ತೆಂಗು ಬೆಳೆಯುವವರೆಲ್ಲರೂ ತಿಳಿದಿರಬೇಕಾದ ಪ್ರಮುಖ ಸಂಗತಿ ಅದರಲ್ಲಿ ಕಾಯಿಗಳು ಹೇಗೆ ಆಗುತ್ತವೆ ಎಂಬುದು.
ತೆಂಗಿನ ಮರದಲ್ಲಿ ಹೂ ಗೊಂಚಲು ಆಗುತ್ತದೆ. ಅದರಲ್ಲಿ ಮಿಡಿಗಳು ಬೆಳೆದು ಅದು ಕಾಯಿಯಾಗುತ್ತದೆ ಎಂದಷ್ಟೇ ತಿಳಿದರೆ ಸಾಲದು. ಈ ಪ್ರಕ್ರಿಯೆಯಲ್ಲಿ ಯಾರೆಲ್ಲಾ ಪಾತ್ರ ವಹಿಸುತ್ತಾರೆ. ಇವರೇನಾದರೂ ಕೈಕೊಟ್ಟರೆ ಏನಾಗುತ್ತದೆ ಎಂಬುದನ್ನು ತಿಳಿಯಲೇ ಬೇಕು. ಹೂ ಗೊಂಚಲು ತನ್ನಷ್ಟಕ್ಕೇ ಕಾಯಿ ಕಚ್ಚುವುದಲ್ಲ. ಅದು ಬೇರೆ ಜೀವಿಗಳನ್ನು ಅವಲಂಭಿಸಿ ಆಗುತ್ತದೆ. ಸೃಷ್ಟಿಯ ಈ ವೈಚಿತ್ರ್ಯವನ್ನು ಪ್ರತೀಯೊಬ್ಬ ರೈತರು ತಿಳಿಯಲೇ ಬೇಕು.
- ತೆಂಗಿನ ಸಸಿ ಉತ್ತಮ ಆರೈಕೆಯಲ್ಲಿ ನೆಟ್ಟು ಬೆಳೆಸಿ 5 ವರ್ಷಕ್ಕೆ ಫಲ ಕೊಡಲು ಪ್ರಾರಂಭಿಸುತ್ತದೆ.
- ಮೊದಲು ಹೂ ಬಿಡುವಾಗ ಹದ ಗಾತ್ರದ ಹೂ ಗೊಂಚಲು ಬಿಟ್ಟರೂ ಕ್ರಮೇಣ ಅದು ನಿರ್ದಿಷ್ಟ ಗಾತ್ರದ ಹೂ ಗೊಂಚಲು ಬಿಡಲಾರಂಭಿಸುತ್ತದೆ.
- ಸಾಧಾರಣವಾಗಿ ಪ್ರತೀಯೊಂದೂ ಎಲೆ ಕಂಕುಳಲ್ಲಿಯೂ ಹೂ ಗೊಂಚಲು (Inflorescence) ಇರುತ್ತದೆ.
- ವರ್ಷಕ್ಕೆ 12-15 ಎಲೆಗಳು ಬರುತ್ತವೆ.
- ಇದರಲ್ಲೆಲ್ಲಾ ಬೆಳವಣಿಗೆ ಆಗುವ ಆಗದೆ ಇರುವ ಹೂ ಗೊಂಚಲುಗಳು ಇದ್ಡೇ ಇರುತ್ತವೆ.
- ಕೆಲವೊಂದು ವಾತಾವರಣ ಪರಿಣಾಮಗಳಿಂದ(ಒಣ ವಾತಾವರಣ Dry condition) ಹೂ ಗೊಂಚಲು ಕಿರಿದಾಗಿ ಮೂಡದೆ ಇರುವ ಸಾಧ್ಯತೆಯೂ ಇರುತ್ತದೆ.
- ಈ ಹೂ ಗೊಂಚಲು ಎಲೆ ಕಂಕುಳಲ್ಲಿ ಸುಮಾರು 32 ತಿಂಗಳ ಮುಂಚೆ ಮೂಡಿ ಬೆಳವಣಿಗೆ ಆಗುತ್ತಾ ಹೊರಗೆ ಕಾಣಿಸುತ್ತದೆ.
ಹೂ ಗೊಂಚಲು ಮತ್ತು ಕಾಯಿ:
- ಹೂ ಗೊಂಚಲು ಎಂಬುದು ಒಂದು ಗಟ್ಟಿಯಾದ ಪರೆಯಿಂದ ಆವ್ರುತವಾಗಿರುತ್ತದೆ.
- ಇದಕ್ಕೆ spathe ಎಂಬುದಾಗಿ ಕರೆಯುತ್ತಾರೆ.
- ಇದು ನಮ್ಮ ಕಣ್ಣಿಗೆ ಕಂಡ ನಂತರ ಬಿಚ್ಚಿಕೊಳ್ಳಲು ಸುಮಾರು 70-90 ದಿನಗಳ ಕಾಲಾವಧಿ ಬೇಕಾಗುತ್ತದೆ.
- ಆಗ ಅದರ ಉದ್ದ ಸುಮಾರಾಗಿ 1-1.2 ಮೀಟರ್ ತನಕ ಇರುತ್ತದೆ.
- ಉತ್ತಮ ಹೂ ಗೊಂಚಲಿನ ಸುತ್ತಳತೆ ಮಧ್ಯದಲ್ಲಿ ಸುಮಾರಾಗಿ 14-16 ಸೆಂ. ಮೀ. ತನಕ ಇರುತ್ತದೆ.
- ಇದು ಆರೋಗ್ಯವಂತ, ಹೆಚ್ಚು ಹೆಣ್ಣು ಹೂವುಗಳು ಇರುವ ಹೂ ಗೊಂಚಲು ಎಂದು ಹೇಳಬಹುದು.
- ಬಿಚ್ಚಿಕೊಳ್ಳುವಾಗ ಮೇಲ್ಭಾಗದಿಂದ ಬಿಚ್ಚಿಕೊಳ್ಳುತ್ತದೆ. ಹೆಚ್ಚಾಗಿ ಒಳಭಾಗದಿಂದ ಬಿಚ್ಚಿಕೊಳ್ಳುವುದು ಜಾಸ್ತಿ.
- ಬಿಡಿಸಿದ ಹೂ ಗೊಂಚಲಿನಲ್ಲಿ ಗಂಡು ಹೂವು ಮತ್ತು ಹೆಣ್ಣು ಹೂವುಗಳು ಇರುತ್ತವೆ.
- ಸುಮಾರಾಗಿ ಒಂದು ಉತ್ತಮ ಹೂ ಗೊಂಚಲಿನಲ್ಲಿ 30-35 ಪುಷ್ಪ ಹೊತ್ತ ಕಡ್ಡಿಗಳು(spiklets) ಇರುತ್ತವೆ.
- ಇದರಲ್ಲಿ ತುದಿ ಭಾಗದಿಂದ ಪ್ರಾರಂಭವಾಗಿ ಗಂಡು ಹೂವುಗಳು ಇರುತ್ತವೆ.
- ಒಂದು ಪುಷ್ಪ ಹೊತ್ತ ಕಡ್ಡಿಯಲ್ಲಿ 250-300 ಗಂಡು ಹೂವುಗಳೂ ಒಟ್ಟು ಹೂ ಗೊಂಚಲಿನಲ್ಲಿ ಸುಮಾರು 8000 ದಷ್ಟು ಗಂಡು ಹೂವುಗಳು ಇರುತ್ತವೆ.
- ಪುಷ್ಪ ಕಡ್ಡಿಯ ಕೆಳಭಾಗದಲ್ಲಿ ಹೆಣ್ಣು ಹೂವುಗಳು( ಮಿಡಿ ಅಥವಾ ಮಿಳ್ಳೆ) ಇರುತ್ತವೆ.
- ಕೆಲವು ಕ್ರಾಸಿಂಗ್ ಮಾಡಿ ಉತ್ಪಾದಿಸಿದ ತೆಂಗಿನ ಸಸಿಯಲ್ಲಿ ಪುಷ್ಪ ಕಡ್ಡಿಗಳ ಎಡೆಯಲ್ಲೂ ಮಿಡೀ ಕಾಯಿಗಳು ಇರುತ್ತವೆ.
- ಹೆಣ್ಣು ಹೂವು ಒಂದೊಂದು ಕಡ್ಡಿಯ ಬುಡದಲ್ಲಿ ಒಂದು ಅಥವಾ ಒಮ್ಮೊಮ್ಮೆ ಎರಡು ಇರುವುದೂ ಇದೆ.
ಸಾಮಾನ್ಯವಾಗಿ ಹೆಣ್ಣು ಹೂವುಗಳು ಸಸಿಗೆ ಲಭ್ಯವಾಗುವ ನೀರು, ಪೋಷಕ, ಹಾಗೂ ಹವಾಗುಣದ ಮೇಲೆ ಅವಲಂಭಿಸಿ ಹೆಚ್ಚು ಕಡಿಮೆ ಇರುತ್ತದೆ. ನಮ್ಮಲ್ಲಿ ಮಾರ್ಚ್ – ಎಪ್ರೀಲ್ ಮತ್ತು ಮೇ ತಿಂಗಳಲ್ಲಿ ಬಿಡುವ ಹೂ ಗೊಂಚಲಿನಲ್ಲಿ ಹೆಚ್ಚು ಹೆಣ್ಣು ಹೂವುಗಳು ಇರುತ್ತದೆ.
- ಮೊದಲಾಗಿ ಗಂಡು ಹೂವುಗಳು ಅರಳುತ್ತಾ ಉದುರಿ ಇಡೀ ಪುಷ್ಪ ಕಡ್ಡಿಯ ಕೊನೆ ತನಕ ಎಲ್ಲಾ ಗಂಡು ಹೂವುಗಳೂ ಇರುತ್ತವೆ.
- ಹೂ ಗೊಂಚಲು ಅರಳುವ ಸಮಯದಲ್ಲಿ ಮಿಡಿಗಳು ಸುಮಾರು 6 ಎಲೆಯ ತರಹದ ಪರೆಯಿಂದ ಆವೃತವಾಗಿ (perianth leaves)ಮಧ್ಯದಲ್ಲಿ ಹೆಣ್ಣು ಹೂವು ಇರುತ್ತದೆ.
- ದಿನ ಕಳೆದಂತೆ ಆ ಪರೆ ಸರಿಯಲ್ಪಟ್ಟು ಹೆಣ್ಣು ಭಾಗ ಬೆಳವಣಿಗೆಯಾಗಿ ಪರೆಯಿಂದ ತನ್ನ ತುದಿ ಭಾಗವನ್ನು ಹೊರ ಹಾಕುತ್ತದೆ.
- ಅಷ್ಟು ಬೆಳೆಯಲು ಸುಮಾರು 25-28 ದಿನಗಳ ಅವಧಿ ಬೇಕಾಗುತ್ತದೆ.
- ಆ ಸಮಯದಲ್ಲಿ ಗಂಡು ಹೂವಿನ ಪರಾಗ ಹೆಣ್ಣು ಹೂವಿನ ಶಲಾಕಾಗ್ರಕ್ಕೆ (Stigma) ತಗಲಬೇಕು.
- ಅದನ್ನು ಪರಾಗಸ್ಪರ್ಷ ಎನ್ನುತ್ತೇವೆ.
ಪರಾಗಸ್ಪರ್ಷ:
- ತೆಂಗಿನ ಮರದ ಹೂ ಗೊಂಚಲಿನ ಗಂಡು ಹೂವು ಅರಳುವಾಗಲೂ ಕೆಲವು ಕೀಟಗಳು ಅದಕ್ಕೆ ಸುತ್ತಿ ಪರಾಗ ಸಂಗ್ರಹಿಸುತ್ತವೆ.
- ಹೆಣ್ಣು ಹೂ ಪರಾಗ ಸ್ವೀಕರಿಸಲು ಸಿದ್ದವಾಗುವಾಗ (Maturity stage) ಅದರ ತುದಿ ಭಾಗ ಬಿಳಿ ಬಣ್ಣದಲ್ಲಿ ಕಾಣಿಸುತ್ತದೆ.
- ಮತ್ತು ಅದರಲ್ಲಿ ಅಂಟಿನಂತಹ ರಸ ಸ್ರವಿಸುತ್ತಿರುತ್ತದೆ. ಇದು ಸಿಹಿಯಾಗಿರುತ್ತದೆ.
- ಈ ಮಧುವನ್ನು ಸವಿಯಲು ಕೀಟಗಳು ಸುತ್ತುತ್ತವೆ.
- ಹೆಣ್ಣು ಹೂವು ಪರಾಗ ಸ್ವಿಕರಿಸಲು ಸಿದ್ದವಾಗುವ ಸಮಯದಲ್ಲಿ ಆ ಪುಷ್ಪ ಗೊಂಚಲಿನಲ್ಲಿ ಯಾವುದೇ ಗಂಡು ಹೂವು ಇರುವುದಿಲ್ಲ.
- ಅದು ಬೇರೆ ಹೂ ಗೊಂಚಲಿನಿಂದ ಲಭ್ಯವಾಗಬೇಕು ಅಥವಾ ಬೇರೆ ಮರದ ಹೂ ಗೊಂಚಲಿನ ಪರಾಗ ಇದಕ್ಕೆ ಸಿಗಬೇಕು.
- ಈ ಜಠಿಲ ಸನ್ನಿವೇಶದಲ್ಲಿ ಕೆಲವು ನೊಣ, ದುಂಬಿ, ಇರುವೆಗಳು ಇದಕ್ಕೆ ನೆರವಾಗುತ್ತದೆ.
- ಗಂಡು ಹೂವಿನ ಪರಾಗವನ್ನು ಮೇಲಿನ ಕೀಟಗಳು ಹಾಗೂ ಗಾಳಿಯು ಹೆಣ್ಣು ಹೂವಿಗೆ ಲಭ್ಯವಾಗುವಂತೆ ಮಾಡುತ್ತದೆ.
- ಬಿಳಿಯಾಗಿದ್ದ ತುದಿ ಕಪ್ಪಾಗುತ್ತದೆ. ಆಗ ಆ ಕಾಯಿ ಕಚ್ಚಿಕೊಂಡು ಮುಂದೆ ಬೆಳವಣಿಗೆಯಾಗುತ್ತದೆ.
- ಇಲ್ಲವಾದರೆ ಅದು ಉದುರುತ್ತದೆ.
ಆರೋಗ್ಯವಂತ ಮರದಲ್ಲಿ ಒಂದು ಹೂ ಗೊಂಚಲಿನ ಹೆಣ್ಣು ಮಿಡಿಗಳು ಪರಾಗ ಸ್ವೀಕರಿಸಲು ಸಿದ್ದವಾದಾಗ ಮತ್ತೊಂದು ಹೂ ಗೊಂಚಲು ಅರಳಿ, ಅದರ ಪರಾಗ ಕಣಗಳು ಸುಲಭವಾಗಿ ಹೆಣ್ಣು ಹೂವಿಗೆ ದೊರೆಯುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕಾಯಿ ಕಚ್ಚಿ ಇಳುವರಿಯೂ ಹೆಚ್ಚಾಗುತ್ತದೆ. ಇದೇ ಕಾರಣಕ್ಕೆ ತೆಂಗನ್ನು ಯಾವಾಗಲೂ ನೀರು, ಗೊಬ್ಬರ ಕೊಟ್ಟು ಚೆನ್ನಾಗಿ ಸಾಕಬೇಕು ಎನ್ನುವುದು.