ಬಿಸಿಲಿನ ಝಳ ಹೆಚ್ಚಾದಾಗ, ಶುಷ್ಕ ವಾತಾವರಣ ಸ್ಥಿತಿ ಇರುವಾಗ ಅಡಿಕೆ, ತೆಂಗಿನ ಗರಿಗಳು ಹಳದಿಯಾಗಿ ಭಾಗಶಃ ಒಣಗುವುದಕ್ಕೆ ಸರಳ ಪರಿಹಾರ ಇಲ್ಲಿದೆ.
ಯಾವಾಗಲೂ ಸಸ್ಯಗಳ ಎಲೆಗಳು ಹಸುರಾಗಿರಬೇಕು. ಆಗ ಅದರ ಉಸಿರಾಟ ನಡೆಸುವ ಅಂಗಗಳು (Stomata) ಚೆನ್ನಾಗಿ ಕೆಲಸ ಮಾಡುತ್ತದೆ. ಎಲೆಗಳ ಹಸುರು ಭಾಗ (ಪತ್ರ ಹರಿತ್ತು)ದಲ್ಲಿ ಈ ಸ್ಟೊಮಟಾ ಇರುತ್ತದೆ. ಹರಿತ್ತು ಕಡಿಮೆ ಅದಂತೆ ಸಸ್ಯ ಬೆಳವಣಿಗೆ ಕುಂಠಿತವಾಗುತ್ತದೆ. ಬಹುತೇಕ ಎಲೆಗಳು ಹಳದಿಯಾಗಿ ಒಣಗಿದರೆ ಮರ ಸಾಯಲೂ ಬಹುದು. ಇದಕ್ಕೆ ಕಾರಣ ಒಂದು ಬಿಸಿಲು. ಬಿಸಿಲಿನ ಜೊತೆಗೆ ಜೀವನ ನಡೆಸುವ ಮೈಟ್ ನಂತಹ ಕೀಟಗಳು. ಎಲೆ ಹಳದಿಯಾಯಿತೆಂದರೆ ಅಲ್ಲಿ ಮೈಟ್ ಹಾವಳಿ ಇದೆ ಎಂಬುದು ಖಾತ್ರಿ.
ಮೈಟ್ ಗಳು ಎಲ್ಲಿ ಇರುತ್ತವೆ:
- ಮೈಟ್ ಗಳು ಹೆಚ್ಚಾಗಿ ಶುಷ್ಕ ವಾತಾವರಣ ಇರುವಾಗ ಹಾಗೆಯೇ ತಾಪಮಾನ 34 -35 ಡಿಗ್ರಿ ಗಿಂತ ಮೇಲೆ ಹೋದಾಗ ಹೆಚ್ಚು ಚಟುವಟಿಕೆ ಹೊಂದುತ್ತವೆ.
- ಆದ ಕಾರಣ ಮಳೆಗಾಲ ಕಳೆದು ಚಳಿಗಾಲ ಬರುವಾಗ ಮತ್ತು ತೀವ್ರ ಬೇಸಿಗೆ ಕಾಲದಲ್ಲಿ ಈ ಮೈಟ್ ಹಾವಳಿ ಹೆಚ್ಚು.
- ಮೈಟ್ ಗಳು ಕಣ್ಣಿಗೆ ಕಾಣಿಸುವುದಿಲ್ಲ.
- ಆದಾಗ್ಯೂ ಮಸೂರದಲ್ಲಿ ಅಥವಾ ಉತ್ತಮ ಲೆನ್ಸ್ ಉಟ್ಟ ಕ್ಯಾಮರಾದಲ್ಲಿ ಚಿತ್ರ ತೆಗೆದು ಅದನ್ನು ಝೂಮ್ ಮಾಡಿದಾಗ ಆರು ಕಾಲುಗಳುಳ್ಳ ಹೇನು ಕಾಣಿಸುತ್ತದೆ.
- ಇದರಲ್ಲಿ ಬಿಳಿ ಮೈಟ್ ಮತ್ತು ಕೆಂಪು ಮೈಟ್ (Oligonychus indicus) ಎರಡು ಇರುತ್ತದೆ.
- ಬಿಳಿ ಕೆಂಪಿಗಿಂತ ಸಣ್ಣದಾಗಿರುತ್ತದೆ. ಎಲೆಯ ಅಡಿ ಭಾಗದಲ್ಲಿ ವಾಸಿಸಿ ರಸ ಹೀರುತ್ತವೆ.
- ಆಗ ಎಲೆಯ ಹರಿತ್ತು ನಾಶವಾಗುತ್ತದೆ. ಎಲೆ ಒಣಗಿ ಕಡ್ಡಿಗಳು ಮಾತ್ರ ಉಳಿಯುತ್ತವೆ.
- ಸುಳಿ ಭಾಗಕ್ಕೆ ಬಾದಿಸಿದಾಗ ಅದು ಒಣಗಿ ಹೋಗುತ್ತದೆ.
- ಸಸ್ಯಕ್ಕೆ ಅಗತ್ಯವಾಗಿ ಆಹಾರ ತಯಾರಿಸಿಕೊಡುವ ಭಾಗವು ಕಡಿಮೆಯಾದಂತೆ ಸಸ್ಯ ಸೊರಗುತ್ತದೆ.
ಇತ್ತೀಚಿನ ದಿನಗಳಲ್ಲಿ ಬರೇ ಕೆಂಪು, ಮತ್ತು ಬಿಳಿ ಮೈಟ್ ಮಾತ್ರವಲ್ಲದೆ ಬಿಳಿ ನೊಣಗಳೂ ಸಹ ಅಡಿಕೆ, ತೆಂಗಿನ ಗರಿಗಳಿಗೆ ತೊಂದರೆ ಮಾಡಲಾರಂಭಿಸಿವೆ.
ಪತ್ತೆ ಹೇಗೆ:
- ಸಸಿಗಳ ಎಲೆ ಹಳದಿ ಆಗಿದ್ದರೆ ಅದರ ಅಡಿ ಭಾಗಕ್ಕೆ ಬೆರಳಿನಿಂದ ಉಜ್ಜಿ.
- ಕೆಲವೊಮ್ಮೆ ಮೈಟ್ ಹಾವಳಿ ಹೆಚ್ಚಾಗಿದ್ದರೆ ಕೈಗೆ ಕೆಂಪು ಬಣ್ಣ ಮೆತ್ತಿಕೊಳ್ಳುತ್ತವೆ.
- ಬಿಳಿ ಮೈಟ್ ಆಗಿದ್ದರೆ ಸ್ವಲ್ಪ ಬೂದಿ ತರಹದ ಬಣ್ಣ ಮತ್ತು ಸ್ವಲ್ಪ ತೇವಾಂಶ ಬೆರಳಿಗೆ ಅಂಟಿ ಕೊಳ್ಳುತ್ತದೆ.
- ಬಿಳಿ ನೊಣ ಇದ್ದರೆ Rugous spiralling whitefly ಇದ್ದರೆ ಎಲೆಯ ಅಡಿ ಭಾಗದಲ್ಲಿ ಬಿಳಿ ಬಲೆಯಂತೆ ಇರುತ್ತದೆ.
- ಸೂಕ್ಷ್ಮ ವಾಗಿ ಗಮನಿಸಿದಾಗ ಅದರ ಒಳಗೆ ಬಿಳಿ ನೊಣಗಳು ಇರುತ್ತವೆ.
- ಎಲೆಗಳು ಬರೇ ಹಳದಿಯಾಗಿದ್ದರೆ ಅದು ಕೆಲವೊಮ್ಮೆ ಬಿಸಿಲಿನ ನೇರ ಹೊಡೆತದಿಂದಲೂ ಆಗಿರಬಹುದು.
ಎಲೆ ಹಳದಿಯಾಗಿ ಅಲ್ಲಲ್ಲಿ ಸುಟ್ಟಂತೆ ಕಲೆಗಳು ಇದ್ದರೆ ಅಥವಾ ಎಲೆಯ ಹಸುರು ಭಾಗ ಒಣಗಿ ಕಡ್ದಿಗಳು ಮಾತ್ರ ಇದ್ದರೆ ಅದು ಮೈಟ್ ತೊಂದರೆ ಎಂಬುದು ಖಾತ್ರಿ.
ನಿವಾರಣೆ ಕ್ರಮ:
- ಸಾಮಾನ್ಯವಾಗಿ ನಾವು ಇಲಿಯನ್ನು ಕೊಲ್ಲಲು ಹುಲಿ ಕೊಲ್ಲುವ ತಯಾರಿ ಮಾಡುತ್ತೇವೆ.
- ಅದು ಬೇಡ. ಇದಕ್ಕೆ ವಿಷ ರಾಸಾಯನಿಕ ಅಲ್ಲದ ಸೂಕ್ತ ಪರಿಹಾರ ಇದೆ.
- ವೆಟ್ಟೆಬಲ್ ಸಲ್ಫರ್ ಅಥವಾ ನೀರಿನಲ್ಲಿ ಕರಗುವ ಗಂಧಕವನ್ನು ಬಹುತೇಕ ಎಲ್ಲಾ ತರಹದ ಮೈಟ್ ಗಳ ನಿಯಂತ್ರಣಕ್ಕೆ ಬಳಕೆ ಮಾಡಲಾಗುತ್ತದೆ.
- ಅಡಿಕೆ ಒಂದೇ ಅಲ್ಲ. ತರಕಾರಿ ಬೆಳೆಗಳಲ್ಲೂ ಬೇರೆ ಬೇರೆ ಮೈಟ್ ಗಳು ತೊಂದರೆ ಮಾಡುತ್ತದೆ.
ಮೆಣಸಿನ ಎಲೆ ಮುರುಟಿಕೊಳ್ಳುವುದು, ಹತ್ತಿಯ ಎಲೆ ಮುರುರುಟುವುದು, ಬದನೆಯಲ್ಲಿ ಎಲೆ ಮುರುಟುವುದು ಇದೆಲ್ಲವೂ ಬೇರೆ ಬೇರೆ ಪ್ರಕಾರದ ಮೈಟ್ ಗಳ ತೊಂದರೆಯಾಗಿರುತ್ತದೆ. ಇದಕ್ಕೆಲ್ಲಾ ವೆಟ್ಟೆಬಲ್ ಸಲ್ಫರ್ ಉತ್ತಮ ಪರಿಹಾರ.ಇದು ವಿಷ ಅಲ್ಲ. ಗಂಧಕ ಇರದಲ್ಲಿ ಇರುವ ಅಂಶ. ಇದು ಕೆಲವು ತಿಗಣೆ ಜಾತಿಯ ಕೀಟಗಳು, ಬೂದಿ ( ಡೌನೀ ಮಿಲ್ಡಿವ್) ರೋಗ ಮುಂತಾದವುಗಳಿಗೆ ಇದು ಪರಿಣಾಮಕಾರಿಯಾಗಿರುತ್ತದೆ.
- 100 ಲೀ. ನೀರಿಗೆ 200 ಗ್ರಾಂ ನಷ್ಟು ವೆಟ್ಟೆಬಲ್ ಸಲ್ಫರ್ (Wetteble sulphur)ಹಾಕಿ ಎಲೆಯ ಅಡಿ ಭಾಗಕ್ಕೆ ಬೀಳುವಂತೆ ಸಿಂಪರಣೆ ಮಾಡಿದರೆ ಮೈಟ್ ಗಳು ಸಾಯುತ್ತವೆ.
- ಸಿಂಪರಣೆ ಸಮಯದಲ್ಲಿ ಅಡಿಕೆ ಹೂ ಗೊಂಚಲು ಇದ್ದರೆ ಅದಕ್ಕೂ ಸಿಂಪರಣೆ ಮಾಡಿದರೆ ಅನುಕೂಲವಾಗುತ್ತದೆ.
- ಈ ಔಷಧಿ ತುಂಬಾ ಅಗ್ಗ. ಇದಕ್ಕೆ ಬ್ರಾಂಡ್ ಹೊಂದಿ ಕಿಲೋ 150-175 ರೂ ತನಕ ಇರುತ್ತದೆ.
- ಇದನ್ನು ಸಿಂಪಡಿಸುವಾಗ ಮೈ ಉರಿ, ಕಣ್ಣು ಉರಿ, ಮುಂತಾದ ಕೀಟನಾಶಕ ಸಿಂಪರಣೆ ಮಾಡುವಾಗ ಆಗುವ ತೊಂದರೆಗಳು ಇರುವುದಿಲ್ಲ.
- ನೆಲಕ್ಕೆ ಬಿದ್ದರೆ ಅಲ್ಲಿರುವ ಹುಲ್ಲನ್ನು ಹಸುಗಳಿಗೆ ಮೇಯಲು ಕೊಡಬಹುದು.
- ಈ ಔಷಧಿ ತುಂಬಾ ಪರಿಣಾಮಕಾರಿಯಾಗಿದ್ದು, ಇದಕ್ಕೆ ಕೀಟಗಳು ನಿರೋಧಕ ಶಕ್ತಿಯನ್ನು ಪಡೆಯುವ ಸಾಧ್ಯತೆಯೂ ಇಲ್ಲ.
ಇದನ್ನು ಬಹಳ ಹಿಂದಿನಿಂದಲೂ ರೈತರು ಬಳಸುತ್ತಿದ್ದಾರೆ. ಕೃಷಿ ವಿಜ್ಞಾನಿಗಳೂ ಇದನ್ನು ಶಿಫಾರಸು ಮಾಡುತ್ತಾರೆ. ಮೈಟ್ ಗಳ ಕುರಿತಾಗಿ ಹೇಳುವುದಾದರೆ ಒಂದು ಮಳೆ ಬಂದರೆ ಸಾಕು ಅವು ನಾಪತ್ತೆಯಾಗುತ್ತವೆ. ಇದಕ್ಕೆ ಕೆಲವು ಪರಭಕ್ಷಕ ಕೀಟಗಳು ಇರುತ್ತವೆ. ವಿಷ ರಾಸಾಯನಿಕ ಬಳಕೆ ಮಾಡಿದಾಗ ಅವು ನಾಶವಾಗುತ್ತದೆ. ಹಾಗಾಗಿ ಮತ್ತೆ ಮತ್ತೆ ಮೈಟ್ ಬಾಧೆ ಹೆಚ್ಚಾಗುತ್ತದೆ.