ಕೃಷಿಕರ ಮನೋಸ್ಥಿತಿ ಕುರಿತು ರಮೇಶ್ ದೇಲಂಪಾಡಿಯವರ ಅರ್ಥಗರ್ಭಿತ ಮಾತು

ಅಡಿಕೆ ಬೆಳೆಗಾರರನ್ನು ನಿದ್ದೆಗೆಡಿಸುತ್ತಿರುವ ಹಳದಿ ಎಲೆ ರೋಗದ ಅಡಿಕೆ ಮರ

ಒಂದು ಕಾಲದಲ್ಲಿ ಜನರಿಗೆ ಅದರಲ್ಲೂ ಕೃಷಿಕರಿಗೆ ತಿಳಿದವರು ಹೇಳಿದ ವಿಚಾರದಲ್ಲಿ ನಂಬಿಕೆ ಇತ್ತು. ನಂಬಿಕಾರ್ಹವಾದ ಸಲಹೆಗಳನ್ನೇ ನೀಡುವವರೂ ಇದ್ದರು. ಇಂದು ಜನತೆಗೆ ನಂಬಿಕೆ ಕಡಿಮೆಯಾಗಿದೆ. ಜನರ ಮನೋಸ್ಥಿತಿಗನುಗುಣವಾಗಿ ಉಳಿದೆಲ್ಲವೂ. ಈ ಬಗ್ಗೆ ಸುಳ್ಯದ ರಮೇಶ್ ದೇಲಂಪಾಡಿ ಎಂಬ ಕೃಷಿಕರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯಗಳನ್ನು ಹೀಗೆ ವ್ಯಕ್ತಪಡಿಸುತ್ತಾರೆ.

ಶ್ರೀಯುತರು ತಮ್ಮ ಬರಹದಲ್ಲಿ ಕೆಲವು ಸೂಕ್ಷ್ಮ ವಿಚಾರಗಳನ್ನು ಸೂಚ್ಯವಾಗಿವಾಗಿ ಹೇಳಿದ್ದಾರೆ. ನಾವು  ಬದಲಾವಣೆಯಾದರೆ  ಮಾತ್ರ ಅಭಿವೃದ್ದಿ ಸಾಧಿಸಲು ಸಾಧ್ಯ ಎಂಬುದನ್ನು ತಮ್ಮ ಈ ಬರಹದಲ್ಲಿ ದ್ವನಿ ಅರ್ಥದಲ್ಲಿ ವಿವರಿಸಿದ್ದಾರೆ. ಎಲ್ಲರಿಗೂ ಈ ವಿಚಾರ ತಲುಪಬೇಕು. ನಮ್ಮ ಮನೋಸ್ಥಿತಿ ಸರಿಯೇ ತಪ್ಪೇ ಎಂದು ನಾವೇ ಒಮ್ಮೆ ಅವಲೋಕನ ಮಾಡಬೇಕು ಎಂಬುದು ಇದರ ಮರುಪ್ರಕಟಣೆಯ ಉದ್ದೇಶ.

ಕೃಷಿಕ ರಮೇಶ್ ದೇಲಂಪಾಡಿ
ಕೃಷಿಕ ರಮೇಶ್ ದೇಲಂಪಾಡಿ, ಫೇಸ್ ಬುಕ್ ನಿಂದ ಪಡೆದ ಚಿತ್ರ
 • ನಮ್ಮ ಅಜ್ಜ ಪಿಜ್ಜಂದಿರ ಕಾಲದಲ್ಲಿ ಕೃಷಿ ವಿಜ್ಞಾನದ ಅರಿವು ಇರಲಿಲ್ಲ.
 • ಬೀಜ ಬಿತ್ತಿದರೆ ಅದು ಹುಟ್ಟುತ್ತದೆ. ಬೆಳೆಯುತ್ತದೆ, ಫಲಕೊಡುತ್ತದೆ.
 • ಕೆಲವೊಮ್ಮೆ ಮಾರಿ ರೂಪದಲ್ಲಿ ರೋಗ ಕೀಟಗಳು ಬರುತ್ತವೆ.
 • ಅದಕ್ಕೆ ಪರಿಹಾರ ಕೊಡುವವರು ದೇವರು ಎಂದಷ್ಟೇ ಅವರ ತಿಳುವಳಿಕೆಯಾಗಿತ್ತು.
 • ಈಗ ಪ್ರತೀಯೊಂದಕ್ಕೂ ವೈಜ್ಞಾನಿಕ ನೆಲೆಗಟ್ಟು ಇದೆ.
 • ಅದನ್ನು ಬಳಸಿಕೊಂಡು ನಾವು ಮುಂದುವರಿಯಬಹುದು.

ಶ್ರೀಯುತರು ವಿದ್ಯಾರ್ಥಿಯಾಗಿದ್ದಾಗ ಅವರ ಮನೆಗೆ ವೈದಿಕ ಕಾರ್ಯಕ್ಕಾಗಿ ಬರುತ್ತಿದ್ದ ಹಿರಿಯರೊಬ್ಬರಿದ್ದರಂತೆ.ನರಸಿಂಹ ಭಟ್ ಎಂದು ಅವರ ಹೆಸರನ್ನೂ ಉಲ್ಲೇಖಿಸಿದ್ದಾರೆ.ತುಂಬಾ ವಯಸ್ಸಾದ ಹಿರಿಯರಾಗಿದ್ದರಂತೆ. ಲೋಕಾಭಿರಾಮ ಮಾತುಕತೆಯಾಡುತ್ತಿದ್ದಾಗ ಅವರು ಹೇಳಿದ ಸಂಗತಿಯನ್ನು ಇವರು ನೆನಪಿಸಿಕೊಂಡು ಇಲ್ಲಿ ಬರೆದಿದ್ದಾರೆ.

ರಾಸಾಯನಿಕ ಗೊಬ್ಬರಗಳಿಲ್ಲದಿದ್ದರೂ ರೋಗಕ್ಕೆ ಮದ್ದಿರಲಿಲ್ಲವಂತೆ:

 • ನರಸಿಂಹ ಭಟ್ಟರು ಬಾಲಕರಾಗಿದ್ದಾಗ ಇದ್ದ ಅಡಿಕೆ ತೋಟದಲ್ಲಿ ಸಮಸ್ಯೆಯೇನೂ ಇರಲಿಲ್ಲ.
 • ಆ ಕಾಲದಲ್ಲಿ ರಾಸಾಯನಿಕ ಗೊಬ್ಬರಗಳಾಗಲೀ,ರಾಸಾಯನಿಕ ಕೀಟನಾಶಕಗಳಾಗಲೀ ಇರಲಿಲ್ಲ.
 • ಬಹುಷಹ ಕೃಷಿ ವಿಜ್ಞಾನಿಗಳೂ ಇರಲಿಲ್ಲವೇನೋ.
 • ಆದರೂ ಮಳೆಗಾಲದಲ್ಲಿ ಅಡಿಕೆ ಉದುರುವ ಕೊಳೆರೋಗ ಬರುತ್ತಿತ್ತು.

  ತೋಟವಿಡೀ ಉದುರಿದ ಅಡಿಕೆ, ಫಸಲಿನ ನಿರೀಕ್ಷೆಯಲ್ಲಿದ್ದ ತೋಟದ ಯಜಮಾನ ಖಾಲಿಯಾದ ಅಡಿಕೆ ತೋಟ ನೋಡಿ ಭವಿಷ್ಯದ ಬಗೆಗೆ ಚಿಂತೆ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ.

 •  ಅಡಿಕೆ ಉದುರುವುದಕ್ಕೆ ಏನು ಕಾರಣ ಎಂಬುದೇ ಗೊತ್ತಿರಲಿಲ್ಲ.
 • ಪರಿಹಾರ ಇಲ್ಲದ ರೋಗ ಎಂದಷ್ಟೇ ತಿಳಿದಿದ್ದರು.
 • ಕೈಗೆ ಬಂದ ತುತ್ತು ಬಾಯಿಗಿಲ್ಲದ ಪರಿಸ್ಥಿತಿಯಲ್ಲಿ ಜೀವನ ತೀರಾ ಬಡತನದಲ್ಲೇ  ನಡೆಯುತ್ತಿತ್ತು.
 • ಅಂದು ಅಡಿಕೆ ಉದುರುವುದಕ್ಕೂ ಇಂದು ಅಡಿಕೆ ಮರಗಳಿಗೆ ತಗಲಿದ  ಹಳದಿ ಎಲೆ ರೋಗಕ್ಕೂ ದೇಲಂಪಾಡಿಯವರು ತಳಕು ಹಾಕುತ್ತಾರೆ.

ಇಂತಹ ಸಮಯದಲ್ಲಿ ಹೆಚ್ಚಿನ ಜನ ಮೊರೆ ಹೋಗುವುದು ದೇವರ ಬಳಿ.ನಡೆಯಿತು ತೋಟದೊಳಗೆ ಹೋಮ ಹವನಗಳು.ಆದರೂ ಪ್ರಸನ್ನನಾಗಲಿಲ್ಲ ನಿಸರ್ಗ ದೇವ. ವರ್ಷ ವರ್ಷವೂ ಏನು ಮಾಡಿದರೂ ಕೊಳೆ ರೋಗ ಬೆಳೆಗಾರರ ಜೀವನದಲ್ಲಿ ಆಟ ಆಡುತ್ತಲೇ ಇತ್ತು.

ಕೊಳೆರೋಗದ ಭಯವನ್ನು ನಿವಾರಿಸಿದ ಬೋರ್ಡೋ ದ್ರಾವಣ
ಕೊಳೆರೋಗದ ಭಯವನ್ನು ನಿವಾರಿಸಿದ ಬೋರ್ಡೋ ದ್ರಾವಣ

ನಂಬಿಕೆಯಲ್ಲಿ ಸ್ವೀಕರಿಸಲ್ಪಟ್ಟ ಪರಿಹಾರ:

 •  ಅದ್ಯಾರೋ ಪುಣ್ಯಾತ್ಮ ಬೋರ್ಡೋ ದ್ರಾವಣ ಎಂಬ ಮದ್ದು ಕಂಡು ಹಿಡಿದ.ಅದನ್ನು ಸಿಂಪಡಿಸಲು ರೈತರಿಗೆ ಹೇಳಿದ.
 • ಇಂದು ಆಗಿದ್ದರೆ ತೀಕ್ಷ್ಣ ರಾಸಾಯನಿಕದ ಬಳಕೆಯ ಶಿಫಾರಸ್ಸು ಮಾಡಿದ್ದಕ್ಕೆ, ಭೂಮಿಯನ್ನು ಹಾಳುಗೆಡಹುತ್ತಿರುವುದಕ್ಕೆ. ಅದೆಷ್ಟು ಆಕ್ಷೇಪಗಳ ಸುರಿಮಳೆಯೇ ಬರುತ್ತಿತ್ತೇನೋ. 
 • ಜನ ಅದನ್ನು ತಿಳಿಸಿದವರ ಮಾತಿನಲ್ಲಿ ನಂಬಿಕೆ ಇಟ್ಟು ಅದನ್ನು ಬಳಸಿದರು ರೋಗ ನಿಯಂತ್ರಣಕ್ಕೆ ಬರಲಾರಂಭಿಸಿತು. 
 • ಆದರೂ ಗುರುತು ಪರಿಚಯವಿಲ್ಲದ ರೋಗ ನಿಯಂತ್ರಣಕ್ಕೆ ಬಂತು.
 • ಆಸ್ತಿಕರು ತಾವು ಮಾಡಿದ,ಮಾಡಿಸಿದ ಹೋಮ ಹವನದ ಕಾರಣದಿಂದಲೇ ಬೋರ್ಡೋ ಪತ್ತೆಯಾದ್ದು ಅಂದಿರಬಹುದು.
 • ನಾಸ್ತಿಕರು ವಿಜ್ಞಾನದ ಪರಿಶ್ರಮ ಇದಕ್ಕೆ ಕಾರಣ ಅಂತ ಪ್ರತಿಪಾದಿಸಿದ್ದಿರಬಹುದು.
 • ಆದರೂ ಕೃಷಿಕರು ಫುಲ್ ಖುಷ್.ರೋಗಕ್ಕೊಂದು ಪರಿಹಾರ ಬಂತು,ಫಸಲು ಖಾತ್ರಿಯಾಯ್ತು,ಬದುಕು ಉಳಿಯಿತು.

ಪರ್ಯಾಯ ಹುಡುಕಾಟಗಳು:

 • ಇದೀಗ ದಶಕಗಳು ಕಳೆದಿವೆ.ಅಂದಿನ ಭಯ,ಸಂಕಟ,ಮನೋವ್ಯಥೆ ಮರೆತು ಹೋಗಿದೆ.
 • ಅದೇ ಬೋರ್ಡೋ ಇನ್ನೂ ಬೇಕಾ ಎಂಬ ಪ್ರಶ್ನೆ ಬರುತ್ತಿದೆ.
 • ಪರ್ಯಾಯದ ಹುಡುಕಾಟ ನಡೆಯುತ್ತಿದೆ.
 • ಸಾವಯವ ಪರ್ಯಾಯದ ಹೆಸರಲ್ಲಿ ಇನ್ನೊಂದು ರಾಸಾಯನಿಕ ಭರ್ಜರಿ ವ್ಯಾಪಾರವೂ ನಡೆಸಿದೆ.
 • ಅದು ಸರಿ ಇಲ್ಲ,ಇದು ಸರಿ ಇಲ್ಲ ಎಂಬ ವಾಗ್ವಾದಗಳೂ ಅನೇಕ ಬಾರಿ ನಡೆಯುತ್ತಿದೆ.
 • ಮೂಲ ಕಾರಣ ಏನು ಎಂದರೆ ಎಲ್ಲಾದರೂ ಸೋತು ಹೋದರೆ ನಮ್ಮನ್ನು ಬದುಕಿಸಲು ಹಳೆಯ ಬೋರ್ಡೋ ಇದ್ದೇ ಇದೆ.

ಹಳದಿ ರೋಗಕ್ಕೂ ಪರಿಹಾರ ಸಿಗಲಿದೆ ಕಾಯಬೇಕು:

 • ಇಂದೀಗ ಅಡಿಕೆಯ ಹಳದಿ‌ ಎಲೆ ರೋಗದ ಕಾಲ.
 • ಕಾರಣ ಗೊತ್ತಿಲ್ಲ,ಪರಿಹಾರ ಗೊತ್ತಿಲ್ಲ.
 • ಭವಿಷ್ಯದ ಭಯ ರೋಗ ಪೀಡಿತರನ್ನು ಕಾಡುತ್ತಿದೆ.
 • ಅಂಧಕಾರಮಯ ಜಗತ್ತು‌ ಎದುರಿಗೆ ನಿಂತಂತೆ ಭಾಸವಾಗುತ್ತಿದೆ.
 • ಉಳಿದೆಡೆ ಈ ರೋಗದ ಹೆಸರು ಕೇಳಿದರೂ ಜನಕ್ಕೆ ಭಯ.
 • ಅಲ್ಲೆಲ್ಲೋ ಬಂತು ಅಂದರೆ ಇಲ್ಲೂ ಬಂತೇನೋ ಎಂಬ. ಆತಂಕ.
 • ಆದರೆ ಇತಿಹಾಸ ತೋರಿಸಿಕೊಟ್ಟಿದೆ.
 • ಪರಿಹಾರಗಳು‌ ಇಲ್ಲದ ಸಮಸ್ಯೆ ಇಲ್ಲ.
 • ಹುಡುಕಾಟ ಸರಿಯಾದ ದಾರಿಯಲ್ಲಿ ಆಗ‌ಬೇಕಾದ್ದು,ಅಷ್ಟೇ.
 • ಹುಡುಕಾಟ ನಿರಂತರವಾಗಿ ನಡೆಯಬೇಕು.
 • ಅದಕ್ಕೆ ಬೇಕಿರುವ ಅನುಕೂಲಗಳನ್ನು ಕಲ್ಪಿಸಬೇಕು.ಇದು ಬೆಳೆಗಾರರ ಕರ್ತವ್ಯ.
 • ಇದಕ್ಕೆ ಅಡೆತಡೆ ಒಡ್ಡುವವರು ಕೃಷಿಕ ದ್ರೋಹಿಗಳು,ಕೃಷಿಕರ ವಿರೋಧಿಗಳು.

  ಶಾಂತ ಮನಸ್ಸಿನಿಂದ ಪರಿಹಾರಕ್ಕಾಗಿ ಕಾಯೋಣ ,ಪರಿಹಾರ ಬಯಸೋಣ.ಅದಕ್ಕಾಗಿ ಶ್ರಮಿಸುವವರನ್ನು ಬೆಂಬಲಿಸೋಣ,ಯಶಸ್ಸನ್ನು‌ ಹಾರೈಸೋಣ. ದೂರದ ಆಗಸದಲ್ಲಿ ಭರವಸೆಯ ಬೆಳಕು ಗೋಚರಿಸುತ್ತಿದೆ.ಅತ್ತ ಕಡೆಗೆ ಒಗ್ಗಟ್ಟಿನಿಂದ ಮುಂದುವರೆಯೋಣ.ಅಡೆತಡೆಗಳನ್ನು ನಿರ್ಲಕ್ಷಿಸಿ ಮುಂದುವರೆಯೋಣ.

ಇಂದು ಜನ ತಕ್ಷಣ ಎಲ್ಲವೂ ಆಗಬೇಕು ಎಂದು ಬಯಸುತ್ತಾರೆ. ಕೋವಿಡ್ ನಂತಹ ಸಾಂಕ್ರಾಮಿಕ ರೋಗಕ್ಕೆ ಮದ್ದು ಹುಡುಕಲಾಗಿದೆ. ಆದರೆ ಈ ಹಳದಿ ಎಲೆ ರೋಗಕ್ಕೆ ಇನ್ನೂ ಆಗಿಲ್ಲ. ಏನು ಮಾಡುತ್ತಿದ್ದಾರೆ ಎಂದೆಲ್ಲಾ ಮಾತಾಡುತ್ತಾರೆ.  ಸ್ವಲ್ಪ ತಾಳ್ಮೆಯಲ್ಲಿ ಈ ರೋಗದ ಬಗ್ಗೆ ತಿಳಿದುಕೊಂಡರೆ ಎಲ್ಲವೂ ಎಲ್ಲರಿಗೂ ಅರ್ಥವಾಗಬಹುದು.

Leave a Reply

Your email address will not be published. Required fields are marked *

error: Content is protected !!