ಅಡಿಕೆ – ತಳಿ ಬೆರಕೆ ಆದರೆ ಇಳುವರಿ ಹೆಚ್ಚುತ್ತದೆ.

ಉತ್ತಮ ಇಳುವರಿ ಅಡಿಕೆ

ತಳಿ ಯಾವುದೇ ಇದ್ದರೂ ಬರೇ ಒಂದೇ ತಳಿಯನ್ನು ನೆಡುವ  ಬದಲು ಸ್ವಲ್ಪ ಪ್ರಮಾಣದಲ್ಲಿ ಬೇರೆ ತಳಿಗಳನ್ನೂ ಮಿಶ್ರಣ ಮಾಡಿದರೆ ಪರಾಗ ಸ್ಪರ್ಶಕ್ಕೆ ಅನುಕೂಲವಾಗಿ ಇಳುವರಿ ಹೆಚ್ಚು ಬರುತ್ತದೆ. ಯಾವಾಗಲು ಬೆರಕೆ ತಳಿಗಳಿದ್ಡಲ್ಲಿ   ನೈಸರ್ಗಿಕವಾಗಿ ತಳಿ ಅಭಿವ್ರುದ್ಧಿಯೂ ಆಗುತ್ತದೆ. ಇದು ತೆಂಗು, ಅಡಿಕೆಗೆರಡಕ್ಕೂ ಅನುಕೂಲ.

 • ಅಡಿಕೆ ಬೆಳೆಸಲು ಈಗ  ಪ್ರಾದೇಶಿಕ ಇತಿಮಿತಿಗಳು ದೂರವಾಗಿ ಬಯಲು ಸೀಮೆಯಲ್ಲೂ ಬೆಳೆ ಬೆಳೆಯಲಾಗುತ್ತಿದೆ. 
 • ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಅಡಿಕೆ  ಬೆಳೆ ಇದೆ.ಕರಾವಳಿ ಪ್ರದೇಶಕ್ಕೆ ಚಾಲಿಗೆ ಸೂಕ್ತವಾದ ತಳಿಗಳನ್ನು ಆಯ್ಕೆ ಮಾಡಬೇಕು.
 • ಮಲೆನಾಡು ಮತ್ತು ಅರೆಮಲೆನಾಡು ಮತ್ತು ಬಯಲು ಸೀಮೆಗೆ ಕೆಂಪು ಮತ್ತು ಚಾಲಿಗೆ ಎರಡಕ್ಕೂ ಹೊಂದಿಕೆಯಾಗುವಂತಹ ತಳಿ ಆಯ್ಕೆ  ಮಾಡಬೇಕು. 

ಹೆಚ್ಚುತ್ತಿದೆ ಬೆಳೆ ಪ್ರದೇಶ:

 • ಅಡಿಕೆ ಬೆಳೆ ಪ್ರದೇಶ ವರ್ಷದಿಂದ ವರ್ಷಕ್ಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
 • ಈ ವರ್ಷ ದಕ್ಷಿಣ ಕನ್ನಡ,  ತೀರ್ಥಹಳ್ಳಿ, ಶಿವಮೊಗ್ಗ, ಸಾಗರ, ಶಿಕಾರಿಪುರ, ಸೊರಬ, ಶಿರಸಿ , ಅನವಟ್ಟಿ, ಹೊನ್ನಾಳಿ , ಚಿತ್ರದುರ್ಗ ಮುಂತಾದ ಕಡೆ ಒಟ್ಟಾರೆಯಾಗಿ 10 ಲಕ್ಷಕ್ಕೂ ಹೆಚ್ಚು ಅಡಿಕೆ ಸಸಿ ನರ್ಸರಿಗಳಲ್ಲಿ ಸಿದ್ದವಾಗುತ್ತಿದೆ.
 • ಕರಾವಳಿಯಲ್ಲಿ ಇಂಟರ್ ಮಂಗಳ, ರತ್ನಗಿರಿ ಸುಮಂಗಳ, ತಳಿಗಳ ಕಾರುಬಾರು ಹೆಚ್ಚು.
 • ಉಳಿದ ಪ್ರದೇಶಗಳಲ್ಲಿ ಶಿರಸಿ ಸ್ಥಳೀಯ,  ಸಾಗರದ ಕ್ಯಾಸನೂರು ಸೀಮೆಯದ್ದು, ತೀರ್ಥಹಳ್ಳಿ, ಶಿವಮೊಗ್ಗೆ, ಮೂಲದ ಅಡಿಕೆಗಳೇ ಹೆಚ್ಚು.
 • ಮಲೆನಾಡಿನ ಅಡಿಕೆ ತಳಿ ಬಯಲು ಸೀಮೆ ತನಕ ಉತ್ತಮ ಫಲಿತಾಂಶ ಕೊಡುತ್ತವೆ.

ತಳಿ ಮಿಶ್ರಣ ಇರಲಿ:

 • ಬೆರಕೆ ತಳಿಗಳಲ್ಲಿ  ಕ್ಷಮತೆ ಹೆಚ್ಚು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
 • ವಿಜ್ಞಾನವೂ ಅದನ್ನು ಅಲ್ಲಗಳೆಯುವುದಿಲ್ಲ.
 • ನೀವು ಕ್ಯಾಸನೂರು ಸೀಮೆಯ ಆಡಿಕೆ ಬೆಳೆಯುತ್ತಿರಾ  ಜೊತೆಗೆ 10%  ಹೊಸನಗರ, ತೀರ್ಥಹಳ್ಳಿ  ಯಾವುದಾದರೂ ತಳಿಗಳನ್ನೂ ಒಟ್ಟಿಗೆ ಮಿಶ್ರ ಮಾಡಿ ಬೆಳೆಸಿರಿ.

ಸ್ಥಳೀಯ ತಳಿ

ಪ್ರತೀಯೊಂದು ತಳಿಯಲ್ಲೂ ಹೂ ಗೊಂಚಲು ಅರಳುವ ಸಮಯ ಸ್ವಲ್ಪ ಸ್ವಲ್ಪ  ಭಿನ್ನವಾಗಿರುತ್ತದೆ.

 •  ಮಂಗಳ ಬೆಳೆಸುತ್ತೀರಾ  ಹಾಗಾದರೆ ಜೊತೆಗೆ 10 %  ಅಥವಾ ಇನ್ನೂ ಸ್ವಲ್ಪ ಹೆಚ್ಚು ಇತರ ತಳಿಯನ್ನು ಮಿಶ್ರಣ ಮಾಡಿ.
 • ಯಾವಾಗಲೂ ಮಂಗಳ ಅಥವಾ ಇಂಟರ್ ಮಂಗಳ ಒಂದೇ ತಳಿಯನ್ನು ನಾಟಿ ಮಾಡುವ ಬದಲು ಬೇರೆ ತಳಿಗಳನ್ನೂ ಮಿಶ್ರಣ ಮಾಡಿ ಬೆಳೆಯಬೇಕು.
 • ಇದು  ಪರಾಗ ಸ್ಪರ್ಶಕ್ಕೆ ನಿರಂತರ ಪರಾಗ ಕಣಗಳನ್ನು ಒದಗಿಸುತ್ತಾ ಇಳುವರಿ ಹೆಚ್ಚಳಕ್ಕೆ ಸಹಾಯಕವಾಗುತ್ತದೆ.
 • ತಳಿ ಆಯ್ಕೆ ಮಾಡುವಾಗ ಬೇಗೆ ಹೂ ಗೊಂಚಲು ಬಿಡುವ ತಳಿಗಳ ಜೊತೆಗೆ ಸ್ವಲ್ಪ ತಡವಾಗಿ ಹೂ ಗೊಂಚಲು ಬಿಡುವ ತಳಿಗಳನ್ನು ಬೆಳೆಸಬೇಕು.

ಸ್ಥಳೀಯ ತಳಿಯಲ್ಲಿ ಹೂ ಗೊಂಚಲು ತಡವಾಗಿ ಬಿಡುತ್ತದೆ. ಮಂಗಳ, ಹಾಗೆಯೇ ಇಂಟರ್ ಮಂಗಳ ತಳಿಯಲ್ಲಿ ಬೇಗ ಹೂ ಗೊಂಚಲು ಬಿಡುತ್ತದೆ. ಸ್ಥಳೀಯ ತಳಿಗಳಲ್ಲಿ ಮಳೆಗಾಲ ತನಕವೂ ಹೂ ಗೊಂಚಲು ಇರುತ್ತದೆ. ಸುಧಾರಿತ ತಳಿಗಳಲ್ಲಿ ಬೇಗ ಅರಳಿ ಬೇಗ ಮುಗಿಯುತ್ತದೆ.

 • ಇದನ್ನು ಮಧ್ಯ ಮಧ್ಯ ನಾಟಿ ಮಾಡಲೂ ಬಹುದು ಬದಿಯಲ್ಲಿ ನಾಟಿ ಮಾಡಲೂ ಬಹುದು.ಅದು ಅವರವರ ಇಷ್ಟ.

ಏನು ಅನುಕೂಲ:

 • ಅಡಿಕೆಯ ಒಂದೇ ತಳಿಯಾದರೆ ಅದರ ಹೂ ಬಿಡುವ ಸಮಯ ಸರಿ ಸುಮಾರು ಏಕ ಪ್ರಕಾರವಾಗಿರುತ್ತದೆ.
 • ಒಂದು ಮರದಲ್ಲಿ  ಹೂಗೊಂಚಲು ಅರಳುವಾಗ ಮತ್ತೊಂದೂ ಅರಳಿರುತ್ತದೆ.
 • ಪರಾಗ ಸ್ವೀಕಾರ ಸಮಯದಲ್ಲಿ ಗಂಡು ಹೂವಿನ ಮಕರಂದ ಲಭ್ಯತೆ ಕಡಿಮೆಯಾಗುವುದು ಹೆಚ್ಚಿನ ಅಡಿಕೆ ತೋಟಗಳಲ್ಲಿ ಕಂಡು  ಬರುವ ಸಮಸ್ಯೆ. 
 • ತಳಿ ಮಿಶ್ರಣ ಮಾಡಿದರೆ ಸಿಂಗಾರ ಬಿಡುವಿಕೆ ಸ್ವಲ್ಪ ವ್ಯತ್ಯಾಸವಾಗಿ ಪರಾಗ ಕಣಗಳು ಹೆಣ್ಣು ಹೂ ಸ್ವೀಕಾರ ಮಾಡುವ ಸ್ಥಿತಿಯಲ್ಲಿದ್ದಾಗ ಲಭ್ಯವಾಗುತ್ತದೆ.

ನೀವು ಇದನ್ನು ಗಮನಿಸಿರಲೂಬಹುದು. ಸ್ಥಳೀಯ ತಳಿಗಳ ಜೊತೆಗೆ ಮಂಗಳ ಅಥವಾ ಇನ್ನಿತರ ತಳಿಗಳನ್ನು ಬೆಳೆಸಿದಾಗ ಎರಡರಲ್ಲೂ ಉತ್ತಮ ಕಾಯಿ ಕಚ್ಚುವಿಕೆಯನ್ನು ಕಾಣಬಹುದು.

 • ಅಡಿಕೆ ತೋಟದಲ್ಲಿ ನಿರಂತರ ಪರಾಗ ಕಣಗಳು ಗಾಳಿಯ ಮೂಲಕ ಪ್ರಸಾರವಾಗುತ್ತಾ ಇರಬೇಕು.
 • ಆಗ ಪರಾಗ ಸ್ವೀಕಾರ ಮಾಡುವ ಸ್ಥಿತಿಯಲ್ಲಿರುವ ಹೆಣ್ಣು ಹೂವಿಗೆ ಪರಾಗದ ಕೊರತೆ ಉಂಟಾಗಲಾರದು.
 • ಸಿಂಗಾರ ಒಣಗುವಿಕೆ ಕಡಿಮೆ ಕಾಯಿ ಕಚ್ಚುವಿಕೆ, ಮಿಳ್ಳೆ ಉದುರುವಿಕೆ ಕಡಿಮೆಯಾಗುತ್ತದೆ.

ಎಲ್ಲಿ ಬೇಡ:

 • ನೀವು ಅಡಿಕೆ ತೋಟ ಮಾಡಿ ಶುದ್ಧ ತಳಿಯ ಬೀಜೋತ್ಪಾದನೆ ಮಾಡುವುದೇ ಆಗಿದ್ದರೆ  ಈ ರೀತಿ ನಾಟಿ  ಮಾಡುವುದು  ಸೂಕ್ತವಲ್ಲ.
 • ಅದರಲ್ಲಿ ತಳಿ ಮಿಶ್ರಣ ಆಗಿ ತಳಿ ವ್ಯತ್ಯಾಸ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ. ಒಳ್ಳೆ ತಳಿಯೂ ಸಿಗಬಹುದು, ವ್ಯತ್ಯಾಸವೂ ಆಗಬಹುದು.

ಬರೇ ಬೆಳೆಗಾಗಿ ಬೆಳೆ ಬೆಳೆಸುವುದೇ ಆಗಿದ್ದರೆ ಈ ರೀತಿ ಮಿಶ್ರ ಪರಾಗ ಕಣಗಳು ದೊರೆತರೆ ಕಾಯಿ ಕಚ್ಚುವಿಕೆ ಮತ್ತು  ಫಸಲಿನ ಗುಣಮಟ್ಟ ಉತ್ತಮವಾಗಿರುತ್ತದೆ. ಈ ರೀತಿ ಮಾಡಿದಾಗ ಅದರಲ್ಲಿ ಕೆಲವೊಮ್ಮೆ ಉತ್ತಮ ತಳಿಯ ಉತ್ಪಾದನೆಯೂ ಅಗುವ ಸಾಧ್ಯತೆ ಇಲ್ಲದಿಲ್ಲ.

ಈ ಬಗ್ಗೆ ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ.

Leave a Reply

Your email address will not be published. Required fields are marked *

error: Content is protected !!