ತೆಂಗು ಬೆಳೆಯಯಲ್ಲಿ ಬೀಜದ ಆಯ್ಕೆ ಪ್ರಾಮುಖ್ಯ ಹಂತ. ಬೀಜದ ತೆಂಗಿನ ಕಾಯಿ ಅವರವರ ತೋಟದ ಮರಗಳಿಂದ ಆಯ್ಕೆ ಮಾಡಿಕೊಂಡರೆ ಬಹಳ ಉತ್ತಮ.
ತೆಂಗಿನ ಕುರಿತಾಗಿ ಯಾವುದೇ ಲೇಖನಗಳು ಹಾಕಿದಾಗಲೂ ಇದರ ಬೀಜ ಎಲ್ಲಿ ಸಿಗುತ್ತದೆ ಎಂಬುದಾಗಿ ಕೇಳುತ್ತಾರೆ. ಇವರಿಗೆಲ್ಲಾ ನಾವು ಹೇಳುವುದು ನಿಮ್ಮ ಮನೆಯಲ್ಲಿರುವ ಅಥವಾ ನಿಮ್ಮ ಪರಿಚಯಸ್ಥರ ಮನೆಯಿಂದ ಬೀಜ ತಂದು ನೀವೇ ಸಸಿ ಮಾಡಿ ಎಂದು. ಇದು ಧೀರ್ಘಾವಧಿಯ ಬೆಳೆ ಆದ ಕಾರಣ ನೀವು ಆಯ್ಕೆ ಮಾಡಿದ ಬೀಜವೇ ಆಗಬೇಕು.ನಿಮ್ಮ ಕಣ್ಣೆದುರೇ ಇದ್ದ ಮರದ ಬೀಜ ಆಗಬೇಕು.
ಬೀಜದ ತೆಂಗಿನ ಕಾಯಿ ಆಯ್ಕೆಗೂ ಮುನ್ನ:
- ತೆಂಗಿನ ಸಸಿ ನೆಟ್ಟು ಅದು ಬೆಳೆದು ಇಳುವರಿ ಪಡೆಯಲು ಐದು ವರ್ಷ ವಾದರೂ ಬೇಕು.
- ಆ ತನಕ ಅದರ ಇಳುವರಿ ನೀಡುವ ಗುಣವನ್ನು ತಿಳಿಯಲು ತುಂಬಾ ಕಷ್ಟ.
- ಆದ ಕಾರಣ ಬೀಜದ ಆಯ್ಕೆ ಮಾಡುವಾಗಲೇ ಸಾಕಷ್ಟು ತಿಳಿದುಕೊಂಡು ಆಯ್ಕೆ ಮಾಡಬೇಕು.
- ತೆಂಗಿನ ಮರದ ಯಥಾ ಗುಣ ಅದರ ಬೀಜಕ್ಕೆ ಬರುವ ಸಂಭವನೀಯತೆ ತುಂಬಾ ಕಡಿಮೆ.
- ಇದು ಮಿಶ್ರ ಪರಾಗಸ್ಪರ್ಶದ ಮೂಲಕ ಕಚ್ಚುವಂತದ್ದು.
- ಆದ ಕಾರಣ ಪೀಳಿಗೆಯಿಂದ ಪೀಳಿಗೆಗೆ ತಳಿ ವ್ಯತ್ಯಾಸವಾಗುತ್ತದೆ.
- ಹಾಗೆಂದು 100 ಕ್ಕೆ ನೂರೂ ಹೀಗೆ ಆಗುವುದಿಲ್ಲ.
- ಕೆಲವು ಯಥಾ ಗುಣ ಬರಬಹುದು.
- ಮತ್ತೆ ಕೆಲವು ತಳಿ ವ್ಯತ್ಯಾಸವಾಗಿ ಹೈಬ್ರೀಡೀಕರಣ ಆಗಬಹುದು.
- ಮತ್ತೆ ಕೆಲವು ಬಂಜೆಯೂ ಆಗಬಹುದು.
- ಇದು ಎಲ್ಲಾ ತೆಂಗು ಬೆಳೆಗಾರರಿಗೆ ಗೊತ್ತಿರಬೇಕು.
ಬೀಜಕ್ಕೆ ಆಯ್ಕೆ ಮಾಡುವ ಮರದ ಲಕ್ಷಣ:
- ಬೀಜದ ಆಯ್ಕೆ ಮಾಡುವಾಗ ಮರ ಇಳುವರಿ ಕೊಡಲು ಪ್ರಾರಂಭವಾಗಿ ಕನಿಷ್ಟ 15-20 ವರ್ಷವಾದರೂ ಆಗಿರಬೇಕು.
- ಆಯ್ಕೆ ಮಾಡುವ ತೆಂಗಿನ ಮರದ ಸುತ್ತ ಉತ್ತಮ ಇಳುವರಿ ಕೊಡುವ ಮರಗಳೇ ಇರಬೇಕು.
- ಮರದ ಲಕ್ಷಣ ಬಿಡಿಸಿದ ಚತ್ರಿಯಂತಿರಬೇಕು.
- ಕನಿಷ್ಟ 40 ಆರೋಗ್ಯವಂತ ಗರಿಗಳು ಇರಬೇಕು.
- ವರ್ಷವೂ ಏಕ ಪ್ರಕಾರ ಇಳುವರಿ ಕೊಡುತ್ತಿರಬೇಕು.
- ಕಾಂಡ ತೀರಾ ಸಪುರವೂ ಅಲ್ಲದೆ ದಪ್ಪವೂ ಅಲ್ಲದೆ ಇರಬೇಕು.
- ಗೊನೆಗಳು ಗರಿ ಕಂಕುಳಲ್ಲಿ ಆಸರೆ ಪಡೆದಂತಿದ್ದರೆ ಒಳ್ಳೆಯದು.
- ಹೂಗೊಂಚಲು ತುಂಬಾ ಉದ್ದ ಇರಬಾರದು.
- ಮರದಲ್ಲಿ ಕನಿಷ್ಟ 8 ಗೊನೆಗಳು ಇರಬೇಕು.
- ಮುಂಗಾರು ಹಂಗಾಮಿನಲ್ಲಿ ಹೆಚ್ಚು ಕಾಯಿ ನಂತರ ತುಂಬಾ ಕಡಿಮೆ ಇರುವಂತಹ ಮರ ಆಗಿರಬಾರದು.
- ವರ್ಷಕ್ಕೆ ಸಾಧಾರಣ ದೊಡ್ಡ ಗಾತ್ರದ ಕಾಯಿಯಾದರೆ 100ಕ್ಕೂ ಮಿಕ್ಕಿ ಕಾಯಿ ಹಿಡಿಯಬೇಕು. (ಪ್ರಾದೇಶಿಕತೆಯನ್ನು ಹೊಂದಿ ಹೆಚ್ಚು ಇರಬೇಕು)
- ಇತರ ಮರಗಗಳ ಬೆಳವಣಿಗೆ ಮತ್ತು ಇಳುವರಿಯನ್ನು ಹೋಲಿಕೆ ಮಾಡಿ ಅದರಲ್ಲಿ ಉತ್ತಮ ಎಂದು ಕಂಡೂ ಬಂದ ಮರವನ್ನು ಬೀಜದ ಆಯ್ಕೆಗೆ ಆರಿಸಬೇಕು.
- ಇದು ಬರೇ ಒಂದು ವರ್ಷ ಅಲ್ಲ.
- 3-4 ವರ್ಷಗಳಿಂದ ಗಮನಿಸುತ್ತಿರಬೇಕು.
ಅದಕ್ಕೇ ಹೇಳುವುದು ನಮ್ಮ ಮನೆಯ ಅಥವಾ ಗೊತ್ತಿರುವವರ ತೋಟದದ್ದು ಆಗಿರಬೇಕು ಎಂದು. ಮರದ ಅಂತರ ಗಣ್ಣುಗಳು ಹತ್ತಿರವಾಗಿರಲಿ.
ಬೀಜ ಆಯ್ಕೆ ಹೇಗೆ:
- ಬೀಜ ಆಯ್ಕೆ ಮಾಡುವ ಗೊನೆಯಲ್ಲಿ ಅಧಿಕ ಕಾಯಿಗಳು ಇರಬೇಕು. ಮರದ ಹೂ ಗೊಂಚಲಿನಲ್ಲಿ ಹೆಣ್ಣು ಮಿಡಿಗಳ ಸಂಖ್ಯೆ ಹೆಚ್ಚು ಇರಬೇಕು.
- ಬೀಜದ ತೆಂಗಿನ ಕಾಯಿಯನ್ನು ಮರದಿಂದ ಇಳಿಸಬೇಕು.
- ಕೆಳಕ್ಕೆ ದೊಪ್ಪನೆ ಹಾಕಬಾರದು.
- ಇದರಿಂದ ಕಾಯಿಯ ಬ್ರೂಣಕ್ಕೆ ಉಂಟಾಗಬಹುದಾಗ ಶಾಕ್ ತಪ್ಪುತ್ತದೆ.
- ಗೊನೆಯ ಒಂದು ಕಾಯಿಯನ್ನು ಸುಲಿದು ಸಿಪ್ಪೆ ಹೇಗಿದೆ, ಒಳ ತಿರುಳು(Kernel) ಹೇಗಿದೆ ಎಂಬುದನ್ನು ಗಮನಿಸಬೇಕು.
- ಎಳನೀರು ಉದ್ದೇಶಕ್ಕೆ ಬೆಳೆಸುವುದಾದರೆ ತೆಳು ಸಿಪ್ಪೆಯ, ದೊಡ್ಡ ಕಾಯಿ ಬಿಡುವ ನೀರು ಸಿಹಿ ಇರುವ ಕಾಯಿ ಸೂಕ್ತ,
- ಇಂತಹ ಕಾಯಿಗಳಲ್ಲಿ ಒಳ ತಿರುಳು ತೆಳುವಾಗಿರುತ್ತದೆ. ಎಣ್ಣೆ ಅಂಶ ಕಡಿಮೆ ಇರುತ್ತದೆ.
- ಎಣ್ಣೆ ಕೊಬ್ಬರಿಗಾದರೆ ಒಳ ತಿರುಳು ದಪ್ಪ ಇರುವ ಸ್ವಲ್ಪ ಉದ್ದುಂಡಗೆ ಕಾಯಿಯನ್ನು ಆಯ್ಕೆ ಮಾಡುವುದು ಸೂಕ್ತ.
- ಎರಡೂ ಉದ್ದೇಶಕ್ಕೆ ಆಗುವ ಕಾಯಿಯಾದರೆ ಸಾಧಾರಣ ದೊಡ್ಡ ಕಾಯಿಯಾಗಿರಬೇಕು.
- ಬೀಜದಕಾಯಿ 12 ತಿಂಗಳು ಬೆಳೆದಿರಬೇಕು.
- ಕರ್ನಾಟಕದ ಕರಾವಳಿಯಲ್ಲಿ ಮಾರ್ಚ್ ನಿಂದ ಮೇ – ಜೂನ್ ತನಕದ ಕಾಯಿಯನ್ನು ಬೀಜಕ್ಕೆ ಆಯ್ಕೆ ಮಾಡಬಹುದು.
- ಉಳಿದೆಡೆಯೂ ಮುಂಗಾರು ಮಳೆ ಪೂರ್ವದ ಕಾಯಿಯಾದರೆ ಉತ್ತಮ.
- ಸಿಪ್ಪೆ ಹಸಿಯಾಗಿದ್ದರೆ ಅದನ್ನು 1-2 ವಾರ ಕಾಲ ನೆರಳಿನಲ್ಲಿ ಒಣಗಿಸಬೇಕು.
ಬೀಜ ಮೊಳಕೆ ಬರಿಸುವುದು:
- ಬೀಜಕ್ಕಾಗಿ ಆಯ್ಕೆ ಮಾಡಿದ ಕಾಯಿಯನ್ನು ಒಂದು ವಾರ ಕಾಲ ನೀರಿನಲ್ಲಿ ನೆನೆಸಿ ಇಡುವುದರಿಂದ ಸಿಪ್ಪೆ ನೆನೆದು ಮೊಳಕೆ ಬರಲು ಬ್ರೂಣ ಸಜ್ಜಾಗುತ್ತದೆ.
- ಅದಲ್ಲದಿದ್ದರೆ ತೇವಾಂಶ ಬೇಗ ಆರದಂತಹ ಮಾಧ್ಯಮದ ಪಾತಿಯಲ್ಲಿ ಹಾಕಿ ತೇವಾಂಶ ಆರದಂತೆ ನೋಡಿಕೊಳ್ಳಬೇಕು.
- ನೆರಳಿನ ಜಾಗದಲ್ಲಿ ಪಾತಿಗೆ ಹಾಕಬೇಕು.
- ತೆಂಗಿನ ಕಾಯಿಯ ಸಿಪ್ಪೆ ತೆಳು ಇದ್ದ ಕಾಯಿ ಬೇಗ ಮೊಳಕೆ ಒಡೆಯುತ್ತದೆ.
- ದಪ್ಪ ಇದ್ದರೆ ಸ್ವಲ್ಪ ನಿಧಾನ. ನೀರಿನಲ್ಲಿ ನೆನೆಸಿದರೆ ಬೇಗ ಮೊಳೆಯುತ್ತದೆ.
- ಕಾಯಿಯನ್ನು ಪಾತಿಯಲ್ಲಿ ಹಾಕಿ ಇಟ್ಟಾಗ ಅದು ಸುಮಾರು 120-150 ದಿನಗಳ ಒಳಗೆ ಮೊಳಕೆ ಕಾಣಿಸಿಕೊಳ್ಳುತ್ತದೆ.
- ನಂತರ ಬಂದ ಮೊಳಕೆಗಳ ಕಾಯಿಯನ್ನು ತಿರಸ್ಕರಿಸಬೇಕು.
- ಮೊಳಕೆ ಬಂದಾಗ ನೀವು ಆಯ್ಕೆ ಮಾಡಿದ ಮರದ ಗರಿಯ, ಕಾಯಿಯ ಮೇಲ್ಮೈ ಬಣ್ಣಕ್ಕೆ ಸಮನಾಗಿ ಅದರ ಬಣ್ಣ ಇದ್ದರೆ ಅದು ಮಾತೃಗುಣವನ್ನು ಪಡೆದಿದೆ ಎಂದರ್ಥ.
- ಒಂದು ವೇಳೆ ವ್ಯತ್ಯಾಸವಾಗಿ ಬಂದರೆ ಅದು ನೈಸರ್ಗಿಕ ಹಬ್ರೀಡ್ ಆಗಿರುತ್ತದೆ.
- ಬೆಳೆಯುತ್ತಿದಂತೆ ಅದರ ಗರಿಯ ಬಣ್ಣ ಇದನ್ನು ಸ್ಪಷ್ಟವಾಗಿ ಗೊತ್ತು ಮಾಡುತ್ತದೆ.
- ಮೊಳಕೆ ಬರುವ ಮುಂಚೆ ಬೇರು ಸಿಪ್ಪೆಯಿದ ಹೊರ ಬಂದಿರುತ್ತದೆ.
- ಆಗ ಅದನ್ನು ಪಾಲಿಥೀನ್ ಚೀಲಕ್ಕೆ ವರ್ಗಾಯಿಸಬಹುದು.
- ಪಾತಿಯಲ್ಲೇ ಸಸಿ ಮಾಡುವುದಿದ್ದರೆ ಸಡಿಲವಾದ ಮಾಧ್ಯಮವನ್ನು ಹಾಕಿರಬೇಕು.
- ಆಗ ಸಸಿ ಕೀಳಲು ಸುಲಭವಾಗುತ್ತದೆ. ಮೊಳಕೆಯು ಬಲಿಷ್ಟವಾಗಿದ್ದುದನ್ನು ಮಾತ್ರ ಸಸಿ ಮಾಡಲು ಬಳಕೆ ಮಾಡಬೇಕು.
ನೈಸರ್ಗಿಕ ಹೈಬ್ರೀಡ್:
- ನೀವು ಬೀಜಕ್ಕಾಗಿ ಆಯ್ಕೆ ಮಾಡಿದ ಮರದ ಬೀಜದ ಕಾಯಿ ಮೊಳಕೆ ಬಂದಾಗ ಅದು ತಾಯಿ ಮರದ ಗರಿಯ ಬಣ್ಣದ ಲಕ್ಷಣಕ್ಕಿಂತ ಭಿನ್ನವಾಗಿದ್ದರೆ ಅದು ಕ್ರಾಸಿಂಗ್ ಗೆ ( ಮಿಶ್ರ ಪರಾಗಸ್ಪರ್ಶಕ್ಕೆ) ಒಳಗಾಗಿದೆ ಎಂದರ್ಥ.
- ಅದು ಅಕ್ಕ ಪಕ್ಕದ ಮರಗಳಿಂದ ಆಗಿರಬಹುದು.
- ಕೆಲವೊಮ್ಮೆ ಹಸುರು ತಳಿಯ ಬೀಜದಲ್ಲಿ ಕಿತ್ತಳ ತಳಿಯ ಸಸಿ ಬರುವುದಿದೆ.
- ಅದು ಕಿತ್ತಳೆ ತಳಿಯ ಕ್ರಾಸಿಂಗ್. ಕಿತ್ತಳೆ ತಳಿಯಲ್ಲಿ ಹಸುರು ಬರುವುದೂ ಇದೆ.
- ಹಾಗೆಯೇ ಇನ್ನೂ ಕೆಲವು ಬಣ್ಣ ವ್ಯತ್ಯಾಸ ಬರುವುದು ಇದೆ.
- ಗಿಡ್ಡ ತಳಿಯಲ್ಲಿ ಎತ್ತರ ತಳಿ ಬರಬಹುದು. ಎತ್ತರದಲ್ಲಿ ಗಿಡ್ದವೂ ಬರಬಹುದು.
- ಇದನ್ನು ನೆಡಿ. ಇದು ಹೆಚ್ಚಿನ ಸಂದರ್ಭಗಳಲ್ಲಿ ಅಧಿಕ ಇಳುವರಿ ಕೊಡುತ್ತವೆ.
- ತೆಂಗಿನಲ್ಲಿ ಲೆಕ್ಕಕ್ಕೆ ಸಿಗದಷ್ಟು ಬಗೆ ಬಗೆಯ ತಳಿಗಳಾದುದು ಇದೇ ರೀತಿಯಲ್ಲಿ.
ಇಷ್ಟೆಲ್ಲಾ ಬೀಜ ಆಯ್ಕೆ ಕ್ರಮಗಳಿರುವಾಗ ಗೊತ್ತಿಲ್ಲದ ಮೂಲದಿಂದ ಸಸಿ, ಬೀಜ ಆಯ್ಕೆ ಮಾಡುವುದು ಎಷ್ಟು ಸಮಯಂಜಸ ನೀವೇ ಯೋಚಿಸಿ. ಯಾವಾಗಲೂ ನಮ್ಮ ಹವಾಮಾನ, ಮಣ್ಣು ಇದಕ್ಕೆ ಅಲ್ಲಿಯ ಬೀಜವೇ ಹೊಂದಿಕೆಯಾಗುತ್ತದೆ ಎಂಬುದು ತಿಳಿದಿರಲಿ.