ಸೌತೇ ಸುಮಾರಾಗಿ ಬೇಸಿಗೆಯಲ್ಲಿ ಎಲ್ಲರೂ ಬೆಳೆಸುವ ತರಕಾರಿ ಬೆಳೆ. ಸೌತೆ ಬೆಳೆಯಲ್ಲಿ ಕೆಲವು ಟ್ರಿಮ್ಮಿಂಗ್ ಮಾಡುವುದರಿಂದ ಬೇಗ ಮತ್ತು ಹೆಚ್ಚು ಇಳುವರಿ ಪಡೆಯಬಹುದು.
- ಟೊಮೇಟೋ, ಆಲೂಗಡ್ಡೇ ನಂತರ ಅತೀ ಹೆಚ್ಚು ಬಳಕೆಯಗುವ ತರಕಾರಿ ಸೌತೆ.
- ಸೌತೆ ಬೆಳೆಯನ್ನು ಹೆಚ್ಚು ನಿಗಾವಹಿಸಿ ಬೆಳೆದಾಗ ಉತ್ತಮ ಲಾಭವೂ ಇದೆ.
ಸೌತೆಯಲ್ಲಿ ಎರಡು ಪ್ರಕಾರಗಳು.
- ಒಂದು ಉದ್ದದ ಕಾಯಿಗಳನ್ನು ಬಿಡುವ ಕೇರಳ ಮೂಲದ ಸೌತೆ. ದಕ್ಷಿ ಣ ಕರ್ನಾಟಕದ ದುಂಡಗೆಯ ತಳಿ.
- ತೂಕ ಸುಮಾರಾಗಿ ಏಕ ಪ್ರಕಾರವಾಗಿರುತ್ತದೆ. ಕೆಲವು ಪ್ರದೇಶಗಳಲ್ಲಿ ಇನ್ನೂ ಕೆಲವು ಸ್ಥಳೀಯ ತಳಿಗಳನ್ನು ಕಾಣಬಹುದು.
- ಚಳಿಗಾಲದ ಸೌತೆ ಬೇಸಾಯವನ್ನು ಸುಮಾರಾಗಿ ಅಕ್ಟೋಬರ್ ತಿಂಗಳು ಬಿತ್ತನೆ ಮಾಡಿದರೆ ಒಳ್ಳೆಯದು. ಪ್ರಾರಂಭದಲ್ಲಿ ಚಳಿ ಕಡಿಮೆಯಾಗಿರುತ್ತದೆ.
- ಬೇಸಿಗೆಯ ಸೌತೆ ಇನ್ನು ಬಿತ್ತನೆ ಮಾಡಿ.
ಬಳ್ಳಿ ತರಬೇತಿ:
- ಬಿತ್ತನೆ ಮಾಡುವಾಗ ಬೀಜ ಹಾಕುವ ಸ್ಥಳದಲ್ಲಿ ಸುಮಾರು 1 ಕಿಲೋ ಪ್ರಮಾಣದಷ್ಟು ಕಳಿತ ಸುಮಾರು 60 % ಕ್ಕೂ ಹೆಚ್ಚು ತೇವಾಂಶ ಹೊಂದಿದ ಕೊಟ್ಟಿಗೆ ಗೊಬ್ಬರವನ್ನು ಹಾಕಿ ನಾಟಿ ಮಾಡಬೇಕು.
- ಸಸಿಗಳು ಹುಟ್ಟಿದ ಮೇಲೆ ಹೆಚ್ಚು ಸಸಿಗಳನ್ನು ಉಳಿಸದೇ ಒಂದು ಬುಡದಲ್ಲಿ 1-2 ಸಸಿಗಳನ್ನು ಮಾತ್ರ ಉಳಿಸಿಕೊಂಡು ಸಾಲಿನಲ್ಲಿ ಸಸಿಗೆ ½ ಅಡಿ ಅಂತರವಿಟ್ಟು ಉಳಿದವುಗಳನ್ನು ತೆಗೆಯಬೇಕು.
- ಸಸಿಗೆ ಸುಮಾರು 8 ಎಲೆ ಬರುವುದರ ಒಳಗೆ ಬುಡಕ್ಕೆ ಮಣ್ಣು ಏರಿಸಬೇಕು. ಮಣ್ಣು ಏರಿಸುವಾಗ ಮತ್ತೆ ಸಸಿಯ ಬುಡ ಭಾಗಕ್ಕೆ ಸಮೀಪ ಇರುವಂತೆ 3-4 ಕಿಲೋ ಪ್ರಮಾಣದಷ್ಟಾನ್ನಾದರೂ ಕಳಿತ ಕಾಂಪೋಸ್ಟು ಗೊಬ್ಬರವನ್ನು ಕೊಡಬೇಕು.
- ಹದ ಕಳಿತ ಗೊಬ್ಬರ ಕೊಡಬಾರದು. ಇದು ಲಭ್ಯವಾಗುವಾಗ ಸಮಯ ಮೀರುತ್ತದೆ.
- ಮಣ್ಣು ಏರಿಸಿ ಮತ್ತೆ 3-4 ಎಲೆ ಬಂದ ತಕ್ಷಣ ಬಳ್ಳಿಯ ತುದಿಯನ್ನು ಚಿವುಟಿ ಅಲ್ಲಿಗೆ ಮುಖ್ಯ ಬಳ್ಳಿಯ ಬೆಳವಣಿಗೆಯನ್ನು ನಿಲ್ಲಿಸಬೇಕು.
- ಆಗ ಕವಲು ಮೊಗ್ಗುಗಳು ಒಡೆಯುತ್ತವೆ. ಕವಲು ಮೊಗ್ಗುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂವು ಆಗುವ ಕಾರಣ ಇಳುವರಿ ಹೆಚ್ಚು ಪಡೆಯಲಿಕ್ಕೆ ಸಾಧ್ಯವಾಗುತ್ತದೆ.
- ಮುಖ್ಯ ಬಳ್ಳಿಯನ್ನು ಉದ್ದಕ್ಕೆ ಬೆಳೆಯಲು ಬಿಟ್ಟಾಗ ಅದು ತುಂಬಾ ಉದ್ದದ ತನಕ ಬೆಳವಣಿಗೆ ಆದ ತರುವಾಯ ಹೂ ಮಿಡಿ ಬಿಡಲು ಪ್ರಾರಂಭವಾಗುತ್ತದೆ.
- ಕವಲು ಬಳ್ಳಿಗಳಲ್ಲಿ ಸುಮಾರಾಗಿ 8:1 ರ ಪ್ರಮಾಣದಲ್ಲಿ ಗಂಡು ಹೆಣ್ಣು ಹೂವುಗಳು ಬಿಡುತ್ತವೆ.
- ಹೆಣ್ಣು ಹೂವುಗಳು ಹೆಚ್ಚು ಬಂದಷ್ಟು ಇಳುವರಿ ಹೆಚ್ಚು ಬರುತ್ತದೆ. ಅವುಗಳೆಲ್ಲದರ ಬೆಳವಣಿಗೆ ಉತ್ತಮವಾಗಿರಬೇಕಾದರೆ ನಿರಂತರವಾಗಿ ಪೋಷಕಾಂಶಗಳನ್ನು ಒದಗಿಸುತ್ತಾ ಇರಬೇಕು.
- ಸೌತೆ ಬೆಳೆಗೆ ನೆಡುವಾಗ ಮತ್ತು ಮಣ್ಣು ಏರಿಸುವಾಗ ಹಾಕುವ ಗೊಬ್ಬರ ಸಾಕಾಗದು, ನಂತರ ಪ್ರತೀ ವಾರಕ್ಕೊಮ್ಮೆಯಂತೆ ನಿಯಮಿತ ಪ್ರಮಾಣದಲ್ಲಿ ಪೋಷಕಗಳನ್ನು ಒದಗಿಸುತ್ತಾ ಇದ್ದರೆ, ಎಲ್ಲಾ ಕಾಯಿಗಳು ಏಕಪ್ರಕಾರವಾಗಿ ಬೆಳವಣಿಗೆ ಹೊಂದುತ್ತವೆ.
ಪೋಷಕಾಂಶ ಮತ್ತು ಇಳುವರಿ:
- ಹೂ ಬಿಡುವ ಸಮಯದ ತನಕ ಸಾರಜನಕ–ರಂಜಕ ಗೊಬ್ಬರಗಳನ್ನು ಕೊಡುತ್ತಾ ಹೂ ಬಿಡಲು ಪ್ರಾರಂಭವಾದ ತಕ್ಷಣದಿಂದಲೇ ಪೊಟ್ಯಾಶಿಯಂ ಗೊಬ್ಬರವನ್ನು ಕೊಡಬೇಕು.
- ಹಾಗೆಂದು ಹೂವು ನಿರಂತರವಾಗಿ ಬಿಡುತ್ತಲೇ ಇರುವ ಕಾರಣ ಮೂರೂ ಪೋಷಕಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಕೊಡುತ್ತಿರಬೇಕು.
- ಕಾಯಿಗಳು ಬೆಳವಣಿಗೆ ಪ್ರಾರಂಭವಾಗುವ ಸಮಯದಲ್ಲಿ ಪೊಟಾಶಿಯಂ ಗೊಬ್ಬರ ಹೆಚ್ಚು ಕೊಡುವುದರಿಂದ ಕಾಯಿಗಳ ಗುಣಮಟ್ಟ ಉತ್ತಮವಾಗಿರುತ್ತದೆ.
- ಕಾಯಿಗಳ ಕಾಪಿಡುವ ಶಕ್ತಿ ಹೆಚ್ಚುತ್ತದೆ. 600-700 ಗ್ರಾ ಯೂರಿಯಾ , 500 ಗ್ರಾಂ ಡಿಎಪಿ ಮತ್ತು 1 ಕಿಲೋ ಪೊಟ್ಯಾಶ್ ಗೊಬ್ಬರವನ್ನು 200 ಲೀ. ನೀರಿನಲ್ಲಿ ಕರಗಿಸಿ,
- ಸಸಿಗಳ ಬುಡಕ್ಕೆ ವಾರಕ್ಕೊಂದಾವರ್ತಿ ಸುಮಾರು 1-2ಲೀ ಪ್ರಮಾಣದಷ್ಟು ಹಾಕುತ್ತಾ ಇದ್ದರೆ ಪೋಷಕಗಳು ಪೂರ್ಣ ಪ್ರಮಾಣದಲ್ಲಿ ಸಸ್ಯಗಳಿಗೆ ಲಭ್ಯವಾಗಿ ಎಲ್ಲಾ ಕಾಯಿಗಳೂ ಉತ್ತಮ ಬೆಳವಣಿಗೆಯನ್ನು ಹೊಂದುತ್ತವೆ.
- ಸಾವಯವ ರೀತಿಯಲ್ಲಿ ಬೆಳೆಯುವಾಗ ಬೂದಿಯನ್ನು ಕೊಡಬೇಕು.
- ಕೊನೆ ತನಕವೂ ಏಕ ಪ್ರಕಾರದ ಕಾಯಿಗಳನ್ನು ಪಡೆಯಲು ಪೋಷಕಾಂಶಗಳನ್ನು ನಿರಂತರವಾಗಿ ಪೂರೈಕೆ ಮಾಡುತ್ತಾ ಇರಬೇಕು.
- ರಾಸಾಯನಿಕ ಗೊಬ್ಬರವನ್ನು ಬಳಸದೇ ಬೆಳೆಯುವವರು ತೀಕ್ಷ್ಣ ಸಾವಯವ ಗೊಬ್ಬರಗಳಾದ ಹರಳು ಹಿಂಡಿ, ಬೇವಿನ ಹಿಂಡಿ ಹೊಂಗೇ ಹಿಂಡಿ ಅಥವಾ ಇನ್ಯಾವುದಾದರೂ ಹಿಂಡಿ ಗೊಬ್ಬರ ಮತ್ತು ಮರಸುಟ್ಟ ಬೂದಿಯನ್ನು ನಿರಂತರವಗಿ ಕೊಡುತ್ತಾ ಉತ್ತಮ ಕಾಯಿಗಳನ್ನು ಪಡೆಯಬಹುದು.
- ಸೌತೆಯಲ್ಲಿ ಮಳೆಗಾಲ ಬರುವ ತನಕವೂ ಇಳುವರಿಯನ್ನು ಪಡೆಯುತ್ತಾ ಇರಬಹುದು.ಪೋಷಕಗಳ ನಿರಂತರ ಪೂರೈಕೆಯಿಂದ ಬಳ್ಳಿ ಬೇಗ ಒಣಗಲಾರದು.
ಹೊಸ ಹೊಸ ಚಿಗುರು ಬರುತ್ತಾ ಕಾಯಿ ಬಿಡುತ್ತಾ ಇರುತ್ತದೆ. ಕಳೆ ನಿಯಾಂತ್ರಣಕ್ಕೆ ಮಲ್ಚಿಂಗ್ ಶೀಟು ಹಾಕಿ ಬೆಳೆಸುವುದು ಸೂಕ್ತ. ನೀರಾವರಿ ಮಾಡುವಾಗ ಮಿಡಿ ಮತ್ತು ಕಾಯಿಗಳಿಗೆ ನೀರು ತಗಲುವುದರಿಂದ ಕಾಯಿ ಕೊಳೆಯುವಿಕೆ ಹೆಚ್ಚಾಗುತ್ತದೆ. ಇದಕ್ಕೆ ಮಲ್ಚಿಂಗ್ ಶೀಟು ಮತ್ತು ಹನಿ ನೀರಾವರಿ ಸೂಕ್ತ.