ತೆಂಗಿನ ತೋಟದಲ್ಲಿ ಮಿಶ್ರ ಬೆಳೆಗಳನ್ನು ಬೆಳೆಸಿದರೆ ತೆಂಗಿನಲ್ಲಿ ಇಳುವರಿ ಹೆಚ್ಚುತ್ತದೆ.
ತೆಂಗಿನ ತೋಟದಲ್ಲಿ ಬಹುವಾರ್ಷಿಕ ಮಿಶ್ರ ಬೆಳೆಗಳಲ್ಲಿ ಹಿಪ್ಪು ನೇರಳೆ ಒಂದು. ಉಳಿದೆಲ್ಲಾ ಮಿಶ್ರ ಬೆಳೆಗಳು ಕೊಡುವ ಆದಾಯಕ್ಕೆ ಹೋಲಿಕೆ ಮಾಡಿದರೆ ಹಿಪ್ಪು ನೇರಳೆಯೇ ಶ್ರೇಷ್ಟ. ಇದು ನೆಟ್ಟು ಸಸಿ ಆಗುವ ತನಕ ಒಂದು ವರ್ಷ ಕಾಯಬೇಕಾಗಬಹುದು. ನಂತರ ಇದರಿಂದ ನಿರಂತರ ಆದಾಯ ಬರುತ್ತಲೇ ಇರುತ್ತದೆ. ತೆಂಗಿನ ಅಧಿಕ ಇಳುವರಿಗೂ ಇದು ಸಹಾಯಕವಾಗುತ್ತದೆ.
- ರೇಶ್ಮೆ ವ್ಯವಸಾಯ ಎಂಬುದು ಒಂದು ರೀತಿಯಲ್ಲಿ ಸರಕಾರಿ ನೌಕರಿ ಇದ್ದಂತೆ.
- ತಿಂಗಳಾಂತ್ಯಕ್ಕೆ ಬರುವ ನಿಶ್ಚಿತ ಆದಾಯದಂತೆ ತಿಂಗಳಿಗೆಗೊಮ್ಮೆ ಉತ್ತಮ ಆದಾಯ ಕೊಡಬಲ್ಲ ವೃತ್ತಿ ಇದ್ದರೆ ಅದು ರೇಶ್ಮೆ ವ್ಯವಸಾಯ.
- ರೇಶ್ಮೆ ವ್ಯವಸಾಯಕ್ಕೆ ಹಿಪ್ಪು ನೇರಳೆ ಸೊಪ್ಪು ಬೆಳೆಸಲು ಪ್ರತ್ಯೇಕ ಸ್ಥಳಾವಕಾಶವೇ ಬೇಕಾಗಿಲ್ಲ.
- ಇದನ್ನು ಇರುವ ತೆಂಗಿನ ತೋಟದಲ್ಲೂ ಬೆಳೆಸಬಹುದು.
- ಹಿಪ್ಪು ನೇರಳೆ ನೆಟ್ಟು ತಕ್ಷಣ ನಿರ್ದಿಷ್ಟ ಅಂತರದಲ್ಲಿ ತೆಂಗನ್ನೂ ಬೆಳೆಸಬಹುದು.
ತೆಂಗಿನ ಇಳುವರಿ ಹೆಚ್ಚುತ್ತದೆ:
- ತೆಂಗಿನ ಬೆಳೆಯಲ್ಲಿ ಅಧಿಕ ಇಳುವರಿ ಸಿಗಬೇಕಿದ್ದರೆ ಅಧಿಕ ಪೊಷಕಾಂಶ ಮತ್ತು ಎಲ್ಲಾ ಕವಲು ಬೇರುಗಳಿಗೆ ಆಹಾರ ನೀರು ದೊರಕುತ್ತಿರಬೇಕು.
- ಮಿಶ್ರ ಬೆಳೆಗಳನ್ನು ಬೆಳೆದಾಗ ಇದು ಸುಲಭವಾಗಿ ಲಭ್ಯವಾಗುತ್ತದೆ.
- ಎಲ್ಲಾ ಮಿಶ್ರ ಬೆಳೆಗಳಿಂದ ಇಷ್ಟು ಪ್ರಮಾಣದಲ್ಲಿ ಪೋಷಕಗಳು,ನೀರು ದೊರೆಯಲಾರದು.
- ಕೆಲವೊಂದು ಬೆಳೆಗಳನ್ನು ಬೆಳೆದಾಗ ಮಿಶ್ರ ಬೆಳೆಯೇ ತೆಂಗಿನ ಪೋಷಕಗಳನ್ನು ಕಬಳಿಸುತ್ತದೆ.
- ಆದರೆ ಹಿಪ್ಪುನೇರಳೆಯಿಂದ ಹಾಗಾಗದು.
- ಹಿಪ್ಪುನೇರಳೆ ಸಸಿಗಳನ್ನು ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಬೆಳೆದಾಗ ಹೆಚ್ಚು ಹೆಚ್ಚು ಸೊಪ್ಪು ಉತ್ಪಾದನೆಗಾಗಿ ನಾವು ಪೋಷಕಗಳನ್ನು ಕೊಡುತ್ತಲೇ ಇರುತ್ತೇವೆ.
- ಕಾರಣ ಇದು ತೆಂಗಿಗಿಂತ ಹೆಚ್ಚಿನ ಉತ್ಪತಿಯನ್ನು ಕೊಡುತ್ತದೆ.
- ಆ ಪೋಷಕಗಳಲ್ಲಿ ಸ್ವಲ್ಪ ಪ್ರಮಾಣ ತೆಂಗಿಗೂ ದೊರೆಯುತ್ತದೆ. ನೀರೂ ಸಹ ದೊರೆಯುತ್ತದೆ.
- ಇದು ಅಧಿಕ ಇಳುವರಿ ಕೊಡಲು ಸಹಾಯಕವಾಗುತ್ತದೆ.
- ಹಿಪ್ಪುನೇರಳೆ ಬೆಳೆದಾಗ ಮಣ್ಣು ಸಡಿಲವಾಗಿ ತೆಂಗಿನ ಬೇರುಗಳು ವಿಶಾಲ ಜಾಗಕ್ಕೆ ಹಬ್ಬಲು ನೆರವಾಗುತ್ತದೆ.
- ತೆಂಗಿನ ಬೇರು ಹೆಚ್ಚು ವಿಶಾಲ ಜಾಗಕ್ಕೆ ಹಬ್ಬಿದಂತೆ ಇಳುವರಿ ಹೆಚ್ಚಳಕ್ಕೆ ಸಹಾಯಕವಾಗುತ್ತದೆ.
ಹೇಗೆ ನೆಡಬೇಕು:
- ಹಿಪ್ಪು ನೇರಳೆ ಸಾಲುಗಳನ್ನು ಮಾಡುವಾಗ ತೆಂಗಿನ ಮರದ ಮಧ್ಯಂತರದ ಅವಕಾಶದಲ್ಲಿ ನಾಟಿ ಮಾಡಬೇಕು.
- ನಾಲ್ಕು ತೆಂಗಿನ ಮರದ ಮಧ್ಯೆ ನಾಲ್ಕು ಸಾಲುಗಳಲ್ಲಿ ನಾಟಿ ಮಾಡಬೇಕು.
- 25×25 ಚದರ ಅಡಿ ಅಂತರದಲ್ಲಿ ಸುಮಾರು 80 ಗಿಡಗಳನ್ನು ನಾಟಿ ಮಾಡಬಹುದು.
- ತೆಂಗಿನ ಮರದ ಬುಡಸುಮಾರು 5 ಅಡಿಯಷ್ಟು ಬಿಡಬೇಕು.
ಸೂಕ್ತ ತಳಿ:
- ಹಿಪ್ಪು ನೇರಳೆಯ ಎಲ್ಲಾ ಉತ್ತಮ ತಳಿಗಳೂ ತೆಂಗಿನ ತೋಟದಲ್ಲಿ ಬೆಳೆಸಲು ಹೊಂದಿಕೆಯಾಗುತ್ತದೆ.
- ಈಗಾಗಲೇ ಮಂಡ್ಯ, ರಾಮನಗರ, ಕನಕಪುರ, ಮುಂತಾದ ಕಡೆಗಳಲ್ಲಿ ರೈತರು ಸ್ಥಳೀಯ ಚಾಲ್ತಿಯ ತಳಿಗಳಾದ ಕಣ್ವ , V1 ತಳಿಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ.
- ಉತ್ತಮ ಇಳುವರಿಯನ್ನೂ ಪಡೆಯುತ್ತಾರೆ.
ಮೈಸೂರಿನ ಕೇಂದ್ರೀಯ ರೇಶ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯವರು ಕಣ್ವ2 ಮತ್ತು ಕೋಸೆನ್ (Kosen) ಇವುಗಳ ಸಂಕರ ತಳಿಯಾದ ಸಹನಾ ಎಂಬ ತಳಿಯನ್ನು ತೆಂಗಿನ ಜೊತೆಗೆ ಮಿಶ್ರ ಬೆಳೆಯಾಗಿ ಬೆಳೆಸಲು ಸೂಕ್ತವಾದ ತಳಿಯನ್ನು ಅಭಿವೃದ್ದಿಪಡಿಸಿದ್ದಾರೆ.
- ಈ ತಳಿಗೆ ಹೆಚ್ಚು ಗೆಲ್ಲುಗಳು ಬರುವುದಿಲ್ಲ. ಗಂಟುಗಳು ಹತ್ತಿರ, ಎಲೆಗಳು ದಪ್ಪ ಇರುತ್ತವೆ.
- 100 ಎಲೆಗಳ ತೂಕ ಸುಮಾರು 397 – 420 g ಬರುತ್ತದೆ.
- ಎಲೆ ತುಕ್ಕು ರೋಗ, ಎಲೆ ಚುಕ್ಕೆ ರೋಗಕ್ಕೆ ನಿರೋಧಕ ಶಕ್ತಿ ಹೊಂದಿದೆ.ಬೇಗ ಚಿಗುರುತ್ತದೆ.
- ಸಾಮಾನ್ಯವಾಗಿ ಹಿಪ್ಪು ನೇರಳೆ ಸೊಪ್ಪು ಹೆಚ್ಚು ಬಿಸಿಲು ಬಿದ್ದಷ್ಟು ಹೆಚ್ಚು ಬೆಳೆಯುತ್ತದೆ.
- ಆದರೆ ಈ ತಳಿಗೆ 40% ಬಿಸಿಲು ಕಡಿಮೆ ಇದ್ದರೂ ಆಗುತ್ತದೆ.
- ಒಂದು ಎಕ್ರೆ ತೆಂಗಿನ ತೋಟದಲ್ಲಿ ಹಿಪ್ಪು ನೇರಳೆ ಬೆಳೆದರೆ ಸುಮಾರು 15-17 ಟನ್ ಸೊಪ್ಪು ಪಡೆಯಬಹುದು.
ಯಾವುದೇ ಬೆಳೆಯ ಅಧಿಕ ಇಳುವರಿಗೆ ನೆರವಾಗುವಂತದ್ದು, ಹೆಚ್ಚುವರಿ ಆರೈಕೆ. ಮಿಶ್ರ ಬೆಳೆಗಳನ್ನು ಬೆಳೆಸಿದಾಗ ಅದರ ಆರೈಕೆ ಮಾಡುವಾಗ ಅದು ಮುಖ್ಯ ಬೆಳೆಗೆ ಸಹಾಯಕವಾಗುತ್ತದೆ. ಹಿಪ್ಪು ನೇರಳೆಯಂತಹ ಬೆಳೆಯನ್ನು ಬೆಳೆಸುವಾಗ ಅದರಲ್ಲಿ ಬರುವ ಆದಾಯಕ್ಕಾಗಿ ಅದನ್ನು ಹೆಚ್ಚು ಮುತುವರ್ಜಿಯಿಂದ ಬೆಳೆಸುತ್ತೇವೆ. ಇದರಿಂದಾಗಿ ತೆಂಗಿನ ಇಳುವರಿ ಹೆಚ್ಚಲು ಸಹಾಯಕವಾಗುತ್ತದೆ.