ಹಿರಿಯರು ಒಂದು ಮಾತು ಹೇಳುತ್ತಾರೆ, ನಿಮ್ಮ ತಲೆಗೆ ನಿಮ್ಮದೇ ಕೈ ಎಂದು. ನಾವು ಬದುಕಲು ನಾವೇ ದುಡಿಯಬೇಕು. ಇದು ಸರಿ ಎಲ್ಲಾ ಕ್ಷೇತ್ರಗಳಲ್ಲೂ ಹೀಗೇನೇ. ಆದರೆ ಕೃಷಿ ಕ್ಷೇತ್ರ ಇದಕ್ಕಿಂತ ಭಿನ್ನ. ಇಲ್ಲಿ ನಾವು ಎಷ್ಟೂ ದುಡಿಯಬಹುದು. ಆದರೆ ಆ ದುಡಿಮೆಗೆ ಪ್ರತಿಫಲ ಕೊಡುವವರು ಬೇರೆಯವರು. ಇದರಿಂದಾಗಿ ಕೃಷಿ ಕ್ಷೇತ್ರ ಇನ್ನು ಕೆಲವು ವರ್ಷ ಕಾಲ ಮಂಕಾಡೆ ಮಲಗುವ ಸಾಧ್ಯತೆ ಇದೆ.
- ಕೊರೋನಾ ಉಳಿದೆಲ್ಲಾ ಕ್ಷೇತ್ರಗಳನ್ನು ಬಾದಿಸಿದ್ದು, ಅತ್ಯಲ್ಪ.
- ಒಂದು ಉದ್ದಿಮೆ ಉತ್ಪಾದನೆ ಮಾಡದಿದ್ದರೆ, ಏನೂ ಆಗುವುದಿಲ್ಲ.
- ಅಷ್ಟು ಉತ್ಪಾದನಾ ಸಾಮಾಗ್ರಿ ಉಳಿಯಿತು.
- ಕೆಲಸಗಾರರಿಗೆ ಯಾವುದಾದರೂ ಉಳಿತಾಯ ಫಂಡ್ ನಿಂದ ಕೆಲವು ಸಮಯದ ತನಕ ಸಂಬಳ ಕೊಡಬಹುದು.
- ಸರಕಾರೀ ಕಚೇರಿ ತೆರೆಯದಿದ್ದರೆ ಸರಕಾರೀ ನೌಕರರಿಗೆ ಮನೆಯಲ್ಲಿದ್ದರೂ ನಿರಾತಂಕವಾಗಿ ಸಂಬಳ ಬರುತ್ತದೆ.
- ಅವರೆಲ್ಲರಿಗೂ ಯಾವುದಾದರೂ ಜೀವನೋಪಾಯಕ್ಕೆ ಬಧ್ರತೆ ಇರುತ್ತದೆ.
ಅದರೆ ಈ ದೇಶದಲ್ಲಿ ಕೃಷಿಕರಿಗೆ ಇದು ಯಾವುದೂ ಇಲ್ಲ. ಬಹುಷಃ ಇನ್ನು ಕೆಲವೇ ಸಮಯದಲ್ಲಿ ಕೃಷಿಕನಿಗೆ ಆಸ್ಪತ್ರೆಗಳಲ್ಲಿ ಪ್ರವೇಶವೂ ಇರಲಿಕ್ಕಿಲ್ಲ. ಕಾರಣ ಅವನಲ್ಲಿ ದುಡ್ಡು ಇಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ.
ದೇಶದ ಆಡಳಿತ ಸೋತಿದೆ:
- ಸರಕಾರ ಈ ತನಕ ( ಇಲ್ಲಿ ಯಾವುದೇ ಸರಕಾರವನ್ನು ಬೊಟ್ಟು ಮಾಡುವುದಿಲ್ಲ) ಮಾಡಿದ್ದು ಬರೇ ಜನತೆಯ ಕಣ್ಣಿಗೆ ಮಣ್ಣೆರಚುವ ಕೆಲಸ.
- ದೇವಸ್ಥಾನ, ಮಠ ಮಂದಿರ, ಮಸೀದಿ,ಚರ್ಚ್ ಕಟ್ಟುವ ಕೆಲಸದಲ್ಲಿ ನಾವು ಮಾಡಿದ ಸಾದನೆಯನ್ನು ಆಸ್ಪತ್ರೆ ಕಟ್ಟುವುದರಲ್ಲಿ ಮಾಡಲಿಲ್ಲ.
- ಜಿಲ್ಲೆಗೊಂದು ಆಸ್ಪತ್ರೆ. ಹೋಬಳಿಗೊಂದು ಪ್ರಾಥಮಿಕ ಆರೋಗ್ಯ ಕೇಂದ್ರ. ಅಲ್ಲಿ ಪರೀಕ್ಷೆ ಬರೆದೋ ಬರೆಯದೆಯೋ ವೈದ್ಯರಾದವರು.
- ಇಲ್ಲಿಗೆ ಜನ ಹೋಗಲೂ ಭಯ ಪಡುವ ಸ್ಥಿತಿ. ಇಲ್ಲಿರುವ ಕಳಪೆ ವ್ಯವಸ್ಥೆಗಳು. ಅಲ್ಲಿನ ವೈದ್ಯರುಗಳ ಖಾಸಗಿ ಪ್ರಾಕ್ಟೀಸ್.
- ಇದೆಲ್ಲವೂ ಜಗಜ್ಜಾಹೀರಾತಾದ ಸಂಗತಿ.
- ನಮ್ಮಲ್ಲಿ ಒಂದು ಜಿಲ್ಲಾಸ್ಪತ್ರೆಗಿಂತ ಹೆಚ್ಚು ದೊಡ್ಡದಾದ ದೇವಸ್ಥಾನ ಮಠ ಮಂದಿರಗಳು, ಜಾತಿ ಸಮುದಾಯ ಭವನಗಳು ಹಳ್ಳಿ ಹಳ್ಳಿಗಳಲ್ಲಿ ಇವೆ.
- ಇದಕ್ಕೆ ಸರಕಾರವೂ ದುಡ್ಡು ಕೊಟ್ಟಿದೆ. ಜನರೂ ಇದನ್ನು ಬೆಂಬಲಿಸಿದ್ದಾರೆ. ಈಗ ದೇಶಕ್ಕೇ ಸಂಕಷ್ಟ ಬಂದಿದೆ.
- ಇಷ್ಟು ದೇವಸ್ಥಾನ ಕಟ್ಟಿ ದೇವರನ್ನು ಪೂಜಿಸಿದ್ದರೂ ಆವರು ಯಾರೂ ಕೊರೋನಾ ಮಾರಿಯನ್ನು ಓಡಿಸಲಿಲ್ಲ.
- ಸರಕಾರದ ಪಾಲಿಸೀ ಮೇಕರ್ಸ್ ಗಳಿಗೆ ದೂರ ದೃಷ್ಟಿ ಇಲ್ಲದ ಕಾರಣ ಹೀಗಾಗಿದೆ.
ಕೃಷಿಕ ಸೋತು ಹೈರಾಣಾಗಬಲ್ಲ:
- ನೀರು ಎಲ್ಲಿ ಹೆಚ್ಚು ನೀರು ಇರುವ ಜಲಾಶಯದ ಕಡೆಗೇ ಪಯಣಿಸುತ್ತದೆ. ಲಕ್ಷ್ಮಿ ಸಹ ಹೋಗುವುದು ಸಿರಿವಂತರ ಮನೆ ಬಾಗಿಲಿಗೇ.
- ಮಧ್ಯ ಮಾರಾಟ, ಅಶ್ಲೀಲ ದಂಧೆ ಮಾಡುವವರು ದೇವರಿಗೆ ಹಣ, ಸೇವೆ ಕೊಟ್ಟರೆ ದೇವರೂ ಅವನಿಗೆ ಅನುಗ್ರಹ ಮಾಡುತ್ತಾನೆ.
ಸಮಾಜಿಕ ಕಳಕಳಿ ಬಗ್ಗೆ ಒಂದು ಮಾತನ್ನು ಹೇಳಬಯಸುತ್ತೇನೆ. ಒಬ್ಬ ವೈದ್ಯನ ಬಳಿಗೆ ಅವನ ನೆರೆಹೊರೆಯವ ಒಬ್ಬ ಅಸ್ವಸ್ಥನನ್ನು ಕರೆದುಕೊಂಡು ಹೋದ.ಅವವನಿಗೆ ವೈದ್ಯ ಮೊದಲೇ ಪರಿಚಯವಿದ್ದ ಕಾರಣ ಸರ್ ಇವ ನಮ್ಮ ನೆರೆಕರೆಯವ. ಕೂಲಿ ಕೆಲಸಕ್ಕೆ ಹೋಗುವವ. ಸ್ವಲ್ಪ ರಿಯಾಯಿತಿ ಮಾಡಿ ಸಾರ್ ಎಂದ. ತಕ್ಷಣ ವೈದ್ಯ ಸೈ ಎಂದ ಜೊತೆಗೆ ಹೇಳಿದ ಅವನು ಬಡವ,ನಮಗೆ ಅವನೇ ಹಣ ಕೊಡಬೇಕಾಗಿಲ್ಲ. ನೀವು ಕೊಟ್ಟರೂ ತೆಗೆದುಕೊಳ್ಳುತ್ತೇವೆ ಎಂದು ಮುಖಕ್ಕೇ ಬಡಿದಂತೆ ಹೇಳಿದ.
- ಹೀಗಿದೆ ನಮ್ಮ ವ್ಯವಸ್ಥೆ. ಇದಕ್ಕೂ ನಮ್ಮ ರೈತನ ಸ್ಥಿತಿಗೂ ಯಾವ ವೆತ್ಯಾಸವೂ ಇಲ್ಲ.
ಮುಂದಿನ ದಿನಗಳು ಕಷ್ಟದ್ದು:
- ಇನ್ನು ಬಹಳ ಸಮಯದ ತನಕ ರೈತ ಬೆಳೆ ಬೆಳೆದರೆ ಅದಕ್ಕೆ ಮಾರುಕಟ್ಟೆ ಹಿಂದಿನಂತೆ ಇರಲಾರದು.
- ಬೆಲೆಯೂ ದೊರೆಯಲಾರದು. ಹಾಗೆಂದು ತನ್ನ ವೃತ್ತಿಗೆ ರಜೆ ಕೊಡುವುದಕ್ಕೂ ಸಾಧ್ಯವಿಲ್ಲ.
- ರಜೆ ಕೊಟ್ಟರೆ ಅವನಿಗೆ ಸಂಬಳ ಕೊಡುವವರು ಯಾರು? ರೈತ ದುಡಿಯಲೇ ಬೇಕು.
- ದುಡಿದು ಫಸಲು ಪಡೆದು ಅದನ್ನು ಯಾರಿಗಾದರೂ ಮಾರಾಟ ಮಾಡದೆ ಬದುಕುವುದು ಅಸಾಧ್ಯ.
- ಕೊಳ್ಳುವವರಿಲ್ಲದ ಸ್ಥಿತಿ ಬರುವ ಸಾಧ್ಯತೆ ಬರಲೂ ಬಹುದು.
- ಇನ್ನು ಕೆಲವೇ ಸಮಯದಲ್ಲಿ ಸಮಾಜದಲ್ಲಿ ಎಲ್ಲೆಂದರಲ್ಲಿ ಕೊರೋನಾ ಸೋಂಕಿತರು ಕಂಡುಬರಲಿದ್ದು, ಒಟ್ಟಾರೆ ಅವ್ಯವಸ್ಥೆ ಉಂಟಾಗಲಿದೆ.
- ಸರಕು ಸಾಗಾಣಿಕೆಗೆ ಜನ ಅಂಜುವ ಪರಿಸ್ಥಿತಿ ತಲೆದೋರಲಿದೆ.
- ಆಗ ಸಂಪೂರ್ಣವಾಗಿ ಸೋತು ಸುಣ್ಣವಾಗುವವರು ನಾವು ಕೃಷಿಕರು.
- ಸರಕಾರ ಏನನ್ನೂ ಮಾಡಲಾರದು.ಇವರಲ್ಲಿರುವ ಆದಾಯದ ಮೂಲ ಸರಕಾರೀ ನೌಕರರಿಗೆ ಸಂಬಳ ಕೊಡುವುದಕ್ಕೂ ಸಾಕಾಗುತ್ತಿಲ್ಲ.
- ಇನ್ನು ವಿದೇಶಗಳಿಂದ ಸಾಲವೂ ಕಷ್ಟ ಸಾಧ್ಯ.
ಭಾರತೀಯ ರಿಸರ್ವ್ ಬ್ಯಾಂಕ್ ಸೂಚ್ಯವಾಗಿ ಇದನ್ನು ಒಪ್ಪಿಕೊಂಡಿದೆ. ನೂರು ವರ್ಷಗಳಲ್ಲಿ ಇಂತಹ ಅರ್ಥಿಕ ಆಡಚಣೆ ಉಂಟಾಗಲಿಲ್ಲ ಎಂಬುದಾಗಿ ರಿಸರ್ವ್ ಬ್ಯಾಂಕ್ ಗವರ್ನರ್ ದಿನಾಂಕ 11-07-2020 ರಂದು ಹೇಳಿದ್ದನ್ನು ಇಲ್ಲಿ ನೆನಪಿಸಬಯಸುತ್ತೇನೆ.
ಕೃಷಿಕರನ್ನು ಕೆಳವರ್ಗವಾಗಿ ಕಾಣಲಾಗಿದೆ:
- ಒಬ್ಬ ಕೃಷಿಕ ಬ್ಯಾಂಕಿಗೆ ಹೋಗಿ ಸಾಲ ಕೇಳಿದರೆ ಅವರು ಅವನ ಮರುಪಾವತಿ ಸಾಮರ್ಥ್ಯವನ್ನು ಕೇಳುತ್ತಾರೆ.
- ಅದೇ ಒಬ್ಬ ಸರಕಾರೀ ನೌಕರ ಹೋದರೆ ಕೇಳಿದ್ದಕ್ಕಿಂತ ಹೆಚ್ಚು ಸಾಲ ಕೊಡುತ್ತಾರೆ.
- ಸರಕಾರ 20 ಲಕ್ಷ ಕೊಟಿಯಲ್ಲಿ ರೈತನಿಗೆ ಇನ್ನೂ ಹೆಚ್ಚು ಸಾಲ ಕೊಡುವ ಬಗ್ಗೆ ಚಿಂತನೆ ಮಾಡಿದೆಯೇ ಹೊರತು ಅವನನ್ನು ಸಾಲಮುಕ್ತನಾಗಿ ಒಮ್ಮೆ ಬಿಡುಗಡೆ ಮಾಡುವ ಗೋಜಿಗೆ ಹೋಗಲಿಲ್ಲ.
- ಕೃಷಿಕ ಅಸ್ವಸ್ಥನಾದರೆ ಅವನಿಗೆ ವಿಮೆ ಇಲ್ಲ. ಇದ್ದರೂ ಅದನ್ನು ಮಾಡುಸುವಷ್ಟು ಅವನಲ್ಲಿ ಸಾಮರ್ಥ್ಯವಿಲ್ಲ.
- ಅದೇ ಒಬ್ಬ ಸರಕಾರೀ ನೌಕರನಿಗೆ ಅದಕ್ಕೂ ಸರಕಾರ ಬಧ್ರತೆ ಕೊಡುತ್ತದೆ.
- ಸಂಬಳ ಕೊಟ್ಟು ಚಿಕಿತ್ಸೆಕೊಡಿಸುತ್ತದೆ. ಸಮಾನತೆ ಎಂಬ ಶಭ್ದದ ಅರ್ಥ ಬದಲಾಗಿದೆ.
ಇಂದಿಗೂ ಕೃಷಿಕ ಎಲ್ಲರಿಗಿಂತ ಹೃದಯ ಶ್ರೀಮಂತ:
- ಕೊರೋನಾ ಲಾಕ್ ಡೌನ್ ಕಾರಣದಿಂದ ಸರಕಾರಿ ವ್ಯವಸ್ಥೆ ಯಾರದ್ದೋ ದುಡ್ಡಿನಲ್ಲಿ ಜಾತ್ರೆ ಮಾಡಿ ಸಂಬಳ ಕೊಟ್ಟಿದೆ.
- ಖಾಸಗಿ ಕಂಪೆನಿಗಳು ಕೊರೋನಾ ನಿಧಿಗೆ ಒಂದಷ್ಟು ದೇಣಿಗೆ ನೀಡಿ ನೌಕರರ ಸಂಬಳವನ್ನು 30-50 % ಕಡಿತ ಮಾಡಿವೆ.
- ಖಾಸಗಿ ಶಾಲಾ ಕಾಲೇಜುಗಳು ದುಡ್ಡಿಗಾಗಿ ಮಾಡಬಾರದ್ದನ್ನು ಮಾಡಿಯಾದರೂ ಹಣ ಎತ್ತುತ್ತಿವೆ.
- ಆದರೆ ಕೃಷಿಕರು ಏನನ್ನೂ ಮಾಡಲಿಲ್ಲ. ಬರೇ ಕೊಟ್ಟದ್ದು. ಅವನನ್ನೇ ನಂಬಿ ಕೆಲಸಕ್ಕೆ ಬರುವವರಿಗೆ ನಿತ್ಯ ಉದ್ಯೋಗ ಕೊಟ್ಟವರು.
- ಸಂಬಳ ಕಡಿತವನ್ನೂ ಮಾಡದೆ ಹೃದಯ ಶ್ರೀಮಂತಿಕೆ ಮೆರೆದವವರು ಕೃಷಿಕರು ಮಾತ್ರ.
ಸರಕಾರ ಈಗಲೂ ಕೃಷಿಕರನ್ನು ದೋಚುತ್ತಲೇ ಇದೆ ಗೊತ್ತೇ?
- ಇಷ್ಟೆಲಾ ಸಂಕಷ್ಟಗಳು ಎದುರಾಗಿದೆ. ರೈತರು ಬೆಳೆದ ಬೆಳೆ ಕೊಳ್ಳುವವರಿಲ್ಲದೆ ಹೊಲದಲ್ಲೇ ಹಾಳಾಗಿದೆ.
- ಭಾರೀ ನಷ್ಟ ಅನುಭವಿಸಿದ್ದು ಸಮಾಜದ ಎಲ್ಲಾ ವರ್ಗಕ್ಕೂ ಗೊತ್ತಿದೆ.
- ಆದರೆ ಸರಕಾರಕ್ಕೆ ಮಾತ್ರ ಇದು ಗೊತ್ತಾಗಲೇ ಇಲ್ಲ.
- ಜುಜುಬಿ 6000-4000 ರೈತನ ಖಾತೆಗೆ ಹಾಕಿ ವಿದ್ಯುತ್ ಬಿಲ್ 30-40 % ಏರಿಸುತ್ತಾರೆ.
- ಹಾಲಿಗೆ 2 ರೂ. ಹೆಚ್ಚಿಸುತ್ತಾರೆ. ಸುದ್ದಿ ಮಾಡುತ್ತಾರೆ. 4 ರೂ. ಇಳಿಸಿ ಗಪ್ ಚಿಪ್ ಮಾಡುತ್ತಾರೆ.
ರಸಗೊಬ್ಬರಗಳ ಬೆಲೆಯನ್ನು ಏನೂ ಕಡಿಮೆ ಮಾಡಲಿಲ್ಲ. ಅದನ್ನು ಏರಿಸಿ ಬೊಕ್ಕಸ ತುಂಬಿಸುತ್ತಾರೆ. ಎರಡು ತಿಂಗಳಿಗೊಮ್ಮೆ ಕೊಡುವ ಅಡುಗೆ ಅನಿಲಕ್ಕೆ 150-200 ರೂ ಸಹಾಯ ಧನ ಕೊಟ್ಟು, ಸಮಜಾಯಿಶಿ ಮಾಡುತ್ತಾರೆ.
ರೈತರೇ ಜಾಗರೂಕರಾಗಿರಿ:
- ಇಂದು ಯಾವುದೋ ಒಂದು ಕೃಷಿ ಉತ್ಪನ್ನಕ್ಕೆ ಬೆಲೆ ಇರಬಹುದು. ನಾಳೆ ಅದರ ಕಥೆ ಏನೋ ಗೊತ್ತಿಲ್ಲ.
- ನಾಳೆ ಅಥವಾ ಇನ್ನೂ ಒಂದು ಎರಡು ವರ್ಷ ಇದೇ ಪರಿಸ್ಥಿತಿ ಉಂಟಾದರೆ ಕೃಷಿಕರಾದ ನಮ್ಮನ್ನು ಕೇಳುವವರೇ ಇಲ್ಲ.
ಸರಕಾರೀ ನೌಕರರನ್ನು, ಕೆಲಸಗಾರರನ್ನು ಸರಕಾರ ಸಾಕಬಹುದು.ಆದರೆ ದುಡಿಮೆಯನ್ನೇ ನಂಬಿದ ನಮಗೆ ಯಾರೂ ಕರುಣೆ ತೋರಲಾರರು. ಹೆಚ್ಚು ಹೆಚ್ಚು ಬೆಳೆಸುವ ಗೋಜಿಗೆ ಹೋಗಬೇಡಿ. ಸಾಧ್ಯವಾದಷ್ಟು ಮಾರುಕಟ್ಟೆಯಲ್ಲಿ ಕೊರತೆ ಉಂಟಾಗುವಂತೆ ಬೆಳೆ ಬೆಳೆಯಿರಿ. ಆಗಲೇ ಸರಕಾರ ಮತ್ತು ಸಮಾಜಕ್ಕೆ ಒಂದು ತ್ಯಾಗಮಯಿ ವರ್ಗದ ಬದುಕಿನ ಅರ್ಥ ತಿಳುವಳಿಕೆಗೆ ಬರಲು ಸಾಧ್ಯ.