ಧೀರ್ಘಾವಧಿ ಬೆಳೆಗಳಲ್ಲಿ ಸಸ್ಯ ಮೂಲವನ್ನು ಆರಿಸುವಾಗ ನಮಗೆ ಸ್ವಲ್ಪ ಮಟ್ಟಿಗೆ ಸಸಿ ಹೀಗೆ ಇದ್ದರೆ ಉತ್ತಮ ಎಂಬ ಮಾನದಂಡಗಳನ್ನು ತಿಳಿದಿದ್ದರೆ ಒಳ್ಳೆಯದು. ಕಾರಣ ಈ ಗಿಡ ನೆಟ್ಟು ಪ್ರತಿಫಲ ತೋರಿಸಲು 5-6 ವರ್ಷ ಬೇಕು. ಆಗ ನಮ್ಮ ಆಯ್ಕೆ ಸ್ವಲ್ಪ ತಪ್ಪಿದ್ದರೆ ಅಷ್ಟೂ ವರ್ಷ ನಷ್ಟ. ಇದಕ್ಕಾಗಿ ಪ್ರತೀಯೊಬ್ಬ ತೆಂಗು ಬೆಳೆಯುವವನೂ ತೆಂಗಿನ ಉತ್ತಮ ಗಿಡದ ಲಕ್ಷಣಗ ಗಳು ಹೀಗೆ ಇರಬೇಕು ಎಂಬುದನ್ನು ತಿಳಿದಿದ್ದರೆ ಒಳ್ಳೆಯದು.
- ತೆಂಗು ಮಿಶ್ರ ಪರಾಗಸ್ಪರ್ಷದ ಮೂಲಕ ಕಾಯಿ ಕಚ್ಚುವ ಸಸ್ಯವಾಗಿದು, ಯಾವ ಮರದ ಕಾಯಿಯನ್ನು ಬೀಜಕ್ಕಾಗಿ ಉಪಯೋಗಿಸುತ್ತೀರೋ ಅದರಲ್ಲಿ ಎಲ್ಲಾ ಸಸ್ಯಗಳೂ ತಾಯಿ ಗುಣವನ್ನು ಯಥಾವತ್ ಹೊಂದಿರುವುದು ಸಾಧ್ಯವಿಲ್ಲ.
- ಇಂತದ್ದೇನಾದರೂ ಆಗಬೇಕಿದ್ದರೆ ಸುಮಾರು ದೂರದ ತನಕ ಬೇರೆ ಮರಗಳು ಇರಬಾರದು.
- ಪ್ರತೀ ತಿಂಗಳೂ ಒಂದೊಂದು ಹೂ ಗೊಂಚಲು ಬಿಡುವ ಅಧಿಕ ಇಳುವರಿಯ ತಳಿಗಳಲ್ಲಿ ಸ್ವಲ್ಪ ಮಟ್ಟಿಗೆ ತಾಯಿ ಮರದ ಯಥಾ ಗುಣ ಬರುತ್ತದೆ.
- ಅದಕ್ಕೇ ನಮ್ಮ ಹಿರಿಯರು ಹೇಳಿದ್ದು, ತುಂಬು ಫಸಲು ಇರುವ ಮರಗಳಿಂದ ಬೀಜದ ಕಾಯಿ ಆರಿಸಬೇಕು ಎಂದು.
ನಿಜ ಗುಣ ಗುರುತಿಸುವುದು ಹೇಗೆ:
- ಇದನ್ನು ಆಳವಾಗಿ ಗುರುತಿಸಲು ಸಾಧ್ಯವಿಲ್ಲ. ಆದರೂ ಮೇಲು ನೋಟಕ್ಕೆ ಗುರುತಿಸಬಹುದು ಅಷ್ಟೇ
- ಮೊದಲಾಗಿ ತಾಯಿ ಮರದ ಗರಿ ಅದರ ಬಣ್ಣವನ್ನು ಗಮನಿಸಿ.
- ಅದೇ ಬಣ್ಣ ಈ ಸಸ್ಯದ ಎಲೆ ಮತ್ತು ಎಲೆ ದಂಟು ಭಾಗಕ್ಕೆ ಬಂದಿದ್ದರೆ , ಅದು ಸರಿ ಸುಮಾರು ನಿಜ ಗುಣ ಹೊಂದಿರಬಹುದು.
- ಆದರೂ ಅದು ಕಾರರುವಕ್ಕು ಅಲ್ಲವೇ ಅಲ್ಲ.
ತೆಂಗಿನಲ್ಲಿ ನಿಜ ಗುಣಕ್ಕಿಂತಲ್ಲೂ ಮುಖ್ಯವಾಗಿ ತಳಿ ಗುಣ ಮೇಲ್ದರ್ಜೆಗೇರಬೇಕಾದ್ದೇ ಪ್ರಧಾನ ಸಂಗತಿಯಾಗಿದ್ದು, ನಾವು ಆಯ್ಕೆ ಮಾಡುವ ಸಸಿಯ ಲಕ್ಷಣ ನೈಸರ್ಗಿಕ ಪರಾಗಸ್ಪರ್ಷಕ್ಕೊಳಗಾಗಿ ಉನ್ನತೀಕರಣ ಹೊಂದಿದರೆ ಸಾಕು.
- ಎಲ್ಲರಿಗೂ ತಾಯಿ ಮರ ನೋಡಿ ಸಸಿ ಆಯ್ಕೆ ಮಾಡುವುದು ಸಾಧ್ಯವಿಲ್ಲ.
- ಅದು ಅವರರವರ ಹೊಲ ಅಥವಾ ನೆರೆಹೊರೆಯವರ ಹೊಲ ಆಗಿದ್ದರೆ ಮಾತ್ರ ಸಾದ್ಯ.
- ಒಂದು ವೇಳೆ ಬೀಜದ ಕಾಯಿಯನ್ನೇ ತಂದು ನೀವೇ ಸಸಿ ಮಾಡುವುದಿದ್ದರೆ ತಾಯಿ ಮರದ ಲಕ್ಷಣಗಳನ್ನು ಗಮನಿಸಿ ಅದರ ಗುಣ ಇದರ ಪೀಳಿಗೆಗೆ ಇದೆಯೇ ಎಂದು ಗಮನಿಸಬಹುದು.
ಸಸಿ ಆಯ್ಕೆ:
- ಬಹುತೇಕ ತೆಂಗು ಬೆಳೆಗಾರರು ಸಸ್ಯೋತ್ಪಾದನಾ ನರ್ಸರಿಯಿಂದ ಅಥವಾ ನೆರೆಹೊರೆಯಲ್ಲಿ ಯಾರಾದರೂ ಸಸಿ ಮಾಡಿದ್ದರೆ ಅವರಲ್ಲಿಂದ ತರುವವರು.
- ಇದು ನಂಬಿಕೆಯ ವ್ಯವಹಾರ. ಆದರೂ ಸಹ ಸಸ್ಯದ ಮೇಲು ನೊಟ ಸರಿಯಾಗಿರುವ ಸಸ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು.
- ಬೀಜಕ್ಕೆ ಇಟ್ಟ ಕಾಯಿ ಬೇಗ ಮೊಳೆಕೆ ಬಂದದ್ದನ್ನು ಉತ್ತಮ ಸಸಿ ಎಂದು ಪರಿಗಣಿಸಲಾಗುವುದು.
- ಬೇಗ ಮೊಳಕೆ ಬಂದ ಸಸ್ಯದಲ್ಲಿ ಬೇಗ ಎಲೆ ಮೂಡುತ್ತದೆ.
- ಅದರ ಮೊಳಕೆಯ ಬುಡ ಭಾಗವೂ ಸಹ ದಪ್ಪವಾಗಿರುತ್ತದೆ.
- ಸಸ್ಯದ ಎಲೆ ಲಕ್ಷಣ ಮತ್ತು ಸಸ್ಯದ ಬುಡ ಭಾಗದ ಸುತ್ತಳತೆ ಆ ಸಸ್ಯದ ಇಳುವರಿ ಕೊಡುವ ಭವಿಷ್ಯವನ್ನು ನಿರ್ಧರಿಸುತ್ತದೆ.
ಮಲೇಶಿಯಾದಂತಹ ದೇಶದಲ್ಲಿ ಬೀಜದ ತೆಂಗಿನ ಕಾಯಿ 16 ವಾರದಲ್ಲಿ ಮೊಳಕೆ ಒಡೆಯಬೇಕು ಎಂದಿದೆ. ಸಾಮನ್ಯವಾಗಿ 5 ತಿಂಗಳ ಒಳಗೆ ಎಲ್ಲಾ ಕಾಯಿಗಳೂ ಮೊಳಕೆ ಒಡೆಯಬೇಕು. ಒಡೆಯದ್ದನ್ನು ತೆಗೆದು ಹಾಕಿ ಸಸ್ಯೋತ್ಪಾದನೆ ಮಾಡಿರಬೇಕು. ಇಲ್ಲಿ ಒಂದು ವಿಚಾರ ಕಾಯಿಸಿಪ್ಪೆ ತುಂಬಾ ತೆಳುವಾಗಿದ್ದರೆ ಅಂತಹ ಕಾಯಿ ಬೇಗ ಮೊಳೆಕೆ ಬರುತ್ತದೆ.
ಸಸ್ಯದ ಸಧೃಡತೆ( VIGOUR)
- ಉತ್ತಮ ಇಳುವರಿ ಕೊಡಬಲ ತೆಂಗಿನ ಸಸಿಯ ಮೊಳಕೆಯ ಶಕ್ತಿಯ ಮೇಲೆ ಅದರ ಇಳುವರಿ ಗುಣ ನಿರ್ಧಾರವಾಗುತ್ತದೆ.
- 5 ತಿಂಗಳಲ್ಲಿ ಮೊಳಕೆ ಬರಬೇಕು. ಮುಂದಿನ 7 ತಿಂಗಳಲ್ಲಿ ಆ ಸಸಿಯಲ್ಲಿ ಉದ್ದದ 6 ಎಲೆಗಳು ಬಂದಿರಬೇಕು.
- 1 ವರ್ಷದ ಸಸಿಯ ಬುಡ ಭಾಗ ಕನಿಷ್ಟ 10 ಸೆಂ. ಮೀ. ದಪ್ಪ ಇರಬೇಕು.
- ಎಲೆಯ ಬಣ್ಣ ಹಚ್ಚ ಹಸುರಾಗಿರಬೇಕು. ತಿಳಿ ಹಸುರು ಬಣ್ಣ ಇರಬಾರದು.
- ಬುಡದ ಸುತ್ತಳತೆ ಕಡಿಮೆ ಇದ್ದರೆ ಎಲೆಯ ಉದ್ದ ಮತ್ತು ಸಂಖ್ಯೆ ಕಡಿಮೆಯಾಗಿರುತ್ತದೆ.
- ಬೇರುಗಳೂ ಸಹ ಕಡಿಮೆ ಇರುತ್ತದೆ.
ಗಿಡ ಎಷ್ಟು ದೊಡ್ಡದಿರಲಿ:
- ಸಾಮಾನ್ಯ ನೀರು ಬಸಿಯುವ ಸ್ಥಳಕ್ಕೆ 9-12 ತಿಂಗಳು ಪ್ರಾಯದ ಸಸಿಯಾದರೆ ಉತ್ತಮ.
- ಸಸಿ ಹೆಚ್ಚು ಬೆಳೆದಂತೆ ಅದರ ಬೇರುಗಳಿಗೆ ಹಾನಿ ಹೆಚ್ಚಾಗುತ್ತದೆ.
- ಆದ ಕಾರಣ ನಾಟಿ ಮಾಡಿ ಸುಮಾರು 2-3 ತಿಂಗಳ ತನಕ ಆಹಾರ ಕೊಡಬಲ್ಲ ಬೇರುಗಳೇ ಇಲ್ಲದೆ ಸಸ್ಯ ಸೊರಗುತ್ತದೆ.
ಸಸಿಯನ್ನು ತೆಗೆಯುವಾಗ ಜಾಗರೂಕತೆಯಲ್ಲಿ ತೆಗೆಯಬೇಕು. ಎಳೆದು ತೆಗೆಯಬಾರದು. ಸುತ್ತ ಸಡಿಲ ಮಾಡಿ ಮಣ್ಣು ಸಮೇತ ತೆಗೆಯಬೇಕು. ತೆಗೆದಿಟ್ಟ ಸಸಿಯನ್ನು 10 ದಿನಗಳ ಒಳಗೆ ನಾಟಿ ಮಾಡಬೇಕು. ಪಾಲಿಥೀನ್ ಚೀಲದಲ್ಲಿ ಮಾಡಿದ ಸಸಿಯಾದರೆ ಉತ್ತಮ.
ಗಿಡದಲ್ಲಿ ಕಾಯಿ ಬೇಕು:
- ಸಸಿಯನ್ನು ನಾಟಿ ಮಾಡುವಾಗ ಅದರ ಜೊತೆಗೆ ಕಾಯಿಯೂ ಇರಬೇಕು.
- 2 ವರ್ಷದ ತನಕ ಕಾಯಿಯ ಸಂಪರ್ಕ ಗಿಡಕ್ಕೆ ಇರುತ್ತದೆ.
- ಕಾಯಿ ಇದ್ದರೆ ಅದರಲ್ಲಿ ಸಂಗ್ರಹಿತ (Stored food) ಪೋಷಕಗಳು ಸಸ್ಯಕ್ಕೆ ಲಭ್ಯವಾಗುತ್ತದೆ.
ಸಸಿ ಅಯ್ಕೆ ಬಗ್ಗೆ ಯಾವುದೇ ಉದಾಸೀನ ಬೇಡ. ಕಳಪೆ ಸಸ್ಯವನ್ನು ಆಯ್ಕೆ ಮಾಡಲೇ ಬೇಡಿ. ಇದು ನಿಮಗೆ ಇಳುವರಿ ಕೊಡುವಲ್ಲಿ ಮೋಸ ಮಾಡುತ್ತದೆ. ಎಲ್ಲಾ ತೆಂಗು ಬೆಳೆಯುವವರೂ ಸಸಿ ಆಯ್ಕೆಯ ಈ ವಿಧಾನವನ್ನು ಅರಿತಿರಬೇಕು.