ಅಡಿಕೆ – ಈ ಸಾವಯವ ಗೊಬ್ಬರಗಳಿಂದ ಅಧಿಕ ಇಳುವರಿ ಸಾಧ್ಯ.

ಸಾವಯವ ಗೊಬ್ಬರದಿಂದ ಇಳುವರಿಯ ಅಡಿಕೆ ಮರ

ಅಡಿಕೆ ಇರಲಿ ಅಥವಾ ಇನ್ಯಾವುದೇ ಬೆಳೆಯಿರಲಿ, ರಸ  ಗೊಬ್ಬರಗಳ ಬದಲು ನೈಸರ್ಗಿಕ ಸಸ್ಯ ಜನ್ಯ ವಸ್ತುಗಳನ್ನೇ ಬಳಸಿಯೂ  ಉತ್ತಮ ಇಳುವರಿ ಪಡೆಯಬಹುದು.

ಸಾಮಾನ್ಯ ಇಳುವರಿಗೆ ನಾವು ಸಾಂಪ್ರದಾಯಿಕವಾಗಿ ಬಳಸುತ್ತಾ ಬಂದಿರುವ ಕೊಟ್ಟಿಗೆ ಗೊಬ್ಬರ, ಕುರಿ ಆಡು ಗೊಬ್ಬರಗಳು ಸಾಕು. ಅಧಿಕ ಇಳುವರಿ ಬೇಕಾದರೆ ಸಸ್ಯ ಜನ್ಯ ಗೊಬ್ಬರ , ಪ್ರಾಣಿಜನ್ಯ ಸಾವಯವ  ವಸ್ತುಗಳನ್ನು ಬಳಸಬೇಕಾಗುತ್ತದೆ. ಉತ್ಪಾದನಾ ವೆಚ್ಚ ಮಾತ್ರ ಸ್ವಲ್ಪ ಹೆಚ್ಚಾಗಬಹುದು.

ರಸ ಗೊಬ್ಬರಗಳು ಒಮ್ಮೆಗೆ  ಉತ್ತಮ ಫಲಿತಾಂಶ ಕೊಡಬಹುದು. ಆದರೆ ಅದು ಧೀರ್ಘ ಕಾಲದ ತನಕ ಕಷ್ಟ. ಮಣ್ಣಿನ ಫಲವತ್ತತೆ ನವೀಕರಣ ಆಗದಿದ್ದರೆ ರಸ ಗೊಬ್ಬರಗಳು ತನ್ನ ಕೆಲಸವನ್ನು ಸಮರ್ಪಕವಾಗಿ ಮಾಡಲಾರವು. ಧೀರ್ಘಾವಧಿ ಬೆಳೆಗಳಿಗೆ ಮಣ್ಣಿನ ಫಲವತ್ತತೆ ಪ್ರಾಮುಖ್ಯ. ಸಾವಯವ ಅಥವಾ ನೈಸರ್ಗಿಕ ಮೂಲವಸ್ತುಗಳಿಂದ ಮಾತ್ರ ಮಣ್ಣಿನ ಫಲವತ್ತತೆ ವೃದ್ದಿಯಾಗಲು ಸಾಧ್ಯ. ತರಕಾರಿ ಅಥವಾ ಇನ್ಯಾವುದೇ ಅಲ್ಪಾವಧಿ ಬೆಳೆಯನ್ನು ಒಂದು ಬೆಳೆ ಅಥವಾ ಎರಡು ಬೆಳೆ ರಸ ಗೊಬ್ಬರಗಳ ಸಹಾಯದಲ್ಲೇ ಬೆಳೆಯಬಹುದು.  ಧೀರ್ಘಾವಧಿ ಬೆಳೆಯ ಧೀರ್ಘಾವಧಿ ಫಲಕ್ಕೆ ಸಾವಯವ ವಸ್ತುಗಳೂ ಬೇಕು.

 • ರಾಸಾಯನಿಕ ಗೊಬ್ಬರಗಳು ಎಲ್ಲವೂ ಆಮ್ಲೀಯ ಗುಣದವು.
 • ಇದನ್ನು ಮಣ್ಣಿಗೆ ಹಾಕುವುದರಿಂದ ಮಣ್ಣು ಸ್ವಲ್ಪ ಮಟ್ಟಿಗೆ ಅಜೀರ್ಣಕ್ಕೊಳಗಾಗುತ್ತದೆ.
 • ರಾಸಾಯನಿಕ ಗೊಬ್ಬರಗಳನ್ನು ಬಳಸುವುದರ ಜೊತೆಗೆ  ಸಾವಯವ ವಸ್ತುಗಳನ್ನೂ ಸೇರಿಸುತ್ತಿದ್ದರೆ ಮಣ್ಣು ಆರೋಗ್ಯವಾಗಿರುತ್ತದೆ.
 • ಮಣ್ಣು ಎಂಬ ಬೆಳೆ ಬೆಳೆಸುವ ಮಾದ್ಯಮ ಆರೋಗ್ಯಕರವಾಗಿರಬೇಕಾದರೆ ಸಾವಯವ ವಸ್ತುಗಳನ್ನು ಬಳಕೆ ಮಾಡಲೇ ಬೇಕು.
ಪೊಟ್ಯಾಶ್ ಹೆಚ್ಚು ಇರುವ ಹತ್ತಿ ಕಾಳಿನ ಹಿಂಡಿ
ಪೊಟ್ಯಾಶ್ ಹೆಚ್ಚು ಇರುವ ಹತ್ತಿ ಕಾಳಿನ ಹಿಂಡಿ

ಯಾವುದು ಸಾವಯವ ಗೊಬ್ಬರದ:

 • ಬೆಳೆಗಳಿಗೆ ಸಾವಯಯ ಗೊಬ್ಬರಗಳನ್ನು ಬಳಸುವಾಗ ರೈತರು ಪ್ರಾಮುಖ್ಯವಾಗಿ ಗಮನಿಸಬೇಕಾದದ್ದು, ಅದು ಕಡಿಮೆ ಬೆಲೆಗೆ ಹೆಚ್ಚು ಸತ್ವಗಳನ್ನು ಕೊಡುವಂತದ್ದಾಗಬೇಕು.
 • ಹೆಚ್ಚು ಪ್ರಮಾಣದಲ್ಲೂ ಸಿಗುವಂತಾಗಬೇಕು.
 • ಅಂತಹ ಗೊಬ್ಬರಗಳಲ್ಲಿ  ಕೆಲವು ಬೆಳೆ ತ್ಯಾಜ್ಯಗಳು ಮತ್ತು  ಪ್ರಾಣಿ ತ್ಯಾಜ್ಯಗಳು ಪ್ರಮುಖವಾದವುವುಗಳು.

ಬೆಳೆ ತ್ಯಾಜ್ಯಗಳು:

 • ಎಲ್ಲಾ ಬೆಳೆ ತ್ಯಾಜ್ಯಗಳಲ್ಲಿ ಆ ಬೆಳೆಗೆ ಪೂರೈಕೆ ಮಾಡಿದ ಪೋಷಕಗಳ ಸುಮಾರು 3-5 % ಸಾರಾಂಶಗಳು ಉಳಿದಿರುತ್ತವೆ.
 • ಅದನ್ನು ಸಮರ್ಪಕವಾಗಿ ಮಣ್ಣಿಗೆ ಮರು ಬಳಕೆ ಮಾಡಬೇಕು.
 • ತೋಟದಲ್ಲಿ  ಬೆಳೆಯುವ ಹುಲ್ಲು ಕಳೆಗಳನ್ನು, ಅದೇ ಬೆಳೆಯ ತ್ಯಾಜ್ಯಗಳನ್ನು ಬೆಳೆಗಳ ಬುಡಕ್ಕೆ ಮಲ್ಚಿಂಗ್ ಮಾಡುವುದರಿಂದ ಅವುಗಳು ಮಣ್ಣಿನಿಂದ ಬಳಸಿದ ಪೋಷಕಗಳು ಮತ್ತೆ ದೊರೆಯುತ್ತದೆ.
 • ಇವು ಪೂರ್ತಿ ಬೆಳೆಯನ್ನು ಸಾಕುವಷ್ಟು ಪೋಷಕಗಳನ್ನು ಹೊಂದಿರುವುದಿಲ್ಲವಾದರೂ ಸ್ವಲ್ಪ ಮಟ್ಟಿಗೆ ಮಣ್ಣಿನ ತರಗತಿ ಸುಧಾರಿಸಲು ಸಹಾಯಕ.

ಬೆಳೆತ್ಯಾಜ್ಯಗಲ್ಲಿ ಗರಿಷ್ಟ ಪೊಷಕಾಂಶಗಳು ಇರುವುದು ಬೀಜಗಳಲ್ಲಿ. ಬೀಜಗಳು ಎಂದರೆ ಅದು ಇಡೀ ಬೆಳೆಯ ಸತ್ವಗಳನ್ನು ಅಂತಿಮವಾಗಿ ಸಂಗ್ರಹಿಸಿದ ಫಲ. ಬಹುತೇಕ ಫಸಲಿನ ಬೀಜಗಳಲ್ಲಿ ಗರಿಷ್ಟ ಪೋಷಕಾಂಶಗಳು ಇರುತ್ತವೆ. ಅದು ದ್ವಿದಳ ಬೀಜಗಳಾಗಿದ್ದರೆ ಅದರಲ್ಲಿ ಮತ್ತೂ ಹೆಚ್ಚು ಸಾರಾಂಶಗಳು ಇರುತ್ತವೆ.

ಸಕ್ಕರೆ ಕಾರ್ಖಾನೆ ಸಮೀಪ ಇರುವಲ್ಲಿ ರೈತರು ಪ್ರೆಸ್ ಮಡ್ ಅನ್ನು ಕಾಂಪೋಸ್ಟು ಮಾಡಿ ಬಳಸಿದೆ ಅದರಲ್ಲಿ ಸಿಹಿ ಅಂಶ ಇರುವ ಕಾರಣ ಜೀವಾಣುಗಳು ಚೆನ್ನಾಗಿ ಬದುಕುತ್ತವೆ.

 • ಬೀಜಗಳನ್ನು ನೇರವಾಗಿ ಪೊಷಕವಾಗಿ ಬಳಕೆ ಮಾಡುವುದು ಕಷ್ಟ.
 • ಅದರ ಎಣ್ಣೆ ತೆಗೆದಾಗ ಸಿಗುವ ಅದರ ಹಿಂಡಿಗಳನ್ನು ಬಳಸುವುದು ರೂಢಿ.
 • ರಾಸಾಯನಿಕ ಅಧಿಕ ಸಾರದ ಗೊಬ್ಬರಗಳಿಗೆ ಸರಿಸಾಟಿಯಾದ ಪೋಷಕಾಂಶಗಳು ಇದರಲ್ಲಿ  ಇರುತ್ತವೆ.
 • ಇದರಲ್ಲಿ ಕೆಲವು ಸಾರಜನಕ ಹೆಚ್ಚು, ಇನ್ನು ಕೆಲವು ಹಿಂಡಿಗಳಲ್ಲಿ ರಂಜಕ ಮತ್ತು ಪೊಟ್ಯಾಶ್ ಹೆಚ್ಚು ಇರುತ್ತದೆ.
 • ಜೊತೆಗೆ ಕೆಲವು ಸೂಕ್ಷ್ಮ ಪೋಷಕಾಂಶಗಳೂ ಇರುತ್ತದೆ. ದ್ವಿದಳ ಹಿಂಡಿಗಳಲ್ಲಿ ಸಾರಜನಕ ಹೆಚ್ಚು.
 • ಏಕದಳ ಬೀಜದ ಹಿಂಡಿಗಳಲ್ಲಿ ಪೊಟ್ಯಾಶಿಯಂ, ರಂಜಕ ಹೆಚ್ಚು ಇರುತ್ತದೆ.
ಹರಳು ಹಿಂಡಿ ಕೇಕ್
ಹರಳು ಹಿಂಡಿ ಕೇಕ್

ಹಿಂಡಿ ಗೊಬ್ಬರ ಎಷ್ಟು ಹಾಕಬೇಕು:

 • ಹಿಂಡಿ ಗೊಬ್ಬರಗಳನ್ನು ಬಳಕೆ ಎಣ್ಣೆ ತೆಗೆದ ನಂತರದ ಉಪ ಉತ್ಪನ್ನವನ್ನು ಬಳಕೆ ಮಾಡುವುದು ಉತ್ತಮ.
 • ಎಣ್ಣೆ ಅಷ್ಟು ಉತ್ತಮವಲ್ಲ. ಎಣ್ಣೆ ಅಂಶ ಇದ್ದಾಗ ಅವು ನಿಧಾನವಾಗಿ ಸೂಕ್ಷ್ಮಾಣು ಜೀವಿಗಳಿಂದ ಜೀರ್ಣಿಸಲ್ಪಡುತ್ತವೆ.
 • ಅವು ಕೆಲವೊಮ್ಮೆ ಸೂಕ್ಷ್ಮಾಣು ಜೀವಿಗಳಿಗೆ ರುಚಿಸದೆಯೂ ಇರಬಹುದು.
 • ಹರಳೆಣ್ಣೆಯನ್ನು ತೆಗೆದು, ಅಥವಾ ಬೇವಿನ ಎಣ್ಣೆಯನ್ನು  ತೆಗೆದಾಗ ಸಿಗುವ ಹಿಂಡಿ ಬೇಗ ಪೋಷಕಾಂಶಗಳನ್ನು ಹೊರ ಬಿಡುತ್ತದೆ.
 • ಸಾಮಾನ್ಯವಾಗಿ ಕೃಷಿಗೆ ಬಳಕೆಯಾಗುವ ಹಿಂಡಿಗಳಲ್ಲಿ ಹರಳು ಹಿಂಡಿ ಮತ್ತು  ಬೇವಿನ ಹಿಂಡಿ  ಪ್ರಾಮುಖ್ಯವಾದುದು.
 • ಇದರಲ್ಲಿ ಸರಾಸರಿ 6 % ಸಾರಜನಕ ಮತ್ತು 2%  ರಂಜಕ ಮತ್ತು 1%  ಪೊಟ್ಯಾಶ್ ಇರುತ್ತದೆ.
 • ಹತ್ತಿಬೀಜದ  ಹಿಂಡಿಯಲ್ಲಿ ಯಲ್ಲಿ ಪೊಟ್ಯಾಶ್ ಅಂಶ ಹೆಚ್ಚು ಇರುತ್ತದೆ. ಇದನ್ನು ಮಿಶ್ರಣ  ಮಾಡಿ ಹಾಕಬೇಕು.
 • ಒಂದು ಕಿಲೋ ಹರಳು-ಬೇವು ಹಿಂಡಿಯಲ್ಲಿ 50 ಗ್ರಾಂ ಸಾರಜನಕ ಇರುತ್ತದೆ. ಅದೇ ರೀತಿಯಲ್ಲಿ 20  ಗ್ರಾಂ ರಂಜಕ ಮತ್ತು 10-15   ಗ್ರಾಂ ಪೊಟ್ಯಾಶ್ ಇರುತ್ತದೆ.
 • 2 ಕಿಲೋ ಹರಳು ಹಿಂಡಿ ಮತ್ತು,1 ಕಿಲೋ ಹತ್ತಿ ಬೀಜದ ಹಿಂಡಿಯನ್ನು ಹಾಕಿ ಬೇರೆ ರಾಸಾಯನಿಕ ಗೊಬ್ಬರಗಳಿಲ್ಲದೆ  ಅಡಿಕೆ ತೋಟದ ಗೊಬ್ಬರದ ಅವಶ್ಯಕತೆಯನ್ನು ನೀಗಿಸಬಹುದು.

 ಬರೇ ಎನ್ ಪಿ ಕೆ NPK ಹೊರತಾಗಿ ಹಿಂಡಿ ಗೊಬ್ಬರಗಳಲ್ಲಿ ಕ್ಯಾಲ್ಸಿಯಂ, ಮೆಗ್ನೀಶಿಯಂ, ಕಬ್ಬಿಣ, ಸತು ಮತ್ತು  ಇನ್ನಿತರ ಅಗತ್ಯ ಸೂಕ್ಷ್ಮ ಪೊಷಕಾಂಶಗಳೂ ಇರುವುದು ವಿಷೇಷ.

ಹಾಗೆ ನೋಡಿದರೆ ಎಲ್ಲಾ ಹಿಂಡಿಗಿಂತ ನೆಲಕಡ್ಲೆ ಹಿಂಡಿ ಹೆಚ್ಚು ಸತ್ವ ಒಳಗೊಂಡಿದೆ. ಆದರೆ ಅದು ಕೃಷಿ ಬಳಕೆಗೆ ದುಬಾರಿ. ಯಾವ ಹಿಂಡಿ ಪಶು ಆಹಾರವಾಗಿ ಬಳಕೆ ಆಗುವುದಿಲ್ಲವೋ ಅದು ಅಗ್ಗ. ಉದ್ಯಮ ಮೂಲದಿಂದ ಬರುವ ಕಾರಣ ಹರಳು ಹಿಂಡಿ (ಔಡಲ)ಹಿಂಡಿ(Castor cake) ಕಲಬೆರಕೆ ಕಡಿಮೆ.

ಹರಳು ಹಿಂಡಿ ಪೌಡರ್
ಹರಳು ಹಿಂಡಿ ಪೌಡರ್

ಪ್ರಾಣಿ ಜನ್ಯ ಗೊಬ್ಬರ:

 • ನಮ್ಮ ರೈತರು ಕುರಿ – ಆಡಿನ ಗೊಬ್ಬರವನ್ನು ಸಾಮಾನ್ಯವಾಗಿ ಬಳಕೆ ಮಾಡುತ್ತಾರೆ.
 • ಇದರಲ್ಲಿ ಫಲಿತಾಂಶವನ್ನೂ ಕಂಡವರಿದ್ದಾರೆ. 
 • ಕಾರಣ ಇಷ್ಟೇ ಒಂದು ಬುಟ್ಟಿ ಸುಮಾರು 4-5 ಕಿಲೋ ಕುರಿ/ ಅಡಿನ ಒಣ ಗೊಬ್ಬರ ನೀರು ಹೀರಿಕೊಂಡು  ಆಗುವ ಪ್ರಮಾಣ ಒಂದು ಬುಟ್ಟಿ ಕೊಟ್ಟಿಗೆ ಗೊಬ್ಬರಕ್ಕಿಂತ ಹೆಚ್ಚು.
 • ಕುರಿ/ಆಡು ಹಿಕ್ಕೆ ನಿಧಾನವಾಗಿ ಕರಗಿ ಅದರ ಸತ್ವವನ್ನು ಬಿಡುತ್ತದೆ.
 • ಆದ ಕಾರಣ ಅದು ಬೆಳೆಗಳಿಗೆ ಧೀರ್ಘ ಕಾಲದ ತನಕ  ಸಾರಾಂಶಗಳನ್ನು ಕೊಡುತ್ತಿರುತ್ತದೆ.
 • ಹಾಗಾಗಿ ಅಡಿಕೆ , ತೆಂಗಿನ ಮರಗಳು ಚೆನ್ನಾಗಿ ಬೆಳೆಯುತ್ತವೆ.
 • ಒಂದು ಅಡಿಕೆ ಮರಕ್ಕೆ ಕನಿಷ್ಟ 1 ಬುಟ್ಟಿಯಷ್ಟು ಕುರಿ ಗೊಬ್ಬರವನ್ನು ಕೊಟ್ಟು ಅದು ತೊಳೆದು ಹೋಗದಂತೆ ರಕ್ಷಣೆ ಮಾಡಿದರೆ ಅದು ಮರಕ್ಕೆ ಬೇಕಾಗುವ ಸಾರಜನಕ ಅಂಶವನ್ನು ಪೂರ್ತಿ ಕೊಡುತ್ತದೆ.
 • ಬಹಳಷ್ಟು ಜನ ಬರೇ ಕುರಿ ಗೊಬ್ಬರ ಒಂದನ್ನೇ ಹಾಕಿ ಉತ್ತಮ ಫಸಲು ಪಡೆಯುತ್ತಾರೆ. 
 • ಕುರಿ / ಆಡುಗಳು ಕಳೆ ಇತ್ಯಾದಿ ಸಸ್ಯಗಳನ್ನು ತಿಂದ ಪರಿಣಾಮ ಅದರಲ್ಲಿ ರಂಜಕ, ಪೊಟ್ಯಾಶಿಯಂ ಹಾಗೂ ಲಘು ಪೋಷಕಾಂಶಗಳೂ ಇರುತ್ತವೆ. ಇದರ ಹಿಕ್ಕೆಯಲ್ಲಿ  ಧೀರ್ಘಾವಧಿಯ ಅನುಕೂಲ ಇದೆ.

ಕೋಳಿ ಗೊಬ್ಬರ:

 • ಕೋಳಿ ಹಿಕ್ಕೆಯಲ್ಲಿ ಮಲ ಮೂತ್ರಗಳು ಎರಡೂ ಇರುವ ಕಾರಣ ಇದು ಉತ್ತಮ ಗೊಬ್ಬರ.
 • ಕೋಳಿಗಳಿಗೆ ತಿನ್ನಲು ಕೊಡುವ ಆಹಾರದಲ್ಲಿ ಉಳಿಕೆಯಾದ ಸಾರಾಂಶಗಳು ಇದರಲ್ಲಿ ಇರುತ್ತವೆ.
 • ಆದರೆ ಇದನ್ನು ಬಳಸಿದರೆ ಅದರ ಪರಿಣಾಮ ಅಲ್ಪಾವಧಿಯಲ್ಲಿ ಇದರ ಸತ್ವ ಕರಗಿ ಮುಗಿಯುತ್ತದೆ.
 • ಕೋಳಿ ಗೊಬ್ಬರದಲ್ಲಿ ಸಾರಜನಕ ಹೆಚ್ಚು. ಉಳಿದ ರಂಜಕ ಮತ್ತು ಪೊಟ್ಯಾಶಿಯಂ ಅಂಶ ಸ್ವಲ್ಪ ಇರುತ್ತದೆ.
 • ಜೊತೆಗೆ ಕೋಳಿಗೆ ಕೊಡಮಾಡುವ ಕ್ಯಾಲ್ಸಿಯಂ, ಮೆಗ್ನೀಶಿಯಂ , ಗಂಧಕ, ಹಾಗೆಯೇ ಕೆಲವು ಪೋಷಕಗಳೂ ಇರುತ್ತವೆ.
 • ಈ ಗೊಬ್ಬರವನ್ನು ಒಮ್ಮೆಲೇ ಕೊಡುವ ಬದಲು ವರ್ಷಕ್ಕೆ ಮೂರು ನಾಲ್ಕು ಬಾರಿಯಂತೆ ವಿಭಜಿತ ಕಂತುಗಳಲ್ಲಿ ಕೊಡುವುದು ಉತ್ತಮ.
 • ಒಂದು ಬುಟ್ಟಿ,( ಸುಮಾರು 10 ಕಿಲೋ ಒಣ ತೂಕ) ಒಂದು ಅಡಿಕೆ ಮರಕ್ಕೆ ಸಾಕಾಗುತ್ತದೆ.
 • ಮೊಟ್ಟೆ ಕೋಳಿಯ ಗೊಬ್ಬರ ಹೆಚ್ಚು ಸರಾಂಶಗಳನ್ನು ಒಳಗೊಂಡಿರುತ್ತದೆ.
 • ಕೋಳಿ ಗೊಬ್ಬರ ಬಳಸುವ ಹೊಲಕ್ಕೆ ಮರ ಸುಟ್ಟ ಬೂದಿ ಅಥವಾ ಯಾವುದಾದರೂ ಉದ್ದಿಮೆಗಳ ಬೂದಿ( ಪೊಟ್ಯಾಶ್ ಉಳ್ಳ)ಯನ್ನು ಸೇರಿಸಿದರೆ ಅದು ಸಮತೋಲನ ಗೊಬ್ಬರವಾಗುತ್ತದೆ.

ಸಾವಯವ ಗೊಬ್ಬರಗಳಲ್ಲಿ ಪೊಟ್ಯಾಶಿಯಂ ಸತ್ವ ಒಂದು ಸ್ವಲ್ಪ ಕಡಿಮೆ ಇರುತ್ತದೆ. ಹಾಗಾಗಿ ಮರಕ್ಕೆ ಶಕ್ತಿ ಕಡಿಮೆಯಾಗುತ್ತದೆ. ಪೊಟ್ಯಾಶಿಯಂ ಮೂಲದ ಕೆಲವು ತ್ಯಾಜ್ಯಗಳನ್ನು ( ಬೂದಿ ಇತ್ಯಾದಿ)  ಬಳಸಿ ಅದನ್ನು ಸಮತೋಲನ ಮಾಡಬಹುದು.

ಎಲುಬಿನ ಗೊಬ್ಬರ ಉತ್ತಮ ರಂಜಕ ಗೊಬ್ಬರ. ಆದರೆ ಈಗ ವಧಾ ಕೇಂದ್ರಗಳು ಕಡಿಮೆಯಾಗುತ್ತಿರುವ ಕಾರಣ ಇದು ಬಹಳ ದುಬಾರಿಯಾಗುತ್ತಿದೆ. ಕೋಳಿಗಳಿಗೆ ಎಲುಬಿನ ಹುಡಿ ಹಾಕುವ ಕಾರಣ ಸ್ವಲ್ಪ ರಂಜಕಾಂಶ ಸಿಗುತ್ತದೆ.

ಜೈವಿಕ ಗೊಬ್ಬರಗಳ ಬಳಕೆ:

 • ಸಾವಯವ ವಸ್ತುಗಳನ್ನು ಬಳಸುವಾಗ ಅದರ ಜೊತೆಗೆ ಜೈವಿಕ ಗೊಬ್ಬರಗಳನ್ನು ಬಳಕೆ ಮಾಡಿದರೆ ಕೆಲವು ಬಂಧಿ ಸ್ಥಿತಿಯಲ್ಲಿರುವ  ಪೋಷಕಗಳು ಸಸ್ಯಗಳಿಗೆ ಲಭ್ಯವಾಗುತ್ತದೆ.
 • ಸಸ್ಯ ಜನ್ಯ, ಪ್ರಾಣಿ ಜನ್ಯ ಗೊಬ್ಬರಗಳ ಜೊತೆಗೆ  ಜೀವಾಣುಗಳ ಚಟುವಟಿಕೆ  ಚೆನ್ನಾಗಿರುತ್ತದೆ.
 • ಫಲಿತಾಂಶವೂ ಉತ್ತಮವಾಗಿರುತ್ತದೆ.
 • ಆದ ಕಾರಣ ಕಡಿಮೆ ಬೆಲೆಗೆ ಸಿಗುವ ಸಾರಜನಕ ಸ್ಥಿರೀಕರಿಸುವ,(Nitrogen fixing)
 • ರಂಜಕ ಕರಗಿಸಿಕೊಡುವ (Phosphorus solubilizing) ,
 • ಪೊಟ್ಯಾಶ್ ಒಟ್ಟುಗೂಡಿಸಿಕೊಡುವ  (Potash mobilizing) ಹಾಗೂ ಕೆಲವು
 • ಸಸ್ಯ ಬೆಳವಣಿಗೆ ಪ್ರಚೋದಕಗಳಿರುವ ( Plant growth promoting micro organisms) ಜೀವಾಣು ಗೊಬ್ಬರಗಳನ್ನು  ಬಳಕೆ ಮಾಡಿದರೆ ಒಳ್ಳೆಯದು.
 • ಇಲ್ಲಿ ರೈತರು ಬೆಲೆ ಅನುಕೂಲತೆಗಳನ್ನು ಗಮನಿಸಬೇಕಾಗುತ್ತದೆ.
 • ಹೆಚ್ಚು ಸಾವಯವ ವಸ್ತುಗಳನ್ನು ಬಳಸುತ್ತಿದ್ದರೆ ಇವುಗಳ ನಿರಂತರ ಬಳಕೆ ಅಗತ್ಯವಿರುವುದಿಲ್ಲ.

ಸಾವಯವ ಗೊಬ್ಬರಗಳಿಂದ ಕೃಷಿ ಸಾಧ್ಯವಿಲ್ಲ ಎಂಬುದು ತಪ್ಪು ಕಲ್ಪನೆ. ಅದನ್ನು ಒಟ್ಟು ಹಾಕುವುದು ಮತ್ತು ಬಳಕೆ ಮಾಡಲು ಕೆಲಸ ಹೆಚ್ಚಾಗುವುದು , ವೆಚ್ಚ ಹೆಚ್ಚಳವಾಗುವ ಕಾರಣ  ಜನ ರಾಸಾಯನಿಕ ಗೊಬ್ಬರವನ್ನು ಬಳಕೆ ಮಾಡುತ್ತಿದ್ದಾರೆ.  ಎಲ್ಲರೂ ಸಾವಯವ ಗೊಬ್ಬರವನ್ನೇ ಹೆಚ್ಚು ಹೆಚ್ಚು ಬಳಸಿದರೆ ಅದರ ಬೆಲೆಯೂ ದುಬಾರಿಯಾಗುತ್ತದೆ.  ಹಾಗಾಗಿ ಸಮತೋಲನದಲ್ಲಿ ಬಳಕೆ ಮಾಡುತ್ತಿರಬೇಕು. ಸುಲಭವಾಗಿ , ಮಿತವ್ಯಯದಲ್ಲಿ ಸಾವಯವ ಮೂಲದ ಗೊಬ್ಬರಗಳು ಸಿಗುವ ಕಡೆ ಸ್ವಲ್ಪವೂ ರಸ ಗೊಬ್ಬರ ಬಳಸದೆ ಅಡಿಕೆ, ತೆಂಗು ಇತ್ಯಾದಿ ಬೆಳೆ ಬೆಳೆದು ಉತ್ತಮ ಫಲ ಪಡೆಯುತ್ತಿರಬಹುದು. ಪಡೆಯುವರೈತರೂ ಸಾಕಶ್ಟು ಇದ್ದಾರೆ.

2 thoughts on “ಅಡಿಕೆ – ಈ ಸಾವಯವ ಗೊಬ್ಬರಗಳಿಂದ ಅಧಿಕ ಇಳುವರಿ ಸಾಧ್ಯ.

Leave a Reply

Your email address will not be published. Required fields are marked *

error: Content is protected !!