ಕೊಟ್ಟಿಗೆ ಗೊಬ್ಬರದಲ್ಲಿ Farm Yard Manure ಉತ್ತಮ ಪೊಷಕಾಂಶಗಳಿದ್ದರೂ ಆದರ ಪೂರ್ಣ ಪ್ರತಿಫಲವನ್ನು ನಾವು ಪಡೆಯಲಾಗುತ್ತಿಲ್ಲ. ಅದಕ್ಕೆ ಕಾರಣ ಈ ಗೊಬ್ಬರವನ್ನು ನಾವು ಸರಿಯಾಗಿ ದಾಸ್ತಾನು ಮಾಡುವುದಿಲ್ಲ. ಸರಿಯಾದ ವಿಧಾನದಲ್ಲಿ ಬಳಕೆಯನ್ನೂ ಮಾಡುವುದಿಲ್ಲ. ಕೊಟ್ಟಿಗೆ ಗೊಬ್ಬರದ ವಿಚಾರದಲ್ಲಿ ತಾತ್ಸಾರ ಬೇಡ. ಅದರಲ್ಲಿ ಸತ್ವಗಳು ಕಡಿಮೆಯಾದರೂ ಅದರ ಗುಣಕ್ಕೆ ಸರಿಸಾಟಿ ಇನ್ನೊಂದಿಲ್ಲ.. ಹಾಗಾಗಿ ಇದನ್ನು ಪೋಷಕಾಂಶ ನಷ್ಟವಾಗದಂತೆ ಸಂಗ್ರಹಿಸಬೇಕು ಮತ್ತು ಬಳಕೆ ಮಾಡಬೇಕು.
ಕೊಟ್ಟಿಗೆ ಗೊಬ್ಬರ (ತಿಪ್ಪೆ ) ಎಂಬುದು ನಮ್ಮ ಹೊಲದಲ್ಲೇ ನಾವು ತಯಾರಿಸುವ ಗೊಬ್ಬರಕ್ಕೆ ಇಟ್ಟಿರುವ ಉತ್ತಮ ಹೆಸರು ಎನ್ನಬಹುದು. ಹಿಂದೆ ಕೊಟ್ಟಿಗೆಯಲ್ಲಿ ಹಸು- ಎಮ್ಮೆ ಹೋರಿ, ಕೋಣೆ ಸಾಕುತ್ತಿದ್ದರು. ಅವುಗಳ ಕಾಲಬುಡಕ್ಕೆ ಸೊಪ್ಪಿನ ಬೆಟ್ಟಗಳಿಂದ ಸೊಪ್ಪು ಸದೆ –ತರಗೆಲೆ ಇತ್ಯಾದಿಗಳನ್ನು ತಂದು ಹಾಕುತ್ತಿದರು. ಅದು ಒಂದು ಹಂತಕ್ಕೆ ಭರ್ತಿಯಾದ ತರುವಾಯ ಅದನ್ನು ತೆಗೆದು ಒಂದೆಡೆ ರಾಶಿ ಹಾಕುತ್ತಿದ್ದರು ಅಥವಾ ಅದನ್ನೇ ಒಯ್ದು ಬೆಳೆಗಳ ಬುಡಕ್ಕೆ ಹಾಕುತ್ತಿದ್ದರು. ಆ ಕಾರಣಕ್ಕೆ ಇದಕ್ಕೆ ಹಟ್ಟಿ ಗೊಬ್ಬರ ಎಂಬ ಹೆಸರಿಸಲಾಗಿದೆ. ಈ ಹೆಸರಿನ ಮೂಲಕ ನಮ್ಮ ಸಾಂಪ್ರದಾಯಿಕ ಗೊಬ್ಬರ ಸ್ವಾವಲಂಬನೆಯ ವಿಧಾನವು ತಲೆಮಾರಿಗೆ ನೆನಪಿಸುವಂತಾಗಿದೆ. ಈಗ ಈ ಕೊಟ್ಟಿಗೆ ಗೊಬ್ಬರ ತಯಾರಿಸುವ ವಿಧಾನ ಸ್ವಲ್ಪ ಬದಲಾವಣೆ ಕಂಡಿದೆ. ಪ್ರಾಣಿಗಳ ಕಾಲಿನ ಬುಡಕ್ಕೆ ಸೊಪ್ಪು ಸದೆ, ತರಗೆಲೆ ಹಾಕುವ ಪದ್ದತಿ ಕಷ್ಟ. ಹಾಗಾಗಿ ಸಗಣಿ ಕಸಕಡ್ಡಿಗಳನ್ನು ನಿತ್ಯವೂ ಬಾಚಿ ತೆಗೆದು ತೊಳೆಯುವ ಪದ್ದತಿ ಆಗಿದೆ. ಇಲ್ಲಿಯೂ ಸಿಗುವುದು ಹಟ್ಟಿ ಗೊಬ್ಬರ. ಇದರಲ್ಲಿ ಪ್ರಾಣಿಗಳು ತಿಂದ ಮೇವು ಮತ್ತು ಆಹಾರ ಇರುತ್ತದೆ. ಜೊತೆಗೆ ಮೇವಿನ ಉಳಿಕೆಗಳೂ ಇರುತ್ತವೆ. ಇದನ್ನೇ ನಾವು ಈಗ ಕೊಟ್ಟಿಗೆ ಗೊಬ್ಬರ ಎನ್ನುವುದು. ಇದನ್ನು ರಾಶಿ ಹಾಕುವಾಗ ಸೊಪ್ಪು ಸದೆ, ತರಗೆಲೆ, ಕಳೆ ಸಸ್ಯ ಇತ್ಯಾದಿಗಳನ್ನು ಸಮರ್ಪಕವಾಗಿ ಮಿಶ್ರಣ ಮಾಡಿದರೆ ಅದು ಕಾಲಿನಡಿಗೆ ಹಾಕಿ ತಯಾರಿಸಲಾದ ಗೊಬ್ಬರದಂತೆ ಆಗುತ್ತದೆ.
ಕೊಟ್ಟಿಗೆ (ಹಟ್ಟಿ)ಗೊಬ್ಬರವನ್ನು ಹೇಗೆ ತಯಾರಿಸಬೇಕು:
ಅನುಕೂಲ ಇದ್ದರೆ ಪ್ರಾಣಿಗಳ ಕಾಲಿನ ಅಡಿಗೆ ಸೊಪ್ಪು ಸದೆ ಹಾಕುವುದು ಉತ್ತಮ. ಬಹುಶಃ ಈ ಕಾಲಕ್ಕೆ ಅದು ಕಷ್ಟಸಾಧ್ಯ. ಹಸು ಸಾಕುವುದೇ ಕಷ್ಟವಾಗಿರುವಾಗ ಇದೆಲ್ಲಾ ಹೇಗೆ ಮಾಡಲು ಸಾಧ್ಯ? ಕೃಷಿಕರಿಗೆ ಕಡಿಮೆ ವೆಚ್ಚದಲ್ಲಿ ಸ್ಥಳದಲ್ಲೇ ತಯಾರಿಸಬಹುದಾದ ಗೊಬ್ಬರ ಎಂದರೆ ಹಟ್ಟಿಗೊಬ್ಬರ. ಹಸು ಎಮ್ಮೆ ಸಾಕದವರು ಹೇಗಪ್ಪಾ ಕೊಟ್ಟಿಗೆ ಗೊಬ್ಬರ ಉತ್ಪಾದಿಸುವುದು ಎನ್ನುತ್ತೀರಾ? ಅವರೂ ಕೊಟ್ಟಿಗೆ ಗೊಬ್ಬರವನ್ನು ತಯಾರಿಸಬಹುದು. ಅದು ಅವರ ಹೊಲದಲ್ಲಿ ಲಭ್ಯವಾಗುವ ತ್ಯಾಜ್ಯಗಳನ್ನು ಒಂದೆಡೆ ವ್ಯವಸ್ಥಿತವಾಗಿ ಕಾಂಪೋಸ್ಟು ಮಾಡುವ ಮೂಲಕ. ಅದಕ್ಕೆ ಸಗಣಿ ಗೊಬ್ಬರ ಸೇರಿಸಬೇಕೆಂದೇನೂ ಇಲ್ಲ. ಅನುಕೂಲ ಇದ್ದರೆ ಖರೀದಿಸಿ ತಂದು ಮಿಶ್ರಣ ಮಾಡಬಹುದು. ಬೆಳೆ ತ್ಯಾಜ್ಯಗಳಾದ ಅಡಿಕೆ ಸೋಗೆ, ಹಾಳೆ, ಮರದ ಎಲೆ, ಹುಲ್ಲು ಕಳೆ ಇವುಗಳ ಸತ್ವಗಳೇ ಸಗಣಿಯಲ್ಲಿ ಇರುವುದು. ಸ್ವಲ್ಪ ಸಾರ ನಾವು ಕೊಡುವ ಪಶು ಆಹಾರದ ಮೂಲಕ ಸೇರಿರಬಹುದು. ಹಸು ಸಾಕಣೆ ಮಾಡದವರು ತಮ್ಮ ಹೊಲದಲ್ಲಿ ಸಿಗುವ ತ್ಯಾಜ್ಯಗಳನ್ನು ಮೆದು ತ್ಯಾಜ್ಯ, ಸ್ವಲ್ಪ ಗಟ್ಟಿ ತ್ಯಾಜ್ಯ ಇವುಗಳನ್ನು ಅಂತರ ಅಂತರದಲ್ಲಿ ಒಂದೆಡೆ ನೆಲದ ಮೇಲೆ ಅರೋಬಿಕ್ ಮಾದರಿಯಲ್ಲಿ ರಾಶಿ ಹಾಕಿ ಅದಕ್ಕೆ ಹರಳು ಹಿಂಡಿಯ ದ್ರಾವಣ- ನೆಲಕಡಲೆ ಹಿಂಡಿಯ ದ್ರಾವಣವನ್ನು ಚಿಮುಕಿಸಿ ಸುಮಾರು ಶೇ. 50 ರಷ್ಟು ತೇವಾಂಶವನ್ನು ಕಾಯ್ದುಕೊಂದರೆ (ಡ್ರಿಪ್ ಹಾಕಿದರೆ ಉತ್ತಮ) ಅದೂ ಕಳಿತು ಕೊಟ್ಟಿಗೆ ಗೊಬ್ಬರವೇ ಆಗುತ್ತದೆ. ಯಾವಾಗಲೂ ಗೊಬ್ಬರ ರಾಶಿ ಹಾಕಿದಲ್ಲಿ ಬಿಸಿಲು ಬೀಳಬಾರದು. ಅದಕ್ಕೆ ತೆಂಗಿನ ಗರಿ ಇಲ್ಲವೇ ಅಡಿಕೆ ಗರಿ ಅಥವಾ ನೆರಳು ಬಲೆಯಿಂದ ಮುಚ್ಚಬೇಕು. ಉತ್ತಮ ಅಂಟು ಮಣ್ಣು ಇದ್ದರೆ ಅದನ್ನೂ ಲೇಪಿಸಬಹುದು. ಆಗಾಗ ರಾಶಿ ಹಾಕುವ ಕಾರಣ ಸ್ಥಳದಲ್ಲೇ ಸಿಗುವ ವಸ್ತುಗಳಿಂದ ಮುಚ್ಚಿ ನೆರಳು ಮಾಡಬೇಕು. ಈ ನೆರಳಿನಿಂದ ತೇವಾಂಶ ಕಾಪಾಡಲ್ಪಡುತ್ತದೆ. ಇದು ಸುಮಾರು 6 ತಿಂಗಳಲ್ಲಿ ಹುಡಿ ರೂಪದ ಗೊಬ್ಬರವಾಗುತ್ತದೆ.
ಹಟ್ಟಿ ಇದ್ದು ಹಸು ಎಮ್ಮೆಗಳ ಗೊಬ್ಬರ ತಯಾರಿಸುವವರೂ ಸಹ ಅವುಗಳ ಸಗಣಿಯನ್ನು ಹಾಗೆಯೇ ಕೃಷಿ ತ್ಯಾಜ್ಯವನ್ನು ಹೊಂಡಕ್ಕೆ ಹಾಕುವುದಲ್ಲ. ಅದನ್ನು ನೆಲದ ಮೇಲೆ ರಾಶಿ ಹಾಕಬೇಕು. ನೆರಳು ಮಾಡಬೇಕು. ಒಣಗಲು ಬಿಡಬಾರದು. ಆಗ ಅದು ಉತ್ತಮ ಗೊಬ್ಬರವಾಗುತ್ತದೆ.
ಯಾಕೆ ನೆಲದ ಮೇಲೆ ಗೊಬ್ಬರ ಮಾಡಬೇಕು:
ಸಾವಯವ ತ್ಯಾಜ್ಯಗಳು ಚೆನ್ನಾಗಿ ಕಳಿಯಬೇಕಾದರೆ ಅದಕ್ಕೆ ಪ್ರಾಣವಾಯು ಅಥವಾ ಆಮ್ಲಜನಕ ಸಿಗಬೇಕು. ಆಗ ಮಾತ್ರ ಗುಣಮಟ್ಟದ ಗೊಬ್ಬರ ಪಡೆಯಲು ಸಾಧ್ಯ. ಆಮ್ಲಜನಕದ ಲಭ್ಯತೆ ಹೆಚ್ಚಾದರೆ ಕಳಿಯುವ ಕ್ರಿಯೆ ಬೇಗ ಆಗುತ್ತದೆ. ಜೊತೆಗೆ ಸಾರಜನಕದ ನಷ್ಟವೂ ಆಗುತ್ತದೆ. ಅದಕ್ಕೆ ರಾಶಿಯನ್ನು ಮುಚ್ಚಬೇಕು ಎನ್ನುವುದು. ಆಮ್ಲಜನಕ ಕಡಿಮೆಯೂ ಆಗಬಾರದು. ಹೆಚ್ಚೂ ಆಗಬಾರದು ಆ ರೀತಿಯಲ್ಲಿ ಗೊಬ್ಬರವನ್ನು ತಯಾರಿಸಬೇಕು.ಒಂದು ವೇಳೆ ಹೊಂಡ ಮಾಡುವುದೇ ಆಗಿದ್ದರೆ 1-1.5 ಅಡಿ ಆಳದ ಹೊಂಡ ಮಾಡಬೇಕು. ಅದರೊಳಗೆ ನೀರು ನಿಲ್ಲಬಾರದು. ನೆಲದ ಮೂಲಕ ಗುಂಡಿಗೆ ಅಥವಾ ಗೊಬ್ಬರದ ರಾಶಿಗೆ ನೀರು ಹೋಗದಂತೆ ಸುತ್ತಲೂ ಚರಂಡಿ ಮಾಡಿ ನೀರನ್ನು ತಡೆಯಬೇಕು.
ಗೊಬ್ಬರ ತಯಾರಿಸುವಾಗ ಏನೆಲ್ಲಾ ಬೆರೆಸಬಹುದು?
ಗೊಬ್ಬರದ ಸತ್ವ ಹೆಚ್ಚಳಕ್ಕೆ ಮತ್ತು ಅದರ ಸಾರಜನಕ ನಷ್ಟವಾಗುವುದನ್ನು ತಡೆಯಲು ಅದಕ್ಕೆ ರಾಕ್ ಫೋಸ್ಫೇಟ್ ಗೊಬ್ಬರವನ್ನು ಚಿಮುಕಿಸಬಹುದು. ಸೂಪರ್ ಫೋಸ್ಫೇಟ್ ಸಹ ಚಿಮುಕಿಸಬಹುದು. ಕೊಟ್ಟಿಗೆ ಗೊಬ್ಬರ ಘಾಟು ವಾಸನೆ ಬರುತ್ತಿದೆ ಎಂದಾದರೆ ಅದರಲ್ಲಿ ಅಮೋನಿಯಾ ರೂಪದಲ್ಲಿ ಸಾರಜನಕದ ನಷ್ಟ ಆಗುತ್ತಿದೆ ಎಂದರ್ಥ. ಅದನ್ನು ತಡೆಯಲು ಶಿಲಾ ರಂಜಕದ ಚಿಮುಕಿಸುವಿಕೆ ಪರಿಹಾರ.
ಗೊಬ್ಬರ ವಾಸನೆ ಬರುವುದು ಮತ್ತು ಕರಗದೆ ಇರಲು ಕಾರಣ:
ಕೆಲವು ಗೊಬ್ಬರ ಕೆಟ್ಟ ಗಬ್ಬು ವಾಸನೆಯನ್ನು ಹೊಂದಿರುತ್ತದೆ. ಮತ್ತೆ ಕೆಲವು ಯಾವ ಯಾವ ವಸ್ತು ಸೇರಿಸಲಾಗಿದೆಯೋ ಅದೆಲ್ಲಾ ಹಾಗೆಯೇ ಇರುತ್ತದೆ. ಇದಕ್ಕೆ ಕಾರಣ ಸಂಗ್ರಹಿಸಿದ ಸ್ಥಳದಲ್ಲಿ ಆಮ್ಲಜನಕದ ಕೊರತೆಯಾದದ್ದು. ಇಂತಹ ಗೊಬ್ಬರ ಉತ್ತಮ ಗೊಬ್ಬರ ಎನಿಸಲಾರದು. ಕೊಟ್ಟಿಗೆ ಗೊಬ್ಬರ ರಾಶಿಯಲ್ಲಿದ್ದಾಗ ಬಿಸಿ ಆಗಬಾರದು. ತೆಗೆಯುವಾಗ ಅದರಲ್ಲಿ ಬಿಸಿ ಗಾಳಿ ಹೊಗೆ ತರಹ ಹೊರಬರಬಾರದು.
ಕೊಟ್ಟಿಗೆ ಗೊಬ್ಬರ ಯಾಕೆ ಬೇಕು?
ಕೊಟ್ಟಿಗೆ ಗೊಬ್ಬರದ ಎಲ್ಲಾ ಮೂಲವಸ್ತುಗಳೂ ಕೃಷಿಕರ ಹೊಲದಲ್ಲೇ ಸಿಗುವಂತಹ ಮೂಲವಸ್ತುಗಳಿಂದ ತಯಾರಿಸುವಂತದ್ದು. ಈ ಮೂಲವಸ್ತುಗಳು ಉಪಯೋಗ ಇಲ್ಲದೆ ಹಾಳಾಗುವಂತದ್ದು. ಇದರ ಸದುಪಯೋಗ ಮಾಡಿಕೊಳ್ಳಲು ಈ ಗೊಬ್ಬರ ತಯಾರಿಕೆ ಅಗತ್ಯ.ಮರದ ಎಲೆಗಳು ಬಲಿತು ತರಗೆಲೆಗಳಾಗಿ ಉದುರುತ್ತದೆ. ಅದರಲ್ಲಿ ಹೆಚ್ಚಿನವು ಮಳೆಗೆ ಕೊಚ್ಚು ಹೋಗುತ್ತದೆ. ಸ್ವಲ್ಪ ಅಲ್ಲೇ ಉಳಿದರೂ ಅದು ಮಳೆಗೆ ತೊಳೆದು ಸಾರ ಕಳೆದುಕೊಳ್ಳುತ್ತದೆ. ಹಾಗೆಯೇ ಕೃಷಿ ತ್ಯಾಜ್ಯಗಳೂ ಸಹ. ಇವನ್ನೆಲ್ಲಾ ಮರು ಬಳಕೆ ಮಾಡಿಕೊಳ್ಳಲೇ ಬೇಕು. ಕೃಷಿ ತ್ಯಾಜ್ಯಗಳಲ್ಲಿ , ತೋಟದ ಹುಲ್ಲಿನಲ್ಲಿ ಬೆಳೆಗೆ ಬಳಸಿದ ಗೊಬ್ಬರದ ಉಳಿಕೆ ಅಂಶ ಇರುವ ಕಾರಣ ಅದರ ಮರುಬಳಕೆ ಕೊಟ್ಟಿಗೆ ಗೊಬ್ಬರ ತಯಾರಿಕೆಯಿಂದ ಆಗುತ್ತದೆ. ಈ ಗೊಬ್ಬರವನ್ನು ಬೆಳೆಗಳಿಗೆ ಬಳಕೆ ಮಾಡುವುದರಿಂದ ಮಣ್ಣಿನ ತರಗತಿ ಉತ್ತಮವಾಗುತ್ತದೆ.
ಕೊಟ್ಟಿಗೆ ಗೊಬ್ಬರ ಅನಿವಾರ್ಯವೇ ಎಂಬ ಪ್ರಶ್ಣೆ ಬರಬಹುದು. ಅದು ಅನಿವಾರ್ಯವಂತೂ ಅಲ್ಲ. ತೋಟ ಅಥವಾ ಹೊಲದ ತ್ಯಾಜ್ಯಗಳ ಸಮರ್ಪಕ ಪುನರ್ಬಳಕೆಗೆ ಇದು ಪರಿಹಾರ. ಒಂದು ಮರದ ಗೆಲ್ಲು ಕಡಿದಾಗ ಸೊಪ್ಪು ಸಿಗುತ್ತದೆ. ಅದನ್ನು ಬೆಳೆಗೆ ನೇರವಾಗಿ ಹಾಕಿದಾಗ ಅದು ಕಳಿಯುವ ವರೆಗೆ ಅಲ್ಲಿ ತೊಂದರೆ. ಹಾಗೆಯೇ ಇನ್ನಿತರ ವಸ್ತುಗಳೂ. ಅದನ್ನು ಗೊಬ್ಬರ ಮಾಡಿದಾಗ ಆ ತೊಂದರೆ ದೂರವಾಗುತ್ತದೆ. ಹೊಲಕ್ಕೆ ಹಾಕಿದ ಗೊಬ್ಬರ ನಡೆದಾಡಲು, ಅಥವಾ ಅಡಿಕೆ ಇತ್ಯಾದಿ ಹೆಕ್ಕಲು ತೊಂದರೆ ಉಂಟು ಮಾಡದು. ಅದಕ್ಕಾಗಿ ಎಲ್ಲಾ ಕೃಷಿಕರೂ ಸಾಧ್ಯವಾದಷ್ಟು ಅವರವರ ಹೊಲದಲ್ಲಿ ಲಭ್ಯವಿರುವ ನಿರುಪಯುಕ್ತ ಸಾವಯವ ವಸ್ತುಗಳನ್ನು ಹಾಳು ಮಾಡದೆ ಗೊಬ್ಬರ ಮಾಡಿ ಪುನರ್ ಬಳಕೆ ಮಾಡಿ. ಮಣ್ಣಿನ ಗುಣವನ್ನು ವೃದ್ದಿಮಾಡಿ.