ಎಲ್ಲರ ನಿರೀಕ್ಷೆ ಅಡಿಕೆಗೆ ದರ ಏರಿಕೆ ಆಗಬಹುದೇ? ಯಾವಾಗ,ಎಷ್ಟು? ಅಥವಾ ಇಳಿಕೆಯಾಗಬಹುದೇ ಎಂಬುದು.ಯಾರೂ ನಿರೀಕ್ಷಿಸದೆ ಇರುವಂತಹ ದರ ಇಳಿಕೆ ಚಾಲಿ ಮಾರುಕಟ್ಟೆಯಲ್ಲಿ ಆಗಿದೆ. ದಿನದಿಂದ ದಿನಕ್ಕೆ ಇಳಿಕೆಯಾಗುತ್ತಾ ಬಂದು ರೂ.49,000 ದಿಂದ 44,000 ಸುಮಾರಿಗೆ ಕುಸಿದಿದೆ. ಇನ್ನೂ ಇಳಿಕೆಯಾಗಬಹುದು, ಚುನಾವಣೆ ಬೇರೆ ಇದೆ ಎಂದೆಲ್ಲಾ ಮಾತುಗಳು ಕೇಳಿ ಬರುತ್ತಿವೆ. ಆದರೆ ನಮ್ಮ ಊಹೆ ಮತ್ತು ಮಾರುಕಟ್ಟೆ ನಡೆ ಬೇರೆಯೇ ಆಗಿರುತ್ತದೆ.
ಅಡಿಕೆ ಉತ್ಪಾದನೆ ಹೆಚ್ಚಾಗಿದೆ. ಆದ ಕಾರಣ ಮಾರುಕಟ್ಟೆಗೆ ಧಾರಾಳ ಅಡಿಕೆ ಬರುತ್ತಾ ಇದೆ. ಅದಕ್ಕನುಗುಣವಾಗಿ ಬೇಡಿಕೆ ಇಲ್ಲದಾಗಿ ದರ ಇಳಿಕೆಯಾಗಿದೆ ಎಂಬುದು ಒಂದು ಹೇಳಿಕೆ.ಉತ್ಪಾದನೆ ಹೆಚ್ಚಳವಾಗಿದೆ ನಿಜ. ಉತ್ಪಾದನೆ ಆದಷ್ಟೂ ಮಾರುಕಟ್ಟೆಗೆ ಬರಲೇ ಬೇಕು. ಬರುತ್ತಲೂ ಇದೆ. ಎಲ್ಲಾ ಕಡೆ ಅಡಿಕೆಯ ದಾಸ್ತಾನು ಇದೆ. ದರ ಕಡಿಮೆ ಮಾಡಿ ಖರೀದಿ ಮಾಡುತ್ತಲೇ ಇದ್ದಾರೆ. ಬೇಡಿಕೆ ಇಲ್ಲವಾದರೆ ಖರೀದಿ ಸ್ಥಬ್ಧವಾಗಬೇಕು.ಖರೀದಿ ನಡೆಯುತ್ತಾ ಇದೆ. ಬೇಡಿಕೆ ಇದೆ. ಆದರೆ ಬೆಲೆ ಮಾತ್ರ ಕಡಿಮೆಗೆ ಕೇಳುತ್ತಿರಬಹುದು. ಇದಕ್ಕೆ ಕಾರಣ ಬಹುಶಃ ಆಮದು ಅಡಿಕೆಯೇ ಇರಬೇಕು. ಗಡಿ ಭಾಗವನ್ನು ತುಂಬಾ ಸಡಿಲಗೊಳಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಆಮದು ಆಗುತ್ತಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಸ್ಥಳೀಯ ಅಡಿಕೆಯನ್ನು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ ಎಂಬುದಾಗಿ ಒಂದು ಸಮಜಾಯಿಶಿ.
ಅಡಿಕೆ ಆಮದು ನಿಜ:
- ಕೊರೋನಾ ಸಮಯದಲ್ಲಿ ಹಾಗೂ ನಂತರದ ಒಂದು ವರ್ಷ ಕಾಲ ಗಡಿ ಭಾಗವನ್ನು ಭಾರೀ ಬಿಗಿ ಗೊಳಿಸಿ ಆಮದು ಅಡಿಕೆಗೆ ಕೇಂದ್ರ ಸರಕಾರ ಕಡಿವಾಣ ಹಾಕಿತ್ತು.
- ಹಾಗಾಗಿ ದರ ಏರುತ್ತಲೇ ಮುಂದುವರಿದಿತ್ತು. ಎಷ್ಟು ಸಮಯದ ತನಕ ಈ ರೀತಿ ಬಿಗು ಮಾಡಬಹುದು?
- ಇದಕ್ಕೂ ಒಂದು ಮಿತಿ ಇದೆ.
- ಇತ್ತೀಚೆಗೆ ಆಮದು ಸುಂಕವನ್ನು ಜಾಸ್ತಿ ಮಾಡಿ ಕಾನೂನು ಬದ್ದವಾಗಿ ಆಮದು ಮಾಡುವುದಕ್ಕೆ ಕಷ್ಟವಾಗುವಂತೆ ಮಾಡಲಾಯಿತು.
- ಆದರೆ ಕಾನೂನಿನ ಚೌಕಟ್ಟಿನಿಂದ ಹೊರಗೆ ಆಮದು ನಡೆಯುತ್ತಲೇ ಇತ್ತು ಎಂಬುದಾಗಿ ಸುದ್ದಿ ಇದೆ.
- ಈ ಬಗ್ಗೆ ಆಗಾಗ್ಗೆ ಪತ್ರಿಕಾ ವರದಿಗಳು ಬರುವುದನ್ನೂ ಗಮನಿಸಿರಬಹುದು.
- ವಿದೇಶಗಳಲ್ಲಿ ತಯಾರಾಗುವ ಅಡಿಕೆಯನ್ನು ಅಲ್ಲಿನವರು ಬರೇ ಕೊಯಿಲು ಮಾಡಿ, ಕಚ್ಚಾ ಮಾದರಿಯಲ್ಲಿ ಸಂಸ್ಕರಣೆ ಮಾಡುತ್ತಾರೆ ಅಷ್ಟೇ.
- ಅದನ್ನು ಖರೀದಿ ಮಾಡುವವರು ಹೆಚ್ಚಿನವರು ಭಾರತೀಯ ವ್ಯಾಪಾರಿಗಳೇ ಆಗಿರುತ್ತಾರೆ.
- ಅಲ್ಲಿನ ಸರಕಾರ ಆ ದೇಶದ ಕೃಷಿಕರಿಗೆ ಮತ್ತು ದೇಶದ ಖಜಾನೆಗೆ ಆದಾಯವಾಗಬೇಕು ಎಂಬ ಕಾರಣಕ್ಕೆ ಇದಕ್ಕೆ ಅವಕಾಶವನ್ನು ನೀಡುತ್ತದೆ.
- ಉದಾಹರಣೆಗೆ ಗೋಡಂಬಿ. ಕಾಂಬೋಡಿಯಾ, ವಿಯೆಟ್ನಾಂ ಮುಂತಾದ ದೇಶಗಳಿಂದ ಖರೀದಿ ಮಾಡಿ ಇಲ್ಲಿನ ಮಾರುಕಟ್ಟೆಗೆ ಸರಬರಾಜು ಮಾಡುವವರು ಭಾರತೀಯರೇ ಆಗಿರುತ್ತಾರೆ.
- ಅಲ್ಲಿ ಅಡಿಕೆಯನ್ನು ಸೂಕ್ತ ರೀತಿಯಲ್ಲಿ ಸಂಸ್ಕರಣೆ ಮಾಡಿಸಿ ದೇಶದ ಮಾರುಕಟ್ಟೆಗೆ ಬೇಕಾದಂತೆ ವ್ಯವಸ್ಥೆ ಮಾಡುವವರೂ ಭಾರತೀಯ ವ್ಯಾಪಾರಿಗಳೇ ಆಗಿರುತ್ತಾರೆ.
- ಅವರೂ ಲಾಭಕ್ಕಾಗಿಯೇ ವ್ಯವಹಾರ ಮಾಡುವವರು. ಎಲ್ಲಾ ವ್ಯವಹಾರದಲ್ಲೂ ಇದು ಇದ್ದದ್ದೇ.
- ಸರಕಾರ ದೇಶೀಯ ವ್ಯಾಪಾರಿಗಳ ಹಿತವನ್ನೂ ಸ್ವಲ್ಪ ಮಟ್ಟಿಗೆಯಾದರೂ ಮೆದು ಧೋರಣೆ ಮೂಲಕ ಕಾಯ್ದುಕೊಳ್ಳಲೇ ಬೇಕಾಗುತ್ತದೆ.
- ಅಮದು ಆಗುವುದು ನಿಜ. ಕಾನೂನು ಬದ್ದವಾಗಿ ಕಡಿಮೆ. ಕಾನೂನು ಚೌಕಟ್ಟಿನ ಹೊರಗೆ ಹೆಚ್ಚು.
- ಖರ್ಜೂರ, ಅಥವಾ ಇನ್ಯಾವುದೋ ವಸ್ತುಗಳ ಆಮದು ಜೊತೆಗೆ ಒಂದಷ್ಟು (UAE ದೇಶದಿಂದ) ಅಡಿಕೆಯನ್ನೂ ಸೇರಿಸಿ ಆಮದು ಮಾಡುತ್ತಿರಬಹುದು.
- ಅಥವಾ ಇನ್ಯಾವುದೋ ವಸ್ತುವಿನ ಜೊತೆಗೆ ಬರಬಹುದು. ಎಲ್ಲವನ್ನೂ ಕೂಲಂಕುಶವಾಗಿ ಪರಿಶೀಲನೆ ಮಾಡುವುದೂ ಅಷ್ಟು ಪ್ರಾಯೋಗಿಕವಲ್ಲ.
ಸ್ಥಳೀಯ ಅಡಿಕೆಯಲ್ಲಿ ಗುಣಮಟ್ಟ ಕಡಿಮೆಯಾಗಿದೆ:
- ಅಡಿಕೆ ವ್ಯಾಪಾರ ನಾವೆಲ್ಲಾ ಕಂಡವರು. ನಾವು ಜಾಗರೂಕತೆಯಲ್ಲಿ ಅಡಿಕೆ ಒಣಗಿಸಿ,ವರ್ಗೀಕರಿಸಿ ಅದನ್ನು ಮಾರಾಟಗಾರರಿಗೆ ಕೊಡುತ್ತೇವೆ.
- ಆದರೆ ಖರೀದಿದಾರರು ಅದನ್ನು ನಮ್ಮಷ್ಟು ಜಾಗರೂಕತೆಯಲ್ಲಿ ಹಾಂಡಲ್ ಮಾಡುವುದಿಲ್ಲ.
- ಹಾಗಾಗಿ ದಾಸ್ತಾನು ಹೆಚ್ಚಾಗಿ ಅಡಿಕೆ ಗುಣಮಟ್ಟ ಹಾಳಾಗಿದೆ. ಸ್ಥಳೀಯ ಅಡಿಕೆಗಿಂತ ಉತ್ತಮ ಗುಣಮಟ್ಟ ಆಮದು ಅಡಿಕೆಗೆ ಇದೆ ಎನ್ನುತ್ತಾರೆ.
- ಕಳೆದ ಎರಡು ಮೂರು ತಿಂಗಳುಗಳಿಂದ ಸಿಂಗಲ್ ಚೋಳ್ ಅಡಿಕೆಯನ್ನು ಖರೀದಿಸಿದ ದರಕ್ಕಿಂತ ಭಾರೀ ಕಡಿಮೆ ದರಕ್ಕೆ ವ್ಯಾಪಾರಿಗಳು ಕೇಳುತ್ತಿದ್ದಾರೆ.
- ನಿರ್ವಾಹ ಇಲ್ಲದೆ ವ್ಯವಹಾರವೂ ನಡೆಯುತ್ತಿದೆ. ಹಾಗಾಗಿ ಬೆಲೆ ವ್ಯತ್ಯಾಸವನ್ನು ಹೊಂದಾಣಿಕೆ ಮಾಡಿಕೊಳ್ಳಲು ದರ ಕಡಿಮೆ ಮಾಡಲಾಗುತ್ತಿದೆ.
ಯಾವಾಗ ದರ ಏರಬಹುದು?
- ಕರ್ನಾಟಕದ ವಿಧಾನಸಭಾ ಚುನಾವಣೆ ಸದ್ಯವೇ (ಮೇ 2023) ನಡೆಯಲಿದೆ. ರಾಜಕೀಯ ಚಟುವಟಿಕೆಗಳು ಭರದಿಂದ ಸಾಗುತ್ತಿದೆ.
- ಈ ಸಮಯದಲ್ಲಿ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗುವಂತ ಸ್ಥಿತಿಯನ್ನು ಕಾಯ್ದುಕೊಳ್ಳುವ ಸಾಧ್ಯತೆ ಹೆಚ್ಚು.
- ಕರ್ನಾಟಕ ಅಡಿಕೆ ಬೆಳೆಯ ಒಂದು ಖಜಾನೆ ಎಂದೇ ಹೇಳಬಹುದು.
- ಇಲ್ಲಿನ ಅಡಿಕೆ ಬೆಳೆಗಾರರಿಗೆ ತೊಂದರೆ ಆದರೆ ಅದು ಮುಂದಿನ ಸರಕಾರದ ಮೇಲೆ ಪರಿಣಾಮ ಬೀರುತ್ತದೆ.
- ಹಾಗಾಗಿ ಅಡಿಕೆ ಬೆಳೆಗಾರರಿಗೆ ಅನುಕೂಲವಾಗುವಂತೆ ಸಧ್ಯವೇ ಆಮದು ಆಗುವುದನ್ನು ಬಿಗಿಗೊಳಿಸುವ ಸಾಧ್ಯತೆ ಹೆಚ್ಚು ಇದೆ.
- ಈಗಾಗಲೇ ಬೂತಾನ್ ನಿಂದ ಹಸಿ ಅಡಿಕೆ ಆಮದಿಗೆ ಪರವಾನಿಗೆ ನೀಡಿರುವುದು ಇತ್ಯಾದಿ ಕೇಂದ್ರ ಸರಕಾರದ ನಿರ್ಧಾರದ ಮೇಲೆ ಅಡಿಕೆ ಬೆಳೆಗಾರರ ನಂಬಿಕೆಯನ್ನು ಕಡಿಮೆ ಮಾಡಿದೆ.
- ಎಲ್ಲಾ ಕಡೆಯ ಬಂದರುಗಳಲ್ಲಿ ಬಿಗಿ ಮಾಡಿದರೆ ಆಮದು ಕಷ್ಟವಾಗುತ್ತದೆ.
- ದೇಶೀಯ ಮಾರುಕಟ್ಟೆಗೆ ಬೇಕಾಗುವ ಮಾಲು ಕೊರತೆಯಾಗಿ ಬೇಡಿಕೆ ಉಂಟಾಗುತ್ತದೆ.
- ಸಹಜವಾಗಿ ಬೆಲೆ ಸ್ವಲ್ಪ ಸ್ವಲ್ಪ ಏರಲು ಪ್ರಾರಂಭವಾಗುತ್ತದೆ.
- ಕಳೆದ ಒಂದು ವಾರದಿಂದ ಈ ಕೆಲಸ ಪ್ರಾರಂಭವಾದಂತೆ ಕಾಣಿಸುತ್ತಿದೆ.
- ಈಗಾಗಲೇ ಸ್ಟಾಕ್ ನಲ್ಲಿರುವ ಅಡಿಕೆ ಖಾಲಿಯಾಗಲು ಪ್ರಾರಂಭವಾಗಬೇಕು.
- ಅಡಿಕೆ ಖರೀದಿ ಕೇಂದ್ರಗಳ ಮುಂದೆ ಲಾರಿ ನಿಂತು ಅಲ್ಲಿನ ಸ್ಟಾಕು ಖಾಲಿಯಾಗಲು ಪ್ರಾರಂಭವಾಯಿತೆಂದರೆ ದರ ಏರಿಕೆ ಶುರು.
- ಹಾಗೆಂದು ಬೆಳೆಗಾರರು ಭಾರೀ ನಿರೀಕ್ಷೆ ಇಟ್ಟುಕೊಳ್ಳುವುದು ಬೇಡ. ಹಳೆ ಅಡಿಕೆಗೆ ಹೆಚ್ಚೆಂದರೆ 47000-47500 ತನಕ ಏರಿಕೆ ಆಗಬಹುದು.
- ಹೊಸತಕ್ಕೆ 40,000-42,000 ತನಕ ಏರಿಕೆ ಆಗಬಹುದು.
- ಹೊಸ ಅಡಿಕೆ ಗುಣಮಟ್ಟ ಚೆನ್ನಾಗಿರುವ ಕಾರಣ ಬೇಡಿಕೆ ಇದೆ. ಆದರೆ ಹಳೆಯ ಅಡಿಕೆ ಅದರ ಮುಂಚಲನೆಗೆ ಅಡ್ಡಿಯಾಗಿದೆ.
ಬೆಳೆಗಾರರು ಗಮನಿಸಿ-ಮುಂದೆ ಗುಣಮಟ್ಟಕ್ಕೆ ಫ್ರಾಶಸ್ತ್ಯ:
- ಈಗಾಗಲೆ ಅಡಿಕೆ ಬೆಳೆ ಪ್ರದೇಶ ದುಪ್ಪಟ್ಟು ಹೆಚ್ಚಳವಾಗಿದೆ. ಆದಕ್ಕನುಗುಣವಾಗಿ ಉತಾದನೆಯೂ ಹೆಚ್ಚಲಿದೆ.
- ಹೊಸ ಹೊಸ ಪ್ರದೇಶಗಳು, ಬೇರೆ ರಾಜ್ಯಗಳು ಈ ಬೆಳೆಯನ್ನು ವಿಸೃತವಾಗಿ ಬೆಳೆಯಲು ಪ್ರಾರಂಭಿಸಿವೆ.
- ಈ ವರ್ಷವೂ ಕೋಟ್ಯಾಂತರ ಸಂಖ್ಯೆಯ ಅಡಿಕೆ ಬೀಜ ತಮಿಳುನಾಡು, ಆಂದ್ರ ಪ್ರದೇಶಗಳಿಗೆ ಹೋಗಿದೆ.
- ಕಳೆದ ಮೂರು ನಾಲ್ಕು ವರ್ಷಗಳಿಂದ ಇದು ನಡೆಯುತ್ತಿದೆ. ಹಾಗಾಗಿ ಬೆಲೆ ಇಳಿಕೆ ಎಂದುದರಲ್ಲಿ ಅನುಮಾನ ಇಲ್ಲ.
- ಇಂತಹ ಸಂಧರ್ಭಗಳಲ್ಲಿ ಗುಣಮಟ್ಟದ ಅಂದರೆ ಸರಿಯಾಗಿ ಒಣಗಿದ, ಹಾಳಾಗದ ಅಡಿಕೆಗೆ ಮಾತ್ರ ಉತ್ತಮ ಬೇಡಿಕೆ ಬರುವ ಸಾದ್ಯತೆ ಇದೆ.
- ಹಾಗಾಗಿ ಒಣಗಿಸುವುದರಲ್ಲಿ, ಹಾಗೆಯೇ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಜಾಗರೂಕರಾಗಿರಿ.
- ಈಗಾಗಲೇ ಉತ್ತರ ಭಾರತದ ಖರೀದಿದಾರರು ನೇರವಾಗಿ ಬೆಳೆಗಾರರಿಂದ ಅಡಿಕೆ ಖರೀದಿ ಪ್ರಾರಂಭಿಸಿದ್ದಾರೆ.
- ಕೆಲವು ಟ್ರಾನ್ಸ್ ಪೋರ್ಟ್ ಏಜೆನ್ಸೀಗಳಲ್ಲಿ ಚೀಲ ಚೀಲ ಅಡಿಕೆ ಬೆಳೆಗಾರರಿಂದ ಉತ್ತರ ಭಾರತಕ್ಕೆ ಹೋಗುತ್ತಿದೆ.
- ಈ ವ್ಯವಹಾರಕ್ಕೆ ಅನುಮತಿಯೂ ಇದೆ. ಹಾಗಾಗಿ ಉತ್ತಮ ಗುಣಮಟ್ಟದ ಖಾತ್ರಿ ಇದ್ದಲ್ಲಿ ಸ್ಥಳೀಯ ವ್ಯಾಪಾರಿಗಳೇ ಆಗಬೇಕಾಗಿಲ್ಲ.
- ನೇರ ಮಾರುಕಟ್ಟೆಗೂ ಆವಕಾಶ ಇದೆ. ನಿಮ್ಮ ಪಕ್ಕದ ಟ್ರಾನ್ಸ್ ಪೋರ್ಟ್ ಆಫೀಸಿನಲ್ಲಿ ಈ ವ್ಯವಹಾರದ ಬಗ್ಗೆ ಗಮನಿಸಿ.
ಕೆಂಪಡಿಕೆ ದರ ಅಭಾದಿತ:
- ಕೆಂಪಡಿಕೆ ಎಂದರೆ ಅದು ಬೇಯಿಸಿ ಒಣಗಿಸುವ ಅಡಿಕೆಯಾಗಿದ್ದು, ಅದು ಸರಿಯಾಗಿ ಒಣಗಿಸಿದ್ದೇ ಆದರೆ ಹಾಳಾಗುವ ಸಾಧ್ಯತೆ ಕಡಿಮೆ.
- ಈಗ ಚಾಲಿಯ ದರ ಇಳಿಕೆಯ ಕಾರಣದಿಂದ ಕೆಂಪಡಿಕೆ ದರ 1-2 ಸಾವಿರ ಹಿಂದೆ ಬಂದಿರಬಹುದು.
- ಆದರೆ ಅದಕ್ಕೆ ಅದರದ್ದೇ ಆದ ಬೇಡಿಕೆ ಇದೆ,ಮಾರುಕಟ್ಟೆ ಮೌಲ್ಯವೂ ಇದೆ.
- ಸರಾಸರಿ ರಾಶಿ ಅಡಿಕೆ ದರ 43,000 ದ ಆಸುಪಾಸಿನಲ್ಲಿ ಮುಂದುವರಿಯುತ್ತಿದೆ.
ಚಾಲಿ ಪ್ರಕಟಣೆ ದರ ಒಂದು ಖರೀದಿ ದರ ಇನ್ನೊಂದು:
ಚಾಲಿ ಮಾರುಕಟ್ಟೆ ವರದಿಗಳಲ್ಲಿ ನಮೂದಿಸಲಾಗುವ ಗರಿಷ್ಟ ರೈತರಿಗಲ್ಲ. ಪ್ರಕಟಣೆ ದರಕ್ಕೂ ರೈತರಿಂದ ಖರೀದಿ ದರಕ್ಕೂ ಕಿಲೋ ಒಂದಕ್ಕೆ ರೂ.50 ರಷ್ಟು ವ್ಯತ್ಯಾಸವಿದ್ದು, ಇಂತಹ ಕೆಲಸವನ್ನು ಯಾಕೆ ಮಾಡುತ್ತಿದ್ದಾರೆ ಎಂಬುದು ತಿಳಿಯದಾಗಿದೆ. ಈ ಬಗ್ಗೆ ಬೆಳೆಗಾರರು ಸಂಘಟಿತರಾಗಿ ಪ್ರಶ್ಣೆ ಮಾಡಬೇಕಾಗಿದೆ.
ಈ ವರ್ಷ ಖುಷಿ ಕಂಡ ಅಡಿಕೆ ಬೆಳೆಗಾರರೆಂದರೆ ಆಗಾಗ್ಗೆ ಅಡಿಕೆ ಮಾರಾಟ ಮಾಡಿದವರು. ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಪಟೋರಾ ಅಡಿಕೆಗೆ 40,000 ದರಕ್ಕೆ ಮಾರಾಟ ಮಾಡಿದವರೂ ಇದ್ದಾರೆ. ಹಳೆ ಚಾಲಿ ಸರಾಸರಿ 48000 ದರಕ್ಕೂ ಮಾರಾಟ ಮಾಡಿದವರಿದ್ದಾರೆ. ಯಾರು ದಾಸ್ತಾನು ಇಟ್ಟು ಒಮ್ಮೆಲೇ ಮಾರಾಟ ಮಾಡುವುದು ಎಂದು ನಿರ್ಧರಿಸಿದ್ದಾರೆಯೋ ಆವರಿಗೆ ಈಗ ಮಾರುಕಟ್ಟೆ ಕಗ್ಗಂಟಾಗಿದೆ. ಮಾರುವುದೋ-ಕ್ವಿಂಟಾಲಿಗೆ ಸುಮಾರು 4000 ನಷ್ಟ. ಇಡುವುದೋ ಇನ್ನೂ ಇಳಿದರೆ ಎಂಬ ಭಯ. ಈ ಅಡಕತ್ತರಿಯ ಭಯ ಬೇಡ ಎಂದಾದರೇ ಖರ್ಚಿಗೆ ಬೇಕಾದಂತೆ ವರ್ಷವಿಡೀ ಅಡಿಕೆ ಮಾರಾಟ ಮಾಡುತ್ತಾ ಇರಿ.