ನಮ್ಮಲ್ಲಿ ಇರುವಂತಹ ಹಳೆಯ ಮಾವು- ಗೇರು-ಹಲಸು ಇನ್ಯಾವುದೇ ಹಣ್ಣಿನ ತೊಟಗಳಲ್ಲಿ ಹೆಚ್ಚಿನವುಗಳು ಅನಾಮಧೇಯ ತಳಿಯ ಬೀಜಗಳಿಂದ ಆದವುಗಳು. ಇವು ಈಗಲೇ ಹಳೆಯದಾಗಿ ಅನುತ್ಪಾದಕವೂ ಆಗಿರಬಹುದು. ಇಂತಹ ಮರಗಳು ಹೆಚ್ಚಾಗಿ ನಿರ್ವಹಣೆ ಇಲ್ಲದೇ ನಿರ್ಲಕ್ಷ್ಯದಿಂದ ಬೆಳೆದಿರುತ್ತವೆ. ಇವುಗಳನ್ನು ಇಳುವರಿ ಅಭಿವೃದ್ಧಿಯ ದೃಷ್ಟಿಯಿಂದ ಪುನಶ್ಚೇತನ ಮಾಡುವುದು ಉತ್ತಮ. ಹಳೆಯ ಅಥವಾ ಕಡಿಮೆ ಇಳುವರಿ ಕೊಡುವಂತಹ ಮರಗಳನ್ನು ಸವರುವಿಕೆಯಿಂದ ಹಾಗು ಕಸಿ ವಿಧಾನದ ಮೂಲಕ ಪುನಶ್ಚೇತನಗೊಳಿಸಿದರೆ ಹೊಸ ಮರವನ್ನಾಗಿ ಪರಿವರ್ತಿಸಬಹುದು.
ಪುನಶ್ಚೇತನದ ಉದ್ದೇಶಗಳು :
- ಹಳೆಯ ಹಾಗೂ ಕಡಿಮೆ ಇಳುವರಿಯ ಗಿಡಗಳ ಗುಣವತ್ತತೆಯನ್ನು ಹೆಚ್ಚಿಸಲು.
- ಹಳೆಯ ಮರಗಳನ್ನೇ ಬಳಸಿಕೊಂಡು ನಮಗೆ ಅವಶ್ಯವೆನಿಸಿರುವ ತಳಿಯನ್ನಾಗಿ ಪರಿವರ್ತಿಸಲು.
- ವಿವಿಧ ಬಗೆಯ ತಳಿಯನ್ನು ಒಂದೆ ಮರದಲ್ಲಿ ಬೆಳೆಯುವಂತೆ ಮಾಡಲು.
- ದೊಡ್ಡ ಸಂಖ್ಯೆಯ ತಳಿಗಳನ್ನು ಸಣ್ಣ ಜಮೀನಿನನಲ್ಲಿ ಕಾಪಿಡಲು ಸಾಧ್ಯವಾಗುವಂತೆ ಮಾಡಲು
- ಮರದ ಹಳೆಯ ಮೇಲ್ಛಾವಣಿಗೆ ಮರುಜೀವ ಕೊಡಲುಮರಕ್ಕೆ ಸೂಕತ್ವಾದ ಮೇಲ್ಛಾವಣಿ ಆಕಾರವನ್ನು ನೀಡಲು.
- ಬದನಿಕೆ ಬಂದು ಅನುತ್ಪಾದಕವಾಗುತ್ತಿರುವ ಸಮಸ್ಯೆಗೆ ಇದು ಒಂದು ಉತ್ತಮ ಪರಿಹಾರ.
- ತಳಿ ಮೂಲವನ್ನು ಉಳಿಸಿಳ್ಳಲೂ ಸಹ ಇದು ತುಂಬಾ ಉಪಯುಕ್ತ.
ಗಮನಿಸಬೇಕಾದ ಅಂಶಗಳು :
- ಪುನಶ್ಚೇತನಕ್ಕೆ ಮರವು ಆರೋಗ್ಯಪೂರ್ಣವಾಗಿದ್ದು, ಅದು ಯಾವುದೇ ಕೀಟದ ಹಾನಿಯಿಂದ ಮುಕ್ತವಾಗಿರಬೇಕು.
- ಮರವು ತುಂಬಾ ಹಳೆಯದಾಗಿರಬಾರದು. ಮೇಣ ಸ್ರವಿಸಿರಬಾರದು. ಅಥವಾ ಚೇತರಿಸಿಕೊಳ್ಳುವ ಶಕ್ತಿ ಕಳೆದುಕೊಂಡಿರಬಾರದು.
- ಕಡಿಮೆ ಇಳುವರಿಯ ಅಥವಾ ಸಾಧಾರಣ ಹಳೆಯ ನಿರುಪಯುಕ್ತ ಎನಿಸುವಂತಹ ಮರಗಳನ್ನೇ ಪುನಶ್ಚೇತನಕ್ಕಾಗಿ ಆಯ್ದುಕೊಳ್ಳಬೇಕು.
- ಮರವು ಸೂರ್ಯನ ಬೆಳಿಗೆ ತೆರೆದುಕೊಂಡಂತಿರಬೇಕು.ಮರದ ಸುತ್ತಲ ಪರಿಸರವು ಕಾಡು ಪೊದೆಗಳು ಹಾಗೂ ಪ್ರತಿಸ್ಪರ್ಧೆ ಕೊಡುವಂತಹ ಇನ್ನಿತರ ಕಾಡುಮರಗಳಿಂದ ಮುಕ್ತವಾಗಿರಬೇಕು.
ಪುನಶ್ಚೇತನ- ಹೊಸ ಚೇತನ:
- ಹಳೆಯ ಅನುತ್ಪಾದಕ ಮರದ ಕಾಂಡವನ್ನು ಬುಡಭಾಗ ಸುಮಾರು 1 ಅಡಿ ಬಿಟ್ಟು ಗರಗಸದಲ್ಲಿ ಸೀಳದಂತೆ ಕತ್ತರಿಸಿರಿ.
- ಕತ್ತರಿಸಿದ ಭಾಗಕ್ಕೆ ಬೊರ್ಡೋ ಪೇಸ್ಟ್ ಅಥವಾ ಸಗಣಿಯ ಲೇಪನವನ್ನು ಮಾಡಿ. ಪಾರದರ್ಶಕ ಪಾಲಿಥೀನ್ ಲಕೋಟೆಯನ್ನು ಸ್ವಲ್ಪ ಭಾಗ ಮುಚ್ಚುವಂತೆ ಹೊದಿಸಬಹುದು.
- ಸುಮಾರು 1-1.5 ತಿಂಗಳಲ್ಲಿ ಆ ಭಾಗದಲ್ಲಿ ಹೊಸ ಚಿಗುರು ಬರುತ್ತದೆ. 4-5-6 ಸಂಖ್ಯೆಯಲ್ಲೂ ಬರಬಹುದು.
- ಈ ಚಿಗುರುಳನ್ನು ಸ್ವಲ್ಪ ಬೆಳೆಯಲು ಬಿಡಿ. ಅದರ ಕಾಂಡ ತೀರಾ ಮೆದು ಸ್ಥಿತಿಯಿಂದ ಸ್ವಲ್ಪ ಗಡಸು ತನಕ್ಕೆ ಬರಲಿ.
ನಿಮಗೆ ಬೇಕಾಗುವಕಸಿ ಕಡಿಯನ್ನು ತಂದು ಈ ಭಾಗಕ್ಕೆ ಮೃದು ಕಾಂಡ ಕಸಿಯ ಮೂಲಕ ಕಸಿ ಮಾಡಿ. ಮರದ ಬೊಡ್ಡೆಯಲ್ಲಿ ಬಂದ ಎಲ್ಲಾ ಚಿಗುರುಗಳಿಗೂ ಕಸಿ ಮಾಡಬಹುದು. ಅದು ಬೇರೆ ಬೇರೆ ತಳಿಯದ್ದೂ ಆಗಬಹುದು. ಇದು ಸುಮಾರು 15-20 ದಿನದಲ್ಲಿ ಕಸಿ ಕೂಡಿಕೊಂಡು ಹೊಸ ತಲೆಮಾರಿನ ತಳಿಯಾಗಿ ಬೆಳೆಯುತ್ತದೆ.
ಸವರುವಿಕೆ ಮೂಲಕ ಪುನಶ್ಚೇತನ :
- ಹಳೆಯದಾದಂತಹ ಮರಗಳನ್ನು ಆಯ್ದುಕೊಂಡು, ನೆಲದಿಂದ 1.0ರಿಂದ 1.5 ಮೀಟರ್ನಷ್ಟು ಎತ್ತರದಲ್ಲಿನ ಪ್ರಮುಖ ಗೆಲ್ಲುಗಳನ್ನು ತೆಗೆಯಬೇಕು.
- ಈ ರೀತಿಯಾಗಿ ಗೆಲ್ಲುಗಳನ್ನು ಕತ್ತರಿಸುವಾಗ ಭಾಗದಿಂದ ಮುರಿಯುವ ರಭಸದಲ್ಲಿ ಮರದಲ್ಲಿನ ಗೆಲ್ಲುಗಳು ಸೀಳಿಹೋಗದಂತೆ ಅಥವಾ ಕತ್ತರಿಸಿದ ಭಾಗದ ತೊಗಟೆಯ ಸಿಪ್ಪೆಯು ಏಳದಂತೆ ಮುಂಜಾಗ್ರತೆಯನ್ನು ವಹಿಸಬೇಕು.
- ಅನಂತರ, ಕತ್ತರಿಸಿದ ಗಾಯದ ಭಾಗದಲ್ಲಿ ಕಾಂಡಕೊರಕ ಅಥವಾ ಇನ್ನಿತರ ಹಾನಿಕಾರಕ ಕೀಟಗಳ ಮೊಟ್ಟೆ ಇಡದಂತೆ ಅಥವಾ ಹಾನಿ ಮಾಡದಂತೆ
- ಮುನ್ನೆಚ್ಚರಿಕೆಯಾಗಿ ಗಾಯದ ಭಾಗಕ್ಕೆ ಶೇ.10ರ ಬೋರ್ಡೊ ಮಿಶ್ರಣವನ್ನು ಲೇಪಿಸಬೇಕು ಹಾಗೂ ಕಾಂಡದ ಉಳಿದ ಭಾಗಕ್ಕೆ 0,2%ರ ಪ್ರಮಾಣದ ಕ್ಲೋರೋಪೈರಿಫಾಸ್ ಎನ್ನುವ ಕೀಟನಾಶಕ ದ್ರಾವಣದ ಸಿಂಪರಣೆನ್ನು ಕೈಗೊಳ್ಳಬೇಕು.
- ಪಶ್ಚಿಮ ಕರಾವಳಿಯ ಹವಾಗುಣಕ್ಕೆ ತಕ್ಕಂತೆ ಎಪ್ರಿಲ್ ಮೇ ತಿಂಗಳ ಸಮಯ ಮರಗಳ ಕತ್ತರಿಸುವಿಗೆ ಸೂಕ್ತ ಎನ್ನಲಾಗಿದೆ.
- ಆ ಬಳಿಕ ಒಂದೆರಡು ದಿನಗಳ ಒಳಗಾಗಿ ಗಿಡದ ಬುಡದಲ್ಲಿ ಬಿದ್ದಿರುವ ಕತ್ತರಿಸಲ್ಪಟ್ಟ ರೆಂಬೆಯ ಚೂರುಗಳನ್ನು ತೆಗೆದು ಸ್ಥಳವನ್ನು ಶುಚಿಗೊಳಿಸಬೇಕು.
- ಅದೇ ರೀತಿ ಸವರುವಿಕೆಯ ಕೆಲ ದಿನಗಳ ವರೆಗೆ ಮರದ ಬುಡಭಾಗ ಹಾಗೂ ಗಾಯದ ಭಾಗಗಳನ್ನು ಆಗಾಗ ಪರಿಶೀಲಿಸುತ್ತಿರಬೇಕು. ಈ ಮೂಲಕ ಕಾಂಡಕೊರಕ ಮೊದಲಾದ ಕೀಟಬಾಧೆಯ ಸಂಭವನೀಯ ಸಾಧ್ಯತೆಯನ್ನು ತಡೆಯಬಹುದಾಗಿದೆ.
- ಸವರುವಿಕೆಗಾಗಿ ಆಯ್ಕೆಯಾದ ಮರಗಳ ಕತ್ತರಿಸುವಿಕೆಯನ್ನು ಇಳುವರಿಯ ಮುಗಿದ ತಕ್ಷಣದಲ್ಲೇ ಕೈಗೊಳ್ಳಬೇಕು.
- ಹೀಗೆ ಮಾಡುವುದರಿಂದ ಮುಂದಿನ ಫಸಲಿನ ಕಾಲದಲ್ಲಿ ಹೂ ಹಾಗೂ ಕಾಯಿ ಕಚ್ಚುವ ಸಮಯದಲ್ಲಿ ವ್ಯತ್ಯಯವಾಗುವುದನ್ನು ತಡೆಯಬಹುದು.
ಕತ್ತರಿಸಲಾದ ಹಳೆಯ ಮರದಲ್ಲಿ ಉಳಿಯಲ್ಪಟ್ಟ ಗೆಲ್ಲುಗಳಿಂದ ಹೊರಟ ಹೊಸ ಚಿಗುರು ಬೆಳೆಯಲ್ಪಟ್ಟು ಮುಂದಿನ ಇಳುವರಿಯ ಸಮಯದಲ್ಲಿ ಹೂ ಹಾಗೂ ಕಾಯಿ ಕಚ್ಚಲು ಸರಿಯಾಗಿ ಸಿದ್ಧಗೊಳ್ಳುತ್ತವೆ. ಹಳೆಯ ತೋಟ ಒಂದರಲ್ಲಿ ಸವರುವಿಕೆಗಿಂತ ಮೊದಲು ಕೇವಲ 2ರಿಂದ 3 ಕೆ.ಜಿ. ಇಳುವರಿ ಬರುತ್ತಿದ್ದ ಮರಗಳಲ್ಲಿ ಪುನಶ್ಚೇತನಗೊಳಿಸಿದ ನಂತದ ದುಪ್ಪಟ್ಟು ಇಳುವರಿ ಲಭಿಸಿರುತ್ತದೆ.