ತೆಂಗು ಅಗಲಿ , ಅಡಿಕೆ ಅಗಲಿ, ನೆಡುವಾಗ ಅದರ ಬೇರುಗಳು ಚೆನ್ನಾಗಿ ಬೆಳೆಯುವಂತೆ ಅವಕಾಶ ಮಾಡಿಕೊಟ್ಟು ನೆಡಬೇಕು. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆ ಆಗುವಾಗ ಬೇರುಗಳು ತ್ವರಿತವಾಗಿ ಆ ಮಣ್ಣಿಗೆ ಹೊಂದಿಕೊಳ್ಳಬೇಕು. ಹಾಗೆ ಆಗಬೇಕಾದರೆ ಹೀಗೆ ನೆಡಿ.
ತೆಂಗಿನ ಸಸಿಯನ್ನು ನೆಡುವಾಗಲೇ ಸರಿಯಾಗಿ ನೆಟ್ಟರೆ ಮಾತ್ರ ತಕ್ಷಣ ಹೊಸ ಎಲೆ ಬಿಡುತ್ತದೆ. ಬೆಳೆಯುತ್ತದೆ ಹಾಗೆಯೇ ಮುಂದೆ ಅದು ಉತ್ತಮ ಇಳುವರಿ ಕೊಡಲು ಸಮರ್ಥವಾಗಿರುತ್ತದೆ.
ತೆಂಗಿನ ಮರದ ವಾರ್ಷಿಕ ಸರಾಸರಿ ಇಳುವರಿ ಎಷ್ಟು ? 50-100 ಕಾಯಿಯೇ. ಅಲ್ಲವೇ ಅಲ್ಲ. ಉತ್ತಮ ಸಸಿ ಯನ್ನು ಸೂಕ್ತ ರೀತಿಯಲ್ಲಿ ನಾಟಿ ಮಾಡಿದ್ದೇ ಆದರೆ ಸರಾಸರಿ 200 ಕಾಯಿ ಪಡೆಯಬಹುದು. ಇದಕ್ಕಿಂತ ಹೆಚ್ಚು ಪಡೆಯುವವರು ತಿಪಟೂರು, ಅರಸೀಕೆರೆ , ಚಿತ್ರದುರ್ಗ ಮುಂತಾದ ಕಡೆ ಇದ್ದಾರೆ. ಒಂದು ತೆಂಗಿನ ಮರದಲ್ಲಿ 150 ಕಾಯಿಗಿಂತ ಹೆಚ್ಚು ಇಳುವರಿ ಪಡೆಯುವಂತಾದರೆ ತೆಂಗಿನ ಕೃಷಿ ಲಾಭದಾಯಕವಾಗುತ್ತದೆ.
ಯಾವುದೇ ಬೆಳೆಯಿರಲಿ, ಅದರ ಯಸಸ್ಸಿನ ಮೊದಲ ಹಂತ ಉತ್ತಮ ಬೀಜದ ಅಯ್ಕೆ. ಎಷ್ಟೇ ಉತ್ತಮ ಬೀಜವನ್ನು ಆಯ್ಕೆ ಮಾಡಿದರೂ ಅದನ್ನು ಸೂಕ್ತ ರೀತಿಯಲ್ಲಿ ಸಸಿ ಮಾಡಿ ನೆಟ್ಟರೆ ಅದರಲ್ಲಿ ಒಳ್ಳೆಯ ಪ್ರತಿಫಲ ಇರುತ್ತದೆ. ಕರಾವಳಿಯ ಭಾಗಗಳಲ್ಲಿ ರೈತರು ಅನುಸರಿಸುವ ನಾಟಿ ವಿಧಾನದಿಂದ ತೆಂಗಿನ ಸಸಿಯ ಇಳುವರಿ ಸಾಮರ್ಥ್ಯವೇ ನಿಂತು ಹೋಗುತ್ತದೆ. ಮರದ ಭವಿಷ್ಯವೇ ಹತ್ತಿಕ್ಕಲ್ಪಡುತ್ತದೆ. ಇಲ್ಲಿ ಬರುವ ಸರಾಸರಿ ಇಳುವರಿ 60-75 ಕಾಯಿಗಳು. ಇದು ತೀರಾ ಕಡಿಮೆ.
ಗದ್ದೆಯ ಹುಣಿಯಲ್ಲಿ ( ಸ್ಥಳೀಯವಾಗಿ ಕಟ್ಟ ಹುಣಿ ಎನುತ್ತಾರೆ) ಅಥವಾ ಜೌಗು ಸ್ಥಳದಲ್ಲಿ( ಸಮುದ್ರದ ಬದಿ, ಹೊಳೆ ಬದಿ) ಮಣ್ಣು ಏರಿ ಮಾಡಿ ನೆಟ್ಟ ತೆಂಗಿನ ಸಸಿಯಲ್ಲಿ ಬಂದಷ್ಟು ಇಳುವರಿ, ವ್ಯವಸ್ಥಿತವಾಗಿ ನೆಟ್ಟು ಬೆಳೆಸಿದ ಸ್ಥಳದಲ್ಲಿ ಬರುವುದಿಲ್ಲ. ಕಾರಣ ಇಷ್ಟೇ ಅಲ್ಲಿ ಬೇರು ಬೆಳೆಯಲು ಅನುಕೂಲ ಸ್ಥಿತಿ ಇರುತ್ತದೆ. ಹೊಂಡ ಮಾಡಿ ನೆಡುವ ಕಡೆ ಇರುವುದಿಲ್ಲ.
ಕರಾವಳಿಯ ಜನ ಮಾಡುವ ತಪ್ಪು:
ಕರಾವಳಿಯಲ್ಲಿ ರೈತರು ತೆಂಗಿನ ಸಸಿ ನೆಡುವಾಗ ಹೊಂಡ ಮಾಡಿ ಅದರಲ್ಲಿ ಮತ್ತೆ ಗಿಡ ಕೂರುವಷ್ಟು ಜಾಗ ಮಾಡಿ, ಅದರಲ್ಲಿ ನೆಡುವ ಕ್ರಮ ಅನುಸರಿಸುತ್ತಾರೆ. ಕೆಲವರು ಹೊಂಡ ಮಾಡಿ ಅದಕ್ಕೆ ಸೊಪ್ಪು , ಗೊಬ್ಬರ ಹಾಕಿ ಸ್ವಲ್ಪ ಮಣ್ಣು ಹಾಕಿ ನೆಡುತ್ತಾರೆ. ಈ ಎರಡು ವಿಧಾನವೂ ಸಸ್ಯ ಬೆಳವಣಿಗೆಗೆ ಸೂಕ್ತವಲ್ಲ. ಇದರಲ್ಲಿ ಬೇರುಗಳ ಬೆಳವಣಿಗೆ ಹತ್ತಿಕ್ಕಲ್ಪಡುತ್ತದೆ. ಎಳೆ ಪ್ರಾಯದಲ್ಲೇ ಸಸಿ ಸೊರಗಿ ಬೆಳೆಯುತ್ತದೆ. ಇದಕ್ಕೆ ಕಾರಣ ಬೇಸಿಗೆಯಲ್ಲಿ ನೀರೊತ್ತಾಯ ತಡೆದುಕೊಳ್ಳುತ್ತದೆ ಮತ್ತು ಮರ ಗಟ್ಟಿಯಾಗಿ ಬೆಳೆಯುತ್ತದೆ ಎಂಬುದು.
ಹೇಗೆ ನೆಡಬೇಕು:
ಬಯಲು ಸೀಮೆಯಯ ಜನ ಹೇಳುತ್ತಾರೆ ಸಾಧ್ಯವಾದಷ್ಟು ಆಳದ ಹೊಂಡ ಮಾಡಿ ಅದರಲ್ಲಿ ತೇಲಿಸಿ ಸಸಿ ನೆಡಿ ಎಂದು.ಸಂಗತಿ ಇಷ್ಟೇ .ನೆಲ ಸಡಿಲವಾಗಲು ಹೊಂಡ ಮಾಡಬೇಕು. ಸಸಿ ಆಳದಲ್ಲಿ ನೆಡಲು ಹೊಂಡ ಮಾಡುವುದಲ್ಲ.ಕೆಲವು ರೈತರು ತಳಭಾಗದಿಂದ ಸಸಿ ಬೆಳೆದರೆ ಅದು ಗಟ್ಟಿಯಾಗಿರುತ್ತದೆ, ನೀರೊತ್ತಾಯ ಆದರೂ ತಡೆಯುತ್ತದೆ ಎಂದು ತಿಳಿದಿದ್ದಾರೆ ಅದು ಸರಿಯಲ್ಲ.ಎಷ್ಟೇ ಆಳದ ಹೊಂಡ ಮಾಡಿದರೂ ಅದರ ಎಲ್ಲಾ ಮಣ್ಣನ್ನೂ ಮತ್ತೆ ಅದೇ ಹೊಂಡಕ್ಕೇ ಹಾಕಿ ಅದರಲ್ಲಿ ಮೇಲು ಭಾಗದಲ್ಲಿ ಸಸಿಯನ್ನು ನೆಡಬೇಕು.ತೆಂಗಿನ ಮರದ ಬೇರುಗಳು ಅಡಿ ಭಾಗಕ್ಕೆ ಹೋಗುವುದಿಲ್ಲ. ಅವು ನೆಲದ ಮೇಲು ಭಾಗದಲ್ಲಿ ಸಡಿಲ ಮಣ್ಣಿನಲ್ಲಿ ಎಷ್ಟು ಸಡಿಲ ಮಣ್ಣು ಇರುತ್ತದೆಯೋ ಅಷ್ಟರ ತನಕ ಹಬ್ಬುತ್ತಾ ಹೋಗುತ್ತದೆ. ಬೇರು ಎಷ್ಟು ದೂರಕ್ಕೆ ಹಬ್ಬುವುದೋ ಅಷ್ಟು ಆಹಾರ ಹೆಚ್ಚು ಸಂಗ್ರಹಿಸುತ್ತಾ ಆರೋಗ್ಯವಾಗಿ ಬೆಳೆಯುತ್ತದೆ.ತೆಂಗು ಏಕದಳ ಸಸ್ಯವಾದ ಕಾರಣ ಅದಕ್ಕೆ ತಾಯಿ ಬೇರು ಇರುವುದಿಲ್ಲ. ಆದ ಕಾರಣ ಅದರ ಬೇರು ನೆಲದ ಮೇಲ್ಭಾಗದಲ್ಲಿ ಹಬ್ಬುತ್ತದೆ.ಹೊಂಡವನ್ನು ಪೂರ್ತಿ ತುಂಬಿ ಅದರ ಮೇಲ್ಭಾಗದಲ್ಲಿ ನೆಟ್ಟರೆ ಆದರ ಬೇರುಗಳು ಸಡಿಲವಾದ ಮಣ್ಣಿನಲ್ಲಿ ಸಲೀಸಾಗಿ ಕೆಳಕ್ಕೆ ಮತ್ತು ವಿಸ್ತಾರಕ್ಕೆ ಹಬ್ಬುತ್ತದೆ.ಬೇರಿನ ಬೆಳವಣಿಗೆಗೆ ತಕ್ಷಣ ಆಹಾರ ದೊರೆತು ಸಸ್ಯ ಬೆಳವಣಿಗೆಗೆ ಅನುಕೂಲವಾಗುತ್ತದೆ.
ನೆಡುವಾಗ ಏನು ಹಾಕಬೇಕು:
ನೆಡುವ ಸಮಯದಲ್ಲಿ ಹೊಂಡವನ್ನು ತುಂಬಿ (ಬೇಕಿದ್ದರೆ 1-1.5 ಅಡಿ ಉಳಿಸಿ.) ಸಸಿಯ ಬೇರು ಮತ್ತು ಕಾಯಿ ಇರುವಷ್ಟು ಕುಳಿಯನ್ನು ಮಾಡಿ. ಆ ಕುಳಿಯ ಸುತ್ತ ಇರುವ ಮಣ್ಣಿಗೆ ಕಾಂಪೋಸ್ಟು ಆದ ಕೊಟ್ಟಿಗೆ ಗೊಬ್ಬರ 5-10 ಕಿಲೋ ಹಾಕಿ ಅದನ್ನು ಆಲ್ಲಿನ ಮಣ್ಣಿಗೆ ಮಿಶ್ರಣ ಮಾಡಿ. ಬೇಕಿದ್ದರೆ ಶಿಲಾರಂಜಕ 100 ಗ್ರಾಂ ಜೊತೆಗೆ ಮಿಶ್ರಣ ಮಾಡಬಹುದು. ಡಿಎಪಿ ಹಾಕುವುದಾದರೆ 50 ಗ್ರಾಂ ಮಣ್ಣಿಗೆ ಮಿಶ್ರಣ ಮಾಡಬೇಕು. ಸಸಿಯನ್ನು ನೆಟ್ಟು ಮಣ್ಣು ಮುಚ್ಚಿ, ಬುಡವನ್ನು ಒತ್ತಿ ಗಟ್ಟಿ ಮಾಡಬೇಕು. ಬುಡಕ್ಕೆ ಮಣ್ಣು ಹಾಕುವಾಗ ಸ್ವಲ್ಪ ಏರಿಕೆ ಮಾಡಿ (ಸುಮಾರು ½ ಅಡಿ ಎತ್ತರಕ್ಕೆ) ಬಿಡಿ. ಸಸಿ ದೊಡ್ದದಿದ್ದರೆ ಗೂಟ ಹಾಕಿ ಗಾಳಿಗೆ ವಾಲದಂತೆ ಕಟ್ಟಬೇಕು. ಬಿಸಿಲಿನ ಸಮಯದಲ್ಲಿ ಮೊದಲ ವರ್ಷ ನೆರಳು ಅಗತ್ಯವಾಗಿ ಬೇಕು ಅದಕ್ಕಾಗಿ ಮೂರು ಕೋಲುಗಳನ್ನು ತ್ರಿಕೋನಾಕಾರದಲ್ಲಿ ಊರಿ ಅದಕ್ಕೆ ಒಣ ತೆಂಗಿನ ಗರಿ ಅಥವಾ ಇನ್ಯಾವುದಾದರೂ ಸ್ವಲ್ಪ ನೆರಳು ಕೊಡುವ ವಸ್ತುವನ್ನು ಇಡಿ. ಮೊದಲ ವರ್ಷ ಹೆಚ್ಚು ಬಿಸಿಲು ಬೀಳದಿರಲಿ. ಎಲೆ ಒಣಗುವುದು ಇರುತ್ತದೆ. ಹಳೆಯ ಸೀರೆಯನ್ನೂ ಹಾಕಬಹುದು.
ಆಳದಲ್ಲಿ ನೆಟ್ಟರೆ ಏನಾಗುತ್ತದೆ?
ಸಸಿಯನ್ನು ಆಳದಲ್ಲಿ ನೆಟ್ಟರೆ ಅದರ ಬೆಳವಣಿಗೆಗೆ ಬೇಕಾದ ಅನುಕೂಲ ಸ್ಥಿತಿ ದೊರೆಯುವುದಿಲ್ಲ. ಅದರಲ್ಲೂ ತಳ ಭಾಗದ ಮಣ್ಣು ತುಂಬಾ ಗಟ್ಟಿ ಮಣ್ಣಾಗಿರುತ್ತದೆ. ಫಲವತ್ತತೆ ಇರುವುದಿಲ್ಲ. ತಕ್ಷಣಕ್ಕೆ ಸ್ವಲ್ಪ ಸಡಿಲ ಮಣ್ಣು ಸಿಕ್ಕಿದರೂ ಸಹ ನಂತರ ದೊರೆಯುವ ಮಣ್ಣು ಗಟ್ಟಿಯಾದ ಕಾರಣ ಬೇರಿನ ಬೆಳವಣಿಗೆಗೆ ತಡೆಯಲ್ಪಡುತ್ತದೆ. ಆಳದಲ್ಲಿ ನಾಟಿ ಮಾಡಿದಾಗ ತೇವಾಂಶ ಹೆಚ್ಚಾಗಿ ಬೇರಿಗೆ ಹಾನಿಯಾಗುತ್ತದೆ. ಎಲ್ಲಾ ಪ್ರದೇಶಗಳಲ್ಲೂ ಮಳೆಗಾಲದಲ್ಲಿ ಮಣ್ಣು ಹೆಚ್ಚುವರಿ ನೀರನ್ನು ಹಿಡಿದಿಟ್ಟುಕೊಳ್ಳುವ ಕಾರಣ ಒಂದು ಋತುಮಾನದಲ್ಲಿ ತೆಂಗಿನ ಸಸಿಯ ಬೇರಿನ ಬೆಳೆವಣಿಗೆ ಹತ್ತಿಕ್ಕಲ್ಪಡುತ್ತದೆ.
ವರ್ಷ ವರ್ಷವೂ ಸ್ವಲ್ಪ ಪ್ರಮಾಣದ ಬೇರುಗಳು ಹೆಚ್ಚುವರಿ ನೀರಿನ ಕಾರಣದಿಂದ ಕೊಳೆಯುವ ಕಾರಣ ಬೆಳೆವಣಿಗೆ ಕುಂಠಿತವಾಗುತ್ತದೆ. ಸಸಿ ಬೆಳೆದಂತೆ ಕಾಂಡದಲ್ಲಿ ಬೇರುಗಳು ಮೇಲೆ ಮೇಲೆ ಹುಟ್ಟಿಕೊಳ್ಳುತ್ತವೆ.ಆಳದಲ್ಲಿ ನಾಟಿ ಮಾಡಿದರೂ ಸಹ ಮರದ ಬೇರುಗಳು ಮೇಲ್ಮುಖ ಬೆಳವಣಿಗೆ ಮೇಲುಸ್ಥರದಲೇ ಹಬ್ಬುತ್ತವೆ.ಬೇರುಗಳು ಆಳದಿಂದ U ಆಕಾರದಲ್ಲಿ ಆಹಾರ ಹುಡುಕಿಕೊಂಡು ಮೇಲೆಯೇ ಬರುತ್ತವೆ.ಅಲ್ಲಿ ಮಾತ್ರ ಅದಕ್ಕೆ ಬೇಕಾಗುವ ಮೇಲು ಮಣ್ಣು ಮತ್ತು ಪೋಷಕಾಂಶಗಳು ಲಭ್ಯವಿರುತ್ತವೆ.ಆಳದಲ್ಲಿ ನಾಟಿ ಮಾಡಿದ ಸಸ್ಯ ಎಳೆ ಪ್ರಾಯದಲ್ಲೇ ಸೊರಗುವ ಕಾರಣ ಅದರ ಭವಿಷ್ಯದ ಬೆಳವಣಿಗೆಗೆ ತೊಂದರೆಯಾಗುತ್ತದೆ.ಸಸಿಯನ್ನು ತೇಲಿಸಿ ನೆಟ್ಟರೆ ಎರಡೇ ವರ್ಷದಲ್ಲಿ ಬೊಡ್ಡೆ ಬಿಡುತ್ತದೆ. ನಿರ್ಧರಿತ ಅವಧಿಗಿಂತ ಬೇಗನೇ ಇಳುವರಿ ಕೊಡುತ್ತದೆ. ಮರ ತನ್ನ ಜೀವಮಾನ ಪರ್ಯಂತ ಏಕ ಪ್ರಕಾರ ಇಳುವರಿ ಕೊಡುತ್ತಿರುತ್ತದೆ.
ತೆಂಗಿನ ಸಸಿ ನೆಡುವವರು ಸಮುದ್ರದ ಬದಿಯಲ್ಲಿ ಯಾಕೆ ಹೆಚ್ಚು ಇಳುವರಿ ಬರುತ್ತದೆ. ಗದ್ದೆ ಹುಣಿಯಲ್ಲಿ ನೆಟ್ಟಲ್ಲಿ ಯಾಕೆ ಹೆಚ್ಚು ಕಾಯಿ ಕೊಡುತ್ತದೆ. ಬಯಲುಸೀಮೆಯಲ್ಲಿ ಯಾಕೆ ಅಷ್ಟೊಂದು ಎಳನೀರು ಕೊಡುತ್ತದೆ ಎಂಬುದನ್ನು ಗಮನಿಸಿ. ಅಲ್ಲಿ ಯಾರೂ ಹೊಂಡದಲ್ಲಿ ನೆಡುವುದಿಲ್ಲ. ತೇಲಿಸಿ ನೆಡುತ್ತಾರೆ.