ಈ ವರ್ಷ ಮಳೆಯ ಅರ್ಭಟ ಸ್ವಲ್ಪ ಕಡಿಮೆಯಾದ ಕಾರಣ ಕೊಳೆ ರೋಗ ಬಂದ ಪ್ರಮಾಣ ತುಂಬಾ ಕಡಿಮೆ. ಒಂದು ವೇಳೆ ಕೊಳೆ ರೋಗ ಬಂದಿದ್ದರೆ ನೀವು ತೋಟದಲ್ಲಿ ಏನು ಮಾಡಬೇಕು. ಇದರ ಪ್ರತಿಫಲ ಏನು ಇಲ್ಲಿದೆ ಮಾಹಿತಿ.
ಅಡಿಕೆ ಮರಗಳಲ್ಲಿ ಕಾಯಿಗಳು ಬಲಿಯುತ್ತಿರುವಾಗ ಒಂದು ಶಿಲೀಂದ್ರ ಕಾಯಿಯ ಒಳಗೆ ಹೋಗಿ ಅದನ್ನು ಹಾನಿ ಮಾಡಿ ಕೊಳೆಯುವಂತೆ ಮಾಡುತ್ತದೆ. ಈ ಶಿಲೀಂದ್ರವು ಒಂದು ಪರಾವಲಂಭಿ ಜೀವಿಯಾಗಿದ್ದು, ಅಡಿಕೆಯ ಕಾಯಿಯ ಒಳಗೆ ಅದು ಸಂಖ್ಯಾಭಿವೃದ್ದಿಯಾಗಿ ಅಲ್ಲಿಂದ ಹೊರ ಬರುವ ಸಮಯಕ್ಕೆ ಕಾಯಿ ಬೆಂದಂತಾಗಿ ಕೆಳಗೆ ಉದುರುತ್ತದೆ. ಕೆಲವು ಅಲ್ಲಿಯೇ ಒಣಗಿ ಗೊಂಚಲಿನಲ್ಲೇ ಉಳಿದುಕೊಂಡಿರುತ್ತದೆ. ಉದುರಿ ಬಿದ್ದ ಕೊಳೆ ರೋಗ ಪೀಡಿತ ಕಾಯಿಯಲ್ಲಿ ಲಕ್ಷಾಂತರ ಸಂಖ್ಯೆಯ ಶಿಲೀಂದ್ರದ ಅಣುಗಳು ಇರುತ್ತವೆ. ಇವು ನೆಲಕ್ಕೆ ಬೀಳುತ್ತವೆ. ಅಲ್ಲಿ ಮತ್ತಷ್ಟು ಶಿಲೀಂದ್ರಗಳು ಬೆಳೆದು ಕಾಯಿಯ ಮೇಲ್ಮೈಯಲ್ಲಿ ಶಿಲೀಂದ್ರಗಳು ದಪ್ಪಕ್ಕೆ ಲೇಪಿಸಿಕೊಂಡಂತೆ ಇರುತ್ತವೆ. ನೆಲದಲ್ಲಿರುವ ತೇವಾಂಶ ಆಗಾಗ ಬರುವ ಮಳೆ ಇದರಿಂದಾಗಿ ಶಿಲೀಂದ್ರ ಸಂಖ್ಯಾಭಿವೃದ್ದಿಯಾಗುತ್ತದೆ. ಅದು ಪ್ರಸಾರವೂ ಆಗುತ್ತದೆ. ರೋಗ ಬಂದ ಮರಕ್ಕೆ ಉಪಚಾರ ಮಾಡದಿದ್ದರೆ, ಹಾಗೆಯೇ ಉದುರಿ ಬಿದ್ದ ಅಡಿಕೆಯನ್ನು ಸೂಕ್ತವಾಗಿ ವಿಲೇವಾರಿ ಮಾಡದಿದ್ದರೆ ಏನಾಗುತ್ತದೆ ಎಂಬುದು ಪ್ರತೀಯೊಬ್ಬ ಅಡಿಕೆ ಬೆಳೆಗಾರರಿಗೂ ತಿಳಿದಿರಬೇಕಾದ ವಿಷಯ.
ಕೊಳೆ ರೋಗ ಬಂದಿದೆ ಎಂದು ತಿಳಿಯುವುದು ಹೇಗೆ:
- ಕೊಳೆ ರೋಗ ಬಂದಿದೆ ಎಂದು ತಿಳಿಯುವುದು ಅಷ್ಟು ಸರಳ ವಿಷಯ ಅಲ್ಲ.
- ಅದು ಪ್ರಾರಂಭದಲ್ಲಿ ಅಡಿಕೆ ಕಾಯಿಗಳ ಒಳಗೆ ಹೋಗಿ ಅಲ್ಲಿ ಒಳ ಅಂಗಾಂಶಗಳನ್ನು ಹಾಳು ಮಾಡಿ ನಂತರ ಉದುರುವುದು.
- ಉದುರಿದ ಸಮಯಕ್ಕೆ ಕೊಳೆ ರೋಗ ಬಂದಾಗಿರುತ್ತದೆ.
- ಹಿಂದಿನವರು ಅಲ್ಲಲ್ಲಿ ಸಂಶಯ ಬಂದ ಮರದ ಕಾಂಡಕ್ಕೆ ಮೆಟ್ಟಿ ಅದು ಅಲ್ಲಾಡಿದಾಗ ಬಿದ್ದ ಕಾಯಿಯನ್ನು ಪರೀಕ್ಷಿಸಿ ಅದರ ಲಕ್ಷಣ ನೋಡಿ ಕೊಳೆ ಇದೆಯೇ ಇಲ್ಲವೇ ಎಂದು ಪರಿಶೀಲಿಸುತ್ತಿದ್ದರು.
- ಅ ಸಮಯಕ್ಕೆ ಅದು ಸಾಧ್ಯವಾಗುತ್ತಿತ್ತು.
- ಈಗ ಅದು ಎಲ್ಲರಿಗೂ ಸಾಧ್ಯವಿಲ್ಲ.
- ಅದಕ್ಕಾಗಿಯೇ ಕೊಳೆ ಬರಲಿ ಬಾರದೆ ಇರಲಿ, ಹವಾಮಾನ ನೋಡಿಕೊಂಡು ಗರಿಷ್ಟ 40 ದಿನಗಳ ಅಂತರದಲ್ಲಿ ಕೊಳೆ ಔಷಧಿ ಸಿಂಪಡಿಸುವುದೇ.
- ಕೊಳೆ ರೋಗ ಎಡೆ ಬಿಡದೆ ಮಳೆ ಬರುತ್ತಿರುವಾಗ ಬರುವುದಕ್ಕಿಂತ ಹೆಚ್ಚು, ಮಳೆ ಬಿಸಿಲು ಬರುವ ಸಮಯದಲ್ಲಿ ಬರುವುದೇ ಹೆಚ್ಚು.
- ಇದನ್ನು ನಾವೆಲ್ಲಾ ಸೂಕ್ಷ್ಮವಾಗಿ ಗಮನಿಸಬಹುದು.
- ಬಹುತೇಕ ಎಲ್ಲಾ ಅಡಿಕೆ ಬೆಳೆಗಾರರಲ್ಲಿ ಕೊಕ್ಕೋ ಗಿಡ ಇರುತ್ತದೆ.
- ಮಳೆಗಾಲದಲ್ಲಿ ಕೊಳೆಯದ ಕೋಡುಗಳು ಮಳೆ ನಿಂತು ದಿನಕ್ಕೆ ಒಂದೆರಡು ಮಳೆ ಬೀಳುವ ದಿನಗಳಲ್ಲಿ ಕೊಳೆಯಲು ಪ್ರಾರಂಭವಾಗುತ್ತದೆ.
- ಇದೂ ಒಂದು ಶಿಲೀಂದ್ರವಾಗಿದ್ದು, ಶಿಲೀಂದ್ರಗಳ ಬೆಳವಣಿಗೆಗೆ ಇದೇ ಹವಾಮಾನ ಸೂಕ್ತ ಎಂಬುದರ ಚಿತ್ರಣವನ್ನು ಕೊಡುತ್ತದೆ.
- ಆದ ಕಾರಣ ಕೊಳೆ ರೋಗದ ಬಗ್ಗೆ ಬಹಳ ಜಾಗರೂಕತೆಯಲ್ಲಿ ಇರಬೇಕಾದದ್ದು, ಮಳೆ ಬಿಸಿಲು ಬರುವ ದಿನಗಳಲ್ಲಿ.
- ಕೊಳೆ ರೋಗ ಬಂದು ಉದುರಬೇಕೆಂದೇನೂ ಇಲ್ಲ.
- ಕೆಲವೊಮ್ಮೆ ಅದು ಉದುರದೆ ಅಲ್ಲಿಯೇ ಒಣಗಿರುತ್ತದೆ.
- ಇದನ್ನು ಒಣ ಕೊಳೆ ಎಂಬುದಾಗಿಯೂ ಕರೆಯುವುದಿದೆ.
- ಸಾಮಾನ್ಯವಾಗಿ ಫೈಟೋಪ್ಥೆರಾ ಶಿಲೀಂದ್ರ ಎರಡು ಮೂರು ಗಂಟೆಗಳ ಕಾಲ ನೇರ ಬಿಸಿಲು ಬಿದ್ದಾಗ ಸತ್ತು ಹೋಗುತ್ತದೆ ಎಂಬುದಾಗಿ ಹೇಳಲಾಗುತ್ತದೆ.
ಪದೇ ಪದೇ ಕೊಳೆ ಬರುವುದಕ್ಕೆ ಕಾರಣ:
- ಕೊಳೆ ರೋಗದ ಶಿಲೀಂದ್ರ ಬೀಜಾಣು ರೂಪದಲ್ಲಿ ಮಣ್ಣಿನಲ್ಲಿ ಸುಪ್ತಾವಸ್ಥೆಯಲ್ಲಿ ಇರುತ್ತದೆ.
- ತೇವಾಂಶ ದೊರೆತಾಗ ಅದು ಮೊಳಕೆಯೊಡೆಯುತ್ತದೆ.
- ಸಾಮಾನ್ಯವಾಗಿ ಅಡಿಕೆ ತೋಟಗಳಲ್ಲಿ ಬೇಸಿಗೆಯ ಸಮಯದಲ್ಲಿ ನೀರಾವರಿ ಮಾಡುತ್ತಿರುವ ಕಾರಣ ಅದು ಜೀವಂತವಾಗಿ ಇರುವ ಸಾಧ್ಯತೆ ಹೆಚ್ಚು.
- ಅನುಕೂಲಕರ ವಾತಾವರಣ ಲಭ್ಯವಾಗುವ ತನಕ ಅವು ನೆಲದಲ್ಲಿ ಇದ್ದು, ಅನುಕೂಲ ಸಿಕ್ಕಾಗ ಅವು ಗಾಳಿ, ನೀರು ಮತ್ತು ವಾಹಕಗಳ ಮೂಲಕ ಪ್ರಸಾರವಾಗುತ್ತದೆ.
- ಕೆಲವರು ಸೊಳ್ಳೆಗಳು ಹೆಚ್ಚಾದರೆ ಕೊಳೆ ಬರುತ್ತದೆ ಎನ್ನುವುದು ಇದಕ್ಕೆ.
- ಸೊಳ್ಳೆಗಳು ವಾಹಕಗಳಾಗಿ ಶಿಲೀಂದ್ರಗಳನ್ನು ಪ್ರಸಾರ ಮಾಡುತ್ತವೆ.
- ನೆಲದಲ್ಲಿ ಬಿದ್ದ ಕೊಳೆ ಅಡಿಕೆಯನ್ನು ಹೆಕ್ಕದೆ ಹಾಗೆ ಬಿಟ್ಟರೆ, ಶಿಲೀಂದ್ರದ ಬೀಜಾಣುಗಳು ನೆಲದಲ್ಲಿ ಉಳಿದು ವರ್ಷ ವರ್ಷವೂ ಕೊಳೆ ಔಷಧಿ ಸಿಂಪಡಿಸಿದಾಗಲೂ ಕೊಳೆ ಬರುವ ಸಾಧ್ಯತೆ ಇರುತ್ತದೆ.
ಶಿರ ಕೊಳೆ ಮತ್ತು ಬುಡ ಕೊಳೆಗೆ ಕಾರಣ:
- ಮಳೆಗಾಲದಲ್ಲಿ ಉದುರಿದ ಅಡಿಕೆ ನೆಲಕ್ಕೆ ಬಿದ್ದಾಗ ನೆಲದಲ್ಲಿರುವ ಶಿಲೀಂದ್ರದಿಂದ ಸೋಂಕಿಗೆ ಒಳಗಾಗಿ ಕೊಳೆ ರೋಗ ಬಾಧಿತವಾಗುತ್ತದೆ.
- ಕೊಳೆ ರೋಗಕ್ಕೆ ತುತ್ತಾಗಿ ಉದುರಿದ ಅಡಿಕೆಯೂ ಬುಡದಲ್ಲೇ ಇರುತ್ತದೆ.
- ಮರದ ಮೇಲಿಗಿಂತಲೂ ಬುಡದಲ್ಲಿ ಇದಕ್ಕೆ ಸಂಖ್ಯಾಭಿವೃದ್ದಿಯಾಗಲು ಅನುಕೂಲ ಹೆಚ್ಚು.
- ಮಳೆಗಾಲ ಮುಗಿದ ಮೇಲೆ ಆ ಶಿಲೀಂದ್ರ ಮೇಲಿನ ಅಡಿಕೆ ಗೊಂಚಲುಗಳಿಗೆ ಹರಡಲು ಒಣ ವಾತಾವರಣ ಅಡ್ದಿಯಾಗಬಹುದು.
- ಆದರೆ ಬುಡಭಾಗದಲ್ಲಿ ಸಾಕಷ್ಟು ತೊಂದರೆ ಮಾಡುತ್ತವೆ.
- ಇತ್ತೀಚಿನ ದಿನಗಳಲ್ಲಿ ಕನಿಷ್ಟ ವರ್ಷಕ್ಕೆ ನಾಲ್ಕಾರು ಮರ, ಗಿಡಗಳಾದರೂ ಎಲೆ ಹಳದಿಯಾಗಿ ಒಣಗುವ ಸಮಸ್ಯೆ ಬಹುತೇಕ ಎಲ್ಲಾ ಅಡಿಕೆ ಬೆಳೆಗಾರರಲ್ಲೂ ಕಂಡು ಬರುತ್ತದೆ.
- ಇದಕ್ಕೆ ಕಾರಣ ಕೊಳೆ ರೋಗಕ್ಕೆ ಕಾರಣವಾದ ಶಿಲೀಂದ್ರ. ಈ ಶಿಲೀಂದ್ರ ಕಾಯಿಗೆ ಮಾತ್ರ ಅಲ್ಲ, ಬುಡದ ಬೇರುಗಳನ್ನೂ (Foot rot) ಕೊಳೆಯುವಂತೆ ಮಾಡುತ್ತದೆ.
- ಬೇರುಗಳ ಮೂಲಕ ಅದು ಅಡಿಕೆ ಮರದ ಶಿರಭಾಗಕ್ಕೂ ಅಂಗಾಂಶಗಳ ಮೂಲಕ ಹರಡುತ್ತದೆ.
- ಸುಳಿ ಕೊಳೆಯುವ ರೋಗ ಕಾಣಿಸುತ್ತದೆ.
- ಅಡಿಕೆ ಮರದ ಶಿರಭಾಗದಲ್ಲಿ ಕೆಳ ಭಾಗದ ಎಲೆಗಳು ಹಳದಿಯಾಗಿ ಒಣಗುತ್ತಾ ಬಂದು ಕ್ರಮೇಣ ಸುಳಿ ಸಮೇತ ಹಳದಿಯಾಗುವುದಿದ್ದರೆ ಅದು ಬುಡ ಭಾಗದ ಬೇರು ಕೊಳೆ ಶಿಲೀಂದ್ರದ ಕಾರಣದಿಂದ.
- ಬೇರು ಕೊಳೆ ಬರುವುದು ಫೈಟೋಪ್ಥೆರಾ ಶಿಲೀಂದ್ರದ ಸೋಂಕಿನಿಂದ.
- ಸುಳಿಯ ಭಾಗ ಕೊಳೆಯುವುದು ಗಾಳಿಯ ಮೂಲಕ ಶಿಲೀಂದ್ರ ಪ್ರಸಾರ ಆಗುವುದರಿಂದ.
ಇದು ನಿರಂತರ ಸಮಸ್ಯೆ:
- ಒಮ್ಮೆ ಕೊಳೆ ರೋಗ ಬಂದರೆ ಆ ತೋಟದಲ್ಲಿ ರೋಗದ ಸಾಧ್ಯತೆ ಬಗ್ಗೆ ಯಾವಾಗಲೂ ಎಚ್ಚರಿಕೆಯಲ್ಲಿ ಇರಬೇಕು.
- ಹಾಗೆಯೇ ಒಂದು ಅಡಿಕೆ ಮರ ಸತ್ತರೆ ಅದರ ಅವಶೇಷಗಳನ್ನು ಸಂಪೂರ್ಣವಾಗಿ ತೆಗೆದು ಉಪಚಾರ ಮಾಡದೆ ಇದ್ದರೆ ಅದರ ಪಕ್ಕದ ಮರಗಳಿಗೆ ಈ ರೋಗ ಹರಡುತ್ತದೆ.
- ಸುಳಿಕೊಳೆ ರೋಗವೂ ಹಾಗೆಯೇ.
- ಅದು ಸಹ ಸಮರ್ಪಕ ನಿರ್ಮೂಲನೆ ಮಾಡದೆ ಇದ್ದರೆ ಅದು ಬೇರೆ ಮರಕ್ಕೂ ಹರಡುತ್ತದೆ.
- ಇದಕ್ಕೆಲ್ಲಾ ಒಂದು ಕಾರಣ ನಾವು ನೆಲಕ್ಕೆ ಬಿದ್ದ ಅಡಿಕೆಯನ್ನು ಹೆಕ್ಕದೆ ಅಲ್ಲೇ ಬಿಡುವುದು.
- ರೋಗ ನಿರ್ಮೂಲನೆಗೆ ರಾಸಾಯನಿಕ ಶಿಲೀಂದ್ರ ನಾಶಕ ಬಳಕೆ ನಂತರದ ಪರಿಹಾರ.
- ಆದರೆ ಮೊದಲ ಮುನ್ನೆಚ್ಚರಿಕೆ ಬಿದ್ದ ಅಡಿಕೆಯನ್ನು ಹೆಕ್ಕುವುದು.
- ಬಿದ್ದ ಅಡಿಕೆ ಹೆಕ್ಕದೆ ಯಾವುದೇ ಉಪಚಾರ ಮಾಡಿದರೂ ಅದು ನೆಗಡಿ ಇದ್ದವರು ತಂಪು ಪಾನೀಯ ಸೇವಿಸಿ ಮದ್ದು ತೆಗೆದುಕೊಂಡಂತೆ.
ಕೊಳೆ ರೋಗ ಬಂದಿದ್ದರೆ ಆ ಮರದ ಬುಡದಲ್ಲಿ ಬಿದ್ದ ಅಡಿಕೆ ಸಣ್ಣದಿರಲಿ, ದೊಡ್ಡದಿರಲಿ, ಯಾವುದನ್ನೂ ಅಲ್ಲಿ ಉಳಿಸಬೇಡಿ. ಹೆಕ್ಕಿ ಒಣಗಿಸಿ. ಮರವೊಂದು ಸತ್ತು ಹೋಗಿದೆ ಎಂದು ಅದನ್ನು ಹಾಗೇ ಬಿಡಬೇಡಿ. ಅದರ ಕೊಳೆತಕ್ಕೆ ಕಾರಣವಾದ ಶಿಲೀಂದ್ರ ಮಣ್ಣಿನ ತೇವಾಂಶದ ಮೂಲಕ ಬೇರೆ ಮರಗಳಿಗೂ ಹಬ್ಬಬಹುದು. ಮಳೆ ಕಳೆದ ತಕ್ಷಣ ನೀರಾವರಿ ಪ್ರಾರಂಬಿಸದೆ, ಚಳಿಗಾಲ ಪ್ರಾರಂಭವಾಗಿ ಒಂದು ವಾರ ಕಳೆದ ನಂತರ ನೆಲದ ಮೇಲ್ಭಾಗ ಒಣಗಿದ ನಂತರ ನೀರಾವರಿ ಪ್ರಾರಂಭಿಸಿದರೆ ಶಿಲೀಂದ್ರಗಳು ಸ್ವಲ್ಪ ಕಡಿಮೆ ಆಗಬಹುದು.
ನೆಲದಲ್ಲಿ ಸಮಾನ್ಯವಾಗಿ ಶಿಲೀಂದ್ರಕ್ಕೆ ಪ್ರತಿರೋಧ ಒಡ್ಡುವ ಮತ್ತೊಂದು ಶಿಲೀಂದ್ರ ಇದ್ದೇ ಇರುತ್ತದೆ. ಆದ ಕಾರಣ ಭಾರೀ ಹಾನಿ ಉಂಟಾಗುವುದಿಲ್ಲ. ಟ್ರೈಕೋಡರ್ಮಾ VAM ಮುಂತಾದ ಶಿಲೀಂದ್ರಗಳನ್ನು ಮಣ್ಣಿಗೆ ಸೇರಿಸುವುದರಿಂದ ರೋಗ ನಿಯಂತ್ರಣಕ್ಕೆ ಅನುಕೂಲವಾಗುತ್ತದೆ.