ಬಯಲುಸೀಮೆಯ ಅಡಿಕೆ ಬೆಳೆಗಾರರಿಗೆ ಪ್ರಮುಖ ಸಲಹೆಗಳು.

ಉತ್ತಮ ಬೆಳವಣಿಗೆಯ ಸಸಿ

ಬಯಲು ಸೀಮೆಯ ರೈತರು ಈ ತನಕ ನಷ್ಟದ ಬೆಳೆಗಳಾದ ಜೋಳ, ಭತ್ತ ಮುಂತಾದ ಬೆಳೆಗಳನ್ನೇ ಬೆಳೆಸುತ್ತಿದ್ದವರು. ಈಗ ಹೊಸ ಆಕಾಂಕ್ಷೆಯಲ್ಲಿ ಹೆಚ್ಚಿನ ಆದಾಯ ಕೊಡಬಲ್ಲ ಅಡಿಕೆ ಬೆಳೆಯಲು ಪ್ರಾರಂಭಿಸಿದ್ದಾರೆ.  ಇವರಿಗೆ ಅಡಿಕೆ ಬೆಳೆ ಏನು, ಇದನ್ನು ಬೆಳೆಸುವ ಕುರಿತಾಗಿ ಸ್ವಲ್ಪ ಮಟ್ಟಿನ ಸಲಹೆ ಕೊಡುವುದು ಈ ಬರಹದ ಉದ್ದೇಶ.

 ಈಗ ಸಾಂಪ್ರದಾಯಿಕ ಬೆಳೆ ಪ್ರದೇಶದ ಪರಿದಿಯನ್ನು ಮೀರಿ  ವ್ಯಾಪಿಸಿದೆ.  ಕರಾವಳಿ ಮಲೆನಾಡಿನ  ರೈತರು ಮಾತ್ರ ಅಡಿಕೆಯಂತಹ ಬೆಳೆ ಬೆಳೆದು ಹೆಚ್ಚು ಆದಾಯ ಸಂಪಾದಿಸುವುದಲ್ಲ. ಇವರೂ ಸಂಪಾದಿಸಬೇಕು. ನಮ್ಮ ದೇಶಕ್ಕೆ ಇನ್ನೂ ಅಡಿಕೆ ಆಮದು ಆಗುತ್ತಿರುವುದರಿಂದ ಬೆಳೆ ಹೆಚ್ಚಾದರೂ ಬೇಡಿಕೆ ಕಡಿಮೆಯಾಗದು.

  • ಒಂದು ಕಾಲದಲ್ಲಿ  ಮಲೆನಾಡಿನಲ್ಲಿ ಮತ್ತು ದಕ್ಷಿಣ  ಕನ್ನಡದಲ್ಲಿ ಅಡಿಕೆ ಬೆಳೆ ಹೆಚ್ಚಾಗಿ ಇತ್ತು.
  • ಬೆಳೆ ಉತ್ಪಾದನೆ ಮತ್ತು ಕ್ಷೇತ್ರ ವಿಸ್ತೀರ್ಣದಲ್ಲಿ ಕರಾವಳಿಯ  ಭಾಗ ಮೊದಲ ಸ್ಥಾನದಲ್ಲಿತ್ತು.
  • ಕೆಲವೇ ವರ್ಷಗಳಲ್ಲಿ ಈ ಸ್ಥಾನ ಮಲೆನಾಡಿನ ಶಿವಮೊಗ್ಗಕ್ಕೆ ಹೋಯಿತು.
  • ಈಗ ಶಿವಮೊಗ್ಗದ  ಸ್ಥಾನವನ್ನು ದಾವಣಗೆರೆ ಜಿಲ್ಲೆ ತನ್ನದಾಗಿಸಿಕೊಂಡಿದೆ.
  • ಸಾಂಪ್ರದಾಯಿಕ ಪ್ರದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಅಸಾಂಪ್ರದಾಯಿಕ ಪ್ರದೇಶಗಳಲ್ಲಿ  ಅಡಿಕೆ ಬೆಳೆಯಲಾಗುತ್ತಿದೆ.
  • ವ್ಯಾಪಕವಾಗಿ ಇಡೀ ಜಿಲ್ಲೆಯ ಕೃಷಿ ಭೂಮಿ ಅಡಿಕೆ ಬೆಳೆಗೆ ಪರಿವರ್ತನೆಯಾಗುತ್ತಿದೆ.
  • ಕರಾವಳಿ, ಮಲೆನಾಡು, ಅರೆಮಲೆನಾಡು, ಬಯಲು ಸೀಮೆಯಯಲ್ಲಿ ಅಡಿಕೆ ಬೆಳೆ ಸ್ಪರ್ಧಾತ್ಮಕವಾಗಿ  ಹೆಚ್ಚಳವಾಗುತ್ತಿದೆ.
ಬಟ್ಟ ಬಯಲಿನಲ್ಲೂ ಸಸಿಗಳು ಹಸುರಾಗಿ ಏಕ ಪ್ರಕಾರವಾಗಿ ಬೆಳೆದಿರಬೇಕು.

ಕರಾವಳಿ, ಮಲೆನಾಡಿನಲ್ಲಿ ಅಡಿಕೆ ಬೆಳೆಗಾರರು ಕಳೆದ ನೂರಾರು ವರ್ಷಗಳಿಂದ ಅಡಿಕೆ ಬೆಳೆಯುತ್ತಿದ್ದು, ಇಲ್ಲಿಯ ಬೆಳೆಗಾರರಿಗೆ ಹುಟ್ಟು ಸಹಜವಾಗಿ  ಕೆಲವು ಸೂಕ್ಷ್ಮಗಳ ಅರಿವು ಇದೆ.  ಕೆಲವು ಸಮಸ್ಯೆಗಳಿಗೆ ವಿಜ್ಞಾನಿಗಳಿಗಿಂತ ಮುಂಚೆ ಪರಿಹಾರವನ್ನು ಕಂಡುಕೊಳ್ಳುವಷ್ಟು ಬುದ್ಧಿವಂತರೂ ಇದ್ದಾರೆ. ಆದರೆ ಬಯಲು ಸೀಮೆಯಲ್ಲಿ  ಜನ ಹೊಸತಾಗಿ ಅಡಿಕೆ ಹಾಕಲು ಪ್ರಾರಂಭಿಸಿದವರು. ಅಡಿಕೆ ಸಸ್ಯದ  ಪ್ರತೀಯೊಂದು ಬೆಳವಣಿಗೆಯ ಹಂತದಲ್ಲೂ ಇವರು ಮಾಹಿತಿಯನ್ನು ಬಯಸುವವರು.

ಅಡಿಕೆ ಸಸ್ಯ ಏನು?

  • ಅಡಿಕೆ ಸಸ್ಯ ಏಕದಳ ಸಸ್ಯವಾಗಿದ್ದು. ಗಾಳಿಯಾಡುವ, ನೀರು ಚೆನ್ನಾಗಿ ಬಸಿಯುವ  ಮಣ್ಣು ಇದನ್ನು ಬೆಳೆಯಲು ಸೂಕ್ತ.
  • ಫಲವತ್ತಾದ ಮೆಕ್ಕಲು ಮಣ್ಣಿನಲ್ಲಿ  ನೆಲದ ಮೇಲುಸ್ಥರದಲ್ಲಿ ಮಾತ್ರ ಹಬ್ಬಿ ಬೆಳೆಯುವ ಸಸ್ಯ ವರ್ಗ. 
  • ಬೇರುಗಳು ಉಸಿರಾಟ ನಡೆಸುತ್ತವೆ. ಅದಕ್ಕಾಗಿಯೇ ಅವು ನೆಲದ ಮೇಲೆ ಬರುತ್ತವೆ.  
  • ನೆಲಕ್ಕೆ ಬಿದ್ದ ನೀರು ಹೆಚ್ಚು ಸಮಯದ ತನಕ ಇಂಗಿ ಹೋಗದೆ ಇರುವ ಭೂಮಿಯಲ್ಲಿ ಅಡಿಕೆ ಬೆಳೆಯುವುದು ಸೂಕ್ತವಲ್ಲ.
  • ಅದಕ್ಕೆ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಂಡು ಬೆಳೆ ಬೆಳೆಯಬೇಕು.
ಒಂದು ವರ್ಷ ಪೂರ್ಣಗೊಂಡ ಸಸಿಗಳ ಲಕ್ಷಣ

ಅಡಿಕೆ ಬೆಳೆಯಲು ಸೂಕ್ತ ವಾತಾವರಣ:

  • ಅಡಿಕೆ ಮರ/ ಸಸಿ  ಒಂದು ಎಕದಳ ಸಸ್ಯವಾಗಿದ್ದು, ಇದಕ್ಕೆ ತಾಯಿ ಬೇರು ಇಲ್ಲ.
  • ಎಲ್ಲಾ ಬೇರುಗಳೂ ನೆಲದ ಮೇಲ್ಭಾಗದಲ್ಲಿ ಹಬ್ಬಿ ಬೆಳೆಯುತ್ತವೆ.
  • ಈ ಬೇರುಗಳ ಮೇಲ್ಮೈಯಲ್ಲಿ ಉಸಿರಾಟದ (Respiratory) ಭಾಗಗಳೂ ಇರುತ್ತವೆ.
  • ಈ ರೀತಿಯ ಬೇರಿನ ಬೆಳವಣಿಗೆಗೆ ಅನುಕೂಲಕರ ವಾತಾವರಣ ನೀರು ಬಸಿದು ಹೋಗುವ ಫಲವತ್ತಾದ ಸಡಿಲ ಮಣ್ಣು.
  • ಅಡಿಕೆ ಮರಗಳು/ ಸಸಿಗಳು ಸಹಿಸುವ ತಾಪಮಾನ ಗರಿಷ್ಟ30-32 ಡಿಗ್ರಿಯಷ್ಟು. ಇದಕ್ಕಿಂತ ಹೆಚ್ಚಿನ ತಾಪಮಾನ ಇರುವ ಭಾಗಗಳಲ್ಲಿ ಅಡಿಕೆ ಬೆಳೆಯುತ್ತದೆ.
  • ಆದರೆ  ಬೆಳೆದಾಗ ಕೆಲವೊಂದು ಸಮಸ್ಯೆಗಳ ಯಾವಾಗಲೂ ತಾ ಮುಂದು ತಾಮುಂದು ಎಂಬಂತೆ ಬರುತ್ತಿರುತ್ತವೆ.
  • ಹಾಗೆ ನೋಡಿದರೆ ದಕ್ಷಿಣ ಕನ್ನಡ , ಮಲೆನಾಡಿನಲ್ಲೂ ಬೇಸಿಗೆಯಲ್ಲಿ ತಾಪಮಾನ  35 ಡಿಗ್ರಿಯಿಂದ 38 ಡಿಗ್ರಿ ತನಕವೂ ಏರಿಕೆಯಾಗುತ್ತದೆ.
  • ಆದರೂ ಅಲ್ಲಿ ಅಡಿಕೆ ಮರಗಳು ಚೆನ್ನಾಗಿ ಬೆಳೆಯುತ್ತವೆ. ಕಾರಣ ಇಷ್ಟೇ.
  • ಇಲ್ಲಿ ಮರಮಟ್ಟುಗಳು ಇದ್ದು, ಕೆಲವು ಬಟಾ ಬಯಲು ಪ್ರದೇಶ ಮತ್ತು ತಾರಸೀ ಮನೆ  ಸುತ್ತಮುತ್ತ ಗರಿಷ್ಟ ತಾಪಮಾನ ಉಂಟಾದರೂ ಸಹ ತೋಟ ಇರುವ ಪ್ರದೇಶಗಳಲ್ಲಿ  ತಾಪಮಾನ ಕಡಿಮೆ ಇರುತ್ತದೆ.
  • ಇಷ್ಟಕ್ಕೂ ಇಲ್ಲಿ ಕಣಿವೆಯಂತಹ ಪ್ರದೇಶಗಳಲ್ಲಿ (ದಕ್ಷಿಣ ಕೂಡಿಕೊಂಡಿರುವ) ಬರುವ ಅನಾಯಾಸ ಇಳುವರಿ ಬಟಾ ಬಯಲು ಪ್ರದೇಶದಲ್ಲಿ ಬರುವುದಿಲ್ಲ.
ಸಸಿಗಳು 1.5 ವರ್ಷ ಕ್ಕೆ ಹೀಗೆ ಬುಡ ಬಿಟ್ಟು ಬೆಳೆಯಬೇಕು. ಗರಿ ಹಸುರಾಗಿ ಇರಬೇಕು.
ಸಸಿಗಳು 1.5 ವರ್ಷ ಕ್ಕೆ ಹೀಗೆ ಬುಡ ಬಿಟ್ಟು ಬೆಳೆಯಬೇಕು. ಗರಿ ಹಸುರಾಗಿ ಇರಬೇಕು.

ಸುಮಾರು 25-30 ವರ್ಷಕ್ಕೆ ಹಿಂದೆ ಕರಾವಳಿ ಮಲೆನಾಡಿನಲ್ಲಿ ಅಡಿಕೆ ಬೆಳೆಯಲು ಸೂಕ್ತ ಜಾಗ ಎಂದು ಗುರುತಿಸಲ್ಪಟ್ಟ ಸ್ಥಳಗಳು  ಕಣಿವೆ ಪ್ರದೇಶಗಳೂ ಮಾತ್ರ ಆಗಿದ್ದವು. ಕ್ರಮೇಣ ಬೆಳಗ್ಗಿನಿಂದ ಸಂಜೆ ತನಕ ಬಿಸಿಲು ಬೀಳುವ ಜಾಗಗಳನ್ನೂ ಸಹ ಅಡಿಕೆ ಕೃಷಿಗೆ ಒಳಪಡಿಸಲಾಯಿತು.  ಮಲೆನಾಡಿನಲ್ಲೂ ಹೀಗೆಯೇ ಬಾಗಾಯ್ತು ಭೂಮಿಯಿಂದ ಖುಷ್ಕಿ ಭೂಮಿಗೆ ಅಡಿಕೆ ಕೃಷಿ ವಿಸ್ತರಣೆಯಾಯಿತು. ಬಯಲು ಸೀಮೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು ವರ್ಷಗಳ ಹಿಂದೆಯೇ ಅಡಿಕೆ ಬೆಳೆ ಇತ್ತು. ಆದರೂ ಅಲ್ಲಿ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಬೆಳೆಯಲಾಗುತ್ತಿತ್ತು.

  • ಈಗ ಈ ಎಲ್ಲಾ ಇತಿಮಿತಿಗಳನ್ನೂ ಮೀರಿ ಅಡಿಕೆ ಬೆಳೆ ಪ್ರದೇಶಗಳು ವಿಸ್ತರಣೆಯಾಗುತ್ತಿದೆ.
  • ಬರೇ ಬಯಲು ಸೀಮೆಯಲ್ಲಿ ಮಾತ್ರವಲ್ಲ  ಸಾಂಪ್ರದಾಯಿಕ ಪ್ರದೇಶಗಳಲ್ಲೂ ಸಹ ಈದೇ ರೀತಿಯಲಿ ಅಡಿಕೆ ಬೆಳೆಯಲಾಗುತ್ತಿದೆ.

ಅಡಿಕೆ ಸಸಿಯ ಬೆಳವಣಿಗೆ ಹೇಗಿರಬೇಕು:

6-7 ತಿಂಗಳಿಗೆ ಹೀಗೆ ಬೆಳೆಯಬೇಕು
6-7 ತಿಂಗಳಿಗೆ ಹೀಗೆ ಬೆಳೆಯಬೇಕು
  • ಅಡಿಕೆ ಸಸಿ 1ವರ್ಷ,2ನೇ ವರ್ಷ 3ನೇ ವರ್ಷ ಹೇಗೆ ಬೆಳೆವಣಿಗೆ ಹೊಂದಬೇಕು ಎಂಬುದು ತಿಳಿದಿರಬೇಕು.
  • ಈ ಬೆಳೆವಣಿಗೆ ಬಾರದಿದ್ದರೆ ಸಮಸ್ಯೆಗಳನ್ನು ತಿಳಿದು ಸರಿ ಮಾಡಿಕೊಳ್ಳಬೇಕು.
  • ಮುಂದೆ ಸರಿಯಾಗುತ್ತದೆ ಎಂದು ಕಾಯುವುದು ಸೂಕ್ತವಲ್ಲ.
  • ಎಳೆ ಪ್ರಾಯದ 4 ವರ್ಷದ ತನಕದ ಬೆಳವಣಿಗೆ ಇಡೀ ಅದರ ಜೀವಮಾನವನ್ನು ನಿರ್ಧರಿಸುತ್ತದೆ.

ಅಡಿಕೆ ಸಸಿ ನೆಟ್ಟರೆ ಸಾಲದು. ಅದು 4 -5 ವರ್ಷಕ್ಕೆ ಫಸಲು ಕೊಡಲು ಪ್ರಾರಂಭವಾಗಬೇಕು. ಈ ರೀತಿ ಬೆಳೆದರೆ ಮಾತ್ರ ಅದು ತೋಟವಾಗುತ್ತದೆ ಎಂಬುದು ಎಲ್ಲಾ ಬೆಳೆಗಾರರಿಗೂ ತಿಳಿದಿರಬೇಕು. ಆದರೆ ಬಯಲು ಸೀಮೆಯ ಬಹುತೇಕ ಅಡಿಕೆ ತೋಟಗಳಲ್ಲಿ ಕಂಡು ಬರುವ ಸಮಸ್ಯೆ ಎಂದರೆ ಅವು ವರ್ಷ 3-4 ಆದರೂ ಸಹ ಸರಿಯಾದ ಬೆಳವಣಿಗೆ ಹೊಂದಿರುವುದಿಲ್ಲ.

2 ನೇ ವರ್ಷದ ಗಿಡ
2 ನೇ ವರ್ಷದ ಗಿಡ
  • ಎಳೆ ಪ್ರಾಯದಲ್ಲಿ ಹಚ್ಚ ಹಸುರಾದ ಗರಿಗಳೊಂದಿಗೆ ಗಿಡಗಳು ಬೆಳೆಯಬೇಕು.
  • ವರ್ಷ  ಹೆಚ್ಚಾದಂತೆ ಎಲೆಗಳ ಸಂಖ್ಯೆ ಹೆಚ್ಚಾಗಬೇಕು. ಒಂದು ವರ್ಷದ  ಗಿಡ ಕನಿಷ್ಟ 5 ಎಲೆಗಳನ್ನು ಹೊಂದಿರಬೇಕು.
  • ಒಂದು ವರ್ಷ ಪೂರ್ಣ ಆಗುವಾಗ ಬುಡ ಭಾಗದ ಬೊಡ್ಡೆ ಕಾಣಬೇಕು.  ಎಲೆಗಳಲ್ಲಿ ಚುಕ್ಕೆಗಳು, ಇತ್ಯಾದಿ ಇರಕೂಡದು.
  • ಆದರೆ ಬಯಲು ಸೀಮೆಯಲ್ಲಿ  ಹೆಚ್ಚಿನ ಕಡೆ ಅಡಿಕೆ ಸಸಿಗಳ ಎಲೆ ಹಳದಿಯಾಗಿರುತ್ತವೆ. 
  • ಅಲ್ಲದೆ ಎಲೆಗಳ ಸಂಖ್ಯೆಯೂ ಕಡಿಮೆ ಇರುತ್ತದೆ. ಎಲೆಗಳು ಹಚ್ಚ ಹಸುರಾಗಿ, ಆರೋಗ್ಯವಾಗಿ ಇಲ್ಲದಿದ್ದರೆ  ಆ ಸಸ್ಯ ಸಮರ್ಪಕವಾಗಿ ಆಹಾರ ಸಂಗ್ರಹಿಸುವುದಿಲ್ಲ. 
  • ಚೆನ್ನಾಗಿ ಬೆಳೆಯುವುದೂ ಇಲ್ಲ. ಇದಕ್ಕೆಲ್ಲಾ ಪ್ರಮುಖ ಕಾರಣ ಅತಿಯಾದ ತಾಪಮಾನ.
  • ಅಧಿಕ ತಾಪಮಾನದ ಕಾರಣದಿಂದ  ಎಲೆಗಳು ಹಳದಿಯಾಗಿರುತ್ತವೆ.
  • ತಾಪಮಾನ ಹೆಚ್ಚಾದಾಗ ಎಲೆಗಳಲ್ಲಿ ರಸ ಹೀರುವ ಕೀಟಗಳ ಸಮಸ್ಯೆಯೂ ಉಂಟಾಗುತ್ತದೆ. 
  • ಇದರಿಂದಾಗಿಎಲೆಗಳ ಸಂಖ್ಯೆ ಹೆಚ್ಚುವುದಿಲ್ಲ. ಗಿಡ ಏಳಿಗೆ ಆಗುವುದೂ ಇಲ್ಲ.
  • ಬೆಳೆಗಾರರು ಒಂದು ವರ್ಷದ ಗಿಡ ಹೇಗೆ ಬೆಳೆದಿರಬೇಕು. ಎರಡನೇ ವರ್ಷಕ್ಕೆ ಹೇಗೆ, ಮೂರನೇ ವರ್ಷಕ್ಕೆ ಹೇಗೆ ಇರಬೇಕು ಎಂಬುದನ್ನು ಸರಿಯಾಗಿ ತಿಳಿದು ಅದೇ ರೀತಿ ಬೆಳೆಯುವಂತೆ ಪೋಷಿಸಬೇಕು.
3-4 ನೇ ವರ್ಷದ ಗಿಡ
3-4 ನೇ ವರ್ಷದ ಗಿಡ

ಯಾವ ಕ್ರಮ ಅನುಸರಿಸಬೇಕು:

  • ಬಯಲು ಸೀಮೆಯಲ್ಲಿ ಅಡಿಕೆ ಬೆಳೆಯುವವರು ಸಾಧ್ಯವಾದಷ್ಟು ತಮ್ಮ ತೋಟದ ವಾತಾವರಣವನ್ನು ತಂಪು ಮಾಡುವ ಕಡೆಗೆ ಗಮನ ಹರಿಸಬೇಕು.
  • ಬಟ್ಟ ಬಯಲಿನಲ್ಲಿ ಅಡಿಕೆ ಸಸಿ ನೆಡುವಾಗ ಸುತ್ತಲೂ ನೆರಳು ಕೊಡುವ ಮರಮಟ್ಟು ಬೆಳೆಸಬೇಕು.
  • ತೆಂಗಿನ ಸಸಿ ನೆಡುವುದರಿಂದ  ಹೆಚ್ಚು ಅನುಕೂಲವಾಗುತ್ತದೆ. 
  • ಹೊಲವನ್ನು ವಿಭಾಗ ಮಾಡಿ ಮಧ್ಯಂತರದಲ್ಲಿ ದಾರಿ ಇತ್ಯಾದಿ ಮಾಡುವಾಗ ಅಲ್ಲಿಯೂ ಸಹ ನೆರಳಿನ ಮರಮಟ್ಟುಗಳನ್ನು ಬೆಳೆಸಬೇಕು.
  • ಅಡಿಕೆ ತೋಟದಲ್ಲಿ  ಪ್ರಾರಂಭದಿಂದಲೂ ಮಿಶ್ರ ಬೆಳೆಗಳನ್ನು ಬೆಳೆದು  ತಂಪು ವಾತಾವರಣ ಉಂಟಾಗುವಂತಹ ಸನ್ನಿವೇಶವನ್ನು ಉಂಟು ಮಾಡಬೇಕು.
  • ಮರ ಬೆಳೆದ ಮೇಲೆಯೂ ಹೊರಗಿನ ವಾತಾವರಣಕ್ಕಿಂತ ತೋಟದ ಒಳಗಿನ ವಾತಾವರಣ ಕಡಿಮೆ ಇರುವಂತೆ  ವೀಳ್ಯದೆಲೆ, ಬಾಳೆ ಮುಂತಾದ ಮಿಶ್ರ ಬೆಳೆ, ಮರಮಟ್ಟು ಬೆಳೆಸಿ ನಿಯಂತ್ರಣ , ಮಾಡಬೇಕು.
  • ಒಂದು ಎಕ್ರೆ ಅಡಿಕೆ ತೋಟದಲ್ಲಿ ಗರಿಷ್ಟ 5-6 ಸಂಖ್ಯೆಯಲ್ಲಿ ನೆರಳು ಕೊಟ್ಟು ತಂಪು ಕೊಡಬಲ್ಲ ಮರಮಟ್ಟುಗಳು ಇರಬೇಕು.
ಬಿಸಿಲಿನಿಂದ ಎಲೆಗಳ ರಕ್ಷಣೆಗೆ ಸುಣ್ಣದ ದ್ರಾವಣ ಸಿಂಪಡಿಸಿದ್ದು
ಬಿಸಿಲಿನಿಂದ ಎಲೆಗಳ ರಕ್ಷಣೆಗೆ ಸುಣ್ಣದ ದ್ರಾವಣ ಸಿಂಪಡಿಸಿದ್ದು

ಇಲ್ಲಿನ ಮಣ್ಣು ಜಿಗುಟು ಅಂಟು ಮಣ್ಣು ಆಗಿರುವ ಕಾರಣ ಪ್ರತೀ ಎರಡು ಸಾಲಿಗೊಂದರಂತೆ ನೀರು  ಬಸಿಯುವ, ಹಾಗೂ ಬೇರುಗಳಿಗೆ ಉಸಿರಾಟಕ್ಕೆ ಅನುಕೂಲವಾಗುವ ಬಸಿಗಾಲುವೆ ಮಾಡಬೇಕು.

ಉಳುಮೆ ಇತ್ಯಾದಿ ಮಾಡುವುದನ್ನು ಬಿಡಬೇಕು. ಏಕದಳ ಸಸ್ಯಗಳ ಬೇರುಗಳಿಗೆ ಗಾಯವಾದರೆ ಆ ಬೇರುಗಳು ಹಾಳಾಗುತ್ತವೆ. ಮತ್ತೆ ಹೊಸ ಬೇರು ಬರಬೇಕಾಗುತ್ತದೆ. ಬೇರುಗಳಿಗೆ ಹಾನಿಯಾದರೆ ಕ್ರಮೇಣ ಮರದಕ್ಕೆ ರೋಗ / ಕೀಟ ಬಾಧೆ ತಡೆದುಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ.

ಇಂತಹ ಸಸಿಗಳು  ಏಳಿಗೆ ಆಗದ ಲಕ್ಷಣ ತೋರಿಸುತ್ತದೆ.
ಇಂತಹ ಸಸಿಗಳು ಏಳಿಗೆ ಆಗದ ಲಕ್ಷಣ ತೋರಿಸುತ್ತದೆ.
  • ಲೆಕ್ಕಕಿಂತ ಹೆಚ್ಚು ಗೊಬ್ಬರ ಕೊಡಬೇಡಿ.
  • ಇಲ್ಲಿನ ಮಣ್ಣು ಫಲವತ್ತಾದ ಮಣ್ಣು ಅಗಿರುವ ಕಾರಣ ಕಡಿಮೆ ಪ್ರಮಾಣದಲ್ಲಿ ಗೊಬ್ಬರ ಕೊಟ್ಟರೆ ಸಾಕಾಗುತ್ತದೆ.
  • ಅಡಿಕೆಯ ಸಣ್ಣ ಸಸಿಗಳ ಎಲೆಗಳು ಬಿಸಿಲಿಗೆ ಸುಡದಂತೆ ರಕ್ಷಿಸಲು  ಎಲೆಗೆ ಶೇ1 ರ ಸುಣ್ಣದ ದ್ರಾವಣ ಸಿಂಪರಣೆ ಮಾಡುವುದು ಕೂಕ್ತ.

ಅಡಿಕೆ ಬೆಳೆದರೆ ಚೆನ್ನಾಗಿ ಬೆಳೆಯಬೇಕು. ಬಯಲು ಸೀಮೆಯ ಮಣ್ಣಿನ ಗುಣಮಟ್ಟದದಲ್ಲಿ ಅಡಿಕೆ ಬೆಳೆ ಚೆನ್ನಾಗಿ ಬರಬಹುದು. ಆದರೆ ವಾತಾವರಣ ಮತ್ತು ಮಣ್ಣಿನ ಸ್ಥಿತಿಯನ್ನು ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕು. ಈಗ ಸಾಂಪ್ರದಾಯಿಕ ಬೆಳೆ ಪ್ರದೇಶ ಎಂಬ ಕಟ್ಟು ಪಾಡುಗಳು ಇಲ್ಲ. ಮೇಲೆ ಹೇಳಿದಂತೆ ಬದಲಾವಣೆ ಮಾಡಿಕೊಂಡು ಎಲ್ಲಿಯೂ ಬೆಳೆ ಬೆಳೆಯಬಹುದು.

13 thoughts on “ಬಯಲುಸೀಮೆಯ ಅಡಿಕೆ ಬೆಳೆಗಾರರಿಗೆ ಪ್ರಮುಖ ಸಲಹೆಗಳು.

  1. ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು 💐🙏🏻

    1. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ತಮ್ಮ ಯಾವುದೇ ಸಲಹೆ ಸೂಚನೆಗಳಿಗೆ ಸ್ವಾಗತ.
      ನಮಸ್ಕಾರಗಳು.

  2. If weed grown in between the arcunut plantation what measures she’ll be taken

    Whether culivated by tracter or spray the medicines to eradicate the weeds

    1. ಸಮ್ಮತಿ ಇದ್ದರೆ ಕಳೆನಾಶಕ ಸಿಂಪಡಿಸಬಹುದು. ಉಳುಮೆ ಮಾಡಬೇಡಿ. ಯಾಕೆಂದರೆ ಬೇರಿಗೆ ಪೆಟ್ಟು ಆಗಬಾರದು. ಸಾಧ್ಯವಿದ್ದರೆ ನೆಲಕ್ಕೆ ಹಸುರೆಲೆ ಸೊಪ್ಪು ಹಾಸಬಹುದು. ಇಲ್ಲವೇ ಹಸುರೆಲೆ ಸೊಪ್ಪಿನ ಗಿಡ ಬೆಳೆಸಿ ಅದನ್ನು ಹೂ ಬರುವ ಸಮಯದಲ್ಲಿ ಕತ್ತರಿಸಿದರೆ ಕಲೆ ನಿಯಂತ್ರಣ ಆಗುತ್ತದೆ. ಕಳೆ ನಾಶಕ ಸಿಂಪಡಿಸುವಾಗ ಚರ್ಮಕ್ಕೆ ಬೀಳದಂತೆ ಜಾಗರೂಕತೆಯಿಂದ ಸಿಂಪಡಿಸಿ. ಅಧಿಕ ಸಾಂದ್ರತೆ ಬೇಡ. ಸಾಮಾನ್ಯ ಹುಲ್ಲು ಕಳೆಗಳಾದರೆ 200 ಲೀ. ನೀರಿಗೆ 1 ಲೀ. ಕಳೆನಾಶಕ ಸಾಕು. 5 ಕಿಲೊ ಉಪ್ಪು ಸೇರಿಸಿರಿ. ಇಲ್ಲವಾದರೆ ಮೆಗ್ನೀಶಿಯಂ ಸಲ್ಫೇಟ್ ಸೇರಿಸಿರಿ.

    1. ವಾಟ್ಸ್ ಅಪ್ ಗ್ರೂಪ್ ಇದೆ. ಆದರೆ ಅದರಲ್ಲಿ ಮನಬಂದಂತೆ ಕೆಲವರು ಪೋಸ್ಟ್ ಹಾಕುವ ಕಾರಣ ನಾವು ಟೆಲೆಗ್ರಾಂ ಗೆ ಒತ್ತು ಕೊಡುತ್ತಿದ್ದೇವೆ. ತಮಗೆ ಇಷ್ಟವಾದರೆ ಈ ಲಿಂಕ್ ಮೂಲಕ ಸೇರಿಕೊಳ್ಳಿ. ನಿಮ್ಮ ಎಲ್ಲಾ ಕೇಳಿಕೆ, ಸಲಹೆಗೆ ಇಲ್ಲಿ ಅವಕಾಶ ಇದೆ.
      https://t.me/krushiabhivruddi_official

    2. https://t.me/krushiabhivruddi_official
      ವಾಟ್ಸ್ ಅಪ್ ಗ್ರೂಪ್ ಇದೆ. ಆದರೆ ಅದರಲ್ಲಿ ಮನಬಂದಂತೆ ಕೆಲವರು ಪೋಸ್ಟ್ ಹಾಕುವ ಕಾರಣ ನಾವು ಟೆಲೆಗ್ರಾಂ ಗೆ ಒತ್ತು ಕೊಡುತ್ತಿದ್ದೇವೆ. ತಮಗೆ ಇಷ್ಟವಾದರೆ ಈ ಲಿಂಕ್ ಮೂಲಕ ಸೇರಿಕೊಳ್ಳಿ. ನಿಮ್ಮ ಎಲ್ಲಾ ಕೇಳಿಕೆ, ಸಲಹೆಗೆ ಇಲ್ಲಿ ಅವಕಾಶ ಇದೆ.

Leave a Reply

Your email address will not be published. Required fields are marked *

error: Content is protected !!