ಹೆಚ್ಚಾಗಿ ಮಾವಿನ ಕಾಯಿ ಹಣ್ಣು ಮಾಡಲು ಹಿಂದಿನಿಂದಲೂ ಕ್ಯಾಲ್ಸಿಯಂ ಕಾರ್ಬೇಟ್ ಎಂಬ ಅಪಾಯಕಾರೀ ವಸ್ತುವನ್ನು ಬಳಸಲಾಗುತ್ತಿತ್ತು. ಈಗ ಹಾಗಿಲ್ಲ. ಅದರ ಬದಲಿಗೆ ಅರೋಗ್ಯಕ್ಕೆ ಹಾನಿ ಇಲ್ಲದ ಹಣ್ಣು ಮಾಡುವ ವಿಧಾನವನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯವರು ಬೆಳೆಗಾರರಿಗೆ ತಿಳಿಸಿಕೊಟ್ಟಿದ್ದಾರೆ. ಇದನ್ನು ಬಹಳಷ್ಟು ಬೆಳೆಗಾರರು ಅಳವಡಿಸಿಕೊಂಡಿದ್ದಾರೆ.
- ನಮ್ಮ ರಾಜ್ಯದ ಮಾವಿನ ರಾಜದಾನಿ ಎಂದೇ ಖ್ಯಾತವಾದ ಶ್ರೀನಿವಾಸಪುರದಿಂದ ಸಂಜೆ ಹೊತ್ತು ಲಾರಿಗೆ ಲೊಡ್ ಆದ ಮಾವು ಮರುದಿನ ತಲುಪಬೇಕಾದಲ್ಲಿಗೆ ತಲುಪುವಾಗ ಮೆತ್ತಗಾಗುತ್ತದೆ.
- ಅದನ್ನು ಖರೀದಿಸಿವರು ಮರುದಿನ ಮಾರಾಟ ಮಾಡುವಾಗ ಬಣ್ಣ ಬಂದಿರುತ್ತದೆ.
- ಆಕರ್ಷಕ ಬಣ್ಣ ನೋಡಿ ಜನ ಮಾವನ್ನು ಮುಗಿ ಬಿದ್ದು ಖರೀದಿ ಮಾಡುತ್ತಾರೆ.
- ಹೀಗೆ ಹಣ್ಣಾಗಬೇಕಾದರೆ ಇವರು ಒಂದು ಅಂತಸ್ತು ಮಾವು ಅದರ ಮೇಲೆ ಸ್ವಲ್ಪ ಕ್ಯಾಲಿಸಿಯಂ ಕಾರ್ಬೇಟ್ ಪುಡಿ ಚೆಲ್ಲುತ್ತಾರೆ.
- ಮತ್ತೆ ಒಂದು ಅಂತಸ್ತು ಮಾವು ಹೀಗೆ ಮೂರು ಅಂತಸ್ತಿನಲ್ಲಿ ಮಾವು ತುಂಬಿ ಅದಕ್ಕೆ ಒಂದಷ್ಟು ಕ್ಯಾಲ್ಸಿಯಂ ಕಾರ್ಬೇಟ್ ಸುರಿಯಲಾಗುತ್ತದೆ.
- ಇದು ಮಾವಿನ ಕಾಯಿ ತುಂಬಲ್ಪಟ್ಟ ರಾಸಿಯಲ್ಲಿ ಬೆವರುವಿಕೆ ಉಂಟಾದಾಗ ಅನಿಲವನ್ನು ಉತ್ಪಾದಿಸುತ್ತದೆ.
- ಈ ಅನಿಲ ಹಣ್ಣುಗಳನ್ನು ತ್ವರಿತವಾಗಿ ಹಣ್ಣು ಮಾಡುವಂತದ್ದು.
ಈ ವ್ಯವಸ್ಥೆ ಆಲ್ಲದೆ ಬೇರೆ ವ್ಯವಸ್ಥೆ ಇಲ್ಲದ ಕಾರಣ ಇದನ್ನು ಮಾಡುತ್ತಿದ್ದರು. ಇದರ ಅಪಾಯ ವನ್ನು ಮನಗಂಡ ವಿಜ್ಞಾನಿಗಳು ಅದಕ್ಕೊಂದು ಪರಿಹಾರವನ್ನು ಹುಡುಕಿಯೇ ಬಿಟ್ಟರು. ಅದು ಇಥೆಲಿನ್ ಬಳಸಿ ಮಾವನ್ನು ಹಣ್ಣು ಮಾಡುವುದು. ಕರುನಾಡ ಮಾವು ಎಂಬ ಹೆಸರಿನಲ್ಲಿ ದೊರೆಯುವ ಮಾವು ಹೀಗೆ ರಾಸಾಯನಿಕ ರಹಿತವಾಗಿ ಹಣ್ಣು ಮಾಡಿದ್ದು.
ಸುರಕ್ಷಿತ ವಿಧಾನ:
- ಎಥ್ರೇಲ್ ಅಥವಾ ಎಥಿಫೋನ್ ಎಂಬ ಉತ್ತೆಜಕವನ್ನು ಬೇರೆ ಬೇರೆ ಬಳಕೆಗೆ ಬೇರೆ ಬೇರೆ ಸಾಂದ್ರತೆಯಲ್ಲಿ ಉಪಯೋಗಿಸಬಹುದು.
- ಇದನ್ನು ಹೂ ಬರಿಸುವುದಕ್ಕೆ ಬಳಕೆ ಮಾಡುತ್ತಾರೆ. ರಬ್ಬರ್ ಮರಗಳಲ್ಲಿ ಹೆಚ್ಚು ಹಾಲು ಉತ್ಪಾದನೆಗೂ ಬಳಕೆ ಮಾಡುತ್ತಾರೆ.
- ಹಾಗೆಯೇ ಹಣ್ಣು ಮಾಡಲೂ ಸಹ ಬಳಕೆ ಮಾಡುತ್ತಾರೆ.
- ಇಥ್ರೇಲ್ ಎಂಬುದು ಒಂದು ಅನಿಲ. ದ್ರಾವಣ ರೂಪದಲ್ಲಿರುವ ಈ ರಾಸಾಯನಿಕದಿಂದ ಅನಿಲವನ್ನು ಹೊರಸೂಸುವಂತೆ ಮಾಡಿ , ಆ ಅನಿಲವನ್ನು ನಿರ್ವಾತ ಮನೆಯೊಳಗಿನಿಂದ ಹೊರ ಹೋಗದಂತೆ ತಡೆದರೆ ಅದು ಕಾಯಿಯನ್ನು ಹಣ್ಣು ಮಾಡುತ್ತದೆ.
- ಇದಕ್ಕೆ ಹಣ್ಣುಗಳ ಪ್ರಮಾಣಕ್ಕನುಗುಣವಾಗಿ ಬೇರೆ ಬೇರೆ ಗಾತ್ರದ ಮನೆಯನ್ನು ಮಾಡಿಕೊಳ್ಳಬೇಕಾಗುತ್ತದೆ.
- ಗಾಳಿ ಹೊರ ಹೋಗದಂತಹ ಮನೆಯನ್ನೂ ಸಹ ಇದಕ್ಕಾಗಿ ಬಳಸಬಹುದು. ಪಾಲಿಥನ್ ಟೆಂಟ್ ಸಹ ಸೂಕ್ತ.
ಹಣ್ಣು ಮಾಡುವ ವಿಧಾನ:
- ಹಣ್ಣು ಮಾಡಬೇಕಾದ ಎಲ್ಲಾ ಮಾವಿನ ಹಣ್ಣುಗಳನ್ನು ಪ್ಲಾಸ್ಟಿಕ್ ಕ್ರೇಟುಗಳಲ್ಲಿ ಭತ್ತದ ಹುಲ್ಲು ಹಾಕಿ ಇಡಬೇಕು.
- ಎಲ್ಲಾ ಕಾಯಿಗಳು ತುಂಬಿದ ಕ್ರೇಟುಗಳನ್ನು ಒಟ್ಟು ಅಟ್ಟಿ ಜೋಡಿಸಬೇಕು.
- ಮನೆಯ ಎಲ್ಲಾ ಕಿಟಕಿ ಬಾಗಿಲುಗಳನ್ನು ಗಾಳಿ ಒಳಗೂ ಹೊರಗೂ ಹೋಗದಂತೆ ರಟ್ಟು ಇತ್ಯಾದಿ ಇಟ್ಟು ಭದ್ರ ಪಡಿಸಬೇಕು.
- ಮನೆ ಎಷ್ಟು ದೊಡ್ಡದಿದೆ ಅ ಅವಕಾಶಕ್ಕನುಗುಣವಾಗಿ ಎಥ್ರೇಲ್ ಬಳಸಬೇಕಾಗುತ್ತದೆ.
- ಅಂದರೆ ಅಷ್ಟು ಸ್ಥಳಾವಕಾದೊಳಗೆ ಅನಿಲ ಪ್ರಸಾರವಾಗಬೇಕು.
- ಒಂದು ಚದರ ಮೀಟರು ವಿಸ್ತೀರ್ಣಕ್ಕೆ 2 ಮಿಲಿ ಲೀ. ಎಥ್ರೇಲ್ ಎಂಬುದು ಪ್ರಮಾಣ.
- ಒಂದು ಬಕೆಟ್ ಒಳಗೆ ಅರ್ಧ ಪಾಲು ನೀರು ಮತ್ತು 1 ಮಿಲಿ ಲೀ, ಎಥ್ರೇಲ್ ಗೆ ೦.25 ಗ್ರಾಂ ಅಡುಗೆ ಸೋಡಾ (ಸೋಡಿಯಂ ಹೈಡ್ರಾಕ್ಸೈಡ್ )ಪ್ರಮಾಣದಲ್ಲಿ ಹಾಕಿ.
- ಅದಕ್ಕೆ ನಿರ್ಧರಿತ ಪ್ರಮಾಣದ ಎಥ್ರೇಲ್ ಅನ್ನು ಹಾಕಿದಾಗ ಅದು ಸೊಡಾ ಬಾಟಲಿ ಓಪನ್ ಮಾಡಿದಾಗ ಗ್ಯಾಸ್ ಹೊರಬಂದಂತೆ ಉಕ್ಕುತ್ತದೆ.
- ಆಗ ಅದರಲ್ಲಿ ಒಂದು ಅನಿಲ ಹೊರ ಬರುತ್ತದೆ.
- ಎಥ್ರೇಲ್ ಹಾಕುವ ಸ್ಥಳ ಬಾಗಿಲಿನ ಪಕ್ಕ ಆಗಿರಬೇಕು. ಅದನ್ನು ಹಾಕಿದ ತಕ್ಷಣ ಬಾಗಿಲನ್ನು ಮುಚ್ಚಿ ಬಿಡಬೇಕು. ಬಾಗಿಲು ಸಹ ಗಾಳಿ ಒಳ ಹೊರಗೆ ಹೋಗದಂತೆ ಇರಬೇಕು.
ಎಷ್ಟು ಸಮಯ ಬೇಕು:
- ಮನೆಯೊಳಗೆ ಸುಮಾರು 24ಗಂಟೆಗಳ ತನಕ ಬಾಗಿಲನ್ನು ತೆರೆಯಬಾರದು. ಅದಾದ ತರುವಾಯ ಬಾಗಿಲನ್ನು ತೆಗೆದು ಕೊಠಡಿಯ ಸಾಮಾನ್ಯ ಉಷ್ಣತೆಯಲ್ಲಿ ಇಟ್ಟಾಗ ಕಾಯಿಗಳು ಹಣ್ಣಾಗಲು ಪ್ರಾರಭವಾಗುತ್ತದೆ. ಕೊಠಡಿಯ ಉಷ್ಣತೆ 18-24 ಡಿಗ್ರಿ ತನಕ ಇರಬೇಕು. ಹೆಚ್ಚಾದರೆ ಕಾಯಿಗಳು ಹಣ್ಣಾಗುವಾಗ ಕೊಳೆಯಬಹುದು. ಎಥ್ರೇಲ್ ಅನಿಲ ಹರಿಸಿ ಹಣ್ಣು ಮಾಡಿದವು ಹೊರ ವಾತಾವರಣಕ್ಕೆ ತಂದ ನಂತರ 4-5 ದಿನದಲ್ಲಿ ಪೂರ್ತಿಯಾಗಿ ಹಣ್ಣಾಗುತ್ತದೆ. ನಮ್ಮ ಸಾಂಪ್ರದಾಯಿಕ ವಿಧಾನದಲ್ಲಿ 8-10 ದಿನ ಬೇಕಾಗುತ್ತದೆ. ಹಣ್ಣಿಗೆ ಉತ್ತಮ ಬಣ್ಣ ಬರುತ್ತದೆ. ತಿನ್ನುವವರಿಗೆ ಯಾವುದೇ ಹಾನಿ ಇರುವುದಿಲ್ಲ.
ಯಾವುದನ್ನು ಹಣ್ಣು ಮಾಡಬಹುದು:
ಈ ವ್ಯವಸ್ಥೆ ಎಲ್ಲಾ ನಮೂನೆಯ ಹಣ್ಣುಗಳನ್ನೂ ಹಣ್ಣು ಮಾಡಬಹುದಾದುದು. ಪಪ್ಪಾಯ, ಬಾಳೆ ಹಣ್ಣು, ಸಪೋಟಾ ಎಲ್ಲವನೂ ಇದರಲ್ಲಿ ಹಣ್ಣು ಮಾಡಬಹುದು. ಡೆಸೆಬ್ ಕೂಲರ್ ಹಾಕಿ ಬಾಳೆ ಕಾಯಿ ಹಣ್ಣು ಮಾಡಿದಾಗ ತೂಕ ಕಡಿಮೆಯಾಗುವ ಸಮಸ್ಯೆ ಇರುವುದಿಲ್ಲ. ಇದು ದೊಡ್ದ ಖರ್ಚಿನ ಬಾಬ್ತು ಅಲ್ಲ. ಆದುದರಿಂದ ಎಲ್ಲರೂ ಇದನ್ನು ಪಾಲಿಸಬಹುದು. ಇದರ ಇನ್ನೋಂದು ಸರಳ ವ್ಯವಸ್ಥೆ ಎಂದರೆ ಪಾಲಿಥೀನ್ ಲಕೋಟೆಯ ಒಳಗೆ ಹಣ್ಣುಗಳನ್ನು ಹುಲ್ಲು ಹಾಕಿ ಇಟ್ಟು ಒಳಗೆ ಒಂದು ಸಣ್ಣ ತುಂಡು ಊದು ಕಡ್ಡಿಯನ್ನು ಉರಿಸಿಡುವುದು. ಸುಮಾರು 1-2 ನಿಮಿಷ ಕಾಲ ಅದರ ಹೊಗೆ ಒಳಗೆ ತುಂಬಿದ ತಕ್ಷಣ ಬಾಯಿಯನ್ನು ಕಟ್ಟಬೇಕು. 24 ಗಂಟೆ ತರುವಾಯ ಬಾಯಿ ಬಿಡಿಸಿ, ಸಾಮಾನ್ಯ ಉಷ್ಟತೆಯಲ್ಲಿ ಬಿಡಿಸಿಟ್ಟರೆ ಅದೂ ಸಹ ಹಣ್ಣಾಗುತ್ತದೆ.
ಕ್ಯಾಲ್ಸಿಯಂ ಕಾರ್ಬೇಟ್ ತಾಗಿದ ಹಣ್ಣು ಕ್ಯಾನ್ಸರ್ ಕಾರಕವಾಗುತ್ತದೆ. ಅದನ್ನು ಬಳಸಿದವರಿಗೂ ಅದು ಚರ್ಮಕ್ಕೆ ಹಾನಿಕಾರಕ. ಆದ ಕಾರಣ ಗ್ರಾಹಕರಿಗೆ ಮತ್ತು ಬೆಳೆಗಾರರಿಗೂ ಆರೋಗ್ಯಕ್ಕೆ ಈ ವಿಧಾನ ಕ್ಷೇಮಕರ.