ಇಲ್ಲಿ ತೋರಿಸಿದ ದಾಳಿಂಬೆ ಹಣ್ಣು ನೋಡಲು ಆಕರ್ಷಕವಾಗಿಲ್ಲ. ಹಾಗಾಗಿ ಉಚಿತವಾಗಿ ಕೊಟ್ಟರೂ ಕೊಳ್ಳುವುದಕ್ಕೆ ಗಿರಾಕಿ ಇಲ್ಲ. ಇದನ್ನು ಹಣ್ಣು ಮಾರುವ ಅಂಗಡಿ,ಸೂಪರ್ ಮಾರ್ಕೆಟ್ ನಲ್ಲಿ ಮಾರಲಿಕ್ಕಾಗುವುದಿಲ್ಲ. ಇದನ್ನು ರೈತರ ಹೊಲದಿಂದ ಕೊಳ್ಳುವವರೂ ಇಲ್ಲ. ಇದನ್ನು ಉಚಿತವಾಗಿ ಕೊಟ್ಟಂತೆ ರೈತರು ಮಾರಬೇಕು. ರಸ್ತೆ ಬದಿಯಲ್ಲಿ ಮಂದ ಬೆಳಕಿನಲ್ಲಿ ಅಗ್ಗ- ಭಾರೀ ಅಗ್ಗ ಎಂದು ಬೊಬ್ಬೆ ಹಾಕಿ ಮಾರಾಟ ಮಾಡಬೇಕು. ಇದು ನಮ್ಮ ಮನೋಸ್ಥಿತಿ.
ಕೃಷಿಕರಿಗೆ ಗ್ರಾಹಕರು ಅತೀ ಮುಖ್ಯ. ಗ್ರಾಹಕ ಎಂದರೆ ಬಳಕೆದಾರ. ರೈತ ಬೆಳೆ ಬೆಳೆಯುವಾಗ ಬಳಕೆದಾರರ ಹಿತವನ್ನೂ ಯೋಚಿಸಬೇಕು. ಗ್ರಾಹಕರೂ ಕೃಷಿಕರ ಪರಿಸ್ಥಿತಿಯನ್ನು ಅರಿತುಕೊಳ್ಳಬೇಕು. ಎರಡೂ ಕಡೆಯವರೂ ಪರಸ್ಪರ ಹೊಂದಾಣಿಕೆಯಲ್ಲಿ ಇದ್ದರೆ ರೈತರಿಗೆ ಖರ್ಚು ಕಡಿಮೆಯಾಗುತ್ತದೆ. ಬಳಕೆದಾರರಿಗೆ ಆರೋಗ್ಯಕರ ಆಹಾರವಸ್ತುಗಳೂ ಲಭ್ಯವಾಗುತ್ತದೆ. ಹೇಗೆ ನೋಡೋಣ.
- ಮೋಜಿಗಾಗಿ ಕೆಲವೊಂದು ವಿಷಯಗಳನ್ನು ಆತಿ ರಂಜಿತವಾಗಿ ಬಿಂಬಿಸಿ ಅದನ್ನು ಸಾಮಾಜಿಕ ತಾಣಗಳ ಮೂಲಕ ಹರಿ ಬಿಡುವುದರಿಂದ ಏನಾಗುತ್ತದೆ ಎಂಬುದಕ್ಕೆ ಈಗ ವಾಟ್ಸ್ ಆಪ್ – ಪೇಸ್ ಬುಕ್ ಮುಂತಾದ ಸಾಮಾಜಿಕ ಮಾದ್ಯಮಗಳ ಮೂಲಕ ಬಿತ್ತರವಾಗುತ್ತಿರುವ ಸುದ್ದಿಗಳೇ ಸಾಕ್ಷಿ.
- ಕೆಲವು ಕಿಡಿಗೇಡಿಗಳು ಇಂತದ್ದನ್ನು ಸೃಷ್ಟಿಸಿ ರೈತರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ.
- ಇದು ಖಂಡನೀಯ. ಮೊನ್ನೆ ತಾನೇ ವಾಟ್ಸ್ಅಪ್ ನಲ್ಲಿ ಒಂದು ವೀಡಿಯೋ ನೋಡಿದೆ.
- ಕಲ್ಲಂಗಡಿ ಹಣ್ಣಿಗೆ ಚುಚ್ಚು ಮದ್ದು ನೀಡುವಂತೆ ಯಾವುದೋ ಬಣ್ಣದ ದ್ರಾವಣವನ್ನು ಚುಚ್ಚುವ ವೀಡಿಯೋ ಅದು.
- ಇದನ್ನು ನೋಡಿದ ಜನ ಏನು ತಿಳಿದು ಕೊಳ್ಳುತ್ತಾರೆ?
- ಕಲ್ಲಂಗಡಿ ಹಣ್ಣು ಕೆಂಪಗಿದ್ದರೆ ಅದಕ್ಕೆ ಬಣ್ಣಹಾಕಿದ್ದಾರೋ ಏನೋ ಎಂದು ಸಂಶಯ ಪಡುವುದು ಸಹಜ ತಾನೇ?
- ಈ ವಿಷಯದಲ್ಲಿ ಗ್ರಾಹಕರು ರೈತರನ್ನು ತಪ್ಪಿತಸ್ತರನ್ನಾಗಿ ನೋಡುತ್ತಾರೆಯೇ ವಿನಹ ಇಂತಹ ವೀಡಿಯೋವನ್ನು ತಯಾರಿಸಿದವರನ್ನಲ್ಲ.
- ಇಂತಹ ಸುಳ್ಳು ವೀಡಿಯೋ ರೈತರನ್ನೇ ಗುರಿಯಾಗಿಸಿಕೊಂಡು ತಯಾರಿಸಿದಂತೆ ಇರುತ್ತದೆ.
ನಿಜವಾಗಿಯೂ ರೈತರು ಇದನ್ನು ಮಾಡುತ್ತಾರೆಯೇ? ಮಾಡಲು ಸಾಧ್ಯವೇ ? ಖಂಡಿತವಾಗಿಯೂ ಅಸಾಧ್ಯ. ಈ ರೀತಿ ಮಾಡಿದ ಹಣ್ಣು ಕೇವಲ ಒಂದು ದಿನದಲ್ಲಿ ಹಾಳಾಗುತ್ತದೆ. ರೈತರು ಬೆಳೆದ ಹಣ್ಣು ಗ್ರಾಹಕರಿಗೆ ತಲುಪುವಾಗ ಏನಿಲ್ಲವೆಂದರೂ ಮೂರು ನಾಲ್ಕು ದಿನ ಆಗಿರುತ್ತದೆ. ಒಂದು ವೇಳೆ ಹಾಗೆ ಮಾಡಿದರೆ ಅಷ್ಟು ಸಮಯದ ತನಕ ಆ ಹಣ್ಣು ಉಳಿಯಲು ಸಾಧ್ಯವೇ ಇಲ್ಲ.
ಅರ್ಥಾರ್ಥ ಸಂಬಂಧ ಇಲ್ಲದ ವಿಚಾರಗಳು:
- ಏನು ಕಂಡರೂ ಅದನ್ನು ಅತಿ ರಂಜಿತವಾಗಿ ವೀಡಿಯೋ ಮುಖಾಂತರವೂ , ಫೊಟೋ ಮುಖಾಂತರವೋ ಹಂಚಿಕೊಳ್ಳುವುದು ಕೆಲವು ವಿಕೃತ ಮನಸ್ಸಿನವರಿಗೆ ಖುಶಿ ಕೊಡಬಹುದು.
- ಇದೆಲ್ಲವೂ ರೈತರು ಬೆಳೆದ ಉತ್ಪನ್ನಕ್ಕೆ ಮಾರುಕಟ್ಟೆ ಹಾಳು ಮಾಡುತ್ತದೆ.
- ಹಿಂದೊಮ್ಮೆ ಒಂದು ಕಂಪೆನಿಯ ನೀರಿಗೆ ಎಬೋಲಾ ವೈರಸ್ ಸೇರಲ್ಪಟ್ಟಿದೆ.
- ಆದ ಕಾರಣ ಆ ನೀರನ್ನು ಬಳಕೆ ಮಾಡಬೇಡಿ ಎಂಬ ಸಂದೇಶ ಹರಿದಾಡಿತ್ತು.
- ಅದೇ ರೀತಿ ಕೆಲವು ಪಂಗಡದ ವರ್ತಕರು ಮತ್ತೊಂದು ಪಂಗಡದ ಗ್ರಾಹಕರನ್ನು ರೋಗಿಗಳನ್ನಾಗಿ ಮಾಡಲು ಏಡ್ಸ್ ರೋಗಿಗಳ ರಕ್ತವನ್ನು ಹಣ್ಣು ಹಂಪಲಿನಲ್ಲಿ ಸೇರಿಸುತ್ತಾರೆ ಎಂದೆಲ್ಲಾ ಮನಬಂದಂತೆ ಬರೆಯಲಾರಂಭಿಸಿದ್ದೂ ಇದೆ.
- ಅದೇ ರೀತಿ ಬಾವಲಿ ಜ್ವರ ಬಂದ ( ನಿಫಾ ವೈರಸ್) ಸಮಯದಲ್ಲೂ ಹೀಗೇ ಮಾಡಿದ್ದುಂಟು.
- ಇವೆಲ್ಲಾ ಮಾರುಕಟ್ಟೆ ಹಾಳು ಮಾಡಲು ಮಾಡುವುದು. ವಾಸ್ತವವಾಗಿ ವೈರಸ್ ಗಳನ್ನು ಹೀಗೆಲ್ಲಾ ಪಸರಿಸಲು ಸಾಧ್ಯವಿಲ್ಲ.
ಇಂತಹ ಕೆಲಸವನ್ನು ಯಾವ ವರ್ತಕರೂ , ಯಾವ ಕಂಪೆನಿಯೂ ಮಾಡುವುದಿಲ್ಲ. ಜೊತೆಗೆ ಯಾವ ರೈತನೂ ಮಾಡುವುದಿಲ್ಲ. ವ್ಯಾಪಾರಿಯು ಅವನ ವ್ಯಾಪಾರ ಧರ್ಮವನ್ನು ಬಿಟ್ಟು ವ್ಯಾಪಾರ ಮಾಡಲಾರ. ಅವನು ವ್ಯಾಪಾರದಲ್ಲಿರುವಾಗ ಜಾತಿ ಬೇಧವನ್ನೆಂದೂ ಮಾಡಲಾರ. ಅದೇ ರೀತಿ ಯಾವುದೇ ಕಂಪೆನಿ ತನ್ನ ಉತ್ಪನ್ನಕ್ಕೆ ಕೆಟ್ಟ ಹೆಸರು ತಂದುಕೊಳ್ಳುವುದಿಲ್ಲ. ಯಾವುದೇ ರೈತ ತನ್ನ ಉತ್ಪನ್ನವನ್ನು ಹಾಳು ಮಾಡಿ ಮಾರಾಟ ಮಾಡುವುದಿಲ್ಲ. ಇದು ಸತ್ಯ.
ಹಣ್ಣು ಹಂಪಲು ಕೊಳ್ಳುವಾಗ ಗಮನಿಸಿ:
- ಇವಿಷ್ಟೇ ಅಲ್ಲ. ಗ್ರಾಹಕರಿಗೆ ಯಾವುದೇ ಹಣ್ಣು ಹಂಪಲು ಕೊಳ್ಳುವಾಗಲೂ ಸಂಶಯ.
- ಆಪಲ್ ಹಣ್ಣು ಖರೀದಿಸುವಾಗ ಅದರ ಸಿಪ್ಪೆ ಉಗುರಿನಿಂದ ಉಜ್ಜಿ ಅದರಲ್ಲಿ ಏನೋ ಮೇಣ ಬರುತ್ತದೆ ಎಂದು ಅದು ವಿಷವಾಗಿರಬಹುದು ಎಂಬುದಾಗಿ ಸಂಶಯ ಪಡುತ್ತಾರೆ.
- ಕೆಲವು ಹಣ್ಣು ಹಂಪಲುಗಳ ನೋಟ ಹೊಳಪಾಗಿರಲು ಕೆಲವು ಬಗೆಯ ಮೇಣ ಸಿಂಪರಣೆ ಇದೆಯಾದರೂ ಅದೆಲ್ಲವೂ ವಿಷ ಅಥವಾ ಆರೋಗ್ಯಕ್ಕೆ ಹಾನಿಕರ ಎಂದು ತೀರ್ಮಾನಕ್ಕೆ ಬರುವಂತಿಲ್ಲ.
- ಅದರಲ್ಲಿ ಹಾನಿ ರಹಿತವಾದವುಗಳು ಇವೆ. ಖರೀದಿ ಮಾಡುವ ಜನ ನೋಟ ಉತ್ತಮವಾಗಿರುವುದನ್ನೇ ಖರೀದಿಸುತ್ತಾರೆ.
- ಗ್ರಾಹಕರ ಆಯ್ಕೆಗೆ ಅನುಗುಣವಾಗಿ ರೈತರು ಅಥವಾ ವ್ಯಾಪಾರಿಗಳು ಉತ್ಪನ್ನವನ್ನು ಒದಗಿಸುತ್ತಾರೆ.
- ಕಜ್ಜಿ ಬಿದ್ದು, ಹೊಳಪಿಲ್ಲದ ದಾಳಿಂಬೆ ಹಣ್ಣುಗಳನ್ನು ರಸ್ತೆ ಬಸಿಯಲ್ಲಿ ಕಿಲೋ ೨೦ ರೂ. ಗಳಿಗೆ ಮಾರಾಟ ಮಾಡಿದರೆ ಅದನ್ನು ಕೊಳ್ಳಲು ಜನ ಹಿಂದೇಟು ಹಾಕುತ್ತಾರೆ.
- ವಾಸ್ತವವಾಗಿ ಇದಕ್ಕೆ ಯಾವುದೇ ಕೀಟನಾಶಕ ರೋಗನಾಶಕ – ಬೆಳವಣಿಗೆ ಪ್ರಚೋದಕ ಬಳಸದ ಕಾರಣ ಹೀಗಾಗಿದೆ.
- ಅಂಗಡಿಯಲ್ಲಿ ಹೊಳಪು ಹೊಳಪಾಗಿದ್ದು, ಯಾವುದೇ ಕಲೆ ಇಲ್ಲದ, ಬಣ್ಣ ಹೊಂದಿದ ವಸ್ತುವನ್ನು ಯಾವುದೇ ದರ ಕೊಟ್ಟು ಖರೀದಿ ಮಾಡುತ್ತಾರೆ.
- ನೋಟ- ಗಾತ್ರ, ಬಣ್ಣ ಉತ್ತಮ ಇರುವಂತದ್ದರ ಮೇಲೆಯೇ ಎಲ್ಲಾ ಖರೀದಿದಾರರಿಗೂ ಆಸಕ್ತಿ.
- ನೋಟ- ಗಾತ್ರ ಆಕರ್ಷಕವಾಗಿ ಇರುವ ಹಣ್ಣು ತರಕಾರಿಗಳಿಗೆ ಮಾತ್ರ ಗ್ರಾಹಕರಿಂದ ಬೇಡಿಕೆ ಇರುವ ಕಾರಣ ಅದಕ್ಕೆ ಉತ್ತಮ ಬೆಲೆ ಕೊಡುತ್ತಾರೆ.
- ಬಾಳೆ ಹಣ್ಣು ಇನ್ನೇನು ಹಣ್ಣು ಆಗುವ ಪ್ರಾರಂಭದ ಹಂತದಲ್ಲಿ ಹಳದಿ ಹಳದಿಯಾಗಿರುತ್ತದೆ.
- ದಿನ ಕಳೆದಂತೆ ಅದು ಕಪ್ಪಗಾಗುತ್ತಾ ಬರುತ್ತದೆ. ಸಿಪ್ಪೆಯಲ್ಲಿ ಸಣ್ಣ ಕಪ್ಪು ಕಲೆ ಕಂಡರೆ ಅದಕ್ಕೆ ಮತ್ತೆ ಗಿರಾಕಿ ಇಲ್ಲ.
- ಅದಕ್ಕೆ ಅನುಗುಣವಾಗಿ ವ್ಯಾಪಾರಿ ತನ್ನ ತಂತ್ರಗಾರಿಕೆಯನ್ನೂ ರೈತನು ತನ್ನ ತಂತ್ರಗಾರಿಕೆಯನ್ನೂ ಬಳಸದೇ ನಿರ್ವಾಹವೇ ಇಲ್ಲದಾಗುತ್ತದೆ.
ನೋಟ ಚೆನ್ನಾಗಿ ಇದ್ದರೆ ಅದು ಆರೋಗ್ಯಕ್ಕೆ ಉತ್ತಮವಲ್ಲ:
- ಹಣ್ಣಿನ ಅಂಗಡಿಗೆ ಬರುವ ಎಲ್ಲಾ ಗ್ರಾಹಕರೂ ಆರಿಸುವುದು ಆಕರ್ಷಕವಾದ ಹಣ್ಣುಗಳನ್ನು.
- ಹಾಗೆಯೇ ತರಕಾರೀ ಅಂಗಡಿಗೆ ಹೋದಾಗಲೂ. ಕಿರಾಣಿ ಅಂಗಡಿಗೆ ಹೋದಾಗಲೂ ಗ್ರಾಹಕರ ಆಯ್ಕೆ ಹೀಗೆಯೇ.
- ಬಿಳಿ ಬಿಳಿಯಾದ ಬೆಲ್ಲ ಬೇಕು. ಅದು ಬಿಳಿಯಾಗಲು ಬಳಸುವ ರಾಸಾಯನಿಕ ಆರೋಗ್ಯಕ್ಕೆ ಎಷ್ಟು ಹಾಳು ಎಂಬ ಪರಿವೆಯೇ ಇಲ್ಲ.
- ಬಹುತೇಕ ಬಿಳಿ ಬೆಲ್ಲ ಸಕ್ಕರೆಯನ್ನು ಕರಗಿಸಿ ಮಾಡಿದಂತದ್ದು.
ಬಾಳೆ ಹಣ್ಣು ತಿನ್ನುವ ಗ್ರಾಹಕನಿಗೆ ನೈಜ ಬಾಳೆ ಹಣ್ಣಿನ ರುಚಿಯೇ ಗೊತ್ತಿರಲಿಕ್ಕಿಲ್ಲ. ಅವರು ಸರಿಯಾಗಿ ಹಣ್ಣಾದದ್ದನ್ನು ತಿನ್ನುವುದೇ ಇಲ್ಲ. ಸಿಪ್ಪೆ ಬಣ್ಣ ಸ್ವಲ್ಪ ಮಾಸಿದರೆ ಅದು ಹಾಳಾಗಿದೆ ಎಂದು ತಿಳಿಯುವವರು.
- ಗ್ರಾಹಕನನ್ನು ಸೆಳೆಯುವುದಕ್ಕಾಗಿ ಬೆಳೆ ಬೆಳೆಸುವವರು ಕೆಲವು ರಾಸಾಯನಿಕ ಕೀಟನಾಶಕ, ರೋಗನಾಶಕ, ಬೆಳವಣಿಗೆ ಪ್ರಚೋದಕಗಳನ್ನು ಬೆಳೆಗಳಿಗೆ ಬಳಸುತ್ತಾರೆಯೇ ಹೊರತು ಬೇರೆ ಕಾರಣಕ್ಕಾಗಿ ಅಲ್ಲ.
- ಇವೆಲ್ಲಾ ದುಬಾರಿ ಬೆಲೆಯವುಗಳಾದ ಕಾರಣ ಬಳಸದೆ ಬೆಳೆಯುವುದು ರೈತನಿಗೆ ಲಾಭದಾಯಕವಾಗುತ್ತದೆ.
- ಹಾಗೆಂದು ಗ್ರಾಹಕರ ಇಚ್ಚೆಗನುಗುಣವಾಗಿ ಬೆಳೆಯದೇ ಇದ್ದರೆ ಬೀದಿ ಬದಿಯ ವ್ಯಾಪಾರಿಗೆ ಮಾರಾಟ ಮಾಡಿ ನಷ್ಟದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕಾದೀತು.
ಗ್ರಾಹಕರೇ ನೀವು ನೋಟ- ಗಾತ್ರ- ಬಣ್ಣ ಎಂದು ದುಂಬಾಲು ಬೀಳುವುದರ ಹಿಂದೆ ಇರುವ ಸತ್ಯ ಸಂಗತಿಯ ಬಗ್ಗೆ ಅರಿಯಿರಿ. ನೀವು ಅಪೇಕ್ಷಿಸುವ ಈ ಮೇಲಿನ ಗುಣಗಳಿಗಾಗಿ ರೈತನು ರಾಸಾಯನಿಕ ಬಳಕೆ ಮಾಡುತ್ತಾನೆ. ಇದೇ ನಿಮ್ಮ ಆರೋಗ್ಯಕ್ಕೆ ತೊಂದರೆ ಮಾಡಿದರೂ ಅಚ್ಚರಿ ಇಲ್ಲ.ತಾವು ಬಳಕೆ ಮಾಡುವ ಉತ್ಪನ್ನದ ಮೂಲ ಗುಣ ಏನು ಎಂಬುದನ್ನು ತಿಳಿದು ಬಳಕೆ ಮಾಡಿ.
ರೈತರು ಬೆಳೆಯುವ ಉತ್ಪನ್ನಗಳ ಮಾರುಕಟ್ಟೆಗೆ ಧಕ್ಕೆಯಾಗುವಂಥಹ ಯಾವುದೇ ಸುದ್ದಿಗಳಿದ್ದರೂ ಅದನ್ನು ಮತ್ತೆ ಮತ್ತೆ ಪ್ರಸರಿಸುವ ಮುನ್ನ ಇಂತದ್ದು ಸಾಧ್ಯವೇ ಎಂದು ಕೆಲವು ತಜ್ಜರಲ್ಲಿ ವಿಚಾರಿಸಿ ನಂತರ ತೀರ್ಮಾನಕ್ಕೆ ಬನ್ನಿ. ಸರಕಾರ ಈ ರೀತಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಸಾಮಾಜಿಕ ಮಧ್ಯಮಗಳ ಮೇಲೆ ಕಣ್ಗಾವಲು ಇಡುವ ವ್ಯವಸ್ಥೆಯನ್ನು ಮಾಡಬೇಕು. ರೈತರು ಇಂತಹ ಸುದ್ದಿಗಳನ್ನು ಫಾರ್ವರ್ಡ್ ಮಾಡುವುದಲ್ಲ. ಅದಕ್ಕೆ ರಿಪೋರ್ಟ್ ಹಾಕಿ ಅವರ ಕೃತ್ಯಗಳನ್ನು ನಿಲ್ಲಿಸುವ ಕೆಲಸ ಮಾಡಬೇಕು.