆ ಲಭ್ಯವಾಗುತ್ತದೆ. ಮಣ್ಣಿನಲ್ಲಿ ಜೀವಾಣುಗಳು ಇದ್ದರೆ ಅದು ಜೀರ್ಣಕ್ಕೊಳಪಡುತ್ತದೆ. ಫಲವತ್ತತೆ ಕಡಿಮೆಯಾದ ಮಣ್ಣಿನಲ್ಲಿ ಜೀವಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಆಗ ರಸ ಗೊಬ್ಬರಗಳ ಕ್ಷಮತೆಯೂ ಕಡಿಮೆಯಾಗುತ್ತದೆ. ಆದ ಕಾರಣ ಅಧಿಕ ಇಳುವರಿಗೆ ಅಗತ್ಯವಿದ್ದರೆ ರಸಗೊಬ್ಬರ ಹಿತ ಮಿತವಾಗಿ ಬಳಸಿ. ಆದರೆ ಸಾವಯವ ವಸ್ತುಗಳನ್ನು ಮಾತ್ರ ಯಾವತ್ತು ಕೊಡುವುದನ್ನು ಬಿಡಬೇಡಿ.
ಮಣ್ಣು ಜೀವಂತ ಇರುವುದು ಸಾವಯವ ವಸ್ತುಗಳ ಮಿಶ್ರಣದಿಂದ. ಸಾವಯವ ವಸ್ತುಗಳು ಹೆಚ್ಚಾಗುವುದು ಎಂದಿಲ್ಲ. ಅದು ಮಣ್ಣನ್ನು ಆಳದ ತನಕ ಫಲವತ್ತಾಗಿಸುತ್ತದೆ. ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟು , ಹಸುರೆಲೆ ಸೊಪ್ಪು, ಮುಂತಾದ ಸ್ಥೂಲ ಅಥವಾ ಕರಗದೇ ಇರುವ ವಸ್ತುಗಳನ್ನು ಮಣ್ಣಿಗೆ ಕೊಡುತ್ತಾ ಇದ್ದರೆ ಮಾತ್ರ ಮಣ್ಣು ಹಸನಾಗಿರುತ್ತದೆ. ಇದು ಮಣ್ಣಿನ ಸೇಂದ್ರೀಯ ಅಥವ ಎರೆ ಅಂಶವನ್ನು ಹೆಚ್ಚಿಸಿ ಫಲವತ್ತಾಗಿಸುತ್ತದೆ.
ಯಾಕೆ ಸಾವಯವ ವಸ್ತುಗಳು ಬೇಕು:
- ಮಣ್ಣಿನಲ್ಲಿ ಸಡಿಲತೆ ಮತ್ತು ಗಾಳಿಯಾಡುವ ಅವಕಾಶಗಳು ಇದ್ದಷ್ಟು ಆ ಮಣ್ಣು ಫಲವತ್ತಾಗುತ್ತಾ ಹೋಗುತ್ತದೆ.
- ಇದು ತನ್ನಷ್ಟಕ್ಕೆ ಆಗುವುದಿಲ್ಲ. ಮಣ್ಣಿಗೆ ಸಾವಯವ ವಸ್ತುಗಳು ಸೇರಲ್ಪಟ್ಟಾಗ ಮಾತ್ರ ಈ ರಚನೆ ಉಂಟಾಗುತ್ತದೆ.
- ಕೃಷಿ ಮಾಡುವವರು ಯವಾಗಲೂ ಮಣ್ಣೀನ ಸೇಂದ್ರೀಯತೆಯನ್ನು ಕಡಿಮೆ ಮಾಡಿಕೊಳ್ಳಬಾರದು.
- ಕಡಿಮೆಯಾದರೆ ಮಣ್ಣಿನ ಫಲವತ್ತತೆಯ ಅವಸಾನ ಎಂದೇ ಹೇಳಬಹುದು.
- ಮಣ್ಣಿಗೆ ಸಾವಯವ ಪದಾರ್ಥಗಳನ್ನು ಕೊಟ್ಟಾಗ ಅದನ್ನು ಸಸ್ಯಗಳು ನೇರವಾಗಿ ಸ್ವೀಕರಿಸುವುದಿಲ್ಲ.
ನಾವು ಹಾಕಿದ ಸಾವಯವ ಪದಾರ್ಥಗಳು, ಕರಗಬೇಕು. ನಂತರ ಅದು ಹ್ಯೂಮಸ್ ರೂಪಕ್ಕೆ ಪರಿವರ್ತನೆಯಾಗಬೇಕು. ಅಗ ಅದು ಕಂದು ಬಣ್ಣಕ್ಕೆ ತಿರುಗುತ್ತದೆ. ಇದನ್ನು ಸಸ್ಯಗಳು ಬೇರುಗಳ ಮೂಲಕ ತಮ್ಮ ಆಹಾರವಾಗಿ ಸ್ವೀಕರಿಸುತ್ತವೆ. ಆ ಹ್ಯೂಮಸ್ ನಲ್ಲಿ ಬರೇ ಸಾವಯವ ವಸ್ತುಗಳು ಅರೆಯಲ್ಪಟ ಕಪ್ಪು ಹಿಟ್ಟು ಮಾತ್ರವಲ್ಲ, ಅದರಲ್ಲಿ ಸಕ್ಕರೆ, ಪಿಷ್ಟ, ಸೆಲ್ಯುಲೋಸ್, ಮತ್ತು ಶರ್ಕರ ಪಿಷ್ಟಾದಿಗಳು, ಲಿಗ್ನಿನ್ ಗಳು, ಟ್ಯಾನಿನ್ ಗಳು, ( ಚೊಗರು) ಕೊಬ್ಬು, ಎಣ್ಣೆ, ಮೇಣ , ಪ್ರೋಟೀನು ,ಸುಣ್ಣ, ಗಂಧಕ, ಕಬ್ಬಿಣ, ಮೆಗ್ನೀಶಿಯಂ, ರಂಜಕ, ಪೊಟ್ಯಾಶ್ ಮುಂತಾದ ಖನಿಜಗಳು ಸೇರಲ್ಪಟ್ಟಿರುತ್ತವೆ.
ಸಾವಯವ ಅಂಶ ಸೇರಿದಾಗ ಏನಾಗುತ್ತದೆ?
- ಮಣ್ಣಿನಲ್ಲಿ ಉರುಟು ಕಣಗಳು ಹೆಚ್ಚಾಗುತ್ತದೆ. ಇದು ಮಣ್ಣು ಕರಗುವುದನ್ನು ತಡೆಯುತ್ತದೆ. ಮಣ್ಣು ಸವಕಳಿ ತಡೆಯಲ್ಪಡುತ್ತದೆ.
- ಸಾವಯವ ಪದಾರ್ಥ ಕೊಳೆತಾಗ ಉತ್ಪಾದನೆಯಾಗುವ ಪದಾರ್ಥಗಳಿಂದ ಮಣ್ಣಿನ ಕಣಗಳು ಬಿಗಿಯಾಗಿ ಹಿಡಿದುಕೊಳ್ಳುತ್ತದೆ.
- ಮಣ್ಣಿನಲ್ಲಿ ಕಾಳಿನಂತಹ ರಚನೆ ಉಂಟಾಗಿ ಒಳ್ಳೆಯ ಹವೆಯಾಡುವಿಕೆ, ಉಷ್ಣತೆ, ಹಾಗು ಸಡಿಲತೆ ಏರ್ಪಡುತ್ತದೆ.
- ಇಂತಹ ಮಣ್ಣಿನಲ್ಲಿ ನೀರು ಸಮರ್ಪಕವಾಗಿ ಬಳಕೆಯಾಗುತ್ತದೆ.
- ಮಣ್ಣು ಸಡಿಲವಾಗಿರಬೇಕು. ಹಾಗಿದ್ದಾಗ ಬೇರುಗಳ ಬೆಳೆವಣಿಗೆಗೆ ಅನುಕೂಲವಾಗುತ್ತದೆ. ಸಸ್ಯ ಹುಲುಸಾಗಿ ಬೆಳೆಯುತ್ತದೆ.
ಉಳಿದೆಲ್ಲಾ ಪೋಷಕಾಂಶಗಳು ಪೂರೈಕೆ ಮಾಡಿದ ಕೆಲವೇ ಕೆಲವು ಸಮಯದ ತನಕ ಲಭ್ಯವಾಗಿ ಮುಗಿಯುತ್ತದೆ. ಆದರೆ ಸಾವಯವ ಅಂಶ ಮಾತ್ರ ನಿರಂತರ ಪೋಷಕಗಳನ್ನು ಒದಗಿಸುತ್ತಾ ಇರುತ್ತದೆ. ಸಸ್ಯ ಪ್ರಚೋದಕಗಳು, ಜೀವವಿರೋಧಕಗಳನ್ನು ಮತ್ತು ಸೂಕ್ಷ್ಮ ಪೊಷಕಗಳನ್ನು ನೈಸರ್ಗಿಕ ಮೂಲವಾಗಿ ಒದಗಿಸಿಕೊಡುತ್ತದೆ.
- ಸಾವಯವ ಪದಾರ್ಥಗಳು ಕಳಿಯುವಾಗ ಬಿಡುಗಡೆಯಾಗುವ ಸಾವಯವ ಆಮ್ಲಗಳು ಮತ್ತು ಇಂಗಾಲದ ಡೈ ಅಕ್ಸೈಡ್ ಖನಿಜಗಳಲ್ಲಿ ಅಡಗಿರುವ ಪೋಷಕಗಳನ್ನು ಕರಗಿಸಿ ಬಿಡುಗಡೆಯಾಗುವಂತೆ ಮಾಡುತ್ತದೆ.
- ಮಣ್ಣಿನ pH ಮೌಲ್ಯ ವೆತ್ಯಾಸವಾಗುತ್ತದೆ ಎಂಬ ಪ್ರಶ್ನೆಯೇ ಇಲ್ಲಿ ಬರುವುದಿಲ್ಲ. ಇದ್ದದ್ದು ಇದ್ದ ಹಾಗೇ ಇರುತ್ತದೆ.
- ಸಾವಯವ ವಸ್ತುಗಳು ಕಳಿಯುವಾಗ ಉಂಟಾಗುವ ಹ್ಯೂಮಸ್ ನಲ್ಲಿ ಸುಣ್ಣ, ಪೊಟ್ಯಾಶ್ ಮತ್ತು ಮೆಗ್ನೀಶಿಯಂ ಅಂಶ ಇರುತ್ತದೆ.
- ಮಣ್ಣಿನಲ್ಲಿರುವ ಜೀವಾಣುಗಳಿಗೆ ಆಹಾರ ಒದಗಿ ಅವು ಸಂಖ್ಯಾಭಿವೃದ್ದಿಯಾಗುತ್ತವೆ. ಹೆಚ್ಚಿನ ಚಟುವಟಿಕೆಯಲ್ಲಿ ಇರುತ್ತವೆ.
- ಮಣ್ಣಿನ ಜೀವ ಚೈತನ್ಯ ಇರುವುದು ಬ್ಯಾಕ್ಟೀರಿಯಾಗಳಲ್ಲಿ. ಆ ಬ್ಯಾಕ್ಟೀರಿಯಾಗಳು ಬದುಕಲು ಶಕ್ತಿ ಬೇಕು.
- ಅದು ಸಾವಯವ ವಸ್ತುಗಳಿಂದ ಮಾತ್ರ ಲಭ್ಯ. ಮಣ್ಣಿನಲ್ಲಿ ಏನೇ ಜೀವಾಣುಗಳಿದ್ದರೂ ,ಹೊರಗಡೆಯಿಂದ ತಂದು ಹಾಕಿದರೂ ಅದು ಬದುಕಿ ಕೆಲಸ ಮಾಡಬೇಕಾದರೆ ಸಾವಯವ ವಸ್ತುಗಳು ಬೇಕು.
- ಮಣ್ಣಿಗೆ ಸಾವಯವ ವಸ್ತುಗಳು ರಕ್ಷಕ. ಮಣ್ಣು ಕೊಚ್ಚಣ್ದೆ ಇಲ್ಲ.
- ಇತರ ಯಾವುದೆ ಪೋಷಕಗಳನ್ನು ಕೊಡುದಿದ್ದರೂ ಅದು ಸರಿಯಾಗಿ ಲಭ್ಯವಾಗಲು ಮಣ್ಣು ಸಾವಯವ ಅಂಶಗಳಿಂದ ಕೂಡಿರಬೇಕು.
- ನೀರಿನ ಅಭಾವ ಇರುವುದಿಲ್ಲ.ಮಣ್ಣಿನಲ್ಲಿ ಸದಾಕಾಲ ಸಸ್ಯ ಬೇರುಗಳ ಚಟುವಟಿಕೆಗೆ ಅನುಕೂಲವಾಗುವ ಉಷ್ಣತೆಯು ಲಭ್ಯವಿರುತ್ತದೆ.
ರಾಸಾಯನಿಕ ಗೊಬ್ಬರಗಳನ್ನು ಒದಗಿಸಿದಾಗ ಒಂದಕ್ಕೊಂದು ಹೊಂದಾಣಿಕೆಯಾಗದೆ ಬಂಧಿ ( Bonding) ಆಗುತ್ತದೆ. ಆದರೆ ಸಾವಯವ ಗೊಬ್ಬರದಲ್ಲಿ ಆ ಪ್ರಮೇಯ ಇಲ್ಲ. ಕೃಷಿ ಮಾಡುವಾಗ ಎಷ್ಟೇ ರಾಸಾಯನಿಕ ಗೊಬ್ಬರ ಬಳಕೆ ಮಾಡಿದರೂ ಆ ಮಣ್ಣಿನಲ್ಲಿ ಸಾವಯವ ಅಂಶ ಇಲ್ಲದಿದ್ದರೆ ಅದರ ಪ್ರಯೋಜನ ಬೆಳೆಗಳಿಗೆ ದೊರೆಯುವುದಿಲ್ಲ ಎಂಬುದು ಪ್ರಾಮುಖ್ಯ ಸಂಗತಿ.
ರೈತರು ಯಾವ ಕಾರಣಕ್ಕೂ ಸಾವಯವ ಗೊಬ್ಬರ ಮೂಲಗಳನ್ನು ಹಾಕುವುದನ್ನು ಕಡಿಮೆ ಮಾಡಬಾರದು. ಸಾಧ್ಯವಾದಷ್ಟು ಸ್ಥೂಲ ( ಅಧಿಕ ಪ್ರಮಾಣದಲ್ಲಿ ಕೊಡಬಹುದಾದ ಮೂಲವಸ್ತುಗಳು) ಗೊಬ್ಬರಗಳನ್ನು ಕೊಟ್ಟರೆ ಅದರ ಪ್ರತಿಫಲ ಅತ್ಯಧಿಕ.
End of the article: ————————————————-
search words: Organic manure# Organic cultivation# Organic matter# Soil microbes# soil structure# soil # Rich soil# Nutrients#