ತೆಂಗಿನ ಸಸಿ ನೆಟ್ಟು ನಂತರ ಎಲ್ಲಾ ನಿರ್ವಹಣೆಯನ್ನೂ ಚಾಚೂ ತಪ್ಪದೆ ಮಾಡುತ್ತಾ ಬಂದರೆ ಅದು 4 ನೇ ವರ್ಷಕ್ಕೆ ಹೂ ಬಿಟ್ಟು 5 ವರ್ಷಕ್ಕೆ ಕಾಯಿ ಬಿಡಲು ಪ್ರಾರಂಭವಾಗುತ್ತದೆ. ಹೈಬ್ರೀಡ್ ತಳಿಗಳು ನಾಲ್ಕನೇ ವರ್ಷಕ್ಕೇ ಫಲ ಕೊಡಲು ಪ್ರಾರಂಭವಾಗುತ್ತದೆ. ನಾವೆಲ್ಲಾ ತೆಂಗಿನ ಸಸಿ ನೆಡುತ್ತೇವೆ. ಫಲ ಬರುವ ತನಕ ಆರೈಕೆ ಮಾಡಲು ಉದಾಸೀನ ಮಾಡುತ್ತೇವೆ. ಫಲ ಬಂದ ನಂತರ ಹೆಚ್ಚು ಇಳುವರಿ ಬೇಕು ಎಂದು ಗೊಬ್ಬರ ಕೊಡುವ ಉತ್ಸಾಹ ತೋರುತ್ತೇವೆ. ಆದರೆ ಇದು ಸೂಕ್ತ ಕ್ರಮ ಅಲ್ಲ. ಸಸಿ ನೆಟ್ಟಾದಾಗಿನಿಂದ ಹೂ ಗೊಂಚಲು ಬರುವ ವರೆಗೆ ನಾವು ಅದನ್ನು ಸಾಕಬೇಕು. ನಂತರ ಆಹಾರ ಒಂದನ್ನು ಕೊಡುತ್ತಿದ್ದರೆ ಅದು ನಮ್ಮನ್ನು ಸಾಕುತ್ತದೆ.
- ತೆಂಗಿನ ಮರ ಪ್ರತೀ ಎಲೆ ಕಂಕುಳಲ್ಲಿಯೂ ಒಂದೊಂದು ಹೂ ಗೊಂಚಲನ್ನು ಬಿಡುತ್ತದೆ.
- ಎಲ್ಲಾ ಹೂ ಗೊಂಚಲುಗಳೂ ಗರಿಷ್ಟ ಕಾಯಿ ಹಿಡಿಯಲು ನಿರಂತರವಾಗಿ ಗೊಬ್ಬರಗಳನ್ನು ಕೊಡುತ್ತಾ ಇರಬೇಕು.
- ಯಾವಾಗ ಎಷ್ಟು ಪ್ರಮಾಣದಲ್ಲಿ ಕೊಡಬೇಕು ಎಂಬ ಮಾಹಿತಿ ಇಲ್ಲಿದೆ.
ತೆಂಗಿನ ಸಣ್ಣ ಪ್ರಾಯದ ಗಿಡಗಳ ಪಾಲನೆ:
- ಸಣ್ಣ ಗಿಡ ನೆಟ್ಟಾಗ ಮೊದಲಾಗಿ ಮಣ್ಣು ಸಡಿಲಮಾಡಿ ನಾಟಿ ಮಾಡಬೇಕು.
- ಸಾಧ್ಯವಾದಷ್ಟು ಹೊಂಡ ಮಾಡಿ ಮಣ್ಣು ಮತ್ತು ಕಾಂಪೋಸ್ಟು ಗೊಬ್ಬರ ಮಿಶ್ರಣ ಮಾಡಿ ತುಂಬಿ ಮೇಲೆ ನಾಟಿ ಮಾಡಬೇಕು.
- ನೆಡುವ ಸಸಿಯ ಬೇರುಗಳಿಗೆ ತಕ್ಷಣ ಫಲವತ್ತಾದ ಮಾಧ್ಯಮ ದೊರೆಯಬೇಕು.
- ಬೇರುಗಳು ಸಲೀಸಾಗಿ ಮಣ್ಣಿಗೆ ಇಳಿಯುವಂತಿರಬೇಕು.
- ಬೇರಿನ ಬುಡದಲ್ಲಿ ಸ್ಪರ್ಧಿ ಮರ ಗಿಡ ಇರಬಾರದು.
ತೆಂಗಿನ ಸಸಿ ನೆಡುವಾಗ ಮೊದಲಾಗಿ ಗಮನಿಸಬೇಕಾದ್ದು, ಆ ಜಾಗದಲ್ಲಿ ಯಾವುದೇ ನೆರಳು ಕೊಡುವ ಅಡ್ಡ ಇರಬಾರದು.ಬೆಳಗ್ಗೆಯಿಂದ ಸಂಜೆ ತನಕ ಪೂರ್ಣ ಬಿಸಿಲು ಇರಬೇಕು. ನೆರಳಿನ ಜಾಗದಲ್ಲಿ ಯಾವ ಕಾರಣಕ್ಕೂ ತೆಂಗು ಸಸಿ ನೆಟ್ಟರೆ ಅದು ಬೇಗ ಫಲ ಕೊಡಲಾರದು. ಸಡಿಲವಾದ ಫಲವತ್ತಾದ ಮಣ್ಣಿನಲ್ಲಿ ಬೇರು ಚೆನ್ನಾಗಿ ಬೆಳೆಯುತ್ತದೆ. ಗಿಡವೂ ಬೆಳೆಯುತ್ತದೆ. ಕಾಯಿಯೂ ಬಿಡುತ್ತದೆ.
ನೆಡುವಾಗ ಮಾಡಬೇಕಾದ ಕೆಲಸ;
- ಸಣ್ಣ ಸಸಿ ನೆಡುವಾಗ ಬುಡಕ್ಕೆ ಶಿಲಾ ರಂಜಕವನ್ನು 250 ಗ್ರಾಂ ನಷ್ಟು ಹಾಕಬೇಕು.
- ಇತರ ಗೊಬ್ಬರಗಳಾದ DAP ಅಥವಾ 20:20:0:13 ಹಾಕುವುದಿದ್ದರೆ ನೆಡುವ ಭಾಗದ ಮಣ್ಣಿಗೆ ಸುಮಾರು 50 ಗ್ರಾಂ ನಷ್ಟು ಮಿಶ್ರಣ ಮಾಡಿ ನಂತರ ನೆಡಬೇಕು.
- ಇದನ್ನು ಬುಡಕ್ಕೆ ಚೆಲ್ಲಬಾರದು.
- ನಾಟಿ ಮಾಡಿದ 3 ತಿಂಗಳ ನಂತರ ಪ್ರತೀ ಸಸಿಗೆ 125 ಗ್ರಾಂ ಯೂರಿಯಾ 100 ಗ್ರಾಂ ರಂಜಕ (ಶಿಲಾ ರಂಜಕ ಅಥವಾ ಸೂಫರ್ ಫೋಸ್ಫೇಟ್) 200 ಗ್ರಾಂ ಪೊಟ್ಯಾಶ್ ಕೊಡಬೇಕು.
- ಸಸಿ ನೆಟ್ಟಾಗ ಬುಡದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.
- ಚಳಿಗಾಲ ಬರುವಾಗ ಒಮ್ಮೆ ಎಲೆ ಅಡಿ ಭಾಗಕ್ಕೆ ಬೀಳುವಂತೆ ವೆಟ್ಟೆಬಲ್ ಸಲ್ಫರ್ ಸಿಂಪರಣೆ ಮಾಡಬೇಕು.
- ಬುಡಕ್ಕೆ ನೇರ ಕೊಟ್ಟಿಗೆ ಗೊಬ್ಬರವನ್ನು ರಾಶಿ ಹಾಕಬಾರದು.
- ಇದರಲ್ಲಿ ಕಪ್ಪು ದುಂಬಿ (ಕುರುವಾಯಿ) ಬಂದು ಮೊಟ್ಟೆ ಇಟ್ಟು ಮರಿ ಮಾಡುತ್ತದೆ.
- ಅದು ಸಸಿಯ ಬೆಳವಣಿಗೆಗೆ ಅಡ್ಡಿ ಮಾಡುತ್ತದೆ.
- ಹುಡಿಯಾದ ಗೊಬ್ಬರವನ್ನು ಮಣ್ಣಿಗೆ ಮಿಶ್ರಣ ಮಾಡಬೇಕು.
- ಕೊಟ್ಟಿಗೆ ಗೊಬ್ಬರವನ್ನು ಕಾಂಪೋಸ್ಟು ಮಾಡುವಾಗ ಅದಕ್ಕೆ ಕೀಟ ಬಾರದಂತೆ ಮುಚ್ಚಬೇಕು.
- ಇಲ್ಲವೇ ಜೈವಿಕ ಹುಳು ನಾಶಕವನ್ನು ಅದಕ್ಕೆ ಮಿಶ್ರಣ ಮಾಡಿ ಕುರುವಾಯಿ ದುಂಬಿಯ ಸಂತಾನಾಭಿವೃದ್ದಿ ಆಗದಂತೆ ನೋಡಿಕೊಳ್ಳಬೇಕು.
- ಕುರುವಾಯಿ ದುಂಬಿಗಳು ಇಲ್ಲದಿದ್ದರೆ ತೆಂಗಿನ ಮರ ಸಮಯಕ್ಕೆ ಸರಿಯಾಗಿ ಫಲ ಕೊಡುತ್ತದೆ. ಚೆನ್ನಾಗಿ ಬೆಳೆಯುತ್ತದೆ.
2 ವರ್ಷ ಆದ ನಂತರ:
- ಎರಡನೇ ವರ್ಷಕ್ಕೆ ತೆಂಗಿನ ಗಿಡ ಕಡ್ಡಿ ಬಿಟ್ಟ ಎಲೆಯನ್ನು ಬಿಡಬೇಕು.
- ಗರಿಗೆ ಯಾವುದೇ ಕೀಟ ಬಾಧೆ ಇಲ್ಲದಿದ್ದರೆ ಒಂದರಿಂದ ಒಂದು ದೊಡ್ಡ ಗರಿಗಳನ್ನು ಬಿಡುತ್ತಾ ಬೆಳೆಯುತ್ತದೆ.
- ಎರಡು ವರ್ಷ ಭರ್ತಿಯಾಗುವಾಗ ಬೊಡ್ಡೆ ಬಿಡುತ್ತದೆ.
- ಹೀಗೆ ಆಗಬೇಕಿದ್ದರೆ ಸಸಿಯ ಸುತ್ತ ಸುಮಾರು 4-5 ಅಡಿ ಸುತ್ತಳತೆಯಲ್ಲಿ ಮಣ್ಣು ಸಡಿಲವಾಗಿರಬೇಕು.
- ಮುಂಗಾರು ಮಳೆ ಪ್ರಾರಂಭವಾಗುವಾಗ 100 ಗ್ರಾಂ ಯೂರಿಯಾ, 250 ಗ್ರಾಂ ರಂಜಕಯುಕ್ತ ಗೊಬ್ಬರ, ಮತ್ತು 200 ಗ್ರಾಂ ಪೊಟ್ಯಾಶ್ ಕೊಡಬೇಕು.
- ಇದನ್ನು ಸಸಿಯ ಸುತ್ತ, 2 ಅಡಿ ದೂರದಲ್ಲಿ ಮಣ್ಣು ಕೆರೆದು ಹಾಕಿ ಮುಚ್ಚಬೇಕು.
- ಸಪ್ಟೆಂಬರ್ ತಿಂಗಳಿಗೆ ಮತ್ತೆ 150 ಗ್ರಾಂ ಯೂರಿಯಾ, 300 ಗ್ರಾಂ ರಂಜಕ ಗೊಬ್ಬರ, ಮತ್ತು 200 ಗ್ರಾಂ ಪೊಟ್ಯಾಶ್ ಕೊಡಬೇಕು.
- ಜನವರಿ ಕೊನೆಯ ಒಳಗೆ ಪುನಹ 150 ಗ್ರಾಂ ಯೂರಿಯಾ 250 ಗ್ರಾಂ ರಂಜಕ ಗೊಬ್ಬರ ಮತ್ತು 200 ಗ್ರಾಂ ಪೊಟ್ಯಾಶ್ ಕೊಡಬೇಕು.
- ಸಸಿಯ ಬೇರು ವಲಯಕ್ಕೆ ನೀರು ಸಿಗುವಂತೆ ನೀರಾವರಿ ಮಾಡಿಕೊಂಡಿರಬೇಕು.
- ತೇವ ಇರುವ ಜಾಗಕ್ಕೆ ಮಾತ್ರ ಗೊಬ್ಬರವನ್ನು ಹಾಕಬೇಕು.
- ಬೇಸಿಗೆಯಲ್ಲಿ ಬುಡ ಭಾಗ ಒಣಗದಂತೆ ಕೃಷಿ ತ್ಯಾಜ್ಯಗಳಿಂದ ಬುಡ ಮುಚ್ಚಬೇಕು.
- ಎರಡನೇ ವರ್ಷದ ನಂತರ ಪ್ರತೀ 2 ತಿಂಗಳಿಗೊಮ್ಮೆ ತೆಂಗಿನ ಎಲೆ ಕಂಕುಳ ಸುಳಿ ತನಕ ಬೀಳುವಂತೆ ಒಮ್ಮೆ ಮೊನೋಕ್ರೋಟೋಫೋಸ್ ಮತ್ತೊಮ್ಮೆ ಡೆಲ್ಟ್ರಾ ಮೆಥ್ರಿನ್ ಕೀಟನಾಶಕ ಸಿಂಪರಣೆ ಮಾಡಿ ಕುರುವಾಯಿಯನ್ನು ನಾಶ ಮಾಡಬೇಕು.
ಮೂರನೇ ವರ್ಷದ ನಂತರ:
- ಮೂರನೇ ವರ್ಷ ಆಗುವಾಗ ತೆಂಗಿನ ಸಸಿಯ ಬುಡ ಕನಿಷ್ಟ 5 ಅಡಿಯಷ್ಟಾದರೂ ಸಡಿಲವಾಗಿರಬೇಕು.
- ಆಗ ಬೇರುಗಳು ಉದ್ದಕ್ಕೆ ಪಸರಿಸುತ್ತವೆ. ಗರಿಗೆ ಯಾವುದೇ ಕಾರಣಕ್ಕೆ ಕುರುವಾಯಿ ಕೀಟ, ಕೆಂಪು ಮೂತಿ ದುಂಬಿ ಹಾನಿ ಮಾಡದಂತೆ ಪ್ರತೀ ಎರಡು ತಿಂಗಳಿಗೊಮ್ಮೆ ಕೀಟನಾಶಕ ಸಿಂಪರಣೆ ಮಾಡಿ.
- ಮಳೆಗಾಲದಲ್ಲಿ ಪ್ರತೀ ವರ್ಷ ಎರಡು ಬಾರಿ ಸುಳಿ ಭಾಗಕ್ಕೆ ಬೋರ್ಡೋ ದ್ರಾವಣ ಅಥವಾ COC ಯನ್ನು ಸಿಂಪರಣೆ ಮಾಡಿ,
- ಸುಳಿ ಕೊಳೆ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಿರಿ.ಸುಳಿ ಏನಾದರೂ ಒಣಗುವಿಕೆ,
- ಬಾಡುವಿಕೆ ಆದರೆ ತಕ್ಷಣ ಗಮನಿಸಿ ಉಪಚಾರ ಮಾಡಿ.
ಮೂರನೇ ವರ್ಷ;
- ಮುಂಗಾರು ಮಳೆ ಪ್ರಾರಂಭದಲ್ಲಿ 200 ಗ್ರಾಂ ಯೂರಿಯಾ, 500 ಗ್ರಾಂ ಶಿಲಾ ರಂಜಕ ಅಥವಾ ಸೂಪರ್ ಫೋಸ್ಫೇಟ್ ಮತ್ತು 400 ಗ್ರಾಂ ಪೊಟ್ಯಾಶ್ ಕೊಡಿ.
- ಮಳೆ ಮುಗಿಯುವ ಸಪ್ಟೆಂಬರ್ ನಲ್ಲಿ ಮತ್ತೆ 250 ಗ್ರಾಂ ಯೂರಿಯಾ 500 ಗ್ರಾಂ ರಂಜಕ ಗೊಬ್ಬರ 500 ಗ್ರಾಂ ಪೊಟ್ಯಾಶ್
- ಜನವರಿ ಕೊನೆ ಒಳಗೆ ಮತ್ತೆ 250ಗ್ರಾಂ ಯೂರಿಯಾ 400 ಗ್ರಾಂ ರಂಜಕ ಗೊಬ್ಬರ ಮತ್ತು 400 ಗ್ರಾಮ್ ಪೊಟ್ಯಾಶ್ ಗೊಬ್ಬರವನ್ನು ಕೊಡಿ.
- ಒಣ ಗರಿಗಳನ್ನು ಸ್ವಚ್ಚ ಮಾಡಿ ತೆಗೆಯುತ್ತಿರಿ.
- ಗರಿಯ ಬುಡ ಕಂಕುಳಕ್ಕೆ ಮರಳು ಹಾಕಿ ಅದರ ಒಳಗೆ ನಾಪ್ತಾಲಿನ್ ಗುಳಿಗೆಯನ್ನು ಹಾಕಿ.
- ಹಿಂದೆ ಕೀಟ ನಾಶಕ ಸಿಂಪಡಿಸಿದಂತೆ ಪ್ರತೀ 2 ತಿಂಗಳಿಗೊಮ್ಮೆ ಎಳೆ ಗರಿ ಕಂಕುಳಕ್ಕೆ ಸಿಂಪರಣೆ ಮಾಡುತ್ತಾ ಇರಬೇಕು.
- ಬುಡ ಭಾಗ ತೇವಾಂಶ ಆರದಂತೆ ನೋಡಿಕೊಳ್ಳಬೇಕು.
ನಾಲ್ಕನೇ ವರ್ಷ ಮತ್ತು ನಂತರ:
- ಈ ಸಮಯದಲ್ಲಿ ಬುಡ ಭಾಗ ಸುಮಾರು 6-7 ಅಡಿ ತನಕ ಸಡಿಲವಾದ ಮಣ್ಣು ಇರಬೇಕು.
- ಕಾಂಪೋಸ್ಟು ಆದ ಕೊಟ್ಟಿಗೆ ಗೊಬ್ಬರವನ್ನು ಬುಡದ ಮಣ್ಣಿಗೆ ಸುಮಾರು 50 ಕಿಲೋ ಆಷ್ಟಾದರೂ ಸೇರಿಸಬೇಕು.
- ಗೊಬ್ಬರವಾಗಿ ಮುಂಗಾರು ಮಳೆ ಪ್ರಾರಂಭವಾಗುವಾಗ 400 ಗ್ರಾಂ ಯೂರಿಯಾ, 750 ಗ್ರಾಂ ಶಿಲಾ ರಂಜಕ ಅಥವಾ ಸೂಪರ್ ಫೋಸ್ಫೇಟ್ ಮತ್ತು 700 ಗ್ರಾಂ ಮ್ಯುರೇಟ್ ಆಫ್ ಪ್ಪೊಟ್ಯಾಶ್ ಕೊಡಬೇಕು.
- ಮಳೆ ನಿಲ್ಲುವಾಗ ಮತ್ತೆ 400 ಗ್ರಾಂ ಯೂರಿಯಾ, 750 ಗ್ರಾಂ ಶಿಲಾ ರಂಜಕ ಅಥವಾ ಸೂಪರ್ ಫೋಸ್ಫೇಟ್ ಮತ್ತು 600 ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಶ್ ಕೊಡಿ.
- ಜನವರಿ ಕೊನೆಯ ಒಳಗೆ ಮತ್ತೆ 300 ಗ್ರಾಂ ಯೂರಿಯಾ ಮತ್ತು 500 ಗ್ರಾಂ ಶಿಲಾ ರಂಜಕ ಮತ್ತು 400 ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಶ್ ಗೊಬ್ಬರ ಕೊಡಬೇಕು.
- ಮಳೆಗಾಲದಲ್ಲಿ ಎರಡು ಬಾರಿ ಸುಳಿ ಭಾಗಕ್ಕೆ ಶೇ1 ರ ಬೋರ್ಡೋ ದ್ರಾವಣ ಅಥವಾ COC ಯನ್ನು ಸಿಂಪರಣೆ ಮಾಡಬೇಕು.
- 2 ತಿಂಗಳಿಗೊಮ್ಮೆ ಕೀಟನಾಶಕದ ಸಿಂಪರಣೆ ಮಾಡಬೇಕು.
- ನಂತರದ ವರ್ಷಗಳಲ್ಲೆಲ್ಲಾ ಇದೇ ರೀತಿಯಲ್ಲಿ ಪೋಷಕಾಂಶ ಮತ್ತು ನಿರ್ವಹಣೆ ಮಾಡುತ್ತಿರಬೇಕು.
- ಬೇರು ಹಬ್ಬಿದ ಭಾಗದಲ್ಲಿ ತೇವಾಂಶ ಆರದಂತೆ ನೀರಾವರಿ ಮಾಡುತ್ತಿರಬೇಕು.
ಈ ರೀತಿಯಲ್ಲಿ ಪಾಲನೆ ಮಾಡಿದ ಉತ್ತಮ ತಳಿಯ ಸಸಿ ನೆಟ್ಟು 4 ವರ್ಷಕ್ಕೆ ಪ್ರಥಮ ಹೂ ಗೊಂಚಲು ಬಿಡುತ್ತದೆ. 5-6 ವರ್ಷಕ್ಕೆ ಸ್ಥಿರ ಇಳುವರಿ ಪ್ರಾರಂಭವಾಗುತ್ತದೆ.
ಚಿತ್ರಗಳು: ಕಳೆದ ವರ್ಷ 2020 ಫೆಬ್ರವರಿಯಲ್ಲಿ ಶ್ರವಣಬೆಳಗೊಳದ ಸಮೀಪದ ಅಗಲಯ್ಯ ಊರಿನಲ್ಲಿ ಹೈಬ್ರೀಡ್ ತೆಂಗು ಬೆಳೆಸಿದ ರೈತರೊಬ್ಬರ ಹೊಲದಲ್ಲಿ ತೆಗೆಯಲಾಗಿದೆ.
One thought on “ತೆಂಗು- 4 ವರ್ಷಕ್ಕೆ ಇಳುವರಿ ಪ್ರಾರಂಭವಾಗಲು ಹೇಗೆ ಸಾಕಬೇಕು?”