ತೋಟಕ್ಕೆ ಸೊಪ್ಪು ಹಾಕಿ- ಮಣ್ಣಿನ ಆರೋಗ್ಯ ಹೆಚ್ಚಿಸಿ.

by | Jul 14, 2020 | Organic Cultivation (ಸಾವಯವ ಕೃಷಿ) | 0 comments

ತೋಟಕ್ಕೆ, ಗದ್ದೆಗೆ  ಹಾಗೆಯೇ ಇನ್ನಿತರ ಬೆಳೆಗಳಿಗೆ ಅನಾದಿ ಕಾಲದಿಂದಲೂ  ರೈತರು ಸೊಪ್ಪು ಹಾಕುತ್ತಿದ್ದರು. ಸೊಪ್ಪು ಹಾಕುವುದರಿಂದ ತುಂಬಾ ಪ್ರಯೋಜನ ಇದೆ. ಇದು ಉತ್ತಮ ಬೇಸಾಯ ಕ್ರಮ.ಮಣ್ಣಿನ ಸೂಕ್ಷ್ಮಾಣು ಜೀವಿಗಳ ಉತ್ತಮ ಕಾರ್ಯಚಟುವಟಿಕೆಗೆ ನೆರವಾಗಲು ಹಸುರೆಲೆ ಗೊಬ್ಬರ ಸಹಾಯಕ.

 • ಸೊಪ್ಪು ಎಂದರೆ ಹಸುರೆಲೆ ಗೊಬ್ಬರ.
 • ಹಸುರೆಲೆಗಳಲ್ಲಿ ಮುಖ್ಯ ಹಾಗೂ ಲಘು ಪೋಷಕಾಂಶಗಳು ಇರುವ ಕಾರಣ ಇದು ಕರಗಿ ಮಣ್ಣಿಗೆ ಸೇರಿ ಪೋಶಕಾಂಶಗಳನ್ನು ಬಿಡುಗಡೆ ಮಾಡುತ್ತದೆ.
 • ಸಾಮಾನ್ಯವಾಗಿ ಮಳೆಗಾಲದಲ್ಲಿ ಹಸಿ ಸೊಪ್ಪನ್ನು ಹಾಕುತ್ತಾರೆ.
 • ಅದು ಮಳೆಗಾಲ ಕಳೆಯುವಾಗ ಕರಗಿ ಗೊಬ್ಬರವಾಗುತ್ತದೆ.
 • ಈ ಸೊಪ್ಪಿನಲ್ಲಿರುವ ಸಾರ ಮತ್ತು ಅದರ ನಾರು ಮಣ್ಣಿನಲ್ಲಿ ಪೋಷಕಾಂಶಗಳನ್ನು ಹೆಚ್ಚಿಸುತ್ತದೆ.
 • ಸೂಕ್ಷ್ಮಾಣು ಜೀವಿಗಳ ಅಸ್ತಿತ್ವಕ್ಕೆ  ಸಹಾಯಕವಾಗುತ್ತದೆ. ಮಣ್ಣಿನ ಬೌತಿಕ, ರಾಸಾಯನಿಕ ಮತ್ತು ಜೈವಿಕ ಗುಣ ವೃದ್ದಿಯಾಗಲು ಹಸುರೆಲೆ ಗೊಬ್ಬರ ಸಹಾಯಕ.

leaf mulching helps to soil

ಹುಸುರೆಲೆ ಗೊಬ್ಬರ ಮತ್ತು ಮಣ್ಣಿನ ಫಲವತ್ತತೆ:

 • ಕೃಷಿ ಮಾಡಬೇಕಾದರೆ ಮಣ್ಣು ಫಲವತ್ತಾಗಿರಬೇಕು.
 • ಆ ಫಲವತ್ತತೆ ನೈಸರ್ಗಿಕವಾಗಿ ಮಾತ್ರ ಆಗುವುದು ಸಾಧ್ಯ.
 • ಸಾವಯವ ವಸ್ತುಗಳು ಎಷ್ಟು ಮಣ್ಣಿಗೆ ಸೇರಿಸುತ್ತೇವೆಯೋ ಅಷ್ಟು ಮಣ್ಣು ಫಲವತ್ತಾಗುತ್ತದೆ.
 • ನಮ್ಮ ಹಿರಿಯರು ಗದ್ದೆ ಬೇಸಾಯ ಮಾಡುವಾಗ ಉಳುಮೆ ಮಾಡುವ ಸಮಯದಲ್ಲಿ ಗದ್ದೆಗೆ ದಪ್ಪ ಎಲೆಯ ಬೇಗ ಕರಗುವ ಸೊಪ್ಪುಗಳನ್ನು ತುಂಡು ಮಾಡಿ ಹಾಕುತ್ತಿದ್ದರು.
 • ನೀರು ನಿಲ್ಲಿಸಿ ಒಂದೆರಡು ದಿನಗಳಲ್ಲಿ ಈ ಸೊಪ್ಪು ಕೊಳೆಯುತ್ತಿತ್ತು.
 • ನೂರಾರು ವರ್ಷಗಳಿಂದ ಗದ್ದೆಯ ಬೇಸಾಯ ಮಾಡುವಾಗ  ಹಾಕುವ ಕೊಟ್ಟಿಗೆ ಗೊಬ್ಬರ, ಹಸುರು ಸೊಪ್ಪು ಸೇರಿ ಗದ್ದೆಯ ಮೇಲ್ಭಾಗದಲ್ಲಿ ಎರೆ ಮಣ್ಣು ಸಂಗ್ರಹವಾಗುತ್ತಾ ಬಂದಿದೆ.
 • ಗದ್ದೆಯಲ್ಲಿ ನೀರು ನಿಂತಿರಬೇಕಾದರೆ ಅಲ್ಲಿ ನೀರು ಇಳಿದು ಹೋಗದಂತೆ ಅಂಟು ಮಣ್ಣು ಬೇಕು.
 • ಆ ಅಂಟು  ಮಣ್ಣು ನಿರ್ಮಾಣವಾಗುವುದು ನೈಸರ್ಗಿಕವಾದ ಈ ವಿಧಾನದಿಂದ ಮಾತ್ರ.

ಕೃಷಿ ವಿಜ್ಞಾನದ ಯಾವುದೇ ಸಂಶೋಧನೆಗಳು  ಫಲವತ್ತಾದ ಮೇಲುಮಣ್ಣು ಸೃಷ್ಟಿಸುವ ತಂತ್ರಜ್ಞಾನವನ್ನು ಕೊಟ್ಟಿಲ್ಲ. ಯಾವುದೇ ರಾಸಾಯನಿಕಗಳಿಂದ  ಮಾಡಲು ಸಾಧ್ಯವಿಲ್ಲ. ಇದಕ್ಕೆ ಸಾವಯವ ವಸ್ತುಗಳಾದ ಹಸುರೆಲೆಗಳು ಮತ್ತು ಕೊಟ್ಟಿಗೆ ಗೊಬ್ಬರಗಳೇ ಆಗಬೇಕು.
ಮಳೆಗಾಲ ಪ್ರಾರಂಭದ ಸಮಯದಲ್ಲೇ ಹಸುರೆಲೆ ಸೊಪ್ಪುಗಳನ್ನು ಬಳಕೆ ಮಾಡಬೇಕು. ಅದರಿಂದ. ಒಂದು ಮಣ್ಣಿನ ಸವಕಳಿ ತಡೆಯಲ್ಪಡುತ್ತದೆ. ತೇವಾಂಶ ಇರುವ ಕಾರಣ ಬೇಗ ಕಳಿಯುತ್ತದೆ. ಅಲ್ಲದೆ ಈ ಸಮಯದಲ್ಲಿ ಸೊಪ್ಪುಗಳಲ್ಲಿ ಹೆಚ್ಚು ಸಾರಗಳೂ ಇರುತ್ತವೆ.

ಸೊಪ್ಪು ಹಾಕುವುದರಿಂದ ಪ್ರಯೋಜನ:

 • ಹಸುರೆಲೆ ಸೊಪ್ಪುಗಳನ್ನು ಮಣ್ಣಿನ ಮೇಲೆ ದಪ್ಪಕ್ಕೆ  ಹಾಸಿದಾಗ ನೆಲದಲ್ಲಿ ಬೆಳೆಯುವ  ಕಳೆಗಳು ಸಹಜವಾಗಿ ಸಾಯುತ್ತವೆ.
 • ಇದರಿಂದ ನೈಸರ್ಗಿಕ ಕಳೆ ನಿಯಂತ್ರಣ  ಆಗುತ್ತದೆ.
 • ಹಸುರೆಲೆ ಸೊಪ್ಪಿನಲ್ಲಿ ಕೆಲವು ಪೋಷಕಾಂಶಗಳು ಅದರಲ್ಲೂ ವಿಶೇಷವಾಗಿ ಸಾರಜನಕ ಅಂಶ ಹೆಚ್ಚು ಇರುತ್ತದೆ.
 • ಇದರ ಬಳಕೆಯಿಂದ ನೈಸರ್ಗಿಕ ಮೂಲದ ಸಾರಜನಕವನ್ನು ಬೆಳೆಗಳಿಗೆ ಪೂರೈಸಿದಂತಾಗುತ್ತದೆ.
 • ಮೇಲ್ಮಣ್ಣು  ಹೆಚ್ಚುತ್ತದೆ. ಯಾವುದೇ ಬೆಳೆಯ ಉತ್ತಮ ಇಳುವರಿಗೆ ಬೇಕಾಗುವುದು ಮೇಲ್ಮಣ್ಣು. ಇದು ತಯಾರಾಗಬೇಕಾದರೆ ಸಾವಯವ ವಸ್ತುಗಳು ಬೇಕೇ ಬೇಕು.
 • ಮಣ್ಣಿನಲ್ಲಿ ಕಣ್ಣಿಗೆ ಕಾಣಿಸದ ಹಲವು ಸೂಕ್ಷ್ಮಾಣು ಜೀವಿಗಳು ಇರಬಹುದು.
 • ಆದರೆ ಕಣ್ಣಿಗೆ ಕಾಣಿಸುವ ಮಣ್ಣಿನ ಉಳುಮೆಗಾರ ಎಂದರೆ ಎರೆಹುಳು.
 • ಇದು ಮಣ್ಣು  ಜನ್ಯವೇ ಆಗಿರಬೇಕು. ಮಣ್ಣು ಜನ್ಯ ಎರೆಹುಳುಗಳ ಸಂಖ್ಯೆ ಹೆಚ್ಚಿಸಲು ಯಾವುದೇ ಕಷ್ಟವಿಲ್ಲದೆ ಮಾಡಬಹುದಾದ ಕೆಲಸ ಹಸುರೆಲೆ ಗೊಬ್ಬರಗಳ ಬಳಕೆ.
 • ಮಣ್ಣು ಜನ್ಯ ಎರೆಹುಳುಗಳು ನೆಲದಲ್ಲಿ ಸಾವಯವ ವಸ್ತುಗಳನ್ನು ಭಕ್ಷಿಸುತ್ತಾ ಮಣ್ಣಿನಲ್ಲಿ ಮೇಲೆ ಕೆಳಗೆ ಸಂಚರಿಸಿ ಮಣ್ಣಿನ ಗಾಳಿಯಾಡುವಿಕೆ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.
 • ಉಳಿದೆಲ್ಲಾ ಸಾವಯವ ವಸ್ತುಗಳಿಗಿಂತ ಬೇಗ ಕರಗಿ ಮಣ್ಣಿಗೆ ಸೇರಿಕೊಳ್ಳುವ ( ಮಣ್ಣು ಆಗಿ ಪರಿವರ್ತನೆಯಾಗುವ) ವಸ್ತು ಹಸುರೆಲೆ ಸೊಪ್ಪು ಮಾತ್ರ.
 • ಹಸುರೆಲೆಗಳನ್ನು ಮಣ್ಣಿಗೆ ಸೇರಿಸುವುದರಿಂದ  ಆ ಬೆಳೆಗೆ ಮಾತ್ರವಲ್ಲದೆ , ಮೂದಿನ ಬೆಳೆಗೂ ಪೊಷಕಾಂಶಗಳು ದೊರೆಯುತ್ತದೆ.
 • ಇಡೀ ಜಗತ್ತಿನಲ್ಲೇ ಕೃಷಿ ಉತ್ಪಾದನೆಗೆ ಅತೀ ದೊಡ್ಡ ಅಡ್ಡಿ ಎಂದರೆ ಮಣ್ಣಿನ ಸವಕಳಿ. ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಹಸುರೆಲೆ ಹಾಸು ಸಹಕಾರಿ. ಮಣ್ಣು ಸವಕಳಿ ತಡೆದರೆ ನಾವು ಬಳಕೆ ಮಾಡುವ ಪೋಷಕಾಂಶಗಳನ್ನು ವರ್ಷ ವರ್ಷ ಕಡಿಮೆ ಮಾಡುತ್ತಾ ಬರಬಹುದು.
 • ನಾವು ಹಾಕುವ ಬೆಳೆ ಪೋಷಕಗಳು ಹೆಚ್ಚಾಗಿ ಬೇರು ವಲಕ್ಕಿಂತ ಕೆಳಕ್ಕೆ ಇಳಿದು ಹೋಗುವ ಸಮಸ್ಯೆ ಪರಿಹಾರಕ್ಕೆ ಮಣ್ಣಿಗೆ ಹಸುರು ಸೊಪ್ಪು ಹೊದಿಸುವುದು ಉತ್ತಮ ಪರಿಹಾರ.

ಹಸುರು ಸೊಪ್ಪು ಹಾಕಿ ಮಣ್ಣಿನ ಸಂರಕ್ಷಣೆ ಮಾಡಬಹುದು. ಇದು ಇಂದು ನಾಳೆಗೆ ಫಲಿತಾಂಶ ಕೊಡಲಾರದು. ಆದರೆ ಧೀರ್ಘಾವಧಿಯಲ್ಲಿ ಇದು ಉತ್ತಮ ಫಲಿತಾಂಶ ಕೊಡಬಲ್ಲುದು. ಮಣ್ಣು ಜೀವಂತ ಇದ್ದರೆ ಮಾತ್ರ ಎಲ್ಲವೂ. ಈ ಮಣ್ಣಿಗೆ ಜೀವ ಕೊಡುವುದು ಸಾವಯವ ವಸ್ತುಗಳು. ಅದರಲ್ಲೂ ಹಸುರು ಸಾವಯವ ವಸ್ತುಗಳು ಬೇಗ ಕರಗುತ್ತವೆ ,ಮತ್ತು ಅತ್ಯಧಿಕ ಪೋಷಕಗಳನ್ನು ಕೊಡುತ್ತವೆ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!