ತೆಂಗು- ಅಧಿಕ ಇಳುವರಿಯ ಗುಟ್ಟು ಇದು.

ಉತ್ತಮ ಇಳುವರಿಯ ತೆಂಗಿನ ಮರ

ಇತ್ತೀಚೆಗೆ ಥೈಲಾಂಡ್ ನ ತೆಂಗು ತೋಟದ ಒಂದು ವೀಡಿಯೋ ಎಲ್ಲರ ಫೇಸ್ ಬುಕ್, ವಾಟ್ಸ್ ಆಪ್ ಗಳಲ್ಲಿ ಒಡಾಡಿದೆ. ಇದು ನಮಗೆ ಹೇಗೆ ತೆಂಗು ಬೆಳೆದರೆ ಉತ್ತಮ ಎಂಬ ಕೆಲವು ಸಂಗತಿಗಳನ್ನು ತಿಳಿಸುತ್ತದೆ.

  •  ತೆಂಗಿನ ಸಸಿ ನಾಟಿ ಮಾಡಿದ 4 -6 ವರ್ಷಕ್ಕೇ ಫಸಲಿಗಾರಂಭಿ ಸುತ್ತದೆ.
  • ಒಂದು ತೆಂಗಿನ ಮರವು  ಸುಮಾರು 30-40 ರಷ್ಟು ಗರಿಗಳು ಹಾಗೂ 100 ಕ್ಕೂ ಹೆಚ್ಚಿನ ಕಾಯಿಗಳನ್ನು  ಧರಿಸಬೇಕಾದರೆ ಅದು ಎಷ್ಟೊಂದು ಪ್ರಮಾಣದಲ್ಲಿ ಪೋಷಕಾಂಶಗಳನ್ನು ಬಳಸಿಕೊಳ್ಳಬೇಕು ಊಹಿಸಿ!.

ಪ್ರತೀ ವರ್ಷವೂ ಫಸಲಿಗೆ ಹಾಗೂ ಸಸ್ಯ ಬೆಳವಣಿಗೆಗೆ ಮಣ್ಣಿನಿಂದ ಪೋಶಕಾಂಶ ಗಳನ್ನು  ಹೀರಿಕೊಂಡು ಮಣ್ಣಿನಲ್ಲಿ ಇದ್ದ ಪೋಷಕಗಳನ್ನು ಗಣನೀಯ ಪ್ರಮಾಣದಲ್ಲಿ ಬರಿದು ಮಾಡುತ್ತದೆ. ಇದನ್ನು ನಾವು ಪುನರಪಿ ಭರ್ತಿ ಮಾಡಿಕೊಡದಿದ್ದರೆ  ಮರ ಸೊರಗಿ ಫಸಲು ಕ್ಷೀಣಿಸುತ್ತದೆ.

ತೆಂಗಿನ ಮರದ ಬೇರುಗಳು:

ಅಧಿಕ ಇಳುವರಿ ಕೊಡುವ ಮರಗಳಲ್ಲಿ ಪ್ರತೀ ಎಲೆ ಕಂಕುಳಲ್ಲೂ ಗೊನೆ ಇರಬೇಕು.
ಅಧಿಕ ಇಳುವರಿ ಕೊಡುವ ಮರಗಳಲ್ಲಿ ಪ್ರತೀ ಎಲೆ ಕಂಕುಳಲ್ಲೂ ಗೊನೆ ಇರಬೇಕು.
  • ತೆಂಗಿನ ಮರಗಳಿಗೆ ಯಾವುದೇ ಗೊಬ್ಬರಗಳನ್ನು ಹಾಕುವಾಗ ನಾವು ಬುಡಕ್ಕೆ  ಹಾಕಬಾರದು.
  • ಬುಡದಲ್ಲಿ ಇರುವ ಬೇರು ಹೊಸತಾಗಿ ಮೂಡುವ ಬೇರುಗಳು ಮಾತ್ರ.
  • ಇದು ಬೆಳೆದಂತೇ ಉದ್ದವಾಗಿ ಮಣ್ಣಿನ ಅನುಕೂಲತೆಯನ್ನು ಅನುಸರಿಸಿ ಮೂರು ಮೀಟರ್ ತನಕವೂ ಹಬ್ಬುತ್ತದೆ.
  • ಸಾಮಾನ್ಯವಾಗಿ ಒಂದು ಬೆಳೆದ ಮರದ ಬೇರು 5-7 ಮೀಟರ್ ತನಕ ಉದ್ದವಿರುತ್ತದೆ.
  • ಇವುಗಳಲ್ಲಿ ಸುಮಾರು ಅರ್ಧ ಪಾಲು  ನೇರವಾಗಿಯೇ ಹಬ್ಬುತ್ತದೆ.
  • ಉಳಿದರ್ಧ ಕೆಳಮುಖವಾಗಿ  ತೇವಾಂಶ ಇರುವ ತನಕ ಬೆಳೆಯುತ್ತವೆ.

ತೆಂಗಿನ ಬೇರುಗಳಲ್ಲಿ ಕೂದಲು ಬೇರುಗಳಿಲ್ಲ. ಮುಖ್ಯ ಬೇರಿನಲ್ಲಿ ಅಲ್ಲಲ್ಲಿ ಸಪುರದ ಕವಲುಗಳು ಒಡೆದು ಹುಟ್ಟುವ ಬೇರುಗಳೇ ಆಹಾರ ಸಂಗ್ರಹಿಸುವ ಬೇರುಗಳು. ಬೇರಿನ ತುದಿಯಲ್ಲಿ ಒಂದು ಟೋಪಿ ತರಹದ ರಚನೆ ಇರುತ್ತದೆ.

  • ಇದು ಬೆಳೆಯುತ್ತಿರುವ ಬೇರಿನ ರಕ್ಷಕ. ಇದರಿಂದ 5 ಸೆಂ.ಮೀ. ಹಿಂದೆ ಬೇರಿನ ಮೇಲೆ ಅಲ್ಲಲ್ಲಿ ತಿಳಿ ಬಣ್ಣದ ಉಬ್ಬುಗಳು ಇರುತ್ತವೆ, ಇವು ಬೇರಿಗೆ ಶ್ವಾಸೋಚ್ವಾಸಕ್ಕೆ ನೆರವಾಗುವ ಭಾಗಗಳು.
  • ತೆಂಗಿನಲ್ಲಿ ನಿರಂತರ ಬೇರುಗಳು ಹುಟ್ಟುತ್ತಲೇ ಇರುತ್ತವೆ. 
  • ತೆಂಗಿಗೆ ಗೊಬ್ಬರವನ್ನು  ಹಾಕುವಾಗ ಅದರ ಬೇರು ವ್ಯವಸ್ಥೆಯ ಬಗ್ಗೆ ಪ್ರತೀಯೊಬ್ಬ ರೈತನೂ ತಿಳಿದಿರಬೇಕಾದ್ದು ಅಗತ್ಯ. 
ಅಧಿಕ ಇಳುವರಿ ಕೊಡುವ ಮರಗಳಲ್ಲಿ ಪ್ರತೀ ತಿಂಗಳೂ ಕೊಯಿಲು ಇರುತ್ತದೆ.
ಅಧಿಕ ಇಳುವರಿ ಕೊಡುವ ಮರಗಳಲ್ಲಿ ಪ್ರತೀ ತಿಂಗಳೂ ಕೊಯಿಲು ಇರುತ್ತದೆ.

ಎಲ್ಲಿ ಗೊಬ್ಬರ ಕೊಡಬೇಕು:

  • ತೆಂಗಿಗೆ ಗೊಬ್ಬರವನ್ನು ಯಾವಾಗಲೂ ಬೊಡ್ಡೆಯ Bole ಬುಡ ಭಾಗಕ್ಕೆ ಹಾಕುವುದು ಸೂಕ್ತವಲ್ಲ.
  • ಬೊಡ್ಡೆ ಭಾಗವನ್ನು ಬಿಟ್ಟು ಸುಮಾರು 1.5 ರಿಂದ 2 ಮೀಟರ್ ದೂರಕ್ಕೆ ಹಾಕಿದರೆ ಅಲ್ಲಿ ಪೋಷಕಗಳನ್ನು ಹೀರುವ ಬೇರು ಕ್ರಿಯಾತ್ಮಕವಾಗಿರುವ ಕಾರಣ ಅದರ ಪಲಿತಾಂಶ ಹೆಚ್ಚು.
  • ವರ್ಷ ವರ್ಷವೂ ಕೊಟ್ಟಿಗೆ ಗೊಬ್ಬರ ಹಾಗೂ ರಾಸಾಯನಿಕ ಗೊಬ್ಬರಗಳನ್ನು  ಒಂದೇ ಕಡೆ ಹಾಕುವ ಬದಲು ಸ್ವಲ್ಪ ಸ್ವಲ್ಪವೇ ಸ್ಥಳ ಮುಂದುವರಿಸಿಕೊಂಡು ಹಾಕುತ್ತಿದ್ದರೆ ಹೆಚ್ಚು ಉತ್ತಮ.
ಅಧಿಕ ಇಳುವರಿಗೆ ಬೇರಿಗೆ ಗಾಯ ಆಗದಂತೆ ದೂರದಲ್ಲಿ ಬುಡಕೆರೆದು ಗೊಬ್ಬರ ಕೊಡಬೇಕು.
ಅಧಿಕ ಇಳುವರಿಗೆ ಬೇರಿಗೆ ಗಾಯ ಆಗದಂತೆ ದೂರದಲ್ಲಿ ಬುಡಕೆರೆದು ಗೊಬ್ಬರ ಕೊಡಬೇಕು.
  • ತೆಂಗಿಗೆ ಗೊಬ್ಬರ ನೀಡುವಾಗ ಬುಡ ಬಿಡಿಸುವ ನೆವದಲ್ಲಿ ಕವಲು ಬೇರುಗಳನ್ನು ತುಂಡರಿಸ ಬಾರದು.
  • ಮರದ ಬೊಡ್ಡೆ ಭಾಗದಿಂದ 1.5 ಮೀ ದೂರದಿಂದ 2 ಮೀಟರ್ ತನಕ ಕಳೆದ ವರ್ಷ ಹಾಕಿದ ಸಾವಯವ ಗೊಬ್ಬರವನ್ನು ಬೇರುಗಳಿಗೆ  ಹಾನಿಯಾಗದಂತೆ ತೆಳುವಾಗಿ  ಕೆರೆದು ಆ ಭಾಗಕ್ಕೆ ಹಾಕಬೇಕು.
  •  ಸಾವಯವ ಗೊಬ್ಬರಗಳಾದ ಕೊಟ್ಟಿಗೆ ಗೊಬ್ಬರ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಹಾಕಿ ಕೆರದ ಮಣ್ಣನ್ನು ಮತ್ತೆ ಅದಕ್ಕೆ ಮುಚ್ಚಬೇಕು.
  • ಬುಡ ಬಿಡಿಸಬೇಕಾಗಿಲ್ಲ. ಗೊಬ್ಬರ ಹಾಕಲು ಸ್ಥಳಾವಕಾಶಕ್ಕಾಗಿ ಮಾತ್ರ ಸ್ವಲ್ಪ  ಅವಕಾಶ ಮಾಡಾಬಹುದು.
  •  ಕೊಟ್ಟಿಗೆ ಗೊಬ್ಬರಗಳನ್ನು ದೂರ ದೂರ ಹಾಕಿದಷ್ಟೂ ಬೇರು ವಲಯ ವಿಸ್ತಾರವಾಗಿ ಮರಕ್ಕೆ  ಹೆಚ್ಚಿನ ಪೋಶಕಾಂಶಗಳು ದೊರೆಯುತ್ತವೆ.
  • ದೂರ ದೂರಕ್ಕೆ ಕೊಟ್ಟಿಗೆ ಗೊಬ್ಬರವನ್ನು ಹಾಕುವುದರಿಂದ ಮಣ್ಣು ಸಡಿಲವಾಗಿ ಬೇರು ಮುಂದೆ ಹೋಗಲು ಸಹಕಾರಿಯಾಗುತ್ತದೆ.
  •  ಬೇರು ವಲಯ ವಿಸ್ತಾರವಾದಷ್ಟೂ ಇಳುವರಿ ಹೆಚ್ಚುತ್ತದೆ.
  •  ಸರಳವಾಗಿ ಹೇಳಬೇಕೆಂದರೆ ತೆಂಗಿನ ಮರದ ಗರಿ ಹಬ್ಬಿದಷ್ಟು ದೂರದಲ್ಲಿ ಪೋಷಕಗಳನ್ನು  ಕೊಟ್ಟರೆ ಉತ್ತಮ.

 ಬೊಡ್ಡೆಯ ಬುಡಕ್ಕೇ ಗೊಬ್ಬರ ಹಾಕುವುದರಿಂದ ಮರದ ಬೇರು ಬೆಳವಣಿಗೆಯನ್ನು  ಹತ್ತಿಕ್ಕಿದಂತಾಗುತ್ತದೆ. ಬಯಲು ಸೀಮೆಯಲ್ಲಿ ರೈತರು  ಹೊಲವನ್ನು  ಹದ ಉಳುಮೆ ಮಾಡಿ ಬೇರನ್ನು ಹೆಚ್ಚು ವಿಸ್ತಾರಕ್ಕೆ ಹಬ್ಬಿಸಲು ಅನುವು ಮಾಡಿ ಕೊಡುತ್ತಾರೆ.

ಬುಡಕ್ಕೆ ಹಾಕುವ ಸೊಪ್ಪು, ತರಗೆಲೆ, ಕರಡ ಹುಲ್ಲುಗಳು ಬುಡ ಭಾಗ ಒಣಗದಂತೆ, ಮತ್ತು ಮಣ್ಣಿನ ಸಡಿಲತೆಗೆ ಸಹಕಾರಿ. ಬೊಡ್ಡೆಯ ಬುಡಕ್ಕೆ ಹಾಕುವ ಗೊಬ್ಬರವು ಮರದ ಎಳೆಯ ಕೋಮಲ ಬೇರಿಗೆ ಹಾನಿಯನ್ನು ಉಂಟುಮಾಡುತ್ತದೆ.  ಇಳಿದು ಹೋಗಿ ನಷ್ಟವಾಗುತ್ತದೆ.

 ಪ್ರತೀ ತಿಂಗಳೂ ಗೊನೆ:

ಅಧಿಕ ಇಳುವರಿ ಕೊಡುವ ಮರಗಳ ಶಿರ ಭಾಗ ಹೀಗೆ ಇರುತ್ತದೆ.
ಅಧಿಕ ಇಳುವರಿ ಕೊಡುವ ಮರಗಳ ಶಿರ ಭಾಗ ಹೀಗೆ ಇರುತ್ತದೆ.
  • ತೆಂಗಿನ ಮರದಲ್ಲಿ ಎಲ್ಲಾ ಋತುಮಾನದಲ್ಲೂ ಏಕ ಪ್ರಕಾರದ ಹೂ ಗೊಂಚಲು ಬಂದರೆ  ಫಸಲು ಉತ್ತಮವಾಗಿರುತ್ತದೆ.
  • ಕರಾವಳಿಯಲ್ಲಿ  ಸಾಮಾನ್ಯವಾಗಿ  ಎಪ್ರೀಲ್, ಮೇ ತಿಂಗಳಲ್ಲಿ  ಬಿಡುವ ಹೂ ಗೊಂಚಲ್ಲಿನಲ್ಲಿ ಕಾಯಿಗಳು ಹೆಚ್ಚು.
  • ಇದಕ್ಕೆ ಕಾರಣ ಆ ಹೂ ಗೊಂಚಲು ಮೂಡುವ ಸಮಯದಲ್ಲಿ ಉಂಟಾದ ಪೋಷಕಾಂಶಗಳ ಲಭ್ಯತೆಯ ಕೊರತೆ.
  • ತೆಂಗಿನ ಮರವು ಈಗ ಬಿಡುವ ಹೂ ಗೊಂಚಲು 36 ತಿಂಗಳ ಹಿಂದೆ ಮರದ ಎಲೆ ಕಂಕುಳದಲ್ಲಿ ಹುಟ್ಟಿರುತ್ತದೆ.
  • ಆ ಸಮಯದಲ್ಲಿ  ಯಾವ ಪರಿಸ್ಥಿತಿ ಇರುತ್ತದೆಯೋ ಅದೇ ಪ್ರಕಾರ ಆ ಹೂ ಗೊಂಚಲಿನ ಪ್ರತಿಫಲ ದೊರೆಯುತ್ತದೆ
  • ಆದ ಕಾರಣ ತೆಂಗಿನಲ್ಲಿ  ಯಾವಾಗಲೂ ಪೋಷಕಾಂಶಗಳ ಕೊರತೆಯಾಗದಂತೆ  ಗೊಬ್ಬರಗಳನ್ನು  ಕೊಡುತ್ತಲೇ ಇರಬೇಕು.
  • ವಿಭಜಿತ ಕಂತುಗಳಲ್ಲಿ ಗೊಬ್ಬರವನ್ನು ಕೊಟ್ಟರೆ ಪರಿಣಾಮ  ಉತ್ತಮವಾಗಿರುತ್ತದೆ.

ಪೋಷಕಾಂಶ:

  • ಗೊಬ್ಬರಕೊಡುವಾಗ ಮಣ್ಣು ತೇವಾಂಶದಿಂದ ಕೂಡಿರಬೇಕು.
  • ಗೊಬ್ಬರಗಳನ್ನು ಅಧಿಕ ಮಳೆಯಾಗುವಾಗ ನೀಡಿದರೆ ತೊಳೆದು ಹೋಗಿ ನಷ್ಟವಾಗುತ್ತದೆ.
  • ಪೂರ್ವ ಮುಂಗಾರು, ಮಳೆ ಮುಗಿಯುವ ಸಮಯದಲ್ಲಿ ಹಾಗೂ ನೀರಾವರಿ ಇರುವ ಬೇಸಿಗೆಯ  ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ  ಗೊಬ್ಬರವನ್ನು ಕೊಡಬೇಕು.
  • ಒಂದು ಫಲ ಕೊಡುತ್ತಿರುವ ತೆಂಗಿನ ಮರಕ್ಕೆ 25 ರಿಂದ 50 ಕಿಲೋ ಕೊಟ್ಟಿಗೆ ಗೊಬ್ಬರವೂ, 2-3ಕಿಲೋ ಕೃಷಿ ಸುಣ್ಣ, 500 ಗ್ರಾಂ ನಷ್ಟು ಮೆಗ್ನೀಶಿಯಂ ಸಲ್ಫೇಟ್ ಹಾಗೂ ಮೂರು ಸಮ ಕಂತುಗಳಲ್ಲಿ 340 ಗ್ರಾಂ ನಿಂದ 500 ಗ್ರಾಂ ತನಕ ಸಾರಜನಕ, 170 ಗ್ರಾಂ. ನಿಂದ 340 ಗ್ರಾಂ ತನಕ ರಂಜಕ ಹಾಗೂ 700 ಗ್ರಾಂ ನಿಂದ 1200 ಗ್ರಾಂ ತನಕ ಪೊಟ್ಯಾಶಿಯಂ ಸತ್ವ ಬೇಕು. ಅಧಿಕ ಇಳುವರಿ ಕೊಡುವ ಮರಗಳಿಗೆ ಅಧಿಕ ಪ್ರಮಾಣದಲ್ಲಿ ಕೊಡಬೇಕು.

ನೀರು:

ಅಧಿಕ ಇಳುವರಿಗಾಗಿ ಮರದ ನಾಕೂ ದಿಕ್ಕಿಗೂ ನೀರು ಬೀಳುವಂತೆ ನೀರಾವರಿ ಅಗತ್ಯ
ಅಧಿಕ ಇಳುವರಿಗಾಗಿ ಮರದ ನಾಕೂ ದಿಕ್ಕಿಗೂ ನೀರು ಬೀಳುವಂತೆ ನೀರಾವರಿ ಅಗತ್ಯ
  • ತೆಂಗಿನ ಮರದ ಬೇರುಗಳು ಇರುವಲ್ಲಿ ಸಾಕಶ್ಟು ತೇವಾಂಶ ಲಭ್ಯವಾಗುವಂತೆ ನೋಡಿಕೊಳ್ಳಬೇಕು.
  • ಹಾಗಿದ್ದಾಗ ಪೋಷಕಾಂಶ ಸರಿಯಾಗಿ ದೊರೆತು  ಇಳುವರಿ ಹೆಚ್ಚುತ್ತದೆ. ತೆಂಗಿಗೆ ನೀರು ಕೊಟ್ಟಷ್ಟೂ ಇಳುವರಿ ಹೆಚ್ಚು.

 ತೆಂಗಿನ ಮರದಲ್ಲಿ ಬರುವ ಎಲ್ಲ ಫಸಲನ್ನೂ ಕಾಯಿಗಾಗಿ ಬಳಕೆ ಮಾಡದೆ ಅನುಕೂಲವಿದ್ದಲ್ಲಿ ಎಳನೀರಿಗೆ ಅರ್ಧ ಪ್ರಮಾಣವನ್ನಾದರೂ ಬಳಕೆ ಮಾಡಿದರೆ ಪೋಷಕಾಂಶಗಳ ಬಳಕೆ ಉಳಿಕೆಯಾಗಿ ಇಳುವರಿ ಸ್ಥಿರತೆ ಇರುತ್ತದೆ.

 

5 thoughts on “ತೆಂಗು- ಅಧಿಕ ಇಳುವರಿಯ ಗುಟ್ಟು ಇದು.

Leave a Reply

Your email address will not be published. Required fields are marked *

error: Content is protected !!