ಯಾವುದೇ ಒಂದು ಸಸ್ಯ ಶಾಶ್ವತವಾಗಿ ಉಳಿಯುವುದೇ ಇಲ್ಲ. ಸಸ್ಯಗಳನ್ನು ಭೂಮಿಯಿಂದ ನಿರ್ಮೂಲನೆ ಮಾಡಲು ಮನುಷ್ಯ ಮಾತ್ರರಿಂದ ಸಾಧ್ಯವಿಲ್ಲ. ಮನುಷ್ಯ ಏನಾದರೂ ಮಾಡಿದರೆ ಅದು ತಾತ್ಕಾಲಿಕ ಮಾತ್ರ. ಕಳೆ ನಾಶಕ ಹೊಡೆದರೆ 2 ತಿಂಗಳಲ್ಲಿ ಮತ್ತೆ ಬೆಳೆಯುತ್ತದೆ. ಕೈಯಿಂದ ಕಿತ್ತರೆ ಮತ್ತೆ ಒಂದು ವಾರದಲ್ಲಿ ಚಿಗುರುತ್ತದೆ. ಯಂತ್ರದಿಂದ ಕಿತ್ತರೆ ಸಹ ಹೀಗೆಯೇ. ಆದರೆ ಅನಾದಿ ಕಾಲದಿಂದಲೂ ಒಂದೊಂದು ಕಳೆಯಂತೆ ಬಾಧಿಸುವ ಸಸ್ಯ ಅಥವಾ ಹುಲ್ಲು ಸಸ್ಯ ಹುಟ್ಟಿ ಮೆರೆದು ತನ್ನಷ್ಟಕ್ಕೆ ಅಳಿದು ಮತ್ತೊಂದು ಬಂದು ಚಕ್ರ ಮುಂದುವರಿಯುತ್ತಲೇ ಇದೆ. ಇದನ್ನು ಗಮನಿಸಿದವರೂ ಇದ್ದಾರೆ ಗಮನಿಸದವರೂ ಇದ್ದಾರೆ. ಇಂದು ನಮ್ಮ ರೈತರ ಹೊಲದಲ್ಲಿ ಹಳದಿ ಹೂವಿನ ಕಳೆ ಸೇವಂತಿಗೆ ಹೂವಿನ ಸಸ್ಯದ ಗಿಡ ಇತ್ತೀಚೆಗೆ ಬಂದ ಅಥಿತಿ. ಇದರ ಕಾಲ ಮುಗಿಯುವುದಕ್ಕೆ ಹೆಚ್ಚು ಸಮಯ ಬೇಕಾಗಿಲ್ಲ.
ಮಿತ್ರರಾದ ಮಹೇಶ್ ಪ್ರಸಾದ್ ನೀರ್ಕಜೆ ಇವರು ಇತ್ತಿಚೆಗೆ ಫೇಸ್ ಬುಕ್ ನಲ್ಲಿ ಒಂದು ಪೋಸ್ಟ್ ಹಾಕಿದ್ದರು ಅದು ಹಳದಿ ಹೂವಿನ ಸಸ್ಯದ (Sphagneticola trilodata) ಸ್ವಾಭಾವಿಕ ನಿಯಂತ್ರಣದ ಬಗ್ಗೆ. ಈ ಸಸ್ಯವನ್ನು ನಾಶ ಮಾಡಲು ಮತ್ತೊಂದು ಸಸ್ಯ ಬೆಳೆಯಬೇಕು ಎಂಬುದು. ಈ ವಿಚಾರಕ್ಕೆ ಪುಷ್ಟಿಕೊಡುವಂತದ್ದು ಇದು. ಇದು ಸೇವಂತಿಕೆ ಹೂವಿನ ಯಾವ ಪರಿಮಳವನ್ನೂ ಹೊಂದಿಲ್ಲ. ಆದರೆ ನೋಟ ಮಾತ್ರ ಸೇವಂತಿಗೆ ಹೂವಿನ ತರಹವೇ ಕಾಣಿಸುತ್ತದೆ. ಕಳೆ ಸೇವಂತಿಕೆ ಎಂಬುದು ಇದರ ಸಾಮಾನ್ಯ ಹೆಸರು. ಇದರ ಮೂಲ ಮೆಕ್ಸಿಕೋ,ಮತ್ತು ಕೆರೇಬಿಯನ್ ದೇಶವಂತೆ. ಅಲ್ಲಿಂದ ಅದು ಬೇರೆ ಬೇರೆ ದೇಶಗಳಿಗೆ ಪ್ರಸಾರವಾಗಿದೆ. ಇದನ್ನು ಸಿಂಗಾಪುರ ಡೈಸಿ(Singapore daisy) ಎಂದೂ ಕರೆಯುತ್ತಾರೆ. ಇದನ್ನು ಕೆಲವು ದೇಶಗಳಲ್ಲಿ ಭೂ ಹೊದಿಕೆ ಸಸ್ಯವಾಗಿ ಬೆಳೆಸುತ್ತಾರೆ.ನಮ್ಮ ದೇಶದಲ್ಲಿಯೂ ಅಲ್ಲಲ್ಲಿ ವ್ಯಾಪಕವಾಗಿ ಬೆಳೆಯುತ್ತಿದೆ.
- ಕೆಲವರಿಗೆ ಹೊಲದಲ್ಲಿ ಇದು ಇದ್ದರೆ ಬಹಳ ಕಿರಿಕಿರಿ. ಮತ್ತೆ ಕೆಲವರಿಗೆ ಇದು ಒಂದು ಪಶು ಮೇವು.
- ಕೆಲವರು ಇದನ್ನು ನಾಶ ಮಾಡುವ ಬಗ್ಗೆ ಬಾರೀ ತಲೆ ಬಿಸಿ ಮಾಡಿಕೊಂಡಿದ್ದಾರೆ. ಆದರೆ ಎಲ್ಲದಕ್ಕೂ ಒಂದು ಕಾಲ ಇದೆ.
- ಅಷ್ಟರ ವರೆಗೆ ಅದು ಮೆರೆದು ನಂತರ ತನ್ನಷ್ಟಕ್ಕೆ ಅವನತಿಯಾಗುತ್ತಾ ಬರುತ್ತದೆ.
- ಸುಮಾರು 20 ವರ್ಷಕ್ಕೆ ಹಿಂದೆ ನಮ್ಮಲ್ಲೆಲ್ಲಾ ಕಮಿನಿಸ್ಟ್ ಗಿಡ Chromolaena odorata ಬಂದಾಗ ನಾವು ಭಾರೀ ತಲೆ ಬಿಸಿ ಮಾಡಿಕೊಡು ಇದು ಅಳಿಸಲಾಗದ ಸಸ್ಯ ಎಂದು ಭ್ರಮಿಸಿದ್ದೆವು.
- ಅಮೇರಿಕಾದ ಪ್ಲೋರಿಡಾ ಮತ್ತು ಟೆಕ್ಸಾಸ್ ಮೂಲದ ಈ ಗಿಡ ಜಗತ್ತಿನ ಬಹಳಷ್ಟು ಕಡೆ ಪ್ರಸಾರವಾಗಿತ್ತು.
- ಬೀಜ ಗಾಳಿಯಲ್ಲಿ ಹಾರಿ ಹುಟ್ಟುವ ಈ ಸಸ್ಯ ಒಮ್ಮೆ ಭಾರೀ ಮೆರೆದು ಈಗ ಅದು ಅಪರೂಪವಾಗ ತೊಡಗಿದೆ.
- ಹಾಗೆಯೇ ಈ ಹಳದಿ ಹೂವಿನ ಗಿಡವೂ ಸಹ ಕೆಲವೇ ಸಮಯದಲ್ಲಿ ಅಳಿದು ಬೇರೆ ಕಳೆ ಬರುತ್ತದೆ.
- ಈಗಾಗಲೇ ಕೆಲವು ಕಡೆ ಇಂತದ್ದು ಆಗಿದೆ. ಯಾರು ಇದರಿಂದ ತೀವ್ರ ತೊಂದರೆ ಅನುಭಿಸಿದ್ದಾರೆಯೋ ಅವರು ಈ ಕೆಳಗಿನ ಕೆಲವು ಸಲಹೆಗಳನ್ನು ಅನುಸರಿಸಿ ಅದನ್ನು ನಾಶ ಮಾಡಬಹುದು.
ಕಳೆ ಸೇವಂತಿಗೆ ಸಸ್ಯದ ಬೆಳೆವಣಿಗೆ ಮತ್ತು ಪ್ರಸಾರ:
- ಈ ಸಸ್ಯ ಬೆಳವಣಿಗೆಯಾಗುವುದು ಅದರ ತುಂಡುಗಳಿಂದ. (Vegetative propagation) ಇದರ ಗಂಟು ಗಂಟುಗಳಲ್ಲಿ ಬೇರು ಬರುತ್ತದೆ.
- ಬೇರುಗಳು ಸುಮಾರು 3-4 ಇಂಚು ಆಳದ ತನಕವೂ ಇಳಿಯುತ್ತದೆ.
- ಇದು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಸಾರವಾಗಲು ಒಂದೆರಡು ತುಂಡು ಸಾಕು.
- ಒಂದು ಬುಡ ಇದ್ದರೆ ಸಾಕು ಅದು ಬೆಳೆಯುತ್ತಾ ಪ್ರಸಾರವಾಗುತ್ತದೆ.
- ಕೊಚ್ಚಿ ಹಾಕುವಾಗ ಬಿದ್ದ ತುಂಡುಗಳು ಸಹ ಬದುಕಿಕೊಳ್ಳುತ್ತವೆ.
- ಹಸುಗಳಿಗೆ ಮೇವು ರೂಪದಲ್ಲಿ ತಿನ್ನಿಸಿದರೆ ಅದರ ತುಂಡುಗಳು ಸಗಣಿಯ ಮೂಲಕ ಪ್ರಸಾರವಾಗುತ್ತವೆ.
- ಇದನ್ನು ನಿರ್ನಾಮ ಮಾಡಲು ಈ ತನಕ ಯಾರಿಂದಲೂ ಸಾಧ್ಯವಾಗಿಲ್ಲ.
- ಎಲ್ಲಾದರೂ ಒಂದೆರಡು ತುಂಡು ಉಳಿದಿದ್ದರೆ ಅದು ಪ್ರಸಾರವಾಗುತ್ತದೆ.
- ಇದು ಬಳ್ಳಿಯ ತರಹ ಗಂಟು ಗಂಟುಗಳಲ್ಲಿ ಬೇರು ಬಿಡುತ್ತಾ ಸುಮಾರು 1-2 ಮೀಟರಿಗೂ ಹೆಚ್ಚು ಉದ್ದಕ್ಕೆ ಬೆಳೆಯುತ್ತದೆ.
- ಬೇರು ಸಮೇತ ಕಿತ್ತು ನಾಶಮಾಡಬಹುದಾದರೂ ಅದು ಅಷ್ಟು ಸುಲಭವಲ್ಲ.
- ಕಳೆ ನಾಶಕದ ಮೂಲಕ ಇದನ್ನು ನಾಶ ಮಾಡಬೇಕಾದರೆ ಅಧಿಕ ಸಾಂದ್ರತೆಯಲ್ಲಿ ಸಿಂಪರಣೆ ಮಾಡಬೇಕು.
- ಇದು ಅಗತ್ಯ ಇದ್ದಲ್ಲಿ ಮಾತ್ರ ಸಿಂಪಡಿಸುವ ಕಾರಣ ಅಳಿದುಳಿದ ಸ್ಥಳಗಳಲ್ಲಿ ಇದು ಬದುಕಿ ಉಳಿದು ಮತ್ತೆ ಹೆಚ್ಚಾಗುತ್ತದೆ.
- ಇದು ಬರಗಾಲದಲ್ಲೂ ಸಾಯದೆ ಇರುವ ಸಸ್ಯವೂ.
- ಬೆಂಕಿ ಕೊಟ್ಟರೂ ಸಹ ಬೇರು ತುಂಡುಗಳ ಮೂಲಕ ಮತ್ತೆ ಚಿಗುರಿಕೊಳ್ಳುತ್ತವೆ.
- ವಾತಾವರಣದ ತೇವಾಂಶವೇ ಇದು ಬದುಕಿಕೊಳ್ಳಲು ಸಾಕಾಗುತ್ತದೆ.
- ಹೀಗಿರುವಾಗ ಇದರ ನಿಯಂತ್ರಣ ಸ್ವಲ್ಪ ಕಷ್ಟವೇ. ಆದರೆ ಕಳೆಯನ್ನು ಕಳೆಯಿಂದಲೇ ನಾಶಮಾಡಬಹುದು.
- ಇದು ಸ್ವಾಭಾವಿಕ ನಿಯಂತ್ರಣ ವಿಧಾನವಾಗಿದೆ.ಇದರಕ್ಕೆ ಖರ್ಚು ಸಹ ಇರುವುದಿಲ್ಲ.
ಯಾವುದು ಸ್ವಾಭಾವಿಕ ನಿಯಂತ್ರಕ :
- ನಮ್ಮೆಲ್ಲರ ಪರಿಚಿತ ಹುಲ್ಲು ಸಸ್ಯ ಇದರ ಹೆಸರು ಸಿಗ್ನಲ್ ಹುಲ್ಲು ಎಂದು.
- ಇದನ್ನು ಆವೆಲ್ಲಾ ಹಸುಗಳಿಗೆ ಮೇವಾಗಿ ಬಳಕೆ ಮಾಡುತ್ತೇವೆ.
- ಇದು ಹೂ ಬಿಡುವ ಸಮಯದಲ್ಲಿ ಇದರ ಹೂ ಗೊಂಚಲು ಸಿಗ್ನಲ್ ತರಹ ಬೇರೆ ಬೇರೆ ದಿಕ್ಕನ್ನು ತೋರಿಸುತ್ತದೆ.
- ಅದಕ್ಕಾಗಿ ಈ ಹೆಸರು ಕೊಟ್ಟಿರಬೇಕು. ಈ ಹುಲ್ಲು ಸಸ್ಯವು ಇದನ್ನು ಸಸ್ಯವನ್ನು ಸ್ವಾಭಾವಿಕವಾಗಿ ನಿಯಂತ್ರಿಸುವಲ್ಲಿ ಸಹಕಾರಿ.
- ಈ ಹುಲ್ಲು ಬೀಜಗಳಿಂದ ಸಸ್ಯಾಭಿವೃದ್ದಿಯಾಗುತ್ತದೆ.
- ಹುಲ್ಲನ್ನು ಹಸುಗಳು ತಿಂದು ವಿಸರ್ಜಿಸಿದಾಗ ಅದರ ಸಗಣಿಯ ಜೊತೆ ಬೆರೆತು ಚೆನ್ನಾಗಿ ಹುಟ್ಟಿಕೊಳ್ಳುತ್ತವೆ.
- ತನ್ನಷ್ಟಕ್ಕೆ ಬಲಿತ ಹುಲ್ಲುಗಳ ಬೀಜಗಳೂ ಸಹ ಮಣ್ಣಿಗೆ ಬಿದ್ದಾಗ ಹುಟ್ಟಿಕೊಳ್ಳುತ್ತವೆ.
- ಹುಲ್ಲು ಕಿತ್ತು ರಾಶಿ ಹಾಕಿದಲ್ಲಿ ಹುಲ್ಲು ಒಣಗಿದ್ದರೂ ಸಹ ಅಲ್ಲಿ ಉದುರಿದ ಬೀಜಗಳು ಮಳೆ ಅಥವಾ ತೇವಾಂಶ ದೊರೆತಾಗ ಹುಟ್ಟಿಕೊಳ್ಳುತ್ತವೆ.
- ಇವೆಲ್ಲದಕ್ಕೂ ಇರುವೆ ಇತ್ಯಾದಿ ತೊಂದರೆ ಇದೆ.
- ಆದರೆ ಹದುಗಳ ಸಗಣಿ ಅಥವಾ ಗೋಬರ್ ಗ್ಯಾಸ ಸ್ಲರಿ ಮೂಲಕ ಪ್ರಸಾರವಗುವ ಬೀಜ ಬಹಳ ಹೆಚ್ಚಿನ ಪ್ರಮಾಣದಲ್ಲಿ ಮೊಳಕೆ ಒಡೆದು ಸಸ್ಯಗಳಾಗುತ್ತವೆ.
ಕಳೆ ಸೇವಂತಿಗೆ ಸಸ್ಯಗಳಿರುವ ಸ್ಥಳಕ್ಕೆ ಹಸುವಿಗೆ ಆಹಾರವಾಗಿ ಈ ಹುಲ್ಲನ್ನು ಕೊಟ್ಟು ಆದರ ಸ್ಲರಿ ಯನ್ನು ಅಥವಾ ಆ ಸಗಣಿಯ ದ್ರಾವಣವನ್ನು ಆ ಸ್ಥಳಕ್ಕೆ ಹಾಕುದಾಗ ಅಲ್ಲಿ ಈ ಹುಲ್ಲಿನ ಸಸ್ಯ ಹುಟ್ಟಿಕೊಳ್ಳುತ್ತವೆ. ಹಸುಗಳಿಗೆ ಈ ಹುಲ್ಲನ್ನು ಹಾಕುವಾಗ ಅದು ಹೂ ಬಿಟ್ಟಿರಬೇಕು. ಈ ಹುಲ್ಲು ಸಸ್ಯಗಳು ಇರುವಲ್ಲಿ ನಾವು ನಡೆದುಕೊಂಡು ಹೋಗುವಾಗ ನಮ್ಮ ಕಾಲಿನ ಚಪ್ಪಲಿಯಲ್ಲೂ ಸಾಕಷ್ಟು ಹುಲ್ಲಿನ ಬೀಜಗಳು ಅಂಟಿಕೊಳ್ಳುತ್ತವೆ.
ಕಳೆ ಸೇವಂತಿಗೆ ಇರುವಲ್ಲಿ ಹೀಗೆ ಮಾಡಿ:
- ಬಹುತೇಕ ಎಲ್ಲರ ಹೊಲದಲ್ಲೂ ಈ ಹುಲ್ಲು ಇರಬಹುದು. ಇದನ್ನು ಚೆನ್ನಾಗಿ ಬೆಳೆಯಲು ಬಿಡಿ.
- ಬೆಳೆದ ಹುಲ್ಲನ್ನು ಹಸುಗಳು ಇದ್ದರೆ ಅವುಗಳಿಗೆ ಮೇವಾಗಿ ಕೊಡಿ.
- ಅವುಗಳು ಹುಲ್ಲು ತಿಂದು ವಿಸರ್ಜಿಸಿದ ಸಗಣಿಯ ಜೊತೆಗೆ ಈ ಹುಲ್ಲಿನ ಬೀಜಗಳು ಇರುತ್ತವೆ.
- ಹಾಗೆಯೇ ಮೇಯಲು ಹಾಕಿದ ಜಾಗದಲ್ಲಿ ಗುಡಿಸುವಾಗ ಅಥವಾ ನೆಲ ತೊಳೆಯುವಾಗ ಅದರಲ್ಲೂ ಸಾಕಷ್ಟು ಉದುರಿದ ಬೀಜಗಳು ಇರುತ್ತವೆ.
- ಈ ಕಸವನ್ನು ಅಥವಾ ಹಟ್ಟಿ ತೊಳೆದ ನೀರನ್ನು ಕಳೆ ಸೇವಂತಿಗೆ ಸಸ್ಯಗಳು ಇರುವಲ್ಲಿ ಚೆಲ್ಲಬೇಕು.
- ಸಾಧ್ಯವಿದ್ದರೆ ಈ ಸಸ್ಯವನ್ನು ವೀಡ್ ಕಟ್ಟರ್ ಮೂಲಕ ಸವರಿ ಹಾಕಿ .
- ಅಗ ಮೊಳೆಯುವ ಹುಲ್ಲಿನ ಬೀಜಕ್ಕೆ ಬೆಳಕು ಚೆನ್ನಾಗಿ ಲಭ್ಯವಾಗಿ ಹುಲುಸಾಗಿ ಬೆಳೆಯುತ್ತದೆ.
- ಹುಲ್ಲಿನ ಬೀಜಗಳು ತೇವಾಂಶ ಇದ್ದಲ್ಲಿ ಮಾತ್ರ ಮೊಳಕೆ ಒಡೆದು ಸಸಿಯಾಗುತ್ತದೆ.
- ಫಲವತ್ತತೆ ಇದ್ದಲ್ಲಿ ವೇಗವಾಗಿ ಬೆಳೆಯುತ್ತದೆ. ಇದು ಸುಮಾರು 2 ತಿಂಗಳಲ್ಲಿ ಹೂ ಬಿಡುವಷ್ಟು ಬೆಳೆಯುತ್ತದೆ.
- ಒಮ್ಮೆ ಈ ಹುಲ್ಲು ಬೆಳೆಯಿತೆಂದರೆ ಅದರ ವಂಶಾಭಿವೃದ್ದಿ ಸಹಜವಾಗಿ ಆಗುತ್ತಲೇ ಇರುತ್ತದೆ.
- ಆದರೆ ಈ ಹುಲ್ಲು ಕಳೆನಾಶಕಕ್ಕೆ ಬೇಗ ಸಾಯುತ್ತದೆ.
- ಹಾಗಾಗಿ ಕಳೆ ನಾಶಕ ಬಳಸಬಾರದು.
- ಹುಲ್ಲು ಕತ್ತರಿಸುವಾಗ ತೀರಾ ಬುಡದ ತನಕ ಕತ್ತರಿಸದೆ ಇದ್ದರೆ ಅದು ನೀರು ಸಿಕ್ಕಿದಾಗಕ್ಷಣ ಚಿಗುರಿಕೊಂಡು ಬೆಳೆಯುತ್ತದೆ.
- ಇದು ಜಾನುವಾರುಗಳಿಗೆ ಉತ್ತಮ ಮೇವು ಸಹ.
ಸಿಗ್ನಲ್ ಹುಲ್ಲು ಬೀಜಗಳ ಮೂಲಕ ಸಸ್ಯಾಭಿವೃದ್ದಿಯಾಗುತ್ತದೆ. ಈ ಬೀಜಗಳು ತುಂಬಾ ಹಗುರವಾಗಿದ್ದು, ಗಾಳಿಯ ಮೂಲಕ ಪ್ರಸಾರವಾಗುತ್ತದೆ. ಹಾಗಾಗಿ ಸಂಖ್ಯಾಭಿವೃದ್ದಿಯಾಗಲು ಯಾವುದೇ ಕಷ್ಟ ಇಲ್ಲ. ಒಮ್ಮೆ ಒಂದೆಡೆ ಹುಟ್ಟಿಕೊಂಡರೆ ಅದರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಗುತ್ತದೆ. ಈಗಾಗಲೇ ಕೆಲವು ಕಡೆ ಕಳೆ ಸೇವಂತಿಗೆ ಸಸ್ಯದ ಮೇಲೆ ಈ ಹುಲ್ಲು ಪ್ರಾಭಲ್ಯ ಸಾಧಿಸಿದೆ. ಇದರ ಬೆಳೆವಣಿಗೆಗೆ ಅನುಕೂಲ ಕಲ್ಪಿಸಿದರೆ ಕಳೆ ಸೇವಂತಿಗೆ ಸಸ್ಯ ಕೆಲವೇ ಸಮಯದಲ್ಲಿ ಸಹಜವಾಗಿ ಕಡಿಮೆಯಾಗುತ್ತಾ ಬರುತ್ತದೆ. ಇಂತದ್ದು ಹಲವಾರು ಆಗಿದೆ. ಹಿಂದೆ ಹಳ್ಳಿಗಳಲ್ಲಿ ಒಂದು ವಿಧದ ಮುಳಿ ಹುಲ್ಲು ( ನೈ ಮುಳಿ ಎಂದು ತುಳು ಭಾಷೆಯಲ್ಲಿ ಹೇಳುತ್ತಾರೆ) ಇದು ಮನೆ ಚಾವಣಿಗೆ ಉತ್ತಮವಾಗಿತ್ತು. ಅದು ಕ್ರಮೇಣ ಅಳಿದೇ ಹೋಗಿ ಅದರ ಬದಲಿಗೆ ಮತ್ತೊಂದು ಹುಲ್ಲು ವ್ಯಾಪಿಸಿದೆ. ಹಾಗೆಯೇ ಇದು.