ಶುಂಠಿಯ ಬಿತ್ತನೆ ಗಡ್ಡೆ ಮಾರಲು ಅದೆಷ್ಟು ಏಜೆಂಟರೋ. ಈಗಲೇ ಅವರ ವ್ಯವಹಾರ ಕುದುರುವುದು. ಅಮಾಯಕ ಹೊಸ ಬೆಳೆಗಾರರು ಇವರ ಬಲೆಗೇ ಬೀಳುವುದು. ಹೆಚ್ಚಿನ ರೈತರು ಬೀಜದ ಗಡ್ಡೆ ಆಯ್ಕೆ ಮಾಡುವಾಗ ತಪ್ಪುತ್ತಾರೆ. ಇದರಿಂದ ಮುಂದೆ ಬೆಳೆಯಲ್ಲಿ ರೋಗಗಳು ಖಾಯಂ ಆಗುತ್ತವೆ.ಶುಂಠಿಯ ಬೆಳೆಯಲ್ಲಿ ರೋಗ ಮುಕ್ತ ಬಿತ್ತನೆ ಗಡ್ದೆಯೇ ಪ್ರಮುಖ ಹೆಜ್ಜೆ !
- ಶುಂಠಿ ಬೆಳೆಸಬೇಕೆಂದಿರುವಿರಾದರೆ ನೀವು ಬೆಳೆ ಇರುವ ಹೊಲವನ್ನು ನೋಡಿ ಬೀಜದ ಗಡ್ಡೆ ಆಯ್ಕೆ ಮಾಡಬೇಕು ಎನ್ನುತ್ತಾರೆ.
- ಹಲವಾರು ವರ್ಷಗಳಿಂದ ಶುಂಠಿ ಬೆಳೆಯುವ ಅನುಭವಿಗಳು ತಮಗೆ ಬೇಕಾದ ಬಿತ್ತನಗೆಡ್ಡೆಯನ್ನು ತಮ್ಮ ಹೊಲದಲ್ಲಿ ಪ್ರತ್ಯೇಕವಾಗಿ ಬೆಳೆಸಿರುತ್ತಾರೆ.
ಶುಂಠಿ ಬೆಳೆದರೆ ಲಾಭವಿದೆ ನಿಜ. ಶುಂಟಿ ಬೆಳೆ ಕೈ ಹಿಡಿದರೆ ಬಂಪರ್- ಕೈಕೊಟ್ಟರೆ ಪಾಪರ್. ಶುಂಠಿ ಬೆಳೆಸುವ ಮುಂಚೆ ಅದರ ಬೆಳೆ ವಿಧಾನಗಳನ್ನು ಸಾಕಷ್ಟು ತಿಳಿದಿರಬೇಕು.ಬೇರೆ ಬೇರೆ ಕಡೆ ನೋಡಬೇಕು. ಸಮೀದಲ್ಲಿ ಸಂಶೋಧನಾ ಕೇಂದ್ರ ಇದ್ದರೆ ಅಲ್ಲಿಗೆ ಭೇಟಿ ಕೊಟ್ಟು ಒಂದಷ್ಟು ವಿಚಾರಗಳನ್ನು ತಿಳಿಯಬೇಕು
ನಡೆಯುತ್ತಿರುವುದು ಏನು:
- ಶುಂಠಿಯನ್ನು ಬಿತ್ತನೆ ಗಡ್ಡೆ ಉದೇಶಕ್ಕೆ ಮಾರಾಟ ಮಾಡಿದರೆ ದುಪ್ಪಟ್ಟು ಬೆಲೆ.
- ಹಲವಾರು ಜನ ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ.
- ಬೆಲೆ ಅನುಕೂಲದ ಪ್ರಯೋಜನ ಪಡೆಯುವುದಕ್ಕಾಗಿ ಕಳಪೆ ಗುಣಮಟ್ಟದ ಗಡ್ಡೆಗಳನ್ನು ಸೇರಿಸಿ ಕೊಡುವುದು ಮಾಮೂಲಿ ವ್ಯವಹಾರ.
- ಕಳಪೆ ಗುಣಮಟ್ಟದ ಕೆಲವೇ ಕೆಲವು ಗಡ್ಡೆಗಳಿದ್ದರೂ ಸಾಕು ನಿಮ್ಮ ಇಡೀ ಬಿತ್ತನೆ ಗಡ್ಡೆಗಳಿಗೆ ತೊಂದರೆ ಆಗುತ್ತದೆ.
- ಯಾರೂ ಸಹ ನಾನು ಕೊಡುವ ಬಿತ್ತನೆ ಗಡ್ಡೆ ಒಳ್ಳೆಯದಲ್ಲ ಎಂದು ಹೇಳುವುದೇ ಇಲ್ಲ.
- ಹೊಸ ಹೊಸಬರು ಶುಂಠಿ ಕೃಷಿಗೆ ಇಳಿಯುವಾಗ ಇವರನ್ನು ಸುಲಭವಾಗಿ ಬಿತ್ತನೆ ಗಡ್ಡೆಯ ಮೂಲಕ ಮಂಗಮಾಡಲಾಗುತ್ತದೆ.
- ಕೃಷಿಕರೇ ಕೃಷಿಕರನ್ನು ಬಿತ್ತನೆ ಗಡ್ಡೆಯಲ್ಲಿ ಮೋಸಮಾಡುವುದು ಕಂಡು ಬರುತ್ತದೆ.
ಬಿತ್ತನೆ ಗಡ್ಡೆ ಹೇಗಿರಬೇಕು:
- ಬಿತ್ತನೆ ಗಡ್ಡೆಯಲ್ಲಿ ಮುಖ್ಯವಾಗಿ ಎರಡು ಮೂರಾದರೂ ಮೊಳಕೆಗಳು ಇರಬೇಕು.
- ಗಡ್ಡೆಯಲ್ಲಿ ಎಲ್ಲಿಯೂ ಮೆದು ಇರುವ ಅಂಶ ಇರಬಾರದು. ಗಡ್ಡೆ ಮೆದು ಇದ್ದರೆ ಅಲ್ಲಿ ಕೊಳೆಯುವ ರೋಗದ ಸೋಂಕು ಇದೆ ಎಂದರ್ಥ.
- ಯಾವುದೇ ರೀತಿಯಲ್ಲಿ ಗಡ್ಡೆಗಳಲಿ ಬೂಸ್ಟ್ ಬೆಳೆದಿರಬಾರದು.
- ಮಣ್ಣು ಮೆತ್ತಿಕೊಂಡಿರುವ ಗಡ್ಡೆಗಳನ್ನು ಖರೀದಿ ಮಾಡಬಾರದು.
- ಸ್ವಲ್ಪವಾದರೂ ತೊಳೆದ ಅಥವಾ ಗಡ್ಡೆಯಿಂದ ಮಣ್ಣು ತೆಗೆದ ಬಿತ್ತನೆ ಗಡ್ಡೆಗಳನ್ನು ಆಯ್ಕೆ ಮಾಡಬೇಕು.
- ಹೀಗೆ ಆಯ್ಕೆ ಮಾಡುವಾಗ ಯಾವುದಾದರೂ ರೋಗ ಸೋಂಕು ತಗಲಿರುವುದು ಇದ್ದರೆ ಕಣ್ಣಿಗೆ ಕಾಣಿಸುತ್ತದೆ.
- ಸಾಧ್ಯವಾದಷ್ಟು ಬೆಳೆದ ಗಡ್ಡೆಗಳನ್ನು ಬೀಜಕ್ಕಾಗಿ ಆಯ್ಕೆ ಮಾಡಬೇಕು.ಕನಿಷ್ಟ 8 ತಿಂಗಳಾದರೂ ಅದು ಹೊಲದಲ್ಲಿ ಇದ್ದ ಬೆಳೆ ಆಗಿರಬೇಕು.
- ಹೊಲದಿಂದ ಕಿತ್ತು ಹೆಚ್ಚು ಸಮಯ ಆಗಿರಬಾರದು. ತಾಜಾ ಗಡ್ಡೆ ಆದಷ್ಟು ಒಳ್ಳೆಯದು. ಬಿತ್ತನೆ ಗಡ್ಡೆಯನ್ನು ಗೋಣಿ ಚೀಲದಲ್ಲಿ ತುಂಬಿ ಮನಬಂದಂತೆ ಇಟ್ಟಿದ್ದರೆ ಅದನ್ನು ಸುರುಹಿ ಎಲ್ಲವನ್ನೂ ಕೂಲಂಕುಶವಾಗಿ ಪರಿಶೀಲಿಸಿಯೇ ಖರೀದಿ ಮಾಡಬೇಕು.
ಬಿತ್ತನೆ ಗಡ್ಡೆಗೆ ಉಪಚಾರ:
- ಬಿತ್ತನೆ ಗಡ್ಡೆಯಲ್ಲಿ ರೋಗಕಾರಕವಾಗಿ ಇರುವುದು ಗಡ್ಡೆ ಕೊಳೆಯುವ ಶಿಲೀಂದ್ರ ಮತ್ತು ಬ್ಯಾಕ್ಟೀರಿಯಾ ಸೋಂಕು.
- ಇವುಗಳ ಸ್ವಲ್ಪ ಸೋಂಕು ಇದ್ದರೂ ಸಹ ಅದು ಸಸಿ ಬೆಳೆಯುವಾಗ ಹೆಚ್ಚಾಗುತ್ತದೆ.
- ಶುಂಠಿ ಬಿತ್ತನೆ ಮಾಡುವ 15-30 ದಿನಕ್ಕೆ ಮುಂಚೆ ಬೀಜದ ಗಡ್ಡೆಯನ್ನು ಆರಿಸುವ ಕೆಲಸ ಮಾಡಬೇಕು.
- ಆಯ್ಕೆ ಮಾಡಿದ ಬಿತ್ತನೆ ಗಡ್ಡೆಯನ್ನು ಜಾಗರೂಕತೆಯಲ್ಲಿ ಹಾಂಡ್ಲಿಂಗ್ ಮಾಡಬೇಕು.
- ಯಾವುದೇ ರೀತಿಯಲ್ಲಿ ಮೊಳಕೆ ಭಾಗಕ್ಕೆ ಪೆಟ್ಟಾಗಬಾರದು.
- ಬಿತ್ತನೆ ಗಡ್ಡೆಯನ್ನು ತಂದು ಮೊದಲು ಅದನ್ನು ಬಿಡಿಸಿ ನೊಡಿ ಹಾಳಾದುದು ಅಥವಾ ಮೊಳಕೆ ಇಲ್ಲದೇ ಇರುವ ಗಡ್ಡೆ ಇದ್ದರೆ ಅದನ್ನು ಪ್ರತ್ಯೇಕಿಸಬೇಕು.
- ಆಯ್ಕೆ ಮಾಡಿದ ಗಡ್ಡೆಗಳನ್ನು ಕ್ವಿನಾಲ್ ಫೋಸ್( ಇಕಾಲೆಕ್ಸ್) 1ಲೀ. ನೀರಿಗೆ 3 ಮಿಲಿ ಮತ್ತು 1 ಲೀ. ನೀರಿಗೆ 5 ಗ್ರಾಂ ಮ್ಯಾಂಕೋಜೆಬ್+ ಕಾರ್ಬನ್ಡೈಜಿಮ್ ಉಳ್ಳ ಶಿಲೀಂದ್ರ ನಾಶಕ ಮಿಶ್ರಣ ಮಾಡಿ ಅದರಲ್ಲಿ 30 ನಿಮಿಷ ಕಾಲ ಇಟ್ಟು ನಂತರ ಅದನ್ನು ಒಂದು ನೆರಳಿನ ಜಾಗದಲ್ಲಿ 1-2 ದಿನ ಒಣಗಿಸಬೇಕು.
- ಕೆಲವರು ಪ್ರಭಲ ಕೀಟನಾಶಕಗಳಿಂದ ಉಪಚಾರ ಮಾಡುತ್ತಾರೆ. ಇದು ಬೇಕಾಗಿಲ್ಲ.
- ಒಣಗಿದ ನಂತರವೇ ಬಿತ್ತನೆ ಮಾಡಬೇಕು. ಬಿತ್ತನೆ ಸಮಯದಲ್ಲೂ ಪ್ರತೀ ಗಡ್ಡೆಯನ್ನು ಗಮನಿಸಿ ನಾಟಿ ಮಾಡಬೇಕು.
- ಬಿತ್ತನೆ ಮಾಡುವಾಗ ಪ್ರತೀ ಕುಳಿಗೆ ಬೇವಿನಹಿಂಡಿ, ಮತ್ತು 10-15 ಗ್ರಾಂ ಡಿಎಪಿ ಮೇಲುಗೊಬ್ಬರ ಹಾಕಿ. ಪ್ರತೀ ಕುಳಿಗೆ ½ ಸೇರಿನಷ್ಟು ಭತ್ತದ ಸುಟ್ಟ ಹೊಟ್ಟನ್ನು ಹಾಕಿ ಅದರ ಮೇಲೆ 100 ಮಿಲಿ/. ಮ್ಯಾಂಕೋಜೆಬ್ ಶಿಲೀಂದ್ರ ನಾಶಕವನ್ನು ಹೊಯ್ಯಿರಿ.
- ಭತ್ತದ ಸುಟ್ಟ ಹೊಟ್ಟು ಬೇರು ಬರಲು ಬಹಳ ಉತ್ತಮ. ಇದರಲ್ಲಿ ಸಿಲಿಕಾ ಅಂಶ ಒಳಗೊಂಡ ಕಾರಣ ರೋಗ ನಿರೊಧಕ ಶಕ್ತಿಯೂ ಇದೆ.
ಬಿತ್ತನೆ ಗಡ್ಡೆ ಆಯ್ಕೆಯಲ್ಲಿ ಅವಸರ ಮಾಡಬೇಡಿ. ನಂಬಿಕೆ ಇಲ್ಲದ, ಏಜೆಂಟರ ಮೂಲಕ ಬಿತ್ತನೆ ಗಡ್ಡೆ ಆಯ್ಕೆ ಮಾಡಬೇಡಿ. ಸಾಕಷ್ಟು ಗಡ್ಡೆ ಲಭ್ಯವಾಗದೇ ಇದ್ದರೆ ಸ್ವಲ್ಪವೇ ಬಿತ್ತನೆ ಮಾಡಿ. ಮುಂದಿನ ವರ್ಷ ನಿಮ್ಮಲ್ಲೇ ಉತ್ತಮ ಗಡ್ಡೆ ದೊರೆಯುತ್ತದೆ.