ರಸಗೊಬ್ಬರಕ್ಕೆ ಯಾವ ಕಾರಣಕ್ಕೆ ಬೆಲೆ ಹೆಚ್ಚಳವಾಗುತ್ತದೆ ಗೊತ್ತೇ?

ರಸಗೊಬ್ಬರ- fertilizer broadcasting

ಕೆಲ ದಿನಗಳ ಹಿಂದೆ ರಸ ಗೊಬ್ಬರದ ಬೆಲೆ ಹೆಚ್ಚಳವಾದ ಸುದ್ದಿ ಭಾರೀ ಸದ್ದು ಮಾಡಿತ್ತು. ಈಗ ಮತ್ತೆ ರಸಗೊಬ್ಬರದ ಬೆಲೆ ಇಳಿಕೆಯದ್ದೇ ಸುದ್ದಿ. ಆದರೆ ಇದರ ಹಿಂದಿನ ವಾಸ್ತವಿಕತೆಯ ಚಿತ್ರಣ ಇಲ್ಲಿದೆ ನೋಡಿ.

ರಸಗೊಬ್ಬರ, ತಂಬಾಕು ಉತ್ಪನ್ನಗಳು ಹಾಗೆಯೇ ಅಲ್ಕೋ ಹಾಲ್, ಪೆಟ್ರೋಲಿಯಂ ಉತ್ಪನ್ನಗಳು ಬಳಸುವವರಿಗೆ ಒಂದು ಚಟದಂತೆ. ಇವುಗಳು ಭಾರತದಂತಹ ಅಧಿಕ ಜನಸಂಖ್ಯೆ ಉಳ್ಳ ದೇಶವನ್ನು ಮುನ್ನಡೆಸಲು ಬೇಕಾದಷ್ಟು ಆದಾಯ ತಂದು ಕೊಡುತ್ತದೆ. ಭಾರತ ದೇಶದಲ್ಲಿ  70% ಕ್ಕೂ ಹೆಚ್ಚು ಕೃಷಿಕರು. ಅದರಲ್ಲಿ 69% ಕೃಷಿಕರು ರಸಗೊಬ್ಬರ ಬಳಸುವವರು. ಹಾಗಿರುವಾಗ  ರಸಗೊಬ್ಬರದ ಬೆಲೆಯನ್ನು ಸರಿಯಾದ ಸಮಯಕ್ಕೆ ಸ್ವಲ್ಪ ಸಮಯ ಏರಿಸಿ ನಂತರ ಇಳಿಸಿದರೂ ಒಂದಷ್ಟು ಆದಾಯ ಸಂಗ್ರಹವಾಗುತ್ತದೆ. ಈಗ ಅದದ್ದೂ ಇದೆ. ಒಂದು ತಿಂಗಳ ಹಿಂದೆ ಬೆಲೆ ಏರಿಸಲಾಯಿತು. ಈಗ ದರ ಇಳಿಸಿದ್ದಲ್ಲ. ರಸಗೊಬ್ಬರಕ್ಕೆ ಕೊಡುತ್ತಿದ್ದ ಸಬ್ಸಿಡಿಯನ್ನು ಹೆಚ್ಚಿಸಿ ಅಲ್ಲಿಗೆ ಒಂದು ತೇಪೆ ಹಚ್ಚಿದ್ದು ಮಾತ್ರ.

 • ಭಾರತ ಸರಕಾರ ಈಗ ದೇಶದ ರೈತರಿಗಾಗಿ ಐತಿಹಾಸಿಕ ಕೊಡುಗೆಯನ್ನು ನೀಡಿದೆ.
 • ಅದು ಫ್ಹೋಸ್ಪೇಟ್ (ರಂಜಕ) ಗೊಬ್ಬರಕ್ಕೆ ಸಬ್ಸಿಡಿಯನ್ನು ಹೆಚ್ಚಿಸುವ ಮೂಲಕ.
fertiliser bag

ರೈತರಿಗೆ ಇದು ತಿಳಿದಿರಲಿ:

 • ರಸ ಗೊಬ್ಬರದಲ್ಲಿ ಯೂರಿಯಾವನ್ನು ವಾತಾವರಣದ ಸಾರಜನಕವನ್ನು ಬಳಸಿ ತಯಾರು ಮಾಡಲಾಗುತ್ತದೆ.
 • ಆದ ಕಾರಣ ಅದಕ್ಕೆ ಭಾರೀ ಬೆಲೆ ಹೆಚ್ಚಳ ಆಗುವುದಿಲ್ಲ.
 • ಅಲ್ಪ ಸ್ವಲ್ಪ ಬೆಲೆ ಹೆಚ್ಚಳವಾದರೂ ಅದನ್ನು ತಯಾರಿ ಮಾಡುವವರ ಖರ್ಚು ವೆಚ್ಚಗಳು ಹೆಚ್ಚಾದಾಗ.
 • ಪೊಟ್ಯಾಶ್ ಗೊಬ್ಬರ ಎಂಬುದು  ಭಾರತದಲ್ಲಿ ಯಾರೂ ತಯಾರು ಮಾಡುವುದಿಲ್ಲ.
 • ಇದನ್ನು ಕೆನಡಾ (CANADA)  ಬೆಲಾರಸ್ ( BELARUS)  ರಷ್ಯಾ (Russia), ಚೀನಾ( China), ಜರ್ಮನಿ (Germany) ಇಸ್ರೇಲ್ (Israel) ಜೋರ್ಡಾನ್ Jordan,ಚಿಲಿ (Chile) ಸ್ಪೈನ್  (Spain) ಮತ್ತು ಸಂಯುಕ್ತ ಅಮೇರಿಕಾ  (United states) ಗಳಲ್ಲಿ ಖನಿಜಗಳಿಂದ ತೆಗೆದು ಅಲ್ಲಿಂದ  ಆಮದು ಮಾಡಿಕೊಳ್ಳಲಾಗುತ್ತದೆ.
 • ಅಲ್ಲಿ ದರ ಹೆಚ್ಚಳ ಮಾಡಿದರೆ ಇಲ್ಲಿ ದರ ಹೆಚ್ಚಳ ಆಗಬೇಕಾಗುತ್ತದೆ. 
 • ರಂಜಕ ಅಥವಾ ಫೋಸ್ಪರಸ್ ಗೊಬ್ಬರವನ್ನು ಸ್ಥಳೀಯವಾಗಿಯೂ ತಯಾರಿಸಲಾಗುತ್ತದೆ.ಆಮದು ಸಹ ಮಾಡಲಾಗುತ್ತದೆ.
 • ಶಿಲಾ ರಂಜಕ ಕ್ಕೆ ಸಲ್ಫ್ಯೂರಿಕ ಅಸಿಡ್ ಸೇರಿಸಿದಾಗ ಅದು ಸೂಫರ್ ಫೋಸ್ಫೇಟ್ ಗೊಬ್ಬರವಾಗುತ್ತದೆ.
 • ಈಗ ಭಾರತದಲ್ಲಿ ಖನಿಜ ಖಾಯಿದೆಯ ಪ್ರಕಾರ ಅಧಿಕೃತವಾಗಿ ಶಿಲಾ ರಂಜಕವನ್ನು ತೆಗೆಯಲಾಗುತ್ತಿಲ್ಲ.
 • ಅದನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. DAP ಗೊಬ್ಬರ ವನ್ನು ರಂಜಕ ಶಿಲೆಗಳಿಗೆ ಫೋಸ್ಪೋರಿಕ್ ಆಮ್ಲದ ಉಪಚಾರ ಮಾಡಿ ತಯಾರಿಸಲಾಗುತ್ತದೆ.(ಶಿಲಾ ರಂಜಕವನ್ನು ಗಂಧಕಾಮ್ಲದಲ್ಲಿ ಉಪಚಾರ ಮಾಡಿ ಅನಂತರ ಅದನ್ನು ಅಮೋನಿಯಾ ದಲ್ಲಿ ಉಪಚರಿಸಲಾಗುತ್ತದೆ. The inputs required to produce one ton of DAP fertilizer are approximately 1.5 to 2 tons of phosphate rock, 0.4 tons of sulfur (S) to dissolve the rock, and 0.2 tons of ammonia.)
 • ಎಲ್ಲದಕ್ಕೂ ಮೂಲ ಶಿಲಾ ರೂಪದ ರಂಜಕ. ರಸಗೊಬ್ಬರಗಳಲ್ಲಿ ದರ ಎರಿಕೆ ಆಗುವುದು ರಂಜಕಯುಕ್ತ ಗೊಬ್ಬರಕ್ಕೆ ಮಾತ್ರ.
 • ಅದುವೇ ಸಂಚಲನ ಮೂಡಿಸುವಂತದ್ದು. ಇದಕ್ಕೆ ಕಾರಣ ಮತ್ತೇನೂ ಅಲ್ಲ.
 • ರಂಜಕಾಮ್ಲ ಮತ್ತು ಗಂಧಕಾಮ್ಲಕ್ಕೆ ದರ ಏರಿಸಿದರೆ ರಂಜಕ ಗೊಬ್ಬರದ ದರ  ಹೊತ್ತಿ ಉರಿಯುತ್ತದೆ.
 • ನಮ್ಮ ಸರಕಾರಗಳು ಮಾಡುವುದು ಒಂದೆಡೆ ಬೆಂಕಿ ಕಡ್ಡಿ ಗೀರಿ ಬಿಡುವುದು.
 • ಮತ್ತೆ ಶಮನಕ್ಕಾಗಿ ಸ್ವಲ್ಪ ಗೋಣಿ ಚೀಲ ಮುಚ್ಚಿ ನಂದಿಸುವುದು.
 • ಇದು ಯಾವುದೇ ಸರಕಾರದ ವಿರುದ್ಧವಾಗಿ ಹೇಳುವುದಲ್ಲ. ಎಲ್ಲಾ ಸರಕಾರಗಳೂ ಇದನ್ನೇ ಮಾಡಿದ್ದು.
ರಸಗೊಬ್ಬರ-DAP fertiliser

ಸರಕಾರದ ಸಬ್ಸಿಡಿ ಒಂದು ನಾಟಕ:

 • ಸರಕಾರ ಡಿ ಎ ಪಿ ಗೊಬ್ಬರಕ್ಕೆ ಸಬ್ಸಿಡಿ ಕೊಡಲಿಲ್ಲ ಎಂದಾದರೆ ಅದರ ಬೆಲೆ ಎಷ್ಟು ಗೊತ್ತಾ? 1200+ 1680= 2880 ರೂ. ಆಗುತ್ತದೆ.
 • ಅದೇ ಸಬ್ಸಿಡಿ ರಹಿತ ರಂಜಕ ಗೊಬ್ಬರಕ್ಕೆ 50 ಕಿಲೋ ಗೆ 3000-3500 ರೂ. ಆಗುತ್ತದೆ.
 • ಸಬ್ಸಿಡಿ ಇರುವ ಗೊಬ್ಬರದಲ್ಲಿ 18% ಸಾರಜನಕ ಮತ್ತು 48% ರಂಜಕ ಇರುತ್ತದೆ.
 • ಸಬ್ಸಿಡಿ  ಇಲ್ಲದ ಗೊಬ್ಬರದಲ್ಲಿ 12% ಸಾರಜನಕ ಮತ್ತು 61%  ರಂಜಕ ಇರುತ್ತದೆ.
 • ಅಂದರೆ 13% ಹೆಚ್ಚುವರಿ ರಂಜಕ ಇರುತ್ತದೆ.
 • ಇದು ಕೂಡಾ ಅಮೋನಿಯಂ ಫೋಸ್ಫೇಟ್ ರೂಪದಲ್ಲಿ ಇರುವಂತದ್ದು.
 • ಸಬ್ಸಿಡಿ ರಹಿತವಾದ ರಂಜಕ ಗೊಬ್ಬರ ನೀರಿನಲ್ಲಿ ಕರಗುವ ರೂಪದ್ದು ಮತ್ತು ಅದರ ಕ್ಷಮತೆ ಬಹಳಷ್ಟು ಹೆಚ್ಚು. ಫಲಿತಾಂಶವೂ ಕ್ಷಿಪ್ರ.
 • ಸರಕಾರ ಒಂದು ಕಡೆ ರಂಜಕಯುಕ್ತ ಗೊಬ್ಬರಕ್ಕೆ ಸಹಾಯಧನ ನೀಡುತ್ತದೆ.
 • ಹಾಗೆಯೇ ಮತ್ತೊಂದು ಕಡೆಯಲ್ಲಿ ಗಂಧಕಾಮ್ಲದ ಬೆಲೆಯನ್ನು ಏರಿಸುತ್ತದೆ.
 • ಇದು ನಾಟಕವನ್ನು ಮಾಡಲು ಹೊರಟಂತೆ ಮೇಲು ನೋಟಕ್ಕೆ ಕಾಣಿಸುತ್ತದೆ.
 • ಸಾಮಾನ್ಯವಾಗಿ  ಒಂದೆಡೆ ಕೊಟ್ಟಂತೆ ಮಾಡುವುದು ಮತ್ತೊಂದೆಡೆ ಅದರ ದುಪ್ಪಟ್ಟು ಕಸಿದುಕೊಳ್ಳುವುದು, ಇದು ನಮ್ಮಲ್ಲಿ ಹಿಂದಿನಿಂದಲೂ ನಡೆದು ಬಂದ ಪ್ರತೀತಿ.

ರೈತರು ಏನು ಮಾಡಬೇಕು:

 •  ಸರಕಾರದ ಸಬ್ಸಿಡಿ ವ್ಯವಸ್ಥೆ ಬಹುಷಃ ನಮಗೇ ಒಂದು ಉರುಳು. ಈ ಸಬ್ಸಿಡಿಯನ್ನು ಯಾವ ರಾಜಕೀಯ ಪಕ್ಷವೂ ತನ್ನ ಪಾರ್ಟಿ ಫಂಡ್ ನಿಂದ ಕೊಡುವುದಿಲ್ಲ.
 • ಅದು ಜನರ ತೆರಿಗೆ ಸಂಗ್ರಹದಿಂದಲೇ ಆಗಬೇಕು.
 • ನಮ್ಮಿಂದ  ಕಸಿದುಕೊಂಡು ಮತ್ತೆ ನಮಗೆ ನೀಡುವುದೇ ಸಬ್ಸಿಡಿ.
 • ಅದಕ್ಕಾಗಿ ರೈತ ಸಾಧ್ಯವಾದಷ್ಟು ಸಬ್ಸಿಡಿಗೆ ದುಂಬಾಲು ಬೀಳುವುದನ್ನು ಕಡಿಮೆ ಮಾಡಬೇಕು.
 • ರಸ ಗೊಬ್ಬರಕ್ಕೆ ದರ ಹೆಚ್ಚಳವಾದರೆ ನಾವು ಬಳಕೆ ಕಡಿಮೆ ಮಾಡಿದರೆ ಸಾಲದೇ? ರಂಜಕವನ್ನು ಕರಗಿಸಿಕೊಡುವ ಜೈವಿಕ ಗೊಬ್ಬರಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡುವುದರಿಂದ ಮಣ್ಣಿನಲ್ಲಿ ಇರುವ ಖನಿಜ ರೂಪದ  ರಂಜಕ ಸಸ್ಯಗಳಿಗೆ ಲಭ್ಯವಾಗುವಂತೆ ಮಾಡಬಹುದು. ಎಲ್ಲಾ ಮಣ್ಣಿನಲ್ಲೂ ರಂಜಕ ಇರುತ್ತದೆ. ಆದರೆ ಅದು ಸಸ್ಯಗಳು ಸ್ವೀಕರಿಸುವ ಸ್ಥಿತಿಯಲ್ಲಿ ಇರುವುದಿಲ್ಲ ಅದನ್ನು ಸ್ವೀಕರಿಸುವಂತೆ ಮಾಡುವುದು ಸೂಕ್ಷ್ಮಾಣು ಜೀವಿಗಳಾದ ಮೈಕೋರೈಝಾ (ಸಸ್ಯಗಳ ಬೇರುಗಳ ಸನಿಹ ಸಹಜೀವನ ನಡೆಸುವ ಕೆಲವು ಪ್ರಭೇಧದ ಶಿಲೀಂದ್ರಗಳು) ಮತ್ತು ಕೆಲವು ಬ್ಯಾಕ್ಟೀರಿಯಾಗಳು. ಅವುಗಳ ಬಳಕೆಯನ್ನು ಹೆಚ್ಚಿಸುತ್ತವೆ.
 • ಇದನ್ನು ಬಳಸಿದರೆ ರಂಜಕ ಗೊಬ್ಬರವನ್ನು ಕಡಿಮೆಮಾಡಬಹುದು.
 • ಸಾರಜನಕಕ್ಕೆ ಈಗ ಇರುವ ಬೆಲೆ ಅಂತಹ ದೊಡ್ದ ಬೆಲೆ ಅಲ್ಲ.
 • ಅದನ್ನು ಬಳಕೆ ಮಾಡಬಹುದು. ಸರಕಾರದ ಸಬ್ಸಿಡಿಗೆ ಅಪೇಕ್ಷೆ ಪಡದೆ, ರಸಗೊಬ್ಬರಕ್ಕೆ ಹೆಚ್ಚು ದಾಸರಾಗದೆ ಇದ್ದರೆ ನಮಗೇ ಒಳ್ಳೆಯದು.
 • ರೈತರು ಸ್ಥಳೀಯವಾಗಿ ಸಂಘಟಿತರಾಗಿ ಕೆಲವು ಮೂಲವಸ್ತುಗಳಲ್ಲಿರುವ ಪೋಷಕಾಂಶಗಳನ್ನು ರಾಸಾಯನಿಕ ಪರೀಕ್ಷೆಗೆ ಒಳಪಡಿಸಿ ( ಮೃದು ಶಿಲಾ ಹುಡಿ, ಜಂಬಿಟ್ಟಿಗೆ ಹುಡಿ ಇತ್ಯಾದಿ) ಪರ್ಯಾಯ ಗೊಬ್ಬರಗಳನ್ನು ಹುಡುಕುವುದು ಭವಿಷ್ಯದ ದೃಷ್ಟಿಯಿಂದ ಸೂಕ್ತ.

ನಮ್ಮ ಬೇಡಿಕೆ ಹೆಚ್ಚಾದಷ್ಟೂ ಬೆಲೆ ಹೆಚ್ಚಳ ಆಗುತ್ತಾ ಇರುತ್ತದೆ. ಬೇಡಿಕೆ ಕಡಿಮೆಯಾದರೆ ಬೆಲೆ ಸ್ಥಿರವಾಗಿರುತ್ತದೆ. ಇದನ್ನು ಪ್ರತೀಯೊಬ್ಬ ರೈತನೂ ತಿಳಿಯಬೇಕು. ವರ್ಷದಿಂದ ವರ್ಷಕ್ಕೆ ರಸ ಗೊಬ್ಬರ ಬಳಕೆ ಕಡಿಮೆ ಮಾಡುತ್ತಾ  ಬರಬೇಕು. ಸಾವಯವ ತ್ಯಾಜ್ಯಗಳನ್ನು ಬಳಸಿದಾಗ  ಅದರಲ್ಲಿರುವ ಉಳಿಕೆ ರಂಜಕ ಸಸ್ಯಗಳಿಗೆ ಲಭ್ಯವಾಗುತ್ತದೆ. ರಂಜಕ ಹೆಚ್ಚು ಉಳ್ಳ ಸಸ್ಯಗಳನ್ನು ಹಸುರೆಲೆ ಗೊಬ್ಬರವಾಗಿ ಬಳಕೆ ಮಾಡಬೇಕು. ವಿಭಜಿತ ಕಂತುಗಳಲ್ಲಿ ರಂಜಕ ಗೊಬ್ಬರಗಳನ್ನು ಮಿತ ಪ್ರಮಾಣದಲ್ಲಿ ಕೊಡುವುದನ್ನು ಅಭ್ಯಾಸ ಮಾಡಬೇಕು. ಫೋಸ್ಪೋ ಸಾಲ್ಯುಬಲ್ ಬ್ಯಾಕ್ಟೀರಿಯಾ ಸಮ್ಮಿಶ್ರಣದಿಂದ ಬೀಜೋಪಚಾರ ಮಾಡುವುದರಿಂದ ರಂಜಕ ಗೊಬ್ಬರ ಉಳಿತಾಯ ಸಾಧ್ಯ.

Leave a Reply

Your email address will not be published. Required fields are marked *

error: Content is protected !!