ಕೋಳಿ ಗೊಬ್ಬರದಲ್ಲಿ ಏನಿದೆ? ಪ್ರಯೋಜನ ಏನು?.

poultry farm

ರೈತರು ತಮ್ಮ ಬೆಳೆ ಪೋಷಣೆಗಾಗಿ ಬಳಕೆ ಮಾಡುವ ಕೋಳಿ ಹಿಕ್ಕೆಯ ಗೊಬ್ಬರದಲ್ಲಿ ಏನಿದೆ, ಇದರ ಫಲಿತಾಂಶ ಏನು ಎಂಬುದರ ಪೂರ್ಣ ಪರಿಚಯ ಇಲ್ಲಿದೆ.
ಕೋಳಿ ಗೊಬ್ಬರದ ಬಳಕೆಗೆ ಬಹಳ ಹಿಂದಿನ ಇತಿಹಾಸ ಇದೆ.ಇತ್ತೀಚಿನ 20-30 ವರ್ಷಗಳಿಂದೀಚೆಗೆ ಕೋಳಿ ಸಾಕಾಣಿಕೆ ಭಾರೀ ವಾಣಿಜ್ಯಿಕವಾದ ನಂತರ ಕೋಳಿ ಸಾಕಾಣಿಕಾ ಶೆಡ್ ಗಳಿಂದ ಗೊಬ್ಬರ ತಂದು ಬೆಳೆಗಳಿಗೆ ಬಳಸುವಿಕೆ ಪ್ರಾರಂಭವಾಯಿತು. ಅದಕ್ಕೂ ಹಿಂದೆ ಸಾಮಾನ್ಯವಾಗಿ ಪ್ರತೀ ಮನೆಗಳಲ್ಲೂ ಅಲ್ಪ ಸ್ವಲ್ಪ ಕೋಳಿಗಳನ್ನು ಸಾಕುತ್ತಿದ್ದರು. ಅವುಗಳ ಕಾಲಿನ ಬುಡಕ್ಕೆ ಮರ ಸುಟ್ಟ ಬೂದಿ ಇತ್ಯಾದಿ ಹಾಕಿ ಅದರ ಮೇಲೆ ಕೋಳಿಗಳು ಹಾಕಿದ ಹಿಕ್ಕೆಯನ್ನು ಒಟ್ಟು ಸೇರಿಸಿ ಬೆಳೆಗಳಿಗೆ ಬಳಕೆ ಮಾಡುತಿದ್ದರು.  ಈಗ ಬಳಕೆ ಮಾಡುವ ಕೋಳಿ ಗೊಬ್ಬರ ಕ್ಕೂ ಹಿಂದೆ ಬಳಕೆ ಮಾಡುತ್ತಿದ್ದ  ಗೊಬ್ಬರಕ್ಕೂ ವ್ಯತ್ಯಾಸವಿದೆ.

ಕೋಳಿಗಳು ಹಾಕಿದ ಹಿಕ್ಕೆ -Poultry manure
ಕೋಳಿಗಳು ಹಾಕಿದ ಹಿಕ್ಕೆ
 • ಕೋಳಿ ಗೊಬ್ಬರ ಎಂದರೆ ಕೋಳಿಗಳು ತಿಂದು ಹೊರ ಹಾಕಿದ ಅದರ ಹಿಕ್ಕೆ.
 • ಮಾಂಸಕ್ಕಾಗಿ ಸಾಕುವ ಕೋಳಿ ಮನೆಗಳಲ್ಲಿ ಕೋಳಿಗಳ ಕಾಲಿನ ಬುಡಕ್ಕೆ ಭತ್ತದ ಹೊಟ್ಟು, ಮರದ ಹುಡಿ ಹಾಕುತ್ತಾರೆ.
 • ಅದರ ಮೇಲೆ ಕೊಳಿಗಳು ಮಲವಿಸರ್ಜನೆ ಮಾಡುತ್ತವೆ.
 • ಮೊಟ್ಟೆಗಾಗಿ ಕೋಳಿ ಸಾಕುವ ಮನೆಗಳಲ್ಲಿ ಹಿಕ್ಕೆ ಗಳು ಕೆಳಗೆ ಬೀಳುವಂತೆ ವ್ಯವಸ್ಥೆಗಳಿದ್ದು,  ಅದು ಕೋಳಿಗಳ ಕಾಲಿನ ಬುಡದಲ್ಲಿ ಇರುವುದಿಲ್ಲ.
 • ಕೋಳಿ ಹಿಕ್ಕೆ ಎಂದರೆ ಅದರಲ್ಲಿ ಮಲ ಮತ್ತು ಮೂತ್ರ ಎರಡೂ ಮಿಶ್ರಣವಾಗಿರುವ ಕಾರಣ ಇದಕ್ಕೆ ವಿಶೇಷ ಶಕ್ತಿ ಇರುತ್ತದೆ.

ಕೋಳಿ ಗೊಬ್ಬರದ ವಿಶೇಷತೆ:

ಕೋಳಿ ಆಹಾರದಲ್ಲಿ ಅಧಿಕ ಪ್ರಮಾಣದಲ್ಲಿ ಸೇರಿಸುವ ಕ್ಯಾಲ್ಸಿಯಂ -Calcium fed to chicks
ಕೋಳಿ ಆಹಾರದಲ್ಲಿ ಅಧಿಕ ಪ್ರಮಾಣದಲ್ಲಿ ಸೇರಿಸುವ ಕ್ಯಾಲ್ಸಿಯಂ
 • ಕೋಳಿಗೆ ಕೊಡುವ ಆಹಾರದಲ್ಲಿ ಕ್ಯಾಲ್ಸಿಯಂ, ಮೆಗ್ನೀಶಿಯಂ ಹಾಗೂ ಇನ್ನಿತರ ಪೋಷಕಾಂಶಗಳನ್ನು ಸೇರಿಸಿರುತ್ತಾರೆ.
 • ಇದು ಸ್ವಲ್ಪ ಪ್ರಮಾಣ ಬಳಕೆಯಾಗದೆ  ಹಿಕ್ಕೆಯಲ್ಲಿ ಹೊರ ಬರುತ್ತದೆ.
 • ಆದ ಕಾರಣ ಹಿಕ್ಕೆಯಲ್ಲಿ ಈ ಲಘು ಪೋಷಕಗಳೂ ಇರುತ್ತವೆ.
 • ಕೋಳಿ ಹಿಕ್ಕೆ, ಆಡು ಕುರಿ ಹಿಕ್ಕೆ, ಕೊಟ್ಟಿಗೆ ಗೊಬ್ಬರ ಇವೆಲ್ಲಾ ಸ್ಥೂಲ ಗೊಬ್ಬರಗಳು.
 • ಸ್ಥೂಲ ಎಂದರೆ ಅಧಿಕ ಪ್ರಮಾಣದಲ್ಲಿ ಬಳಸಬೇಕಾದ ಪೋಷಕ.
 • ಕೊಳಿ ಗೊಬ್ಬರ ಎಂಬುದು ಕೊಟ್ಟಿಗೆ ಗೊಬ್ಬರಕ್ಕಿಂತ ಭಿನ್ನವಾದುದು.ಕುರಿ, ಆಡು, ಕೊಟ್ಟಿಗೆ ಗೊಬ್ಬರಕ್ಕಿಂತ ಇದರಲ್ಲಿ ಪೋಷಕಗಳು ಅಧಿಕ.
 • ಇದರಲ್ಲಿರುವ ಅಧಿಕ ಪ್ರಮಾಣದಲ್ಲಿ ಸಾರಜನಕ ಇರುತ್ತದೆ.
 • ಈ ಸಾರಜನಕದ 60 % ವು ಮಣ್ಣಿಗೆ ಗೊಬ್ಬರ ಸೇರಿಸಿದ ಒಂದೆರಡು ವಾರಗಳಲ್ಲಿ ಬೆಳೆಗಳಿಗೆ ಲಭ್ಯವಾಗುವ ಸ್ಥಿತಿಯಲ್ಲಿ ಇರುತ್ತದೆ.
 • ಕೊಟ್ಟಿಗೆ ಗೊಬ್ಬರಕ್ಕೆ ಹೋಲಿಸಿದರೆ ಇದರಲ್ಲಿ 5-6 ಪಟ್ಟು ಹೆಚ್ಚು ಸಾರಜನಕವನ್ನು ಪೂರೈಸುವ ಶಕ್ತಿ ಇರುತ್ತದೆ.
 • ಒಂದು ಬುಟ್ಟಿ ಕೊಟ್ಟಿಗೆ ಗೊಬ್ಬರ ಹಾಕುವ ಬದಲಿಗೆ ಕೋಳಿ ಗೊಬ್ಬರವಾದರೆ ಅರದ ¼ ರಷ್ಟು ಬಳಕೆ ಮಾಡಿದರೆ ಸಾಕಾಗುತ್ತದೆ.
 • ಇದನ್ನು ಎಲ್ಲಾ ರೀತಿಯ ಮಣ್ಣುಗಳಿಗೂ ಬೆಳೆಗಳಿಗೂ ಬಳಕೆ ಮಾಡಬಹುದು.
 • ಕೊಟ್ಟಿಗೆ ಗೊಬ್ಬರದಲ್ಲಿ ಇರುವಂತೆ ಇದರಲ್ಲಿ ಲಿಗ್ನಿನ್ ಅಂಶ ಅತೀ ಕಡಿಮೆ ಇರುತ್ತದೆ.
ಮಾಂಸದ ಕೋಳಿಗಳ ಸತ್ತೆ ಗೊಬ್ಬರ -this is the good manure
ಮಾಂಸದ ಕೋಳಿಗಳ ಸತ್ತೆ ಗೊಬ್ಬರ

ಮಣ್ಣಿನ ರಾಸಾಯನಿಕ ಗುಣಧರ್ಮವನ್ನು ಉತ್ತಮಪಡಿಸಲು ಕೋಳಿ ಗೊಬ್ಬರ ಸಹಕಾರಿ. ಆಧುನಿಕ ಕೋಳಿ ಸಾಕಾಣಿಕಾ ಮನೆಗಳಲ್ಲಿ ಸಾಕುವ ಕೋಳಿಗಳಿಗೆ ಖನಿಜ ಮಿಶ್ರಣ, ಹಾಗೂ ಕ್ಯಾಲ್ಸಿಯಂ ಮುಂತಾದವುಗಳನ್ನು ಒದಗಿಸುವ ಕಾರಣ ಇದರ ಹಿಕ್ಕೆಯಲ್ಲಿ  ಸ್ವಲ್ಪ ಪ್ರಮಾಣದಲ್ಲಿ ಲಘು ಪೋಷಕಗಳು, ದ್ವಿತೀಯ ಪೋಷಕವಾದ ಕ್ಯಾಲ್ಸಿಯಂ (ಸುಣ್ಣ) ಬೆಳೆಗಳಿಗೆ ಲಭ್ಯವಾಗುತ್ತದೆ.

ಕೆಲವು ಸಣ್ಣ ಪುಟ್ಟ ನ್ಯೂನತೆಗಳು:

 • ಸಾವಯವ ಗೊಬ್ಬರ ಬಳಸುವ ಉದ್ದೇಶ ಮಣ್ಣಿನ ಭೌತಿಕ ಮತ್ತು ಜೈವಿಕ ಗುಣಧರ್ಮಗಳನ್ನು ಉತ್ತಮ ಪಡಿಸುವುದು.
 • ಅದಕ್ಕೆ ಮಣ್ಣಿಗೆ ಸೇರಿಸಿದ ಗೊಬ್ಬರವು ಧೀರ್ಘ ಕಾಲದ ತನಕ ನಿಧಾನಗತಿಯಲ್ಲಿ ಮಣ್ಣಿಗೆ ಸೇರುತ್ತಾ ಇರಬೇಕು.
 • ಕೋಳಿ ಗೊಬ್ಬರ ತಕ್ಷಣ ತನ್ನ ಸಾರವನ್ನು ಬಿಡುಗಡೆ ಮಾಡುವ ಕಾರಣ
 • ಅತ್ಯಲ್ಪ ಪ್ರಮಾಣದಲ್ಲಿ ಮಾತ್ರ ಮಣ್ಣಿನ ಗುಣ ಧರ್ಮ ಬದಲಾವಣೆಗೆ ಹ್ಯೂಮಸ್ ರೂಪದಲ್ಲಿ  ಉಳಿಯುವುದು.
 • ಮಣ್ಣಿನ ರಚನೆ ಬದಲಾವಣೆ ಆಗುವುದು ಕಡಿಮೆ.

poultry manure used for composting
ಮಣ್ಣು ಮೆಕ್ಕಲು ರೂಪಕ್ಕೆ ಬರಲು, ಅಲ್ಲಿ ಸಾಕಷ್ಟು ಜೀವಾಣುಗಳು ವೃದ್ದಿಯಾಗಲು ಕೋಳಿ ಗೊಬ್ಬರದ ಕೊಡುಗೆ ಸ್ವಲ್ಪ.  ಬೆಳೆ ಪೋಷಕ ಗುಣ ಅಧಿಕ. ಹೆಚ್ಚು ಪ್ರಮಾಣದಲ್ಲಿ ಹಾಕಿದರೆ ಗಿಡಗಳಿಗೆ ಸಾರಜನಕ ಹೆಚ್ಚಾಗಿ ರೋಗ ರುಜಿನಗಳು ಬೇಗ ಬರುತ್ತವೆ. ವರ್ಷದಲ್ಲಿ ಒಂದು ಬಾರಿ ಮಾತ್ರ ಸಾವಯವ ಗೊಬ್ಬರ ಕೊಡುವವರಿಗೆ ಈ ಗೊಬ್ಬರ ಧೀರ್ಘ ಕಾಲಿಕ ಫಲಿತಾಂಶವನ್ನು ಕೊಡಲಾರದು.

ಕೋಳಿ ಗೊಬ್ಬರ ಹೇಗೆ ಬಳಸಬೇಕು:

 • ರೈತರು ಬರೇ ಕೋಳಿ ಗೊಬ್ಬರ ಬಳಕೆ ಮಾಡುವುದು ಮಣ್ಣು ರಚನೆ ಸುಧಾರಣೆಗೆ  ಸೂಕ್ತವಲ್ಲ.
 • ಕೊಟ್ಟಿಗೆ ಗೊಬ್ಬರ, ಅಥವಾ ಬೆಳೆ ತ್ಯಾಜ್ಯಗಳನ್ನು ಅಧಿಕ ಪ್ರಮಾಣದಲ್ಲಿ ಹಾಕಿ, ಅದರ ಮೇಲೆ ಈ ಗೊಬ್ಬರವನ್ನು ಹಾಕಿದರೆ ಫಲ ಹೆಚ್ಚು.
 • ಕಾಂಪೋಸ್ಟು ಮಾಡುವಾಗ ಎರೆಹುಳು ಸಾಕುವಾಗ ಅದರ ಜೊತೆಗೆ ಕೋಳಿ ಗೊಬ್ಬರವನ್ನು ಮಿಶ್ರಣ ಮಾಡಿದರೆ ಅದರ ಸತ್ವ ಹೆಚ್ಚಳವಾಗುತ್ತದೆ.
 • ಸಾವಯವ ವಸ್ತುಗಳ ಜೊತೆಯಲ್ಲಿ ಇದನ್ನು  ಸೇರಿಸಿದರೆ ಅನುಕೂಲ ಹೆಚ್ಚು.
 • ವರ್ಷಕ್ಕೆ ಒಮ್ಮೆ ಈ ಗೊಬ್ಬರವನ್ನು ಹಾಕುವುದರ ಬದಲು ವಿಭಜಿತ ಕಂತುಗಳಲ್ಲಿ ಕೊಡುತ್ತಿದ್ದರೆ  ಅದರ ಫಲ ನಿರಂತರವಾಗಿರುತ್ತದೆ.
 • ಮಾಂಸದ ಕೋಳಿ ಗೊಬ್ಬರವು ಇತರ ಸಾವಯವ ವಸ್ತುಗಳ ಜೊತೆಗೆ ಮಿಶ್ರಣವಾಗಿರುವ ಕಾರಣ ಇದರ ಫಲಿತಾಂಶ ಹೆಚ್ಚು ಸಮಯದ ತನಕ ಇರುತ್ತದೆ.
 • ಮೊಟ್ಟೆ ಕೋಳಿಯ ಹಿಕ್ಕೆಯಲ್ಲಿ ಹಿಕ್ಕೆ ಬಿಟ್ಟು ಬೇರೆ ಯಾವುದೂ ಇರದ ಕಾರಣ ಅದರಲ್ಲಿ ಸತ್ವ ಹೆಚ್ಚು ಇದ್ದರೂ ಅದು ಬೇಗ ಬಳಕೆಯಾಗಿ ಮುಗಿಯುತ್ತದೆ.
 • ಮತ್ತೆ ಸಸ್ಯಗಳಿಗೆ ಕೊರತೆಯಾಗುತ್ತದೆ ಅಥವಾ  ಪೋಷಕಗಳ ಅಸಮತೋಲನ ಉಂಟಾಗುತ್ತದೆ.

ಕೋಳಿ ಗೊಬ್ಬರದ ಜೊತೆಗೆ ಮರ ಸುಟ್ಟ ಬೂದಿಯನ್ನು , ಎಲುಬಿನ ಗೊಬ್ಬರವನ್ನು  ಸೇರಿಸಿ ಬಳಕೆ ಬಳಕೆ ಮಾಡುವುದರಿಂದ ಅದು NPK  ಮೂರೂ ಸೇರಿದ ಸಮತೋಲನ ಗೊಬ್ಬರವಾಗುತ್ತದೆ.

 • ಕೋಳಿ ಗೊಬ್ಬರವು ಬಿಸಿಲಿಗೆ ತೆರೆದಿಟ್ಟ ಸ್ಥಿತಿಯಲ್ಲಿದ್ದು, ಹುಡಿ ರೂಪದಲ್ಲಿದ್ದರೆ ಅದರ ಸತ್ವಾಂಶಗಳು ಕಡಿಮೆ.
 • ಕೆಲವರು ಕೋಳಿ ಗೊಬ್ಬರ ಬಳಕೆ ಮಾಡಿದಾಗ ಸಾಕಷ್ಟು ನೀರು ಕೊಡಬೇಕು ಎನ್ನುತ್ತಾರೆ.
 • ಇದರ ಅರ್ಥ ಹಾಕಿದ ಗೊಬ್ಬರ ನೀರಿನಲ್ಲಿ ಕರಗಿ ಅದರ ಸಾರ ಬೆಳೆಗಳಿಗೆ ದೊರೆಯಲು ಅನುಕೂಲ ಆಗುತ್ತದೆ ಎಂಬುದು.
 • ಬೇಸಿಗೆಯಲ್ಲೂ ಕೋಳಿ ಗೊಬ್ಬರ ಹಾಕಬಹುದು, ಅದರೆ ಸ್ವಲ್ಪ ಸ್ವಲ್ಪ ಹಾಕಿ ನೀರು ಕೊಡಬೇಕು.
 • ಹನಿ ನೀರಾವರಿ ವ್ಯವಸ್ಥೆ ಹೊಂದಿದವರು ನೀರು ತೊಟ್ಟಿಕ್ಕುವ ಜಾಗದಲ್ಲಿ ಇದನ್ನು ಹಾಕಬೇಕು.
 • ಹೆಚ್ಚು ಹಾಕಿದರೆ ಸತ್ವ ಹೆಚ್ಚಾಗುತ್ತದೆ.
 • ಮಳೆಗಾಲದಲ್ಲಿ ಹೆಚ್ಚು ಹಾಕಿದರೆ ಮಳೆ ನೀರಿಗೆ ತೊಳೆದು ಹೋಗಿ, ಸ್ವಲ್ಪ ಮಾತ್ರ ಸಸ್ಯಗಳಿಗೆ ದೊರೆತು, ಅನುಕೂಲವಾಗುವಂತೆ ಕಾಣಿಸುತ್ತದೆ.

ರೈತರು ಯಾವುದೋ ಚೀಲದಲ್ಲಿ ತುಂಬಿ ಬರುವ,  ಮೂಲವಸ್ತು ಯಾವುದೆಂದು ಗೊತ್ತಿರದ ಗೊಬ್ಬರಗಳನ್ನು ಬಳಸುವ ಬದಲು, ಮೂಲ ಗೊತ್ತಿರುವ ತಾಜಾ ಗೊಬ್ಬರ ಬಳಕೆಮಾಡುವುದು  ಮಿತವ್ಯಯವಾಗುತ್ತದೆ. ಆದರೆ ಇದು ಸಾರಜನಕ  ಮಾತ್ರ ಅಧಿಕ ಪ್ರಮಾಣದಲ್ಲಿ ಕೊಡುವ ಪೋಷಕವಾದ ಕಾರಣ, ರಂಜಕ ಮತ್ತು ಪೊಟ್ಯಾಶ್ ಗೊಬ್ಬರವನ್ನು ಕೊಡುವುದು ಅವಶ್ಯಕ.

One thought on “ಕೋಳಿ ಗೊಬ್ಬರದಲ್ಲಿ ಏನಿದೆ? ಪ್ರಯೋಜನ ಏನು?.

 1. Sir nav last year Koli gobbara hakisidvi. Amele 10:26:26 gobbara Hakidvi. So evaga NPK balance madbeku adakke Koli gobbaradalli NPK yestirutte antha tilisi. Accordingly nan NPK balance madtini.

  Mara sutta budhi ( ashes) & elubina (bone) gobbara yelli sigatte

Leave a Reply

Your email address will not be published. Required fields are marked *

error: Content is protected !!