1 ಎಕ್ರೆಗೆ 1000 ಅಡಿಕೆ ಸಸಿ-ವಿಶಿಷ್ಟ ವಿಧಾನದ ಅಡಿಕೆ ಬೇಸಾಯ.

1 ಎಕ್ರೆಗೆ 1000 ಅಡಿಕೆ ಸಸಿ-ವಿಶಿಷ್ಟ ವಿಧಾನದ ಅಡಿಕೆ ಬೇಸಾಯ.

1 ಎಕ್ರೆ ಅಡಿಕೆ ಬೆಳೆಸುವವರು ಸಾಮಾನ್ಯವಾಗಿ 500 ಅಡಿಕೆ ಸಸಿಗಳನ್ನು ನೆಡುತ್ತಾರೆ. ಅದರ ಬದಲು ಈ ರೀತಿಯ ವಿಶೇಷ ಅಂತರದ ಅಡಿಕೆ ಬೇಸಾಯದಲ್ಲಿ ಹೆಚ್ಚು ವಿಸ್ತೀರ್ಣ ಇಲ್ಲದೆ ಅಡಿಕೆ ಸಸಿಗಳನ್ನು ಹಿಡಿಸಿ ಅಧಿಕ ಫಸಲು ಪಡೆಯಬಹುದು. ಇಲ್ಲಿ ನೀರು, ಗೊಬ್ಬರ, ಶ್ರಮ ಉಳಿತಾಯವಾಗುತ್ತದೆ. ಮುಂದಿನ ದಿನಗಳಲ್ಲಿ ಎದುರಾಗುವ ತೋಟ ನಿರ್ವಹಣೆ ಮೇಲ್ವಿಚಾರಣೆ ಸಮಸ್ಯೆಗೆ ಇದು ಉತ್ತಮ ಬೇಸಾಯ ವಿಧಾನ ಎನ್ನಿಸಬಲ್ಲದು.

ಅಡಿಕೆ ತೋಟ ಎಂದರೆ ಸಾಲಾಗಿ ಸಸಿಗಳನ್ನು ನೆಡುವುದು, ಪರಸ್ಪರ ನಿರ್ಧಿಷ್ಟ ಅಂತರ. ಅದರಲ್ಲೂ ಚದರ ಚೌಕ ದ ವಿಧಾನ, ತ್ರೀಕೊನ ವಿಧಾನ ಹೀಗೆಲ್ಲಾ ಭಾರೀ ಶಿಸ್ತು. ತೋಟದ ಒಂದು ಬದಿಯಲ್ಲಿ ನಿಂತು ದೃಷ್ಟಿ ಹರಿಸಿದರೆ ಮತ್ತೊಂದು  ಬದಿಯ ವರೆಗಿನ ಎಲ್ಲಾ ಚಿತ್ರಣವೂ ಕಾಣಬೇಕು. ನೂಲು ಹಾಕಿ  ಸಾಲು ಮಾಡಲಾಗುತ್ತದೆ.  ಇದೆಲ್ಲಾ ಯಾಕೆಂದರೆ ತೋಟ ನಿರ್ವಹಣೆಗೆ ಸುಲಭವಾಗಲಿ ಮತ್ತು ನೋಡುವಾಗ ಚಂದ ಇರಲಿ ಎಂಬ ಉದ್ದೇಶಕ್ಕೆ. ಅಡಿಕೆ ಮರಗಳಿಗೆ ಬೆಳೆಯಲು ಅಂತರದ ಅವಶ್ಯಕತೆ ಇಲ್ಲ.ಸೂಕ್ತವಾದ ಮಣ್ಣು, ಗಾಳಿ ಬೆಳೆಕು ಇದ್ದರೆ ಅದು ಬೆಳೆಯುತ್ತದೆ. ಇದೆಲ್ಲಾ ನಾವು  ಮಾಡಿಕೊಂಡು ಬಂದ ಪದ್ದತಿಗಳು. ತೋಟ ಚಂದ ಇದ್ದರೆ ಅಲ್ಲಿಗೆ ಹೋಗೋಣ ಎನ್ನಿಸುತ್ತದೆ. ತೋಟದಲ್ಲಿ ಓಡಾಡಿದಷ್ಟು ಫಸಲು ಹೆಚ್ಚುತ್ತದೆ.  ಆದರೆ ಅದರಷ್ಟಕ್ಕೆ ಹುಟ್ಟಿದ ಅಡಿಕೆ ಗಿಡಗಳಿಗೆ ಇದು ಯಾವುದೂ ಇಲ್ಲ. ಅವು ಹೇಗಾದರೂ ಗಾಳಿ ಬೆಳಕನ್ನು ಪಡೆದು ಬದುಕುತ್ತವೆ.ನೆಟ್ಟು ಬೆಳೆಸಿದ್ದಕ್ಕಿಂತ ಚೆನ್ನಾಗಿಯೇ ಬೆಳೆಯುತ್ತದೆ. ಉತ್ತಮ ಫಸಲನ್ನೂ  ಕೊಡುತ್ತದೆ. ಈ ತತ್ವದ ಮೇಲೆ ಎಕ್ರೆವಾರು ಸಸಿ ಸಂಖ್ಯೆಯನ್ನು ಸ್ವಲ್ಪ ಹೊಂದಾಣಿಕೆ ಮಾಡಿ  ಹೆಚ್ಚು ಮಾಡಿದರೆ ಅಂತಹ ಸಮಸ್ಯೆ ಆಗಲಾರದು. ಅದರಷ್ಟಕ್ಕೆ ಮರದ ಬುಡದಲ್ಲಿ ಹುಟ್ಟಿದ ಗಿಡ ಪರಸ್ಪರ ಪೈಪೋಟಿಯಲ್ಲಿ ಬೆಳೆಯುವುದೇ ಇದಕ್ಕೆ ನಿದರ್ಶನ.

1ಬುಡದಲ್ಲಿ ಎರಡು ಗಿಡ:

  • ಅಡಿಕೆ ಸಸಿ ನೆಡುವಾಗ ಒಂದರ ಬದಲು ಅಕ್ಕಪಕ್ಕ (1-2  ಅಡಿ ಅಂತರದಲ್ಲಿ)ಎರಡು ಸಸಿ ನೆಟ್ಟರೆ ಏನಾಗಬಹುದು?
  • ಏನೂ ಆಗುವುದಿಲ್ಲ. ಎರಡೂ ಚೆನ್ನಾಗಿ ಬೆಳೆಯುತ್ತದೆ.
  • ಇಲ್ಲಿ ಒಂದು ಚಿತ್ರವನ್ನು ಗಮನಿಸಿ. ಈ ಎರಡು ಮರಗಳು ಪರಸ್ಪರ ಬೆಳೆವಣಿಗೆಯಲ್ಲೂ ಪೈಪೋಟಿ ನಡೆಸುತ್ತಿವೆ.
  • ಇಳುವರಿಯಲ್ಲೂ ಹಾಗೆಯೇ. ಇಂತದ್ದು ಇಲ್ಲಿ ಮಾತ್ರವಲ್ಲ.
  • ಕೆಲವು ಹಳೆಯ ತೋಟದಲ್ಲಿ ಒಂದೊಂದು ಬುಡದಲ್ಲಿ ಎರಡು ಮೂರು ಸಂಖ್ಯೆಯ ಸಸಿಗಳನ್ನು ಕಾಣಬಹುದು. 
  • ಹೆಚ್ಚಿನವರು ಬಿದ್ದು ಹುಟ್ಟಿದ ಅಡಿಕೆ ಸಸಿಯಾದಾಗ ಅದನ್ನು ತೆಗೆಯದೆ ಹಾಗೇ ಬಿಡುತ್ತಾರೆ.
  • ಅದು ಸಹಜವಾಗಿ ಹುಟ್ಟಿದ ಸಸಿಯಾದ ಕಾರಣ ಹೇಗಾದರೂ ಸಹವರ್ತಿ ಮರದ ಜೊತೆಗೆ ಬದುಕಿ ಚೆನ್ನಾಗಿಯೇ ಬೆಳೆಯುತ್ತದೆ.
  • ಇಂತಹ ಮರಗಳು ತಾಯಿ ಮರಕ್ಕಿಂತ ನಾನೇನೂ ಕಡಿಮೆ ಇಲ್ಲ ಎಂಬಂತೆ ಫಲವನ್ನೂ ನೀಡುತ್ತದೆ.
  • ಹಾಗಿರುವಾಗ ಅಡಿಕೆ ಸಸಿಗಳನ್ನು ನಾಟಿ ಮಾಡುವಾಗ ಶಿಸ್ತಿನ 9 x 9  8×9  ಇವೆಲ್ಲಾ ಅಂತರವನ್ನು ಪಾಲಿಸಿಯೇ ಬೆಳೆಯಬೇಕಾಗಿಲ್ಲ.
  • ಇದರಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿದರೆ  ಎಕ್ರೆವಾರು ಹೆಚ್ಚು ಸಸಿ ಹಿಡಿಸಬಹುದು.
  • ಒಂದು ಹೊಂಡದಲ್ಲಿ ಎರಡು – ಮೂರು  ಬಾಳೆ ಕಂದುಗಳನ್ನು  ನೆಟ್ಟು  ಬೆಳೆಸುವ ತಂತ್ರಜ್ಞಾನ ಇದೆ.
  • ತೋಟಗಾರಿಕಾ ಬೆಳೆಯಾದ ತೆಂಗನ್ನೂ ಸಹ ಬದುಗಳಲ್ಲಿ  ನೆಡುವಾಗ ಈ ರೀತಿ ನೆಡುವುದು ಉಂಟು.
  • ಅದೇ ರೀತಿಯಲ್ಲಿ ಅಡಿಕೆಯಲ್ಲೂ ಈ ತಂತ್ರಜ್ಞಾನವನ್ನು ಅಳವಡಿಸಬಹುದು.
  • ಕೆಲವು ಕೃಷಿಕರು ಈ ರೀತಿ ಸಸಿ ನೆಟ್ಟು ಅದರಲ್ಲಿ ಫಲ ಕಂಡ ಸುದ್ದಿಗಳೂ ಇತ್ತು.
  • ಒಂದು ಹೊಂಡದಲ್ಲಿ ಎರಡು ಸಸಿ ಬೆಳೆಸಿದರೆ ಮರಗಳಿಗೆ ಬೆಳೆವಣಿಗೆಗೆ ಯಾವುದೇ ತೊಂದರೆ ಆಗಲಾರದು.
  • ಫಸಲಿಗೂ ತೊಂದರೆ ಆಗದು.
ಈ ಎರಡು ಮರಗಳು ಪರಸ್ಪರ ಬೆಳೆವಣಿಗೆಯಲ್ಲೂ ಪೈಪೋಟಿ ನಡೆಸುತ್ತಿವೆ

ಏನೇನು ಲಾಭ ಇದೆ?

  •  ಒಂದು ಹೊಂಡದಲ್ಲಿ ಎರಡು ಸಸಿಗಳನ್ನು ನೆಟ್ಟರೆ  ಒಂದು ಎಕ್ರೆಯಲ್ಲಿ ಮಾಮೂಲಿನ ಅಂತರದಲ್ಲಿ  ನೆಡುವ ಸಸಿಗಿಂತ ದುಪ್ಪಟ್ಟು ಸಸಿಗಳನ್ನು ಹಿಡಿಸಬಹುದು ಇದು ಲೆಕ್ಕಾಚಾರ.
  • ಆದರೆ ಅಂತರದಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳುವುದು ಉತ್ತಮ.
  • 9×9 ಬದಲಿಗೆ 9×12 ಅಂತರವನ್ನು ಮಾಡಿಕೊಂಡರೆ  ಗಾಳಿ ಬೆಳಕಿಗೆ ಯಾವ ಸಮಸ್ಯೆಯೂ ಆಗಲಾರದು.
  • ಕೆಲಸಗಾರರ  ಕೊರತೆಯ ಸಮಸ್ಯೆಯಿಂದ ಪಾರಾಗಲು ಈ ಅಂತರ ಅನುಕೂಲಕರ.
  • ಮಧ್ಯಂತರ 12 ಅಡಿ ಇದ್ದರೆ ಅಲ್ಲಿ ಯಂತ್ರಿಕವಾಗಿ  ಕೊಯಿಲು, ಸಿಂಪರಣೆ ಮುಂತಾದ ನಿರ್ವಹಣೆಯನ್ನೂ ಮಾಡಬಹುದು.
  • ಗಾಳಿಯ ಹೊಡೆತಕ್ಕೆ  ಬೀಳುವ ಸಮಸ್ಯೆ ಕಡಿಮೆಯಾಗಲೂ ಇದು ಸ್ವಲ್ಪ ಮಟ್ಟಿಗೆ ಅನುಕೂಲ.

ಸಸ್ಯಗಳು ಯಾವಾಗಲೂ ಜೊತೆ ಜೊತೆಯಾಗಿದ್ದರೆ ಪರಸ್ಪರ ಪೈಪೋಟಿಯಿಂದ ಬೆಳೆಯುತ್ತವೆ. ಇದು ಪ್ರಕೃತಿಯ ರಹಸ್ಯ. ನಮ್ಮ ಹಿರಿಯರು ಯಾವುದಾದರೂ ತೆಂಗಿನ ಮರ ಫಲ ಕೊಡದೆ ಬಂಜೆಯಾಗಿದ್ದರೆ ಅದರ ಬುಡದಲ್ಲಿ ಬೇರೆ ಸಸಿ ನೆಡಲು ಹೇಳುತ್ತಿದ್ದರು. ನೆಟ್ಟ ಹೊಸ ಸಸಿ ಫಲ ಬಿಡಲು ಪ್ರಾರಂಭವಾಗುವಾಗ ಹಳೆ ಮರ ನಾಚಿಕೆಯಾಗಿ ಮತ್ತೆ ಫಲ ನೀಡಲಾರಂಭಿಸುತ್ತದೆ. ಇದು ಕೆಲವು ಕಡೆ ನಿಜವಾಗಿಯೂ ಆಗಿದೆ. ಕಾಡಿನಲ್ಲಿ ಎರಡು ಮರಗಳು ಪರಸ್ಪರ ತೀರಾ ಹತ್ತಿರ ಇದ್ದರೆ ಅವುಗಳ ಬೆಳೆವಣಿಗೆ ಬಹಳ ಉತ್ತಮವಾಗಿರುತ್ತದೆಯಲ್ಲವೇ?

ಒಂದು ಸಸಿ ಬದಲಿಗೆ ಎರಡು ಸಸಿ ನೆಟ್ಟಾಗ ನೀರಾವರಿ ಪ್ರಮಾಣ ಸ್ವಲ್ಪ ಕಡಿಮೆ ಸಾಕಾಗುತ್ತದೆ. ಹಾಗೆಯೇ  ಗೊಬ್ಬರವೂ ಸಹ  ಸ್ವಲ್ಪ ಉಳಿತಾಯವಾಗುತ್ತದೆ. ಅಡಿಕೆ ಕೊಯಿಲು, ಸಂಗ್ರಹಣೆ ಸಹ ಸುಲಭವಾಗುತ್ತದೆ.

ಅಡಿಕೆ ಬೆಳೆಗಾರರ ಅತೀ ದೊಡ್ಡ ನಷ್ಟಕ್ಕೆ ಇದು ಪರಿಹಾರ:

  • ಯಾರೇ ಅಡಿಕೆ ಬೆಳೆಯುವವರು ಇರಲಿ. 500 ಗಿಡ ನೆಟ್ಟು ಅದು ಫಸಲಿಗಾರಂಭಿಸಿದಾಗ ಅದರಲ್ಲಿ 20-25% ತೀರಾ ಅನುತ್ಪಾದಕ ಮರಗಳಾಗಿರುತ್ತವೆ. 
  • ಇವುಗಳನ್ನು ಕಡಿಯಲೂ ಮನಸ್ಸು ಬರುವುದಿಲ್ಲ.  
  • ಇತ್ತೀಚಿನ ದಿನಗಳಲ್ಲಿ ಅಡಿಕೆ ತೋಟ ಮಾಡಿದವರಲ್ಲಿ ಸಾವಿರ ಲೆಕ್ಕದಲ್ಲಿ ಮರಗಳಿದ್ದರೂ ಆ  ಮರಗಳಿಗೆ  ತಕ್ಕುದಾಗಿ ಇಳುವರಿ ಇರುವುದಿಲ್ಲ.
  • ಕಾರಣ ಅನುತ್ಪಾದಕ ಮರಗಳು. ಅವು ಜೀವಮಾನ  ಪರ್ಯಂತ ಹಾಗೆಯೇ ಬೆಳೆಗಾರನನ್ನು  ಆಟವಾಡಿಸುತ್ತಲೇ ಬದುಕುತ್ತವೆ.
  • ಒಂದರ ಬದಲು ಎರಡೆರಡು ಸಸಿ ನೆಟ್ಟರೆ ಈ ಸಮಸ್ಯೆ  ದೂರವಾಗುವ ಸಾಧ್ಯತೆ ಇದೆ.
  • ಒಂದು ಗಿಡ ಫಸಲು ಕೊಡಲಿಲ್ಲ ಅಥವಾ ತುಂಬಾ ಸಣಕಲಾಗಿ ಬದುಕಿದ್ದರೆ, ಅಥವಾ ಸತ್ತು ಹೋದರೂ ಸಹ ಮತ್ತೊಂದು ಇರುತ್ತದೆ.
  • ಅನುತ್ಪಾದಕ ಸಸ್ಯವನ್ನು ತೆಗೆದು ಬಿಟ್ಟರೂ ನಷ್ಟವಿಲ್ಲ.

ವಿಸ್ತೀರ್ಣ ಹೆಚ್ಚು ಮಾಡಬೇಕಾಗಿಲ್ಲ:

  • ಉತ್ಪಾದನೆ ಹೆಚ್ಚಿಸಬೇಕು ಎಂದು ನಾವು ವರ್ಷ ವರ್ಷವೂ ಸ್ವಲ್ಪ ಸ್ವಲ್ಪ ಹೊಸ ಪ್ರದೇಶದಲ್ಲಿ ಅಡಿಕೆ ತೋಟಮಾಡುತ್ತೇವೆ.
  • ವಿಸ್ತೀರ್ಣ ಹೆಚ್ಚಾದಂತೆ ಖರ್ಚೂ ಸಹ ಹೆಚ್ಚು. ಅದಕ್ಕೆ ನೀರಾವರಿ ಮಾಡಬೇಕು.
  • ಮೇಲ್ವಿಚಾರಣೆ ಮಾಡಬೇಕು. ಕೊಯಿಲು, ಗೊಬ್ಬರ ಎಲ್ಲವನ್ನೂ ಮಾಡುವಾಗ ನಿರ್ವಹಣೆ ಬಹಳ ಕಷ್ಟವಾಗುತ್ತದೆ.
  • ಈ ವಿಧಾನದಲ್ಲಿ ಒಂದರ ಬದಲು ಎರಡು ಸಸಿ ನೆಟ್ಟು ತೋಟ ಮಾಡಿದರೆ ವಿಸ್ತೀರ್ಣ ಹೆಚ್ಚು ಮಾಡಬೇಕಾಗಿಲ್ಲ.
  • ಇರುವ ವಿಸ್ತೀರ್ಣದಲ್ಲೇ ಇಳುವರಿಯನ್ನು ಹೆಚ್ಚು ಪಡೆಯಲು ಸಾಧ್ಯವಿದೆ.

ವಿದೇಶಗಳಲ್ಲಿ  ರೈತರು ಕಡಿಮೆ ಖರ್ಚಿನಲ್ಲಿ ಅಧಿಕ ಉತ್ಪಾದನೆ ಮಾಡಿ ಲಾಭ ಮಾಡುತ್ತಾರೆ. ನಮ್ಮಂತಹ ಹೆಚ್ಚು ಜನ ಸಂಖ್ಯೆ ಇರುವ ದೇಶಗಳಿಗೆ ರಪ್ತು ಮಾಡುತ್ತಾರೆ. ನಮ್ಮ ಸ್ಥಳೀಯ ರೈತರ ಉತ್ಪನ್ನದ ಬೆಲೆ ಕುಸಿಯುತ್ತದೆ ಇದೆಲ್ಲಾ ನಾವು ನಿತ್ಯ ಅನುಭವಿಸುವಂತದ್ದು. ಇದಕ್ಕೆಲ್ಲಾ ಉತ್ತರ ನಾವೂ ಅವರಂತೆ ಖರ್ಚು ಕಡಿಮೆ ಮಾಡಿ ಉತ್ಪಾದನೆ ಹೆಚ್ಚು ಮಾಡುವುದು. ಇದಕ್ಕೆ ಬೇಕಾದಂತಹ ತಾಂತ್ರಿಕತೆಯನ್ನು ರೈತರಿಗೆ ಕೊಡಬೇಕು.  ಆಗ ರೈತರು ಆಮದು ಆಯಿತು, ಬೆಲೆ ಕುಸಿಯಿತು ಎಂದು ಚಿಂತೆ ಮಾಡಬೇಕಾಗಿ ಬರುವುದಿಲ್ಲ. ಮುಂದಿನ ನಮ್ಮ ಕೃಷಿ ತಂತ್ರಜ್ಞಾನ ಈ ದಿಶೆಯಲ್ಲಿ ಸಾಗಿದರೆ ಮಾತ್ರ ಅದಕ್ಕೆ ಉಳಿಗಾಲ.

     –

Leave a Reply

Your email address will not be published. Required fields are marked *

error: Content is protected !!