ಸುಣ್ಣ ಹಾಕುವುದರಿಂದ ಮಣ್ಣಿನ ರಸಸಾರ ತಟಸ್ಥ ಸ್ಥಿತಿಯತ್ತ ತಲುಪುತ್ತದೆ, ಅಥವಾ ಸ್ವಲ್ಪ ಕ್ಷಾರೀಯವೂ ಆಗುತ್ತದೆ. ಮಣ್ಣಿನ ಸ್ಥಿತಿ ಹುಳಿಯಿಂದ ಕ್ಷಾರದತ್ತ ಬದಲಾವಣೆ ಆದ ನಂತರ ಗೊಬ್ಬರ ಬಳಸಿದರೆ ಅದನ್ನು ಸಸ್ಯಗಳು ಸುಭೋಜ್ಯವಾಗಿ ಬಳಸಿಕೊಳ್ಳುತ್ತವೆ. ಜೀರ್ಣ ಶಕ್ತಿ ಸರಿಯಾಗಿ ಇರುವಾಗ ಆಹಾರ ತಿಂದರೆ ಅದು ಶರೀರಕ್ಕೆ ಚೆನ್ನಾಗಿ ತೆಗೆದುಕೊಳ್ಳುತ್ತದೆ ಹಾಗೆಯೇ ಇದೂ ಸಹ. ಮಣ್ಣಿನ ಜೀರ್ಣ ಶಕ್ತಿಯನ್ನು ಉತ್ತಮಪಡಿಸಿ ಪೋಷಕಾಂಶ ನೀಡುವುದು ಒಳ್ಳೆಯ ಕ್ರಮ.
- ಸಾಗುವಳಿಗೆ ಒಳಪಟ್ಟ ಅಥವಾ ಬೆಳೆ ಬೆಳೆಯುವ ಭೂಮಿಯ ಸಾರಾಂಶಗಳನ್ನು ಬೆಳೆಗಳು ಬಳಕೆ ಮಾಡಿಕೊಂಡಾಗ ವ್ಯಯ ಆಗುತ್ತದೆ.
- ಅದೇ ರೀತಿಯಲ್ಲಿ ಮಳೆ ಇತ್ಯಾದಿಗಳಿಂದ ಕೊಚ್ಚಣೆಯಾಗಿಯೂ nutrient erosion ನಷ್ಟವಾಗುತ್ತದೆ.
- ಇದನ್ನು ಭರ್ತಿ ಮಾಡಲು ಮತ್ತೆ ಮತ್ತೆ ಪೋಷಕಗಳನ್ನು ಕೊಡುತ್ತಲೇ ಇರಬೇಕಾಗುತ್ತದೆ.
ಸುಣ್ಣ ಯಾಕೆ ಹಾಕಬೇಕು:
- ಸುಣ್ಣ ಎಂಬುದು ಬೆಳೆಗಳಿಗೆ ಪೋಷಕಾಂಶವೂ ಹೌದು. ಜೊತೆಗೆ ಅದು ಮಣ್ಣಿನ ರಸಸಾರ Soil pH ಸರಿಪಡಿಸುವ ವಸ್ತುವೂ ಹೌದು.
- ಮಣ್ಣು ಆಮ್ಲೀಯವಾಗಿದ್ದರೆ ಅದನ್ನು ತಟಸ್ಥಿ ಸ್ಥಿತಿಗೆ ತರಬೇಕು.
- ಆಮ್ಲೀಯವಾಗುತ್ತಾ ಹೋದರೆ ಬೆಳೆಗಳಿಗೆ ಯಾವ ಪೋಷಕ ನೀಡಿದರೂ ಅದು ಸ್ಪಂದಿಸುವುದಿಲ್ಲ.
- ಜೊತೆಗೆ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳಾದ ಬ್ಯಾಕ್ಟೀರಿಯಾಗಳು microbial activities ಬದುಕುವುದಿಲ್ಲ.
- ಸ್ವಲ್ಪ ಮಟ್ಟಿಗೆ ಶಿಲೀಂದ್ರಗಳು ಬದುಕುತ್ತವೆಯಾದರೂ ಅವುಗಳಲ್ಲಿ ಕೆಲವೇ ಕೆಲವು ಮಾತ್ರ ಉಪಕಾರೀ ಜೀವಿಗಳಾಗಿರುತ್ತವೆ.
- ಹೆಚ್ಚಿನವು ರೋಗ ಕಾರಕಗಳು. ಮಣ್ಣಿನಲ್ಲಿ ಕಣ್ಣಿಗೆ ಕಾಣುವ ಎರೆಹುಳುಗಳೂ ಸೇರಿದಂತೆ ಕಣ್ಣಿಗೆ ಕಾಣದ ಎಲ್ಲಾ ನಮೂನೆಯ ಜೀವಿಗಳ ಉತ್ತಮವಾಗಿ ಚಟುವಟಿಕೆ ನಡೆಯಲು ಮಣ್ಣು ತಟಸ್ಥವಾಗಿರಬೇಕು.
- ಅದಕ್ಕಾಗಿ ಮಣ್ಣಿಗೆ ಸುಣ್ಣ ಹಾಕುವುದು ಉತ್ತಮ ಬೇಸಾಯ ಕ್ರಮ.
ಇದು ಸುಣ್ಣ ಅಲ್ಲ ಕ್ಯಾಲ್ಸಿಯಂ ಎಂಬ ಪೊಷಕ. ಈ ಸತ್ವವನ್ನು ಕಡಿಮೆ ಬೆಲೆಯಲ್ಲಿ ಒದಗಿಸುವ ಮೂಲ ಎಂದರೆ ಸುಣ್ಣ. ಸುಣ್ಣದಲ್ಲಿ ಕಲ್ಲು ಸುಣ್ಣವನ್ನು ಹಾಗೂ ಕರಾವಳಿಯ ಪ್ರದೇಶಗಳಲ್ಲಿ ಸಮುದ್ರದ ಚಿಪ್ಪನ್ನು ಬಳಕೆ ಮಾಡುತ್ತಾರೆ. ಉಳಿದೆದೆ ಸುಣ್ಣದ ಕಲ್ಲು ಅಥವಾ ಡೋಲೋಮೈಟ್ ಬಳಸುತ್ತಾರೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಕ್ಯಾಲ್ಸಿಯಂ ಮೂಲವಾಗಿ ಬಳಕೆ ಮಾಡುವುದು ಡೋಲೋಮೈಟ್ ಎಂಬ ಖನಿಜದ ಹುಡಿಯನ್ನು. ಇದನ್ನೇ ಕೆಲವರು ಸ್ವಲ್ಪ ಬೇಯಿಸಿ/ ಅಥವಾ ಬಿಸಿ ಉಪಚಾರ ಮಾಡಿ, ಹರಳು ರೂಪಕ್ಕೆ ತಂದು ಹೆಚ್ಚಿನ ಬೆಲೆಗೆ ಕೊಡುವುದೂ ಇದೆ.
ಡೋಲೋಮೈಟ್ ಯಾಕೆ ಉತ್ತಮ:
- ಡೋಲೋಮೈಟ್ ಎಂಬುದು ನಮ್ಮ ರಾಜ್ಯವೂ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಖನಿಜ ರೂಪದಲ್ಲಿ ಇರುತ್ತದೆ.
- ಇದನ್ನು ಅಗೆಯುವುದು, ಹುಡಿ ಮಾಡುವುದು, ಪ್ಯಾಕಿಂಗ್ , ಸಾಗಾಟ ಮತ್ತು ಸರಕಾರಕ್ಕೆ ರಾಯಧನ ಕಟ್ಟುವುದು ಬಿಟ್ಟರೆ ಬೇರೆ ಖರ್ಚು ಇಲ್ಲ.
- ಆದ ಕಾರಣ ಅದರಷ್ಟು ಅಗ್ಗದ ಸುಣ್ಣದ ಮೂಲ ಬೇರೆ ಇಲ್ಲ.
- ಇದರಲ್ಲಿ 30% ದಿಂದ 40 % ತನಕ ಕ್ಯಾಲ್ಸಿಯಂ ಇರುತ್ತದೆ.
- ಬರೇ ಕ್ಯಾಲ್ಸಿಯಂ ಮಾತ್ರವಲ್ಲ ಮೆಗ್ನೀಶಿಯಂ 21 %- 22 % ತನಕ ಇರುತ್ತದೆ.
- ಇವೆರದೂ ನೈಸರ್ಗಿಕ ಮೂಲದ ವಸ್ತುಗಳಾಗಿರುತ್ತವೆ.
ಬಾವಿ, ಅಥವಾ ಇನ್ಯಾವುದಾದರೂ ಆಳ ಅಗೆತ ಮಾಡುವಾಗ ಮಣ್ಣಿನಲ್ಲಿ ಬಿಳಿಯಾದ ಜೇಡಿ, ಅದರ ಎಡೆಯಲ್ಲಿ ಬಿಳಿ ಕಲ್ಲುಗಳ ಪದರ ಹೀಗೆಲ್ಲಾ ಇರುತ್ತದೆ. ಇದೇ ರೀತಿಯಲ್ಲಿ ಡೋಲೋಮೈಟ್ ಖನಿಜದಲ್ಲಿ ಬಿಳಿಯಾದ ಕ್ಯಾಲ್ಸಿಯಂ ಶಿಲೆಗಳು ಮತ್ತು ಅದರ ಎಡೆಯಲ್ಲಿ ಮೆಗ್ನಿಶಿಯಂ ಶಿಲೆ ಇರುತ್ತದೆ. ಇದನ್ನೆರಡನ್ನೂ ಒಟ್ಟಿಗೆ ಅಗೆದು ಹುಡಿಮಾಡಿದಾಗ ಕ್ಯಾಲ್ಸಿಯಂ ಮತ್ತು ಮೆಗ್ನಿಶಿಯಂ ಎರಡೂ ಸೇರಿರುತ್ತವೆ. ಇದನ್ನು ಮಣ್ಣಿಗೆ ಸೇರಿಸಿದಾಗ ಮಣ್ಣಿಗೆ ಎರಡು ಅಗತ್ಯವಾದ ಸೆಕಂಡರಿ ನ್ಯೂಟ್ರಿಯೆಂಟ್ ಗಳು ಲಭ್ಯವಾಗುತ್ತದೆ.
ಮೆಗ್ನೀಶಿಯಂ ಯಾಕೆ ಬೇಕು:
- ಅಧಿಕ ಮಳೆಯಾಗುವ ಪ್ರದೇಶದ ಭೂಮಿಯಲ್ಲಿ ಮೆಗ್ನೀಶಿಯಂ ಅಂಶ ಮಣ್ಣಿನಲ್ಲಿ ತುಂಬಾ ಕಡಿಮೆ.
- ಅಲ್ಪ ಸ್ವಲ್ಪ ಇದ್ದರೂ ಸಹ ಮಳೆಗೆ ಮತ್ತು ನೆಲದ ಒರತೆಗೆ ಕೊಚ್ಚಿ ಹೋಗುತ್ತದೆ.
- ಅದ ಕಾರಣ ಪ್ರತೀ ವರ್ಷ ಬೆಳೆಗಳಿಗೆ ಮೆಗ್ನೀಶಿಯಂ ಕೊರತೆ ಉಂಟಾಗುತ್ತದೆ.
- ಮೆಗ್ನೀಶಿಯಂ ಕೊರತೆ ಇದ್ದರೆ ಸಸ್ಯಗಳು ಹಸುರಾಗಿ ಬೆಳೆಯುವುದಿಲ್ಲ.
- ಸಸ್ಯದ ಪ್ರತೀಯೊಂದು ಅಣುವಿನಲ್ಲೂ ಮೆಗ್ನೀಶಿಯಂ ಇರುತ್ತದೆ.
- ಇದು ಕೊರತೆಯಾದರೆ ಹಸುರು ಕಡಿಮೆಯಾಗುತ್ತದೆ.
- ಬರೇ ಇಷ್ಟೇ ಅಲ್ಲ, ಇದು ರಂಜಕವನ್ನು ಸಸ್ಯಗಳು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
- ಕಿಣ್ವಗಳ ಚಟುವಟಿಕೆಯನ್ನು ಅದರಲ್ಲೂ ಮುಖ್ಯವಾಗಿ ರಂಜಕಾಮ್ಲ ಹಾಗೂ ಸಾವಯವ ಸಂಯುಕ್ತಗಳನ್ನು ತಯಾರಿಸುವ ಕಿಣ್ವಗಳ ಚಟುವಟಿಕೆಯನ್ನು ಹೆಚ್ಚಿಸುತ್ತದೆ.
- ಎಣ್ಣೆ ಮತ್ತು ಕೊಬ್ಬುಗಳ ತಯಾರಿಕೆಗೆ ನೆರವಾಗುತ್ತದೆ.
- ಎಲ್ಲಾ ಪೊಷಕಗಳ ಚಲನೆಗೆ ಸಹಾಯ ಮಾಡುವ ಪೋಷಕ ಇದಾಗಿದೆ.
- ಅದ ಕಾರಣ ಎಲ್ಲಾ ಬೆಳೆಗಾರರೂ ಮೆಗ್ನೀಶಿಯಂ ಪೋಷಕವನ್ನು ಕೊಡಲೇ ಬೇಕು.
- ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಎರಡೂ ನೈಸರ್ಗಿಕವಾಗಿ ದೊರೆಯುವ ಏಕೈಕ ನೈಸರ್ಗಿಕ ಮೂಲ ಡೋಲೋಮೈಟ್.
- ಜಗತ್ತಿನಲ್ಲಿ ಬೇರೆ ಯಾವ ಮೂಲದಲ್ಲೂ ಇದು ಇಲ್ಲ.
ಮಳೆ ಕಡಿಮೆ ಇರುವ ಬಯಲು ಸೀಮೆಯ ರೈತರು ಮಣ್ಣು ಪರೀಕ್ಷೆ ಮಾಡಿಸಿ, ಅಗತ್ಯ ಇದ್ದರೆ ಮಾತ್ರ ಸುಣ್ಣ ಬಳಸಬೇಕು. ಅನಗತ್ಯ ಬಳಸಬಾರದು. ತುಂಬಾ ಸಾವಯವ ವಸ್ತು ಬಳಕೆ ಮಾಡುವವರೂ ಮಣ್ಣು ಪರೀಕ್ಷೆ ಮಾಡಿಸಿ, ಅಗತ್ಯ ಇದ್ದರೆ ಮಾತ್ರ ಬಳಸಬೇಕು.
ಡೋಲೋಮೈಟ್ ಯಾಕೆ ಉತ್ತಮ:
- ಇತರ ಸುಣ್ಣಗಳನ್ನು ಚಿಪ್ಪುಸುಣ್ಣ ಹುಡಿಮಾಡಿದ ಅಥವಾ ಬೇಯಿಸಿದ ಸುಣ್ಣದ ಕಲ್ಲು ಗಳನ್ನು ಹೊಲಕ್ಕೆ ಹಾಕುವಾಗ ಚರ್ಮ ಉರಿ ಬರುತ್ತದೆ.
- ಇದು ಮಣ್ಣಿನಲ್ಲಿ ವಿಲೀನವಾಗುವ ಪ್ರಮಾಣ ಸ್ವಲ್ಪ ಕಡಿಮೆ ಎನ್ನುತ್ತಾರೆ.
- ಆದರೆ ಡೊಲೋ ಮೈಟ್ ಹಾಗಾಗುವುದಿಲ್ಲ. ಇದನ್ನು ಬೇಯಿಸಿರುವುದಿಲ್ಲ.
- ಖನಿಜಗಳನ್ನೇ ಸಿಮೆಂಟ್ ತರಹ ಹುಡಿ ಮಾಡಿರುತ್ತಾರೆ. ( ಇದೇ ಮೂಲವಸ್ತುವನ್ನು ಸಿಮೆಂಟ್ ಗೂ ಬಳಸುತ್ತಾರೆ. ಅಲ್ಲಿ ಮೆಗ್ನೀಶಿಯಂ ಬಿಡುತ್ತಾರೆ)
- ಹುಡಿ ಮಾಡಿದ ಕಾರಣ ಅದು ತ್ವರಿತವಾಗಿ ಲಭ್ಯವಾಗುತ್ತದೆ.
- ಇತರ ಕಂಪೆನಿ ತಯಾರಿಕೆಯ ವಸ್ತುಗಳಿಗೂ ಮೂಲವಸ್ತು ಇದೇ ಆಗಿರುತ್ತದೆ.
- ಬೆಲೆ ಮಾತ್ರ 5 ಪಟ್ಟು ಹೆಚ್ಚು ಇರುತ್ತದೆ.
- ಸಸ್ಯಗಳಿಗೆ ನೀವು ಹೆಚ್ಚು ಬೆಲೆ ಕೊಟ್ಟು ಖರೀದಿಸಿದ ವಸ್ತುವೋ ಅಥವಾ ಕಡಿಮೆ ಬೆಲೆಯದ್ದೋ ಗೊತ್ತೇ ಆಗುವುದಿಲ್ಲ.
- ಆದ ಕಾರಣ ಸಾಧ್ಯವಾದಷ್ಟು ಕಡಿಮೆ ಬೆಲೆಯ , ಪರಿಣಾಮ ಚೆನ್ನಾಗಿರುವ ನೈಸರ್ಗಿಕ ಮೂಲವಸ್ತುಗಳನ್ನೇ ಬಳಕೆ ಮಾಡಿ.
ರೈತರು ಒಮ್ಮೆ ತಮ್ಮ ಹೊಲಕ್ಕೆ ಸುಣ್ಣ ಹಾಕಿ ಸಸ್ಯದ ಬೆಳೆವಣಿಗೆಯನ್ನು ಸರಿಯಾಗಿ ಗಮನಿಸುವುದರಿಂದ ಮಾತ್ರ ನಿಜವಾದ ಅದರ ಫಲ ತಿಳಿಯುತ್ತದೆ. ಖರ್ಚು ಕಡಿಮೆಯ ಎಲ್ಲಾ ಕಡೆಗಳಲ್ಲೂ ಸಾಬೀತಾದ ವಸ್ತುಗಳನ್ನು ಬಳಕೆ ಮಾಡುವುದು ಉತ್ತಮ ಕ್ರಮ.
end of the article:————————————————————-
search words: Lime application# soil amendment# Dolomite #calcium application# magnesium# secondary nutrient#calcium magnesium nutrient# Dolomite mine#