ಕರಿಮೆಣಸು ಬೆಳೆಸಲು ಕೆಲವರು ಬಳ್ಳಿ ತುಂಡುಗಳನ್ನು ನಾಟಿ ಮಾಡುತ್ತಾರೆ. ಮತ್ತೆ ಕೆಲವರು ಪ್ಯಾಕೆಟ್ ಸಸಿ ನಾಟಿ ಮಾಡುತ್ತಾರೆ. ಎರಡೂ ಉತ್ತಮ. ಬಳ್ಳಿ ನಾಟಿ ಮಾಡುವವರಿಗೆ ಮುಂಗಾರು ಮಳೆ ಪ್ರಾರಂಭವಾಗುವ ಈ ಸಮಯ ಉತ್ತಮ. ಸಸಿ ನಾಟಿಯನ್ನು ಯಾವಾಗಲೂ ಮಾಡಬಹುದು.
- ಬಳ್ಳಿ ತುಂಡುಗಳನ್ನು ನಾಟಿ ಮಾಡಿದರೆ ಅದು ಮಣ್ಣಿನಲ್ಲಿ ಬೇರು ಬಿಡುವ ತನಕ ಒಣಗದೆ ಇರಬೇಕು.
- ಹಾಗಾಗಬೇಕಾದರೆ ಬಿಸಿಲು ಇರಬಾರದು. ಹೆಚ್ಚು ಮಳೆಯೂ ಇರಬಾರದು. ಅದಕ್ಕೇ ಈ ಸಮಯ ಸೂಕ್ತ.
ಈಗ ನೆಟ್ಟರೆ ಅನುಕೂಲ ಏನು?
- ಹಿತಮಿತವಾದ ಮಳೆ ಇರುವಾಗ ನೆಟ್ಟರೆ ಬಳ್ಳಿ ಬಾಡುವುದಿಲ್ಲ. ಬಳ್ಳಿ ಬಾಡದೆ ಇದ್ದರೆ ಬೇರು ಬರುತ್ತದೆ. ಬಳ್ಳಿ ಬದುಕುತ್ತದೆ.
- ಹೆಚ್ಚು ಮಳೆ ಬರುವಾಗ ನೆಟ್ಟರೆ ಮಳೆಗೆ ಎಲೆ ಕೊಳೆಯುತ್ತದೆ. ಬುಡ ಭಾಗ ಕೊಳೆಯುತ್ತದೆ.
- ಸ್ವಲ್ಪ ಬಿಸಿಲು ಇರುವಾಗ ನೆಟ್ಟರೆ ನೆಟ್ಟ ದಿನವೇ ಬಳ್ಳಿಯ ಎಲೆಗಳು ಬಾಡುತ್ತವೆ. ಬಳ್ಳಿ ಚುರುಟಿಕೊಳ್ಳುತ್ತದೆ. ಇದು ನಂತರ ಬದುಕುವುದಿಲ್ಲ.
- ಬೇಸಿಗೆ ಕಳೆದು ಮಳೆ ಬರುವ ಸಮಯದಲ್ಲಿ ನೆಡುವ ಜಾಗದಲ್ಲಿ ಅಗೆದಾಗ ಮಣ್ಣಿನಲ್ಲಿ ತೇವಾಂಶ ಮಾತ್ರ ಇರುತ್ತದೆ.
ಮಣ್ಣಿನಲ್ಲಿ ಸ್ವಲ್ಪ ಬಿಸಿ ಇರುತ್ತದೆ. ಅಗೆದಾಗ ಮಣ್ಣು ಗೊಚ್ಚೆಯಾಗುವುದಿಲ್ಲ. ನೆಡುವ ಸ್ಥಳದ ಮಣ್ಣು ನೀರು ಹೆಚ್ಚಾಗಿ ಕಲಸಿದಂತೆ ಆದರೆ ಬಳ್ಳಿ ಬದುಕುವುದಿಲ್ಲ.
ಮಣ್ಣಿನ ಸ್ಥಿತಿ ಮುಷ್ಟಿಯಲ್ಲಿ ಹಿಡಿದು ಗಟ್ಟಿಯಾಗಿ ಅದುಮಿದಾಗ ಒಂದು ತೊಟ್ಟೂ ನೀರು ಬಾರದ ಸ್ಥಿತಿಯಲ್ಲಿ ಇರುವ ಮಣ್ಣಿನಲ್ಲಿ ಮಾತ್ರ ಮೆಣಸಿನ ಬಳ್ಳಿ ಬದುಕಬಲ್ಲದು, ಇಲ್ಲವಾದರೆ ಬೇರು ಕೊಳೆಯುತ್ತದೆ.
ನೆಡುವಾಗ ಅನುಸರಿಸಬೇಕಾದ ಕ್ರಮಗಳು:
- ಬಳ್ಳಿಯನ್ನು ನೆಡುವಾಗ ಹೆಚ್ಚು ಹೊಂಡ ಮಾಡಿ ನಾಟಿ ಮಾಡಲೇ ಬಾರದು. ಇದರಿಂದ ಬಳ್ಳಿಯ ಬುಡ ಕೊಳೆಯುತ್ತದೆ.
- ನೆಲವನ್ನು ಸುಮಾರು 1 ಅಡಿ ಆಳ, ಅಗಲದ ತನಕ ಸಡಿಲಮಾಡಿ, ಸುಮಾರು ¾ ಭಾಗ ತುಂಬಿ ನಾಟಿ ಮಾಡಬೇಕು.
- ಅಡಿಕೆ-ತೆಂಗಿನ ಮರದ ಬುಡದಲ್ಲಿ ನೆಡುವಾಗ ಮರದ ಶಿರಭಾಗದಿಂದ ಮಳೆಗೆ ನೀರು ಯಾವುದಾದರೂ ಒಂದು ದಿಕ್ಕಿಗೆ ಬೀಳುತ್ತದೆ. ಆ ಸ್ಥಳದಲ್ಲಿ ಬಳ್ಳಿ ನೆಡಬಾರದು.
- ಅಡಿಕೆ ಮರಕ್ಕೆ ಯಾವ ದಿಕ್ಕಿನಲ್ಲಿ ಪಶ್ಚಿಮದ ಬಿಸಿಲು ಬೀಳುತ್ತದೆಯೋ ಆ ಬದಿಗೆ ಬಳ್ಳಿ ನಾಟಿ ಮಾಡಬೇಡಿ.
- ಮೆಣಸಿನ ಬಳ್ಳಿಗೆ ಆಂಶಿಕ ನೆರಳು ಬೇಕು. ಹೆಚ್ಚು ಬಿಸಿಲು ಬೀಳುವ ಬದಿಯ ಬಳ್ಳಿ ಏಳಿಗೆ ಆಗುವುದಿಲ್ಲ. ಇದು ಬೇಸಿಗೆಯ ಸಮಯದಲ್ಲಿ ಗೊತ್ತಾಗುತ್ತದೆ.
ನೆಡುವ ವಿಧಾನ:
- ನೆಡಲು ಬಳಸುವ ಬಳ್ಳಿಯ ಉದ್ದ ಸುಮಾರು 1 ಮೀ. ಉದ್ದ ಇರಲಿ.
- ತೀರಾ ಎಳೆಯದಾದ ಬಳ್ಳಿ ಬೇಡ. ಬಲಿತ ಬಳ್ಳಿಯನ್ನು ಆಯ್ಕೆ ಮಾಡಿ.
- ಮುಖ್ಯ ಬಳ್ಳಿಯಲ್ಲಿ ಕೆಳಭಾಗಕ್ಕೆ ಜೋತು ಬಿದ್ದ ಬಳ್ಳಿಯನ್ನು ನಾಟಿ ಮಾಡಲು ಬಳಕೆ ಮಾಡಬೇಡಿ.
- ಮಾರ್ಚ್ – ಎಪ್ರೀಲ್ ತಿಂಗಳಲ್ಲಿ ಚಿಗುರು ಬಿಟ್ಟು ಎರಡು ತಿಂಗಳು ಬೆಳೆದ ಬಳ್ಳಿಯನ್ನು ಆಯ್ಕೆ ಮಾಡಿ.
- ಬಳ್ಳಿಯ ಮೂಲ ರೋಗ ಮುಕ್ತವಾಗಿರಲಿ. ಎಲೆಯಲ್ಲಿ ರೋಗ ಲಕ್ಷಣಗಳು ಇಲ್ಲದಿರಲಿ.
ಇಂತಹ ಬಳ್ಳಿಯನ್ನು ಬುಡದಿಂದ ತುಂಡು ಮಾಡಿ, ತಕ್ಷಣವೇ ಅಂದರೆ 1-2 ಗಂಟೆ ಒಳಗೇ ತಂದು ನೆಡಬೇಕು. ತುಂಬಾ ಸಮಯ ತುಂಡು ಮಾಡಿ ಇಡಬಾರದು.
- ನೆಡುವಾಗ ಬಳ್ಳಿಯ ತುದಿಯ 2-3 ಎಲೆಯನ್ನು ಉಳಿಸಿ ಉಳಿದ ಎಲೆಯನ್ನು ತೊಟ್ಟು ಇರುವಂತೆ ತೆಗೆದು ನೆಡಬೇಕು.
- ಬಳ್ಳಿಯು ಮೇಲೆ ಎಷ್ಟು ಇರುತ್ತದೆಯೋ ಅಷ್ಟೇ ಕೆಳಕ್ಕೂ ಇರಲಿ. ಬುಡದಲ್ಲಿ ಸುತ್ತು ಹಾಕಿ ನೆಡಿ. ಎಲ್ಲಾ ಗಂಟಿನಲ್ಲೂ ಬೇರು ಬರುತ್ತದೆ.
- ನೆಡುವಾಗ ಮಣ್ಣಿಗೆ 100 ಗ್ರಾಂ ನಷ್ಟು ಶಿಲಾ ರಂಜಕ ಮತ್ತು ಕೊಟ್ಟಿಗೆ ಅಥವಾ ನೀರು ಹಿಡಿದಿಟ್ಟುಕೊಳ್ಳದ ಕಾಂಪೋಸ್ಟು ಹಾಕಿ ನೆಡಿ.
- ಬಳ್ಳಿಯನ್ನು ಸುರಕ್ಷತಾ ದೃಷ್ಟಿಯಿಂದ ಒಮ್ಮೆ ಶಿಲೀಂದ್ರ ನಾಶಕ ಮ್ಯಾಂಕೋಜೆಬ್ ದ್ರಾವಣದಲ್ಲಿ ಅದ್ದಿ ನೆಟ್ಟರೆ ಉತ್ತಮ.
ಮೇಲ್ಭಾಗದ ಬಳ್ಳಿಯನ್ನು ಆಧಾರಕ್ಕೆ ಕಟ್ಟಿ. ಬಿಸಿಲು ಇದ್ದರೆ ಸ್ವಲ್ಪ ನೆರಳು ಮಾಡಿ. ಬುಡ ಭಾಗದಲ್ಲಿ ಮಳೆ ನೀರು ಇಳಿಯದಂತೆ ನೋಡಿಕೊಳ್ಳಿ. ಸಾದ್ಯವಾದರೆ ನೆಡಲು ಮಾಡಿದ ಹೊಂಡಕ್ಕೆ ಪಾಲಿಥೀನ್ ಹಾಳೆ ಹೊದಿಸಿ.
- ಯಾವುದೇ ಕಾರಣಕ್ಕೆ ಬಳ್ಳಿಯ ಬುಡದಲ್ಲಿ ನೀರು ನಿಲ್ಲದಿರಲಿ. ಮಣ್ಣು ಗೊಚ್ಚೆ ಆಗದಿರಲಿ.
- ಹೀಗೆ ಮಾಡಿದರೆ ಬಹುತೇಕ ಬಳ್ಳಿ ಬದುಕಿಕೊಳ್ಳುತ್ತದೆ.
ನಮ್ಮ ಹಿರಿಯರು ಮೆಣಸು ಬಳ್ಳಿ ನೆಡುವುದಿದ್ದರೆ ಮಳೆಗಾಲ ಪ್ರಾರಂಭದಲ್ಲೇ ನೆಡಬೇಕು ಎಂದು ಹೇಳಿದ್ದರ ಅರ್ಥ ಇದೇ ಆಗಿದೆ. ಈಗ ನೆಟ್ಟ ಬಳ್ಳಿ ಬದುಕುವ ಪ್ರಮಾಣ ಶೇ.90 ನಂತರ ಅದು ಕಡಿಮೆಯಾಗುತ್ತದೆ.