ಕರಿಮೆಣಸಿಗೆ ಬೋರ್ಡೋ ಸಿಂಪರಣೆ ಯಾಕೆ ಮತ್ತು ಹೇಗೆ?

ಕರಿಮೆಣಸಿಗೆ ಬೋರ್ಡೋ ದ್ರಾವಣ ಸಿಂಪಡಿಸಿದಾಗ

ಕರಿಮೆಣಸಿಗೆ ಬಹಳ ಜನ ರೈತರು ಬೋರ್ಡೋ ಸಿಂಪರಣೆ ಮಾಡುವ ವಿಧಾನ ಸರಿಯಾಗಿಲ್ಲ. ಅದರ ಸೂಕ್ತ ವಿಧಾನ ಹೀಗೆ.

ಹೆಚ್ಚಿನ ಬೆಳೆಗಾರರು ಕರಿಮೆಣಸಿಗೆ ಬೋರ್ಡೋ ದ್ರಾವಣ ಸಿಂಪಡಿಸುತ್ತೀರಾ ಎಂದರೆ ನಾವು ಅಡಿಕೆಗೆ ಹೊಡೆಯುವಾಗ ಅದು ಹಾರಿ ಅದಕ್ಕೂ ಬೀಳುತ್ತದೆ. ಅಷ್ಟೇ  ಸಾಕಾಗುತ್ತದೆ ಎನ್ನುತ್ತಾರೆ. ಮತ್ತೆ ಕೆಲವರು ಸಿಂಪರಣೆ ಮಾಡುವವರಿದ್ದರೂ ಸಹ ಎಲೆಗಳೆಲ್ಲಾ ಬಿಳಿ ಬಿಳಿ ಆಗುವಂತೆ ಸಿಂಪರಣೆ  ಮಾಡುತ್ತಾರೆ.  ಇದು ಯಾವುದೂ ವೈಜ್ಞಾನಿಕವಾಗಿ ಸೂಕ್ತ ವಿಧಾನ ಅಲ್ಲ. ಇದರಿಂದ ರೋಗ ಪ್ರವೇಶಕ್ಕೆ ತಡೆ ಉಂಟಾಗುವುದಿಲ್ಲ. ರೋಗ ಬಾರದಿದ್ದರೆ ಚಾನ್ಸ್. ಬಾರದಂತೆ ತಡೆಯಲು ಈ ವಿಧಾನದ ಸಿಂಪರಣೆ ಯೋಗ್ಯವಲ್ಲ.

ಕರಿಮೆಣಸಿಗೆ ರೋಗ ಹೇಗೆ ಬರುತ್ತದೆ?

ಕರಿಮೆಣಸಿಗೆ ಬೋರ್ಡೋ ದ್ರಾವಣ ಸಿಂಪರಣೆ
 • ರೋಗಗಳು ಎಲ್ಲೆಲ್ಲಿಂದಲೋ ಬರುವುದಲ್ಲ. ಬಹುತೇಕ ರೋಗಕಾರಕಗಳು ನೀರು ಮತ್ತು ಮಣ್ಣು ಜನ್ಯವಾಗಿದ್ದು, ಅದು ಮಣ್ಣಿನ ಮೂಲದಿಂದ ಗಾಳಿ, ನೀರು ಮುಖಾಂತರ ಪ್ರಸಾರವಾಗುತ್ತದೆ.
 • ಕರಿಮೆಣಸಿಗೆ ಬರುವ ರೋಗ ಶಿಲೀಂದ್ರ ರೋಗವಾಗಿದ್ದು, ಇದು ಮಣ್ಣಿನ ಮೂಲಕವೇ ಬರುತ್ತದೆ.
 • ಕರಿ ಮೆಣಸಿನ ಬಳ್ಳಿಗೆ ಬರುವ ರೋಗಗಳಲ್ಲಿ ಶೀಘ್ರ ಸೊರಗು ರೋಗ ಮತ್ತು ನಿಧಾನ ಸೊರಗು ರೋಗ ಎಂದು ಎರಡು ವಿಧ.
 • ಶೀಘ್ರ ಸೊರಗು ರೋಗ ಮಳೆಗಾಲ ಪ್ರಾರಂಭದ ದಿನಗಳಲ್ಲಿ ಕಾಣಿಸಿಕೊಳ್ಳುತ್ತದೆ.
 • ನಿಧಾನ ಸೊರಗು ರೋಗ ಮಳೆಗಾಲ ಮುಗಿಯುವ ಸಮಯದಲ್ಲಿ  ಕಾಣಿಸಿಕೊಳ್ಳುತ್ತದೆ. 
 • ಮಳೆ ಬಿಸಿಲು ಬರುವ ಸಮಯದಲ್ಲಿ  ಶೀಘ್ರ ಸೊರಗು ರೋಗದ ಬಾಧೆ ಹೆಚ್ಚು.
 • ತೀವ್ರ ತರವಾದ ಮಳೆ ಬಂದಾಗ ನೀರು ಹೆಚ್ಚಾಗಿ ರೋಗ ಬರುತ್ತದೆ.
Advertisement 7
 • ಪ್ರಾರಂಭದ ಹಂತದಲ್ಲಿ ನೆಲಕ್ಕೆ ತಾಗಿಕೊಂಡ ಎಲೆಗಳ ಮೂಲಕ ಪ್ರಾರಂಭವಾಗುತ್ತದೆ.
 • ಆ ನಂತರ ಅದು ಮಳೆ ನೀರಿನ ಮೂಲಕ ಎಲೆ ದಂಟು ಹಾಗೂ ಕರೆಗಳಿಗೆ ಪ್ರಸಾರವಾಗುತ್ತದೆ.
 • ಎಲೆಗಳಲ್ಲಿ ಕಪ್ಪಗೆ ಚುಕ್ಕೆ ಮೊದಲಾಗಿ ಕಾಣಿಸಿಕೊಂಡು ತಕ್ಷಣದಿಂದಲೇ ಅದು ವಿಸ್ತರಿಸುತ್ತಾ ಪ್ರಸಾರವಾಗುತ್ತದೆ.
 • ಎಲೆಯಿಂದ ಬಳ್ಳಿಗೂ ಪ್ರಸಾರವಾಗುತ್ತದೆ.  ಬೇರಿಗೂ ವ್ಯಾಪಿಸುತ್ತದೆ.
 • ಎಲ್ಲವೂ ಬೆಂದಂತೆ ಆಗುತ್ತದೆ. ಅಂತಿಮವಾಗಿ ಅದು  ಪೂರ್ತಿ ಬಳ್ಳಿಯನ್ನು ಸಾಯುವಂತೆ  ಮಾಡುತ್ತದೆ.
 • ಶೀಘ್ರ ಸೊರಗು ರೋಗ ಎಲೆ ಕೊಳೆಯುವಿಕೆ, ಬಳ್ಳಿ, ಬೇರು ಕರೆಗಳ (Spike) ಕೊಳೆಯುವಿಕೆ ಮೂಲಕ ತೋರ್ಪಡುತ್ತದೆ.
ಶಿಲೀಂದ್ರ ಸೋಂಕು ಹೀಗೆ ಚುಕ್ಕೆ ಬಿದ್ದು ಎಲೆಯಿಂದ, ಕಾಳಿನಿಂದ ಪ್ರಾರಂಭವಾಗುತ್ತದೆ
ಶಿಲೀಂದ್ರ ಸೋಂಕು ಹೀಗೆ ಚುಕ್ಕೆ ಬಿದ್ದು ಎಲೆಯಿಂದ ಮತ್ತು ಕಾಳಿನಿಂದ ಪ್ರಾರಂಭವಾಗುತ್ತದೆ

ರೋಗಕಾರಕಗಳ ಪ್ರವೇಶವನ್ನು  ತಡೆಯುವಲ್ಲಿ ಶಿಲೀಂದ್ರ ನಾಶಕಗಳು ಸಹಕಾರಿ ಶಿಲೀಂದ್ರ ನಾಶಕಗಳಾದ ಕಾಪರ್ ಆಕ್ಸೀ ಕ್ಲೋರೈಡ್,  ಬೋರ್ಡೋ ದ್ರಾವಣ, ರೆಡಿ ಮಿಕ್ಸ್ ಬೋರ್ಡೋ ದ್ರಾವಣ,  ಹಾಗೆಯೇ ಇನ್ನಿತರ ತಯಾರಿಕೆಗಳು ರೋಗಾಣುಗಳ ಪ್ರವೇಶವನ್ನು ನಿರ್ಭಂಧಿಸುತ್ತವೆಯಾದರೂ ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಬೋರ್ಡೋ ದ್ರಾವಣ  ಹೆಚ್ಚು ಸಮಯಾವಧಿಯ ತನಕ ತನ್ನ ಫಲಿತಾಂಶವನ್ನು ಕೊಡುತ್ತದೆ.

ಬೋರ್ಡೋ ದ್ರಾವಣದ ಅನುಕೂಲಗಳು:

ಎಲೆಯ ಅಡಿ ಭಾಗದಿಂದ ಸೋಂಕು ಪ್ರಾರಂಭ
ಎಲೆಯ ಅಡಿ ಭಾಗದಿಂದ ಸೋಂಕು ಪ್ರಾರಂಭ
 • ಕರಿಮೆಣಸಿನ ಬಳ್ಳಿಗೆ ಬೋರ್ಡೋ ದ್ರಾವಣವನ್ನು ಸಿಂಪಡಿಸುವುದರಿಂದ ರೋಗ ನಿಯಂತ್ರಣ  ಚೆನ್ನಾಗಿ ಆಗುತ್ತದೆ.
 • ಬೋರ್ಡೋ ದ್ರಾವಣದಲ್ಲಿ ತಾಮ್ರದ ಸಲ್ಫೇಟ್ ಮತ್ತು ಕ್ಯಾಲ್ಸಿಯಂ ಮಿಶ್ರಣವು ಒಟ್ಟು ಸೇರಿಕೊಂಡು ಅದು ಎಲೆಗಳ ಮೇಲೆ ಅಂಟಿಕೊಳ್ಳುತ್ತದೆ.
 • ಹೀಗೆ ಅಂಟಿಕೊಂಡ ಭಾಗದಲ್ಲಿ ಶೀಲೀಂದ್ರವು ಪ್ರವೇಶವಾಗುವುದಕ್ಕೆ ಅನನುಕೂಲವಾಗುತ್ತದೆ.
 • ಉಳಿದ ಶಿಲೀಂದ್ರ ನಾಶಕಗಳನ್ನು ಸಿಂಪಡಿಸಿದರೆ ಅದು ಎಲೆಯ  ಭಾಗದಲ್ಲಿ ಅಂಟಿಕೊಳ್ಳುತ್ತದೆಯಾದರೂ ಅದು ಮಳೆಯ ಹನಿಗಳಿಗೆ ತೊಳೆದು ಹೋಗುವ ಕಾರಣ ಹೆಚ್ಚು ಸಮಯಾವಧಿಯ ತನಕ ಇರುವುದಿಲ್ಲ. 
 • ಎಷ್ಟು ಸಮಯದ ತನಕ ಅಂಟಿಕೊಂಡು ಇರುತ್ತದೆಯೋ  ಅಷ್ಟರವರೆಗೆ ಪರಿಣಾಮ ಇರುತ್ತದೆ.
 • ಬೋರ್ಡೋ ದ್ರಾವಣ ಹಾಗಲ್ಲ. ಅದು ಸುಮಾರಾಗಿ 2-3 ತಿಂಗಳ ತನಕವೂ ಹೆಚ್ಚು ಕಡಿಮೆ ಪ್ರಮಾಣದಲ್ಲಿ ಅಂಟಿಕೊಂಡು ಇರುತ್ತದೆ.
 • ಹಾಗಾಗಿ ಬೆಳೆಗಾರರಿಗೆ ಇದು ಧೀರ್ಘಾವಧಿಯ ತನಕ ಫಲ ಕೊಡುತ್ತದೆ.
 • ಬೋರ್ಡೋ ದ್ರಾವಣದ ಸಾರಗಳಾದ ತಾಮ್ರ+ ಗಂಧಕ+ ಕ್ಯಾಲ್ಸಿಯಂ ಇವೆಲ್ಲಾ ಸಸ್ಯ ಪೋಷಕವೂ ಆಗಿರುವುದರಿಂದ  ಇದರಿಂದ ಹೆಚ್ಚಿನ ಅನುಕೂಲ ಇರುತ್ತದೆ.
 • ಸಾಮಾನ್ಯವಾಗಿ ಶೇ. 1 ರ ಬೋರ್ಡೋ ದ್ರಾವಣವನ್ನು ಸಿಂಪರಣೆ ಮಾಡುವುದು ಶಿಫಾರಿತ.

ಬೊರ್ಡೋ ದ್ರಾವಣ ಹೇಗೆ ಸಿಂಪಡಿಸಬೇಕು:

ಈ ರೀತಿ ಎಲೆಯ ಅಡಿಭಾಗಕ್ಕೆ ಲೇಪನ ಆಗಬೇಕು
ಈ ರೀತಿ ಎಲೆಯ ಅಡಿಭಾಗಕ್ಕೆ ಲೇಪನ ಆಗಬೇಕು

ಕರಿಮೆಣಸಿಗೆ ಬೋರ್ಡೋ ದ್ರಾವಣ ಸಿಂಪರಣೆ  ಮಾಡುವಾಗ ಮುನ್ನೆಚ್ಚರಿಕೆಯಾಗಿ ಮುಂಗಾರು ಪೂರ್ವದಲ್ಲಿ ಸಿಂಪರಣೆ ಮಾಡಬೇಕು.ನಂತರ ಮಧ್ಯ ಭಾಗದಲ್ಲಿ ಮತ್ತೊಮ್ಮೆ ಸಿಂಪರಣೆ ಮಾಡಬೇಕು.

 • ಬೊರ್ಡೋ ದ್ರಾವಣಕ್ಕೆ ಅಂಟುವ ಗುಣ ಇರುತ್ತದೆ. ಹಾಗೆಯೇ ಸುಣ್ಣದ  ಜೊತೆಗೆ ಮಿಶ್ರಣವಾದಾಗ ಅದು ಒಣಗುವ ಗುಣವನ್ನೂ ಪಡೆಯುತ್ತದೆ.
 • ಒಂದು ಬಿಂದು ಬೋರ್ಡೋ ದ್ರಾವಣವನ್ನು ಮೈಯ ಚರ್ಮಕ್ಕೆ ತಾಗಿಸಿ, 5 ನಿಮಿಷ ಬಿಟ್ಟು ತೊಳೆದರೆ ಅದು ತಕ್ಷಣಕ್ಕೆ ಅಳಿಸಿ ಹೋಗದು.
 • ಅದು ಎಲೆಗಳಿಗೆ ಬಿದ್ದಾಗಲೂ ಇದೇ ಪರಿಣಾಮ ತೋರುತ್ತದೆ.
 • ಎಲೆಗಳಿಗೆ ಮಾತ್ರ ಸಿಂಪರಣೆ ಮಾಡುವುದಲ್ಲ.
 • ಬುಡ ಭಾಗದಿಂದ 1-2 ಮೀಟರ್ ಎತ್ತರದ ತನಕವೂ ಕಾಂಡ ಬಳ್ಳಿಗಳಿಗೆ ತಗಲುವಂತೆ ಸಿಂಪರಣೆ ಮಾಡಬೇಕು.
 • ಬುಡ ಭಾಗದಲ್ಲಿ ಸುಮಾರು 1-1.5 ಅಡಿ ಸುತ್ತಳತೆಯಲ್ಲಿ 2 ಇಂಚಿನಷ್ಟಾದರೂ ಹರಡುವಂತೆ ಡ್ರೆಂಚಿಂಗ್ ಮಾಡಬೇಕು. 
 • ಆಗ ನೆಲದಲ್ಲಿ ಇರುವ ಬೀಜಾಣುಗಳಿಗೆ ಮೊಳಕೆ ಒಡೆದು ಸಂಖ್ಯಾಭಿವೃದ್ಧಿಯಾಗಲು ಅವಕಾಶ ಸಿಗುವುದಿಲ್ಲ.
 • ಕಾಂಡ  ಬಳ್ಳಿಗಳಿಗೆ ಸಿಂಪರಣೆ ಮಾಡುವುದರಿಂದ ಕಾಂಡಕ್ಕೆ ಶಿಲೀಂದ್ರ ಸೋಂಕು ತಡೆಯಲ್ಪಡುತ್ತದೆ.
 • ಎಲೆಗಳಿಗೆ ಸಿಂಪರಣೆ ಮಾಡುವುದರಿಂದ ಎಲೆಗಳ ಮೂಲಕ ಶಿಲೀಂದ್ರ ಸೋಂಕು ತಡೆಯಲ್ಪಡುತ್ತದೆ.
 • ಕಾಯಿ ಕಚ್ಚಿದ ಕರೆಗಳಿಗೆ ಸಿಂಪಡಿಸುವುದರಿಂದ ಕರೆಗಳ ಮೂಲಕ ಶಿಲೀಂದ್ರ ಸೋಂಕು ತಡೆಯಲ್ಪಡುತ್ತದೆ.
 • ಒಟ್ಟಿನಲ್ಲಿ ಮೆಣಸಿಗೆ ರೋಗ ಬಾರದಂತೆ ರಕ್ಷಣೆ ಬೇಕಿದ್ದರೆ ಬಳ್ಳಿಯ ಸರ್ವಾಂಗಕ್ಕೂ ತಗಲುವಂತೆ ಬೋರ್ಡೋ ದ್ರಾವಣವನ್ನು ಸಿಂಪಡಿಸಬೇಕು.
 • ಒಂದು 20 ಅಡಿ ಎತ್ತರಕ್ಕೆ ಏರಿದ ಬಳ್ಳಿಗೆ ಎಲ್ಲಾ ಭಾಗಗಳಿಗೆ ಸಿಂಪರಣೆ ಮಾಡಲು ಸುಮಾರು 4-5 ಲೀ. ಬೋರ್ಡೋ ದ್ರಾವಣ ಬೇಕು.
ಕಾಳುಗಳಿಗೂ ತಗಲುವಂತೆ ಕಾಳು ಬಲಿಯುವಾಗ ಮತ್ತೊಮ್ಮೆ ಸಿಂಪರಣೆ ಮಾಡಬೇಕು.
ಕಾಳುಗಳಿಗೂ ತಗಲುವಂತೆ ಕಾಳು ಬಲಿಯುವಾಗ ಮತ್ತೊಮ್ಮೆ ಸಿಂಪರಣೆ ಮಾಡಬೇಕು.

ಬೋರ್ಡೋ ದ್ರಾವಣವನ್ನು ಎಲೆಗಳಿಗೆ ಸಿಂಪಡಿಸುವಾಗ ಮೇಲ್ಮೈ ಗೆ ಸಿಂಪರಣೆ ಮಾಡುವುದಕ್ಕಿಂತಲೂ ಎಲೆಯ ಅಡಿ ಭಾಗಕ್ಕೆ ಸಿಂಪರಣೆ ಮಾಡುವುದು ಸೂಕ್ತ. ಎಲೆಯ ಮೇಲ್ಮೈ ಯಲ್ಲಿ ಶಿಲೀಂದ್ರಗಳ ಸೋಂಕು ತಗಲುವುದಕ್ಕಿಂತ ಹೆಚ್ಚು ಅಡಿ ಭಾಗದಿಂದ ತಗಲುತ್ತದೆ. ಮೇಲ್ಮೈ ಗೆ ಸಿಂಪರಣೆ ಮಾಡಿದಾಗ ಅದು ನಿರಂತರ  ಮಳೆಗೆ ತೊಳೆದೂ ಹೋಗುತ್ತದೆ.

 • ಅಡಿ ಭಾಗದಲ್ಲಿ ರೋಗಾಣು ಬಾಧಿಸಿದಾಗ ಹರಿತ್ತು ಕೊಳೆಯುವುದು ಮೊದಲ ಸೂಚನೆಯಾಗಿರುತ್ತದೆ. 
 • ಅಡಿ ಭಾಗಕ್ಕೆ ಸಿಂಪರಣೆ ಮಾಡಿದಾಗ ಅದು ಬೇಗನೆ ತೊಳೆದು ಹೋಗುವುದಿಲ್ಲ. 
 • ಆದ ಕಾರಣ ಸಿಂಪರಣೆ ಮಾಡುವಾಗ ಎಲೆ ಅಡಿ ಭಾಗಕ್ಕೆ ಸಿಂಪಡಿಸಿ. ಬೇಗ ಒಣಗುತ್ತದೆ.
 • ತೊಳೆದು  ಹೋಗುವುದಿಲ್ಲ. ಅಧಿಕ ಒತ್ತಡದ ಸ್ಪ್ರೇಯರ್ ಗನ್ ನಲ್ಲಿ ಸಿಂಪಡಿಸಿದಾಗ ಎಲೆಗಳು ತಿರುವು ಮುರುವಾಗಿ ಅಡಿ ಭಾಗಕ್ಕೆ ತಗಲುತ್ತದೆ.

ಮೆಣಸಿನ ಬಳ್ಳಿಯನ್ನು ಕೆಲವು ರೈತರು ( ಉತ್ತರಕನ್ನಡದ ಸಿದ್ದಾಪುರದ ಸುಧೀರ್ ಬಲ್ಸೆ ಯಂತವರು) ಇದೇ ರೀತಿಯಲ್ಲಿ ಸಿಂಪರಣೆ ಮಾಡಿ  ಹಲವಾರು ವರ್ಷಗಳಿಂದ ರೋಗ ಸುಳಿಯದಂತೆ ಮಾಡಿ, ಬೆಳೆ ತೆಗೆಯುತ್ತಿದ್ದಾರೆ. ನಾವೂ ಯಾಕೆ ಸೂಕ್ತ ವಿಧಾನಗಳನ್ನು ಚಾಚೂ ತಪ್ಪದೆ ಪಾಲಿಸಿ ರೋಗಗಳನ್ನು ಕಡಿಮೆ ಮಾಡಬಾರದು?

Leave a Reply

Your email address will not be published. Required fields are marked *

error: Content is protected !!