ಉಳಿದೆಲ್ಲಾ ಬೆಳೆಗಳಲ್ಲಿ ನಾವು ಸಂಪಾದಿಸಿದ್ದು ಶೂನ್ಯ. ಶ್ರೀಗಂಧದಲ್ಲಿಯಾದರೂ ಕೈತುಂಬಾ ಆದಾಯ ಪಡೆಯಬಹುದೆಂಬ ಹಂಬಲದಲ್ಲಿ ರೈತರು ಈ ಬೆಳೆಯ ಹಿಂದೆ ಬಿದ್ದಿದ್ದಾರೆ. ಶ್ರೀಗಂಧ ಬೆಳೆಸುವ ಸುದ್ದಿ ಕೇಳಿದರೆ ಸಾಕು ಜನರ ಕಿವಿ ನೆಟ್ಟಗಾಗುತ್ತದೆ. ಈ ಬೆಳೆಯಲ್ಲಿ ಕೋಟಿಗೂ ಹೆಚ್ಚು ಸಂಪಾದಿಸಬಹುದು ಎಂಬ ಸಂಗತಿ ಯಾರ ಕಿವಿಯನ್ನೂ ನೆಟ್ಟಗೆ ಮಾಡದೆ ಇರದು. ನಮ್ಮ ದೇಶವೂ ಸೇರಿದಂತೆ ಹೊರ ದೇಶಗಳಲ್ಲೂ ಈಗ ಶ್ರೀಗಂಧ ಬೆಳೆ ಬೆಳೆಯುತ್ತಿದೆ.
- ಶ್ರೀಗಂಧ ಈಗ ರೈತರು ಬೆಳೆಸಬಹುದಾದ ಬೆಳೆಯಾಗಿದೆ. ಇದನ್ನು ಬೆಳೆಸಲು ಪರವಾನಿಗೆ ಬೇಡ.
- ಅದನ್ನು ಕಡಿದು ಮಾರಾಟ ಮಾಡಿದಾಗ ಬಂದ ಹಣ ಬೆಳೆಸಿದ ರೈತನಿಗೆ ಸೇರುತ್ತದೆ.
- ಈಗ ಕಿಲೋ ಶ್ರೀಗಂಧಕ್ಕೆ 14,000 ತನಕ ಬೆಲೆ ಇದೆ.
- ಒಂದು ಮರದಲ್ಲಿ 5 ಕಿಲೋ ತಿರುಳು ಸಿಕ್ಕರೂ ಲಕ್ಷ ರೂಪಾಯಿ.
- 1000 ಮರ ಇದ್ದರೆ 1 ಕೋಟಿಗೂ ಹೆಚ್ಚು ಆದಾಯ.
- ಹೇಗಾದರೂ ಆಗಲಿ. ಕೋಟಿ ಸಂಪಾದನೆ ಯಾವುದೇ ಬೆಳೆಯಲ್ಲಿ ಆಗಲಿಲ್ಲ ಇದರಲ್ಲಿ ಆದರೂ ಪಡೆಯೋಣ.
- ಅದಕ್ಕಾಗಿ ದೇಶದಾದ್ಯಂತ ಸಾವಿರಾರು ರೈತರು ಸುಮಾರು 60000 ಎಕ್ರೆಯಷ್ಟು ಸ್ಥಳದಲ್ಲಿ ಶ್ರೀಗಂಧ ಬೆಳೆಸಿದ ವರದಿ ಇದೆ.
ನಮ್ಮ ರಾಜ್ಯವಲ್ಲದೆ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಗುಜರಾತ್ , ಸಿಕ್ಕಿಂ, ಮಿಜೋರಾಂ, ಮೇಘಾಲಯಗಳಲ್ಲೂ ಶ್ರೀಗಂಧ ಬೆಳೆಸುತ್ತಿದ್ದಾರೆ. ನಮ್ಮ ರಾಜ್ಯದಲ್ಲೇ ಸುಮಾರು 20000 ಎಕ್ರೆಯಷ್ಟು ಶ್ರೀಗಂಧದ ಬೆಳೆ ಇದೆ ಎಂಬ ಲೆಕ್ಕಾಚಾರ ಇದೆ.
ಶ್ರೀಗಂಧದಲ್ಲಿ ಹೇಗೆ ಕೋಟಿ ಗಳಿಸುವುದು?
- ಶ್ರೀಗಂಧದ ಮರವನ್ನು ನಾವೆಲ್ಲಾ ಕಂಡಿದ್ದೇವೆ. ಅದಕ್ಕೆ ಎಷ್ಟು ತಿರುಳು ಇರುತ್ತದೆ ಎಂಬುದೂ ನಮಗೆ ಗೊತ್ತಿದೆ.
- ಹೆಚ್ಚು ತಿರುಳು ಬರಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ.
- ಕಾರಣ ಮರವನ್ನು ಯಾರು ನೆಟ್ಟು ಬೆಳೆಸಿದ್ದಲ್ಲ.
- ಅದರಷ್ಟಕ್ಕೇ ಹಕ್ಕಿಗಳು ಬೀಜ ತಿಂದು ಹೊರಹಾಕಿದ ಹಿಕ್ಕೆಯಲ್ಲಿ ಹುಟ್ಟಿದ ಮರಗಳು.
- ಬಹಳಷ್ಟು ಗಂಧದ ಮರಗಳಲ್ಲಿ ತಿರುಳು ತೀರಾ ಕಡಿಮೆ. ಇದಕ್ಕೆ ಕಾರಣ ಏನಿರಬಹುದು?
ಶ್ರೀಗಂಧದಲ್ಲಿ ಏನಾದರೂ ಹೆಚ್ಚು ತಿರುಳು ಬರುವ ತಳಿ ಇದೆಯೇ ? ನಾವು ಬೆಳೆಸಿದ್ದು ನಾಯಿ ಗಂಧವೇ (ಕಾಟು ಗಂಧ) ಎಂಬೆಲ್ಲಾ ಸಂದೇಹಗಳು ನಮ್ಮಲ್ಲಿವೆ.
- ನಿಜವಾಗಿ ಶ್ರೀಗಂಧದಲ್ಲಿ ನಮ್ಮ ದೇಶದಲ್ಲಿ ಇರುವುದು ಒಂದೇ ಒಂದು ತಳಿ.
- ಮನುಷ್ಯನಲ್ಲಿ ಗುಣ ವ್ಯತ್ಯಾಸ ಇರುವಂತೆ ಇದರಲ್ಲೂ ಇದೆ ಅಷ್ಟೇ.
- ಅದನ್ನು ವಂಶ ಗುಣ ಎನ್ನುತ್ತಾರೆ.
- ಅದೇ ರೀತಿ ಗಂಧದಲ್ಲೂ ತಳಿ ಒಂದೇ, ಅದರಲ್ಲಿ ಗುಣ ಸ್ವಲ್ಪ ಭಿನ್ನವಾಗಿರುವ ಸಾಧ್ಯತೆ ಇದೆ.
- ನಾಯಿ ಗಂಧ ಎಂಬುದು ಇಲ್ಲ.
- ಹೆಚ್ಚಿನ ಶ್ರೀ ಗಂಧದಲ್ಲಿ ತಿರುಳು ಬರುವುದು ಅದು ಬೆಳೆಯುವ ಪ್ರದೇಶದ ಹವಾಗುಣದ ಮೇಲೆ.
ಶ್ರೀಗಂಧ ಬೇಗ ತಿರುಳು ಕೂಡಿಕೊಂಡು ಬೆಳೆಯುವುದು ನಮ್ಮ ರಾಜ್ಯದ ಬಯಲುಸೀಮೆ ಮತ್ತು ಅರೆ ಮಲೆನಾಡಿನ ಪ್ರದೇಶಗಳಲ್ಲಿ ಮಾತ್ರ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ.
ಮೈಸೂರು ಪ್ರಾಂತ್ಯದಲ್ಲಿ ಬೆಳೆಯುವ ಶ್ರೀಗಂಧದಲ್ಲಿ ತಿರುಳು ಹೆಚ್ಚು ಇರುತ್ತದೆ. ಉತ್ತಮ ಸುವಾಸನೆಯೂ ಇರುತ್ತದೆ ಎಂದು ಕೇಳಿರಬಹುದು. ಇದು ನಿಜ. ಕಾರಣ ಇಲ್ಲಿ ಶ್ರೀಗಂಧ ಬೆಳೆಗೆ ಬೇಕಾಗುವ ಸೂಕ್ತ ಹವಾಮಾನ ಇದೆ.
- ಹಾಸನ, ಬೆಂಗಳೂರು, ಕೋಲಾರ, ಚಿತ್ರದುರ್ಗ, ಧಾರವಾಡ, ರಾಯಚೂರು -ಈ ಬೆಲ್ಟ್ ನಲ್ಲೂ ಶ್ರೀಗಂಧ ಸ್ವಾಭಾವಿಕವಾಗಿ ಹುಟ್ಟಿ ಉತ್ತಮವಾಗಿ ಬೆಳೆಯುತ್ತದೆ. ಇಲ್ಲಿ ಮರಕ್ಕೆ ತಿರುಳು ಚೆನ್ನಾಗಿ ಬರುತ್ತದೆ.
- ಕರಾವಳಿ, ಮಲೆನಾಡಿನ ಅಧಿಕ ಮಳೆಯಾಗುವ ಭಾಗಗಳಲ್ಲಿ ಬೆಳೆಯುವ ಶ್ರೀಗಂಧ ಮೇಲೆ ಹೇಳಿದ ಪ್ರದೇಶಗಳಲ್ಲಿ ಬೆಳೆದಂತೆ ಬೆಳೆಯುವುದಿಲ್ಲ. ಇಲ್ಲಿ ಬೆಳೆಯುವ ಸಸ್ಯದ ಎಲೆಯೇ ಅದರ ಆರೋಗ್ಯ ಸರಿಯಾಗಿಲ್ಲ ಎಂಬುದನ್ನು ತೋರಿಸುತ್ತದೆ.
ಶ್ರೀಗಂಧಕ್ಕೆ ಮೌಲ್ಯ ಯಾವಾಗ ?
- ಶ್ರೀಗಂಧಕ್ಕೆ ತಿರುಳು ಬಂದರೆ ಮಾತ್ರ ಅದಕ್ಕೆ ಮೌಲ್ಯ . ಇಲ್ಲವಾದರೆ ಅದು ಸಾಧಾರಣ ಕಟ್ಟಿಗೆ ಅಷ್ಟೇ.
- ಶ್ರೀಗಂಧದಲ್ಲಿ ತಿರುಳು ಕೂಡಲು ಹೆಚ್ಚು ಮಳೆ ಇರಕೂಡದು. ಆಗಾಗ ಬಂದು ಹೋಗುವ ಮಳೆ ಇರುವಲ್ಲಿ ಶ್ರೀಗಂಧ ಚೆನ್ನಾಗಿ ಬೆಳೆದು ತಿರುಳು ರಚನೆ ಆಗುತ್ತದೆ.
- ಯಾವುದೇ ಮರಮಟ್ಟಿನಲ್ಲಿ ತಿರುಳು ಕೂಡುವುದು ಬರ ಸ್ಥಿತಿ ಉಂಟಾಗುವಾಗ ಎಂಬುದು ಮರವಿಜ್ಞಾನ ಶಾಸ್ತ್ರ ಕಂಡುಕೊಂಡ ವಾಸ್ತವ.
- ಶ್ರೀಗಂಧದ ಸಸಿಯನ್ನು ಬೆಳೆಸುವವರು ಮಳೆ ಕಡಿಮೆ ಇರುವಲ್ಲಿ ಬೆಳೆಸಬೇಕು.
- ಸುಮಾರು 5 ವರ್ಷ ತನಕ ಅದನ್ನು ಸಾಕಬೇಕು. ನಂತರ ಅದನ್ನು ಉಪವಾಸ ಹಾಕಬೇಕು.
- ಆಗ ಅದರಲ್ಲಿ ತಿರುಳು ಕೂಡಿಕೊಳ್ಳುತ್ತದೆ. ನಿರಂತರ ನೀರಾವರಿ, ಗೊಬ್ಬರ ಕೊಟ್ಟಲ್ಲಿ ಮರ ಮಾತ್ರ ಬೆಳೆಯುತ್ತದೆ.
ಸಸಿಗೆ 10 ವರ್ಷ ಆಗುವಾಗ ಕಡಿಯುವಂತೆ ಬೆಳೆಸಬೇಕು. ಆಷ್ಟು ಸಮಯದಲ್ಲಿ ಅದರಲ್ಲಿ ತಿರುಳು ಬಂದಿರಬೇಕು. ಈ ರೀತಿ ಬೆಳೆಸುವ ತಾಂತ್ರಿಕತೆ ಇದೆ. ಅದನ್ನು ಅರಿತು ಬೆಳೆದರೆ ಮಾತ್ರ ಕೋಟಿ ಸಂಪಾದಿಸಬಹುದು. ಇಲ್ಲವಾದರೆ ಸಂಪಾದನೆ ಶೂನ್ಯ ವಾದೀತು.
ಪ್ರತಿಕ್ರಿಯೆಗಳಿಗೆ ಸ್ವಾಗತ.
Good information thank you
welcome..Please keep visiting krushiabhivruddi website everyday
Good information to the above mentioned subject to all formers.