ಕೃಷಿಕರು ಮುತ್ತು ಉತ್ಪಾದಿಸಿ ಆದಾಯಗಳಿಸಬಹುದು.

by | Jan 10, 2020 | Krushi Abhivruddi | 0 comments

ನಿಮ್ಮ ಕೃಷಿ ಹೊಲದಲ್ಲಿ  ನೀರಾವರಿಯ ಬಾವಿ ಇದೆಯೇ,  ಅಥವಾ ನಿಮ್ಮ ಸುಪರ್ದಿಯಲ್ಲಿ  ದೊಡ್ದ  ಕೆರೆ ಇದೆಯೇ ಹಾಗಿದ್ದರೆ, ಅಲ್ಲಿ  ಕೃಷಿಗೆ ಪೂರಕವಾಗಿ ಅತ್ಯಂತ ಲಾಭದಾಯಕವಾದ ವೃತ್ತಿ “ಮುತ್ತಿನ ಉತ್ಪಾದನೆ” ಮಾಡಬಹುದು.

  • ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಅವರ ಆಸ್ಥಾನದಲ್ಲಿ  ಮಾತ್ರ  ರಾಶಿ ರಾಶಿ ಮುತ್ತುಗಳಿತ್ತು.
  • ಆಗ ಬೇರೆಯವರಿಗೆ ಅದನ್ನು ಹೊಂದುವ ಸಾಮರ್ಥ್ಯವೂ ಇರಲಿಲ್ಲ.
  • ರಾಜಾಧಿಪಥ್ಯ ಕೊನೆಗೊಂಡ  ನಂತರ, ಎಲ್ಲರೂ ಮುತ್ತು ಹೊಂದುವ ಸ್ಥಿತಿಗೆ ಬಂದರು.
  • ಆಗ ಅದರ ಬೇಡಿಕೆ ಹೆಚ್ಚಾಯಿತು. ಬೆಲೆಯೂ ಹೆಚ್ಚಾಯಿತು.

ಮುತ್ತು ಸಾಮಾನ್ಯ ಬೆಲೆಯ ವಸ್ತುವಲ್ಲ ಎಂಬುದು ನಮಗೆಲ್ಲಾ ಗೊತ್ತಿದೆ. ನವರತ್ನಗಳಲ್ಲಿ ಐದನೇ ಸ್ಥಾನವೇ ಇದಕ್ಕೆ. ಮುತ್ತುಗಳನ್ನು ಕೃಷಿ ಪೂರಕವಾಗಿ ಹೊಲದಲ್ಲಿ ಸಮುದ್ರದ ಉಪ್ಪು ನೀರಿನ ಬದಲು ಸಿಹಿ ನೀರಿನಲ್ಲಿ  ಬೆಳೆಸಿ ಸಮುದ್ರದ   ಮುತ್ತಿಗೆ ಸಮನಾದ ಮುತ್ತನ್ನು  ಪಡೆಯಬಹುದು.  ಆದಾಯವನ್ನೂ ಗಳಿಸಬಹುದು.

  • ಕೃಷಿ ಹೊಲವನ್ನು ಮುತ್ತು ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸಬಹುದು.
  • ಇದರಿಂದ ಆತ್ಯಧಿಕ ವರಮಾನವನ್ನೂ ಗಳಿಸಬಹುದು.

ಸ್ವಾಭಾವಿಕ ಮುತ್ತು ಉತ್ಪತ್ತಿ:

  • ನೈಸರ್ಗಿಕವಾಗಿ ಮುತ್ತು ಎಂಬ ವಸ್ತು ಸಮುದ್ರದ ಚಿಪ್ಪು ಮೀನಿನ ಶರೀರದಲ್ಲಿ ಉತ್ಪಾದನೆಯಾಗುತ್ತದೆ.
  • ಚಿಪ್ಪು ಮೀನು ಅಥವಾ ಕಪ್ಪೆ ಚಿಪ್ಪು ಜೀವಿಯ ಶರೀರದೊಳಕ್ಕೆ  ಯಾವುದಾದರೂ ಒಂದು ಘನ ವಸ್ತುವು ( ಬಾಹ್ಯ ವಸ್ತು)ಸೇರಿದರೆ , ಅದರ ಮೇಲೆ  ತನ್ನ ಹೊಳಪಿನ ದ್ರವವನ್ನು ಸರಿಸಿ ಅದನ್ನು ತನ್ನ ಶರೀರದಲ್ಲೇ ಒಂದು ಮೂಲೆಯಲ್ಲಿ ಇಟ್ಟುಕೊಳ್ಳುತ್ತದೆ.
  • ನಿರ್ಧಿಷ್ಟ ಅವಧಿಯ ನಂತರ ಆ ಬಾಹ್ಯ ವಸ್ತು ಚಿಪ್ಪು ಮೀನಿನ ಶರೀರದೊಳಗೆ ರಾಸಾಯನಿಕ ಕ್ರಿಯೆಗೆ ಒಳಪಟ್ಟು ಒಂದು  ರೀತಿಯ ಹೊಳಪುಳ್ಳ ವಸ್ತುವಾಗಿ  ಲಭ್ಯವಾಗುತ್ತದೆ.
  • ಅದೇ ನೈಸರ್ಗಿಕ ಮುತ್ತು.
  • ಇದು ಸಮುದ್ರದಲ್ಲಿ ಎಲ್ಲೆಲ್ಲಿ ದೊಡ್ಡ ದೊಡ್ಡ ಗಾತ್ರದ ಚಿಪ್ಪು ಮೀನುಗಳು ಇರುತ್ತವೆಯೋ ಆ ಪ್ರದೇಶಗಳಲ್ಲಿ ಇರುತ್ತದೆ.
  • ಸಾಮಾನ್ಯವಾಗಿ ಸಮುದ್ರದ ತಳ ಭಾಗದಲ್ಲಿ ಜಾಸ್ತಿ.
  • ಕೆಲವು ಕಡೆ ಸಾಧಾರಣ ಆಳದಲ್ಲೂ ಇರುವುದಿದೆ.
  • ತಿಂದ ಬಾಹ್ಯ ವಸ್ತುವಿನ ಆಕಾರದ ಮೇಲೆ ಆ ಮುತ್ತಿನ ಆಕಾರ ರಚನೆಯಾಗುತ್ತದೆ.
  • ಇದನ್ನು ಹುಡುಕಿ ತೆಗೆಯುವ ವೃತ್ತಿಪರರು ಇದ್ದಾರೆ.

ಕೃತಕ ಮುತ್ತು ಉತ್ಪಾದನೆ:

ಕಪ್ಪೆ ಚಿಪ್ಪಿನಲ್ಲಿ ಮುತ್ತು ಉತ್ಪಾದನೆ
ಕಪ್ಪೆ ಚಿಪ್ಪಿನಲ್ಲಿ ಮುತ್ತು ಉತ್ಪಾದನೆ
  • ವಿಜ್ಞಾನವು ಸಾಗರದಲ್ಲಿ ಮುತ್ತು ಹೇಗೆ ಉತ್ಪಾದನೆಯಾಗುತ್ತದೆ ಎಂಬುದನ್ನುಅಭ್ಯಸಿಸಿತು.
  • ತರುವಾಯ ಅದನ್ನು ಕೃತಕವಾಗಿ ನಮ್ಮ ಸುಪರ್ದಿಯಲ್ಲಿ  ಬೆಳೆಸುವ ತಾಂತ್ರಿಕತೆಯನ್ನೂ ಕಂಡುಕೊಂಡಿತು. 
  • ಇದಕ್ಕೆ  ದೊಡ್ಡ ಗಾತ್ರದ ಸಿಹಿ ನೀರಿನಲ್ಲಿ ಬದುಕುವ ಚಿಪ್ಪು ಮೀನುಗಳು ಬೇಕು. 
  • ಇವುಗಳನ್ನು ನಾವೆಲ್ಲಾ ಕಂಡವರೇ . ಅದರಲ್ಲಿ ಕೆಲವು ಪ್ರದೇಶಗಳಲ್ಲಿ ( ಕೊಡಗಿನ ಹಾರಂಗಿ ಜಲಾಶಯದ ಸುತ್ತ) ದೊಡ್ಡ ಗಾತ್ರದ ಚಿಪ್ಪು ಮೀನುಗಳಿರುತ್ತವೆ.
  • ಇವು ಮೃದ್ವಂಗಿಗಳು.ಆ ಕಾರಣ ಅದರ ರಕ್ಷಣೆಗೆ ಹೊರಗೆ ಗಟ್ಟಿ ಚಿಪ್ಪು.
  • ಇದು ಅತ್ತಿತ್ತಾ ಓಲಾಡುತ್ತಾ ತಿರುಗುತ್ತದೆ. ಅವಶ್ಯವಿದ್ದಾಗ ಬಾಯಿ ತೆರೆದು ಆಹಾರವನ್ನು ಸೇವಿಸುತ್ತದೆ.
  • ಇವುಗಳ ಆಹಾರ ಸೇವನೆಯೂ ಒಂದು ಕೌತುಕ.
  • ಜೀವನ ಪರ್ಯಂತ ತಮ್ಮ ಶರೀರದಲ್ಲಿ ಒಂದು ಹೊಳಪುಳ್ಳ ದ್ರವವನ್ನು ಸ್ರವಿಸುತ್ತಿರುತ್ತವೆ.
  • ಇದು ಚಿಪ್ಪಿಗೆ ಅಂಟಿಕೊಂಡು ಚಿಪ್ಪು ಗಟ್ಟಿಯಗುತ್ತಾ ಬರುತ್ತದೆ.
  • ನಾವು ಕಾಣುವ ಮುತ್ತುಗಳ ಬಣ್ಣವೂ ಚಿಪ್ಪು ಮೀನಿನ ಕವಚದ ಒಳ ಭಾಗದ ಬಣ್ಣವೂ ಒಂದೇ ರೀತಿ.
  • ಇಂಥಹ ಹೊಳಪುಳ್ಳ ಚಿಪ್ಪು ಮೀನು ಮಾತ್ರ ಮುತ್ತು ಕೃಷಿಗೆ ಯೋಗ್ಯ.

ಮುತ್ತು ಯಾವುದು:

  • ಸಿಹಿ ನೀರಿನಲ್ಲಿ ಬದುಕುವ ಚಿಪ್ಪು  ಮೀನುಗಳ ಶರೀರವನ್ನು ಸ್ವಲ್ಪ ತೆರೆದು ಅದರ ಒಳಗೆ ಬಾಹ್ಯ ವಸ್ತುವನ್ನು ತುರುಕಿ ಮತ್ತೆ ಅದನ್ನು  ಹಾಗೆಯೇ ಮುಚ್ಚಿ, ನಂತರ ಅದನ್ನು ಸಿಹಿ ನೀರಿನಲ್ಲಿ ಬಿಡಲಾಗುತ್ತದೆ. 
  • ಇದನ್ನು ಶಸ್ತ್ರ ಚಿಕಿತ್ಸೆ ಎನ್ನುತ್ತಾರೆ. 
  • ಅದಕ್ಕೆ ಕೆಲವು ವಿಧಾನಗಳಿವೆ.  ಬಾಯಿಯ ಬಾಗದಲ್ಲಿ ಮಾತ್ರ ಶಸ್ತ್ರ ಚಿಕಿತ್ಸೆ ಮಾಡಬೇಕು. 
  • ಆ ಭಾಗ ತೆರೆದಾಗ ಮ್ಯಾಂಟಲ್ ಎಂಬ ಭಾಗ  ಕಾಣುತ್ತದೆ. ಅಲ್ಲಿ ಮಾತ್ರ ನೇಕರ್ (Nacre)  ಸ್ರವಿಸುತ್ತದೆ.
  •   ಬೆಳೆದ ಚಿಪ್ಪುಗಳಿಗೆ ( 2  ವರ್ಷ ದಾಟಿದ) ಮಾತ್ರ ಶಸ್ತ್ರ ಕ್ರಿಯೆ ಮಾಡಬೇಕು.
  • ಇದು ಅದರ ಚಿಪ್ಪಿನ ಗೆರೆಯ ಮೇಲೆ ಗೊತ್ತಾಗುತ್ತದೆ. 
  • ವೈದ್ಯರು ಶಸ್ತ್ರ ಚಿಕಿತ್ಸೆಗೆ ಬಳಸುವ ಸಾಧನಗಳನ್ನೇ ಇದಕ್ಕೂ ಬಳಸಲಾಗುತ್ತದೆ. 
  • ಯಾವುದೇ ರೀತಿಯಲ್ಲಿ ಸೋಂಕು ಆಗದಂತೆ ಗ್ಲೌಸ್  ಹಾಕಿರಬೇಕು. 
  • ಶಸ್ತ್ರ ಚಿಕಿತ್ಸೆ ಮಾಡುವಾಗ ಚಿಪ್ಪು ಮೀನನ್ನು ಸ್ವಲ್ಪ ಸಮಯ ಪ್ರಜ್ಞೆ ಕಳೆದುಕೊಳ್ಳುವಂತೆ ( ಮೆಂಥಾಲ್ ಮಿಶ್ರಿತ ನೀರು ಚಿಮುಕಿಸಿ)  ಸ್ಟಾಂಡ್ ನಲ್ಲಿ ಇಟ್ಟು  ಬಾಯಿಯನ್ನು ತೆರೆದು ಬಾಹ್ಯ ವಸ್ತುವನ್ನು ತುರುಕಬೇಕು. 
  • ಬಾಯಿ ತೆರೆಯುವಾಗ ಬೆನ್ನು ಭಾಗಕ್ಕೆ ಸ್ವಲ್ಪ ಘಾಸಿ ಆಗುತ್ತದೆ.
  • ಅದು ಆಗದಂತೆ  ಬೆನ್ನು ಬಾಗಕ್ಕೆ  ಸ್ವಲ್ಪ ಅಂಟನ್ನು ಸವರಲಾಗುತ್ತದೆ.
  • ಶಸ್ತ್ರ ಚಿಕಿತ್ಸೆ ಫಲಕಾರಿಯಾಗಿದೆಯೇ ಇಲ್ಲವೇ ಎಂಬುದು ಪ್ರಜ್ಞೆ ಬಂದ ನಂತರ ತಿಳಿಯುತ್ತದೆ.
ಕಪ್ಪೆ ಚಿಪ್ಪಿನ ಒಳಗೆ ಹಾಕುವ ಕೃತಕ ಮುತ್ತು
ಕಪ್ಪೆ ಚಿಪ್ಪಿನ ಒಳಗೆ ಹಾಕುವ ಕೃತಕ ಮುತ್ತು

ಬಾಹ್ಯ ವಸ್ತುಗಳು:

  • ಬಾಹ್ಯ ವಸ್ತುಗಳಾಗಿ ಬೀಡ್ ಗಳು ಸಿಗುತ್ತವೆ.
  • ಇದು ದುಬಾರಿಯಾದ ಕಾರಣ ಅದಕ್ಕೆ ಸತ್ತು ಹೋದ ಚಿಪ್ಪು ಮೀನಿನ ಚಿಪ್ಪನ್ನೇ  ಬೇಕಾದ ಆಕಾರಕ್ಕೆ ಗ್ರೈಂಡಿಗ್ ಮಾಡಿ ತಯಾರಿಸಬಹುದು.
ಗಾಜಿನ ಟಾಂಕಿಯಲ್ಲಿ ಬೆಳೆಸುವಿಕೆ
ಗಾಜಿನ ಟಾಂಕಿಯಲ್ಲಿ ಬೆಳೆಸುವಿಕೆ
  • ಅದು ದುಂಡಗೆಯೂ ಇರಬಹುದು, ಚಪ್ಪಟೆಯೂ ಇರಬಹುದು. 
  • ಇದು ಮುತ್ತಿನ ಅಪ್ಪಟತನವನ್ನು ಇನ್ನಷ್ಟು ಹೆಚ್ಚಿಸುತ್ತದೆ.
  • ಇದರ ಬದಲಿಗೆ ಒಂದು ರೀತಿಯ ರಾಳವನ್ನು  ಉಪಯೋಗಿಸಿಯೂ ಬೀಡ್ ತಯಾರಿಸುತ್ತಾರೆ.

ಶಸ್ತ್ರ ಚಿಕಿತ್ಸೆ ಮತ್ತು ತೀವ್ರ ನಿಗಾ:

  • ಶಸ್ತ್ರ ಚಿಕಿತ್ಸೆ ಮಾಡಿ, ಪ್ರಜ್ಞೆ ಬಂದ ನಂತರ ಅವಕ್ಕೆ ಅದು ಗೊತ್ತಾಗುತ್ತದೆ.
  • ಆ ಘಾಸಿಯಿಂದ ಚೇತರಿಸಿಕೊಳ್ಳಲು ಅದನ್ನು ಕೊಠಡಿಯಲ್ಲೇ ಅಕ್ವೇರಿಯಂ ತರಹದ ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಗುತ್ತದೆ.
  • ಅಲ್ಲಿ  ಜೀವನಿರೋಧಕ ಸಿಂಪಡಿಸಿ 30 ದಿನಗಳ ಕಾಲ ಪೋಷಿಸಲಾಗುತ್ತದೆ.
  • ಇದಾದ ನಂತರ ಅದನ್ನು ತುರ್ತು ನಿಗಾದ ಮತ್ತೊಂದು ಗಾಜಿನ ಕೊಳದಲ್ಲಿ ಹಾಕುತ್ತಾರೆ.
  • ಅಲ್ಲಿ ಅದಕ್ಕೆ ಸ್ಪಿರುಲಿನಾ ಆಲ್ಗೆ ಹಾಕಿ ಒಂದು ಮೆಷ್  ಒಳಗೆ ಹಾಕಿ 10-15 ದಿನಗಳ ಕಾಲ ನೇತಾಡಿಸಲಾಗುತ್ತದೆ.
  • ಅಲ್ಲಿ ಅದು ಸಂಪೂರ್ಣ ಚೇತರಿಸಿಕೊಳ್ಳುತ್ತದೆ. ಕೆಲವು ಸಾಯಲೂ ಬಹುದು.
  • ಬದುಕಿ ಉಳಿದ ಚಿಪ್ಪು ಮೀನನ್ನು ನಂತರ  ಕೊಳಕ್ಕೆ ವರ್ಗಾಯಿಸಲಾಗುತ್ತದೆ.

ಕೊಳದಲ್ಲಿ ಪಾಲನೆ:

ಕೊಳದಲ್ಲಿ ಪಾಲನೆ
ಕೊಳದಲ್ಲಿ ಪಾಲನೆ
  • ಸಿಹಿ ನೀರಿರುವ ಕೊಳ, ಟಾಂಕಿಯಲ್ಲಿ ಚಿಪ್ಪು ಮೀನುಗಳನ್ನು   ಬಿಡಲಾಗುತ್ತದೆ.  
  • ಅಲ್ಲಿ ಸುಮಾರು 1 ಮೀ. ನಷ್ಟು ನೀರು ಸದಾ ಇರಬೇಕು. 
  • ನೀರಿನ ರಸಸಾರ 7-8  ಇರಬೇಕು. 
  • ಯಾವುದೇ ಗಲಿಬಿಲಿ  ಇರಬಾರದು. 
  • ತುರ್ತು ನಿಗಾದಿಂದ ತಂದ ಚಿಪ್ಪು ಮೀನನ್ನು ಅದೇ ಮೆಶ್ ನಲ್ಲಿ ತಂದು ಒಂದು ಕೋಲಿಗೆ (ಗಾಳದ ತರಹ) ಕಟ್ಟಿ ಈ ಕೊಳದೊಳಗೆ  ಇರಿಸಲಾಗುತ್ತದೆ. 
  • ಅದಕ್ಕೆ ಸ್ಪಿರುಲಿನಾ ಹಾಕಬೇಕು. ವಾರಕ್ಕೊಮ್ಮೆ ಪರಿಶೀಲಿಸಬೇಕು.  ಇಲ್ಲಿಯೂ ಕೆಲವು ಸಾಯಬಹುದು. 
  • ಇದನ್ನು ಅಡಿಕೆ ತೋಟದ ಮಧ್ಯಂತರದಲ್ಲಿ ಮಾಡಬಹುದು. 
  • ಇಲ್ಲಿ ಸುಮಾರು 1 ತಿಂಗಳ ಕಾಲ ಬೆಳೆಸಿ ನಂತರ  ಅದನ್ನು ಮುಖ್ಯ ಕೊಳಕ್ಕೆ ( ಮನೆಗೆ ) ವರ್ಗಾಯಿಸಲಾಗುತ್ತದೆ.
  • ಬಿಟ್ಟ ದಿನಾಂಕ ಮತ್ತು ಅದನ್ನು ಇಳಿ ಬಿಟ್ಟ ಜಾಗದ ಗುರುತು ಮಾಡಿಕೊಳ್ಳಲು  ಹಗ್ಗ ಕಟ್ಟಿ ನೇತಾಡಿಸಲಾಗುತ್ತದೆ.
ಕೊಳದಲ್ಲಿ ಸಾಕಣೆ
  • ಚೀನಾದಲ್ಲಿ ಥರ್ಮೋಕೋಲ್ ಬಳಸುತ್ತಾರೆ.  ಅಥವಾ ಇನ್ಯಾವುದಾದರೂ ವಸ್ತುವಿಗೆ ಕಟ್ಟಲಾಗುತ್ತದೆ.
  • ಇದನ್ನು ಅಲ್ಲೇ 8-9 ತಿಂಗಳ ಕಾಲ ಬೆಳೆಯಲು ಬಿಟ್ಟಾಗ ಚಿಪ್ಪು ಮೀನಿನ ಶರೀರದೊಳಗೆ ನಾವು ತುರುಕಿದ ಬಾಹ್ಯ ವಸ್ತುವಿನ ಮೇಲೆ ಅದರ ಶರೀರದ ದ್ರವ ಮತ್ತು ರಾಸಾಯನಿಕಗಳು ಕೋಟಿಂಗ್ ಆಗಿ ನೈಜ ಮುತ್ತು ಉತ್ಪಾದನೆಯಾಗುತ್ತದೆ.
  • ಇದು ನೈಸರ್ಗಿಕ ಮುತ್ತಿಗೆ ಏನೂ ವ್ಯತ್ಯಾಸ ಇಲ್ಲದ ಮುತ್ತು ಆಗಿರುತ್ತದೆ.
ಕೆರೆಯಲ್ಲ್ಲಿ ಪಾಲನೆ
ಕೆರೆಯಲ್ಲ್ಲಿ ಪಾಲನೆ

ಮುತ್ತು ಕೃಷಿ ಮಾಡುವವರು ಸಾಕಷ್ಟು  ಚಿಪ್ಪು ಮೀನುಗಳನ್ನು ಒಟ್ಟು ಸೇರಿಸಬೇಕು. ಇದನ್ನು ಲಭ್ಯವಿರುವ ಕಡೆಯಿಂದ ತಂದು ಸ್ಥಳದಲ್ಲಿ ಕೊಳದಲ್ಲಿ ಬೆಳೆಸಬಹುದು.

  • ಮುತ್ತು ಬೆಳೆಸುವ ತಾಂತ್ರಿಕತೆ ಬುದ್ಧನ (ಕ್ರಿ. ಶ. 1200 )ಕಾಲದಿಂದಲೂ  ಚೀನಾದಲ್ಲಿ ಇತ್ತು.
  • ಆದರೆ ಅದು 1980 ರ ತರುವಾಯ ಈ ತಾಂತ್ರಿಕತೆಯನ್ನು ಜಗತ್ತಿನ ಬೇರೆ ದೇಶಗಳಿಗೆ  ಗುಟ್ಟು ಬಿಟ್ಟು ಕೊಟ್ಟಿತು.
  • ನಮ್ಮಲ್ಲಿ  1973 ರಲ್ಲಿ ಕೊಚ್ಚಿನ್ ನಲ್ಲಿ ಸಾಗರ ಚಿಪ್ಪು ಮೀನುಗಳ ಮೂಲಕ ಮುತ್ತು ಉತ್ಪಾದನೆ ಮಾಡಲಾಯಿತು.
  • 1988 ರಲ್ಲಿ ಓರಿಸ್ಸಾದ ಭುವನೇಶ್ವರದಲ್ಲಿ ಸಿಹಿ ನೀರಿನಲ್ಲಿ ಮುತ್ತು ಉತ್ಪಾದಿಸಿ ಯಶ ಕಾಣಲಾಯಿತು.
  • ಈಗ ದೇಶದಲ್ಲಿ ಹಲವು ಕಡೆ ರೈತರು ತಮ್ಮ ಹೊಲದಲ್ಲಿ ಮುತ್ತು ಉತ್ಪಾದನೆ ಮಾಡುತ್ತಾರೆ. 

ಛಲ ಇದ್ದರೆ ಈ ಕೃಷಿಯಲ್ಲಿ ಕೋಟ್ಯಾಂತರ ಆದಾಯ ಸಂಪಾದನೆ ಮಾಡಬಹುದು.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!