ನಿಮ್ಮ ಬೆಳೆಗೆ ಯಾವ ರಂಜಕ ಗೊಬ್ಬರ ಸೂಕ್ತ.

ಸಲ್ಫೇಟ್ ಆಫ್ ಪೊಟ್ಯಾಶ್ SOP

ರಂಜಕ ಎಂಬುದರ ಮೂಲ ಶಿಲೆ ಅಥವಾ ಖನಿಜ.  ಇದರ ಅಧಾರದಲ್ಲಿ ರಾಸಾಯನಿಕ ಮೂಲದಲ್ಲಿ ರಂಜಕ ಗೊಬ್ಬರವನ್ನು ತಯಾರಿಸಲಾಗುತ್ತದೆ. ರಂಜಕ ಎಂಬ ಧಾತುವನ್ನು ಸಸ್ಯಗಳು ನೇರವಾಗಿ ಬಳಕೆ ಮಾಡುವುದೇ ಇಲ್ಲ. ಇದು ಒಂದು ಸ್ವತಂತ್ರ ಪೊಷಕ ಅಲ್ಲ. ಇದನ್ನು ಮಣ್ಣಿನಲ್ಲಿರುವ ರಂಜಕ ಕರಗಿಸಿ ಕೊಡುವ ಬ್ಯಾಕ್ಟೀರಿಯಾ, ಶಿಲೀಂದ್ರಗಳು ಸಸ್ಯಗಳಿಗೆ  ಲಭ್ಯವಾಗುವಂತೆ ಮಾಡುತ್ತವೆ.

  • ರಂಜಕ ಗೊಬ್ಬರದಲ್ಲಿ ಮೂರು  ವಿಧ. ಎರಡು ಬಗೆಯವು ನೀರಿನಲ್ಲಿ ಕರಗುವ ರೂಪದ ರಂಜಕ ಮತ್ತು ಒಂದು  ನೀರಿನಲ್ಲಿ ಕರಗದ ರೂಪದ ರಂಜಕ.
  •  ಮಾರುಕಟ್ಟೆಯಲ್ಲಿ ಲಭ್ಯವಿರುವ  ಸಿಂಗಲ್ ಸೂಪರ್ ಫೋಸ್ಫೇಟ್ , ಟ್ರಿಪಲ್ ಸೂಪರ್ ಫೋಸ್ಫೇಟ್, ಮೊನೋ ಅಮೋನಿಯಂ ಫೋಸ್ಫೇಟ್ , ಅಮೋನಿಯಂ ಫೋಸ್ಫೇಟ್ , ಗಂಧಕಾಮ್ಲ, ಮತ್ತು ಡೈ ಅಮೋನಿಯಂ ಫೋಸ್ಫೇಟ್ DAP  ಇವು ನೀರಿನಲ್ಲಿ ಕರಗುವವು. ಸಿಟ್ರೇಟ್ ದ್ರಾವಣದಲ್ಲಿ ಕರಗುವಂತದ್ದು ಕ್ಯಾಲ್ಸಿಯಂ ಫೋಸ್ಫೇಟ್ . ರಾಕ್ ಫೋಸ್ಫೇಟ್ ಇದು ಕರಗದೇ ಇರುವ ರಂಜಕ ಗೊಬ್ಬರವಾಗಿರುತ್ತದೆ.

ಮಣ್ಣಿನಲ್ಲಿ ರಂಜಕ:

  • ರಂಜಕವು ಪ್ರಕೃತಿಯಲ್ಲಿ ವಾಯು ರೂಪದಲ್ಲಿ ಇಲ್ಲ. ಬದಲಾಗಿ ಅದು ಘನ ರೂಪದಲ್ಲಿ ಇರುತ್ತದೆ.
  • ಮಣ್ಣಿನಲ್ಲಿ ಖನಿಜ ರೂಪದ ( ಶಿಲೆಗಳು) ರಂಜಕ ಹೇರಳವಾಗಿ ಇರುತ್ತದೆಯಾದರೂ ಅದನ್ನು ಸಸ್ಯಗಳು ಬಳಸಿಕೊಳ್ಳುವ ಸ್ಥಿತಿಯಲ್ಲಿ ಅದು ಇರುವುದಿಲ್ಲ.
  • ಮಣ್ಣಿನಲ್ಲಿ 20-80%  ರಂಜಕವು ನಿರವಯವ ರೂಪದಲ್ಲಿ ಕಂಡು ಬರುತ್ತದೆ.
  • ಇದನ್ನು ಮಣ್ಣಿನ ಸೂಕ್ಷ್ಮಾಣು ಜೀವಿಗಳು ಮಾತ್ರ ಸಸ್ಯಗಳಿಗೆ ಲಭ್ಯವಾಗುವಂತೆ ಮಾಡಬಲ್ಲವು.
  • ಬೇರು ಸನಿಹದಲ್ಲಿ ವಾಸವಾಗಿರುವ ರಂಜಕ ಕರಗಿಸಿಕೊಡುವ ಬ್ಯಾಕ್ಟೀರಿಯಾ ಮತ್ತು ಮೈಕೋರೈಜಾ ದಂತಹ ಶಿಲೀಂದ್ರಗಳು ಮಾತ್ರ ರಂಜಕವನ್ನು ಸಸ್ಯಗಳು  ಬಳಸಿಕೊಳ್ಳುವಂತೆ ಮಾಡುತ್ತದೆ.
  • ಸಸ್ಯಗಳಿಗೆ ಬಳಕೆ ಮಾಡುವ ರಂಜಕ ಗೊಬ್ಬರ ರಂಜಕದ ಪೆಂಟಾಕ್ಸೈಡ್ P2O5 ರೂಪದಲ್ಲಿ ಇರುತ್ತವೆ.

ರಂಜಕ ಗೊಬ್ಬರಗಳು:

  • ಪ್ರಾರಂಭದಲ್ಲಿ ಹೇಳಿದಂತೆ ಶಿಲೆಗಳಲ್ಲಿ ಖನಿಜ ರೂಪದಲ್ಲಿ ರಂಜಕ ಇರುತ್ತದೆ.
  • ಇದನ್ನು ಹುಡಿ ಮಾಡಿದಾಗ ಅದು ಶಿಲಾ ರಂಜಕವಾಗುತ್ತದೆ. ನಮ್ಮಲ್ಲಿ ಸುಮಾರು 20-30  ವರ್ಷಗಳ ಹಿಂದೆ ಮಸ್ಸೂರೀ ಫೋಸ್ ಎಂಬ ಕಪ್ಪು ಕರಿಯ ತರಹದ ಹುಡಿ ರಂಜಕ ಗೊಬ್ಬರ ಲಭ್ಯವಿರುತ್ತಿತ್ತು.
  • ಇದು ಈಗಿನ  ಉತ್ತರಾಖಂಡ್ ನ ಡೆಹರಾಡೂನ್ ಸಮೀಪದ  ಮಸ್ಸುರಿ  ಪರ್ವತಗಳಲ್ಲಿ  (Mussoorie  ಇದ್ದ ಖನಿಜದ ಹುಡಿ.
  • ಇದರಲ್ಲಿ ಸುಮಾರು 18%  ರಂಜಕಾಂಶ ಇರುತ್ತಿತ್ತು.
  • ಇದು ಮುಚ್ಚಿದ ತರುವಾಯ ಅಲ್ಲಿಗೆ ಸಮೀಪದ  ರಾಜಸ್ಥಾನ ಮೈನ್ಸ್ ಅನ್ದ್ ಮಿನರಲ್ಸ್ ಇವರ  ರಾಜ್ ಫೋಸ್ ಎಂಬ ರಂಜಕ ಗೊಬ್ಬರ ಮಾರುಕಟ್ಟೆಗೆ ಬಂತು.
  • ಸುಮಾರು 8 ವರ್ಷಗಳಿಂದೀಚೆಗೆ (2012)ಭಾರತದಲ್ಲಿ  ಮೈನ್ಸ್ ಅಂಡ್ ಮಿನರಲ್ಸ್ ಅಕ್ಟ್ ನಿಭಂಧನೆಯಂತೆ ಶಿಲಾ ರಂಜಕವನ್ನು ತೆಗೆಯುವುದನ್ನು ನಿರ್ಭಂದಿಸಿದ ತರುವಾಯ  ಶಿಲಾ ರಂಜಕವು ಚೀನಾ ಮೂಲಕ ನಮ್ಮ ದೇಶಕ್ಕೆ ಬರುತ್ತಿದೆ.

ಶಿಲಾ ರಂಜಕ ಎಂಬುದು ನೀರಿನಲ್ಲಿ ಕರಗದ ರಂಜಕ ಪೋಷಕವಾಗಿದ್ದು, ಇದನ್ನು ಮಣ್ಣಿಗೆ ಸೇರಿಸಿದಾಗ ಅದು ಮಣ್ಣಿನ ಸೂಕ್ಷಾಣು ಜೀವಿಗಳ ಮೂಲಕ ಸಸ್ಯಗಳ ಬೇರುಗಳಿಗೆ ಲಭ್ಯವಾಗಿ ಸಸ್ಯ ಪೋಷಕವಾಗುತ್ತದೆ. ಇದನ್ನು ಆಮ್ಲೀಯ ಮಣ್ಣಿಗೆ ಶಿಫಾರಸು ಮಾಡಲಾಗಿದ್ದು, ಈ ಮಣ್ಣಿನಲ್ಲಿ ಇದು ನಿಧಾನವಾಗಿ ಕರಗುತ್ತದೆ. ಇತರ ಸೂಕ್ಷ್ಮ ಪೋಷಕಾಂಶಗಳು ಇದರ ಕರಗುವಿಕೆಗೆ ಅಡ್ಡಿ ಮಾಡುವುದಿಲ್ಲ.

ಡಿಎಪಿ:

  • ಇದನ್ನು ಡೈ ಅಮೋನಿಯಂ ಫೋಸ್ಫೇಟ್ ಎಂಬುದಾಗಿ ಕರೆಯುತ್ತಾರೆ.  ಇದಕ್ಕೆ ಕರಗುವ ಗುಣ ಇದೆ.
  • ಹೆಚ್ಚಿನ ರೈತರು ಇದನ್ನು ಬಳಕೆ ಮಾಡುತ್ತಿದ್ದು, ಇದರಲ್ಲಿ ಶಿಲಾ ರಂಜಕದಿಂದ 3  ಪಟ್ಟು ರಂಜಕದ ಪೆಂಟಾಕ್ಸೈಡ್ ಇರುತ್ತದೆ.
  • ರಂಜಕಾಂಶ 48% ಮತ್ತು ಸಾರಜನಕ 18% ಇರುವ ಅಧಿಕ ರಂಜಕದ ಗೊಬ್ಬರ.
  • ರಂಜಕದ ಜೊತೆ ಅಮೋನಿಯಾ ರೂಪದ ಸಾರಜನಕ ಇದ್ದರೆ ಅದರ ಲಭ್ಯತೆ ತ್ವರಿತವಾಗುತ್ತದೆ.
  • ಆದರೆ ಇದರಲ್ಲಿ ಕೆಲವು ತೊಂದರೆಗಳೂ ಇವೆ. ಅಮೋನಿಯಾ ರೂಪದ ಸಾರಜನಕ ಮಣ್ಣನ್ನು ಆಮ್ಲೀಯವಾಗಿಸುತ್ತದೆ.
  • ಅಲ್ಲದೆ  ಇದನ್ನು ತಯಾರಿಸಲು ಬಳಕೆ ಮಾಡುವ ಗಂಧಕಾಮ್ಲ ಮತ್ತು ರಂಜಕಾಮ್ಲ ಮಣ್ಣನ್ನು ಹುಳಿ ಮಾಡುತ್ತದೆ.
  • ಆದ ಕಾರಣ ಇದನ್ನು ಹುಳಿ ಮಣ್ಣು ಇರುವ ಪ್ರದೇಶಕ್ಕೆ ಹೆಚ್ಚ್ಚು ಶಿಫಾರಸು ಮಾಡಲಾಗುತ್ತಿಲ್ಲ.
  • ಕ್ಷಾರ ಮಣ್ಣಿನ ಸ್ಥಿತಿಗೆ ಡಿಎಪಿ ಗೊಬ್ಬರ ಹೆಚ್ಚು ಕ್ಷಮತೆಯನ್ನು ಕೊಡುತ್ತದೆ.
  • ಆದಾಗ್ಯೂ ಕೆಲವು ಮಣ್ಣಿನ ಸ್ಥಿತಿಯಲ್ಲಿ ಹಾಗೂ ಉಪಚಾರದಲ್ಲಿ ಇದನ್ನು ಬಳಕೆ ಮಾಡಿ ಫಲಿತಾಂಶ ಪಡೆಯಲಾಗುತ್ತದೆ.

ಸೂಫರ್ ಫೋಸ್ಫೇಟ್ :

  • ಇದು ಅಪಟೈಟ್ ಅಥವಾ ಶಿಲಾ ರಂಜಕವನ್ನು ಗಂಧಕಾಮ್ಲದಲ್ಲಿ ಉಪಚರಿಸಿ ಪಡೆಯಲಾದ ಕರಗುವ ರೂಪದ ಉತ್ಪನ್ನ.
  • ಇದನ್ನು ಸಿಂಗಲ್ ಸೂಪರ್ ಫೋಸ್ಫೇಟ್ ಎಂದು ಕರೆಯಲಾಗುತ್ತದೆ.
  • ಇದರಲ್ಲಿ 16 %  ರಂಜಕ 14.5 %  ಕರಗುವ ರೂಪದ್ದು, 11 % ಗಂಧಕ ಮತ್ತು 21 % ಕ್ಯಾಲ್ಸಿಯಂ ಇರುತ್ತದೆ.

ಇದನ್ನು ಹುಳಿ ಮಣ್ಣಿಗೆ ಬಳಕೆ ಮಾಡಲು ವಿಜ್ಞಾನಿಗಳು ನಕಾರ ವ್ಯಕ್ತಪಡಿಸುತ್ತಾರೆಯಾದರೂ ಇದರಲ್ಲಿ ಸೆಕಂಡರಿ ನ್ಯೂಟ್ರಿಯೆಂಟ್ ಗಳಾದ ಸಸ್ಯಕೆ ರೋಗ ನಿರೋಧಕ ಶಕ್ತಿ ಕೊಡಬಲ್ಲ ಗಂಧಕ ಮತ್ತು ಕ್ಯಾಲ್ಸಿಯಂ ಉತ್ತಮವಾಗಿ ಇರುತ್ತದೆ ಅದ ಕಾರಣ ಇದು ಉತ್ತಮ ರಂಜಕ ಒದಗಿಸುವ ಗೊಬ್ಬರ ಎಂತಲೇ ಹೇಳಬಹುದು.

ಮೋನೋ ಅಮೋನಿಯಂ ಫೋಸ್ಫೇಟ್ :

  • ಇದು ನೀರಿನಲ್ಲಿ ಕರಗುವ ರಂಜಕ ಮತ್ತು ಅಮೋನಿಯಾ ರೂಪದ ಸಾರಜನಕ ಇರುವ ರಂಜಕ ಗೊಬ್ಬರ.
  • ಹನಿ ನೀರಾವರಿಯ ಮೂಲಕ ಕೊಡಲು ಬಳಕೆ ಮಾಡುತ್ತಾರೆ.
  • ಸಂಪೂರ್ಣವಾಗಿ ವಿದೇಶದಿಂದ ಆಮದಾಗುವ ಗೊಬ್ಬರ.
  • ಇದರಲ್ಲಿ 12% ಅಮೋನಿಯಾ ರೂಪದ ಸಾರಜನಕ ಮತ್ತು  61% ರಂಜಕದ ಪೆಂಟಾಕ್ಸೈಡ್ ಇರುತ್ತದೆ.
  • ಇದು ಸಂಪೂರ್ಣವಾಗಿ ನೀರಿನಲ್ಲಿ  ಕರಗುವ ಗೊಬ್ಬರವಾಗಿದ್ದು, ಮಣ್ಣು ಆಮ್ಲೀಯವಾಗುತ್ತದೆ.
  • ಕ್ಯಾಲ್ಸಿಯಂ ಪೂರೈಕೆ ಮಾಡಿ ಮಣ್ಣಿನ ಸ್ಥಿತಿ ತಟಸ್ಥೀಕರಿಸಬೇಕು.

ಮೋನೋ ಪೊಟಾಶಿಯಂ ಫೋಸ್ಫೇಟ್ :

  • ಇದು ಪೂರ್ತಿ ಕರಗುವ ರಂಜಕ ಗೊಬ್ಬರವಾಗಿದೆ. ಹನಿ ನೀರಾವರಿಯ ಮೂಲಕ ಕೊಡಲಾಗುತ್ತದೆ.
  • ಇದರಲ್ಲಿ 53% ರಂಜಕ ಮತ್ತು 34% ಪೊಟ್ಯಾಶ್ ಇರುತ್ತದೆ.
  • ಇದನ್ನು ಒಂದು ಶಿಲೀಂದ್ರ ಪ್ರತಿಬಂಧಕ ಗೊಬ್ಬರ ಎಂದೇ ಕರೆಯಲಾಗುತ್ತದೆ.
  • ಇದು ಪೂರ್ತಿ ಆಮ್ಲೀಯ ಗೊಬ್ಬರ ಅಲ್ಲ. ಸುಮಾರು 6 ರಿಂದ 6.5 ತನಕ ಇದರ pH  ಇರುತ್ತದೆ.

ಟ್ರಿಪಲ್ ಸೂಪರ್ ಫೋಸ್ಫೇಟ್:

  •  ಇದನ್ನು ಶಿಲಾರಂಜಕವನ್ನು ಗಂಧಕಾಮ್ಲದಲ್ಲಿ ಬಿಸಿಮಾಡುವ ಮೂಲಕ ಉಪಚರಿಸಿ ತಯಾರಿಸಲಾಗುತ್ತದೆ.
  • ಇದು ಕರಗುತ್ತದೆ.
  • ಆದರೆ ಬಹಳ ಆಮ್ಲೀಯವಾಗಿರುತ್ತದೆ. ಆಮ್ಲ ಮಣ್ಣಿಗೆ ಇದು ಸೂಕ್ತವಲ್ಲ.

ರಂಜಕ ಗೊಬ್ಬರ ಯಾವುದೇ ಇದ್ದರೂ ಇದನ್ನು ಪೂರ್ತಿಯಾಗಿ ಸಸ್ಯಗಳು ನೇರವಾಗಿ ಬಳಕೆ ಮಾಡಿಕೊಳ್ಳುವುದಿಲ್ಲ. ಇದು  ಲಭ್ಯವಾಗಲು ಮಣ್ಣಿನಲ್ಲಿ  ಜೀವಾಣುಗಳು ಬೇಕೇ ಬೇಕು. ಮಣ್ಣಿನ ರಸಸಾರಕ್ಕೆ ಅನುಗುಣವಾಗಿ ಇದನ್ನು ಬಳಕೆ ಮಾಡಬೇಕು. ರಂಜಕದ ಲಭ್ಯವಾಗಲು ಮಣ್ಣಿನ ರಸಸಾರ ಪ್ರಧಾನ ಪಾತ್ರ ವಹಿಸುತ್ತದೆ. ಇದು ಇಳಿದು ಹೋಗುವುದು ಆವಿಯಾಗುವುದು ಮುಂತಾದ ಸಮಸ್ಯೆ ಇಲ್ಲ.

Leave a Reply

Your email address will not be published. Required fields are marked *

error: Content is protected !!